24:18ಚಿದ್ಕೀಯನು ತನ್ನ ಇಪ್ಪತ್ತೊಂದನೆಯ ವರ್ಷ ತುಂಬಿದ ಮೇಲೆ ಅರಸನಾಗಿ ಯೆರೂಸಲೇಮಿನಲ್ಲಿ ಹನ್ನೊಂದು ವರ್ಷಗಳ ಕಾಲ ಆಳಿದನು. ಲಿಬ್ನ ಪಟ್ಟಣದವನಾದ, ಯೆರೆಮೀಯನ ಮಗಳಾದ ಹಮೂಟಲ್ ಎಂಬಾಕೆಯು ಇವನ ತಾಯಿ.
24:19ಚಿದ್ಕೀಯನು ಯೆಹೋಯಾಕೀಮನಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು.
24:20ಯೆಹೋವನು ಯೆರೂಸಲೇಮಿನವರ ಮೇಲೆಯೂ ಬೇರೆ ಎಲ್ಲಾ ಯೆಹೂದ್ಯರ ಮೇಲೆಯೂ ಇದನ್ನೆಲ್ಲಾ ಬರಮಾಡಿ ಕೊನೆಯಲ್ಲಿ ಅವರನ್ನು ತನ್ನ ಸನ್ನಿಧಿಯಿಂದ ನಾಶಮಾಡುವಷ್ಟು ರೋಷವುಳ್ಳವನಾಗಿದ್ದನು. ಆದರೆ ಚಿದ್ಕೀಯನು ಬಾಬೆಲಿನ ಅರಸನಿಗೆ ವಿರುದ್ಧವಾಗಿ ತಿರುಗಿಬಿದ್ದನು.
25:1ಚಿದ್ಕೀಯನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನ, ಹತ್ತನೆಯ ದಿನದಲ್ಲಿ, ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಸರ್ವಸೈನ್ಯ ಸಹಿತನಾಗಿ ಯೆರೂಸಲೇಮಿಗೆ ಬಂದು, ಅಲ್ಲಿ ಪಾಳೆಯಮಾಡಿಕೊಂಡು ಅದರ ಸುತ್ತಲೂ ಮಣ್ಣಿನ ದಿಬ್ಬವನ್ನು ಮಾಡಿದನು.
25:2ಅವನು ಅರಸನಾದ ಚಿದ್ಕೀಯನ ಆಳ್ವಿಕೆಯ ಹನ್ನೊಂದನೆ ವರ್ಷದವರೆಗೆ ಪಟ್ಟಣಕ್ಕೆ ಮುತ್ತಿಗೆ ಹಾಕಿದನು.
25:3ಘೋರಕ್ಷಾಮದ ದೆಸೆಯಿಂದ ಪಟ್ಟಣದಲ್ಲಿರುವವರಿಗೆ ಆಹಾರ ಸಿಕ್ಕದೇ ಹೋಯಿತು.
25:4ಪಟ್ಟಣಕ್ಕೆ ಮುತ್ತಿಗೆ ಹಾಕಿದ್ದ ಕಸ್ದೀಯರು ಅದೇ ವರ್ಷದ ನಾಲ್ಕನೆಯ ತಿಂಗಳಿನ ಒಂಭತ್ತನೆಯ ದಿನ ಪೌಳಿಗೋಡೆಯಲ್ಲಿ ಒಂದು ದ್ವಾರವನ್ನು ಮಾಡಿದ್ದರಿಂದ ಒಳಗಿದ್ದ ಅರಸನೂ ಅವನ ಎಲ್ಲಾ ಸೈನಿಕರೂ ಅದೇ ರಾತ್ರಿಯಲ್ಲಿ ಅರಸನ ತೋಟದ ಗೋಡೆಯ ಬಳಿಯಲ್ಲಿರುವ ಬಾಗಿಲಿನಿಂದ ಓಡಿಹೋದರು. ಆ ಬಾಗಿಲು ಎರಡು ಗೋಡೆಗಳ ಮಧ್ಯದಲ್ಲಿತ್ತು. ಅರಸನು ಅರಾಬಾ ಎಂಬ ತಗ್ಗಾದ ಪ್ರದೇಶದ ಮಾರ್ಗವಾಗಿ ಓಡಿಹೋದನು.
25:5ಕಸ್ದೀಯರ ಸೈನ್ಯದವರು ಅರಸನಾದ ಚಿದ್ಕೀಯನನ್ನು ಹಿಂದಟ್ಟಿ ಯೆರಿಕೋವಿನ ಬಯಲಿನಲ್ಲಿ ಅವನನ್ನು ಹಿಡಿದರು. ಅಷ್ಟರಲ್ಲಿ ಅವನ ಎಲ್ಲಾ ಸೈನಿಕರು ಅವನನ್ನು ಬಿಟ್ಟು ಚದರಿ ಹೋಗಿದ್ದರು.
25:6ಅನಂತರ ಕಸ್ದೀಯರು ಬಾಬೆಲಿನ ಅರಸನನ್ನು ಹಿಡಿದು ರಿಬ್ಲದಲ್ಲಿದ್ದ ತಮ್ಮ ಅರಸನ ಬಳಿಗೆ ತೆಗೆದುಕೊಂಡು ಬಂದು ಅವನಿಗೆ ಶಿಕ್ಷೆಯನ್ನು ವಿಧಿಸಿದರು.
25:7ಚಿದ್ಕೀಯನ ಇಬ್ಬರು ಮಕ್ಕಳನ್ನು ಅವನ ಎದುರಿನಲ್ಲಿಯೇ ಕೊಂದುಹಾಕಿದರಲ್ಲದೆ ಅವನಿಗೆ ಬೇಡಿಹಾಕಿ, ಅವನ ಎರಡು ಕಣ್ಣುಗಳನ್ನು ಕಿತ್ತು ಬಾಬಿಲೋನಿಗೆ ತೆಗೆದುಕೊಂಡು ಹೋದರು.
25:8ಐದನೆಯ ತಿಂಗಳಿನ ಏಳನೆಯ ದಿನದಲ್ಲಿ ಅಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದಲ್ಲಿ ಬಾಬೆಲಿನ ಅರಸನ ಸೇವಕನೂ, ಕಾವಲುದಂಡಿನ ಅಧಿಪತಿಯೂ ಆಗಿದ್ದ ನೆಬೂಜರದಾನ್ ಎಂಬುವವನು ಯೆರೂಸಲೇಮಿಗೆ ಬಂದನು.
25:9ಅವನು ಯೆಹೋವನ ಆಲಯವನ್ನೂ, ಅರಸನ ಅರಮನೆಯನ್ನೂ ಯೆರೂಸಲೇಮಿನ ಎಲ್ಲಾ ದೊಡ್ಡ ಮನೆಗಳನ್ನೂ ಹಾಗೂ ಪಟ್ಟಣದ ಮುಖ್ಯ ಕಟ್ಟಡಗಳನ್ನೂ ಸುಟ್ಟುಬಿಟ್ಟನು.
25:10ಅವನ ಜೊತೆಯಲ್ಲಿ ಬಂದಿದ್ದ ಕಸ್ದೀಯರ ಸೈನ್ಯದವರು ಯೆರೂಸಲೇಮಿನ ಸುತ್ತುಗೋಡೆಗಳನ್ನು ಕೆಡವಿದರು.
25:11ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಪಟ್ಟಣದಲ್ಲಿ ಉಳಿದವರನ್ನೂ ಮೊದಲೇ ಬಾಬೆಲಿನ ಅರಸನ ಮರೆಹೊಕ್ಕವರನ್ನೂ ಒಟ್ಟಾರೆ ಎಲ್ಲಾ ಜನರನ್ನು ಸೆರೆಹಿಡಿದೊಯ್ದನು.
25:12ಹೊಲಗಳನ್ನೂ, ದ್ರಾಕ್ಷಿ ತೋಟಗಳನ್ನೂ, ವ್ಯವಸಾಯಮಾಡುವುದಕ್ಕಾಗಿ ದೇಶದ ಜನರಲ್ಲಿ ಕೇವಲ ಬಡವರನ್ನು ಮಾತ್ರ ಬಿಟ್ಟುಹೋದನು.
25:13ಕಸ್ದೀಯರು ಯೆಹೋವನ ಆಲಯದಲ್ಲಿದ್ದ ತಾಮ್ರದ ಕಂಬಗಳನ್ನು, ಪೀಠಗಳನ್ನೂ, ಕಡಲಿನ ಆಕಾರದ ಪಾತ್ರೆಯನ್ನೂ ಒಡೆದು ಅವುಗಳ ತಾಮ್ರವನ್ನೂ ಬಾಬಿಲೋನಿಗೆ ತೆಗೆದುಕೊಂಡು ಹೋದರು.
25:14ದೇವಾಲಯದ ಸೇವೆಗಾಗಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಧೂಪಾರತಿ ಮೊದಲಾದ ತಾಮ್ರದ ಸಾಮಾನುಗಳನ್ನೂ ತೆಗೆದುಕೊಂಡು ಹೋದರು.
25:15ಕಾವಲುದಂಡಿನ ಅಧಿಪತಿಯು ಬೆಳ್ಳಿಬಂಗಾರದ ಅಗ್ಗಿಷ್ಟಿಕೆ, ಬಟ್ಟಲು ಮೊದಲಾದವುಗಳನ್ನು ತೆಗೆದುಕೊಂಡನು.
25:16ಸೊಲೊಮೋನನು ಯೆಹೋವನ ಆಲಯಕ್ಕಾಗಿ ಮಾಡಿಸಿದ ಎರಡು ಕಂಬಗಳು, ಕಡಲೆನಿಸಿಕೊಂಡ ಪಾತ್ರೆಯು, ಪೀಠಗಳು, ಇವುಗಳಿಗೆ ಲೆಕ್ಕವಿಲ್ಲದಷ್ಟು ತಾಮ್ರವನ್ನು ಬಳಸಲಾಗಿತ್ತು.
25:17ಪ್ರತಿಯೊಂದು ಕಂಬವು ಹದಿನೆಂಟು ಮೊಳ ಎತ್ತರವಿತ್ತು. ಪ್ರತಿಯೊಂದರ ಮೇಲೆ ಮೂರು ಮೊಳ ಎತ್ತರವಾದ ಒಂದು ತಾಮ್ರದ ಕುಂಭವಿತ್ತು. ಆ ಕುಂಭಗಳ ಮೇಲೆ ಸುತ್ತಲೂ ತಾಮ್ರದ ಜಾಲರಿಯೂ ದಾಳಿಂಬೆ ಹಣ್ಣುಗಳೂ ಇದ್ದವು.
25:18ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಹಿಡಿದುಕೊಂಡು ಹೋಗಿದ್ದ ಜನರಲ್ಲಿ ಮಹಾಯಾಜಕನಾದ ಸೆರಾಯನು, ಎರಡನೆಯ ಯಾಜಕನಾದ ಚೆಫನ್ಯನು ಮೂರು ಮಂದಿ ದ್ವಾರಪಾಲಕರು,
25:19ಸೈನ್ಯ ಸಂಬಂಧವಾದ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತಿದ್ದ ಕಂಚುಕಿ, ಪಟ್ಟಣದಲ್ಲಿ ಉಳಿದಿದ್ದ ಅರಸನಿಗೆ ಆಪ್ತರಾಗಿದ್ದ ಐದು ಮಂದಿ ಮಂತ್ರಿಗಳು, ಯುದ್ಧಕ್ಕೆ ಹೋಗತಕ್ಕವರ ಪಟ್ಟಿಯನ್ನು ಮಾಡುವ ಸೇನಾಧಿಪತಿಯ ಲೇಖಕನು, ಪಟ್ಟಣದಲ್ಲಿದ್ದ ಅರುವತ್ತು ಮಂದಿ ಜನರೂ ಇದ್ದರು.
25:20ನಂತರ ನೆಬೂಜರದಾನನು, ಇವರನ್ನೆಲ್ಲಾ ಹಿಡಿದುಕೊಂಡು ಹೋಗಿ ಹಮಾತ್ ಪ್ರದೇಶದ ರಿಬ್ಲದಲ್ಲಿದ್ದ ಬಾಬೆಲಿನ ಅರಸನಿಗೆ ಒಪ್ಪಿಸಲು,
25:21ಬಾಬೆಲಿನ ಅರಸನು ಹಮಾತ್ ಪ್ರದೇಶದ ಅವರನ್ನು ಕತ್ತಿಯಿಂದ ರಿಬ್ಲದಲ್ಲಿ ಕೊಲ್ಲಿಸಿದನು. ಹೀಗೆ ಯೆಹೂದ್ಯರು ಸೆರೆಯವರಾಗಿ ತಮ್ಮ ದೇಶವನ್ನು ಬಿಟ್ಟು ಹೋಗಬೇಕಾಯಿತು.