Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 13 ಏಪ್ರಿಲ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 13 ಏಪ್ರಿಲ್ 2027

ಮಂಗಳವಾರ · ಪಾಸ್ಕ ಕಾಲದ ಮೂರನೆಯ ವಾರ

ಹಬ್ಬಗಳು ಮತ್ತು ಸಂತರು

ಪಾಸ್ಕ ಕಾಲದ ಮೂರನೆಯ ವಾರದ ಮಂಗಳವಾರ

ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಬಿಳಿ

ಸಂತ ಮಾರ್ಟಿನ್ I, ಪೋಪ್ ಮತ್ತು ಹುತಾತ್ಮ · ಐಚ್ಛಿಕ ಸ್ಮರಣೆ

ದಿನದ ವಾಚನಗಳು

ಮೊದಲನೆಯ ವಾಚನ

ಅ. ಕೃ 7:51–8:1

51“ಹಠಮಾರಿಗಳೇ, ಮನಶುದ್ಧಿಯೂ, ಕರ್ಣಶುದ್ಧಿಯೂ ಇಲ್ಲದವರೇ, ನಿಮ್ಮ ಪೂರ್ವಿಕರು ಹೇಗೋ ಹಾಗೆಯೇ ನೀವೂ ಯಾವಾಗಲೂ ಪವಿತ್ರಾತ್ಮನಿಗೆ ಎದುರಾಗಿ ನಡೆಯುವವರಾಗಿದ್ದೀರಿ. 52ಪ್ರವಾದಿಗಳಲ್ಲಿ ನಿಮ್ಮ ಪೂರ್ವಿಕರು ಹಿಂಸೆಪಡಿಸದವರು ಯಾರಿದ್ದಾರೆ? ಅವರು ಆ ನೀತಿಸ್ವರೂಪನಾದ ಕರ್ತನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು, ನೀವು ಈಗ ಆತನನ್ನು ಹಿಡಿದುಕೊಟ್ಟು ಕೊಲ್ಲಿಸಿದ್ದೀರಿ. 53ದೇವದೂತರ ಮೂಲಕ ನೇಮಕವಾದ ಧರ್ಮಶಾಸ್ತ್ರವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸುವುದಿಲ್ಲ” ಎಂದು ಹೇಳಿದನು. 54ಈ ಮಾತುಗಳನ್ನು ಕೇಳಿ ಅವರು ರೌದ್ರಮನಸ್ಸುಳ್ಳವರಾಗಿ ಅವನ ಮೇಲೆ ಹಲ್ಲು ಕಡಿದರು. 55ಆದರೆ ಅವನು ಪವಿತ್ರಾತ್ಮಭರಿತನಾಗಿ ಆಕಾಶದ ಕಡೆಗೆ ದೃಷ್ಟಿಸಿ ನೋಡಿ, ದೇವರ ಮಹಿಮೆಯನ್ನೂ, ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ ಕಂಡು; 56“ಅಗೋ, ಆಕಾಶವು ತೆರೆದಿರುವುದನ್ನೂ, ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ನೋಡುತ್ತಿದ್ದೇನೆ” ಎಂದು ಹೇಳಿದನು. 57ಆದರೆ ಅವರು ಮಹಾಶಬ್ದದಿಂದ ಕೂಗಿ, ಕಿವಿಗಳನ್ನು ಮುಚ್ಚಿಕೊಂಡು, ಒಟ್ಟಾಗಿ ಅವನ ಮೇಲೆ ಬಿದ್ದು, 58ಅವನನ್ನು ಊರ ಹೊರಕ್ಕೆ ನೂಕಿಕೊಂಡು ಹೋಗಿ ಕೊಲ್ಲುವುದಕ್ಕೆ ಕಲ್ಲೆಸೆದರು. ಸಾಕ್ಷಿಯವರು ತಮ್ಮ ಬಟ್ಟೆಗಳನ್ನು ತೆಗೆದು ಸೌಲನೆಂಬ ಒಬ್ಬ ಯೌವನಸ್ಥನ ಕಾಲುಗಳ ಬಳಿಯಲ್ಲಿ ಇಟ್ಟರು. 59ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು, ಅವನು ಕರ್ತನ ಹೆಸರನ್ನು ಹೇಳಿ, “ಕರ್ತನಾದ, ಯೇಸುವೇ, ನನ್ನಾತ್ಮವನ್ನು ಸೇರಿಸಿಕೋ” ಎಂದು ಪ್ರಾರ್ಥಿಸಿ, 60ಮೊಣಕಾಲೂರಿ, “ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು” ಮಹಾಶಬ್ದದಿಂದ ಕೂಗಿದನು. ಇದನ್ನು ಹೇಳಿ ನಿದ್ರೆಹೋದನು. 8:1ಸೌಲನಿಗೆ ಅವನ ಕೊಲೆಗೆ ಸಮ್ಮತಿಸಿದನು. ಆ ದಿನದಲ್ಲಿ ಯೆರೂಸಲೇಮಿನಲ್ಲಿದ್ದ ಸಭೆಗೆ ದೊಡ್ಡ ಹಿಂಸೆ ಉಂಟಾಯಿತು. ಅಪೊಸ್ತಲರು ಹೊರತಾಗಿ ಎಲ್ಲರೂ ಯೂದಾಯ, ಸಮಾರ್ಯ ಸೀಮೆಗಳಿಗೆ ಚದರಿಹೋದರು.

ಪ್ರತಿವಚನ ಕೀರ್ತನೆ

ಕೀರ್ತ 31:2–3, 5–7, 16, 20

2ಕಿವಿಗೊಟ್ಟು ಕೇಳಿ ಬೇಗನೆ ನನ್ನನ್ನು ಬಿಡಿಸು; ನನ್ನನ್ನು ರಕ್ಷಿಸುವ ಆಶ್ರಯಗಿರಿಯೂ, ದುರ್ಗಸ್ಥಾನವೂ ಆಗಿರು. 3ನೀನೇ ನನ್ನ ಬಂಡೆಯೂ, ಕೋಟೆಯೂ ಆಗಿದ್ದೀಯಲ್ಲಾ; ಆದುದರಿಂದ ನಿನ್ನ ಹೆಸರಿನ ನಿಮಿತ್ತ ದಾರಿತೋರಿಸಿ ನನ್ನನ್ನು ನಡೆಸು. 5ನೀನೇ ನನಗೆ ಆಧಾರವಲ್ಲವೇ; ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟಿದ್ದೇನೆ. ಯೆಹೋವನೇ, ನಂಬಿಗಸ್ತನಾದ ದೇವರೇ, ನನ್ನನ್ನು ವಿಮೋಚಿಸಿದ್ದೀ. 6ವ್ಯರ್ಥವಾದ ವಿಗ್ರಹಗಳನ್ನೂ ಅವಲಂಬಿಸಿದವರನ್ನು ನಾನು ದ್ವೇಷಿಸುತ್ತೇನೆ; ನಾನಾದರೋ ಯೆಹೋವನಲ್ಲಿ ಭರವಸವಿಟ್ಟಿದ್ದೇನೆ. 7ನಿನ್ನ ಕೃಪೆಯಲ್ಲಿ ಸಂತೋಷಿಸಿ ಉಲ್ಲಾಸದಿಂದಿರುವೆನು; ನಾನು ಕುಗ್ಗಿಹೋಗಿರುವುದನ್ನು ನೋಡಿ, ನನ್ನ ಬಾಧೆಗಳನ್ನು ನೀನು ಲಕ್ಷ್ಯಕ್ಕೆ ತೆಗೆದುಕೊಂಡಿಯಲ್ಲಾ. 16ನಿನ್ನ ಸೇವಕನನ್ನು ಪ್ರಸನ್ನಮುಖದಿಂದ ನೋಡು; ಪ್ರೀತಿಯಿಂದ ನನ್ನನ್ನು ರಕ್ಷಿಸು. 20ಮನುಷ್ಯರ ಒಳಸಂಚುಗಳಿಂದ ಹಾನಿ ಉಂಟಾಗದಂತೆ ಅವರನ್ನು ನಿನ್ನ ಸಾನ್ನಿಧ್ಯದಲ್ಲಿಯೇ ಮರೆಮಾಡುತ್ತೀ; ವಿವಾದಿಸುವ ನಾಲಿಗೆಗಳಿಂದ ಕೇಡಾಗದಂತೆ ಅವರನ್ನು ಗುಪ್ತಸ್ಥಳದಲ್ಲಿ ಅಡಗಿಸುತ್ತೀ.

ಸುವಾರ್ತೆ

ಯೋಹಾ 6:30–35

30ಅವರು ಆತನನ್ನು “ಹಾಗಾದರೆ ನಾವು ನೋಡಿ ನಿನ್ನನ್ನು ನಂಬುವಂತೆ ಯಾವ ಸೂಚಕಕಾರ್ಯ ಮಾಡುತ್ತೀ? ನೀನು ಏನುಮಾಡುತ್ತಿ? 31ನಮ್ಮ ಪೂರ್ವಿಕರು ಅರಣ್ಯದಲ್ಲಿ ಮನ್ನಾ ತಿಂದರು. ‘ಪರಲೋಕದಿಂದ ರೊಟ್ಟಿಯನ್ನು ಅವರಿಗೆ ತಿನ್ನುವುದಕ್ಕೆ ಕೊಟ್ಟನು’ ಎಂದು ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲಾ” ಎಂದು ಕೇಳಿದಾಗ, 32ಯೇಸು ಅವರಿಗೆ “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಮೋಶೆಯು ನಿಮಗೆ ಪರಲೋಕದಿಂದ ರೊಟ್ಟಿ ಕೊಟ್ಟವನಲ್ಲ, ನನ್ನ ತಂದೆಯು ಪರಲೋಕದಿಂದ ಬರುವ ನಿಜವಾದ ರೊಟ್ಟಿಯನ್ನು ನಿಮಗೆ ಕೊಡುತ್ತಾನೆ. 33ದೇವರು ಕೊಡುವ ಆ ರೊಟ್ಟಿ ಯಾವುದೆಂದರೆ, ಪರಲೋಕದಿಂದ ಇಳಿದು ಬಂದು ಲೋಕಕ್ಕೆ ಜೀವವನ್ನು ಉಂಟುಮಾಡುವಂಥದ್ದೇ” ಎಂದು ಹೇಳಿದನು. 34ಆಗ ಅವರು “ಆಯ್ಯಾ, ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು” ಎಂದರು. 35ಯೇಸು ಅವರಿಗೆ “ನಾನೇ ಜೀವದ ರೊಟ್ಟಿ ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವುದಿಲ್ಲ; ನನ್ನನ್ನು ನಂಬುವವನಿಗೆ ಎಂದಿಗೂ ಬಾಯಾರಿಕೆಯಾಗುವುದಿಲ್ಲ.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು