ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 23 ಏಪ್ರಿಲ್
ಆರ್ಥೊಡಾಕ್ಸ್ ಪಂಚಾಂಗ · ಏಪ್ರಿಲ್ 10 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 23 ಏಪ್ರಿಲ್ 2027
ಶುಕ್ರವಾರ · ಮಹಾ ಉಪವಾಸದ ಆರನೆಯ ವಾರ · ಸ್ವರ 5
ಹಬ್ಬಗಳು ಮತ್ತು ಸಂತರು
Martyrs Terence, Pompius, and with them Africanus, Macarius, Xeno, Alexander and the other 33 beheaded at Carthage († c.249-251)
ಮಹಾ ಉಪವಾಸ ಕಾಲ
ಕಟ್ಟುನಿಟ್ಟಿನ ಉಪವಾಸ (ಒಣ ಆಹಾರ: ರೊಟ್ಟಿ, ತರಕಾರಿ, ಹಣ್ಣು)
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಆರನೆಯ ತಾಸು
10ಯೆರೂಸಲೇಮ್ ನಗರವನ್ನು ಪ್ರೀತಿಸುವವರೇ, ನೀವೆಲ್ಲರೂ ಆಕೆಯೊಂದಿಗೆ ಆನಂದಿಸಿರಿ, ಆಕೆಯ ವಿಷಯದಲ್ಲಿ ಹರ್ಷಗೊಳ್ಳಿರಿ! 11ಆಕೆಯ ನಿಮಿತ್ತ ದುಃಖಿಸುವವರೇ, ನೀವೆಲ್ಲರೂ, ಆಕೆಯ ಸಮಾಧಾನದ ಸ್ತನ್ಯವನ್ನು ಕುಡಿದು ತೃಪ್ತಿಗೊಳ್ಳುವೆವು ಎಂದುಕೊಳ್ಳುವಿರಿ. ಹೌದು, ಆಕೆಯ ವೈಭವದ ಸಮೃದ್ಧಿಯನ್ನು ಹೀರುತ್ತಾ ಹಿಗ್ಗುವೆವು ಎಂದು ಆಕೆಯೊಂದಿಗೆ ಉತ್ಸಾಹದಿಂದ ಉಲ್ಲಾಸಿಸಿರಿ. 12ಯೆಹೋವನು ಹೀಗೆನ್ನುತ್ತಾನೆ, “ಇಗೋ, ನಾನು ಆಕೆಗೆ ಸುಖವನ್ನು ನದಿಯಂತೆ ದಯಪಾಲಿಸಿ, ತುಂಬಿ ತುಳುಕುವ ತೊರೆಯನ್ನೋ ಎಂಬಂತೆ ಜನಾಂಗಗಳ ವೈಭವವನ್ನು ನೀಡುವೆನು; ನೀವು ಪಾನಮಾಡುವಿರಿ; ನಿಮ್ಮನ್ನು ಕಂಕುಳಲ್ಲಿ ಎತ್ತಿಕೊಂಡು ಹೋಗುವರು, ತೊಡೆಯ ಮೇಲೆ ನಲಿದಾಡಿಸುವರು. 13ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು; ಯೆರೂಸಲೇಮಿನಲ್ಲೇ ನಿಮಗೆ ದುಃಖಶಮನವಾಗುವುದು. 14ನೀವು ಇದನ್ನು ಕಣ್ಣಾರೆ ಕಾಣುವಿರಿ, ನಿಮ್ಮ ಹೃದಯವು ಉಲ್ಲಾಸಿಸುವುದು, ನಿಮ್ಮ ಎಲುಬುಗಳು ಹಸಿ ಹುಲ್ಲಿನಂತೆ ರಸವತ್ತಾಗುವವು; ಆಗ ಯೆಹೋವನು ತನ್ನ ಸೇವಕರ ಮೇಲೆ ಕೃಪಾಹಸ್ತವನ್ನು ವ್ಯಕ್ತಪಡಿಸಿ ತನ್ನ ಶತ್ರುಗಳ ಮೇಲೆ ರೋಷಗೊಳ್ಳುವನು. 15ಆಹಾ, ಯೆಹೋವನು ಬೆಂಕಿಯನ್ನು ಕಟ್ಟಿಕೊಂಡು ಬರುವನು; ಆತನ ರಥಗಳು ಬಿರುಗಾಳಿಯಂತಿರುವವು; ರೌದ್ರಾವೇಶದಿಂದ ತನ್ನ ಸಿಟ್ಟನ್ನು ತೀರಿಸುವನು, ಅಗ್ನಿ ಜ್ವಾಲೆಯಿಂದ ಖಂಡಿಸುವನು. 16ಯೆಹೋವನು ಅಗ್ನಿಯಿಂದಲೂ ಮತ್ತು ತನ್ನ ಖಡ್ಗದಿಂದಲೂ ಎಲ್ಲಾ ನರಜನ್ಮದವರಿಗೂ ನ್ಯಾಯತೀರಿಸುವನು; ಆಗ ಆತನಿಂದ ಹತರಾಗುವವರು ಬಹು ಜನರು. 17ತಮ್ಮ ಮಧ್ಯದಲ್ಲಿನ ಒಬ್ಬನನ್ನು ಅನುಸರಿಸಿ, ತೋಟಗಳೊಳಗೆ ಪ್ರವೇಶಿಸುವುದಕ್ಕೆ ತಮ್ಮನ್ನು ಪವಿತ್ರಮಾಡಿಕೊಂಡು, ಹಂದಿಯ ಮಾಂಸವನ್ನು, ಅಶುದ್ಧಪದಾರ್ಥವನ್ನೂ, ಇಲಿಯನ್ನೂ ತಿನ್ನುವವರು ಒಟ್ಟಿಗೆ ಅಂತ್ಯ ಕಾಣುವರು” ಎಂದು ಯೆಹೋವನು ನುಡಿಯುತ್ತಾನೆ. 18“ಅವರ ಕೃತ್ಯಗಳಿಗೂ, ಆಲೋಚನೆಗಳಿಗೂ ತಕ್ಕದ್ದನ್ನು ಮಾಡುವೆನು; ನಾನು ಇನ್ನು ಮುಂದೆ ಸಮಸ್ತ ಜನಾಂಗಗಳನ್ನೂ ಸಕಲ ಭಾಷೆಯವರನ್ನೂ ಒಟ್ಟಿಗೆ ಬರಮಾಡುವೆನು; ಅವರು ಬಂದು ನನ್ನ ಮಹಿಮೆಯನ್ನು ನೋಡುವರು. 19ಅವರ ಮಧ್ಯದಲ್ಲಿ ಒಂದು ಸೂಚಕಕಾರ್ಯವನ್ನು ಮಾಡುವೆನು; ನನ್ನ ಸುದ್ದಿಯನ್ನು ಕೇಳದೆಯೂ, ನನ್ನ ಮಹಿಮೆಯನ್ನು ನೋಡದೆಯೂ ಇರುವ ತಾರ್ಷೀಷ್, ಪೂಲ್, ಬಿಲ್ಲುಗಾರರಿಗೆ ಪ್ರಸಿದ್ಧಸ್ಥಳವಾದ ಲೂದ್, ತೂಬಲ್, ಯಾವಾನ್ ಎಂಬ ಜನಾಂಗಗಳು ಮತ್ತು ದೂರವಾದ ದ್ವೀಪನಿವಾಸಿಗಳು ಇವರೆಲ್ಲರ ಬಳಿಗೆ ಹತಶೇಷರನ್ನು ಕಳುಹಿಸುವೆನು; ಇವರು ಜನಾಂಗಗಳಲ್ಲಿ ನನ್ನ ಮಹಿಮೆಯನ್ನು ಪ್ರಕಟಿಸುವರು.” 20ಯೆಹೋವನು ಹೀಗೆನ್ನುತ್ತಾನೆ, “ಇಸ್ರಾಯೇಲರು ಯೆಹೋವನ ಆಲಯಕ್ಕೆ ಶುದ್ಧಪಾತ್ರೆಯಲ್ಲಿ ನೈವೇದ್ಯವನ್ನು ತೆಗೆದುಕೊಂಡು ಬರುವ ಪ್ರಕಾರ ಸಮಸ್ತ ಜನಾಂಗಗಳಲ್ಲಿ ಚದರಿಹೋಗಿರುವ ನಮ್ಮ ಸಹೋದರರನ್ನು ಕುದುರೆ, ತೇರು, ಪಲ್ಲಕಿ, ಹೇಸರಗತ್ತೆ, ಒಂಟೆ ಇವುಗಳ ಮೇಲೆ ಯೆಹೋವನ ನೈವೇದ್ಯಕ್ಕಾಗಿ ಯೆರೂಸಲೇಮೆಂಬ ನನ್ನ ಪರಿಶುದ್ಧಪರ್ವತಕ್ಕೆ ಕರೆತರುವರು. 21ಇದಲ್ಲದೆ ಇವರಲ್ಲಿ ಯಾಜಕರು ಮತ್ತು ಲೇವಿಯರು ಆಗತಕ್ಕವರನ್ನು ಆರಿಸಿಕೊಳ್ಳುವೆನು” ಎಂದು ಯೆಹೋವನು ಹೇಳುತ್ತಾನೆ. 22“ನಾನು ಸೃಷ್ಟಿಸಿದ ನೂತನ ಆಕಾಶಮಂಡಲವೂ ಮತ್ತು ನೂತನ ಭೂಮಂಡಲವೂ ನನ್ನ ಮುಂದೆ ಸ್ಥಿರವಾಗಿ ನಿಲ್ಲುವ ಪ್ರಕಾರ ನಿಮ್ಮ ಸಂತತಿಯೂ ಹಾಗು ನಿಮ್ಮ ಹೆಸರೂ ಸ್ಥಿರವಾಗಿ ನಿಲ್ಲುವವು. 23ಪ್ರತಿಯೊಂದು ಅಮಾವಾಸ್ಯೆಯಲ್ಲಿಯೂ, ಒಂದೊಂದು ಸಬ್ಬತ್ ದಿನದಲ್ಲಿಯೂ, ಸಕಲ ನರಜನ್ಮದವರೂ ನನ್ನ ಸನ್ನಿಧಿಯಲ್ಲಿ ಆರಾಧಿಸುವುದಕ್ಕೆ ಬರುವರು” ಇದು ಯೆಹೋವನ ನುಡಿ. 24“ಅವರು ಹೊರಗೆ ಹೋಗಿ ನನಗೆ ದ್ರೋಹ ಮಾಡಿದವರ ಹೆಣಗಳನ್ನು ನೋಡುವರು; ಅವುಗಳನ್ನು ಕಡಿಯುವ ಹುಳವು ಸಾಯುವುದಿಲ್ಲ, ಸುಡುವ ಬೆಂಕಿಯು ಆರುವುದಿಲ್ಲ; ಅವುಗಳು ಲೋಕದವರಿಗೆಲ್ಲಾ ಅಸಹ್ಯವಾಗಿರುವವು.”
ಸಂಧ್ಯಾ ಪ್ರಾರ್ಥನೆ: ವಾಚನ
33ಯಾಕೋಬನು ತನ್ನ ಮಕ್ಕಳಿಗೆ ಅಪ್ಪಣೆ ಕೊಡುವುದನ್ನು ಮುಗಿಸಿದ ನಂತರ ಹಾಸಿಗೆಯ ಮೇಲೆ ತನ್ನ ಕಾಲುಗಳನ್ನು ಮಡಚಿಕೊಂಡು ಪ್ರಾಣಬಿಟ್ಟು ಪೂರ್ವಿಕರ ಬಳಿಗೆ ಸೇರಿದನು. 50:1ಆಗ ಯೋಸೇಫನು ತನ್ನ ತಂದೆಯ ಮುಖದ ಮೇಲೆ ಬಿದ್ದು ಕಣ್ಣೀರು ಸುರಿಸುತ್ತಾ ಅವನಿಗೆ ಮುದ್ದಿಟ್ಟನು. 2ತರುವಾಯ ಯೋಸೇಫನು ತನ್ನ ಸೇವಕರಾದ ವೈದ್ಯರಿಗೆ, “ನನ್ನ ತಂದೆಯ ಶವವನ್ನು ಸುಗಂಧ ದ್ರವ್ಯಗಳಿಂದ ತುಂಬಿ ಸಿದ್ಧಪಡಿಸಿರಿ” ಎಂದು ಅಪ್ಪಣೆ ಕೊಡಲು ಅವರು ಇಸ್ರಾಯೇಲನ ಶವವನ್ನು ಸುಗಂಧ ದ್ರವ್ಯಗಳಿಂದ ತುಂಬಿದರು. 3ನಲ್ವತ್ತು ದಿನಗಳು ಸುಗಂಧದ್ರವ್ಯಗಳನ್ನು ತುಂಬುವ ಪದ್ಧತಿಯಿರುವುದರಿಂದ ಅಷ್ಟು ದಿನ ಸಿದ್ಧಪಡಿಸುತ್ತಾ ಇದ್ದರು. ಐಗುಪ್ತರು ಅವನಿಗೋಸ್ಕರ ಎಪ್ಪತ್ತು ದಿನ ಶೋಕಾಚರಣೆಯಲ್ಲಿದ್ದರು. 4ಶೋಕಾಚರಣೆಯು ಮುಗಿದ ನಂತರ ಯೋಸೇಫನು ಫರೋಹನ ಪರಿವಾರದವರಿಗೆ, “ದಯವಿಟ್ಟು ನೀವು ಫರೋಹನ ಬಳಿಗೆ ಹೋಗಿ ಈ ವಿಷಯವನ್ನು ಮನಮುಟ್ಟುವಂತೆ ಮಾಡಿ, 5‘ನನ್ನ ತಂದೆಯು, ತಾನು ಕಾನಾನ್ ದೇಶದಲ್ಲಿ ಸಿದ್ಧ ಮಾಡಿಕೊಂಡಿರುವ ಸ್ಥಳದಲ್ಲಿಯೇ ತನಗೆ ಸಮಾಧಿ ಮಾಡಬೇಕೆಂದು ಸಾಯುವುದಕ್ಕಿಂತ ಮೊದಲು ನನ್ನಿಂದ ಪ್ರಮಾಣ ಮಾಡಿಸಿದನು. ಆದ್ದರಿಂದ ನನ್ನ ಮೇಲೆ ಕಟಾಕ್ಷವಿದ್ದರೆ ನೀವು ಈ ಸಂಗತಿಯನ್ನು ಫರೋಹನಿಗೆ ತಿಳಿಸಿ ನಾನು ಹೋಗಿ ತಂದೆಗೆ ಸಮಾಧಿ ಮಾಡಿ ಬರುವುದಕ್ಕೆ ಅಪ್ಪಣೆ ಕೊಡಿಸಬೇಕೆಂದು ಬೇಡಿಕೊಳ್ಳುತ್ತೇನೆ’” ಎಂದನು. 6ಫರೋಹನು ಈ ಸಂಗತಿಯನ್ನು ಕೇಳಿ ಯೋಸೇಫನಿಗೆ, “ನಿನ್ನ ತಂದೆ ಪ್ರಮಾಣ ಮಾಡಿಸಿದ ಮೇರೆಗೆ ನೀನು ಹೋಗಿ ಅವನಿಗೆ ಸಮಾಧಿ ಮಾಡಿಬರಬಹುದು” ಎಂದು ಅಪ್ಪಣೆಕೊಟ್ಟನು. 7ಯೋಸೇಫನು ತಂದೆಗೆ ಸಮಾಧಿ ಮಾಡುವುದಕ್ಕೆ ಹೊರಟಾಗ ಅವನ ಜೊತೆಯಲ್ಲಿ ಫರೋಹನ ಸೇವಕರೆಲ್ಲರೂ, ಅರಮನೆಯ ಮುಖಂಡರೆಲ್ಲರೂ, ಐಗುಪ್ತ ದೇಶದ ಮುಖ್ಯಸ್ಥರೆಲ್ಲರೂ 8ಯೋಸೇಫನ ಮನೆಯವರೆಲ್ಲರೂ, ಅಣ್ಣತಮ್ಮಂದಿರೂ, ತಂದೆಯ ಮನೆಯವರೆಲ್ಲರೂ ಹೋದರು. ಅವರು ತಮ್ಮ ಹೆಂಡತಿ ಮಕ್ಕಳನ್ನು ಕುರಿದನಗಳನ್ನು ಮಾತ್ರ ಗೋಷೆನ್ ಸೀಮೆಯಲ್ಲಿ ಬಿಟ್ಟು ಹೋದರು. 9ಇದಲ್ಲದೆ ಅವನ ಸಂಗಡ ರಥಗಳೂ, ಕುದುರೆಗಳೂ ಸಹ ಹೋದವು. ಯೋಸೇಫನ ಹಿಂದೆ ಹೊರಟು ಹೋದವರು ಬಹು ಮಂದಿಯಾಗಿದ್ದರು. 10ಅವರು ಯೊರ್ದನ್ ಹೊಳೆಯಿಂದಾಚೆ ಇರುವ ಆಟಾದ್ ಎಂಬ ಕಣಕ್ಕೆ ಬಂದು ಅಲ್ಲಿ ಅತ್ಯಧಿಕವಾಗಿ ಗೋಳಾಡಿದರು. ಯೋಸೇಫನು ತನ್ನ ತಂದೆಗೋಸ್ಕರ ಏಳು ದಿನಗಳ ತನಕ ಶೋಕಾಚರಿಸಿದನು. 11ಆ ದೇಶದ ಜನರಾಗಿದ್ದ ಕಾನಾನ್ಯರು ಯೊರ್ದನ್ ಹೊಳೆಯಿಂದಾಚೆ ಇರುವ ಆಟಾದ್ ಎಂಬ ಕಣದಲ್ಲಿ ನಡೆದ ಗೋಳಾಟವನ್ನು ನೋಡಿ ಐಗುಪ್ತರಿಗೆ ಬಂದಿರುವ ಈ ಶೋಕವು ಬಹು ವಿಶೇಷವಾಗಿದೆ ಎಂದು ಹೇಳಿದ್ದರಿಂದ ಆ ಸ್ಥಳಕ್ಕೆ “ಆಬೇಲ್ ಮಿಚ್ರಯಿಮ್” ಎಂದು ಹೆಸರಾಯಿತು. 12ಯಾಕೋಬನ ಮಕ್ಕಳು ತಂದೆಯ ಅಪ್ಪಣೆಯ ಮೇರೆಗೆ ಮಾಡಿದರು. 13ಅವನ ಶವವನ್ನು ಕಾನಾನ್ ದೇಶಕ್ಕೆ ಹೊತ್ತುಕೊಂಡು ಹೋಗಿ ಮಕ್ಪೇಲ ಎಂಬ ಬಯಲಿನಲ್ಲಿರುವ ಗುಹೆಯೊಳಗೆ ಸಮಾಧಿಮಾಡಿದರು. ಅಬ್ರಹಾಮನು ಹಿತ್ತಿಯನಾದ ಎಫ್ರೋನನಿಂದ ಮಮ್ರೆಗೆದುರಿನಲ್ಲಿರುವ ಆ ಗವಿಯನ್ನು ಸುತ್ತಲಿರುವ ಭೂಮಿ ಸಹಿತ ಸ್ವಂತ ಸ್ಮಶಾನ ಭೂಮಿಯನ್ನಾಗಿ ಕೊಂಡುಕೊಂಡಿದ್ದನು. 14ತಂದೆಗೆ ಸಮಾಧಿ ಮಾಡಿದ ಮೇಲೆ ಯೋಸೇಫನೂ ಅವನ ಅಣ್ಣತಮ್ಮಂದಿರೂ ತಂದೆಯ ಉತ್ತರ ಕ್ರಿಯೆಗೋಸ್ಕರ ಜೊತೆಯಲ್ಲಿ ಹೋಗಿದ್ದವರೆಲ್ಲರೂ ಐಗುಪ್ತಕ್ಕೆ ಹಿಂದಿರುಗಿ ಬಂದರು. 15ಯೋಸೇಫನ ಅಣ್ಣತಮ್ಮಂದಿರು ತಂದೆ ಸತ್ತದ್ದನ್ನು ಕಂಡು, “ಒಂದು ವೇಳೆ ಯೋಸೇಫನು ನಮ್ಮನ್ನು ದ್ವೇಷಿಸಿ ನಾವು ಅವನಿಗೆ ಮಾಡಿದ ಎಲ್ಲಾ ಕೇಡಿಗೆ ಪ್ರತಿಯಾಗಿ ನಮಗೆ ಶಿಕ್ಷೆಯನ್ನು ಕೊಡಬಹುದು” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. 16ಅವರು ಯೋಸೇಫನಿಗೆ, ನಿನ್ನ ತಂದೆಯು ಸಾಯುವುದಕ್ಕಿಂತ ಮೊದಲು ನಮಗೆ ಅಪ್ಪಣೆ ಮಾಡಿದ್ದೇನೆಂದರೆ, 17“ನಿನ್ನ ಅಣ್ಣಂದಿರಾದ ನಾವು ನಿನಗೆ ಕೇಡು ಮಾಡಿದ್ದು ನಿಜವೇ. ಆದರೂ ನಮ್ಮ ತಂದೆಯ ದೇವರನ್ನು ಆರಾಧಿಸುವವರು, ಸೇವಕರೂ ಆದ ನಮ್ಮ ಅಪರಾಧವನ್ನು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತೇವೆ” ಎಂದು ಯೋಸೇಫನ ಬಳಿ ಬೇಡಿಕೊಳ್ಳಿರಿ ಎಂದು ಹೇಳಿದರು. ಯೋಸೇಫನು ಈ ಮಾತುಗಳನ್ನು ಕೇಳಿ ಕಣ್ಣೀರು ಸುರಿಸಿದನು. 18ಇದಲ್ಲದೆ ಅಣ್ಣಂದಿರು ತಾವೇ ಬಂದು ಅವನ ಮುಂದೆ ಅಡ್ಡಬಿದ್ದು, “ಇಗೋ ನಾವು ನಿನಗೆ ಗುಲಾಮರು” ಎಂದರು. 19ಯೋಸೇಫನು ಅವರಿಗೆ, “ಹೆದರಬೇಡಿರಿ, ನಾನೇನು ದೇವರ ಸ್ಥಾನದಲ್ಲಿ ಇದ್ದೇನೋ? 20ನೀವಂತೂ ನನಗೆ ಕೇಡಾಗಬೇಕೆಂದು ಎಣಿಸಿದಿರಿ. ಆದರೆ ದೇವರು ನನ್ನನ್ನು ಮೇಲಾಗಬೇಕೆಂದು ಸಂಕಲ್ಪಿಸಿದನು; ಆದುದರಿಂದ ಇಂದು ನೀವು ಕಾಣುವಂತೆ, ಅನೇಕ ಜನರ ಪ್ರಾಣವು ಸಂರಕ್ಷಿಸಲ್ಪಟ್ಟಿತ್ತು” ಎಂದನು. 21ಆದುದರಿಂದ ನೀವು ಸ್ವಲ್ಪವೂ ಭಯಪಡಬೇಡಿರಿ. ನಾನು ನಿಮ್ಮನ್ನೂ, ನಿಮಗೆ ಸೇರಿದವರೆಲ್ಲರನ್ನೂ ಪೋಷಿಸುವೆನು. ಎಂದು ಹೇಳಿ ಅವರನ್ನು ಸಂತೈಸಿ ಅವರ ಸಂಗಡ ಪ್ರೀತಿಯಿಂದ ಮಾತನಾಡಿದನು. 22ಹೀಗೆ ಯೋಸೇಫನು, ಅವನ ತಂದೆಯ ಮನೆಯವರೂ ಐಗುಪ್ತ ದೇಶದಲ್ಲಿ ವಾಸಮಾಡಿದರು. ಯೋಸೇಫನು ನೂರಹತ್ತು ವರ್ಷ ಬದುಕಿದನು. 23ಅವನು ಎಫ್ರಾಯೀಮನ ಮಕ್ಕಳ ಮೊಮ್ಮಕ್ಕಳನ್ನು ಅಂದರೆ ಮೂರನೇ ತಲೆಮಾರಿನವರೆಗೂ ನೋಡಿದನು. ಮತ್ತು ಮನಸ್ಸೆಯ ಮಗನಾದ ಮಾಕೀರನಿಗೂ ಮಕ್ಕಳು ಹುಟ್ಟಿದಾಗ ಅವರೂ ಯೋಸೇಫನ ಮಡಿಲಿನಲ್ಲಿಯೇ ಬೆಳೆದರು. ಅವರನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡನು. 24ಯೋಸೇಫನು ತನ್ನ ಅಣ್ಣತಮ್ಮಂದಿರಿಗೆ, “ನನಗೆ ಅವಸಾನಕಾಲ ಸಮೀಪಿಸಿತು. ಆದರೆ ದೇವರು ನಿಶ್ಚಯವಾಗಿ ನಿಮ್ಮನ್ನು ಪರಾಂಬರಿಸಿ ತಾನು ಅಬ್ರಹಾಮ, ಇಸಾಕ್, ಯಾಕೋಬರಿಗೆ ಕೊಡುತ್ತೇನೆಂದು ಪ್ರಮಾಣಮಾಡಿ ಹೇಳಿದ ದೇಶಕ್ಕೆ ನೀವು ಹೋಗಿ ಸೇರುವಂತೆ ಮಾಡುವನು” ಎಂದು ತಿಳಿದುಕೊಳ್ಳಿರಿ. 25ಇದಲ್ಲದೆ ಯೋಸೇಫನು ಇಸ್ರಾಯೇಲನ ಮಕ್ಕಳಿಗೆ, “ದೇವರು ನಿಸ್ಸಂದೇಹವಾಗಿ ನಿಮ್ಮನ್ನು ಪರಾಂಬರಿಸುವನು. ಆಗ ನೀವು ನನ್ನ ಶವವನ್ನು ನಿಮ್ಮ ಸಂಗಡ ಹೊತ್ತುಕೊಂಡು ಹೋಗಬೇಕು” ಎಂದು ಅವರಿಂದ ಪ್ರಮಾಣಮಾಡಿಸಿದನು. 26ಯೋಸೇಫನು ನೂರಹತ್ತು ವರ್ಷದವನಾಗಿ ಪ್ರಾಣ ಬಿಟ್ಟನು. ಅವನ ಶವಕ್ಕೆ ಸುಗಂಧದ್ರವ್ಯಗಳನ್ನು ತುಂಬಿ ಐಗುಪ್ತ ದೇಶದೊಳಗೆ ಅದನ್ನು ಪೆಟ್ಟಿಗೆಯಲ್ಲಿ ಇರಿಸಿದರು.
ಸಂಧ್ಯಾ ಪ್ರಾರ್ಥನೆ: ವಾಚನ
8ಬಾಯಿಲ್ಲದವರಿಗೂ, ಹಾಳಾಗಿ ಹೋಗುತ್ತಿರುವವರೆಲ್ಲರಿಗೂ, ನ್ಯಾಯವಾಗುವಂತೆ ಬಾಯಿ ತೆರೆ. 9ಬಾಯನ್ನು ತೆರೆದು ನ್ಯಾಯವನ್ನು ತೀರಿಸು, ದೀನದರಿದ್ರರ ವ್ಯಾಜ್ಯ ಮಾಡು. 10ಗುಣವತಿಯಾದ ಸತಿಯು ಎಲ್ಲಿ ಸಿಕ್ಕುವಳು? ಆಕೆಯು ಹವಳಕ್ಕಿಂತಲೂ ಬಹೂ ಅಮೂಲ್ಯಳು. 11ಪತಿಯ ಹೃದಯವು ಆಕೆಯಲ್ಲಿ ಭರವಸವಿಡುವುದು, ಅವನು ಕೊಳ್ಳೆ ಕೊಳ್ಳೆಯಾಗಿ ಸಂಪಾದಿಸುವನು. 12ಆಕೆಯು ಜೀವಮಾನದಲ್ಲೆಲ್ಲಾ ಅವನಿಗೆ ಅಹಿತವನ್ನು ಮಾಡದೆ, ಹಿತವನ್ನೇ ಮಾಡುತ್ತಿರುವಳು. 13ಉಣ್ಣೆಯನ್ನೂ, ಸೆಣಬನ್ನೂ ಹುಡುಕಿ ತಂದು, ಕೈಕೆಲಸವನ್ನು ಆಸಕ್ತಿಯಿಂದ ಮಾಡುವಳು. 14ವ್ಯಾಪಾರದ ಹಡಗುಗಳಂತೆ, ದೂರದಿಂದ ಬೇಕಾದ ಆಹಾರವನ್ನು ತರುವಳು. 15ಇನ್ನೂ ಕತ್ತಲಿರುವಾಗಲೇ ಎದ್ದು, ಮನೆಯವರಿಗೆ ಆಹಾರವನ್ನು, ನೀಡುವಳು ದಾಸಿಯರಿಗೆ ದಿನದ ಕೆಲಸಗಳನ್ನು ಹಂಚುವಳು. 16ಹೊಲವನ್ನು ನೋಡಿ ಯೋಚಿಸಿ ಕೊಂಡುಕೊಳ್ಳುವಳು, ತನ್ನ ಕೈಗೆಲಸದ ಲಾಭದಿಂದ ದ್ರಾಕ್ಷಿತೋಟವನ್ನು ಮಾಡಿಸುವಳು. 17ನಡುವಿನ ಬಲವೆಂಬ ಪಟ್ಟಿಯನ್ನು ಕಟ್ಟಿಕೊಂಡು, ತೋಳುಗಳನ್ನು ಶಕ್ತಿಗೊಳಿಸುವಳು. 18ವಿವೇಚಿಸಿ ಬಹುಲಾಭವಾಯಿತೆಂದು ತಿಳುಕೊಳ್ಳುವಳು, ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು. 19ರಾಟೆಯ ಮೇಲೆ ಕೈ ಹಾಕಿ, ಕದರನ್ನು ಹಿಡಿಯುವಳು. 20ಬಡವರಿಗಾಗಿ ಕೈ ಬಿಚ್ಚಿ, ದಿಕ್ಕಿಲ್ಲದವರಿಗೆ ಕೈ ನೀಡುವಳು. 21ಮನೆಯವರೆಲ್ಲರಿಗೂ ಸಕಲಾತಿಯನ್ನು ಹೊದಿಸಿರುವುದರಿಂದ, ಅವರ ವಿಷಯವಾಗಿ ಆಕೆಗೆ ಹಿಮದ ಭಯವಿಲ್ಲ. 22ತನಗಾಗಿ ರತ್ನಗಂಬಳಿಗಳನ್ನು ಮಾಡುವಳು, ಆಕೆಯ ಉಡುಪು ನಾರುಮಡಿ, ರಕ್ತಾಂಬರ. 23ಆಕೆಯ ಪತಿಯು ನ್ಯಾಯಸ್ಥಾನದಲ್ಲಿ, ದೇಶದ ಹಿರಿಯರ ಮಧ್ಯದಲ್ಲಿ ಕುಳಿತಿರುವಾಗ ಪ್ರಸಿದ್ಧನಾಗಿ ಕಾಣುವನು. 24ಹಚ್ಚಡಗಳನ್ನು ನೆಯ್ದು ಮಾರಾಟಮಾಡುವಳು, ನಡುಕಟ್ಟುಗಳನ್ನು ವರ್ತಕನಿಗೆ ಒದಗಿಸುವಳು. 25ಬಲವನ್ನು, ತೇಜಸ್ಸನ್ನು ಹೊದ್ದುಕೊಂಡಿರುವಳು, ಭವಿಷ್ಯತ್ತಿನ ಭಯವಿಲ್ಲದೆ ನಗುತ್ತಿರುವಳು. 26ಬಾಯಿದೆರೆದು ಜ್ಞಾನವನ್ನು ತೋರ್ಪಡಿಸುವಳು. ಆಕೆಯ ನಾಲಿಗೆಯು ಬುದ್ಧಿಯನ್ನು ಪ್ರೀತಿಪೂರ್ವಕವಾಗಿ ಹೇಳುವುದು. 27ಸೋಮಾರಿತನದ ಅನ್ನವನ್ನು ತಿನ್ನದೆ, ಗೃಹಕೃತ್ಯಗಳನ್ನೆಲ್ಲಾ ನೋಡಿಕೊಳ್ಳುವಳು. 28ಮಕ್ಕಳು ಎದ್ದುನಿಂತು ಆಕೆಯನ್ನು “ಧನ್ಯಳು” ಎಂದು ಹೇಳುವರು. 29ಪತಿಯು ಸಹ, “ಬಹುಮಂದಿ ಸ್ತ್ರೀಯರು ಗುಣವತಿಯರಾಗಿ ನಡೆದಿದ್ದಾರೆ, ಅವರೆಲ್ಲರಿಗಿಂತಲೂ ನೀನೇ ಶ್ರೇಷ್ಠಳು” ಎಂದು ಆಕೆಯನ್ನು ಕೊಂಡಾಡುವನು. 30ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ, ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು. 31ಆಕೆಯ ಕೈಕೆಲಸಕ್ಕೆ ಪ್ರತಿಫಲವನ್ನು ಸಲ್ಲಿಸಿರಿ, ಆಕೆಯ ಕಾರ್ಯಗಳೇ ಪುರದ್ವಾರಗಳಲ್ಲಿ ಆಕೆಯನ್ನು ಪ್ರಶಂಸಿಸಲಿ.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 10 ಏಪ್ರಿಲ್ ಎಂದರೆ ನಾಗರಿಕ ಪಂಚಾಂಗದ 23 ಏಪ್ರಿಲ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು