Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ › ಸೊಲೊಮೋನ

ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ · ಸೊಲೊಮೋನ

ಸೊಲೊಮೋನನು ಜನರನ್ನು ಆಶೀರ್ವದಿಸುತ್ತಾನೆ

1 ಅರಸು 8:12–21 · 2 ಪೂರ್ವ 6:1–11

1 ಅರಸುಗಳು

1 ಅರಸು 8:12–21

12ತರುವಾಯ ಸೊಲೊಮೋನನು, “ಯೆಹೋವನೇ, ಕಾರ್ಗತ್ತಲಲ್ಲಿ ವಾಸಿಸುತ್ತೇನೆಂದು ಹೇಳಿದ್ದೀ.

13ನಾನು ನಿನಗೋಸ್ಕರ ಒಂದು ಮಂದಿರವನ್ನು ಕಟ್ಟಿಸಿದ್ದೇನೆ. ಅದು ನಿನಗೆ ಶಾಶ್ವತವಾದ ವಾಸಸ್ಥಳವಾಗಿರಲಿ” ಎಂದು ಪ್ರಾರ್ಥನೆಮಾಡಿದನು.

14ಇದಾದ ಮೇಲೆ ಅರಸನು ಎದ್ದು ನಿಂತು ಇಸ್ರಾಯೇಲ್ ಸಮೂಹದವರ ಕಡೆಗೆ ತಿರುಗಿಕೊಂಡು ಅವರನ್ನು ಆಶೀರ್ವದಿಸಿ,

15“ಇಸ್ರಾಯೇಲ್ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ನನ್ನ ತಂದೆಯಾದ ದಾವೀದನಿಗೆ ಆತನ ಬಾಯಿ ನುಡಿದಿದ್ದನ್ನು ಆತನ ಹಸ್ತವು ಈಗ ನೆರವೇರಿಸಿದೆ.

16ಆತನು, ‘ನಾನು ನನ್ನ ಜನರಾದ ಇಸ್ರಾಯೇಲರನ್ನು ಐಗುಪ್ತದಿಂದ ಬರಮಾಡಿದಂದಿನಿಂದ ನನ್ನ ಪ್ರಜೆಗಳಾದ ಇಸ್ರಾಯೇಲರನ್ನು ಆಳುವುದಕ್ಕೋಸ್ಕರ ದಾವೀದನನ್ನು ಆರಿಸಿಕೊಂಡೆನೇ ಹೊರತು ನನ್ನ ನಾಮದ ನಿವಾಸಕ್ಕೋಸ್ಕರ ಆಲಯ ಸ್ಥಾನವನ್ನಾಗಿ ಇಸ್ರಾಯೇಲ್ ಕುಲಗಳ ಯಾವ ಪಟ್ಟಣವನ್ನೂ ಆರಿಸಿಕೊಳ್ಳಲಿಲ್ಲ’ ಎಂದು ಹೇಳಿದ್ದನು.

17ನನ್ನ ತಂದೆಯಾದ ದಾವೀದನು ಇಸ್ರಾಯೇಲ್ ದೇವರಾದ ಯೆಹೋವನ ಹೆಸರಿಗೋಸ್ಕರ ಮನೆಯನ್ನು ಕಟ್ಟಬೇಕೆಂದು ಮನಸ್ಸು ಮಾಡಿದ್ದನು.

18ಆಗ ಯೆಹೋವನು ಅವನಿಗೆ, ‘ನೀನು ನನ್ನ ಹೆಸರಿಗೋಸ್ಕರ ಒಂದು ಮನೆಯನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದು ಒಳ್ಳೇದೆ ಸರಿ. ಆದರೂ ನೀನು ಅದನ್ನು ಕಟ್ಟಬಾರದು.

19ನಿನ್ನಿಂದ ಹುಟ್ಟುವ ಮಗನು ನನ್ನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಬೇಕು’ ಎಂದು ಹೇಳಿದನು.

20ಯೆಹೋವನು ತಾನು ಕೊಟ್ಟ ಮಾತನ್ನು ನೆರವೇರಿಸಿದನು. ಆತನ ವಾಗ್ದಾನದಂತೆ ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಇಸ್ರಾಯೇಲ್ ಸಿಂಹಾಸನದ ಮೇಲೆ ಅರಸನಾಗಿ ಕುಳಿತುಕೊಂಡು ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಈ ಆಲಯವನ್ನು ಕಟ್ಟಿದೆನು.

21ಇದಲ್ಲದೆ ಐಗುಪ್ತದೇಶದಿಂದ ಬಿಡುಗಡೆ ಹೊಂದಿದ ನಮ್ಮ ಪೂರ್ವಿಕರಿಗೆ ಯೆಹೋವನಿಂದ ದೊರಕಿದ ನಿಬಂಧನಾಶಾಸನಗಳಿರುವ ಮಂಜೂಷಕ್ಕೆ ಸ್ಥಳವನ್ನು ಪ್ರತ್ಯೇಕಿಸಿ ಅಲ್ಲಿ ಅದನ್ನು ಇರಿಸಿದೆನು” ಎಂದು ಹೇಳಿದನು.

2 ಪೂರ್ವಕಾಲವೃತ್ತಾಂತ

2 ಪೂರ್ವ 6:1–11

1ತರುವಾಯ ಸೊಲೊಮೋನನು, ಯೆಹೋವನೇ “ಕಾರ್ಗತ್ತಲಲ್ಲಿ ವಾಸಿಸುತ್ತೇನೆಂದು ಹೇಳಿದ್ದೀ;

2ಆದರೆ ನಾನು ನಿನಗೋಸ್ಕರ ಒಂದು ಆಲಯವನ್ನು, ನೀನು ಶಾಶ್ವತವಾಗಿ ವಾಸಮಾಡತಕ್ಕ ಸ್ಥಳವಾಗಿರಲೆಂದು ನಾನು ಕಟ್ಟಿಸಿದ್ದೇನೆ” ಎಂದನು.

3ಇದಾದ ಮೇಲೆ, ಅರಸನು ಎದ್ದು ನಿಂತು ಇಸ್ರಾಯೇಲಿನ ಸಮೂಹದವರ ಕಡೆಗೆ ತಿರುಗಿಕೊಂಡು ಅವರನ್ನು ಆಶೀರ್ವದಿಸಿದನು.

4ಅವನು ಹೇಳಿದ್ದೇನೆಂದರೆ, “ಇಸ್ರಾಯೇಲರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ನನ್ನ ತಂದೆಯಾದ ದಾವೀದನಿಗೆ ವಾಗ್ದಾನ ಮಾಡಿದಂತೆ ಈಗ ತನ್ನಿಂದ ನೆರವೇರಿಸುವಂತೆ ಮಾಡಿದ್ದಾನೆ.

5ಆತನು ಹೇಳಿದ್ದೇನೆಂದರೆ, ‘ನನ್ನ ಜನರಾದ ಇಸ್ರಾಯೇಲರನ್ನು ಐಗುಪ್ತ ದೇಶದಿಂದ ಬರಮಾಡಿದ ದಿನ ಮೊದಲುಗೊಂಡು ನನ್ನ ಹೆಸರು ಅದರಲ್ಲಿ ಇರುವ ಹಾಗೆ ಆಲಯವನ್ನು ಕಟ್ಟುವುದಕ್ಕಾಗಿ ಇಸ್ರಾಯೇಲರ ಕುಲಗಳಲ್ಲಿ ಯಾವ ಪಟ್ಟಣವನ್ನೂ, ನನ್ನ ಆಲಯ ಸ್ಥಾನವನ್ನಾಗಿ ಆರಿಸಿಕೊಳ್ಳಲಿಲ್ಲ; ನನ್ನ ಪ್ರಜೆಗಳಾದ ಇಸ್ರಾಯೇಲರ ಪ್ರಭುವಾಗಿರುವುದಕ್ಕಾಗಿ ಯಾವ ವ್ಯಕ್ತಿಯನ್ನು ಆರಿಸಿಕೊಂಡದ್ದೂ ಇಲ್ಲ.

6ಆದರೆ ಈಗ ನನ್ನ ಹೆಸರಿಗೋಸ್ಕರ ಯೆರೂಸಲೇಮನ್ನೂ ನನ್ನ ಪ್ರಜೆಗಳಾದ ಇಸ್ರಾಯೇಲರನ್ನು ಆಳುವುದಕ್ಕೋಸ್ಕರ ದಾವೀದನನ್ನೂ ಆರಿಸಿಕೊಂಡಿದ್ದೇನೆ’ ಎಂದು ಹೇಳಿದನು.

7ಆದಕಾರಣ ಇಸ್ರಾಯೇಲಿನ ದೇವರಾದ ಯೆಹೋವನ ಹೆಸರಿಗೆ ಆಲಯವನ್ನು ಕಟ್ಟಿಸಲು ನನ್ನ ತಂದೆಯಾದ ದಾವೀದನಿಗೆ ಮನಸ್ಸಿತ್ತು.

8ಆಗ ಯೆಹೋವನು ನನ್ನ ತಂದೆಯಾದ ದಾವೀದನಿಗೆ, ‘ನೀನು ನನ್ನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದು ಒಳ್ಳೆಯದೇ ಸರಿ.

9ಆದರೆ ನೀನು ಆಲಯವನ್ನು ಕಟ್ಟಬಾರದು; ನಿನ್ನಿಂದ ಹುಟ್ಟುವ ಮಗನೇ ನನ್ನ ಹೆಸರಿಗೋಸ್ಕರ ಆಲಯವನ್ನು ಕಟ್ಟಿಸುವನು’ ಎಂದು ಹೇಳಿದನು.

10ಯೆಹೋವನು ತಾನು ಕೊಟ್ಟ ಮಾತನ್ನು ನೆರವೇರಿಸಿದ್ದಾನೆ. ಆತನು ವಾಗ್ದಾನ ಮಾಡಿದಂತೆ ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಇಸ್ರಾಯೇಲಿನ ಸಿಂಹಾಸನದ ಮೇಲೆ ಅರಸನಾಗಿ ಕುಳಿತುಕೊಂಡು ಇಸ್ರಾಯೇಲಿನ ದೇವರಾದ ಯೆಹೋವನ ಹೆಸರಿಗೆ ಆಲಯವನ್ನು ಕಟ್ಟಿಸಿದ್ದೇನೆ.

11ಯೆಹೋವನಿಂದ ಇಸ್ರಾಯೇಲರಿಗೆ ದೊರಕಿದ ಒಡಂಬಡಿಕೆಯ ನಿಬಂಧನಾಶಾಸನಗಳಿರುವ ಮಂಜೂಷವನ್ನು ಅದರಲ್ಲಿ ಇಟ್ಟಿದ್ದೇನೆ” ಎಂದು ಹೇಳಿದನು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು