Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಆರಂಭ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಆರಂಭ

ಅಡವಿಯಲ್ಲಿ ಶೋಧನೆ

ಮತ್ತಾ 4:1–11 · ಮಾರ್ಕ 1:12–13 · ಲೂಕ 4:1–13

ಮತ್ತಾಯನು

ಮತ್ತಾ 4:1–11

1ಆಗ ಯೇಸು ಸೈತಾನನಿಂದ ಶೋಧಿಸಲ್ಪಡುವುದಕ್ಕಾಗಿ ದೇವರಾತ್ಮನು ಆತನನ್ನು ಅಡವಿಗೆ ನಡೆಸಿದನು.

2ಆತನು ನಲವತ್ತು ದಿನ ಹಗಲಿರುಳು ಉಪವಾಸವಿದ್ದ ತರುವಾಯ ಆತನಿಗೆ ಹಸಿವಾಯಿತು.

3ಆಗ ಸೈತಾನನು ಆತನ ಬಳಿಗೆ ಬಂದು, “ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳಿಗೆ ರೊಟ್ಟಿಯಾಗುವಂತೆ ಅಪ್ಪಣೆಕೊಡು” ಎಂದು ಹೇಳಲು,

4ಯೇಸು, “‘ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ, ಆದರೆ ದೇವರ ಬಾಯಿಂದ ಬರುವ ಪ್ರತಿಯೊಂದು ನುಡಿಯಿಂದಲೂ ಬದುಕುವನು’ ಎಂದು ಬರೆದಿದೆ” ಅಂದನು.

5ಆಗ ಸೈತಾನನು ಯೇಸುವನ್ನು ಪರಿಶುದ್ಧ ಪಟ್ಟಣಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಗೋಪುರದ ಮೇಲೆ ನಿಲ್ಲಿಸಿ

6ಯೇಸುವಿಗೆ, “ನೀನು ದೇವರ ಮಗನೇ ಆಗಿದ್ದರೆ ಇಲ್ಲಿಂದ ಕೆಳಕ್ಕೆ ದುಮುಕು; ‘ದೇವರು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’ ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು.

7ಅದಕ್ಕೆ ಯೇಸು, “ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು ಎಂಬುದಾಗಿಯೂ ಬರೆದಿದೆ” ಅಂದನು.

8ಬಳಿಕ ಸೈತಾನನು ಆತನನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ,

9ಯೇಸುವಿಗೆ, “ನೀನು ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು” ಅಂದನು.

10ಯೇಸು ಅವನಿಗೆ, “ಸೈತಾನನೇ, ನೀನು ತೊಲಗಿ ಹೋಗು. ‘ನಿನ್ನ ದೇವರಾಗಿರುವ ಕರ್ತನನ್ನು ಮಾತ್ರ ಆರಾಧಿಸಬೇಕು ಆತನೊಬ್ಬನನ್ನೇ ಸೇವಿಸಬೇಕು’ ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು.

11ಆಗ ಸೈತಾನನು ಆತನನ್ನು ಬಿಟ್ಟು ಹೊರಟು ಹೋದನು, ಆಗ ದೇವದೂತರು ಬಂದು ಆತನಿಗೆ ಉಪಚಾರ ಮಾಡಿದರು.

ಮಾರ್ಕನು

ಮಾರ್ಕ 1:12–13

12ಕೂಡಲೇ ಪವಿತ್ರಾತ್ಮ ಪ್ರೇರಿತನಾಗಿ ಯೇಸು ಅಡವಿಗೆ ಹೋದನು.

13ಆತನು ನಲವತ್ತು ದಿನ ಅಡವಿಯಲ್ಲಿ ಕಾಡುಮೃಗಗಳೊಂದಿಗೆ ಇದ್ದು ಸೈತಾನನಿಂದ ಶೋಧಿಸಲ್ಪಟ್ಟನು ಮತ್ತು ದೇವದೂತರು ಯೇಸುವಿಗೆ ಉಪಚಾರ ಮಾಡಿದರು.

ಲೂಕನು

ಲೂಕ 4:1–13

1ಯೇಸು ಪವಿತ್ರಾತ್ಮಭರಿತನಾಗಿ ಯೊರ್ದನ್ ಹೊಳೆಯಿಂದ ಹಿಂತಿರುಗಿ ಬಂದು ದೇವರಾತ್ಮನಿಂದ,

2ನಲವತ್ತು ದಿನ ಮರುಭೂಮಿಯಲ್ಲಿ ನಡಿಸಲ್ಪಡುತ್ತಾ, ಸೈತಾನನಿಂದ ಶೋಧಿಸಲ್ಪಟ್ಟನು. ಆ ದಿನಗಳಲ್ಲಿ ಆತನು ಏನನ್ನೂ ತಿನ್ನಲಿಲ್ಲ. ಆ ದಿನಗಳು ಮುಗಿದ ಮೇಲೆ ಆತನಿಗೆ ಹಸಿವಾಯಿತು.

3ಆಗ ಸೈತಾನನು ಆತನಿಗೆ, “ನೀನು ದೇವರ ಮಗನಾಗಿದ್ದರೆ ಈ ಕಲ್ಲನ್ನು ರೊಟ್ಟಿಯಾಗುವಂತೆ ಅಪ್ಪಣೆ ಕೊಡು” ಎಂದು ಹೇಳಲು,

4ಯೇಸು ಅವನಿಗೆ, “‘ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ’ ಎಂದು ಬರೆದದೆ” ಎಂದು ಉತ್ತರಕೊಟ್ಟನು.

5ಬಳಿಕ ಸೈತಾನನು ಆತನನ್ನು ಎತ್ತರಕ್ಕೆ ಕರೆದುಕೊಂಡು ಹೋಗಿ, ಕ್ಷಣಮಾತ್ರದಲ್ಲಿ ಲೋಕದ ಎಲ್ಲಾ ರಾಜ್ಯಗಳನ್ನು ಆತನಿಗೆ ತೋರಿಸಿ,

6“ಇವೆಲ್ಲವುಗಳ ಅಧಿಕಾರವನ್ನೂ ಇವುಗಳ ವೈಭವವನ್ನೂ ನಿನಗೆ ಕೊಡುವೆನು; ಇದೆಲ್ಲಾ ನನಗೆ ಕೊಡಲ್ಪಟ್ಟಿದೆ, ಇದನ್ನು ನನ್ನ ಮನಸ್ಸು ಬಂದವನಿಗೆ ಕೊಡುತ್ತೇನೆ;

7ನೀನು ನನ್ನ ಮುಂದೆ ಅಡ್ಡಬಿದ್ದರೆ ಇದೆಲ್ಲಾ ನಿನ್ನದಾಗುವುದು” ಎಂದು ಆತನಿಗೆ ಹೇಳಿದನು.

8ಅದಕ್ಕೆ ಯೇಸು, “‘ನಿನ್ನ ದೇವರಾಗಿರುವ ಕರ್ತನನ್ನು ಆರಾಧಿಸಿ, ಆತನೊಬ್ಬನನ್ನೇ ಸೇವಿಸಬೇಕು’ ಎಂಬುದಾಗಿ ಬರೆದದೆ” ಎಂದು ಉತ್ತರಕೊಟ್ಟನು.

9ಇದಲ್ಲದೆ ಸೈತಾನನು ಆತನನ್ನು ಯೆರೂಸಲೇಮಿಗೆ ಕರೆದುಕೊಂಡು ಹೋಗಿ ದೇವಾಲಯದ ಗೋಪುರದ ತುದಿಯಲ್ಲಿ ನಿಲ್ಲಿಸಿ ಆತನಿಗೆ, “ನೀನು ದೇವರ ಮಗನಾಗಿದ್ದರೆ ಇಲ್ಲಿಂದ ಕೆಳಕ್ಕೆ ಧುಮುಕು.

10‘ನಿನ್ನನ್ನು ಕಾಯುವುದಕ್ಕೆ ಕರ್ತನು ತನ್ನ ದೂತರಿಗೆ ಅಪ್ಪಣೆ ಕೊಡುವನು;

11ಮತ್ತು ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’ ಎಂಬುದಾಗಿ ಬರೆದದೆಯಲ್ಲಾ” ಎಂದು ಹೇಳಿದನು.

12ಅದಕ್ಕೆ ಆತನು, “‘ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದೆಂದು’ ಹೇಳಿದೆ” ಎಂದು ಉತ್ತರ ಕೊಟ್ಟನು.

13ಹೀಗೆ ಸೈತಾನನು ನಾನಾ ವಿಧದಲ್ಲಿ ಶೋಧಿಸಿದ ನಂತರ, ತಕ್ಕ ಸಮಯ ಬರುವ ತನಕ ಆತನನ್ನು ಬಿಟ್ಟು ಹೊರಟುಹೋದನು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು