ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 13 ಏಪ್ರಿಲ್
ಆರ್ಥೊಡಾಕ್ಸ್ ಪಂಚಾಂಗ · ಮಾರ್ಚ್ 31 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 13 ಏಪ್ರಿಲ್ 2027
ಮಂಗಳವಾರ · ಮಹಾ ಉಪವಾಸದ ಐದನೆಯ ವಾರ · ಸ್ವರ 4
ಹಬ್ಬಗಳು ಮತ್ತು ಸಂತರು
St. Hypatius the Wonderworker and Bishop of Gangra († c. 326)
ಮಹಾ ಉಪವಾಸ ಕಾಲ
ಕಟ್ಟುನಿಟ್ಟಿನ ಉಪವಾಸ (ಒಣ ಆಹಾರ: ರೊಟ್ಟಿ, ತರಕಾರಿ, ಹಣ್ಣು)
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಆರನೆಯ ತಾಸು
18ಹೀಗಿರಲು ದೇವರನ್ನು ಯಾರಿಗೆ ಹೋಲಿಸುವಿರಿ? ಅಥವಾ ಯಾವ ರೂಪವನ್ನು ಆತನಿಗೆ ಸಮಾನ ಮಾಡುವಿರಿ? 19ವಿಗ್ರಹವಾದರೋ, ಶಿಲ್ಪಿಯು ಅದನ್ನು ಎರಕಹೊಯ್ಯುವನು, ಅಕ್ಕಸಾಲಿಗನು ಅದಕ್ಕೆ ಚಿನ್ನದ ಕವಚವನ್ನು ಹೊದಿಸಿ, ಬೆಳ್ಳಿಯ ಸರಪಣಿಗಳನ್ನು ಹಾಕುವನು. 20(ಇಂಥದನ್ನು ದೇವರಿಗೆ) ಕಾಣಿಕೆಯನ್ನಾಗಿ ಪ್ರತಿಷ್ಠಿಸಿಕೊಳ್ಳಲಾರದ ಬಡವನು, ಹುಳಿತು ಹೋಗದ ಮರವನ್ನು ಹುಡುಕಿ ಚಲಿಸದ ವಿಗ್ರಹವನ್ನು ಮಾಡಿಸಲು ಶಿಲ್ಪಿಯನ್ನು ವಿಚಾರಿಸಿಕೊಳ್ಳುವನು. 21ನಿಮಗೆ ತಿಳಿದಿಲ್ಲವೋ? ನೀವು ಕೇಳಲಿಲ್ಲವೋ? ಆದಿಯಿಂದಲೇ ನಿಮಗೆ ಉಪದೇಶವಾಗಿ ಬಂದಿಲ್ಲವೋ? ಭೂಮಿಯು ನಿರ್ಮಾಣವಾದ ದಿನದಿಂದ ನೀವು ಗ್ರಹಿಸುತ್ತಿಲ್ಲವೋ? 22ಭೂಮಂಡಲ ನಿವಾಸಿಗಳು ಮಿಡತೆಗಳಂತೆ ಸಣ್ಣಗೆ ಕಾಣಿಸುವಷ್ಟು ಉನ್ನತವಾದ ಆಕಾಶದಲ್ಲಿ ಆತನು ಆಸೀನನಾಗಿದ್ದಾನೆ; ಆಕಾಶಮಂಡಲವನ್ನು ನಾರುಬಟ್ಟೆಯಂತೆ ಹರಡಿ ನಿವಾಸದ ಗುಡಾರದಂತೆ ಎತ್ತಿ ಕಟ್ಟಿದ್ದಾನೆ. 23ಪ್ರಭುಗಳನ್ನು ನಿರ್ನಾಮ ಮಾಡುತ್ತಾನೆ, ಭೂಪತಿಗಳನ್ನು ಶೂನ್ಯಗೊಳಿಸುತ್ತಾನೆ. 24ಇವರು ನೆಡಲ್ಪಟ್ಟ ಕೂಡಲೆ, ಬಿತ್ತಲ್ಪಟ್ಟ ಕ್ಷಣವೇ, ಇವರ ಸಂತಾನವು ಭೂಮಿಯಲ್ಲಿ ಬೇರೂರಿದಾಗಲೇ, ಆತನ ಶ್ವಾಸದಿಂದ ಬಾಡುವರು, ಬಿರುಗಾಳಿಯು ಇವರನ್ನು ಒಣಹುಲ್ಲಿನಂತೆ ಬಡಿದುಕೊಂಡು ಹೋಗುವುದು. 25ಹೀಗಿರಲು, “ನನ್ನನ್ನು ಯಾರಿಗೆ ಹೋಲಿಸಿ ಸರಿಸಮಾನ ಮಾಡುತ್ತೀರಿ?” ಎಂದು ಸದಮಲಸ್ವಾಮಿಯು ಕೇಳುತ್ತಾನೆ. 26ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದುವರಿಸುತ್ತಾನೆ. ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ, ಮಹಾಶಕ್ತನೂ ಆಗಿರುವುದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು. 27ಯಾಕೋಬೇ, ಇಸ್ರಾಯೇಲೇ, “ನನ್ನ ಮಾರ್ಗವು ಯೆಹೋವನಿಗೆ ಮರೆಯಾಗಿದೆ, ನನಗೆ ಸಿಕ್ಕಬೇಕಾದ ನ್ಯಾಯವು ನನ್ನ ದೇವರ ಲಕ್ಷ್ಯಕ್ಕೆ ಬಿದ್ದಿಲ್ಲವಲ್ಲಾ” ಎಂದು ಏಕೆ ಅಂದುಕೊಳ್ಳುತ್ತೀ? 28ನೀನು ಗ್ರಹಿಸಲಿಲ್ಲವೋ? ಕೇಳಲಿಲ್ಲವೋ? ಯೆಹೋವನು ನಿರಂತರ ದೇವರೂ, ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದವನೂ ಆಗಿದ್ದಾನೆ. ಆತನು ದಣಿದು ಬಳಲುವುದಿಲ್ಲ, ಆತನ ವಿವೇಕವು ಪರಿಶೋಧನೆಗೆ ಅಗಮ್ಯ. 29ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ, ಬಲಹೀನನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ. 30ಯುವಕರೂ ದಣಿದು ಬಳಲುವರು, ತರುಣರೂ ಸೊರಗಿ ಮುಗ್ಗರಿಸುವರು. 31ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು; ಅವರು ಓಡಿ ದಣಿಯರು, ನಡೆದು ಬಳಲರು.
ಸಂಧ್ಯಾ ಪ್ರಾರ್ಥನೆ: ವಾಚನ
1ಈ ಸಂಗತಿಗಳು ನಡೆದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಯೆಹೋವನ ವಾಕ್ಯವುಂಟಾಗಿ ಹೇಳಿದೇನೆಂದರೆ, “ಅಬ್ರಾಮನೇ, ಭಯಪಡಬೇಡ, ನಾನು ನಿನಗೆ ಗುರಾಣಿಯಾಗಿದ್ದೇನೆ ಮತ್ತು ನಿನಗೆ ಅತ್ಯಧಿಕ ಬಹುಮಾನವು ದೊರೆಯುವುದು.” 2ಅದಕ್ಕೆ ಅಬ್ರಾಮನು, “ಕರ್ತನಾದ ಯೆಹೋವನೇ, ನನಗೆ ಏನು ಕೊಟ್ಟರೇನು? ನಾನು ಸಂತಾನವಿಲ್ಲದವನು. ಮತ್ತು ನನ್ನ ಆಸ್ತಿಯೆಲ್ಲಾ, ದಮಸ್ಕದವನಾದ ಎಲೀಯೆಜರನ ಪಾಲಾಗುತ್ತದೆಯಲ್ಲಾ?” ಎಂದನು. 3ಪುನಃ ಅಬ್ರಾಮನು ಹೇಳಿದ್ದೇನೆಂದರೆ, “ನೀನು ನನಗೆ ಸಂತಾನ ಕೊಡಲಿಲ್ಲವಾದ್ದರಿಂದ, ನೋಡು, ನನ್ನ ಮನೆಯಲ್ಲಿ ಹುಟ್ಟಿದವನೇ ನನಗೆ ಬಾಧ್ಯಸ್ಥನಾಗಬೇಕಾಯಿತು” ಎಂದು ಹೇಳಿದನು. 4ಯೆಹೋವನ ವಾಕ್ಯವು ಅವನ ಸಂಗಡ ಮಾತನಾಡಿ, “ಈ ಮನುಷ್ಯನು ನಿನಗೆ ಬಾಧ್ಯಸ್ಥನಾಗುವುದಿಲ್ಲ; ಆದರೆ ನಿನ್ನ ಹೊಟ್ಟೆಯಲ್ಲಿ ಹುಟ್ಟುವವನೇ ನಿನಗೆ ಬಾಧ್ಯಸ್ಥನಾಗುವನು” ಎಂದು ಹೇಳಿ ಅಬ್ರಾಮನನ್ನು ಹೊರಗೆ ಕರೆದುಕೊಂಡು ಬಂದು, 5“ಆಕಾಶದ ಕಡೆಗೆ ನೋಡು, ನಕ್ಷತ್ರಗಳನ್ನು ಲೆಕ್ಕಿಸುವುದು ನಿನ್ನಿಂದಾದರೆ ಲೆಕ್ಕಿಸು.” ನಂತರ ಯೆಹೋವನು ಅಬ್ರಾಮನಿಗೆ, “ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವುದು” ಎಂದು ಹೇಳಿದನು. 6ಅಬ್ರಾಮನು ಯೆಹೋವನನ್ನು ನಂಬಿದನು; ಯೆಹೋವನು ಅವನ ನಂಬಿಕೆಯನ್ನು ಅವನ ಲೆಕ್ಕಕ್ಕೆ ನೀತಿಯೆಂದು ಪರಿಗಣಿಸಿದನು. 7ನಂತರ ಆತನು ಅಬ್ರಾಮನಿಗೆ, “ಈ ದೇಶವನ್ನು ನಿನಗೆ ಬಾಧ್ಯಸ್ಥವಾಗಿ ಕೊಡುವುದಕ್ಕೋಸ್ಕರ ನಿನ್ನನ್ನು ಊರ್ ಎಂಬ ಕಲ್ದೀಯರ ಪಟ್ಟಣದಿಂದ ಬರಮಾಡಿದ ಯೆಹೋವನು ನಾನೇ” ಎಂದು ಹೇಳಿದನು. 8“ಕರ್ತನಾದ ಯೆಹೋವನೇ, ನಾನು ಇದನ್ನು ಬಾಧ್ಯವಾಗಿ ಹೊಂದುವೆನೆಂದು ತಿಳಿದುಕೊಳ್ಳುವುದು ಹೇಗೆ?” ಎಂದು ಕೇಳಿದನು. 9ಅದಕ್ಕೆ ಆತನು ಯೆಹೋವನಿಗೆ, “ನೀನು ಮೂರು ವರ್ಷದ ಮಣಕ, ಒಂದು ಆಡು, ಒಂದು ಟಗರು, ಒಂದು ಬೆಳವಕ್ಕಿ, ಒಂದು ಪಾರಿವಾಳದ ಮರಿಯನ್ನೂ ತೆಗೆದುಕೊಂಡು ಬಾ” ಎಂದನು. 10ಅವನು ಇವುಗಳನ್ನೆಲ್ಲಾ ತೆಗೆದುಕೊಂಡು ಬಂದು ಮೃಗಗಳನ್ನು ಎರಡಾಗಿ ಸೀಳಿ, ಒಂದು ತುಂಡನ್ನು ಇನ್ನೊಂದರ ಎದುರಾಗಿ ಇಟ್ಟನು; ಪಕ್ಷಿಗಳನ್ನು ಮಾತ್ರ ಸೀಳಲಿಲ್ಲ. 11ಆ ಪಶುಗಳ ಮೇಲೆ ಹದ್ದುಗಳು ಎರಗಲು ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು. 12ಹೊತ್ತು ಮುಣುಗುತ್ತಿರುವಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು; ಕಾರ್ಗತ್ತಲು ಅವನ ಮೇಲೆ ಕವಿಯಿತು; ಅವನು ಮಹಾಭೀತಿಯಿಂದ ಭಯಭ್ರಾಂತನಾದನು. 13ಆಗ ಯೆಹೋವನು ಅಬ್ರಾಮನಿಗೆ, “ನೀನು ಚೆನ್ನಾಗಿ ತಿಳಿಯತಕ್ಕದ್ದೇನೆಂದರೆ, ನಿನ್ನ ಸಂತತಿಯವರು ಅನ್ಯದೇಶದಲ್ಲಿ ಪ್ರವಾಸಿಯಾಗಿ ವಾಸವಾಗಿದ್ದು ಆ ದೇಶದವರಿಗೆ ದಾಸರಾಗುವರು. ನಾನೂರು ವರ್ಷ ಆ ದೇಶದವರಿಂದ ಬಾಧೆಪಡುವರು. 14ಅವರನ್ನು ದಾಸರನ್ನಾಗಿ ಮಾಡಿಸಿಕೊಂಡ ಜನಾಂಗವನ್ನು ನಾನು ದಂಡಿಸಿದ ನಂತರ ಅವರು ಬಹಳ ಸಂಪತ್ತುಳ್ಳವರಾಗಿ ಆ ದೇಶದಿಂದ ಬಿಡುಗಡೆಯಾಗಿ ಹೊರಟು ಬರುವರು. 15ನೀನಂತೂ ಸಮಾಧಾನದೊಡನೆ ಪೂರ್ವಿಕರ ಬಳಿಗೆ ಸೇರುವಿ, ಬಹಳ ವೃದ್ಧನಾಗಿ ಉತ್ತರಕ್ರಿಯೆಯನ್ನು ಹೊಂದುವಿ.
ಸಂಧ್ಯಾ ಪ್ರಾರ್ಥನೆ: ವಾಚನ
7ಜ್ಞಾನಿಗಳ ತುಟಿಗಳು ತಿಳಿವಳಿಕೆಯನ್ನು ಬಿತ್ತುವವು. ಜ್ಞಾನಹೀನರ ಹೃದಯವು ಅದನ್ನು ಬಿತ್ತುವುದೇ ಇಲ್ಲ. 8ದುಷ್ಟರ ಯಜ್ಞ ಯೆಹೋವನಿಗೆ ಅಸಹ್ಯ, ಶಿಷ್ಟರ ಬಿನ್ನಹ ಆತನಿಗೆ ಇಷ್ಟ. 9ದುಷ್ಟನ ನಡತೆಯು ಯೆಹೋವನಿಗೆ ಅಸಹ್ಯ, ಧರ್ಮಾಸಕ್ತನು ಆತನಿಗೆ ಪ್ರಿಯ. 10ಧರ್ಮಮಾರ್ಗವನ್ನು ಬಿಟ್ಟವನಿಗೆ ತೀಕ್ಷ್ಣ ಶಿಕ್ಷಣ, ಗದರಿಕೆಯನ್ನು ಕೇಳದವನಿಗೆ ಸಾವು. 11ಪಾತಾಳವೂ, ನಾಶಲೋಕವೂ ಯೆಹೋವನಿಗೆ ಗೋಚರವಾಗಿರುವಲ್ಲಿ ನರವಂಶದವರ ಹೃದಯಗಳು ಆತನಿಗೆ ಮತ್ತೂ ಸ್ಪಷ್ಟ. 12ಧರ್ಮನಿಂದಕನು ಗದರಿಕೆಯನ್ನು ಕೇಳನು, ಜ್ಞಾನಿಗಳ ಸಂಗಡ ಸೇರನು. 13ಹರ್ಷ ಹೃದಯದಿಂದ ಹಸನ್ಮುಖ, ಮನೋವ್ಯಥೆಯಿಂದ ಆತ್ಮಭಂಗ. 14ವಿವೇಕಿಯ ಹೃದಯ ತಿಳಿವಳಿಕೆಯನ್ನು ಹುಡುಕುವುದು, ಮೂಢರ ಬಾಯಿ ಮೂರ್ಖತನವನ್ನು ಮುಕ್ಕುವುದು. 15ದೀನನ ದಿನಗಳೆಲ್ಲಾ ದುಃಖಭರಿತ, ಹರ್ಷಹೃದಯನಿಗೆ ನಿತ್ಯವೂ ಔತಣ. 16ಕಳವಳದಿಂದ ಕೂಡಿದ ಬಹುಧನಕ್ಕಿಂತಲೂ ಯೆಹೋವನ ಭಯದಿಂದ ಕೂಡಿದ ಅಲ್ಪ ಧನವೇ ಲೇಸು. 17ದ್ವೇಷವಿರುವಲ್ಲಿ ಮೃಷ್ಟಾನ್ನಕ್ಕಿಂತಲೂ, ಪ್ರೇಮವಿರುವಲ್ಲಿ ಸೊಪ್ಪಿನ ಊಟವೇ ಉತ್ತಮ. 18ಕೋಪಿಷ್ಠನು ವ್ಯಾಜ್ಯವನ್ನೆಬ್ಬಿಸುವನು, ದೀರ್ಘಶಾಂತನು ಜಗಳವನ್ನು ಶಮನಪಡಿಸುವನು. 19ಸೋಮಾರಿಯ ಮಾರ್ಗ ಮುಳ್ಳುಬೇಲಿ, ಯಥಾರ್ಥವಂತನ ಮಾರ್ಗ ರಾಜಮಾರ್ಗ.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 31 ಮಾರ್ಚ್ ಎಂದರೆ ನಾಗರಿಕ ಪಂಚಾಂಗದ 13 ಏಪ್ರಿಲ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು