ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜೂನ್ 2027 › 20 ಜೂನ್
ಆರ್ಥೊಡಾಕ್ಸ್ ಪಂಚಾಂಗ · ಜೂನ್ 7 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 20 ಜೂನ್ 2027
ಭಾನುವಾರ · ಸ್ವರ 7
ಹಬ್ಬಗಳು ಮತ್ತು ಸಂತರು
ಪವಿತ್ರ ಪಂಚಾಶತ್ತಮ. ಪವಿತ್ರ ತ್ರಿಯೇಕತ್ವದ ಹಬ್ಬ
ಉಪವಾಸ
ಉಪವಾಸವಿಲ್ಲ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಸಂಧ್ಯಾ ಪ್ರಾರ್ಥನೆ: ವಾಚನ
16ಆಗ ಯೆಹೋವನು ಮೋಶೆಗೆ ಹೇಳಿದ್ದೇನೇಂದರೆ, “ಇಸ್ರಾಯೇಲರಲ್ಲಿ ಹಿರಿಯರೆಂದೂ ಮತ್ತು ಅಧಿಪತಿಗಳೆಂದೂ ನೀನು ತಿಳಿದುಕೊಂಡಿರುವ ಎಪ್ಪತ್ತು ಮಂದಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಕರೆದು ಅಲ್ಲಿ ನಿನ್ನೊಡನೆ ನಿಲ್ಲಿಸಿಕೋ. 17ನಾನು ಅಲ್ಲಿಗೆ ಇಳಿದು ಬಂದು ನಿನ್ನ ಸಂಗಡ ಮಾತನಾಡುವೆನು. ಅದಲ್ಲದೆ ನಾನು ನಿನಗೆ ಅನುಗ್ರಹಿಸಿರುವ ಆತ್ಮದಲ್ಲಿ ಸ್ವಲ್ಪವನ್ನು ಅವರಿಗೂ ಪಾಲುಕೊಡುವೆನು. ಆಗ ನೀನೊಬ್ಬನೇ ಈ ಜನರ ಹೊಣೆಯನ್ನು ವಹಿಸಬೇಕಾಗಿರುವುದಿಲ್ಲ; ನಿನ್ನ ಜೊತೆಯಲ್ಲಿ ಇವರೂ ಜವಾಬ್ದಾರಿ ವಹಿಸುವರು.” 24ಮೋಶೆ ಹೊರಟುಹೋಗಿ ಯೆಹೋವನ ಮಾತುಗಳನ್ನು ಜನರಿಗೆ ತಿಳಿಸಿದನು ಮತ್ತು ಅವನು ಜನರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಕೂಡಿಸಿ ದೇವದರ್ಶನದ ಗುಡಾರದ ಸುತ್ತಲೂ ನಿಲ್ಲಿಸಿದನು. 25ಯೆಹೋವನು ಆ ಮೇಘದಲ್ಲಿ ಇಳಿದು ಬಂದು ಅವನ ಸಂಗಡ ಮಾತನಾಡಿದನು. ಮೋಶೆಯ ಮೇಲಿರುವ ಆತ್ಮದಲ್ಲಿ ಸ್ವಲ್ಪವನ್ನು ಆ ಎಪ್ಪತ್ತು ಮಂದಿ ಹಿರಿಯರಿಗೂ ಪಾಲುಕೊಟ್ಟನು. ಆ ಆತ್ಮವು ಅವರಿಗೆ ದೊರಕಿದಾಗ ಅವರು ಪರವಶರಾಗಿ ಆ ಸಂದರ್ಭದಲ್ಲಿ ಮಾತ್ರ ಪ್ರವಾದಿಸಿದರು. ಆ ಮೇಲೆ ಅವರು ಎಂದಿಗೂ ಪ್ರವಾದಿಸಲೇ ಇಲ್ಲ. 26ಆದರೆ ಎಲ್ದಾದ್, ಮೇದಾದ್ ಎಂಬ ಇಬ್ಬರು ಪಾಳೆಯದೊಳಗೆ ನಿಂತಿದ್ದರು. ಅವರ ಹೆಸರುಗಳು ಬರೆಯಲ್ಪಟ್ಟಿದ್ದಾಗ್ಯೂ ಅವರು ದೇವದರ್ಶನದ ಗುಡಾರಕ್ಕೆ ಹೋಗಲಿಲ್ಲ. ಆ ಆತ್ಮವು ಅವರ ಮೇಲೆ ಇಳಿದುಬಂದುದರಿಂದ ಅವರು ಪಾಳೆಯದೊಳಗೆ ಪರವಶರಾಗಿ ಪ್ರವಾದಿಸಿದರು. 27ಪಾಳೆಯದಿಂದ ಒಬ್ಬ ಹುಡುಗನು ಮೋಶೆಯ ಬಳಿಗೆ ಓಡಿ ಬಂದು, “ಎಲ್ದಾದ್ ಮತ್ತು ಮೇದಾದರು ಪಾಳೆಯದಲ್ಲಿ ಪರವಶರಾಗಿ ಪ್ರವಾದಿಸುತ್ತಿದ್ದಾರೆ” ಎಂದು ತಿಳಿಸಿದನು. 28ಮೋಶೆಯ ಶಿಷ್ಯನಾದ ನೂನನ ಮಗನಾದ ಯೆಹೋಶುವನು ಮೋಶೆಗೆ, “ಗುರುವೇ, ಅವರು ಪ್ರವಾದಿಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದನು. 29ಅದಕ್ಕೆ ಮೋಶೆ, “ನನ್ನ ನಿಮಿತ್ತವಾಗಿ ನೀನು ಹೊಟ್ಟೆಕಿಚ್ಚುಪಡುತ್ತೀಯೋ? ಯೆಹೋವನ ಅನುಗ್ರಹದಿಂದ ಆತನ ಜನರೆಲ್ಲರೂ ಆತ್ಮವನ್ನು ಹೊಂದಿದವರೂ, ಪ್ರವಾದಿಸುವವರೂ ಆದರೆ ಎಷ್ಟೋ ಒಳ್ಳೆಯದು” ಎಂದನು.
ಸಂಧ್ಯಾ ಪ್ರಾರ್ಥನೆ: ವಾಚನ
23ಚೀಯೋನಿನ ಜನರೇ ಹರ್ಷಿಸಿರಿ, ನಿಮ್ಮ ದೇವರಾದ ಯೆಹೋವನಲ್ಲಿ ಉಲ್ಲಾಸಿಸಿರಿ. ಆತನು ತನ್ನ ನೀತಿಯಿಂದ ಮುಂಗಾರು ಮಳೆಯನ್ನು ನಿಮಗೆ ಕೊಡುವನು. ಮುಂಗಾರು, ಹಿಂಗಾರು ಮಳೆಗಳನ್ನು ಮೊದಲಿನಂತೆ ನಿಮಗಾಗಿ ಸುರಿಸುವನು. 24ಕಣಜಗಳಲ್ಲಿ ಗೋದಿಯು ರಾಶಿರಾಶಿಯಾಗಿರುವುದು, ತೊಟ್ಟಿಗಳಲ್ಲಿ ದ್ರಾಕ್ಷಾರಸವೂ ಎಣ್ಣೆಯೂ ತುಂಬಿತುಳುಕುವವು. 25ಗುಂಪು ಮಿಡತೆಗಳು, ಸಣ್ಣ ಮಿಡತೆಗಳು, ದೊಡ್ಡ ಮಿಡತೆಗಳು, ಚೂರಿ ಮಿಡತೆಗಳು, ನಾನು ಕಳುಹಿಸಿದ ಈ ಮಿಡತೆಗಳ ಸೈನ್ಯಗಳು ತಿಂದು ನಷ್ಟಮಾಡಿದ ವರ್ಷಗಳನ್ನು ನಾನು ನಿಮಗೆ ತಿರುಗಿಕೊಡುವೆನು. 26ನೀವು ಹೊಟ್ಟೆ ತುಂಬಾ ಊಟಮಾಡಿ ತೃಪ್ತಿಗೊಂಡು, ನಿಮಗಾಗಿ ಅದ್ಭುತಕಾರ್ಯಗಳನ್ನು ಮಾಡಿದ ನಿಮ್ಮ ದೇವರಾದ ಯೆಹೋವನ ನಾಮವನ್ನು ಕೊಂಡಾಡುವಿರಿ. ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು. 27ನಾನು ಇಸ್ರಾಯೇಲಿನ ಮಧ್ಯದಲ್ಲಿ ನೆಲೆಯಾಗಿ ಇರುವವನು, ನಾನೇ ನಿಮ್ಮ ದೇವರಾದ ಯೆಹೋವನು, ನಾನಲ್ಲದೆ ಬೇರೆ ದೇವರು ನಿಮಗಿಲ್ಲ. ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು. 28ತರುವಾಯ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು. ನಿಮ್ಮ ಪುತ್ರಪುತ್ರಿಯರು ಪ್ರವಾದಿಸುವರು. ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು. ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು. 29ಇದಲ್ಲದೆ ಆ ದಿನಗಳಲ್ಲಿ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು. 30ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದ್ಭುತಗಳನ್ನು ಮಾಡುವೆನು. ರಕ್ತ, ಬೆಂಕಿ, ಧೂಮಸ್ತಂಭ ಈ ಉತ್ಪಾತಗಳನ್ನು ಉಂಟುಮಾಡುವೆನು. 31ಯೆಹೋವನ ಮಹಾ ಭಯಂಕರವಾದ ದಿನವು ಬರುವುದಕ್ಕಿಂತ ಮೊದಲು, ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು. 32ಆದರೂ ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವುದು. ಯೆಹೋವನು ತಿಳಿಸಿದಂತೆ ಚೀಯೋನಿನ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ಅನೇಕರು ಉಳಿಯುವರು. ಯೆಹೋವನು ಹೇಳಿದಂತೆಯೇ, ಉಳಿದವರಲ್ಲಿ ಯೆಹೋವನಿಂದ ಕರೆಯಲ್ಪಟ್ಟವರು ಬದುಕುವರು.”
ಸಂಧ್ಯಾ ಪ್ರಾರ್ಥನೆ: ವಾಚನ
24“ನಾನು ನಿಮ್ಮನ್ನು ಜನಾಂಗಗಳೊಳಗಿಂದ ಬಿಡಿಸಿ, ಸಕಲ ದೇಶಗಳಿಂದ ಒಟ್ಟುಗೂಡಿಸಿ ಸ್ವದೇಶಕ್ಕೆ ಬರಮಾಡುವೆನು. 25ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಪ್ರೋಕ್ಷಿಸಲು ನೀವು ನಿರ್ಮಲರಾಗುವಿರಿ; ನಿಮ್ಮ ಸಮಸ್ತ ವಿಗ್ರಹಗಳಿಂದಲೂ, ಸಕಲ ವಿಧವಾದ ಹೊಲಸಿನಿಂದಲೂ ನಿಮ್ಮನ್ನು ಶುದ್ಧಿಮಾಡುವೆನು. 26ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು, ನಿಮ್ಮಲ್ಲಿ ನೂತನ ಸ್ವಭಾವವನ್ನು ಹುಟ್ಟಿಸುವೆನು; ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು, ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು. 27ನನ್ನ ಆತ್ಮವನ್ನು ನಿಮ್ಮಲ್ಲಿ ನೆಲಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವಿರಿ. 28ನಾನು ನಿಮ್ಮ ಪೂರ್ವಿಕರಿಗೆ ಅನುಗ್ರಹಿಸಿದ ದೇಶದಲ್ಲಿ ನೀವು ವಾಸಿಸುವಿರಿ. ನೀವು ನನಗೆ ಪ್ರಜೆಯಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.
ಉದಯಕಾಲದ ಪ್ರಾರ್ಥನೆ: ಸುವಾರ್ತೆ
19ಅದೇ ದಿನ ಎಂದರೆ ವಾರದ ಮೊದಲನೆಯ ದಿನದ ಸಂಜೆಯಲ್ಲಿ ಶಿಷ್ಯರು ಯೆಹೂದ್ಯರ ಭಯದಿಂದ ತಾವು ಇದ್ದ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡಿರಲು, ಆಗ ಯೇಸು ಬಂದು ಅವರ ನಡುವೆ ನಿಂತು, “ನಿಮಗೆ ಸಮಾಧಾನವಾಗಲಿ” ಎಂದನು. 20ಇದನ್ನು ಹೇಳಿದ ಮೇಲೆ ಅವರಿಗೆ ತನ್ನ ಕೈಗಳನ್ನೂ ಪಕ್ಕೆಯನ್ನೂ ತೋರಿಸಿದನು. ಆಗ ಶಿಷ್ಯರು ಕರ್ತನನ್ನು ನೋಡಿ ಸಂತೋಷಪಟ್ಟರು. 21ಯೇಸು ಅವರಿಗೆ, “ನಿಮಗೆ ಸಮಾಧಾನವಾಗಲಿ” ಎಂದು ಪುನಃ ಹೇಳಿ, “ತಂದೆಯು ನನ್ನನ್ನು ಕಳುಹಿಸಿಕೊಟ್ಟ ಹಾಗೆಯೇ ನಾನೂ ನಿಮ್ಮನ್ನು ಕಳುಹಿಸಿಕೊಡುತ್ತೇನೆ” ಎಂದನು. 22ಆತನು ಇದನ್ನು ಹೇಳಿ ಅವರ ಮೇಲೆ ಉಸಿರೂದಿ ಅವರಿಗೆ, “ನೀವು ಪವಿತ್ರಾತ್ಮನನ್ನು ಪಡೆದುಕೊಳ್ಳಿರಿ. 23ನೀವು ಯಾರ ಪಾಪಗಳನ್ನು ಕ್ಷಮಿಸಿಬಿಡುತ್ತೀರೋ, ಅವರಿಗೆ ಅವುಗಳು ಕ್ಷಮಾಪಣೆಯಾಗುತ್ತದೆ; ಯಾರ ಪಾಪಗಳನ್ನು ನೀವು ಕ್ಷಮಿಸದೇ ಉಳಿಸುತ್ತೀರೋ, ಅವರಿಗೆ ಅವುಗಳು ಉಳಿಯುತ್ತವೆ” ಎಂದು ಹೇಳಿದನು.
ಪತ್ರಿಕೆ
1ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರೂ ಒಮ್ಮಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿಬಂದಿದ್ದರು. 2ಆಗ ಬಿರುಗಾಳಿ ಬೀಸುತ್ತಿದೆಯೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ ಒಂದು ಶಬ್ದವುಂಟಾಗಿ ಅವರು ಕುಳಿತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು. 3ಉರಿಯುವ ಬೆಂಕಿಯೂ ವಿಂಗಡಿಸಿಕೊಳ್ಳುವ ನಾಲಿಗೆಗಳ ಹಾಗೆ ಅವರಿಗೆ ಕಾಣಿಸಿ ಕೊಂಡು ಅವರಲ್ಲಿ ಒಬ್ಬೊಬ್ಬರ ಮೇಲೆ ಒಂದೊಂದಾಗಿ ಕುಳಿತುಕೊಂಡವು. 4ಆಗ ಅವರೆಲ್ಲರೂ ಪವಿತ್ರಾತ್ಮಭರಿತರಾದರು, ಅವರಿಗೆ ಆ ಪವಿತ್ರಾತ್ಮನು ನೀಡಿದ ಶಕ್ತಿಯ ಪ್ರಕಾರ ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವುದಕ್ಕೆ ಪ್ರಾರಂಭಿಸಿದರು. 5ಆಕಾಶದ ಕೆಳಗಿರುವ ಎಲ್ಲಾ ದೇಶಗಳಿಂದ ಬಂದ ಸದ್ಭಕ್ತರಾದ ಯೆಹೂದ್ಯರು ಯೆರೂಸಲೇಮಿನಲ್ಲಿ ವಾಸವಾಗಿದ್ದರು. 6ಆ ಸಪ್ಪಳವಾದಾಗ ಆ ಜನರೆಲ್ಲರೂ ಗುಂಪು ಗುಂಪಾಗಿ ಕೂಡಿಬಂದು ಪ್ರತಿಯೊಬ್ಬರೂ ತಮ್ಮತಮ್ಮ ಭಾಷೆಯಲ್ಲೇ ಇವರು ಮಾತನಾಡುವುದನ್ನು ಕೇಳಿ ದಿಗ್ಭ್ರಮೆಗೊಂಡರು. 7ಎಲ್ಲರೂ ವಿಸ್ಮಯದಿಂದ ಬೆರಗಾಗಿ, “ಇಗೋ, ಮಾತನಾಡುತ್ತಿರುವ ಇವರೆಲ್ಲರೂ ಗಲಿಲಾಯದವರಲ್ಲವೇ. 8ಆದರೆ ನಾವು ಪ್ರತಿಯೊಬ್ಬರು ನಮ್ಮ ನಮ್ಮ ಮಾತೃಭಾಷೆಯಲ್ಲಿ ಇವರು ಮಾತನಾಡುವುದನ್ನು ಕೇಳುತ್ತಿದ್ದೇವಲ್ಲಾ, ಇದು ಹೇಗೆ? 9ಪಾರ್ಥ್ಯರೂ, ಮೇದ್ಯರೂ, ಏಲಾಮ್ಯರೂ, ಮೆಸೊಪೊತಾಮ್ಯ, ಯೂದಾಯ, ಕಪ್ಪದೋಕ್ಯ, ಪೊಂತ, ಆಸ್ಯ, 10ಫ್ರುಗ್ಯ, ಪಂಫುಲ್ಯ, ಐಗುಪ್ತ ಮತ್ತು ಕುರೇನೆಯ ಮಗ್ಗುಲಲ್ಲಿರುವ ಲಿಬ್ಯ, ಈ ಸೀಮೆಗಳಲ್ಲಿ ವಾಸವಾಗಿರುವವರೂ, ರೋಮಾಪುರದಿಂದ ಬಂದಿರುವ ಯೆಹೂದ್ಯರೂ, ಯೆಹೂದ್ಯ ಮತಾವಲಂಬಿಗಳೂ, ಕ್ರೇತ್ಯರೂ, ಅರಬ್ಬೀದೇಶದವರೂ 11ಆಗಿರುವ ನಾವು ನಮ್ಮ ನಮ್ಮ ಭಾಷೆಗಳಲ್ಲಿ ಇವರು ದೇವರ ಮಹತ್ತುಗಳ ವಿಷಯವಾಗಿ ಹೇಳುವುದನ್ನು ಕೇಳುತ್ತಿದ್ದೇವಲ್ಲಾ” ಎಂದು ಅಂದುಕೊಂಡರು.
ಸುವಾರ್ತೆ
37ಜಾತ್ರೆಯ ಮಹಾದಿನವಾದ ಕಡೆಯ ದಿನದಲ್ಲಿ ಯೇಸು ನಿಂತುಕೊಂಡು “ಯಾವನಿಗಾದರೂ ನೀರಡಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. 38ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ನನ್ನಲ್ಲಿ ಯಾವನು ನಂಬಿಕೆಯಿಡುವನೋ ಅವನೊಳಗಿನಿಂದ ಜೀವಕರವಾದ ನೀರಿನ ಬುಗ್ಗೆಗಳು ಹರಿಯುವವು” ಎಂದು ಕೂಗಿ ಹೇಳಿದನು. 39ಆದರೆ ಯೇಸು ತನ್ನನ್ನು ನಂಬುವವರು ಹೊಂದಲಿರುವ ಪವಿತ್ರಾತ್ಮವರವನ್ನು ಕುರಿತು ಹೀಗೆ ಹೇಳಿದನು. ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ ಕಾರಣ ಪವಿತ್ರಾತ್ಮವರವು ಇನ್ನೂ ಕೊಡಲ್ಪಟ್ಟಿರಲಿಲ್ಲ. 40ಜನರಲ್ಲಿ ಕೆಲವರು ಆ ಮಾತುಗಳನ್ನು ಕೇಳಿದಾಗ “ನಿಜವಾಗಿಯೂ ಈತನು ಪ್ರವಾದಿಯಾಗಿದ್ದಾನೆ” ಎಂದರು. 41ಕೆಲವರು, “ಈತನು ಕ್ರಿಸ್ತನು” ಎಂದರು, ಆದರೆ ಇನ್ನೂ ಕೆಲವರು “ಕ್ರಿಸ್ತನು ಗಲಿಲಾಯದಿಂದ ಬರುವುದುಂಟೆ? 42ದಾವೀದನ ಸಂತಾನದಿಂದಲೂ ದಾವೀದನು ಇದ್ದ ಬೇತ್ಲೆಹೇಮೆಂಬ ಗ್ರಾಮದಿಂದಲೂ ಕ್ರಿಸ್ತನು ಬರುವನು ಎಂಬುದಾಗಿ ಪವಿತ್ರ ಗ್ರಂಥವು ಹೇಳುತ್ತದಲ್ಲವೇ?” ಅಂದರು. 43ಹೀಗೆ ಆತನ ನಿಮಿತ್ತವಾಗಿ ಜನರಲ್ಲಿ ಭೇದ ಉಂಟಾಯಿತು. 44ಅವರಲ್ಲಿ ಕೆಲವರು ಆತನನ್ನು ಬಂಧಿಸಬೇಕೆಂದಿದ್ದರೂ ಆದರೆ ಯಾರು ಆತನ ಮೇಲೆ ಕೈ ಹಾಕಲಿಲ್ಲ. 45ಬಳಿಕ ಆ ದೇವಾಲಯದ ಕಾವಲುಗಾರರು, ಮುಖ್ಯಯಾಜಕರ ಮತ್ತು ಫರಿಸಾಯರ ಬಳಿಗೆ ಬಂದಾಗ ಅವರು, “ನೀವು ಏಕೆ ಆತನನ್ನು ಕರೆತರಲಿಲ್ಲ?” ಎಂದು ಅವರನ್ನು ಕೇಳಿದ್ದಕ್ಕೆ, 46ಕಾವಲುಗಾರರು “ಈ ಮನುಷ್ಯನು ಮಾತನಾಡುವ ರೀತಿಯಲ್ಲಿ ಯಾರೂ ಎಂದೂ ಮಾತನಾಡಿದ್ದಿಲ್ಲ” ಎಂದು ಉತ್ತರ ಕೊಟ್ಟರು. 47ಆಗ ಫರಿಸಾಯರು ಅವರಿಗೆ “ನೀವೂ ಸಹ ಆತನ ಮಾತಿಗೆ ಮರುಳಾದೀರಾ? 48ಹಿರೀಸಭೆಯವರಲ್ಲಾಗಲಿ ಫರಿಸಾಯರಲ್ಲಾಗಲಿ ಯಾರಾದರೂ ಅವನನ್ನು ನಂಬಿದ್ದಾರೋ? 49ಧರ್ಮಶಾಸ್ತ್ರವನ್ನು ಅರಿಯದ ಈ ಹಿಂಡು ಶಾಪಗ್ರಸ್ತರೇ” ಎಂದು ಹೇಳಿದರು. 50ಮೊದಲು ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಅವರಲ್ಲಿ ಒಬ್ಬನಾಗಿದ್ದನು, 51ಅವನು ಅವರಿಗೆ “ನಮ್ಮ ಧರ್ಮಶಾಸ್ತ್ರವು ಮೊದಲು ಒಬ್ಬನನ್ನು ವಿಚಾರಿಸಿ ಅವನು ಮಾಡುವುದೇನೆಂದು ತಿಳಿದುಕೊಳ್ಳದೆ ಅವನ ವಿಷಯವಾಗಿ ಖಂಡನೆ ಮಾಡುವುದುಂಟೇ?” ಎಂದು ಹೇಳಿದ್ದಕ್ಕೆ, 52ಅವರು ಅವನಿಗೆ “ನೀನು ಸಹ ಗಲಿಲಾಯದವನೋ? ನೀನೇ ಪರಿಶೋಧಿಸಿ ನೋಡು ಗಲಿಲಾಯದಿಂದ ಪ್ರವಾದಿಯು ಬರುವುದಿಲ್ಲ,” ಎಂದರು. 8:12ಯೇಸು ಪುನಃ ಜನರೊಂದಿಗೆ ಮಾತನಾಡುತ್ತಾ, “ನಾನೇ ಲೋಕದ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ, ಆದರೆ ಅವನು ಜೀವದ ಬೆಳಕನ್ನು ಹೊಂದಿರುವನು” ಎಂದು ಹೇಳಿದನು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 7 ಜೂನ್ ಎಂದರೆ ನಾಗರಿಕ ಪಂಚಾಂಗದ 20 ಜೂನ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು