ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 15 ಏಪ್ರಿಲ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 15 ಏಪ್ರಿಲ್ 2027
ಗುರುವಾರ · ಪಾಸ್ಕ ಕಾಲದ ಮೂರನೆಯ ವಾರ
ಹಬ್ಬಗಳು ಮತ್ತು ಸಂತರು
ಪಾಸ್ಕ ಕಾಲದ ಮೂರನೆಯ ವಾರದ ಗುರುವಾರ
ವಾರದ ದಿನ · ಆರಾಧನಾ ಬಣ್ಣ: ಬಿಳಿ
ದಿನದ ವಾಚನಗಳು
ಮೊದಲನೆಯ ವಾಚನ
26ಅಷ್ಟರಲ್ಲಿ ಕರ್ತನ ದೂತನು ಫಿಲಿಪ್ಪನಿಗೆ, “ನೀನು ಎದ್ದು ದಕ್ಷಿಣದ ಕಡೆಗೆ ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ದಾರಿಯಲ್ಲಿ ಹೋಗು, ಅದು ಅಡವಿ” ಎಂದು ಹೇಳಿದನು. 27ಅವನು ಎದ್ದು ಹೊರಟು ಹೋಗುತ್ತಿರುವಾಗ ಇಥಿಯೋಪ್ಯ ದೇಶದ ಒಬ್ಬ ಮನುಷ್ಯನನ್ನು ಕಂಡನು. ಅವನು ಕಂಚುಕಿಯೂ ಇಥಿಯೋಪ್ಯದವರ ರಾಣಿಯಾಗಿದ್ದ ಕಂದಾಕೆಯ ಕೈಕೆಳಗೆ ದೊಡ್ಡ ಅಧಿಕಾರಿಯೂ ಹಾಗೂ ಆಕೆಯ ಎಲ್ಲಾ ಖಜಾನೆಯ ಮೇಲ್ವಿಚಾರಕನೂ ಆಗಿದ್ದನು. 28ಅವನು ದೇವಾರಾಧನೆಗೋಸ್ಕರ ಯೆರೂಸಲೇಮಿಗೆ ಬಂದು ಹಿಂತಿರುಗಿ ಹೋಗುವಾಗ ತನ್ನ ರಥದಲ್ಲಿ ಕುಳಿತುಕೊಂಡು ಪ್ರವಾದಿ ಯೆಶಾಯನ ಗ್ರಂಥವನ್ನು ಓದುತ್ತಿದ್ದನು. 29ದೇವರಾತ್ಮನು ಫಿಲಿಪ್ಪನಿಗೆ, “ನೀನು ಆ ರಥದ ಹತ್ತಿರ ಹೋಗಿ ಅದರೊಂದಿಗೆ ಸೇರಿ ನಡೆ” ಎಂದು ಹೇಳಿದನು. 30ಫಿಲಿಪ್ಪನು ಓಡಿಹೋಗಿ ಆ ಮನುಷ್ಯನು ಪ್ರವಾದಿಯಾದ ಯೆಶಾಯನ ಗ್ರಂಥವನ್ನು ಓದುತ್ತಿರುವುದನ್ನು ಕೇಳಿ, “ಎಲೈ, ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೋ?” ಎಂದು ಕೇಳಿದನು. 31ಅದಕ್ಕೆ ಅವನು, “ಯಾರಾದರೂ ನನಗೆ ಅರ್ಥ ತಿಳಿಸಿಕೊಡದ ಹೊರತು ಅದು ನನಗೆ ಹೇಗೆ ತಿಳಿದೀತು?” ಎಂದು ಹೇಳಿ, ನೀನು ರಥವನ್ನು ಹತ್ತಿ ನನ್ನ ಬಳಿಯಲ್ಲಿ ಕುಳಿತುಕೋ ಎಂಬುದಾಗಿ ಫಿಲಿಪ್ಪನನ್ನು ಕೇಳಿಕೊಂಡನು. 32ಅವನು ಓದುತ್ತಿದ್ದ ಶಾಸ್ತ್ರವಚನವು ಯಾವುದೆಂದರೆ, “ವಧಿಸುವಸ್ಥಾನಕ್ಕೆ ಒಯ್ಯಲ್ಪಡುವ ಕುರಿಮರಿಯಂತೆ ಆತನು ಒಯ್ಯಲ್ಪಟ್ಟನು; ಮತ್ತು ಕುರಿಮರಿಯು ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವಂತೆ ಆತನು ಬಾಯಿ ತೆರೆಯದೆ ಮೌನವಾಗಿದ್ದನು. 33ಆತನಿಗಾದ ಅವಮಾನದ ನ್ಯಾಯವಿಚಾರಣೆಯಲ್ಲಿ ಆತನಿಗೆ ನ್ಯಾಯ ಸಿಗಲಿಲ್ಲ. ಆತನ ಪೀಳಿಗೆಯ ಕುರಿತಾಗಿ ಯಾರು ವಿವರಿಸಬಲ್ಲರು? ಆತನ ಜೀವವನ್ನು ಭೂಮಿಯಿಂದ ತೆಗೆದುಬಿಟ್ಟರಲ್ಲಾ” ಎಂಬುದೇ. 34ಕಂಚುಕಿಯು ಈ ವಚನವನ್ನು ಕುರಿತು, “ಪ್ರವಾದಿಯು ಇದನ್ನು ಯಾರ ಬಗ್ಗೆ ಹೇಳಿದ್ದಾನೆ? ತನ್ನನ್ನು ಕುರಿತೋ ಅಥವಾ ಮತ್ತೊಬ್ಬನ ವಿಷಯದಲ್ಲಿಯೋ?” ದಯಮಾಡಿ ಹೇಳಬೇಕು ಎಂದು ಫಿಲಿಪ್ಪನನ್ನು ಕೇಳಲು 35ಫಿಲಿಪ್ಪನು ಬೋಧಿಸುವುದಕ್ಕೆ ತೊಡಗಿ ಅದೇ ವಚನವನ್ನು ಆಧಾರಮಾಡಿಕೊಂಡು ಅವನಿಗೆ ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸಿದನು. 36ಅವರು ದಾರಿಯಲ್ಲಿ ಹೋಗುತ್ತಿರುವಾಗ ನೀರಿರುವ ಜಾಗಕ್ಕೆ ಬಂದರು. 37ಕಂಚುಕಿಯು, “ಆಗೋ, ನೀರು; ನನಗೆ ದೀಕ್ಷಾಸ್ನಾನವಾಗುವುದಕ್ಕೆ ಅಡ್ಡಿ ಏನು?” ಎಂದು ಹೇಳಿ ರಥವನ್ನು ನಿಲ್ಲಿಸು ಎಂದು ಅಪ್ಪಣೆ ಕೊಟ್ಟನು; 38ಫಿಲಿಪ್ಪನು ಕಂಚುಕಿಯು ಇಬ್ಬರೂ ನೀರಿನೊಳಗೆ ಇಳಿದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು. 39ಅವರು ನೀರನ್ನು ಬಿಟ್ಟು ಮೇಲಕ್ಕೆ ಬಂದಾಗ ಕರ್ತನ ಆತ್ಮ ಫಿಲಿಪ್ಪನನ್ನು ಎತ್ತಿಕೊಂಡು ಹೋಗಲಾಗಿ ಆ ಕಂಚುಕಿಯು ಫಿಲಿಪ್ಪನನ್ನು ಪುನಃ ಕಾಣಲಿಲ್ಲ. ಅವನು ಸಂತೋಷವುಳ್ಳವನಾಗಿ ತನ್ನ ಪ್ರಯಾಣವನ್ನು ಮುಂದುವರಿಸಿದನು. 40ತರುವಾಯ ಫಿಲಿಪ್ಪನು ಅಜೋತ್ ಎಂಬಲ್ಲಿ ಕಾಣಿಸಿಕೊಂಡು ಅಲ್ಲಿಂದ ಕೈಸರೈಯದ ತನಕ ಎಲ್ಲಾ ಊರುಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಹೋದನು.
ಪ್ರತಿವಚನ ಕೀರ್ತನೆ
8ಜನಾಂಗಗಳೇ, ನಮ್ಮ ದೇವರನ್ನು ವಂದಿಸಿರಿ; ಆತನನ್ನು ಸ್ತುತಿಸುವ ಧ್ವನಿ ಕೇಳಿಸಲಿ. 9ಆತನು ನಮ್ಮನ್ನು ಜೀವದಿಂದುಳಿಸಿ, ನಮ್ಮ ಕಾಲುಗಳನ್ನು ಜಾರದಂತೆ ಕಾಪಾಡಿದನು. 16ಎಲ್ಲಾ ದೇವಭಕ್ತರೇ, ಬಂದು ಕೇಳಿರಿ; ಆತನು ನನಗಾಗಿ ಮಾಡಿದ್ದೆಲ್ಲವನ್ನು ನಿಮಗೆ ತಿಳಿಸುವೆನು. 17ನನ್ನ ಮೊರೆಯೊಡನೆ ಕೃತಜ್ಞತಾಸ್ತುತಿಯೂ ನನ್ನ ನಾಲಿಗೆಯ ಮೇಲಿತ್ತು. 20ಆತನು ನನ್ನ ಬಿನ್ನಹವನ್ನು ತಿರಸ್ಕರಿಸಲಿಲ್ಲ; ನನ್ನ ಮೇಲಿನ ತನ್ನ ದಯೆಯನ್ನು ತಪ್ಪಿಸಿಬಿಡಲಿಲ್ಲ. ದೇವರಿಗೆ ಸ್ತೋತ್ರವಾಗಲಿ.
ಸುವಾರ್ತೆ
44“ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಸೆಳೆಯದ ಹೊರತು, ಯಾವನೂ ನನ್ನ ಬಳಿಗೆ ಬರಲಾರನು, ಮತ್ತು ನಾನು ಅವನನ್ನು ಕಡೆ ದಿನದಲ್ಲಿ ಎಬ್ಬಿಸುವೆನು. 45‘ಅವರೆಲ್ಲರೂ ದೇವರಿಂದಲೇ ಬೋಧಿಸಲ್ಪಡುವರು’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬನೂ ನನ್ನ ಬಳಿಗೆ ಬರುತ್ತಾರೆ. 46ದೇವರಿಂದ ಬಂದವನೊಬ್ಬನೇ ತಂದೆಯನ್ನು ನೋಡಿದ್ದಾನೆಯೇ ಹೊರತು ಮತ್ಯಾರು ತಂದೆಯನ್ನು ನೋಡಿಲ್ಲ; ಆತನೊಬ್ಬನೇ ತಂದೆಯನ್ನು ನೋಡಿದವನು. 47ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ. 48ನಾನೇ ಜೀವದ ರೊಟ್ಟಿ 49ನಿಮ್ಮ ಪೂರ್ವಿಕರು ಅಡವಿಯಲ್ಲಿ ಮನ್ನಾ ತಿಂದರೂ ಸತ್ತು ಹೋದರು. 50ಪರಲೋಕದಿಂದ ಇಳಿದು ಬರುವಂಥ ಆ ರೊಟ್ಟಿ, ಎಂಥದೆಂದರೆ ಅದನ್ನು ತಿಂದವನು ಎಂದಿಗೂ ಸಾಯುವುದಿಲ್ಲ. 51ನಾನೇ ಪರಲೋಕದಿಂದ ಇಳಿದು ಬಂದ ಜೀವವುಳ್ಳ ರೊಟ್ಟಿ. ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾ ಕಾಲವು ಬದುಕುವನು; ಮತ್ತು ನಾನು ಕೊಡುವ ರೊಟ್ಟಿ ನನ್ನ ದೇಹವೇ, ಅದನ್ನು ಲೋಕದ ಜೀವಕ್ಕಾಗಿ ಕೊಡುವೆನು” ಎಂದು ಹೇಳಿದನು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು