Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಗಲಿಲಾಯದಲ್ಲಿ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಗಲಿಲಾಯದಲ್ಲಿ

ಯೇಸು ಮತ್ತು ಬೆಲ್ಜೆಬೂಲ

ಮತ್ತಾ 12:22–30 · ಮಾರ್ಕ 3:20–27 · ಲೂಕ 11:14–23

ಮತ್ತಾಯನು

ಮತ್ತಾ 12:22–30

22ದೆವ್ವ ಹಿಡಿದ ಕುರುಡನೂ, ಮೂಕನೂ ಆಗಿರುವ ಒಬ್ಬನನ್ನು ಯೇಸುವಿನ ಬಳಿಗೆ ಕರೆತಂದರು. ಆತನು ಅವನನ್ನು ಸ್ವಸ್ಥಮಾಡಲು ಆ ಮೂಕನಿಗೆ ಮಾತು ಹಾಗೂ ದೃಷ್ಟಿ ಎರಡೂ ಬಂದವು.

23ಅದಕ್ಕೆ ಜನರೆಲ್ಲರೂ ಬೆರಗಾಗಿ, “ಈತನು ದಾವೀದನ ಕುಮಾರನೇ ಇರಬಹುದೇನೋ” ಎಂದು ಮಾತನಾಡಿಕೊಳ್ಳುತ್ತಿದ್ದರು.

24ಆದರೆ ಫರಿಸಾಯರು ಅದನ್ನು ಕೇಳಿ, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಯೇ ಹೊರತು ಬೇರೆ ರೀತಿಯಿಂದ ಅಲ್ಲ” ಅಂದರು.

25ಆತನು ಅವರ ಆಲೋಚನೆಗಳನ್ನು ತಿಳಿದುಕೊಂಡು ಅವರಿಗೆ ಹೇಳಿದ್ದೇನೆಂದರೆ, “ಯಾವ ರಾಜ್ಯವಾದರೂ ತನ್ನಲ್ಲಿ ಭೇದ ಹುಟ್ಟಿದರೆ ವಿಭಜನೆಯಾಗಿ ಹಾಳಾಗುವುದು. ತನ್ನಲ್ಲಿ ಭೇದ ಉಂಟಾಗಿ ವಿಭಜನೆಯಾದ ಯಾವ ಪಟ್ಟಣವಾದರೂ ಮನೆಯಾದರೂ ನೆಲೆಯಾಗಿ ನಿಲ್ಲದು.

26ಅದರಂತೆ ಸೈತಾನನು ಸೈತಾನನನ್ನು ಹೊರಡಿಸಿದರೆ ತನ್ನ ವಿರುದ್ಧವಾಗಿ ಹೋರಾಡಿದ ಹಾಗಾಯಿತು, ಹಾಗಾದರೆ ಅವನ ರಾಜ್ಯವು ಹೇಗೆ ನಿಂತಿತು?

27ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮ ಶಿಷ್ಯರು ಯಾರ ಬಲದಿಂದ ಬಿಡಿಸುತ್ತಾರೆ? ಆದುದರಿಂದ ಅವರೇ ನಿಮಗೆ ನ್ಯಾಯತೀರಿಸುವರು.

28ನಾನು ದೇವರ ಆತ್ಮನ ಬಲದಿಂದಲೇ ದೆವ್ವಗಳನ್ನು ಬಿಡಿಸುವುದಾದರೆ ದೇವರ ರಾಜ್ಯವು ನಿಮ್ಮ ಹತ್ತಿರಕ್ಕೆ ಬಂದಿತಲ್ಲಾ?

29ಇದಲ್ಲದೆ ಒಬ್ಬನು ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ ಆ ಬಲಿಷ್ಠನ ಮನೆಗೆ ನುಗ್ಗಿ ಅವನ ಸೊತ್ತನ್ನು ಸುಲುಕೊಳ್ಳುವುದು ಹೇಗೆ? ಕಟ್ಟಿಹಾಕಿದ ಮೇಲೆ ಅವನ ಮನೆಯನ್ನು ಸುಲುಕೊಂಡಾನು.

30ನನ್ನ ಸಂಗಡ ಇರದವನು ನನಗೆ ವಿರೋಧಿ. ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದುರಿಸುವವನಾಗಿದ್ದಾನೆ.

ಮಾರ್ಕನು

ಮಾರ್ಕ 3:20–27

20ಆತನು ಮನೆಯೊಳಗೆ ಬಂದಾಗ ಅಲ್ಲಿ ಬಹಳ ಜನರು ಸೇರಿಬಂದದ್ದರಿಂದ ಊಟ ಮಾಡಲು ಕೂಡ ಆಗಲಿಲ್ಲ.

21ಇದನ್ನು ಕೇಳಿ ಆತನ ಬಂಧುಗಳು “ಅವನಿಗೆ ಹುಚ್ಚುಹಿಡಿದಿದೆ” ಎಂದು ಹೇಳಿ ಆತನನ್ನು ಹಿಡಿಯುವುದಕ್ಕೆ ಹೊರಟರು.

22ಇದಲ್ಲದೆ ಯೆರೂಸಲೇಮಿನಿಂದ ಬಂದಿದ್ದ ಶಾಸ್ತ್ರಿಗಳು, “ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆಂತಲೂ ಇವನು ದೆವ್ವಗಳ ಒಡೆಯನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಂತಲೂ” ಹೇಳುತ್ತಿದ್ದರು.

23ಆತನು ಅವರನ್ನು ಹತ್ತಿರಕ್ಕೆ ಕರೆದು ಅವರಿಗೆ ಸಾಮ್ಯರೂಪವಾಗಿ ಹೇಳಿದ್ದೇನಂದರೆ, “ಸೈತಾನನು ಸೈತಾನನನ್ನು ಬಿಡಿಸುವುದುಂಟೇ?

24ಯಾವುದೇ ಒಂದು ರಾಜ್ಯವು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ರಾಜ್ಯವು ಉಳಿಯದು;

25ಹಾಗೆಯೇ ಒಂದು ಮನೆಯು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ಮನೆಯು ಉಳಿಯದು.

26ಅದರಂತೆ ಸೈತಾನನು ತನಗೆ ವಿರೋಧವಾಗಿ ಎದ್ದು ತನ್ನಲ್ಲಿ ವಿಭಾಗಿಸಲ್ಪಟ್ಟರೆ ಅವನು ಉಳಿಯದೆ ನಾಶವಾಗಿ ಹೋಗುವನು.

27ಅದಲ್ಲದೆ ಒಬ್ಬನು ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ ಆ ಬಲಿಷ್ಠನ ಮನೆಯನ್ನು ನುಗ್ಗಿ ಅವನ ಆಸ್ತಿಯನ್ನು ಕದಿಯಲು ಸಾಧ್ಯವಿಲ್ಲ; ಕಟ್ಟಿಹಾಕಿದ ಮೇಲೆ ಅವನ ಮನೆಯನ್ನು ಕೊಳ್ಳೆಹೊಡೆಯಬಹುದು.

ಲೂಕನು

ಲೂಕ 11:14–23

14ಒಮ್ಮೆ ಯೇಸು ಮೂಗದೆವ್ವವನ್ನು ಬಿಡಿಸುತ್ತಿದ್ದನು. ಆ ದೆವ್ವವು ಬಿಟ್ಟು ಹೋದ ಮೇಲೆ ಮೂಕನು ಮಾತನಾಡಿದನು; ಅದನ್ನು ನೋಡಿದ ಜನರು ಆಶ್ಚರ್ಯಪಟ್ಟರು.

15ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ” ಅಂದರು.

16ಬೇರೆ ಕೆಲವರು ಆತನನ್ನು ಪರೀಕ್ಷಿಸುವುದಕ್ಕಾಗಿ, “ನೀನು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ಮಾಡಿತೋರಿಸು” ಎಂದು ಕೇಳಿದರು.

17ಯೇಸು ಅವರ ಆಲೋಚನೆಗಳನ್ನು ಅರಿತುಕೊಂಡು ಅವರಿಗೆ ಹೇಳಿದ್ದೇನಂದರೆ, “ತಮ್ಮತಮ್ಮೊಳಗೆ ಭೇದ ಹುಟ್ಟಿದ ರಾಜ್ಯವು ನಾಶವಾಗುವುದು ಮತ್ತು ತನ್ನಲ್ಲಿ ಕಚ್ಚಾಡಿ ಭೇದಹುಟ್ಟಿಸುವ ಕುಟುಂಬ ಬಿದ್ದುಹೋಗುವುದು.

18ಅದರಂತೆ ಸೈತಾನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯವು ಹೇಗೆ ಉಳಿದೀತು? ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುತ್ತೀ ಎಂದು ನನಗೆ ಹೇಳುತ್ತೀರಲ್ಲಾ,

19ನಾನು ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಬಲದಿಂದ ಬಿಡಿಸುತ್ತಾರೆ? ಆದುದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು.

20ನಾನು ದೇವರ ಬಲದಿಂದಲೇ ದೆವ್ವಗಳನ್ನು ಬಿಡಿಸುವುದಾದರೆ ದೇವರ ರಾಜ್ಯವು ನಿಮ್ಮಲ್ಲಿಗೆ ಈಗಾಗಲೇ ಬಂದಿದೆ ಎಂಬುದು ಸ್ಪಷ್ಟ.

21“ಒಬ್ಬ ಬಲಿಷ್ಠನು ಸರ್ವಾಯುಧಗಳನ್ನು ಧರಿಸಿಕೊಂಡು ತನ್ನ ಮನೆಯನ್ನು ಕಾಪಾಡಿಕೊಂಡಿರುವಾಗ ಅವನ ವಸ್ತುಗಳು ಭದ್ರವಾಗಿಯೇ ಇರುವವು;

22ಆದರೆ ಅವನಿಗಿಂತ ಬಲಿಷ್ಠನು ಬಂದು ಅವನನ್ನು ಗೆದ್ದು ಅವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಮಾಡಿದ್ದನ್ನು ಹಂಚಿಕೊಡುತ್ತಾನೆ.

23ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದರಿಸುವವನಾಗುತ್ತಾನೆ.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು