ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 27 ಮಾರ್ಚ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 27 ಮಾರ್ಚ್ 2027
ಶನಿವಾರ · ಪಾಸ್ಕ ತ್ರಿದಿನ
ಹಬ್ಬಗಳು ಮತ್ತು ಸಂತರು
ಪವಿತ್ರ ಶನಿವಾರ — ಪಾಸ್ಕ ಜಾಗರಣೆ
ಪಾಸ್ಕ ತ್ರಿದಿನ · ಆರಾಧನಾ ಬಣ್ಣ: ಬಿಳಿ
ದಿನದ ವಾಚನಗಳು
ಮೊದಲನೆಯ ವಾಚನ
1ಆದಿಯಲ್ಲಿ ದೇವರು ಆಕಾಶವನ್ನು, ಭೂಮಿಯನ್ನು ಸೃಷ್ಟಿಮಾಡಿದನು. 2ಭೂಮಿಯು ಕ್ರಮವಿಲ್ಲದೆಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕತ್ತಲಿತ್ತು. ದೇವರಾತ್ಮವು ಸಾಗರದ ಮೇಲೆ ಚಲಿಸುತ್ತಿತ್ತು. 3ಅನಂತರ ದೇವರು “ಬೆಳಕಾಗಲಿ” ಎಂದು ಆಜ್ಞಾಪಿಸಲು ಬೆಳಕಾಯಿತು. 4ದೇವರು ಆ ಬೆಳಕನ್ನು ಒಳ್ಳೆಯದೆಂದು ಕಂಡನು. 5ದೇವರು ಬೆಳಕನ್ನೂ ಕತ್ತಲನ್ನೂ ಬೇರ್ಪಡಿಸಿ ಬೆಳಕಿಗೆ “ಹಗಲು” ಎಂದೂ, ಕತ್ತಲೆಗೆ “ಇರುಳು” ಎಂದೂ ಹೆಸರಿಟ್ಟನು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೊದಲನೆಯ ದಿನವಾಯಿತು. 6ಬಳಿಕ ದೇವರು “ಜಲರಾಶಿಗಳ ನಡುವೆ ವಿಸ್ತಾರವಾದ ಗುಮ್ಮಟವು ಉಂಟಾಗಲಿ ಅದು ಕೆಳಗಿನ ನೀರುಗಳನ್ನೂ ಮೇಲಿನ ನೀರುಗಳನ್ನೂ ಬೇರೆ ಬೇರೆ ಮಾಡಲಿ” ಅಂದನು. 7ದೇವರು ವಿಸ್ತಾರವಾದ ಗುಮ್ಮಟವನ್ನು ಮಾಡಿ ಅದರ ಕೆಳಗಿದ್ದ ನೀರುಗಳನ್ನು ಅದರ ಮೇಲಿದ್ದ ನೀರುಗಳಿಂದ ವಿಂಗಡಿಸಿದನು. ಅದು ಹಾಗೆಯೇ ಆಯಿತು. 8ದೇವರು ಆ ಗುಮ್ಮಟಕ್ಕೆ “ಆಕಾಶ” ಎಂದು ಹೆಸರಿಟ್ಟನು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಎರಡನೆಯ ದಿನವಾಯಿತು. 9ಅನಂತರ ದೇವರು, “ಆಕಾಶದ ಕೆಳಗಿರುವ ನೀರೆಲ್ಲಾ ಒಂದೇ ಸ್ಥಳದಲ್ಲಿ ಒಟ್ಟಿಗೆ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ” ಅಂದನು. ಹಾಗೆಯೇ ಆಯಿತು. 10ದೇವರು ಒಣನೆಲಕ್ಕೆ “ಭೂಮಿ” ಎಂದೂ ಜಲರಾಶಿಗೆ “ಸಮುದ್ರ” ಎಂದೂ ಹೆಸರಿಟ್ಟನು. ಆತನು ಅದನ್ನು ಒಳ್ಳೆಯದೆಂದು ನೋಡಿದನು. 11ತರುವಾಯ ದೇವರು, “ಭೂಮಿಯು ಹುಲ್ಲನ್ನು, ಸಸ್ಯಗಳನ್ನೂ, ಬೀಜಬಿಡುವ ಕಾಯಿಪಲ್ಯದ ಗಿಡಗಳನ್ನೂ ಬೆಳೆಯಿಸಲಿ ಮತ್ತು ಬೀಜವುಳ್ಳ ಹಣ್ಣಿನ ಮರಗಳನ್ನು ಅವುಗಳ ಜಾತಿಗನುಸಾರವಾಗಿ ಫಲಿಸಲಿ” ಎಂದು ಹೇಳಿದನು, ಹಾಗೆಯೇ ಆಯಿತು. 12ಭೂಮಿಯಲ್ಲಿ ಸಸ್ಯಗಳು ಬೆಳೆದವು. ತಮ್ಮ ತಮ್ಮ ಜಾತಿಯ ಪ್ರಕಾರ ಬೀಜಬಿಡುವ ಕಾಯಿಪಲ್ಯದ ಗಿಡಗಳು ಉಂಟಾದವು. ತಮ್ಮ ತಮ್ಮ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳು ಉತ್ಪತ್ತಿಯಾದವು. ದೇವರು ಅದನ್ನು ಒಳ್ಳೆಯದೆಂದು ಕಂಡನು 13ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೂರನೆಯ ದಿನವಾಯಿತು. 14ಬಳಿಕ ದೇವರು, “ಆಕಾಶ ಮಂಡಲದಲ್ಲಿ ಬೆಳಕುಗಳು ಉಂಟಾಗಲಿ. ಅವು ಹಗಲಿರುಳುಗಳನ್ನು ಬೇರೆ ಬೇರೆ ಮಾಡಲಿ. ಅವು ಕಾಲಗಳನ್ನೂ, ದಿನಸಂವತ್ಸರಗಳನ್ನೂ ಸೂಚಿಸುವ ಗುರುತುಗಳಾಗಿರಲಿ. 15ಭೂಮಿಯ ಮೇಲೆ ಬೆಳಕು ಕೊಡುವುದಕ್ಕೆ ಅವು ಆಕಾಶಮಂಡಲದಲ್ಲಿ ದೀಪಗಳಂತಿರಲಿ” ಅಂದನು. ಹಾಗೆಯೇ ಆಯಿತು. 16ದೇವರು ಹಗಲನ್ನಾಳುವುದಕ್ಕೆ ದೊಡ್ಡ ದೀಪವನ್ನೂ ಇರುಳನ್ನಾಳುವುದಕ್ಕೆ ಚಿಕ್ಕ ದೀಪವನ್ನೂ ಹೀಗೆ ಎರಡು ದೊಡ್ಡ ದೀಪಗಳನ್ನು ಉಂಟು ಮಾಡಿದನು. ಆತನು ನಕ್ಷತ್ರಗಳನ್ನು ಸಹ ಉಂಟು ಮಾಡಿದನು. 17ದೇವರು ಆ ಬೆಳಕುಗಳನ್ನು ಆಕಾಶದಲ್ಲಿ ನಿಲ್ಲಿಸಿ ಭೂಮಿಯ ಮೇಲೆ ಬೆಳಕು ಕೊಡುವುದಕ್ಕೂ 18ಹಗಲಿರುಳುಗಳನ್ನು ಆಳುವುದಕ್ಕೂ ಬೆಳಕನ್ನು, ಕತ್ತಲನ್ನು ಬೇರೆ ಬೇರೆ ಮಾಡುವುದಕ್ಕೂ ಅವುಗಳನ್ನು ನೇಮಿಸಿದನು. ದೇವರು ಅದನ್ನು ಒಳ್ಳೆಯದೆಂದು ಕಂಡನು. 19ಸಾಯಂಕಾಲವೂ ಉದಯಕಾಲವೂ ಆಗಿ ನಾಲ್ಕನೆಯ ದಿನವಾಯಿತು. 20ತರುವಾಯ ದೇವರು, “ಗುಂಪು ಗುಂಪಾಗಿ ಚಲಿಸುವ ಜಲಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಅಂತರಿಕ್ಷದಲ್ಲಿ ಹಾರಾಡಲಿ” ಎಂದು ಹೇಳಿದನು. 21ಹೀಗೆ ದೇವರು ಮಹಾ ಜಲಚರಗಳನ್ನೂ ನೀರಿನಲ್ಲಿ ತುಂಬಿರುವ ಸಕಲ ವಿಧವಾದ ಜೀವಿಗಳನ್ನೂ ರೆಕ್ಕೆಗಳುಳ್ಳ ಸಕಲವಿಧವಾದ ಪಕ್ಷಿಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದನು. ಆತನು ಅದನ್ನು ಒಳ್ಳೆಯದೆಂದು ಕಂಡನು. 22ಇದಲ್ಲದೆ ದೇವರು, “ಅವುಗಳಿಗೆ ನೀವು ಅಭಿವೃದ್ಧಿಯಾಗಿ ಹೆಚ್ಚಿರಿ, ಜಲಚರಗಳು ಸಮುದ್ರದ ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಹೆಚ್ಚಲಿ” ಎಂದು ಹೇಳಿ ಆಶೀರ್ವದಿಸಿದನು. 23ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಐದನೆಯ ದಿನವಾಯಿತು. 24ಬಳಿಕ ದೇವರು, “ಭೂಮಿಯಿಂದ ಜೀವಜಂತುಗಳು ಉಂಟಾಗಲಿ; ಪಶು, ಕ್ರಿಮಿಗಳೂ ಕಾಡುಮೃಗಗಳು, ತಮ್ಮ ತಮ್ಮ ಜಾತಿಗನುಸಾರವಾಗಿ ಹುಟ್ಟಲಿ” ಅಂದನು. ಹಾಗೆಯೇ ಆಯಿತು. 25ದೇವರು ಕಾಡುಮೃಗಗಳನ್ನೂ, ಪಶುಗಳನ್ನೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದನು. ಆತನು ಅದನ್ನು ಒಳ್ಳೆಯದೆಂದು ಕಂಡನು. 26ಆಮೇಲೆ ದೇವರು, ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟು ಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ, ಪ್ರಾಣಿಗಳ ಮೇಲೆಯೂ, ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ದೊರೆತನಮಾಡಲಿ ಅಂದನು. 27ಹೀಗೆ ದೇವರು; “ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು. ದೇವರ ಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು. ಅವರನ್ನು ಗಂಡುಹೆಣ್ಣಾಗಿ ಸೃಷ್ಟಿ ಮಾಡಿದನು.” 28ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿ, “ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿರಿ. ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ” ಎಂದು ಅವರಿಗೆ ಹೇಳಿದನು. 29ಅಲ್ಲದೆ ದೇವರು, “ಇಗೋ, ಸಮಸ್ತ ಭೂಮಿಯ ಮೇಲಿರುವ ಬೀಜವುಳ್ಳ ಎಲ್ಲಾ ಪೈರುಗಳನ್ನೂ, ಬೀಜವುಳ್ಳ ಎಲ್ಲಾ ಹಣ್ಣಿನ ಮರಗಳನ್ನೂ ನಿಮಗೆ ಆಹಾರಕ್ಕಾಗಿ ಕೊಟ್ಟಿದ್ದೇನೆ 30ಇದಲ್ಲದೆ ಭೂಮಿಯ ಮೇಲೆ ತಿರುಗಾಡುವ ಮೃಗಗಳು, ಆಕಾಶದಲ್ಲಿ ಹಾರಾಡುವ ಪಕ್ಷಿಗಳು, ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳು ಮೊದಲಾದ ಜೀವಿಗಳಿಗೆ ಹಸುರಾದ ಸಸ್ಯಗಳನ್ನೆಲ್ಲಾ ಆಹಾರಕ್ಕಾಗಿ ಕೊಟ್ಟಿದ್ದೇನೆ” ಎಂದು ಹೇಳಿದನು. ಅದು ಹಾಗೆಯೇ ಆಯಿತು. 31ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅವೆಲ್ಲವೂ ಬಹು ಒಳ್ಳೆಯದಾಗಿ ತೋರಿತು. ಸಾಯಂಕಾಲವೂ ಉದಯಕಾಲವೂ ಆಗಿ ಆರನೆಯ ದಿನವಾಯಿತು. 2:1ಹೀಗೆ ಭೂಮಿಯು ಆಕಾಶಗಳು ಅವುಗಳಲ್ಲಿರುವ ಸಮಸ್ತವೂ ನಿರ್ಮಿತವಾದವು. 2ದೇವರು ತನ್ನ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು.
ಕೀರ್ತನೆ
ಕೀರ್ತ 104:1–2, 5–6, 10, 12–14, 24, 35
1ನನ್ನ ಮನವೇ, ಯೆಹೋವನನ್ನು ಕೊಂಡಾಡು. ಯೆಹೋವನೇ, ನನ್ನ ದೇವರೇ, ನೀನು ಸರ್ವೋತ್ತಮನು; ಪ್ರಭಾವ ಮತ್ತು ಮಹತ್ವಗಳಿಂದ ಭೂಷಿತನಾಗಿರುವೆ. 2ಬೆಳಕನ್ನು ವಸ್ತ್ರದಂತೆ ಹೊದ್ದುಕೊಂಡಿರುವೆ; ಆಕಾಶವನ್ನು ಗುಡಾರದಂತೆ ಎತ್ತಿ ಹರಡಿರುವೆ. 5ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ ಅದನ್ನು ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದ್ದೀ. 6ನೀನು ಅದನ್ನು ಆದಿಸಾಗರವೆಂಬ ವಸ್ತ್ರದಿಂದ ಹೊದಿಸಿದ್ದೀ; ನೀರು ಪರ್ವತಗಳನ್ನೂ ಮುಚ್ಚಿಬಿಟ್ಟಿತ್ತು. 10ಬುಗ್ಗೆಗಳನ್ನು ತಗ್ಗುಗಳಿಗೆ ಬರಮಾಡುತ್ತೀ; ಅವು ಪರ್ವತಗಳ ನಡುವೆ ಹರಿದುಹೋಗುತ್ತವೆ. 12ಪಕ್ಷಿಗಳು ಅವುಗಳ ಬಳಿಯ ಮರಗಳ ಕೊಂಬೆಗಳಲ್ಲಿ ವಾಸವಾಗಿದ್ದು ಗಾನಮಾಡುತ್ತವೆ. 13ನೀನು ನಿನ್ನ ಮೇಲಂತಸ್ತುಗಳಿಂದ ಪರ್ವತಗಳಿಗೆ ನೀರು ಕೊಡುತ್ತೀ; ನಿನ್ನ ಕಾರ್ಯಫಲದಿಂದ ಭೂಮಿಯು ತೃಪ್ತಿಹೊಂದುತ್ತದೆ. 14ಪಶುಗಳಿಗೋಸ್ಕರ ಹುಲ್ಲನ್ನು ಮೊಳಿಸುತ್ತೀ; ಮನುಷ್ಯರಿಗೋಸ್ಕರ ಪೈರುಗಳನ್ನು ಹುಟ್ಟಿಸುತ್ತೀ. ಅವರು ಭೂವ್ಯವಸಾಯಮಾಡಿ ಆಹಾರವನ್ನು, 24ಯೆಹೋವನೇ, ನಿನ್ನ ಕೈಕೆಲಸಗಳು ಬಗೆ ಬಗೆಯಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿರುವೆ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ. 35ಪಾಪಾತ್ಮರು ಭೂಲೋಕದಲ್ಲಿ ಮುಗಿದುಹೋಗಲಿ; ದುಷ್ಟರು ನಿರ್ಮೂಲವಾಗಲಿ. ನನ್ನ ಮನವೇ, ಯೆಹೋವನನ್ನು ಕೊಂಡಾಡು; ಯೆಹೋವನಿಗೆ ಸ್ತೋತ್ರ.
ಎರಡನೆಯ ವಾಚನ
1ಈ ಸಂಗತಿಗಳು ಆದ ಮೇಲೆ ದೇವರು ಅಬ್ರಹಾಮನನ್ನು ಪರೀಕ್ಷಿಸಿದನು. 2ಹೇಗೆಂದರೆ ಆತನು ಅವನನ್ನು, “ಅಬ್ರಹಾಮನೇ” ಎಂದು ಕರೆಯಲು ಅವನು, “ಇಗೋ, ಇದ್ದೇನೆ” ಎಂದನು. ಆಗ ಆತನು, “ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ಕರೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ಅವನನ್ನು ನಾನು ಹೇಳುವ ಒಂದು ಬೆಟ್ಟದ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸಬೇಕು” ಎಂದನು. 3ಅದರಂತೆ ಮುಂಜಾನೆಯೇ ಎದ್ದು ಅಬ್ರಹಾಮನು ಕತ್ತೆಗೆ ತಡಿ ಹಾಕಿಸಿ, ಯಜ್ಞಕ್ಕೆ ಬೇಕಾದ ಕಟ್ಟಿಗೆಯನ್ನು ಒಡೆಸಿ ಅದನ್ನು ತೆಗೆದುಕೊಂಡು ತನ್ನ ಸೇವಕರಲ್ಲಿ ಇಬ್ಬರನ್ನೂ, ತನ್ನ ಮಗನಾದ ಇಸಾಕನನ್ನೂ ಕರೆದುಕೊಂಡು ದೇವರು ಹೇಳಿದ ಸ್ಥಳಕ್ಕೆ ಹೊರಟನು. 4ಮೂರನೆಯ ದಿನದಲ್ಲಿ ಅಬ್ರಹಾಮನು ಕಣ್ಣೆತ್ತಿ ನೋಡುವಾಗ ಆ ಸ್ಥಳವು ದೂರದಲ್ಲಿ ಕಾಣಿಸಲು ಅವನು ತನ್ನ ಸೇವಕರಿಗೆ, 5“ನೀವು ಇಲ್ಲೇ ಕತ್ತೆಯ ಬಳಿಯಲ್ಲಿರಿ; ನಾನೂ ನನ್ನ ಮಗನೂ ಅಲ್ಲಿಗೆ ಹೋಗಿ ದೇವಾರಾಧನೆ ಮಾಡಿಕೊಂಡು ನಿಮ್ಮ ಬಳಿಗೆ ಬರುತ್ತೇವೆ” ಎಂದು ಅಬ್ರಹಾಮನು ಹೇಳಿದನು. 6ಆನಂತರ ಅಬ್ರಹಾಮನು ಯಜ್ಞಕ್ಕೆ ಬೇಕಾದ ಕಟ್ಟಿಗೆಯನ್ನು ತನ್ನ ಮಗನಾದ ಇಸಾಕನ ಮೇಲೆ ಹೊರಿಸಿ, ತನ್ನ ಕೈಯಲ್ಲೇ ಬೆಂಕಿಯನ್ನೂ ಕತ್ತಿಯನ್ನೂ ತೆಗೆದುಕೊಂಡ ನಂತರ ಅವರಿಬ್ಬರೂ ಹೊರಟರು. 7ಹೋಗುವಾಗ ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ, “ಅಪ್ಪಾ” ಎಂದು ಕರೆಯಲು ಅಬ್ರಹಾಮನು, “ಏನು ಮಗನೇ” ಎಂದನು. ಇಸಾಕನು, “ಇಗೋ, ಬೆಂಕಿಯೂ ಕಟ್ಟಿಗೆಯೂ ಉಂಟು; ಆದರೆ ಹೋಮಕ್ಕೆ ಬೇಕಾದ ಕುರಿ ಎಲ್ಲಿ” ಎಂದು ಕೇಳಿದ್ದಕ್ಕೆ, 8ಅಬ್ರಹಾಮನು, “ಮಗನೇ, ಹೋಮಕ್ಕೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುವನು” ಎಂದನು. 9ದೇವರು ಹೇಳಿದ ಸ್ಥಳಕ್ಕೆ ಅವರು ಸೇರಿದಾಗ ಅಬ್ರಹಾಮನು ಯಜ್ಞವೇದಿಯನ್ನು ಕಟ್ಟಿ, ಕಟ್ಟಿಗೆಯನ್ನು ಜೋಡಿಸಿ ತನ್ನ ಮಗನಾದ ಇಸಾಕನ ಕೈಕಾಲುಗಳನ್ನು ಕಟ್ಟಿ ಅವನನ್ನು ಯಜ್ಞವೇದಿಯ ಮೇಲೆ ಇದ್ದ ಕಟ್ಟಿಗೆಯ ಮೇಲೆ ಮಲಗಿಸಿದನು. 10ಅಬ್ರಹಾಮನು ತನ್ನ ಮಗನನ್ನು ಕೊಲ್ಲುವುದಕ್ಕೆ, ಕೈಚಾಚಿ ಕತ್ತಿಯನ್ನು ತೆಗೆದುಕೊಂಡನು. 11ಆಗ ಯೆಹೋವನ ದೂತನು ಆಕಾಶದೊಳಗಿನಿಂದ, “ಅಬ್ರಹಾಮನೇ, ಅಬ್ರಹಾಮನೇ” ಎಂದು ಅವನನ್ನು ಕರೆದನು. ಅದಕ್ಕೆ ಅಬ್ರಹಾಮನು, “ಇಗೋ, ಇದ್ದೇನೆ” ಎಂದನು. 12ಆ ದೂತನು ಅವನಿಗೆ, “ಹುಡುಗನ ಮೇಲೆ ಕೈ ಹಾಕಬೇಡ, ಅವನಿಗೆ ಏನೂ ಮಾಡಬೇಡ. ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಸಮರ್ಪಿಸುವುದಕ್ಕೆ ಹಿಂಜರಿಯಲಿಲ್ಲ. ಈಗ ನೀನು ದೇವರಲ್ಲಿ ಭಯಭಕ್ತಿಯುಳ್ಳವನು ಎಂದು ನನಗೆ ಗೊತ್ತಾಯಿತು” ಎಂದು ಹೇಳಿದನು. 13ಅಬ್ರಹಾಮನು ಕಣ್ಣೆತ್ತಿ ನೋಡಲಾಗಿ ತನ್ನ ಹಿಂದೆ, ಒಂದು ಟಗರು ಪೊದೆಯಲ್ಲಿ ಕೊಂಬುಗಳಿಂದ ಸಿಕ್ಕಿ ಹಾಕಿಕೊಂಡಿರುವುದನ್ನು ಕಂಡನು. ಅವನು ಹೋಗಿ ಅದನ್ನು ಹಿಡಿದು ತಂದು ತನ್ನ ಮಗನಿಗೆ ಬದಲಾಗಿ ಹೋಮಮಾಡಿದನು. 14ಆ ಸ್ಥಳಕ್ಕೆ ಅಬ್ರಹಾಮನು “ಯೆಹೋವ ಯೀರೆ” ಎಂದು ಹೆಸರಿಟ್ಟನು. ಯೆಹೋವನು ಬೆಟ್ಟದಲ್ಲಿ ಒದಗಿಸುವನು ಎಂಬುದಾಗಿ ಇಂದಿನವರೆಗೂ ಹಾಗೆ ಹೇಳುವ ಪದ್ಧತಿ ಇದೆ. 15ಯೆಹೋವನ ದೂತನು ಆಕಾಶದೊಳಗಿನಿಂದ ಎರಡನೆಯ ಸಾರಿ ಅಬ್ರಹಾಮನನ್ನು ಕರೆದು ಅವನಿಗೆ, 16“ನೀನು ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವುದಕ್ಕೆ ಹಿಂದೆಗೆಯದೆ ಹೋದುದರಿಂದ, ಯೆಹೋವನಾದ ನಾನು ನಿನಗೆ ಪ್ರಮಾಣವಾಗಿ ಹೇಳುವುದೇನಂದರೆ 17ನಾನು ನಿನ್ನನ್ನು ಆಶೀರ್ವದಿಸಿಯೇ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಅಧಿಕವಾಗಿ ಹೆಚ್ಚಿಸುವೆನು, ಅದನ್ನು ಆಕಾಶದ ನಕ್ಷತ್ರಗಳಂತೆಯೂ, ಸಮುದ್ರ ತೀರದಲ್ಲಿರುವ ಮರಳಿನಂತೆಯೂ ಅಸಂಖ್ಯವಾಗುವಂತೆ ಮಾಡುವೆನು; ಅವರು ಶತ್ರುಗಳ ಪಟ್ಟಣಗಳನ್ನು ಸ್ವತ್ತಾಗಿ ಮಾಡಿಕೊಳ್ಳುವರು. 18ನೀನು ನನ್ನ ಮಾತಿಗೆ ವಿಧೇಯನಾಗಿ ಭೂಮಿಯ ಎಲ್ಲಾ ಜನಾಂಗಗಳಿಗೆ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವುದು ಎಂಬುದಾಗಿ ಯೆಹೋವನು ವಾಗ್ದಾನ ಮಾಡಿದ್ದಾನೆ.” ಎಂದನು.
ಕೀರ್ತನೆ
5ನನ್ನ ಪಾಲೂ, ನನ್ನ ಪಾನವೂ ಯೆಹೋವನೇ, ನೀನೇ ನನ್ನ ಸ್ವತ್ತನ್ನು ಭದ್ರಗೊಳಿಸುತ್ತೀ. 8ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನು ಎಂದಿಗೂ ಕದಲುವುದಿಲ್ಲ. 9ಆದಕಾರಣ ನನ್ನ ಹೃದಯವು ಹರ್ಷಿಸುತ್ತದೆ; ನನ್ನ ಮನವು ಉಲ್ಲಾಸಗೊಳ್ಳುತ್ತದೆ; ನನ್ನ ಶರೀರವೂ ಸುರಕ್ಷಿತವಾಗಿರುವುದು. 10ಏಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ; ನಿನ್ನ ಭಕ್ತನಿಗೆ ಅಧೋಲೋಕವನ್ನು ನೋಡಗೊಡಿಸುವುದಿಲ್ಲ. 11ನೀನು ನನಗೆ ಜೀವಮಾರ್ಗವನ್ನು ತಿಳಿಯಪಡಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ; ನಿನ್ನ ಬಲಗೈಯಲ್ಲಿ ಶಾಶ್ವತ ಭಾಗ್ಯವಿದೆ.
ಮೂರನೆಯ ವಾಚನ
15ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ನೀನು ನನಗೆ ಮೊರೆಯಿಡುವುದೇನು? ಮುಂದಕ್ಕೆ ಹೊರಡಬೇಕೆಂದು ಇಸ್ರಾಯೇಲರಿಗೆ ಹೇಳು. 16ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಕೈಚಾಚಿ ಅದನ್ನು ವಿಭಾಗಿಸು, ಆಗ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ನಡೆದುಕೊಂಡು ಹೋಗುವರು. 17ನಾನಂತೂ ಐಗುಪ್ತ್ಯರ ಹೃದಯಗಳನ್ನು ಕಠಿಣಪಡಿಸುವೆನು. ಅವರು ಇವರನ್ನು ಹಿಂದಟ್ಟುವರು. ಆಗ ನಾನು ಫರೋಹನ ಮೇಲೆಯೂ, ಅವನ ಸಮಸ್ತ ಸೈನ್ಯದವರ ಮೇಲೆಯೂ, ರಥಗಳ ಮೇಲೆಯೂ ಮತ್ತು ಕುದುರೆಗಳ ಮೇಲೆಯೂ ಪ್ರಖ್ಯಾತಿಗೊಳ್ಳುವೆನು. 18ನಾನು ಫರೋಹನನಲ್ಲಿಯೂ ಅವನ ರಥಗಳಲ್ಲಿಯೂ, ಕುದುರೆಗಳಲ್ಲಿಯೂ ಪ್ರಖ್ಯಾತಿ ಹೊಂದಿದ ನಂತರ ನಾನೇ ಯೆಹೋವನು ಎಂಬುದನ್ನು ಐಗುಪ್ತ್ಯರು ತಿಳಿದುಕೊಳ್ಳುವರು” ಎಂದನು. 19ಆಗ ಇಸ್ರಾಯೇಲರ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದಕ್ಕೆ ಬಂದನು. ಅವರ ಮುಂದಾಗಿ ಹೋಗುತ್ತಿದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು. 20ಆ ಮೇಘಸ್ತಂಭವು ಐಗುಪ್ತ್ಯರ ಪಾಳೆಯಕ್ಕೂ, ಇಸ್ರಾಯೇಲರ ಪಾಳೆಯಕ್ಕೂ ನಡುವೆ ಬಂದಿತು. ಅದು ಐಗುಪ್ತ್ಯರಿಗೆ ಕತ್ತಲನ್ನೂ, ಇಸ್ರಾಯೇಲರಿಗೆ ರಾತ್ರಿಯಲ್ಲಿ ಬೆಳಕನ್ನು ಕೊಟ್ಟಿದ್ದರಿಂದ ಆ ರಾತ್ರಿಯೆಲ್ಲಾ ಒಬ್ಬರ ಹತ್ತಿರಕ್ಕೆ ಒಬ್ಬರು ಬರಲಾಗಲಿಲ್ಲ. 21ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ, ಯೆಹೋವನು ಆ ರಾತ್ರಿಯೆಲ್ಲಾ ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿಯನ್ನು ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದು ಕಡೆಗೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದನು. ನೀರು ಇಬ್ಭಾಗವಾಯಿತು. 22ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲಿ ನಡೆದುಹೋದರು. ನೀರು ಅವರ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತೆ ನಿಂತುಕೊಂಡಿತು. 23ಐಗುಪ್ತ್ಯರೂ ಅಂದರೆ ಫರೋಹನ ಕುದುರೆಗಳೂ, ರಥಗಳೂ, ರಾಹುತರೂ ಅವರನ್ನು ಬೆನ್ನಟ್ಟುವವರಾಗಿ ಅವರ ಹಿಂದೆಯೇ ಸಮುದ್ರದೊಳಗೆ ಬಂದರು. 24ಬೆಳಗಿನ ಜಾವದಲ್ಲಿ ಯೆಹೋವನು ಆ ಅಗ್ನಿ ಸ್ತಂಭ ಮತ್ತು ಮೇಘ ಸ್ತಂಭದೊಳಗಿನಿಂದ ಐಗುಪ್ತ್ಯರ ದಂಡಿನ ಕಡೆಗೆ ನೋಡಿ ಅವರಲ್ಲಿ ಗಲಿಬಿಲಿಯನ್ನು ಉಂಟುಮಾಡಿದನು. 25ಯೆಹೋವನು ಅವರ ರಥಗಳ ಚಕ್ರದ ಕೀಲುಗಳಲ್ಲಿ ವ್ಯತ್ಯಾಸ ಮಾಡಿಬಿಟ್ಟದ್ದರಿಂದ ಐಗುಪ್ತರು ಬಹು ಕಷ್ಟದಿಂದ ರಥಗಳನ್ನು ಸಾಗಿಸಿಕೊಂಡು ಹೋಗಬೇಕಾಯಿತು. ಆಗ ಐಗುಪ್ತ್ಯರು, “ನಾವು ಇಸ್ರಾಯೇಲರ ಮುಂದೆ ನಿಲ್ಲಲಾರೆವು, ಓಡಿ ಹೋಗೋಣ, ಯೆಹೋವನು ಅವರಿಗೋಸ್ಕರ ನಮಗೆ ವಿರೋಧವಾಗಿ ಯುದ್ಧಮಾಡುತ್ತಿದ್ದಾನೆ” ಎಂದು ಹೇಳಿಕೊಂಡರು. 26ಅಷ್ಟರಲ್ಲಿ ಯೆಹೋವನು ಮೋಶೆಗೆ, “ಸಮುದ್ರದ ಮೇಲೆ ನಿನ್ನ ಕೈಚಾಚು, ಆಗ ಅದರ ನೀರು ಮೊದಲಿನಂತೆ ಬಂದು ಐಗುಪ್ತ್ಯರನ್ನೂ, ಅವರ ರಥಗಳನ್ನೂ, ರಾಹುತರನ್ನೂ ಮುಳುಗಿಸುವುದು” ಎಂದು ಹೇಳಿದನು. 27ಮೋಶೆ ಸಮುದ್ರದ ಮೇಲೆ ಕೈಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿದ್ದಂತೆಯೇ ತುಂಬಿಕೊಂಡಿತು. ಐಗುಪ್ತ್ಯರು ಓಡಿಹೋಗುತ್ತಾ ಅದರ ಎದುರಾಗಿಯೇ ಬಂದರು. ಹೀಗೆ ಯೆಹೋವನು ಐಗುಪ್ತ್ಯರನ್ನು ಸಮುದ್ರದೊಳಗೆ ತಳ್ಳಿಬಿಟ್ಟನು. 28ನೀರು ಮೊದಲಿನಂತೆ ಬಂದು ಆ ರಥಗಳನ್ನೂ, ರಾಹುತರನ್ನೂ, ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನೂ ಮುಳುಗಿಸಿಬಿಟ್ಟಿತ್ತು, ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ. 29ಇಸ್ರಾಯೇಲರಾದರೋ, ಸಮುದ್ರದೊಳಗೆ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತ್ತು. 30ಆ ದಿನದಲ್ಲಿ ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತ್ಯರ ಕೈಯಿಂದ ರಕ್ಷಿಸಿದನು. ಐಗುಪ್ತ್ಯರು ಸತ್ತು ಸಮುದ್ರ ತೀರದಲ್ಲಿ ಬಿದ್ದಿರುವುದನ್ನು ಇಸ್ರಾಯೇಲರು ನೋಡಿದರು. 31ಯೆಹೋವನು ಐಗುಪ್ತ್ಯರಲ್ಲಿ ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಾಯೇಲರು ನೋಡಿ ಯೆಹೋವನಿಗೆ ಭಯಪಟ್ಟು ಆತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯನ್ನಿಟ್ಟರು. 15:1ಆಗ ಮೋಶೆಯೂ, ಇಸ್ರಾಯೇಲರೂ ಯೆಹೋವನನ್ನು ಸ್ತುತಿಸುವುದಕ್ಕಾಗಿ ಈ ಕೀರ್ತನೆಯನ್ನು ಹಾಡಿದರು: “ಯೆಹೋವನಿಗೆ ಸ್ತೋತ್ರ ಗಾನಮಾಡೋಣ; ಆತನು ಮಹಾಜಯಶಾಲಿಯಾದವನು. ಕುದುರೆಗಳನ್ನು ಮತ್ತು ರಾಹುತರನ್ನು ಸಮುದ್ರದಲ್ಲಿ ಕೆಡವಿ ನಾಶಮಾಡಿದ್ದಾನೆ.
ಕೀರ್ತನೆ
1ಆಗ ಮೋಶೆಯೂ, ಇಸ್ರಾಯೇಲರೂ ಯೆಹೋವನನ್ನು ಸ್ತುತಿಸುವುದಕ್ಕಾಗಿ ಈ ಕೀರ್ತನೆಯನ್ನು ಹಾಡಿದರು: “ಯೆಹೋವನಿಗೆ ಸ್ತೋತ್ರ ಗಾನಮಾಡೋಣ; ಆತನು ಮಹಾಜಯಶಾಲಿಯಾದವನು. ಕುದುರೆಗಳನ್ನು ಮತ್ತು ರಾಹುತರನ್ನು ಸಮುದ್ರದಲ್ಲಿ ಕೆಡವಿ ನಾಶಮಾಡಿದ್ದಾನೆ. 2ನನ್ನ ಬಲವೂ, ಕೀರ್ತನೆಯೂ ಯಾಹುವೇ. ಆತನಿಂದ ನನಗೆ ರಕ್ಷಣೆ ಉಂಟಾಯಿತು. ನಮ್ಮ ದೇವರು ಆತನೇ, ಆತನನ್ನು ಸ್ತುತಿಸುವೆನು, ನಮ್ಮ ಪೂರ್ವಿಕರ ದೇವರು ಆತನೇ, ಆತನ ಮಹಿಮೆಯನ್ನು ಪ್ರಖ್ಯಾತಿಪಡಿಸುವೆವು. 3ಯೆಹೋವನು ಯುದ್ಧವೀರನು; ಯೆಹೋವ ಎಂಬುದು ಆತನ ನಾಮವಾಗಿದೆ. 4ಆತನು ಫರೋಹನ ರಥಗಳನ್ನೂ, ಸ್ಯೆನಿಕರನ್ನೂ ಸಮುದ್ರದಲ್ಲಿ ಕೆಡವಿಹಾಕಿದನು. ಫರೋಹನ ಶ್ರೇಷ್ಠ ವೀರರನ್ನು ಕೆಂಪುಸಮುದ್ರದಲ್ಲಿ ಮುಳುಗಿಸಿ ಬಿಟ್ಟನು. 5ಆಳವಾದ ಸಾಗರವು ಅವರನ್ನು ಮುಚ್ಚಿಬಿಟ್ಟಿತು. ಅವರು ಕಲ್ಲಿನಂತೆ ಸಮುದ್ರದ ತಳವನ್ನು ಸೇರಿದರು. 6ಯೆಹೋವನೇ, ನಿನ್ನ ಬಲಗೈಯಲ್ಲಿರುವ ಶಕ್ತಿ ಎಷ್ಟೋ ಮಹಿಮೆಯುಳ್ಳದ್ದಾಗಿದೆ. ಯೆಹೋವನೇ, ನಿನ್ನ ಬಲಗೈ ಶತ್ರುಗಳನ್ನು ಪುಡಿಪುಡಿಮಾಡಿಬಿಡುತ್ತದೆ. 17ನೀನು ಅವರನ್ನು ನಿನ್ನ ಸ್ವಕೀಯ ದೇಶವಾಗಿರುವ ಬೆಟ್ಟದ ಸೀಮೆಗೆ ತಂದು ಬಲಪಡಿಸುವಿ, ಯೆಹೋವನೇ, ನೀನು ಸ್ವಂತ ನಿವಾಸಕ್ಕಾಗಿ ಕಟ್ಟಿಕೊಂಡಿರುವ ಸ್ಥಳದವರೆಗೂ ಕರ್ತನೇ, ನೀನು ನಿನಗಾಗಿ ಸಿದ್ಧಪಡಿಸಿಕೊಂಡಿರುವ ಪವಿತ್ರ ಪರ್ವತದವರೆಗೂ ಅವರನ್ನು ಬರಮಾಡುವಿ. 18ಯೆಹೋವನೇ ಯುಗಯುಗಾಂತರಗಳಲ್ಲಿಯೂ ಅರಸನಾಗಿ ಆಳುವವನು.”
ನಾಲ್ಕನೆಯ ವಾಚನ
5“ನಿನ್ನ ಸೃಷ್ಟಿಕರ್ತನೇ ನಿನ್ನ ಪತಿ, ಆತನ ಹೆಸರು ಸೇನಾಧೀಶ್ವರನಾದ ಯೆಹೋವ; ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನ ನ್ಯಾಯಸ್ಥಾಪಕನಾಗಿದ್ದಾನೆ; ಸರ್ವಲೋಕದ ದೇವರೆಂಬ ನಾಮಧೇಯವನ್ನು ಹೊಂದಿರುವನು. 6ನೀನು ತ್ಯಜಿಸಿದ ಮನನೊಂದ ಹೆಂಡತಿ, ಹೌದು, ತ್ಯಜಿಸಲ್ಪಟ್ಟವಳಾದ ನನ್ನ ಯೌವನಕಾಲದ ಪತ್ನಿ ಎಂದು ಯೆಹೋವನು ನಿನ್ನನ್ನು ಕನಿಕರಿಸಿ ಕರೆದಿದ್ದಾನೆ” ಎಂಬುದು ನಿನ್ನ ದೇವರ ನುಡಿ. 7“ಕ್ಷಣಮಾತ್ರ ನಿನ್ನನ್ನು ಬಿಟ್ಟಿದ್ದೆನು, ಮಹಾ ಕೃಪೆಯಿಂದ ಸೇರಿಸಿಕೊಳ್ಳುವೆನು. 8ತಟ್ಟನೆ ಉಬ್ಬಿ ಹರಿಯುವ ಕೋಪದಿಂದ ಒಂದು ಕ್ಷಣ ಮಾತ್ರ ನನ್ನ ಮುಖವನ್ನು ನಿನಗೆ ಮರೆಮಾಡಿಕೊಂಡಿದ್ದೆನು, ಶಾಶ್ವತ ಕೃಪೆಯಿಂದ ನಿನ್ನನ್ನು ಕರುಣಿಸುವೆನು” ಎಂದು ನಿನ್ನ ವಿಮೋಚಕನಾದ ಯೆಹೋವನು ಅನ್ನುತ್ತಾನೆ. 9“ನಿನ್ನನ್ನು ತ್ಯಜಿಸಿದ್ದು ನನಗೆ ನೋಹನ ಕಾಲದ ಜಲಪ್ರಳಯದಂತಿದೆ; ಇಂತಹ ಜಲಪ್ರಳಯವು ಭೂಮಿಯನ್ನು ಪುನಃ ಆವರಿಸುವುದಿಲ್ಲ ಎಂದು ನಾನು ಹೇಗೆ ಪ್ರಮಾಣಮಾಡಿದೆನೋ ಹಾಗೆಯೇ ನಾನು ನಿನ್ನ ಮೇಲೆ ಇನ್ನು ಕೋಪಮಾಡುವುದಿಲ್ಲ, ಗದರಿಸುವುದಿಲ್ಲ ಎಂದು ಈಗ ಪ್ರಮಾಣಮಾಡಿದ್ದೇನೆ. 10ಬೆಟ್ಟಗಳು ಸ್ಥಳವನ್ನು ಬಿಟ್ಟುಹೋದಾವು, ಗುಡ್ಡಗಳು ಕದಲಿಯಾವು; ಆದರೆ ನನ್ನ ಕೃಪೆಯು ನಿನ್ನನ್ನು ಬಿಟ್ಟುಹೋಗದು, ಸಮಾಧಾನದ ನನ್ನ ಒಪ್ಪಂದವು ಕದಲದು ಎಂದು ನಿನ್ನನ್ನು ಕರುಣಿಸುವ ಯೆಹೋವನು ಅನ್ನುತ್ತಾನೆ. 11ಕುಗ್ಗಿದವಳೇ, ಗಾಳಿಯ ಬಡಿತಕ್ಕೆ ಗುರಿಯಾದವಳೇ, ಯಾರೂ ಸಂತೈಸದವಳೇ, ಇಗೋ, ಇಂದ್ರನೀಲಮಣಿಗಳಿಂದ ನಿನಗೆ ಅಸ್ತಿವಾರವನ್ನು ಹಾಕಿ, ನಿನ್ನ ಕಲ್ಲುಗಳನ್ನು ನೀಲಾಂಜನದ ಗಾರೆಯಿಂದ ಕಟ್ಟುವೆನು. 12ನಿನ್ನ ಶಿಖರಗಳನ್ನು ಮಾಣಿಕ್ಯಗಳಿಂದ, ನಿನ್ನ ಬಾಗಿಲುಗಳನ್ನು ಪದ್ಮರಾಗಗಳಿಂದ, ನಿನ್ನ ಪೌಳಿಗೋಡೆಯನ್ನು ಮನೋಹರ ರತ್ನಗಳಿಂದ ನಿರ್ಮಿಸುವೆನು. 13ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವುದು. 14ಧರ್ಮವೇ ನಿನಗೆ ಆಧಾರ; ನೀನು ಹಿಂಸೆಗೆ ದೂರವಾಗಿರುವಿ, ನಿನಗೆ ಹೆದರಿಕೆ ಇರುವುದಿಲ್ಲ, ನಾಶನವು ದೂರವಾಗಿರುವುದು, ನಿನ್ನ ಹತ್ತಿರಕ್ಕೆ ಬಾರದು.
ಕೀರ್ತನೆ
1ದಾವೀದನ ಕೀರ್ತನೆ, ದೇವಾಲಯದ ಪ್ರತಿಷ್ಠೆಯಲ್ಲಿ ಹಾಡತಕ್ಕದ್ದು. ಯೆಹೋವನೇ, ನನ್ನ ಶತ್ರುಗಳು ಸಂತೋಷಿಸುವುದಕ್ಕೆ ಅವಕಾಶಕೊಡದೆ, ನನ್ನನ್ನು ಉದ್ಧರಿಸಿದ್ದರಿಂದ ನಿನ್ನನ್ನು ಕೊಂಡಾಡುವೆನು. 3ಯೆಹೋವನೇ, ನನ್ನ ಪ್ರಾಣವನ್ನು ಪಾತಾಳದಿಂದಲೂ ಎತ್ತಿದಿಯಲ್ಲಾ; ನನ್ನನ್ನು ಸಮಾಧಿಯಲ್ಲಿ ಸೇರಿಸದೆ ಬದುಕಿಸಿದಿಯಲ್ಲಾ. 4ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ; ಆತನ ಪರಿಶುದ್ಧನಾಮವನ್ನು ಕೊಂಡಾಡಿರಿ. 5ಆತನ ಕೋಪವು ಕ್ಷಣಮಾತ್ರವೇ; ಆತನ ಅನುಗ್ರಹವೋ ಜೀವಮಾನವೆಲ್ಲಾ ಇರುವುದು; ಸಂಜೆಗೆ ದುಃಖವೆಂಬುದು ಬಂದು ನಮ್ಮ ಬಳಿಯಲ್ಲಿ ಇಳಿದುಕೊಂಡರೂ, ಮುಂಜಾನೆ ಹರ್ಷಧ್ವನಿಯು ಕೇಳಿಸುವುದು. 10ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ಕರುಣಿಸು; ಯೆಹೋವನೇ, ನನ್ನ ಸಹಾಯಕ್ಕೆ ಬಾ” ಎಂದು ಹೇಳಿದೆನು. 11ಆಗ ನೀನು ನನ್ನ ಗೋಳಾಟವನ್ನು ತಪ್ಪಿಸಿ, ಸಂತೋಷದಿಂದ ಕುಣಿದಾಡುವಂತೆ ಮಾಡಿದಿ; ನಾನು ಕಟ್ಟಿಕೊಂಡಿದ್ದ ಗೋಣಿತಟ್ಟನ್ನು ತೆಗೆದುಬಿಟ್ಟು, ಹರ್ಷವಸ್ತ್ರವನ್ನು ನನಗೆ ಧಾರಣೆಮಾಡಿಸಿದಿ. 12ಇದರಿಂದ ಯೆಹೋವನೇ, ನನ್ನ ಮನಸ್ಸು ಎಡೆಬಿಡದೆ ನಿನ್ನನ್ನು ಕೀರ್ತಿಸುತ್ತಿರುವುದು; ನನ್ನ ದೇವರೇ, ನಿನ್ನನ್ನು ಸದಾಕಾಲವೂ ಸ್ತುತಿಸುವೆನು.
ಐದನೆಯ ವಾಚನ
1“ಎಲೈ, ಬಾಯಾರಿದ ಸಕಲಜನರೇ, ನೀರಿನ ಬಳಿಗೆ ಬನ್ನಿರಿ, ಹಣವಿಲ್ಲದವನು ಸಹ ಬರಲಿ! ಬನ್ನಿರಿ, ಕೊಂಡುಕೊಳ್ಳಿರಿ, ಊಟ ಮಾಡಿರಿ! ಬಂದು ದ್ರಾಕ್ಷಾರಸವನ್ನೂ, ಹಾಲನ್ನೂ ಹಣಕೊಡದೆ, ಕ್ರಯವಿಲ್ಲದೆ ತೆಗೆದುಕೊಳ್ಳಿರಿ. 2ಆಹಾರವಲ್ಲದ್ದಕ್ಕೆ ಹಣವನ್ನು ಏಕೆ ವ್ಯರ್ಥ ಮಾಡುತ್ತೀರಿ? ತೃಪ್ತಿಗೊಳಿಸದ ಪದಾರ್ಥಕ್ಕೆ ನಿಮ್ಮ ದುಡಿತವನ್ನು ವೆಚ್ಚಮಾಡುವುದೇಕೆ? ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ಒಳ್ಳೆಯದನ್ನೇ ಉಂಡು ಮೃಷ್ಟಾನ್ನದಲ್ಲಿ ಆನಂದಪಡಿರಿ. 3ಕಿವಿಯನ್ನು ನನ್ನ ಕಡೆಗೆ ತಿರುಗಿಸಿರಿ, ನನ್ನ ಬಳಿಗೆ ಬನ್ನಿರಿ; ಆಲಿಸಿದರೆ ಬದುಕಿ ಬಾಳುವಿರಿ. ನಾನು ದಾವೀದನಿಗೆ ಖಂಡಿತವಾಗಿ ವಾಗ್ದಾನಮಾಡಿದ ಕೃಪಾವರಗಳನ್ನು ನಿಮಗೆ ಕೊಡುತ್ತೇನೆ” ಎಂಬ ಶಾಶ್ವತವಾದ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾಡಿಕೊಳ್ಳುವೆನು. 4ಇಗೋ, ನಾನು ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ, ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು. 5ಎಲೈ, ಇಸ್ರಾಯೇಲೇ, ಅವನಂತೆ ನೀನೂ ನಿನಗೆ ಗೊತ್ತಿಲ್ಲದ ಜನಾಂಗವನ್ನು ನಿನ್ನ ಅಧೀನಕ್ಕೆ ಕರೆಯುವಿ, ಇಸ್ರಾಯೇಲಿನ ಸದಮಲಸ್ವಾಮಿ ಎನಿಸಿಕೊಳ್ಳುವ ನಿನ್ನ ದೇವರಾದ ಯೆಹೋವನು ನಿನಗೆ ವೈಭವ ಕೊಟ್ಟಿರುವುದನ್ನು ನೋಡಿ ನಿನ್ನನ್ನು ತಿಳಿಯದ ಜನಾಂಗವು ನಿನ್ನ ಆಶ್ರಯಕ್ಕೆ ಓಡಿಬರುವುದು. 6ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ. 7ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ, ಆತನು ಮಹಾಕೃಪೆಯಿಂದ ಕ್ಷಮಿಸುವನು. 8ಯೆಹೋವನು ಹೀಗೆನ್ನುತ್ತಾನೆ, “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. 9ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ, ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ. 10ಮಳೆಯೂ, ಹಿಮವೂ ಆಕಾಶದಿಂದ ಬಿದ್ದು, ಭೂಮಿಯನ್ನು ತೋಯಿಸಿ, ಹಸರುಗೊಳಿಸಿ ಫಲಿಸುವಂತೆ ಮಾಡಿ, ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸಿದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವುದಿಲ್ಲವೋ, 11ಹಾಗೆಯೇ ನನ್ನ ಬಾಯಿಂದ ಹೊರಟ ಮಾತು, ನನ್ನ ಇಷ್ಟಾರ್ಥವನ್ನು ನೆರವೇರಿಸಿ, ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವುದಿಲ್ಲ.
ಕೀರ್ತನೆ
2ಇಗೋ, ದೇವರೇ ನನಗೆ ರಕ್ಷಣೆ, ನಾನು ಹೆದರದೆ ಭರವಸವಿಡುವೆನು; ಯೆಹೋವನೇ ನನ್ನ ಬಲವೂ, ಕೀರ್ತನೆಯೂ ಆತನೇ, ನನಗೆ ರಕ್ಷಣೆಯೂ ಆಗಿದ್ದಾನೆ.” 3ಮತ್ತು ರಕ್ಷಣೆಯೆಂಬ ಬಾವಿಗಳಿಂದ ಉಲ್ಲಾಸದೊಡನೆ ನೀವು ನೀರನ್ನು ಸೇದುವಿರಿ. 4ಆ ದಿನದಲ್ಲಿ ನೀವು ಹೇಳುವುದೇನೆಂದರೆ, “ಯೆಹೋವನಿಗೆ ಕೃತಜ್ಞತಾ ಸ್ತುತಿಮಾಡಿರಿ, ಆತನ ನಾಮದ ಮಹತ್ವವನ್ನು ವರ್ಣಿಸಿರಿ, ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಿಪಡಿಸಿರಿ, ಆತನ ನಾಮವು ಉನ್ನತೋನ್ನತ ಎಂದು ಜ್ಞಾಪಕಪಡಿಸಿರಿ. 5ಯೆಹೋವನನ್ನು ಗಾನದಿಂದ ಸ್ತುತಿಸಿರಿ; ಆತನು ಮಹಿಮೆಯ ಕಾರ್ಯಗಳನ್ನು ಮಾಡಿದ್ದಾನೆ; ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ. 6ಚೀಯೋನಿನ ನಿವಾಸಿಗಳೇ, ಉತ್ಸಾಹ ಧ್ವನಿಮಾಡಿರಿ; ಜಯಘೋಷಮಾಡಿರಿ. ಇಸ್ರಾಯೇಲರ ಪರಿಶುದ್ಧನು ನಿಮ್ಮ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ” ಎಂಬುದೇ.
ಆರನೆಯ ವಾಚನ
ಈ ಅನುವಾದದಲ್ಲಿ ಇಲ್ಲ
ಕೀರ್ತನೆ
7ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆಗಳು ನಂಬಿಕೆಗೆ ಯೋಗ್ಯವಾದದ್ದು; ಅವು ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ. 8ಯೆಹೋವನ ಆಜ್ಞೆಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ. ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ. 9ಯೆಹೋವನ ಭಯ ಪರಿಶುದ್ಧವಾಗಿದೆ; ಅದು ಶಾಶ್ವತವಾದದ್ದೇ. ಯೆಹೋವನ ಕಟ್ಟಳೆಗಳು ಯಥಾರ್ಥವಾದವುಗಳು; ಅವು ಕೇವಲ ನ್ಯಾಯವಾಗಿವೆ. 10ಅವು ಬಂಗಾರಕ್ಕಿಂತಲೂ, ಅಪರಂಜಿರಾಶಿಗಿಂತಲೂ ಅಪೇಕ್ಷಿಸತಕ್ಕವುಗಳು. ಅವು ಜೇನಿಗಿಂತಲೂ, ಶೋಧಿಸಿದ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ.
ಏಳನೆಯ ವಾಚನ
16ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 17“ನರಪುತ್ರನೇ, ಇಸ್ರಾಯೇಲ್ ವಂಶದವರು ಸ್ವದೇಶದಲ್ಲಿ ವಾಸಿಸುತ್ತಿದ್ದಾಗ ತಮ್ಮ ದುರ್ಮಾರ್ಗ, ದುರಾಚಾರಗಳಿಂದ ಅದನ್ನು ಅಶುದ್ಧಗೊಳಿಸಿದರು; ಅವರ ನಡತೆಯು ಮುಟ್ಟಿನ ಅಶುದ್ಧತ್ವದ ಹಾಗಿತ್ತು. 18ಅವರು ದೇಶದ ಮೇಲೆ ರಕ್ತವನ್ನು ಸುರಿಸಿ, ತಮ್ಮ ವಿಗ್ರಹಗಳಿಂದ ಅದನ್ನು ಅಶುದ್ಧಪಡಿಸಿದ ಕಾರಣ ನಾನು ಅವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿದೆನು. 19ಜನಾಂಗಗಳೊಳಗೆ ಅವರನ್ನು ಚದರಿಸಿ, ದೇಶಗಳಿಗೆ ತೂರಿಬಿಟ್ಟು, ಅವರ ದುರ್ಮಾರ್ಗ, ದುರಾಚಾರಗಳಿಗೆ ಸರಿಯಾಗಿ ನ್ಯಾಯತೀರಿಸಿದೆನು. 20ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ, ‘ಇವರು ಯೆಹೋವನ ಪ್ರಜೆಗಳು, ಆತನ ದೇಶದಿಂದ ಭ್ರಷ್ಟರಾಗಿ ಬಂದಿದ್ದಾರೆ’ ಎಂದು ಅವರಿಗೆ ಹೇಳಿ, ನನ್ನ ಪರಿಶುದ್ಧ ಹೆಸರನ್ನು ಅಪವಿತ್ರ ಮಾಡುವರು. 21ಆದರೆ ಇಸ್ರಾಯೇಲಿನ ವಂಶದವರು ಜನಾಂಗಗಳೊಳಗೆ ಸೇರಿ, ಅಲ್ಲಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧ ನಾಮವನ್ನು ಕುರಿತು ಮನಮರುಗಿದೆನು.” 22ಆದಕಾರಣ ನೀನು ಇಸ್ರಾಯೇಲ್ ವಂಶದವರಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲ್ ವಂಶದವರೇ, ನಿಮ್ಮ ನಿಮಿತ್ತವಲ್ಲ, ನೀವು ಜನಾಂಗಗಳೊಳಗೆ ಸೇರಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧನಾಮದ ನಿಮಿತ್ತವೇ ಈ ರಕ್ಷಣ ಕಾರ್ಯವನ್ನು ಮಾಡುತ್ತೇನೆ. 23ಜನಾಂಗಗಳಲ್ಲಿ ಅಪಕೀರ್ತಿಗೆ ಗುರಿಯಾದ, ಅಂದರೆ ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ ನನ್ನ ಘನವುಳ್ಳ ನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು; ಹೀಗೆ ನಾನು ಅವುಗಳ ಕಣ್ಣೆದುರಿಗೆ ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವಾಗ ನಾನೇ ಯೆಹೋವನು ಎಂದು ಅವರಿಗೆ ತಿಳಿಯುವುದು” ಇದು ಕರ್ತನಾದ ಯೆಹೋವನ ನುಡಿ. 24“ನಾನು ನಿಮ್ಮನ್ನು ಜನಾಂಗಗಳೊಳಗಿಂದ ಬಿಡಿಸಿ, ಸಕಲ ದೇಶಗಳಿಂದ ಒಟ್ಟುಗೂಡಿಸಿ ಸ್ವದೇಶಕ್ಕೆ ಬರಮಾಡುವೆನು. 25ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಪ್ರೋಕ್ಷಿಸಲು ನೀವು ನಿರ್ಮಲರಾಗುವಿರಿ; ನಿಮ್ಮ ಸಮಸ್ತ ವಿಗ್ರಹಗಳಿಂದಲೂ, ಸಕಲ ವಿಧವಾದ ಹೊಲಸಿನಿಂದಲೂ ನಿಮ್ಮನ್ನು ಶುದ್ಧಿಮಾಡುವೆನು. 26ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು, ನಿಮ್ಮಲ್ಲಿ ನೂತನ ಸ್ವಭಾವವನ್ನು ಹುಟ್ಟಿಸುವೆನು; ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು, ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು. 27ನನ್ನ ಆತ್ಮವನ್ನು ನಿಮ್ಮಲ್ಲಿ ನೆಲಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವಿರಿ. 28ನಾನು ನಿಮ್ಮ ಪೂರ್ವಿಕರಿಗೆ ಅನುಗ್ರಹಿಸಿದ ದೇಶದಲ್ಲಿ ನೀವು ವಾಸಿಸುವಿರಿ. ನೀವು ನನಗೆ ಪ್ರಜೆಯಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.
ಕೀರ್ತನೆ
2ನನ್ನ ಮನಸ್ಸು ದೇವರಿಗಾಗಿ, ಚೈತನ್ಯಸ್ವರೂಪನಾದ ದೇವರಿಗಾಗಿ ಹಾರೈಸುತ್ತದೆ; ನಾನು ಯಾವಾಗ ಹೋಗಿ ದೇವರ ಸನ್ನಿಧಿಯಲ್ಲಿ ಸೇರುವೆನೋ? 4ನಾನು ಭಜನೋತ್ಸವದಲ್ಲಿ ಸೇರಿ, ಜನಸಮೂಹದೊಡನೆ ಹರ್ಷಧ್ವನಿಮಾಡುತ್ತಾ, ಸ್ತೋತ್ರಪದಗಳನ್ನು ಹಾಡುತ್ತಾ, ದೇವಾಲಯಕ್ಕೆ ಹೋಗುತ್ತಿದ್ದದ್ದನ್ನೇ ನೆನಪಿಗೆ ತಂದುಕೊಂಡು, ನನ್ನೊಳಗೆ ನಾನೇ ಹಂಬಲಿಸುತ್ತಿರುವೆನು. 43:3ನಿನ್ನ ಬೆಳಕನ್ನು, ನಿನ್ನ ಸತ್ಯಪ್ರಸನ್ನತೆಗಳನ್ನು ಕಳುಹಿಸು; ಅವು ನಿನ್ನ ಪರಿಶುದ್ಧಪರ್ವತಕ್ಕೆ ನನ್ನನ್ನು ಕರೆದುಕೊಂಡು ಹೋಗಿ ನಿನ್ನ ನಿವಾಸಕ್ಕೆ ಬರಮಾಡಲಿ. 4ದೇವರೇ, ನನ್ನ ದೇವರೇ, ಆಗ ನಾನು ನಿನ್ನ ಯಜ್ಞವೇದಿಯ ಬಳಿಗೆ, ನನ್ನ ಆನಂದನಿಧಿಯಾಗಿರುವ ನಿನ್ನ ಹತ್ತಿರಕ್ಕೆ ಸೇರಿ, ಕಿನ್ನರಿಯನ್ನು ನುಡಿಸುತ್ತಾ ನಿನ್ನನ್ನು ಕೊಂಡಾಡುವೆನು.
ಪತ್ರಿಕೆ
3ಕ್ರಿಸ್ತ ಯೇಸುವಿನೊಂದಿಗೆ ಸೇರುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡವರಾದ ನಾವೆಲ್ಲರೂ ಆತನ ಮರಣದಲ್ಲಿ ಪಾಲುಗಾರರಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ? 4ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ಆತನೊಂದಿಗೆ ಹೂಣಲ್ಪಟ್ಟೆವು. ಆದ್ದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆಯಿಂದ ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು. 5ಹೇಗೆಂದರೆ ನಾವು ಆತನ ಮರಣಕ್ಕೆ ಸದೃಶ್ಯವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು. 6ನಮಗೆ ತಿಳಿದಿರುವಂತೆ, ನಮ್ಮ ಪಾಪಾಧೀನಸ್ವಭಾವವು ನಾಶವಾಗಿ, ನಾವು ಇನ್ನೂ ಪಾಪದ ವಶದಲ್ಲಿರದಂತೆ ನಮ್ಮ ಪೂರ್ವಸ್ವಭಾವವು ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟಿದೆ. 7ಸತ್ತವನು ಪಾಪದ ವಶದಿಂದ ಬಿಡುಗಡೆ ಹೊಂದಿದ್ದಾನೆ. 8ಇದಲ್ಲದೆ ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ಜೀವಿಸುವೆವೆಂದು ನಂಬುತ್ತೇವೆ. 9ನಮಗೆ ತಿಳಿದಿರುವಂತೆ, ಕ್ರಿಸ್ತನು ಸತ್ತ ಮೇಲೆ ಜೀವಿತನಾಗಿ ಎದ್ದು ಬಂದದ್ದರಿಂದ ಆತನು ಇನ್ನು ಮುಂದೆ ಸಾಯತಕ್ಕವನಲ್ಲ, ಮರಣವು ಆತನ ಮೇಲೆ ಆಳ್ವಿಕೆ ನಡಿಸುವುದಿಲ್ಲ. 10ಆತನು ಸತ್ತದ್ದು ಒಂದೇ ಸಾರಿ ಅದು ಪಾಪದ ಪಾಲಿಗೆ; ಆತನು ಜೀವಿಸುವುದು ದೇವರಿಗಾಗಿಯೇ, 11ಅದೇ ಪ್ರಕಾರ ನೀವು ಸಹ ನಿಮ್ಮನ್ನು ಕ್ರಿಸ್ತ ಯೇಸುವಿನ ಐಕ್ಯದಿಂದ ಪಾಪದ ಪಾಲಿಗೆ ಸತ್ತವರೂ, ದೇವರಿಗಾಗಿ ಜೀವಿಸುವವರೂ ಎಂದು ಎಣಿಸಿಕೊಳ್ಳಿರಿ.
ಕೀರ್ತನೆ
1ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿದೆ. 2ಇಸ್ರಾಯೇಲರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ. 16ಯೆಹೋವನ ಬಲಗೈ ಉನ್ನತವಾಗಿದೆ; ಯೆಹೋವನ ಬಲಗೈ ಪರಾಕ್ರಮವನ್ನು ನಡೆಸುತ್ತದೆ. 17ನಾನು ಸಾಯುವುದಿಲ್ಲ; ಜೀವದಿಂದಿದ್ದು ಯೆಹೋವನ ಕ್ರಿಯೆಗಳನ್ನು ಸಾರುವೆನು. 22ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ, ಮುಖ್ಯವಾದ ಮೂಲೆಗಲ್ಲಾಯಿತು; 23ಇದು ಯೆಹೋವನಿಂದಲೇ ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ.
ಸುವಾರ್ತೆ
1ಸಬ್ಬತ್ ದಿನ ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಮರಿಯಳೂ ಮತ್ತು ಸಲೋಮಿಯೂ ಯೇಸುವಿನ ದೇಹಕ್ಕೆ ಹಚ್ಚುವುದಕ್ಕಾಗಿ ಸುಗಂಧ ದ್ರವ್ಯಗಳನ್ನು ಕೊಂಡರು. 2ಮತ್ತು ವಾರದ ಮೊದಲನೆಯ ದಿನದ ಬೆಳಿಗ್ಗೆ ಹೊತ್ತು ಮೂಡುವಾಗ ಅವರು ಸಮಾಧಿಯ ಬಳಿಗೆ ಬಂದರು. 3“ಸಮಾಧಿಯ ಬಾಗಿಲಿನಿಂದ ಕಲ್ಲನ್ನು ನಮಗೋಸ್ಕರ ಉರುಳಿಸುವವರು ಯಾರು?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. 4ಸಮಾಧಿಯ ಕಡೆಗೆ ನೋಡಿದಾಗ ಆ ದೊಡ್ಡ ಕಲ್ಲು ಉರುಳಿಸಲ್ಪಟ್ಟಿರುವುದನ್ನು ಕಂಡರು. 5ಅವರು ಸಮಾಧಿಯೊಳಗೆ ಹೋಗಿ, ಒಬ್ಬ ಯೌವನಸ್ಥನು ಬಿಳಿ ನಿಲುವಂಗಿಯನ್ನು ಧರಿಸಿಕೊಂಡು ಬಲ ಭಾಗದಲ್ಲಿ ಕುಳಿತಿರುವುದನ್ನು ಕಂಡು ಬೆಚ್ಚಿಬೆರಗಾದರು. 6ಅವನು ಅವರಿಗೆ, “ಭಯಪಡಬೇಡಿರಿ, ಶಿಲುಬೆಗೆ ಹಾಕಲ್ಪಟ್ಟಿದ್ದ ನಜರೇತಿನ ಯೇಸುವನ್ನು ಹುಡುಕುತ್ತಿರಲ್ಲವೇ. ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ; ಆತನನ್ನು ಇಟ್ಟಿದ್ದ ಸ್ಥಳ ಇದೇ ನೋಡಿರಿ, 7ಆದರೆ ನೀವು ಹೋಗಿ ಆತನ ಶಿಷ್ಯರಿಗೂ ಪೇತ್ರನಿಗೂ ಆತನು ನಿಮಗೆ ಹೇಳಿದಂತೆ ನಿಮಗಿಂತ ಮೊದಲು ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ ಎಂದು ತಿಳಿಸಿರಿ” ಎಂದು ಹೇಳಿದನು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು