ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 22 ಏಪ್ರಿಲ್
ಆರ್ಥೊಡಾಕ್ಸ್ ಪಂಚಾಂಗ · ಏಪ್ರಿಲ್ 9 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 22 ಏಪ್ರಿಲ್ 2027
ಗುರುವಾರ · ಮಹಾ ಉಪವಾಸದ ಆರನೆಯ ವಾರ · ಸ್ವರ 5
ಹಬ್ಬಗಳು ಮತ್ತು ಸಂತರು
Martyr Eupsychius of Cæsarea in Cappadocia († 362)
ಮಹಾ ಉಪವಾಸ ಕಾಲ
ಕಟ್ಟುನಿಟ್ಟಿನ ಉಪವಾಸ (ಒಣ ಆಹಾರ: ರೊಟ್ಟಿ, ತರಕಾರಿ, ಹಣ್ಣು)
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಆರನೆಯ ತಾಸು
8ಯೆಹೋವನು ಹೀಗನ್ನುತ್ತಾನೆ, “ರಸ ದೊರೆಯಬಹುದಾದ ದ್ರಾಕ್ಷಿಯ ಗೊಂಚಲನ್ನು ಒಬ್ಬನು ನೋಡಿ, ‘ಹಾಳುಮಾಡಬೇಡ, ಅದರಲ್ಲಿ ಪ್ರಯೋಜನವಿದೆ’ ಎನ್ನುವಂತೆ, ನಾನು ನನ್ನ ಸೇವಕರನ್ನು ಲಕ್ಷ್ಯಕ್ಕೆ ತಂದು, ಇವರನ್ನೆಲ್ಲಾ ಹಾಳುಮಾಡಬಾರದು ಎಂದು ಅಂದುಕೊಳ್ಳುವೆನು, 9ಯಾಕೋಬಿನಿಂದ ಸಂತಾನವನ್ನು ಹುಟ್ಟಿಸುವೆನು, ಯೆಹೂದ ವಂಶದಿಂದ ನನ್ನ ಪರ್ವತಗಳ ಸ್ವತ್ತಿನ ಸಂತತಿಯನ್ನು ಬರಮಾಡುವೆನು, ನನ್ನ ಆಪ್ತರು ಆ ಸ್ವತ್ತನ್ನು ಅನುಭವಿಸುವರು, ನನ್ನ ಸೇವಕರು ಅಲ್ಲಿ ವಾಸಿಸುವರು. 10ಆಗ ನನ್ನ ಭಕ್ತಜನರ ಹಿತಕ್ಕಾಗಿ ಶಾರೋನು ಹಿಂಡುಗಳಿಗೆ ಹುಲ್ಲುಗಾವಲಾಗಿಯೂ, ಆಕೋರಿನ ತಗ್ಗು ದನದ ಹಕ್ಕೆಯಾಗಿಯೂ ಇರುವವು. 11ಆದರೆ ಯೆಹೋವನಾದ ನನ್ನನ್ನು ತೊರೆದು, ನನ್ನ ಪವಿತ್ರ ಪರ್ವತವನ್ನು ಮರೆತು, ಶುಭದಾಯಕ ದೇವತೆಗೆ ಔತಣವನ್ನು ಏರ್ಪಡಿಸಿ, ಗತಿದಾಯಕ ದೇವತೆಗೆ ಮದ್ಯವನ್ನು ಬೆರಸಿದ ನಿಮಗೆ ಕತ್ತಿಯನ್ನೇ ಗತಿಯಾಗ ಮಾಡುವೆನು. 12ನೀವೆಲ್ಲರೂ ಕತ್ತಿಗೆ ಬೀಳುವಿರಿ, ನೀವೆಲ್ಲರೂ ಕೊಲೆಗೊಳಗಾಗಿ ಬೀಳುವಿರಿ, ಏಕೆಂದರೆ ನಾನು ಕೂಗಲು ನೀವು ಉತ್ತರಕೊಡಲಿಲ್ಲ. ನಾನು ಹೇಳಿದರೂ ನೀವು ಕೇಳಲಿಲ್ಲ; ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡೆಸಿ, ನನಗೆ ಇಷ್ಟವಿಲ್ಲದ್ದನ್ನು ಆರಿಸಿಕೊಂಡಿರಿ.” 13ಹೀಗಿರಲು ಕರ್ತನಾದ ಯೆಹೋವನು ಹೀಗೆನ್ನುತ್ತಾನೆ, “ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ನೀವು ದಾಹಗೊಳ್ಳುವಿರಿ; ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗಪಡುವಿರಿ. 14ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು, ನೀವೋ ಮನೋವ್ಯಥೆಯಿಂದ ಮೊರೆಯಿಟ್ಟು, ಹೃದಯದ ಯಾತನೆಯಿಂದ ಗೋಳಾಡುವಿರಿ. 15ಕರ್ತನಾದ ಯೆಹೋವನು ನಿಮ್ಮನ್ನು ಕೊಂದುಹಾಕುವನು, ನಿಮ್ಮ ಹೆಸರು ನನ್ನ ಆಪ್ತಜನರು ಶಪಿಸುವ ಶಾಪದ ಮಾತಾಗಿಯೇ ಉಳಿಯುವುದು; ನಾನು ನನ್ನ ಸೇವಕರಿಗೆ ಹೊಸ ಹೆಸರನ್ನು ಕೊಡುವೆನು. 16ನಿಮ್ಮ ಪೂರ್ವದ ಕಷ್ಟಗಳು ಇನ್ನು ನನ್ನ ಕಣ್ಣಿಗೆ ಬೀಳದೆ ಮರೆತು ಹೋಗಿರುವುದರಿಂದ ಲೋಕದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವ ಪ್ರತಿಯೊಬ್ಬನೂ ಸತ್ಯಸಂಧನಾದ ದೇವರ ಹೆಸರಿನಿಂದ ಆಶೀರ್ವದಿಸಿಕೊಳ್ಳುವನು; ಲೋಕದಲ್ಲಿ ಆಣೆಯಿಡುವ ಪ್ರತಿಯೊಬ್ಬನೂ ಸತ್ಯವಂತನಾದ ದೇವರ ಮೇಲೆ ಆಣೆಯಿಡುವನು.
ಸಂಧ್ಯಾ ಪ್ರಾರ್ಥನೆ: ವಾಚನ
1ಇಸ್ರಾಯೇಲನು ತನಗಿದ್ದ ಸರ್ವಸ್ವವನ್ನು ತೆಗೆದುಕೊಂಡು, ಪ್ರಯಾಣ ಮಾಡಿ ಬೇರ್ಷೆಬಕ್ಕೆ ಬಂದು ತನ್ನ ತಂದೆಯಾದ ಇಸಾಕನ ದೇವರಿಗೆ ಯಜ್ಞಗಳನ್ನು ಅರ್ಪಿಸಿದನು. 2ಅಲ್ಲಿ ದೇವರು ರಾತ್ರಿಯ ದರ್ಶನದಲ್ಲಿ ಇಸ್ರಾಯೇಲನಿಗೆ, “ಯಾಕೋಬನೇ, ಯಾಕೋಬನೇ” ಎಂದು ಕರೆಯಲು, ಅವನು, “ಇಗೋ ಇದ್ದೇನೆ” ಎಂದನು. 3ಆತನು ಅವನಿಗೆ, “ನಾನೇ ದೇವರು, ನಿನ್ನ ತಂದೆಯ ದೇವರು ನಾನೇ; ನೀನು ಗಟ್ಟಾ ಇಳಿದು ಹೆದರದೆ ಐಗುಪ್ತ ದೇಶಕ್ಕೆ ಹೋಗು; ಅಲ್ಲಿ ನಿನ್ನಿಂದ ಮಹಾ ಜನಾಂಗವುಂಟಾಗುವಂತೆ ಮಾಡುವೆನು. 4ನಾನೇ ನಿನ್ನೊಂದಿಗೆ ಐಗುಪ್ತಕ್ಕೆ ಬರುವೆನು; ಅಲ್ಲಿಂದ ನಿಶ್ಚಯವಾಗಿ ನಿನ್ನನ್ನು ಪುನಃ ಕರೆದುಕೊಂಡು ಬರುವೆನು; (ನಿನ್ನ ಅವಸಾನಕಾಲದಲ್ಲಿ) ನಿನ್ನ ಮರಣದ ಸಮಯದಲ್ಲಿ ಯೋಸೇಫನು ನಿನ್ನೊಂದಿಗೆ ಇದ್ದು ಸಂತೈಸುವನು” ಎಂದು ಹೇಳಿದನು. 5ಬಳಿಕ ಯಾಕೋಬನು ಬೇರ್ಷೆಬದಿಂದ ಹೊರಟನು. ಫರೋಹನು ಅವನನ್ನು ಕರೆದುಕೊಂಡು ಬರುವುದಕ್ಕೆ ಕಳುಹಿಸಿದ್ದ ರಥಗಳಲ್ಲಿ ಇಸ್ರಾಯೇಲನ ಮಕ್ಕಳು, ತಮ್ಮ ತಂದೆಯಾದ ಯಾಕೋಬನನ್ನೂ, ಹೆಂಡತಿ ಮಕ್ಕಳನ್ನೂ ಕುಳ್ಳಿರಿಸಿಕೊಂಡು ಹೊರಟರು. 6ಯಾಕೋಬನೂ, ಅವನ ಮನೆಯವರೆಲ್ಲರೂ ತಮ್ಮ ದನಕುರಿಗಳನ್ನೂ ತಾವು ಕಾನಾನ್ ದೇಶದಲ್ಲಿ ಸಂಪಾದಿಸಿಕೊಂಡಿದ್ದ ಸಂಪತ್ತುಗಳನ್ನೂ ತೆಗೆದುಕೊಂಡು ಐಗುಪ್ತ ದೇಶವನ್ನು ತಲುಪಿದರು. 7ಹೀಗೆ ಯಾಕೋಬನು ತನ್ನ ಗಂಡು ಹೆಣ್ಣು ಮಕ್ಕಳನ್ನೂ, ಮೊಮ್ಮಕ್ಕಳನ್ನೂ, ತನ್ನ ಮನೆಯವರೆಲ್ಲರನ್ನೂ ತನ್ನ ಸಂಗಡಲೇ ಐಗುಪ್ತ ದೇಶಕ್ಕೆ ಕರೆದುಕೊಂಡು ಹೋದನು.
ಸಂಧ್ಯಾ ಪ್ರಾರ್ಥನೆ: ವಾಚನ
15ಕಂದಾ, ನಿನ್ನ ಮನಸ್ಸಿಗೆ ಜ್ಞಾನವುಂಟಾದರೆ ನನ್ನ ಮನಸ್ಸಿಗೂ ಉಲ್ಲಾಸವಾಗುವುದು. 16ಹೌದು, ನಿನ್ನ ತುಟಿಗಳು ನೀತಿಯ ನುಡಿಗಳನ್ನಾಡಿದರೆ ನನ್ನ ಅಂತರಾತ್ಮವು ಹಿಗ್ಗುವುದು. 17ಪಾಪಿಗಳನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ, ಯೆಹೋವನಲ್ಲಿ ನಿರಂತರವಾಗಿ ಭಯಭಕ್ತಿಯುಳ್ಳವನಾಗಿರು. 18ಒಂದು ಕಾಲ ಉಂಟು, ನಿನ್ನ ನಿರೀಕ್ಷೆಯು ನಿರರ್ಥಕವಾಗದು. 19ಕಂದಾ, ಕೇಳು, ಜ್ಞಾನವಂತನಾಗಿರು, ನಿನ್ನ ಮನಸ್ಸನ್ನು ಜ್ಞಾನದ ಮಾರ್ಗದಲ್ಲಿ ಮುಂದೆ ನಡೆಯಿಸು. 20ಕುಡುಕರಲ್ಲಿಯೂ, ಅತಿಮಾಂಸಭಕ್ಷಕರಲ್ಲಿಯೂ ಸೇರದಿರು. 21ಕುಡುಕರು, ಹೊಟ್ಟೆಬಾಕರು ದುರ್ಗತಿಗೆ ಬರುವರು, ನಿದ್ರಾಸಕ್ತಿಯು ಹರಕು ಬಟ್ಟೆಗಳನ್ನು ಹೊದಿಸುವುದು. 22ಹೆತ್ತ ತಂದೆಯ ಮಾತಿಗೆ ಕಿವಿಗೊಡು, ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ. 23ಸತ್ಯವನ್ನು ಎಂದರೆ ಜ್ಞಾನ, ಸುಶಿಕ್ಷೆ, ವಿವೇಕಗಳನ್ನು ಕೊಂಡುಕೋ, ಮಾರಿ ಬಿಡಬೇಡ. 24ಧರ್ಮಿಯ ತಂದೆಯು ಅತಿ ಸಂತೋಷಪಡುವನು, ಜ್ಞಾನಿಯನ್ನು ಹೆತ್ತವನು ಅವನಲ್ಲಿ ಆನಂದಿಸುವನು. 25ನಿನ್ನ ತಂದೆತಾಯಿಗಳು ಉಲ್ಲಾಸಗೊಳ್ಳಲಿ, ನಿನ್ನನ್ನು ಹೆತ್ತವಳು ಆನಂದಪಡಲಿ. 26ಕಂದಾ, ನಿನ್ನ ಹೃದಯವನ್ನು ನನಗೆ ಕೊಡು, ನಿನ್ನ ಕಣ್ಣುಗಳು ನನ್ನ ಮಾರ್ಗಗಳಲ್ಲಿ ಆನಂದಿಸಲಿ. 27ಸೂಳೆಯು ಆಳವಾದ ಹಳ್ಳ, ಜಾರಸ್ತ್ರೀಯು ಇಕ್ಕಟ್ಟಾದ ಗುಂಡಿ. 28ಹೌದು, ಕಳ್ಳನಂತೆ ಹೊಂಚುಹಾಕುತ್ತಾಳೆ, ಜನರಲ್ಲಿ ದ್ರೋಹಿಗಳನ್ನು ಹೆಚ್ಚಿಸುತ್ತಾಳೆ. 29ಅಯ್ಯಯ್ಯೋ ಅನ್ನುವವರು ಯಾರು? ಅಕಟಾ ಎಂದು ಕೂಗಿಕೊಳ್ಳುವವರು ಯಾರು? ಯಾರು ಜಗಳವಾಡುತ್ತಾರೆ? ಯಾರು ಗೋಳಾಡುತ್ತಾರೆ? ಯಾರು ಸುಮ್ಮಸುಮ್ಮನೆ ಗಾಯಪಡುತ್ತಾರೆ? ಕೆಂಪೇರಿದ ಕಣ್ಣುಳ್ಳವರು ಯಾರು? 30ಅವರು ಮಿಶ್ರಮದ್ಯಪಾನಾಸಕ್ತರಾಗಿ, ದ್ರಾಕ್ಷಾರಸವನ್ನು ಕುಡಿಯುತ್ತಾ, ಕಾಲಹರಣಮಾಡುವವರೇ. 31ಪಾತ್ರೆಯಲ್ಲಿ ಕೆಂಪಗೆ ಥಳಥಳಿಸುವ ದ್ರಾಕ್ಷಾರಸದ ಮೇಲೆ ಕಣ್ಣಿಡಬೇಡ. ಅದು ಗಂಟಲಿನೊಳಗೆ ಮೆಲ್ಲಗೆ ಇಳಿದುಹೋಗಿ 32ಆಮೇಲೆ ಹಾವಿನಂತೆ ಕಚ್ಚುತ್ತದೆ, ಹೌದು, ನಾಗರ ಹಾವಿನ ಹಾಗೆ ಕಡಿಯುತ್ತದೆ. 33ನಿನ್ನ ಕಣ್ಣು ಇಲ್ಲದ್ದನ್ನೇ ಕಾಣುವುದು, ಮನಸ್ಸು ವಿಪರೀತಗಳನ್ನು ಹೊರಪಡಿಸುವುದು. 34ನೀನು ಸಮುದ್ರದ ನಡುವೆಯಾಗಲಿ, ಹಡಗಿನ ಕಂಬದ ತುದಿಯಲ್ಲಿಯಾಗಲಿ ಮಲಗಿರುವವನಂತೆ ಇರುವಿ. 35ಜನರು ನನ್ನನ್ನು ಹೊಡೆದರೂ ನೋವಾಗಲಿಲ್ಲ, ಬಡಿದರೂ ತಿಳಿಯಲಿಲ್ಲ, ಯಾವಾಗ ಎಚ್ಚೆತ್ತೇನು? ಪುನಃ ಅದನ್ನೇ ಹುಡುಕೇನು ಎಂದುಕೊಳ್ಳುವಿ. 24:1ಕೆಟ್ಟವರನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ, ಅವರ ಸಹವಾಸವನ್ನು ಬಯಸಬೇಡ. 2ಅವರ ಮನಸ್ಸು ಹಿಂಸೆಯನ್ನು ಯೋಚಿಸುತ್ತಿರುವುದು, ಅವರ ತುಟಿಯು ಹಾನಿಯನ್ನು ಪ್ರಸ್ತಾಪಿಸುತ್ತಿರುವುದು. 3ಮನೆಯನ್ನು ಕಟ್ಟುವುದಕ್ಕೆ ಜ್ಞಾನವೇ ಸಾಧನ, ಅದನ್ನು ಸ್ಥಿರಪಡಿಸುವುದಕ್ಕೆ ವಿವೇಕವೇ ಆಧಾರ, 4ಅದರ ಕೋಣೆಗಳನ್ನು ಅಮೂಲ್ಯವಾದ ಎಲ್ಲಾ, ಇಷ್ಟ ಸಂಪತ್ತಿನಿಂದ ತುಂಬಿಸುವುದಕ್ಕೆ, ತಿಳಿವಳಿಕೆಯೇ ಉಪಕರಣ. 5ಜ್ಞಾನಿಗೆ ತ್ರಾಣ, ಬಲ್ಲವನಿಗೆ ಬಹು ಬಲ.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 9 ಏಪ್ರಿಲ್ ಎಂದರೆ ನಾಗರಿಕ ಪಂಚಾಂಗದ 22 ಏಪ್ರಿಲ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು