Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಯೆರೂಸಲೇಮಿನಲ್ಲಿ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಯೆರೂಸಲೇಮಿನಲ್ಲಿ

ಸದ್ದುಕಾಯರು ಮತ್ತು ಪುನರುತ್ಥಾನ

ಮತ್ತಾ 22:23–33 · ಮಾರ್ಕ 12:18–27 · ಲೂಕ 20:27–30, 32–40

ಮತ್ತಾಯನು

ಮತ್ತಾ 22:23–33

23ಅದೇ ದಿನದಲ್ಲಿ ಪುನರುತ್ಥಾನವಿಲ್ಲ ಎಂದು ವಾದಿಸುವ ಕೆಲವು ಸದ್ದುಕಾಯರು ಆತನ ಬಳಿಗೆ ಬಂದರು.

24ಇವರು ಆತನಿಗೆ, “ಬೋಧಕನೇ, ‘ಒಬ್ಬನು ಮಕ್ಕಳಿಲ್ಲದೆ ಸತ್ತರೆ ಅವನ ಹೆಂಡತಿಯನ್ನು ಅವನ ತಮ್ಮನು ಮದುವೆಮಾಡಿಕೊಂಡು ತನ್ನ ಅಣ್ಣನಿಗೆ ಮಕ್ಕಳನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ.’

25ಆದರೆ ನಮ್ಮಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆ ಆಗಿ ತೀರಿಹೋದನು. ಅವನಿಗೆ ಮಕ್ಕಳಿಲ್ಲದ ಕಾರಣ ಹೆಂಡತಿಯನ್ನು ತನ್ನ ತಮ್ಮನಿಗೆ ಬಿಟ್ಟನು;

26ಅದರಂತೆ ಎರಡನೆಯವನೂ ಮೂರನೆಯವನೂ ಹಾಗೆಯೇ ಏಳನೆಯವನ ವರೆಗೂ ಮಾಡಿದರು.

27ಅವರೆಲ್ಲರು ಸತ್ತ ಮೇಲೆ ಆ ಹೆಂಗಸೂ ಸತ್ತಳು.

28ಹಾಗಾದರೆ ಪುನರುತ್ಥಾನದಲ್ಲಿ ಆಕೆ ಆ ಏಳು ಮಂದಿಯಲ್ಲಿ ಯಾರಿಗೆ ಹೆಂಡತಿಯಾಗಿರುವಳು? ಆಕೆಯನ್ನು ಅವರೆಲ್ಲರೂ ಮದುವೆಮಾಡಿಕೊಂಡಿದ್ದರಲ್ಲಾ” ಎಂದು ಪ್ರಶ್ನಿಸಿದರು.

29ಅದಕ್ಕೆ ಯೇಸು ಉತ್ತರವಾಗಿ ಅವರಿಗೆ, “ನೀವು ದೇವರ ವಾಕ್ಯವನ್ನಾದರೂ ದೇವರ ಶಕ್ತಿಯನ್ನಾದರೂ ಸರಿಯಾಗಿ ತಿಳಿದುಕೊಳ್ಳದೆ ತಪ್ಪು ಅಭಿಪ್ರಾಯದಲ್ಲಿದ್ದೀರಿ;

30ಪುನರುತ್ಥಾನವಾದ ಮೇಲೆ ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ; ಪರಲೋಕದಲ್ಲಿರುವ ದೇವದೂತರಂತೆ ಅವರು ಇರುತ್ತಾರೆ.

31ಸತ್ತವರ ಪುನರುತ್ಥಾನದ ವಿಷಯವಾಗಿ ಹೇಳಬೇಕಾದರೆ,

32‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು’ ಎಂದು ದೇವರು ನಿಮಗೆ ನುಡಿದಿದ್ದನ್ನು ನೀವು ಓದಲಿಲ್ಲವೇ. ಆತನು ಸತ್ತವರಿಗೆ ದೇವರಲ್ಲ, ಆದರೆ ಜೀವಿಸುವವರಿಗೆ ದೇವರಾಗಿದ್ದಾನೆ” ಎಂದು ಹೇಳಿದನು.

33ಜನರ ಗುಂಪು ಅದನ್ನು ಕೇಳಿ ಆತನ ಬೋಧನೆಗೆ ಆಶ್ಚರ್ಯಪಟ್ಟರು.

ಮಾರ್ಕನು

ಮಾರ್ಕ 12:18–27

18ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಆತನ ಬಳಿಗೆ ಬಂದು,

19ಆತನನ್ನು ಪ್ರಶ್ನೆಮಾಡಿದ್ದೇನಂದರೆ, “ಬೋಧಕನೇ, ‘ಅಣ್ಣನಾದವನು ಮಕ್ಕಳಿಲ್ಲದೆ ಹೆಂಡತಿಯನ್ನು ಬಿಟ್ಟು ಸತ್ತರೆ ಆಕೆಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು’ ಮೋಶೆಯು ನಮಗಾಗಿ ಬರೆದಿಟ್ಟಿದ್ದಾನಲ್ಲವೇ.

20“ಒಮ್ಮೆ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆ ಮಾಡಿಕೊಂಡು ಸಂತಾನವಿಲ್ಲದೆ ಸತ್ತನು.

21ಎರಡನೆಯವನೂ ಆಕೆಯನ್ನು ಮದುವೆ ಮಾಡಿಕೊಂಡು ಸಂತಾನವಿಲ್ಲದೆ ಸತ್ತನು. ಅದರಂತೆ ಮೂರನೆಯವನು.

22ಇದೇ ಪ್ರಕಾರ ಏಳು ಮಂದಿಯೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಸತ್ತರು. ಕೊನೆಯಲ್ಲಿ ಆ ಸ್ತ್ರೀಯೂ ಸತ್ತಳು.

23ಪುನರುತ್ಥಾನದಲ್ಲಿ ಅವರು ಎದ್ದುಬರುವಾಗ ಅವರಲ್ಲಿ ಆಕೆಯು ಯಾರ ಹೆಂಡತಿಯಾಗಿರುವಳು? ಆ ಏಳು ಮಂದಿಗೂ ಆಕೆಯು ಹೆಂಡತಿಯಾಗಿದ್ದಳಲ್ಲಾ” ಎಂದರು.

24ಅದಕ್ಕೆ ಯೇಸು, “ನೀವು ಶಾಸ್ತ್ರವಚನಗಳನ್ನಾದರೂ, ದೇವರ ಶಕ್ತಿಯನ್ನಾದರೂ ತಿಳಿಯದೆ ಇರುವುದರಿಂದಲೇ ತಪ್ಪುವವರಾಗಿದ್ದೀರಿ?

25ಸತ್ತವರು ಬದುಕಿ ಎದ್ದಮೇಲೆ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ.

26ಆದರೆ ಸತ್ತವರು ಬದುಕಿ ಬರುತ್ತಾರೆಂಬುದನ್ನು ಕುರಿತು ಹೇಳಬೇಕಾದರೆ ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಮಾತನಾಡಿದನೆಂದು ನೀವು ಮೋಶೆಯ ಗ್ರಂಥದಲ್ಲಿ ಓದಲಿಲ್ಲವೋ?’

27ಆತನು ಜೀವಂತರಿಗೆ ದೇವರಾಗಿದ್ದಾನೆ ಹೊರತು ಸತ್ತವರಿಗಲ್ಲ. ಈ ವಿಷಯದಲ್ಲಿ ನೀವು ಬಹು ತಪ್ಪಾದ ಅಭಿಪ್ರಾಯವುಳ್ಳವರಾಗಿದ್ದಿರಿ” ಎಂದು ಹೇಳಿದನು.

ಲೂಕನು

ಲೂಕ 20:27–30, 32–40

27ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವವರಾದ ಸದ್ದುಕಾಯರಲ್ಲಿ ಕೆಲವರು ಬಂದು ಆತನಿಗೆ ಪ್ರಶ್ನೆಮಾಡಿದ್ದೇನಂದರೆ,

28“ಬೋಧಕನೇ, ಅಣ್ಣನಾದವನು ಹೆಂಡತಿಯುಳ್ಳವನಾಗಿದ್ದು ಮಕ್ಕಳಿಲ್ಲದೆ ಸತ್ತರೆ ಅವನ ತಮ್ಮನು ಆಕೆಯನ್ನು ಮದುವೆಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ನಮಗೆ ಬರೆದಿಟ್ಟನಷ್ಟೆ.

29ಒಳ್ಳೆಯದು, ಏಳು ಮಂದಿ ಅಣ್ಣತಮ್ಮಂದಿರಿದ್ದರು. ಮೊದಲನೆಯವನು ಮದುವೆಯಾಗಿ ಮಕ್ಕಳಿಲ್ಲದೆ ಸತ್ತನು.

30ಎರಡನೆಯವನೂ ಅವನ ತರುವಾಯ ಮೂರನೆಯವನೂ ಆಕೆಯನ್ನು ಮದುವೆಮಾಡಿಕೊಂಡರು. ಇದೇ ರೀತಿಯಾಗಿ ಏಳು ಮಂದಿಯೂ ಮದುವೆಯಾಗಿ ಮಕ್ಕಳಿಲ್ಲದೆ ಸತ್ತರು.

32ಕಡೆಯಲ್ಲಿ ಆ ಹೆಂಗಸೂ ಸತ್ತಳು.

33ಹಾಗಾದರೆ ಪುನರುತ್ಥಾನದಲ್ಲಿ ಆ ಸ್ತ್ರೀಯು ಅವರೊಳಗೆ ಯಾರ ಹೆಂಡತಿಯಾಗಿರುವಳು? ಆಕೆಯನ್ನು ಏಳು ಮಂದಿಯೂ ಮದುವೆ ಮಾಡಿಕೊಂಡಿದ್ದರಲ್ಲಾ” ಅಂದರು.

34ಯೇಸು ಅವರಿಗೆ, “ಈ ಲೋಕದ ಜನರು ಮದುವೆಮಾಡಿಕೊಳ್ಳುತ್ತಾರೆ ಹಾಗೂ ಮದುವೆಮಾಡಿಕೊಡುತ್ತಾರೆ.

35ಆದರೆ ಮುಂಬರುವ ಲೋಕವನ್ನೂ, ಸತ್ತವರೊಳಗಿಂದ ಪುನರುತ್ಥಾನವನ್ನೂ ಪಡೆಯುವುದಕ್ಕೆ ಯೋಗ್ಯರೆನಿಸಿಕೊಂಡಿರುವವರು ಮದುವೆಮಾಡಿಕೊಳ್ಳುವುದೂ ಇಲ್ಲ, ಮಾಡಿಕೊಡುವುದೂ ಇಲ್ಲ.

36ಅವರು ಇನ್ನು ಮರಣಕ್ಕೆ ಗುರಿಯಾಗುವುದೇ ಇಲ್ಲ. ಏಕೆಂದರೆ ಅವರು ದೇವದೂತರಿಗೆ ಸರಿಸಮಾನರೂ, ಪುನರುತ್ಥಾನವನ್ನು ಹೊಂದಿದವರಾಗಿವುದ್ದರಿಂದ ಅವರು ದೇವರ ಮಕ್ಕಳೂ ಆಗಿರುತ್ತಾರೆ.

37ಸತ್ತವರು ಬದುಕಿ ಏಳುತ್ತಾರೆಂಬುದನ್ನು ಮೋಶೆಯೂ ಸೂಚಿಸಿದ್ದಾನೆ. ಅವನು ಪೊದೆಯ ಸಂಗತಿಯಿರುವ ಅಧ್ಯಾಯದಲ್ಲಿ ಕರ್ತನನ್ನು ‘ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು’ ಎಂದು ಹೇಳಿದ್ದಾನೆ.

38ದೇವರು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ. ಆತನಿಗೆ ಎಲ್ಲರೂ ಜೀವಿಸುವವರೇ” ಎಂದು ಹೇಳಿದನು.

39ಶಾಸ್ತ್ರಿಗಳಲ್ಲಿ ಕೆಲವರು, “ಬೋಧಕನೇ, ಚೆನ್ನಾಗಿ ಹೇಳಿದಿ” ಅಂದರು.

40ಆತನನ್ನು ಇನ್ನೇನು ಕೇಳುವುದಕ್ಕೂ ಅವರಿಗೆ ಧೈರ್ಯವಿಲ್ಲದೆ ಹೋಯಿತು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು