ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಗಲಿಲಾಯದಲ್ಲಿ
ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಗಲಿಲಾಯದಲ್ಲಿ
ಯೋನನ ಸೂಚಕಕಾರ್ಯ
ಮತ್ತಾ 12:38–42 · ಲೂಕ 11:29–32
ಮತ್ತಾ 12:38–4238ಆಗ ಶಾಸ್ತ್ರಿಗಳಲ್ಲಿಯೂ ಫರಿಸಾಯರಲ್ಲಿಯೂ ಕೆಲವರು, “ಬೋಧಕನೇ, ನಿನ್ನಿಂದ ಒಂದು ಸೂಚಕಕಾರ್ಯವನ್ನು ನೋಡಬೇಕೆಂದು” ಯೇಸುವನ್ನು ಕೇಳಿದರು. ಅದಕ್ಕೆ ಆತನು ಅವರಿಗೆ ಉತ್ತರಕೊಟ್ಟದ್ದೇನಂದರೆ,
39“ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತಾರೆ. ಆದರೆ ಯೋನನೆಂಬ ಪ್ರವಾದಿಯಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವುದೂ ಇದಕ್ಕೆ ಸಿಕ್ಕುವುದಿಲ್ಲ.
40ಅಂದರೆ ಯೋನನು ಹೇಗೆ ಮೂರು ದಿನ ರಾತ್ರಿ ಹಗಲು ದೊಡ್ಡ ಮೀನಿನ ಹೊಟ್ಟೆಯೊಳಗೆ ಇದ್ದನೋ, ಹಾಗೆಯೇ ಮನುಷ್ಯಕುಮಾರನು ಮೂರು ದಿನ ರಾತ್ರಿ ಹಗಲು ಭೂಗರ್ಭದೊಳಗೆ ಇರುವನು.
41ನಿನೆವೆ ಪಟ್ಟಣದವರು ಯೋನನು ಸಾರಿದ ವಾಕ್ಯವನ್ನು ಕೇಳಿ ಮಾನಸಾಂತರಪಟ್ಟರು. ಇಗೋ, ಇಲ್ಲಿ ಯೋನನಿಗಿಂತಲೂ ಹೆಚ್ಚಿನವನಿದ್ದಾನೆ. ನ್ಯಾಯ ವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ಎದ್ದು ನಿಂತು ಇವರನ್ನು ಖಂಡಿಸುವರು.
42ದಕ್ಷಿಣ ದೇಶದ ರಾಣಿಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕೆ ಭೂಮಿಯ ಕಟ್ಟಕಡೆಯಿಂದ ಬಂದಳು. ಇಗೋ, ಇಲ್ಲಿ ಸೊಲೊಮೋನನಿಗಿಂತ ಹೆಚ್ಚಿನವನಿದ್ದಾನೆ. ದಕ್ಷಿಣ ದೇಶದ ರಾಣಿಯು ನ್ಯಾಯವಿಚಾರಣೆಯಲ್ಲಿ ಈ ಸಂತತಿಯವರೊಂದಿಗೆ ಎದ್ದು ನಿಂತು ಇವರನ್ನು ಖಂಡಿಸುವಳು.
ಲೂಕ 11:29–3229ಜನರು ಗುಂಪುಗುಂಪಾಗಿ ಸೇರಿಬರುತ್ತಿರುವಾಗ ಯೇಸು ಹೇಳುವುದಕ್ಕೆ ತೊಡಗಿದ್ದೇನಂದರೆ, “ಈ ಸಂತತಿ ಕೆಟ್ಟ ಸಂತತಿಯೇ; ಇದು ಸೂಚಕಕಾರ್ಯವನ್ನು ಸಂಕೇತವಾಗಿ ನೋಡಬೇಕೆಂದು ಅಪೇಕ್ಷಿಸುತ್ತದೆ. ಆದರೆ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವುದೂ ಈ ಸಂತತಿಗೆ ಸಿಕ್ಕುವುದಿಲ್ಲ.
30ಹೇಗೆಂದರೆ ಯೋನನು ನಿನೆವೆ ಪಟ್ಟಣದವರಿಗೆ ಗುರುತಾದ ಹಾಗೆಯೇ ಮನುಷ್ಯಕುಮಾರನು ಈ ಸಂತತಿಗೆ ಗುರುತಾಗಿರುವನು.
31ದಕ್ಷಿಣ ದೇಶದ ರಾಣಿಯು ನ್ಯಾಯವಿಚಾರಣೆ ದಿನದಲ್ಲಿ ಈ ಸಂತತಿಯವರೊಂದಿಗೆ ಎದ್ದುನಿಂತು ಇವರನ್ನು ಅಪರಾಧಿಗಳೆಂದು ಖಂಡಿಸುವಳು. ಆಕೆಯು ಸೊಲೊಮೋನನ ಜ್ಞಾನವನ್ನು ತಿಳಿದುಕೊಳ್ಳುವುದಕ್ಕೆ ಭೂಮಿಯ ಕಟ್ಟಕಡೆಯಿಂದ ಬಂದಳು. ಆದರೆ ಇಗೋ, ಸೊಲೊಮೋನನಿಗಿಂತಲೂ ಉನ್ನತನಾದವನು ಇಲ್ಲಿದ್ದಾನೆ.
32ನ್ಯಾಯ ವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ನಿಂತು ಇವರನ್ನು ಅಪರಾಧಿಗಳೆಂದು ಖಂಡಿಸುವರು. ಅವರು ಯೋನನು ಸಾರಿದ ವಾಕ್ಯವನ್ನು ಕೇಳಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡರು. ಆದರೆ ಇಗೋ, ಯೋನನಿಗಿಂತಲೂ ಉನ್ನತನಾದವನು ಇಲ್ಲಿದ್ದಾನೆ.
ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.