ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜೂನ್ 2027 › 19 ಜೂನ್
ಆರ್ಥೊಡಾಕ್ಸ್ ಪಂಚಾಂಗ · ಜೂನ್ 6 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 19 ಜೂನ್ 2027
ಶನಿವಾರ · ಪಾಸ್ಕದ ಏಳನೆಯ ವಾರ · ಸ್ವರ 6
ಹಬ್ಬಗಳು ಮತ್ತು ಸಂತರು
ಮೃತರ ಸ್ಮರಣೆಯ ಶನಿವಾರ
ಉಪವಾಸ
ಉಪವಾಸವಿಲ್ಲ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಪತ್ರಿಕೆ (ಮೃತರು)
13ಸಹೋದರರೇ, ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು, ನಿರೀಕ್ಷೆಯಿಲ್ಲದವರಾಗಿರುವ ಇತರರಂತೆ ದುಃಖಿಸಬಾರದು ಎಂಬುದೇ ನಮ್ಮ ಬಯಕೆ. 14ಯೇಸು ಸತ್ತು ಜೀವಿತನಾಗಿ ಎದ್ದನೆಂದು ನಾವು ನಂಬುತ್ತೇವೆ ಹಾಗೆಯೇ ಯೇಸುವಿನಲ್ಲಿದ್ದು ನಿದ್ರೆಹೋದವರನ್ನು ಸಹ ದೇವರು ಆತನೊಡನೆ ಎಬ್ಬಿಸಿ ಕರೆದುಕೊಂಡು ಬರುವನೆಂದು ನಂಬಬೇಕಲ್ಲವೇ. 15ನಾವು ಕರ್ತನ ಮಾತಿನ ಆಧಾರದ ಮೇಲೆ ನಿಮಗೆ ಹೇಳುವುದೇನಂದರೆ, ಕರ್ತನು ಪುನರಾಗಮಿಸುವವರೆಗೆ ಜೀವದಿಂದುಳಿದಿರುವ ನಾವು ಮರಣ ಹೊಂದಿದವರಿಗಿಂತ ಮುಂದಾಗುವುದಿಲ್ಲ. 16ಯಾಕೆಂದರೆ ಕರ್ತನು ತಾನೇ ಆಜ್ಞಾಘೋಷದೊಡನೆಯೂ, ಪ್ರಧಾನದೂತನ ಶಬ್ದದೊಡನೆಯೂ, ದೇವರ ತುತ್ತೂರಿ ಧ್ವನಿಯೊಡನೆಯೂ ಆಕಾಶದಿಂದ ಇಳಿದುಬರುವನು. ಆಗ ಕ್ರಿಸ್ತನಲ್ಲಿ ಸತ್ತವರು ಮೊದಲು ಎದ್ದು ಬರುವರು. 17ಆ ಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವುದಕ್ಕಾಗಿ ಅವರೊಂದಿಗೆ ಮೇಘಗಳಲ್ಲಿ ಫಕ್ಕನೆ ಒಯ್ಯಲ್ಪಡುವೆವು. ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು.
ಪತ್ರಿಕೆ
1ನಾವು ಸುರಕ್ಷಿತವಾಗಿ ದಡವನ್ನು ಸೇರಿದ ಮೇಲೆ, ಅದು ಮೆಲೀತೆ ದ್ವೀಪವೆಂದು ತಿಳಿದುಬಂತು. 2ಅನ್ಯಭಾಷೆಯವರಾದ ಆ ದ್ವೀಪದವರು ನಮಗೆ ವಿಶೇಷ ಸಹಾನುಭೂತಿಯನ್ನು ತೋರಿದರು. ಮಳೆಯು ಆಗಲೇ ಹೊಯ್ದು ಚಳಿಯಾಗುತ್ತಿದ್ದುದರಿಂದ, ಅವರು ಬೆಂಕಿಯನ್ನು ಹೊತ್ತಿಸಿ ನಮ್ಮೆಲ್ಲರನ್ನು ಸೇರಿಸಿಕೊಂಡರು. 3ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ, ತಂದು ಬೆಂಕಿಯ ಮೇಲೆ ಹಾಕಲು, ಆ ಶಾಖಕ್ಕೆ ಒಂದು ಸರ್ಪವು ಹೊರಗೆ ಬಂದು, ಅವನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿತು. 4ಆ ಸರ್ಪವು ಅವನ ಕೈಯಿಂದ ಜೋತಾಡುವುದನ್ನು ದ್ವೀಪದವರು ನೋಡಿ; “ಈ ಮನುಷ್ಯನು ಕೊಲೆಪಾತಕನೇ ಸರಿ; ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯದೇವತೆಯು ಇವನನ್ನು ಬದುಕಗೊಡಿಸುವುದಿಲ್ಲವೆಂದು” ತಮ್ಮತಮ್ಮೊಳಗೆ ಮಾತನಾಡಿಕೊಂಡರು. 5ಆದರೆ ಪೌಲನು ಆ ಸರ್ಪವನ್ನು ಬೆಂಕಿಯೊಳಕ್ಕೆ ಝಾಡಿಸಿಬಿಟ್ಟನು; ಅವನಿಗೆ ಏನೂ ಅಪಾಯ ಉಂಟಾಗಲಿಲ್ಲ. 6ಅವರು; “ಇವನ ಮೈ ಈಗ ಊದಿಕೊಳ್ಳುತ್ತದೆ, ಇಲ್ಲವೆ ಇವನು ಫಕ್ಕನೆ ಸತ್ತುಬೀಳುತ್ತಾನೆ” ಎಂದು ಕಾದಿದ್ದರು. ಎಷ್ಟು ಹೊತ್ತು ಕಾದರು ಅವನಿಗೆ ಯಾವ ಹಾನಿಯೂ ಆಗಲಿಲ್ಲ. ಇದನ್ನು ಕಂಡ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡು “ಇವನೊಬ್ಬ ದೇವನೇ” ಇರಬೇಕು ಎಂದುಕೊಂಡರು. 7ಆ ದ್ವೀಪದ ಮುಖ್ಯಸ್ಥನಾದ ಪೊಪ್ಲಿಯನ ಹೊಲಗದ್ದೆಗಳು ನಾವಿದ್ದ ಸ್ಥಳದ ಸಮೀಪದಲ್ಲಿ ಇದ್ದವು. ಅವನು ನಮ್ಮನ್ನು ಸ್ವಾಗತಿಸಿ ಮೂರು ದಿನಗಳವರೆಗೆ ಆದರದಿಂದ ಸತ್ಕರಿಸಿದನು. 8ಅವನ ತಂದೆಯು ಜ್ವರದಿಂದಲೂ ರಕ್ತಭೇದಿಯಿಂದಲೂ ಹಾಸಿಗೆ ಹಿಡಿದಿದ್ದನು. ಪೌಲನು ಅವನ ಬಳಿಗೆ ಹೋಗಿ ಪ್ರಾರ್ಥನೆ ಮಾಡಿ ಅವನ ಮೇಲೆ ಕೈಗಳನ್ನಿಟ್ಟು ಅವನನ್ನು ಗುಣಪಡಿಸಿದನು. 9ಇದಾದ, ನಂತರ ಆ ದ್ವೀಪದಲ್ಲಿದ್ದ ಉಳಿದ ರೋಗಿಗಳು, ಪೌಲನ ಬಳಿಗೆ ಬಂದು ಸ್ವಸ್ಥರಾದರು. 10ಅವರು ನಮ್ಮನ್ನು ಬಹಳವಾಗಿ ಸನ್ಮಾನಿಸಿದ್ದಲ್ಲದೆ, ನಾವು ಅಲ್ಲಿಂದ ನಮ್ಮ ಪಯಣ ಮುಂದುವರಿಸಿದಾಗ, ನಮಗೆ ಅವಶ್ಯವಾದ ಪದಾರ್ಥಗಳನ್ನು ತಂದು ಹಡಗಿನಲ್ಲಿಟ್ಟರು. 11ಮೂರು ತಿಂಗಳಾದ ಮೇಲೆ ಅಲೆಕ್ಸಾಂದ್ರಿಯದಿಂದ ಬಂದು, ಆ ದ್ವೀಪದಲ್ಲಿ ಹಿಮಕಾಲವನ್ನು ಕಳೆಯಲು ತಂಗಿದ್ದ ಒಂದು ಹಡಗನ್ನು ಹತ್ತಿ ಹೊರಟೆವು. ಆ ಹಡಗಿಗೆ ಅಶ್ವಿನೀದೇವತೆಗಳೆಂಬ ಚಿಹ್ನೆ ಇತ್ತು. 12ನಾವು ಸುರಕೂಸಿಗೆ ತಲುಪಿ ಅಲ್ಲಿ ಮೂರು ದಿನ ತಂಗಿದೆವು. 13ಅಲ್ಲಿಂದ ಮುಂದುವರೆದು ರೇಗಿಯ ಪಟ್ಟಣಕ್ಕೆ ಸೇರಿದೆವು. ಒಂದು ದಿನವಾದ ಮೇಲೆ ತೆಂಕಣ ಗಾಳಿ ಬೀಸಿದ್ದರಿಂದ, ಎರಡನೆಯ ದಿನದಲ್ಲಿ ಪೊತಿಯೋಲಕ್ಕೆ ಬಂದೆವು. 14ಅಲ್ಲಿ ಕ್ರೈಸ್ತ ಸಹೋದರರನ್ನು ಕಂಡೆವು. ಅವರು ನಮ್ಮನ್ನು ತಮ್ಮ ಬಳಿಯಲ್ಲಿ ಏಳು ದಿನ ಇರಬೇಕೆಂದು ಬೇಡಿಕೊಂಡರು. ತರುವಾಯ ರೋಮಾಪುರಕ್ಕೆ ಬಂದೆವು. 15ಅಲ್ಲಿದ್ದ ಸಹೋದರರು ನಮ್ಮ ಸಮಾಚಾರವನ್ನು ಕೇಳಿದಾಗ, ನಮ್ಮನ್ನು ಭೇಟಿಮಾಡುವುದಕ್ಕಾಗಿ ಕೆಲವರು ಅಪ್ಪಿಯಪೇಟೆಯ ವರೆಗೂ, ಕೆಲವರು ತ್ರಿಛತ್ರವೆಂಬ ಸ್ಥಳದ ವರೆಗೂ ಬಂದರು. ಪೌಲನು ಅವರನ್ನು ನೋಡಿ ದೇವರಿಗೆ ಸ್ತೋತ್ರವನ್ನು ಸಲ್ಲಿಸಿ ಧೈರ್ಯಗೊಂಡನು. 16ನಾವು ರೋಮಾಪುರಕ್ಕೆ ಬಂದ ಮೇಲೆ, ಪೌಲನು ತನ್ನನ್ನು ಕಾಯುತ್ತಿದ್ದ ಸಿಪಾಯಿಯೊಂದಿಗೆ ಪ್ರತ್ಯೇಕವಾಗಿರಬಹುದೆಂಬ ಅಪ್ಪಣೆಯನ್ನು ಹೊಂದಿದನು. 17ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರ ಪ್ರಮುಖರನ್ನು ತನ್ನ ಬಳಿಗೆ ಕರೆಯಿಸಿಕೊಂಡನು. ಅವರು ಬಂದಾಗ ಅವನು ಅವರಿಗೆ; “ಸಹೋದರರೇ, ನಾನು ನಮ್ಮ ಜನರಿಗೂ, ನಮ್ಮ ಪೂರ್ವಿಕರ ಆಚಾರಗಳಿಗೂ ವಿರುದ್ಧವಾಗಿ ಏನೂ ಮಾಡದವನಾದರೂ ಯೆರೂಸಲೇಮಿನಿಂದ ರೋಮಾಯರ ಕೈಗೆ ಸೆರೆಯವನಾಗಿ ಒಪ್ಪಿಸಲ್ಪಟ್ಟೆನು. 18ಅವರು ನನ್ನನ್ನು ವಿಚಾರಣೆಮಾಡಿ, ನನ್ನಲ್ಲಿ ಮರಣದಂಡನೆಗೆ ಕಾರಣವೇನೂ ಇಲ್ಲದ್ದರಿಂದ ನನ್ನನ್ನು ಬಿಡಿಸಬೇಕೆಂದಿದ್ದರು. 19ಅದಕ್ಕೆ ಯೆಹೂದ್ಯರು ವಿರೋಧಿಸಿದ್ದರಿಂದ, ನಾನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳಬೇಕಾಗಿ ಬಂದಿತು. ನನ್ನ ಸ್ವಂತ ದೇಶದವರ ಮೇಲೆ ದೋಷಾರೋಪಣೆ ಮಾಡಬೇಕೆಂಬ ಅಭಿಪ್ರಾಯದಿಂದ ಅದನ್ನು ಹೇಳಲಿಲ್ಲ. 20ಈ ಕಾರಣದಿಂದ ನಾನು ನಿಮ್ಮನ್ನು ಕಂಡು ಮಾತನಾಡಬೇಕೆಂದು ಕರೆಯಿಸಿದೆನು. ಇಸ್ರಾಯೇಲ್ ಜನರ ನಿರೀಕ್ಷೆಯ ನಿಮಿತ್ತವಾಗಿ ಈ ಬೇಡಿಯಿಂದ ಬಂಧಿತನಾಗಿದ್ದೇನೆ” ಎಂದು ಹೇಳಿದನು. 21ಅದಕ್ಕೆ ಅವರು ಅವನಿಗೆ; “ನಿನ್ನ ವಿಷಯವಾಗಿ ನಮಗೆ ಯೂದಾಯದಿಂದ ವರದಿ ಬರಲಿಲ್ಲ, ಸಹೋದರರಲ್ಲಿ ಒಬ್ಬರೂ ಬಂದು ನಿನ್ನ ವಿಷಯವಾಗಿ ಕೆಟ್ಟದ್ದನ್ನು ತಿಳಿಸಲೂ ಇಲ್ಲ, ಮಾತನಾಡಲೂ ಇಲ್ಲ. 22ಆದರೆ, ನಿನ್ನ ಅಭಿಪ್ರಾಯವನ್ನು ನಿನ್ನಿಂದಲೇ ಕೇಳುವುದು ನಮಗೆ ಯುಕ್ತವೆಂದು ತೋರುತ್ತದೆ. ಆ ಪಂಥದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತನಾಡುತ್ತಾರೆಂಬದೊಂದೇ ನಮಗೆ ಗೊತ್ತದೆ” ಅಂದರು. 23ಅವರು ಅವನಿಗೆ ಒಂದು ದಿನವನ್ನು ಗೊತ್ತುಮಾಡಲು, ಬಹುಮಂದಿ ಅವನ ಬಿಡಾರದಲ್ಲಿ ಅವನ ಬಳಿಗೆ ಬಂದರು. ಅವನು ಬೆಳಗ್ಗಿನಿಂದ ಸಾಯಂಕಾಲದ ವರೆಗೂ ದೇವರ ರಾಜ್ಯವನ್ನು ಕುರಿತು ಪ್ರಾಮಾಣಿಕವಾಗಿ ಸಾಕ್ಷಿಹೇಳುತ್ತಾ, ಮೋಶೆಯ ಧರ್ಮಶಾಸ್ತ್ರವನ್ನೂ, ಪ್ರವಾದಿಗಳ ಗ್ರಂಥಗಳನ್ನೂ, ಆಧಾರಮಾಡಿಕೊಂಡು ಯೇಸುವಿನ ವಿಷಯದಲ್ಲಿ ಅವರನ್ನು ಒಡಂಬಡಿಸುತ್ತಾ ಇದ್ದನು. 24ಅವನು ಹೇಳಿದ ಮಾತುಗಳಿಗೆ ಕೆಲವರು ಒಪ್ಪಿಕೊಂಡರು; ಕೆಲವರು ನಂಬದೆ ಹೋದರು. 25ಅವರು ಒಮ್ಮತವಿಲ್ಲದೆ ಇರುವಾಗ ಪೌಲನು ಅವರಿಗೆ; “ಪವಿತ್ರಾತ್ಮನು ಪ್ರವಾದಿಯಾದ ಯೆಶಾಯನ ಬಾಯಿಂದ 26ನಿಮ್ಮ ಪೂರ್ವಿಕರಿಗೆ ವಿವರವಾಗಿ ಹೇಳಿದ್ದೇನೆಂದರೆ; “‘ನೀನು ಈ ಜನರ ಬಳಿಗೆ ಹೋಗಿ ಅವರಿಗೆ; ನೀವು ಕಿವಿಯಿದ್ದು ಕೇಳಿಕೊಂಡರೂ ತಿಳಿದುಕೊಳ್ಳುವುದೇ ಇಲ್ಲ; ಕಣ್ಣಿದ್ದು ನೋಡಿದರೂ ಕಾಣುವುದೇ ಇಲ್ಲ, ಎಂಬುದಾಗಿ ಹೇಳು. 27ಏಕೆಂದರೆ, ಈ ಜನರ ಹೃದಯವು ಕಲ್ಲಾಗಿದೆ; ಇವರ ಕಿವಿ ಕಿವುಡಾಗಿದೆ; ಇವರು ಕಣ್ಣು ಮುಚ್ಚಿಕೊಂಡಿದ್ದಾರೆ; ತಾವು ಕಣ್ಣಿನಿಂದ ಕಂಡು, ಕಿವಿಯಿಂದ ಕೇಳಿ, ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಹೀಗೆ ಮಾಡಿಕೊಂಡಿದ್ದಾರೆ’ ಎಂಬುದೇ. 28“ಆದಕಾರಣ ದೇವರಿಂದಾದ ಈ ರಕ್ಷಣೆಯು ಅನ್ಯಜನರಿಗೆ ಹೇಳಿಕಳುಹಿಸಲ್ಪಟ್ಟಿದೆ ಎಂದು ನಿಮಗೆ ಚೆನ್ನಾಗಿ ತಿಳಿದಿರಲಿ; ಅವರಾದರೂ ಕೇಳುವರು” ಎಂದು ಹೇಳಿದನು. 29ಅವನು ಈ ಮಾತನ್ನು ಹೇಳಿದ ಮೇಲೆ ಅವರು ಹೊರಟುಹೋದರು. 30ತರುವಾಯ ಅವನು ತಾನೇ ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರ್ಷಗಳ ಕಾಲ ಇದ್ದು, ತನ್ನ ಬಳಿಗೆ ಬರುವವರೆಲ್ಲರನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದನು. 31ಯಾವ ಅಡ್ಡಿಯೂ ಇಲ್ಲದೆ, ತುಂಬಾ ಧೈರ್ಯದಿಂದ ದೇವರ ರಾಜ್ಯದ ಕುರಿತು ಬೋಧಿಸುತ್ತಾ, ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ ಇದ್ದನು.
ಪತ್ರಿಕೆ (ಮೃತರು, ಇನ್ನೊಂದು ವಾಚನ)
47ಮೊದಲನೆಯ ಮನುಷ್ಯನು ಮಣ್ಣಿನಿಂದ ಮಾಡಲ್ಪಟ್ಟವನು; ಭೂಮಿಗೆ ಸೇರಿದವನು, ಎರಡನೆಯ ಮನುಷ್ಯನು ಪರಲೋಕದಿಂದ ಬಂದವನು. 48ಮಣ್ಣಿನಿಂದ ಹುಟ್ಟಿದವನು ಎಂಥವನೋ ಮಣ್ಣಿಗೆ ಸಂಬಂಧಪಟ್ಟವರೂ ಅಂಥವರೇ ಆಗಿರುತ್ತಾರೆ; ಪರಲೋಕದಿಂದ ಬಂದಾತನು ಎಂಥವನೋ ಪರಲೋಕಕ್ಕೆ ಸಂಬಂಧಪಟ್ಟವರೂ ಅಂಥವರೇ. 49ನಾವು ಮಣ್ಣಿನಿಂದ ಹುಟ್ಟಿದವನ ಸಾರೂಪ್ಯವನ್ನು ಧರಿಸಿಕೊಂಡಿರುವ ಪ್ರಕಾರ ಪರಲೋಕದಿಂದ ಬಂದಾತನ ಸಾರೂಪ್ಯವನ್ನೂ ಧರಿಸಿಕೊಳ್ಳಬೇಕು. 50ಸಹೋದರರೇ, ನಾನು ಹೇಳುವುದೇನಂದರೆ, ರಕ್ತ ಮಾಂಸಗಳು ದೇವರ ರಾಜ್ಯವನ್ನು ವಶಪಡಿಸಿಕೊಳ್ಳಲಾರದು; ಅಂತೆಯೇ, ಅಳಿದುಹೋಗುವಂಥದ್ದು ಅಮರತ್ವಕ್ಕೆ ಬಾಧ್ಯವಾಗಲು ಸಾಧ್ಯವಿಲ್ಲ. 51ನೋಡಿರಿ! ಇದುವರೆಗೆ ಗುಪ್ತವಾಗಿದ್ದ ಸಂಗತಿಯನ್ನು ನಾನು ನಿಮಗೆ ತಿಳಿಸುತ್ತೇನೆ, ನಾವೆಲ್ಲರೂ ಸಾಯುವುದಿಲ್ಲ, ಮಾರ್ಪಡುವೆವು. 52ಕಡೆ ತುತ್ತೂರಿಯ ಧ್ವನಿಯು ಮೊಳಗುವಲ್ಲಿ, ಕ್ಷಣಮಾತ್ರದಲ್ಲಿ, ರೆಪ್ಪೆಬಡಿಯುವಷ್ಟರೊಳಗಾಗಿ ನಾವೆಲ್ಲರೂ ಮಾರ್ಪಡುವೆವು. ಹೌದು, ತುತ್ತೂರಿಯು ಮೊಳಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ರೂಪಾಂತರ ಹೊಂದುವೆವು. 53ನಶಿಸುವಂಥ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಳ್ಳುವುದೂ, ಮರಣಕ್ಕೆ ಅಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದೂ ಅಗತ್ಯವಾಗಿದೆ. 54ನಶಿಸಿಹೋಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಂಡಾಗ ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಂಡಾಗ ಬರೆದಿರುವ ಮಾತು ನೆರವೇರುವುದು. 55“ಹೇ! ಮರಣವೇ ನಿನ್ನ ಜಯವೆಲ್ಲಿ? ಹೇ! ಮರಣವೇ ನಿನ್ನ ವಿಷದ ಕೊಂಡಿ ಎಲ್ಲಿ?” 56ಸಾವಿನ ವಿಷಕೊಂಡಿ ಪಾಪವೇ; ಪಾಪದ ಶಕ್ತಿಯ ಆಧಾರವು ಧರ್ಮಶಾಸ್ತ್ರವಿಧಿಗಳೇ. 57ಆದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಡುವ ದೇವರಿಗೆ ಸದಾಕಾಲ ಮಹಿಮೆಯುಂಟಾಗಲಿ.
ಸುವಾರ್ತೆ (ಮೃತರು)
24ನಿಮಗೆ ನಿಜನಿಜವಾಗಿ ಹೇಳುತ್ತೇನೆ ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯ ಜೀವವನ್ನು ಹೊಂದಿದ್ದಾನೆ, ಅವನು ಖಂಡನೆಗೆ ಗುರಿಯಾಗುವುದಿಲ್ಲ, ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದಾನೆ. 25ನಿಮಗೆ ನಿಜನಿಜವಾಗಿ ಹೇಳುತ್ತೇನೆ ಸತ್ತವರು ದೇವಕುಮಾರನ ಸ್ವರವನ್ನು ಕೇಳುವ ಕಾಲ ಬರುತ್ತದೆ, ಅದು ಈಗಾಗಲೇ ಬಂದಿದೆ, ಕೇಳಿದವರು ಬದುಕುವರು. 26ತಂದೆಯು ತಾನು ಹೇಗೆ ಸ್ವತಃ ಜೀವವುಳ್ಳವನಾಗಿದ್ದಾನೋ, ಹಾಗೆಯೇ ಮಗನೂ ಸ್ವತಃ ಜೀವವುಳ್ಳವನಾಗಿರುವಂತೆ ಮಾಡಿದ್ದಾನೆ. 27ಮಗನು ಮನುಷ್ಯಕುಮಾರನಾಗಿರುವುದರಿಂದ ನ್ಯಾಯತೀರ್ಪು ಮಾಡುವ ಅಧಿಕಾರವನ್ನೂ ತಂದೆ ಆತನಿಗೆ ಕೊಟ್ಟಿದ್ದಾನೆ. 28ಅದಕ್ಕೆ ಆಶ್ಚರ್ಯಪಡಬೇಡಿರಿ. ಒಂದು ಕಾಲ ಬರುತ್ತದೆ, ಆಗ ಸಮಾಧಿಗಳಲ್ಲಿರುವವರೆಲ್ಲಾ ಆತನ ಸ್ವರವನ್ನು ಕೇಳಿ, 29ಎದ್ದು ಹೊರಗೆ ಬರುವರು. ಒಳ್ಳೆಯದನ್ನು ಮಾಡಿದವರಿಗೆ ನಿತ್ಯಜೀವಕ್ಕಾಗಿ ಪುನರುತ್ಥಾನವಾಗುವುದು. ಕೆಟ್ಟದ್ದನ್ನು ಮಾಡಿದವರು ಖಂಡನೆಗಾಗಿ ಪುನರುತ್ಥಾನವನ್ನೂ ಹೊಂದುವರು. 30“ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು ತಂದೆಯು ಹೇಳಿದ್ದನ್ನು ನಾನು ಕೇಳಿ ನ್ಯಾಯತೀರಿಸುತ್ತೇನೆ ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ನಾನು ಬಯಸುವುದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ.
ಸುವಾರ್ತೆ
15ಅವರ ಊಟವಾದ ಮೇಲೆ ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ಇವರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿಯೋ?” ಎಂದು ಕೇಳಲು ಅವನು “ಹೌದು, ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ” ಎಂದನು. ಆತನು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು” ಎಂದು ಹೇಳಿದನು. 16ಆತನು ತಿರುಗಿ ಎರಡನೆಯ ಸಾರಿ ಅವನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ?” ಎಂದು ಕೇಳಲು, ಅವನು ಹೌದು ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ ಎಂದನು. ಆತನು ಅವನಿಗೆ “ನನ್ನ ಕುರಿಗಳನ್ನು ಪಾಲಿಸು” ಎಂದು ಹೇಳಿದನು. 17ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ ನೀನು ನನ್ನ ಮೇಲೆ ಮಮತೆ ಇಟ್ಟಿದ್ದಿಯೋ?” ಎಂದು ಕೇಳಿದನು, ಮೂರನೆಯ ಸಾರಿ ಆತನು, “ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು, “ಕರ್ತನೇ, ನಿನಗೆ ಎಲ್ಲವೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟೀದ್ದೇನೆಂದು ನಿನಗೆ ತಿಳಿದಿದೆ” ಎಂದನು. ಆಗ ಅವನಿಗೆ ಯೇಸು “ನನ್ನ ಕುರಿಗಳನ್ನು ಮೇಯಿಸು” ಎಂದನು. 18“ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ಯುವಕನಾಗಿದ್ದಾಗ ನೀನೇ ನಿನ್ನ ಉಡುಪನ್ನು ಧರಿಸಿಕೊಂಡು ಇಷ್ಟಬಂದ ಕಡೆಗೆ ತಿರುಗಾಡುತ್ತಿದ್ದೀ. ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಆಗ ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ಹೊತ್ತುಕೊಂಡು ಹೋಗುವನು” ಎಂದು ಹೇಳಿದನು. 19ಅವನು ಎಂಥಾ ಮರಣದಿಂದ ದೇವರನ್ನು ಮಹಿಮೆಪಡಿಸುವನು ಎಂಬುದನ್ನು ಯೇಸು ಈ ಮಾತಿನಿಂದ ಸೂಚಿಸಿದನು. ಆತನು ಇದನ್ನು ಹೇಳಿ ಪೇತ್ರನಿಗೆ “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 20ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. ಆ ಶಿಷ್ಯನು ಊಟದ ಸಮಯದಲ್ಲಿ ಯೇಸುವಿನ ಎದೆಗೆ ಒರಗಿಕೊಂಡು, “ಕರ್ತನೇ, ನಿನ್ನನ್ನು ಹಿಡಿದುಕೊಡುವವನು ಯಾರು?” ಎಂದು ಕೇಳಿದವನೇ. 21ಇವನನ್ನು ಪೇತ್ರನು ನೋಡಿ ಯೇಸುವಿಗೆ, “ಕರ್ತನೇ, ಇವನ ಬಗ್ಗೆ ಏನು ಹೇಳುತ್ತೀಯಾ?” ಎಂದು ಕೇಳಲು, 22ಯೇಸು ಅವನಿಗೆ “ನಾನು ಬರುವ ತನಕ ಇವನು ಉಳಿದಿರಬೇಕೆಂಬುದು ನನಗೆ ಮನಸ್ಸಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 23ಆದುದರಿಂದ ಆ ಶಿಷ್ಯನು ಸಾಯುವುದಿಲ್ಲವೆಂಬ ಮಾತು ಸಹೋದರರಲ್ಲಿ ಹಬ್ಬಿತು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ. “ನಾನು ಬರುವ ತನಕ ಅವನು ಉಳಿದಿರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು?” ಎಂದು ಮಾತ್ರ ಹೇಳಿದನು. 24ಈ ವಿಷಯವಾಗಿ ಸಾಕ್ಷಿಕೊಟ್ಟು, ಇವುಗಳನ್ನು ಬರೆದ ಶಿಷ್ಯನು ಇವನೇ. ಇವನ ಸಾಕ್ಷಿಯು ಸತ್ಯವೆಂದು ನಾವು ಬಲ್ಲೆವು. 25ಇದಲ್ಲದೆ ಯೇಸುವು ಮಾಡಿದ ಇನ್ನೂ ಬೇರೆ ಅನೇಕ ಸಂಗತಿಗಳು ಸಹ ಇವೆ. ಅವುಗಳನ್ನೆಲ್ಲಾ ಒಂದೊಂದಾಗಿ ಬರೆಯುವುದಾದರೆ, ಆ ಪುಸ್ತಕಗಳು ಲೋಕವೇ ಹಿಡಿಸಲಾರದಷ್ಟಾಗುವುದು ಎಂದು ನಾನು ಭಾವಿಸುತ್ತೇನೆ.
ಸುವಾರ್ತೆ (ಮೃತರು, ಇನ್ನೊಂದು ವಾಚನ)
35ಯೇಸು ಅವರಿಗೆ “ನಾನೇ ಜೀವದ ರೊಟ್ಟಿ ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವುದಿಲ್ಲ; ನನ್ನನ್ನು ನಂಬುವವನಿಗೆ ಎಂದಿಗೂ ಬಾಯಾರಿಕೆಯಾಗುವುದಿಲ್ಲ. 36ಆದರೆ ನೀವು ನನ್ನನ್ನು ನೋಡಿದ್ದರೂ ನಂಬಲಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ. 37ತಂದೆಯು ನನಗೆ ಕೊಡುವಂಥವರೆಲ್ಲರೂ ನನ್ನ ಬಳಿಗೆ ಬರುವರು. ನನ್ನ ಬಳಿಗೆ ಬರುವವನನ್ನು ನಾನು ಎಂದಿಗೂ ತಳ್ಳಿಬಿಡುವುದೇ ಇಲ್ಲ. 38ನಾನು ನನ್ನ ಸ್ವಂತ ಚಿತ್ತದಂತೆ ಮಾಡುವುದಕ್ಕಾಗಿ ಬಂದಿಲ್ಲ, ಆದರೆ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವುದಕ್ಕೆ ಪರಲೋಕದಿಂದ ಇಳಿದು ಬಂದಿರುವೆ. 39ನನ್ನನ್ನು ಕಳುಹಿಸಿದಾತನ ಚಿತ್ತವು ಏನೆಂದರೆ, ಆತನು ನನಗೆ ಕೊಟ್ಟವರಲ್ಲಿ ನಾನು ಯಾರನ್ನೂ ಕಳೆದುಕೊಳ್ಳದೆ ಅವರನ್ನು ಕಡೆ ದಿನದಲ್ಲಿ ಎಬ್ಬಿಸಬೇಕೆಂಬುದೇ.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 6 ಜೂನ್ ಎಂದರೆ ನಾಗರಿಕ ಪಂಚಾಂಗದ 19 ಜೂನ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು