Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ › ಯೆರೂಸಲೇಮಿನ ಪತನ

ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ · ಯೆರೂಸಲೇಮಿನ ಪತನ

ಯೆಹೋಯಾಖೀನನನ್ನು ಬಾಬೆಲಿಗೆ ಕೊಂಡೊಯ್ಯಲಾಗುತ್ತದೆ

2 ಅರಸು 24:8–17 · 2 ಪೂರ್ವ 36:9–10

2 ಅರಸುಗಳು

2 ಅರಸು 24:8–17

8ಯೆಹೋಯಾಖೀನನು ಅರಸನಾದಾಗ ಅವನು ಹದಿನೆಂಟು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳುಗಳ ಕಾಲ ಆಳಿದನು. ಯೆರೂಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ ಎಂಬಾಕೆಯು ಇವನ ತಾಯಿ.

9ಇವನು ತನ್ನ ತಂದೆಯಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು.

10ಇವನ ಕಾಲದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಸೈನ್ಯದವರು ಯೆರೂಸಲೇಮ್ ಪಟ್ಟಣಕ್ಕೆ ವಿರುದ್ಧವಾಗಿ ಬಂದು ಅದಕ್ಕೆ ಮುತ್ತಿಗೆ ಹಾಕಿದರು.

11ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಸೈನ್ಯದವರು ಮುತ್ತಿಗೆ ಹಾಕಿದ ಯೆರೂಸಲೇಮ್ ಪಟ್ಟಣಕ್ಕೆ ನೆಬೂಕದ್ನೆಚ್ಚರನೂ ಬಂದನು.

12ಆಗ ಯೆಹೂದದ ಅರಸನಾದ ಯೆಹೋಯಾಖೀನನು ತನ್ನ ತಾಯಿಯ ಪರಿವಾರದವರು, ಸೇನಾಪತಿಗಳು, ಕಂಚುಕಿಗಳು ಇವರೊಡನೆ ಬಾಬೆಲಿನ ಅರಸನ ಬಳಿಗೆ ಹೋದನು. ಬಾಬೆಲಿನ ಅರಸನು ಇವನನ್ನು ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಸೆರೆಹಿಡಿದನು.

13ಇದಲ್ಲದೆ, ಯೆಹೋವನು ಮುಂತಿಳಿಸಿದ ಪ್ರಕಾರ ಅವನು ಯೆಹೋವನ ಆಲಯದ ಮತ್ತು ಅರಸನ ಅರಮನೆಯ ಭಂಡಾರಗಳಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ದ್ರವ್ಯವನ್ನು ತೆಗೆದುಕೊಂಡು ಹೋದನು. ಇಸ್ರಾಯೇಲರ ಅರಸನಾದ ಸೊಲೊಮೋನನು ಯೆಹೋವನ ಆಲಯಕ್ಕಾಗಿ ಮಾಡಿಸಿದ್ದ ಬಂಗಾರದ ಎಲ್ಲಾ ಸಾಮಾನುಗಳನ್ನು ಮುರಿದುಬಿಟ್ಟನು.

14ಯೆರೂಸಲೇಮಿನಲ್ಲಿದ್ದ ಎಲ್ಲಾ ಪ್ರಭುಗಳನ್ನೂ, ಭಟರನ್ನೂ, ಕಮ್ಮಾರರನ್ನೂ, ಪರಾಕ್ರಮಶಾಲಿಗಳನ್ನು ಒಟ್ಟಾಗಿ ಹತ್ತು ಸಾವಿರ ಜನರನ್ನು ಸೆರೆಹಿಡಿದು ತನ್ನ ದೇಶಕ್ಕೆ ಕರೆದುಕೊಂಡು ಹೋದನು. ದೇಶದಲ್ಲಿ ಕೇವಲ ಸಾಮಾನ್ಯ ಜನರಾಗಿದ್ದ ಬಡವರು ಹೊರತಾಗಿ ಯಾರನ್ನೂ ಬಿಡಲಿಲ್ಲ.

15ಅರಸನಾದ ನೆಬೂಕದ್ನೆಚ್ಚರನು ಯೆಹೋಯಾಕೀನನನ್ನೂ, ಅವನ ತಾಯಿ, ಹೆಂಡತಿ, ಕಂಚುಕಿಗಳನ್ನೂ ಮತ್ತು ದೇಶದ ಪ್ರಧಾನ ಪುರುಷರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆಯಾಗಿ ತೆಗೆದುಕೊಂಡುಹೋದನು.

16ಬಾಬೆಲಿನ ಅರಸನು ಏಳು ಸಾವಿರ ಮಂದಿ ಭಟರನ್ನೂ, ಸಾವಿರ ಮಂದಿ ಕಮ್ಮಾರರನ್ನೂ, ಬಡಗಿಗಳನ್ನು ಯೆರೂಸಲೇಮಿನಿಂದ ಬಾಬಿಲೋನಿಗೆ ಕರೆದುಕೊಂಡು ಹೋದನು. ಅವರೆಲ್ಲರೂ ಪರಾಕ್ರಮಶಾಲಿಗಳೂ ಯುದ್ಧವೀರರೂ ಆಗಿದ್ದರು.

17ಬಾಬೆಲಿನ ಅರಸನು ಯೆಹೋಯಾಖೀನನಿಗೆ ಬದಲಾಗಿ ಅವನ ಚಿಕ್ಕಪ್ಪನಾದ ಮತ್ತನ್ಯ ಎಂಬುವವನನ್ನು ಅರಸನನ್ನಾಗಿ ನೇಮಿಸಿ ಅವನಿಗೆ ಚಿದ್ಕೀಯನೆಂದು ಹೆಸರಿಟ್ಟನು.

2 ಪೂರ್ವಕಾಲವೃತ್ತಾಂತ

2 ಪೂರ್ವ 36:9–10

9ಯೆಹೋಯಾಕೀನನು ಅರಸನಾದಾಗ ಅವನು ಎಂಟು ವರ್ಷದವನಾಗಿದ್ದನು; ಅವನು ಯೆರೂಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿನಗಳ ಕಾಲ ಆಳಿದನು. ಅವನು ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.

10ನೆಬೂಕದ್ನೆಚ್ಚರನು ವರ್ಷ ಆರಂಭದಲ್ಲಿ ಅವನನ್ನೂ, ಯೆಹೋವನ ದೇವಾಲಯದ ಬೆಲೆಯುಳ್ಳ ಸಾಮಾನುಗಳನ್ನು ಬಾಬಿಲೋನಿಗೆ ತರಿಸಿಕೊಂಡು, ಅವನ ಚಿಕ್ಕಪ್ಪನಾದ ಚಿದ್ಕೀಯನನ್ನು ಯೆಹೂದ ಮತ್ತು ಯೆರೂಸಲೇಮಿನ ಅರಸನನ್ನಾಗಿ ಮಾಡಿದನು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು