Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 14 ಏಪ್ರಿಲ್

ಆರ್ಥೊಡಾಕ್ಸ್ ಪಂಚಾಂಗ · ಏಪ್ರಿಲ್ 1 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 14 ಏಪ್ರಿಲ್ 2027

ಬುಧವಾರ · ಮಹಾ ಉಪವಾಸದ ಐದನೆಯ ವಾರ · ಸ್ವರ 4

ಹಬ್ಬಗಳು ಮತ್ತು ಸಂತರು

Venerable Mary of Egypt

ಮಹಾ ಉಪವಾಸ ಕಾಲ

ಉಪವಾಸ: ಎಣ್ಣೆಯೊಂದಿಗೆ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಆರನೆಯ ತಾಸು

ಯೆಶಾ 41:4–14

4ಇದನ್ನೆಲ್ಲಾ ನಡೆಸಿ ನೆರವೇರಿಸಿದವನು ಯಾರು? ಆದಿಯಿಂದ ಈಗಿನವರೆಗೂ ತಲತಲಾಂತರಗಳನ್ನು ಬರಮಾಡುವವನಾದ ಯೆಹೋವನೆಂಬ ನಾನೇ; ಹೌದು, ಆದಿಪುರುಷನೂ, ಅಂತ್ಯಕಾಲದವರ ಸಂಗಡಿಗನೂ ಆಗಿರುವ ನಾನೊಬ್ಬನೇ. 5ದ್ವೀಪ ನಿವಾಸಿಗಳು ಕಂಡು ಬೆರಗಾದರು, ಭೂಮಿಯ ಕಟ್ಟ ಕಡೆಯವರು ನಡುಗಿದರು, ಎಲ್ಲರೂ ನೆರೆದು ಬಂದರು. 6ಒಬ್ಬರಿಗೊಬ್ಬರು ಸಹಾಯಮಾಡಿದರು, ಪ್ರತಿಯೊಬ್ಬನು ತನ್ನ ಸಹೋದರನಿಗೆ, “ಧೈರ್ಯವಾಗಿರು” ಎಂದು ಹೇಳಿದನು. 7ಹಾಗೆಯೇ ಶಿಲ್ಪಿಯು ಎರಕದವನನ್ನೂ, ಸುತ್ತಿಗೆಯಿಂದ ಸಮಮಾಡುವವನು ಅಡಿಗಲ್ಲಿನ ಮೇಲೆ ಕುಟ್ಟುವವನನ್ನೂ ಪ್ರೋತ್ಸಾಹಗೊಳಿಸಿದರು. “ಬೆಸಿಗೆ ಚೆನ್ನಾಗಿದೆ” ಎಂದು ಹೇಳಿ ವಿಗ್ರಹವನ್ನು ಕದಲದಂತೆ ಮೊಳೆಗಳಿಂದ ಜಡಿದರು. 8ನನ್ನ ಸೇವಕನಾದ ಇಸ್ರಾಯೇಲೇ, ನಾನು ಆರಿಸಿಕೊಂಡ ಯಾಕೋಬೇ, ನನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೇ, 9ನಾನು ಭೂಮಿಯ ಕಟ್ಟಕಡೆಯಲ್ಲಿ ಹಿಡಿದು ದಿಗಂತಗಳಿಂದ ಕರೆದ ಜನವೇ, “ನೀನು ನನ್ನ ಸೇವಕನು, ನಾನು ನಿನ್ನನ್ನು ಆರಿಸಿಕೊಂಡೆನು, ತಳ್ಳಲಿಲ್ಲ” ಎಂದು ನಾನು ಹೇಳಿ ಸಂಬೋಧಿಸಿದ ಪ್ರಜೆಯೇ, 10ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ, ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು. ನಾನು ನಿನ್ನನ್ನು ಬಲಪಡಿಸುತ್ತೇನೆ. ಹೌದು, ನಿನಗೆ ಸಹಾಯಮಾಡುತ್ತೇನೆ. ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ. 11ಆಹಾ, ನಿನ್ನ ಮೇಲೆ ಕಿಡಿಕಿಡಿಯಾದವರು ಆಶಾಭಂಗಪಟ್ಟು ಅವಮಾನಹೊಂದುವರು, ನಿನ್ನ ಸಂಗಡ ವ್ಯಾಜ್ಯವಾಡಿದವರು ನಾಶವಾಗಿ ಇಲ್ಲದೆ ಹೋಗುವರು. 12ನಿನ್ನೊಡನೆ ಹೋರಾಡಿದವರನ್ನು ಹುಡುಕಿದರೂ ಅವರು ನಿನಗೆ ಕಾಣಿಸರು. ನಿನ್ನ ವಿರುದ್ಧವಾಗಿ ಯುದ್ಧ ಮಾಡಿದವರು ನಿರ್ನಾಮವಾಗುವರು. 13ಏಕೆಂದರೆ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನೆ. “ಭಯಪಡಬೇಡ, ನಿನಗೆ ಸಹಾಯಮಾಡುತ್ತೇನೆ. 14ಕ್ರಿಮಿಪ್ರಾಯದವನಾದ ಯಾಕೋಬೇ, ಇಸ್ರಾಯೇಲ್ ಜನವೇ, ಭಯಪಡಬೇಡ, ನಾನೇ ನಿನಗೆ ಸಹಾಯಕನು, ಇಸ್ರಾಯೇಲಿನ ಸದಮಲಸ್ವಾಮಿಯು ನಿನಗೆ ವಿಮೋಚಕನು” ಎಂದು ಯೆಹೋವನು ಹೇಳುತ್ತಾನೆ.

ಸಂಧ್ಯಾ ಪ್ರಾರ್ಥನೆ: ವಾಚನ

ಆದಿ 17:1–9

1ಅಬ್ರಾಮನು ತೊಂಭತೊಂಭತ್ತು ವರ್ಷದವನಾದಾಗ ಯೆಹೋವನು ಅವನಿಗೆ ದರ್ಶನದಲ್ಲಿ, “ನಾನು ಸರ್ವಶಕ್ತನಾದ ದೇವರು; ನನ್ನೆದುರಿನಲ್ಲಿ ದೋಷ ಇಲ್ಲದವನಾಗಿ ನಡೆದುಕೊ. 2ನಾನು ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಅತ್ಯಧಿಕವಾದ ಸಂತತಿಯನ್ನು ನಿನಗೆ ಕೊಡುವೆನು” ಎಂದನು. 3ಅಬ್ರಾಮನು ಅಡ್ಡಬೀಳಲು ದೇವರು ಅವನ ಸಂಗಡ ಮಾತನಾಡಿ, 4“ನಾನು ನಿನ್ನೊಂದಿಗೆ ಒಂದು ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಅದೇನೆಂದರೆ ನೀನು ಅನೇಕ ಜನಾಂಗಗಳಿಗೆ ಮೂಲಪುರುಷನಾಗುವಿ, 5ಇನ್ನು ಮುಂದೆ ನಿನಗೆ ಅಬ್ರಾಮ ಎಂದು ಹೆಸರಿರುವುದಿಲ್ಲ. ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತೃವಾಗಿ ನೇಮಿಸಿರುವುದರಿಂದ ನಿನಗೆ ಇನ್ನು ಮೇಲೆ ಅಬ್ರಹಾಮ ಎಂದು ಹೆಸರಿರುವುದು. 6ನಿನಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನು ನಿನ್ನಿಂದ ಜನಾಂಗಗಳು ಉತ್ಪತ್ತಿಯಾಗಿ ಅರಸರು ಹುಟ್ಟುವರು. 7ನಾನು ನಿನಗೂ ನಿನ್ನ ಸಂತತಿಗೂ ದೇವರಾಗಿರುವೆನೆಂದೂ ನಿನಗೋಸ್ಕರವೂ ನಿನ್ನ ಸಂತತಿಯ ಎಲ್ಲಾ ತಲತಲಾಂತರಗಳಿಗೋಸ್ಕರವೂ ಮಾಡಿಕೊಂಡ ನನ್ನ ಒಡಂಬಡಿಕೆಯನ್ನು ಸ್ಥಿರಪಡಿಸುವೆನು. 8ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ನಿನಗೂ ನಿನ್ನ ಸಂತತಿಗೂ ಶಾಶ್ವತ ಸ್ವತ್ತಾಗಿ ಕೊಟ್ಟು ಎಂದೆಂದಿಗೂ ಅವರಿಗೆ ದೇವರಾಗಿರುವೆನು” ಎಂದನು. 9ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನಂತೂ ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಬೇಕು. ನೀನು ಮಾತ್ರವಲ್ಲದೆ ನಿನ್ನ ಸಂತತಿಯವರು ತಲತಲಾಂತರಗಳಲ್ಲಿ ಅದನ್ನು ಕೈಕೊಂಡು ನಡೆಯಬೇಕು.

ಸಂಧ್ಯಾ ಪ್ರಾರ್ಥನೆ: ವಾಚನ

ಜ್ಞಾನೋ 15:20–16:9

20ಜ್ಞಾನವಂತನಾದ ಮಗನು ತಂದೆಯನ್ನು ಉಲ್ಲಾಸಗೊಳಿಸುವನು, ಜ್ಞಾನಹೀನನು ತಾಯಿಯನ್ನು ತಿರಸ್ಕರಿಸುವನು. 21ಬುದ್ಧಿಹೀನನು ಮೂರ್ಖತನದಲ್ಲಿ ಆನಂದಿಸುವನು, ಬುದ್ಧಿವಂತನು ತನ್ನ ಮಾರ್ಗವನ್ನು ಸರಳಮಾಡಿಕೊಳ್ಳುವನು. 22ಆಲೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರು ಇರುವಲ್ಲಿ ಅವು ನೆರವೇರುವವು. 23ತಕ್ಕ ಉತ್ತರಕೊಡುವವನಿಗೆ ಎಷ್ಟೋ ಸಂತೋಷ! ಸಮಯೋಚಿತವಾದ ನುಡಿಯಲ್ಲಿ ಎಷ್ಟೋ ಸ್ವಾರಸ್ಯ! 24ಜೀವದ ಮಾರ್ಗವು ವಿವೇಕಿಯನ್ನು ಮೇಲಕ್ಕೆತ್ತುವುದು; ಅದು ಅವನನ್ನು ಪಾತಾಳದಿಂದ ತಪ್ಪಿಸುವುದು. 25ಯೆಹೋವನು ಗರ್ವಿಷ್ಠನ ಮನೆಯನ್ನು ಕೆಡವಿಬಿಡುವನು; ವಿಧವೆಯ ಮೇರೆಯನ್ನು ನೆಲೆಗೊಳಿಸುವನು. 26ಕುಯುಕ್ತಿಯು ಯೆಹೋವನಿಗೆ ಅಸಹ್ಯ, ನಯನುಡಿಯು ಆತನಿಗೆ ಪ್ರಿಯ. 27ಸೂರೆಮಾಡುವವನು ಸ್ವಂತ ಮನೆಯನ್ನು ಬಾಧಿಸುವನು. ಲಂಚವನ್ನೊಪ್ಪದವನು ಸುಖವಾಗಿ ಬಾಳುವನು. 28ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ, ದುಷ್ಟನ ಬಾಯಿ ಕೆಟ್ಟದ್ದನ್ನು ಕಾರುತ್ತದೆ. 29ಯೆಹೋವನು ದುಷ್ಟರಿಗೆ ದೂರ, ಶಿಷ್ಟರ ಬಿನ್ನಹಕ್ಕೆ ಹತ್ತಿರ. 30ಹಸನ್ಮುಖ ಹೃದಯಕ್ಕೆ ಆನಂದ, ಶುಭಸಮಾಚಾರ ದೇಹಕ್ಕೆ ಆರೋಗ್ಯ. 31ಜೀವಪ್ರದವಾದ ಗದರಿಕೆಗೆ ಕಿವಿಗೊಡುವವನು, ಜ್ಞಾನಿಗಳ ನಡುವೆ ನೆಲೆಗೊಳ್ಳುವನು. 32ಶಿಕ್ಷೆಯನ್ನು ತಿರಸ್ಕರಿಸುವವನು ತನ್ನನ್ನೇ ನಿರಾಕರಿಸಿಕೊಳ್ಳುವನು, ಗದರಿಕೆಯನ್ನು ಕೇಳುವವನು ಬುದ್ಧಿಯನ್ನು ಪಡೆಯುವನು. 33ಯೆಹೋವನ ಭಯವೇ ಜ್ಞಾನೋಪದೇಶ, ಗೌರವಕ್ಕೆ ಮೊದಲು ವಿನಯ. 16:1ಹೃದಯದ ಸಂಕಲ್ಪವು ಮನುಷ್ಯನ ವಶವು, ತಕ್ಕ ಉತ್ತರಕೊಡುವ ಶಕ್ತಿಯು ಯೆಹೋವನಿಂದಾಗುವುದು. 2ಮನುಷ್ಯನ ನಡತೆಯೆಲ್ಲಾ ಸ್ವಂತ ದೃಷ್ಟಿಗೆ ಶುದ್ಧವಾಗಿದೆ, ಯೆಹೋವನು ಅಂತರಂಗವನ್ನೇ ಪರೀಕ್ಷಿಸುವನು. 3ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸಿದರೆ, ನಿನ್ನ ಉದ್ದೇಶಗಳು ಸಫಲವಾಗುವವು. 4ಯೆಹೋವನು ಒಂದೊಂದನ್ನೂ ತಕ್ಕ ಗುರಿಯಿಂದ ಸೃಷ್ಟಿಸಿದ್ದಾನೆ, ಹೌದು, ಕೇಡಿನ ದಿನಕ್ಕಾಗಿ ಕೆಡುಕರನ್ನು ಉಂಟುಮಾಡಿದ್ದಾನೆ. 5ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ, ಅವರಿಗೆ ದಂಡನೆ ಖಂಡಿತ. 6ಕೃಪಾಸತ್ಯತೆಗಳಿಂದ ಪಾಪನಿವಾರಣೆ, ಯೆಹೋವನ ಭಯಭಕ್ತಿಯಿಂದ ಹಾನಿನಿವಾರಣೆ. 7ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ, ಅವನ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವನು. 8ಅನ್ಯಾಯದಿಂದ ಗಳಿಸಿದ ಬಹು ಧನಕ್ಕಿಂತಲೂ, ನ್ಯಾಯದಿಂದ ಕೂಡಿಸಿದ ಅಲ್ಪ ಧನವೇ ಲೇಸು. 9ಮನುಷ್ಯನು ತನ್ನ ಮನದಂತೆ ದಾರಿಯನ್ನು ಆರಿಸಿಕೊಂಡರೂ, ಯೆಹೋವನೇ ಅವನಿಗೆ ಗತಿಯನ್ನು ಏರ್ಪಡಿಸುವನು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 1 ಏಪ್ರಿಲ್ ಎಂದರೆ ನಾಗರಿಕ ಪಂಚಾಂಗದ 14 ಏಪ್ರಿಲ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು