ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 15 ಏಪ್ರಿಲ್
ಆರ್ಥೊಡಾಕ್ಸ್ ಪಂಚಾಂಗ · ಏಪ್ರಿಲ್ 2 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 15 ಏಪ್ರಿಲ್ 2027
ಗುರುವಾರ · ಮಹಾ ಉಪವಾಸದ ಐದನೆಯ ವಾರ · ಸ್ವರ 4
ಹಬ್ಬಗಳು ಮತ್ತು ಸಂತರು
ಕ್ರೇತದ ಸಂತ ಅಂದ್ರೆಯನ ಮಹಾ ಕ್ಯಾನನ್ ಸ್ತೋತ್ರ
ಮಹಾ ಉಪವಾಸ ಕಾಲ
ಉಪವಾಸ: ಎಣ್ಣೆಯೊಂದಿಗೆ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಆರನೆಯ ತಾಸು
5ಆಕಾಶಮಂಡಲವನ್ನು ಉಂಟುಮಾಡಿ ಹರಡಿ ಭೂಮಂಡಲವನ್ನೂ, ಅದರಲ್ಲಿನ ಉತ್ಪತ್ತಿಯನ್ನೂ ವಿಸ್ತರಿಸಿ ಲೋಕದ ಜನರಿಗೆ ಪ್ರಾಣವನ್ನು, ಹೌದು, ಭೂಜನರಿಗೆ ಜೀವಾತ್ಮವನ್ನೂ ದಯಪಾಲಿಸುವ ಯೆಹೋವನೆಂಬ ದೇವರು ಹೀಗೆನ್ನುತ್ತಾನೆ, 6“ಯೆಹೋವನೆಂಬ ನಾನು ನನ್ನ ಧರ್ಮದ ಸಂಕಲ್ಪಾನುಸಾರವಾಗಿ ನಿನ್ನನ್ನು ಕೈಹಿಡಿದು, ಕಾಪಾಡಿ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ, ಅನ್ಯಜನಗಳಿಗೆ ಬೆಳಕನ್ನಾಗಿಯೂ ನೇಮಿಸಿದ್ದೇನೆ. 7ನೀನು ಕುರುಡರಿಗೆ ಕಣ್ಣುಕೊಟ್ಟು, ಬಂದಿಗಳನ್ನು ಸೆರೆಯಿಂದಲೂ, ಕತ್ತಲಲ್ಲಿ ಬಿದ್ದವರನ್ನು ಕಾರಾಗೃಹದಿಂದಲೂ ಹೊರಗೆ ತರುವಿ. 8ನಾನೇ ಯೆಹೋವನು; ಇದೇ ನನ್ನ ನಾಮವು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು, ನನ್ನ ಸ್ತೋತ್ರವನ್ನು ವಿಗ್ರಹಗಳ ಪಾಲು ಮಾಡೆನು. 9ಇಗೋ ಮೊದಲನೆಯ ಸಂಗತಿಗಳು ನೆರವೇರಿವೆ, ಹೊಸ ಸಂಗತಿಗಳನ್ನು ಪ್ರಕಟಿಸುತ್ತೇನೆ. ಅವು ತಲೆದೋರುವುದಕ್ಕೆ ಮೊದಲು ಅವುಗಳನ್ನು ನಿಮಗೆ ತಿಳಿಸುತ್ತೇನೆ.” 10ಸಮುದ್ರಪ್ರಯಾಣಿಕರೇ, ಸಕಲಜಲಚರಗಳೇ, ದ್ವೀಪಾಂತರಗಳೇ, ದ್ವೀಪಾಂತರವಾಸಿಗಳೇ, ಯೆಹೋವನ ಘನತೆಗಾಗಿ ನೂತನ ಗೀತೆಯನ್ನು ಹಾಡಿ ದಿಗಂತಗಳಲ್ಲಿಯೂ ಆತನನ್ನು ಕೀರ್ತಿಸಿರಿ. 11ಅರಣ್ಯವೂ, ಅಲ್ಲಿನ ಊರುಗಳೂ, ಕೇದಾರಿನವರು ವಾಸಿಸುವ ಗ್ರಾಮಗಳೂ ಆರ್ಭಟಿಸಲಿ, ಸೆಲ ಪಟ್ಟಣದವರು ಹರ್ಷಧ್ವನಿಗೈದು ಪರ್ವತಾಗ್ರಗಳಲ್ಲಿ ಜಯಘೋಷ ಮಾಡಿರಿ. 12ಯೆಹೋವನನ್ನು ಘನಪಡಿಸಿ ದ್ವೀಪಾಂತರಗಳಲ್ಲಿ ಆತನ ಸ್ತೋತ್ರವನ್ನು ಹಬ್ಬಿಸಲಿ. 13ಯೆಹೋವನು ಶೂರನಂತೆ ಹೊರಟು, ಯುದ್ಧವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸುವನು. ಆರ್ಭಟಿಸಿ ಗರ್ಜಿಸಿ ಶತ್ರುಗಳ ಮೇಲೆ ಬಿದ್ದು ತನ್ನ ಪರಾಕ್ರಮವನ್ನು ತೋರ್ಪಡಿಸುವನು. 14ನಾನು ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನು ಬಿಗಿ ಹಿಡಿದಿದ್ದೆನು. ಈಗ ಹೆರುವವಳಂತೆ ಕೂಗುವೆನು. ನಿಟ್ಟುಸಿರಿನೊಡನೆ ಏದುವೆನು. 15ಬೆಟ್ಟಗುಡ್ಡಗಳನ್ನು ನಾಶಪಡಿಸಿ ಅಲ್ಲಿಯ ಮೇವನ್ನೆಲ್ಲಾ ಒಣಗಿಸಿ, ನದಿಗಳನ್ನು ಒಣ ದಿಣ್ಣೆಮಾಡಿ ಕೆರೆಗಳನ್ನು ಬತ್ತಿಸುವೆನು. 16ಕುರುಡರನ್ನು ತಿಳಿಯದ ಮಾರ್ಗದಲ್ಲಿ ಬರಮಾಡುವೆನು, ಅವರಿಗೆ ಗೊತ್ತಿಲ್ಲದ ದಾರಿಗಳಲ್ಲಿ ಅವರನ್ನು ನಡೆಸುವೆನು, ಅವರೆದುರಿಗೆ ಕತ್ತಲನ್ನು ಬೆಳಕುಮಾಡಿ, ಡೊಂಕನ್ನು ಸರಿಪಡಿಸುವೆನು. ಈ ಕಾರ್ಯಗಳನ್ನು ಬಿಡದೆ ಮಾಡುವೆನು. ನಾನು ಅವರನ್ನು ಕೈ ಬಿಡುವುದಿಲ್ಲ.
ಸಂಧ್ಯಾ ಪ್ರಾರ್ಥನೆ: ವಾಚನ
20ಇದಲ್ಲದೆ ಯೆಹೋವನು, “ಸೊದೋಮ್ ಗೊಮೋರಗಳ ದೊಡ್ಡ ಮೊರೆ ನನಗೆ ಮುಟ್ಟಿತು; ಆ ಊರಿನವರ ಮೇಲೆ ಹೊರಿಸಿರುವ ಪಾಪವು ಎಷ್ಟೋ ಘೋರವಾದದ್ದು, 21ನಾನು ಇಳಿದು ಹೋಗಿ, ನನಗೆ ಮುಟ್ಟಿದ ಮೊರೆಯಂತೆಯೇ ಅವರು ಮಾಡಿರುವರೋ ಇಲ್ಲವೋ ಎಂದು ನೋಡಿ ತಿಳಿದುಕೊಳ್ಳುತ್ತೇನೆ” ಎಂದನು. 22ಆ ಮನುಷ್ಯರು ಅಲ್ಲಿಂದ ಸೊದೋಮಿನ ಕಡೆಗೆ ಹೋದರು; ಆದರೆ ಅಬ್ರಹಾಮನು ಯೆಹೋವನಿಗೆ ಎದುರಾಗಿ ಇನ್ನೂ ನಿಂತುಕೊಂಡಿದ್ದನು. 23ಆಗ ಅಬ್ರಹಾಮನು ಹತ್ತಿರಕ್ಕೆ ಬಂದು, “ನೀನು ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡುವಿಯಾ? 24ಒಂದು ವೇಳೆ ಆ ಪಟ್ಟಣದೊಳಗೆ ಐವತ್ತು ಮಂದಿ ನೀತಿವಂತರಿದ್ದಾರು; ಅದರಲ್ಲಿ ಐವತ್ತು ಮಂದಿ ನೀತಿವಂತರಿದ್ದರೂ ಆ ಸ್ಥಳವನ್ನು ಉಳಿಸದೆ ನಾಶಮಾಡುವಿಯಾ? 25ಆ ರೀತಿಯಾಗಿ ದುಷ್ಟರಿಗೂ ಶಿಷ್ಟರಿಗೂ ಭೇದ ಮಾಡದೆ ದುಷ್ಟರ ಸಂಗಡ ನೀತಿವಂತರನ್ನೂ ಸಂಹರಿಸುವುದು ನಿನ್ನಿಂದ ಎಂದಿಗೂ ಆಗಬಾರದು; ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ” ಎಂದು ಹೇಳಲು. 26ಯೆಹೋವನು, “ಸೊದೋಮನಲ್ಲಿ ಐವತ್ತು ಮಂದಿ ನೀತಿವಂತರು ನನಗೆ ಸಿಕ್ಕಿದರೆ ಅವರ ನಿಮಿತ್ತ ಪಟ್ಟಣವನ್ನೆಲ್ಲಾ ಉಳಿಸುವೆನು” ಎಂದನು. 27ಅದಕ್ಕೆ ಅಬ್ರಹಾಮನು, “ಇಗೋ, ಮಣ್ಣೂ ಬೂದಿಯೂ ಆಗಿರುವ ನಾನು ಸ್ವಾಮಿಯ ಸಂಗಡ ವಾದಿಸುವುದಕ್ಕೆ ಧೈರ್ಯಗೊಂಡಿದ್ದೇನೆ; 28ಒಂದು ವೇಳೆ ಐವತ್ತು ಮಂದಿ ನೀತಿವಂತರಲ್ಲಿ ಐದು ಮಂದಿ ಕಡಿಮೆ ಇದ್ದರೆ ಪಟ್ಟಣವನ್ನೆಲ್ಲಾ ನಾಶ ಮಾಡುವಿಯಾ?” ಎಂದು ಕೇಳಲು ಯೆಹೋವನು, “ಅಲ್ಲಿ ನಲ್ವತ್ತೈದು ಮಂದಿ ನೀತಿವಂತರು ಸಿಕ್ಕಿದರೆ ಅದನ್ನು ನಾಶ ಮಾಡುವುದಿಲ್ಲ” ಅಂದನು. 29ಅಬ್ರಹಾಮನು ಆತನ ಸಂಗಡ ಇನ್ನೂ ಮಾತನಾಡಿ, “ಒಂದು ವೇಳೆ ಅಲ್ಲಿ ನಲ್ವತ್ತು ಮಂದಿ ಸಿಕ್ಕಾರು” ಎನ್ನಲು ಆತನು, “ನಲ್ವತ್ತು ಮಂದಿ ಸಿಕ್ಕಿದರೆ ಆ ಪಟ್ಟಣವನ್ನು ನಾಶ ಮಾಡುವುದಿಲ್ಲ” ಎಂದನು. 30ಅಬ್ರಹಾಮನು, “ಕರ್ತನೇ, ಕೋಪಮಾಡಬಾರದು; ಇನ್ನೂ ಮಾತನಾಡುತ್ತೇನೆ; ಒಂದು ವೇಳೆ ಮೂವತ್ತು ಮಂದಿ ಅಲ್ಲಿ ಸಿಕ್ಕಾರು” ಎನ್ನಲು ಆತನು, “ಅಲ್ಲಿ ಮೂವತ್ತು ಮಂದಿ ಸಿಕ್ಕಿದರೆ ಅದನ್ನು ನಾಶ ಮಾಡುವುದಿಲ್ಲ” ಅಂದನು. 31ಅವನು, “ಇಗೋ, ಸ್ವಾಮಿಯ ಸಂಗಡ ಮಾತನಾಡುವುದಕ್ಕೆ ಧೈರ್ಯಗೊಂಡಿದ್ದೇನೆ; ಒಂದು ವೇಳೆ ಇಪ್ಪತ್ತು ಮಂದಿ ಅಲ್ಲಿ ಸಿಕ್ಕಾರು” ಎನ್ನಲು ಆತನು, “ಇಪ್ಪತ್ತು ಮಂದಿಯಿದ್ದರೆ ಅವರ ನಿಮಿತ್ತ ಆ ಪಟ್ಟಣವನ್ನು ಉಳಿಸುವೆನು, ನಾಶ ಮಾಡುವುದಿಲ್ಲ” ಅಂದನು. 32ಅಬ್ರಹಾಮನು, “ಕರ್ತನೇ, ಸಿಟ್ಟಾಗಬಾರದು; ಇನ್ನು ಒಂದೇ ಸಾರಿ ಮಾತನಾಡುತ್ತೇನೆ; ಒಂದು ವೇಳೆ ಹತ್ತು ಮಂದಿ ಸಿಕ್ಕಾರು” ಎನ್ನಲು ಆತನು, “ಹತ್ತು ಮಂದಿಯ ನಿಮಿತ್ತವೂ ಅದನ್ನು ಉಳಿಸುವೆನು, ನಾಶ ಮಾಡುವುದಿಲ್ಲ.” ಎಂದನು. 33ಯೆಹೋವನು ಅಬ್ರಹಾಮನ ಸಂಗಡ ಮಾತನಾಡುವುದನ್ನು ನಿಲ್ಲಿಸಿ ಅಲ್ಲಿಂದ ಹೊರಟು ಹೋದನು; ಅಬ್ರಹಾಮನು ತನ್ನ ಸ್ಥಳಕ್ಕೆ ಹಿಂದಿರುಗಿ ಹೋದನು.
ಸಂಧ್ಯಾ ಪ್ರಾರ್ಥನೆ: ವಾಚನ
17ಸತ್ಯವಂತನ ರಾಜಮಾರ್ಗ ಹಾನಿಗೆ ದೂರ, ತನ್ನ ನಡತೆಯನ್ನು ಗಮನಿಸುವವನು ತನ್ನ ಆತ್ಮವನ್ನು ಕಾಯುವನು. 18ಗರ್ವದಿಂದ ಭಂಗ, ಉಬ್ಬಿನಿಂದ ದೊಬ್ಬು. 19ಸೊಕ್ಕಿನವರ ಸಂಗಡ ಸೂರೆಯನ್ನು ಹಂಚಿಕೊಳ್ಳುವುದಕ್ಕಿಂತಲೂ, ದೀನರ ಸಂಗಡ ದೈನ್ಯದಿಂದಿರುವುದು ವಾಸಿ. 20ದೇವರ ವಾಕ್ಯವನ್ನು ಸ್ಮರಿಸುವವನು ಸುಕ್ಷೇಮವನ್ನು ಪಡೆಯುವನು, ಯೆಹೋವನಲ್ಲಿ ಭರವಸವಿಡುವವನು ಭಾಗ್ಯವಂತನು. 21ಜ್ಞಾನಹೃದಯರಿಗೆ ಜಾಣರೆಂಬ ಬಿರುದು ಬರುವುದು, ಸವಿತುಟಿಯಿಂದ ಉಪದೇಶ ಶಕ್ತಿಯು ಹೆಚ್ಚುವುದು. 22ವಿವೇಕಿಗೆ ವಿವೇಕವೇ ಜೀವದ ಬುಗ್ಗೆ, ಮೂರ್ಖನಿಗೆ ಮೂರ್ಖತನವೇ ದಂಡನೆ. 23ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ, ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವುದು. 24ಸವಿನುಡಿಯು ಜೇನುಕೊಡ, ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ. 25ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು, ಕಟ್ಟಕಡೆಗೆ ಅದು ಮರಣಮಾರ್ಗವೇ. 26ದುಡಿಯುವವನಿಗೆ ಅವನ ಹೊಟ್ಟೆಯೇ ದುಡಿಯುವಂತೆ ಮಾಡುವುದು, ದುಡಿಯಲಿಕ್ಕೆ ಅವನ ಬಾಯೇ ಅವನನ್ನು ಒತ್ತಾಯ ಮಾಡುವುದು. 27ನೀಚನು ಕೇಡೆಂಬ ಕುಣಿಯನ್ನು ತೋಡುತ್ತಾನೆ, ಅವನ ಮಾತುಗಳು ಬೆಂಕಿಯ ಉರಿಯಂತಿದೆ. 28ತುಂಟನು ಜಗಳ ಬಿತ್ತುತ್ತಾನೆ, ಚಾಡಿಕೋರನು ಮಿತ್ರರನ್ನು ಅಗಲಿಸುತ್ತಾನೆ. 29ಬಲಾತ್ಕಾರಿಯು ನೆರೆಯವನನ್ನು ಮರುಳುಗೊಳಿಸಿ, ದುರ್ಮಾರ್ಗಕ್ಕೆ ಎಳೆಯುವನು. 30ಕಣ್ಣನ್ನು ಮುಚ್ಚಿಕೊಳ್ಳುವವನು ಕುಯುಕ್ತಿಯನ್ನು ಕಲ್ಪಿಸುವನು, ತುಟಿಯನ್ನು ಕಚ್ಚುವವನು ಕೇಡನ್ನು ಸಾಧಿಸುವನು. 31ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವುದು. 32ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ, ತನ್ನನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಬಲಿಷ್ಠ. 33ಮಡಲಿನಲ್ಲಿ ಚೀಟು ಹಾಕಬಹುದು, ಅದರ ತೀರ್ಪು ಯೆಹೋವನದೇ. 17:1ವ್ಯಾಜ್ಯದ ಮನೆಯಲ್ಲಿ ತುಂಬಿದ ಔತಣಕ್ಕಿಂತಲೂ, ಸಮಾಧಾನದ ಒಣತುತ್ತೇ ಮೇಲು. 2ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರಮಾಡುವನು, ಮನೆಮಕ್ಕಳೊಂದಿಗೆ ಬಾಧ್ಯತೆಯನ್ನು ಹೊಂದುವನು. 3ಬೆಳ್ಳಿಬಂಗಾರಗಳನ್ನು ಪುಟಕುಲಿಮೆಗಳು ಶೋಧಿಸುವವು, ಹೃದಯಗಳನ್ನು ಶೋಧಿಸುವವನು ಯೆಹೋವನೇ. 4ಕೆಡುಕನು ಕೆಟ್ಟ ತುಟಿಗಳನ್ನು ಗಮನಿಸುವನು, ಸುಳ್ಳುಗಾರನು ನಾಶನದ ನಾಲಿಗೆಗೆ ಕಿವಿಗೊಡುವನು. 5ಬಡವರನ್ನು ಹಾಸ್ಯಮಾಡುವವನು ಸೃಷ್ಟಿಕರ್ತನನ್ನೇ ಹೀನೈಸುವನು, ಪರರ ವಿಪತ್ತಿಗೆ ಹಿಗ್ಗುವವನು ದಂಡನೆಯನ್ನು ಹೊಂದದಿರನು. 6ಮಕ್ಕಳ ಸಂತತಿಯವರು ವೃದ್ಧರಿಗೆ ಕಿರೀಟ, ತಂದೆತಾಯಿಗಳು ಮಕ್ಕಳಿಗೆ ಭೂಷಣ. 7ಉತ್ತಮವಾದ ಮಾತು ಮೂರ್ಖನಿಗೆ ಅಯುಕ್ತ, ಸುಳ್ಳುಮಾತು ಉತ್ತಮನಿಗೆ ಮತ್ತೂ ಅಯುಕ್ತ. 8ಕೊಡುವವನ ದೃಷ್ಟಿಗೆ ಲಂಚವು ಚಿಂತಾಮಣಿಯಾಗಿದೆ, ಎಲ್ಲಿ ಹೋದರೂ ಅವನಿಗೆ ಅನುಕೂಲವೇ. 9ದೋಷವನ್ನು ಮುಚ್ಚಿಡುವವನು ಪ್ರೇಮವನ್ನು ಸೆಳೆಯುವನು, ಎತ್ತಿ ಆಡುತ್ತಿರುವವನು ಸ್ನೇಹವನ್ನು ಕಳೆದುಕೊಳ್ಳುವನು. 10ಮಂದಮತಿಗೆ ನೂರು ಪೆಟ್ಟು ಹೊಡೆಯುವುದಕ್ಕಿಂತಲೂ, ಗದರಿಕೆಯೇ ವಿವೇಕಿಗೆ ಹೆಚ್ಚಾದ ಶಿಕ್ಷೆ. 11ದುರಾತ್ಮನಿಗೆ ದಂಗೆಯ ಮೇಲೆಯೇ ಮನಸ್ಸು, ಕ್ರೂರದೂತನು ಅವನನ್ನು ಆಕ್ರಮಿಸುವನು. 12ಮೂರ್ಖತನದಲ್ಲಿ ಮುಳುಗಿರುವ ಮೂಢನನ್ನು ಎದುರಾಗುವುದಕ್ಕಿಂತಲೂ, ಮರಿಗಳನ್ನು ಕಳೆದುಕೊಂಡ ಕರಡಿಯನ್ನು ಎದುರಾಗುವುದು ಲೇಸು. 13ಉಪಕಾರಕ್ಕೆ ಅಪಕಾರಮಾಡುವವನ ಮನೆಗೆ ಕೇಡು ತಪ್ಪದು. 14ವ್ಯಾಜ್ಯದ ಆರಂಭವು ಏರಿಗೆ ಬಿಲಬಿದ್ದಂತೆ, ಸಿಟ್ಟೇರುವುದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು. 15ದುಷ್ಟನನ್ನು ಶಿಷ್ಟನೆಂದು, ಶಿಷ್ಟನನ್ನು ದುಷ್ಟನೆಂದು ನಿರ್ಣಯಿಸುವವರಿಬ್ಬರೂ ಯೆಹೋವನಿಗೆ ಅಸಹ್ಯರು. 16ಜ್ಞಾನವನ್ನು ಕೊಳ್ಳಲು ಮೂಢನ ಕೈಯಲ್ಲಿ ಹಣವೇಕೆ? ಅವನಿಗೆ ಬುದ್ಧಿಯೇ ಇಲ್ಲವಲ್ಲಾ. 17ಮಿತ್ರನ ಪ್ರೀತಿಯು ನಿರಂತರ, ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 2 ಏಪ್ರಿಲ್ ಎಂದರೆ ನಾಗರಿಕ ಪಂಚಾಂಗದ 15 ಏಪ್ರಿಲ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು