ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 26 ಮಾರ್ಚ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 26 ಮಾರ್ಚ್ 2027
ಶುಕ್ರವಾರ · ಪಾಸ್ಕ ತ್ರಿದಿನ
ಹಬ್ಬಗಳು ಮತ್ತು ಸಂತರು
ಶುಭ ಶುಕ್ರವಾರ
ಪಾಸ್ಕ ತ್ರಿದಿನ · ಆರಾಧನಾ ಬಣ್ಣ: ಕೆಂಪು
ಉಪವಾಸ ಮತ್ತು ಪ್ರಾಯಶ್ಚಿತ್ತ
ಉಪವಾಸ ಮತ್ತು ಮಾಂಸ ವರ್ಜನೆ
ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.
ದಿನದ ವಾಚನಗಳು
ಮೊದಲನೆಯ ವಾಚನ
13ಇಗೋ, ನನ್ನ ಸೇವಕನು ಕೃತಾರ್ಥನಾಗುವನು. ಅವನು ಉನ್ನತನಾಗಿ ಮೇಲಕ್ಕೇರಿ ಮಹೋನ್ನತ ಪದವಿಗೆ ಬರುವನು. 14ಅವನ ಮುಖವು ಸಕಲ ಮನುಷ್ಯರ ಮುಖಕ್ಕಿಂತಲೂ, ಅವನ ರೂಪವು ಎಲ್ಲಾ ನರಜನ್ಮದವರ ರೂಪಕ್ಕಿಂತಲೂ ವಿಕಾರವಾಗಿರುವುದನ್ನು ನೋಡಿ, ಅನೇಕರು ಹೇಗೆ ಹೆದರಿದರೋ, 15ಹಾಗೆಯೇ ಅನೇಕ ಜನಾಂಗಗಳವರು ಅವನನ್ನು ಕಂಡು ವಿಸ್ಮಯದಿಂದ ಚಕಿತರಾಗುವರು. ಅರಸರೂ ಅವನ ಮುಂದೆ ಬಾಯಿಮುಚ್ಚಿಕೊಳ್ಳುವರು. ಏಕೆಂದರೆ ಸುದ್ದಿಯೇ ಇಲ್ಲದ ಸಂಗತಿಯನ್ನು ನೋಡುವರು, ಎಂದೂ ಕೇಳದೇ ಇರುವ ವಿಷಯವನ್ನು ಗ್ರಹಿಸಿಕೊಳ್ಳುವರು. 53:1ನಾವು ಕೇಳಿದ ಸಂಗತಿಯನ್ನು ನಮ್ಮಲ್ಲಿ ಯಾರು ನಂಬಿದ್ದರು? ಯೆಹೋವನ ಬಾಹುವು ಯಾರಿಗೆ ಗೋಚರವಾಗಿತ್ತು? 2ಒಣನೆಲದೊಳಗೆ ಬೇರಿನಿಂದ ಹೊರಡುವ ಸಸಿಯಂತೆಯೂ, ಬುಡದಿಂದ ಒಡೆಯುವ ಚಿಗುರಿನ ಹಾಗೂ ಅವನು ಯೆಹೋವನ ದೃಷ್ಟಿಯಲ್ಲಿ ಬೆಳೆದನು. ಅವನಲ್ಲಿ ಯಾವ ಅಂದಚಂದಗಳೂ ಇರಲಿಲ್ಲ; ನಾವು ಅವನನ್ನು ನೋಡಿದಾಗ ನೋಡತಕ್ಕ ಯಾವ ಲಕ್ಷಣವೂ ಕಾಣಲಿಲ್ಲ. 3ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು, ಸಂಕಟಪಡುವವನು, ವ್ಯಾಧಿಪೀಡಿತನು, ಜನರು ಮುಖವನ್ನು ಓರೆಮಾಡಿಕೊಳ್ಳುವ ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು. 4ನಿಜವಾಗಿಯೂ ನಮ್ಮ ವ್ಯಾಧಿಗಳನ್ನು ಸಂಕಷ್ಟವನ್ನು ಅನುಭವಿಸಿದನು; ಅವನು ಹೊತ್ತ ಹೊರೆಯು ನಮ್ಮ ಸಂಕಟವೇ ಹೌದು, ನಾವಾದರೋ ಅವನು ದೇವರಿಂದ ಬಾಧಿತನು, ಪೆಟ್ಟು ತಿಂದವನು, ಕುಗ್ಗಿಸಲ್ಪಟ್ಟವನು ಎಂದು ಭಾವಿಸಿಕೊಂಡೆವು. 5ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು; ನಮಗೆ ಸುಕ್ಷೇಮವನ್ನು ಉಂಟುಮಾಡುವ ದಂಡನೆಯನ್ನು ಅವನು ಅನುಭವಿಸಿದನು; ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು. 6ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ಹೋಗಿದ್ದೆವು, ಪ್ರತಿಯೊಬ್ಬನೂ ತನ್ನ ತನ್ನ ದಾರಿಯನ್ನು ಹಿಡಿಯುತ್ತಿದ್ದನು; ನಮ್ಮೆಲ್ಲರ ದೋಷಫಲವನ್ನೂ ಯೆಹೋವನು ಅವನ ಮೇಲೆ ಹಾಕಿದನು. 7ಅವನು ಬಾಧೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡನು, ಬಾಯಿ ತೆರೆಯಲಿಲ್ಲ; ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ, ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿರುವ ಕುರಿಯ ಹಾಗೂ ಇದ್ದನು, ಬಾಯಿ ತೆರೆಯಲೇ ಇಲ್ಲ. 8ಹಿಂಸೆಯ ನ್ಯಾಯದಿಂದ ಕೊಲ್ಲಲ್ಪಟ್ಟನು, ಆಹಾ, ಇವನು ಜೀವಲೋಕದಿಂದ ತೆಗೆದುಹಾಕಲ್ಪಟ್ಟಿದ್ದಾನೆ. ನಮ್ಮ ಜನಗಳ ದ್ರೋಹಗಳ ದೆಸೆಯಿಂದ ಈ ಪೆಟ್ಟು ಅವನ ಮೇಲೆ ಬಿತ್ತಲ್ಲಾ ಎಂದು ಅವನ ಕಾಲದವರಲ್ಲಿ ಯಾರು ಮನಮುಟ್ಟಿ ಮರುಗಿದರು? 9ಅವನು ಯಾವ ಅನ್ಯಾಯವನ್ನು ಮಾಡದಿದ್ದರೂ, ಅವನ ಬಾಯಲ್ಲಿ ಯಾವ ವಂಚನೆಯು ಇಲ್ಲದಿದ್ದರೂ, ಅವನು ಸತ್ತಾಗ ದುಷ್ಟರ ಮಧ್ಯೆ ಪುಷ್ಟರ ನಡುವೆ ಅವನನ್ನು ಹೂಣಿಟ್ಟರು. 10ಅವನನ್ನು ಜಜ್ಜುವುದು ಯೆಹೋವನ ಸಂಕಲ್ಪವಾಗಿತ್ತು. ಆತನು ಅವನನ್ನು ವ್ಯಾಧಿಯಿಂದ ಬಾಧಿಸಿ ಹೀಗೆಂದುಕೊಂಡನು, ಇವನು ತನ್ನ ಆತ್ಮವನ್ನು ಪ್ರಾಯಶ್ಚಿತ್ತಯಜ್ಞಕ್ಕಾಗಿ ಒಪ್ಪಿಸಿದ ಮೇಲೆ ತನ್ನ ಸಂತಾನವನ್ನು ನೋಡುವನು, ಚಿರಂಜೀವಿಯಾಗುವನು, ನನ್ನ ಸಂಕಲ್ಪವು ಇವನ ಕೈಯಿಂದ ನೆರವೇರುವುದು; 11ತನ್ನ ಆತ್ಮವು ಅನುಭವಿಸಿದ ಶ್ರಮೆಯ ಫಲವನ್ನು ಕಂಡು ತೃಪ್ತನಾಗುವನು; ಧರ್ಮಾತ್ಮನಾದ ನನ್ನ ಸೇವಕನು ತನ್ನ ಜ್ಞಾನದ ಮೂಲಕ ಬಹು ಜನರನ್ನು ಧರ್ಮಮಾರ್ಗಕ್ಕೆ ತರುವನು; ಅವರ ಅಪರಾಧಗಳನ್ನು ಹೊತ್ತುಕೊಂಡು ಹೋಗುವನು. 12ಇವನು ಇಂಥವನಾಗಿರುವುದರಿಂದ ನಾನು ಇವನಿಗೆ ದೊಡ್ಡವರ ಸಂಗಡ ಪಾಲು ಕೊಡುವೆನು, ಇವನು ಬಲಿಷ್ಠರೊಡನೆ ಸೂರೆಯನ್ನು ಹಂಚಿಕೊಳ್ಳುವನು; ತನ್ನ ಪ್ರಾಣವನ್ನು ಧಾರೆಯೆರೆದು, ಮರಣಹೊಂದಿ, ದ್ರೋಹಿಗಳೊಂದಿಗೆ ತನ್ನನ್ನೂ ಎಣಿಸಿಕೊಂಡು, ಬಹು ಜನ ದ್ರೋಹಿಗಳ ಪಾಪವನ್ನು ಹೊರುತ್ತಾ ಅವರಿಗಾಗಿ ವಿಜ್ಞಾಪನೆ ಮಾಡಿದನು.
ಪ್ರತಿವಚನ ಕೀರ್ತನೆ
ಕೀರ್ತ 31:1, 5, 11–12, 14–16, 24
1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. ಯೆಹೋವನೇ, ನಿನ್ನ ಮೊರೆಹೊಕ್ಕಿದ್ದೇನೆ; ನನ್ನನ್ನು ಎಂದಿಗೂ ಅವಮಾನಕ್ಕೆ ಗುರಿಪಡಿಸಬೇಡ. ನಿನ್ನ ನೀತಿಗನುಸಾರವಾಗಿ ನನ್ನನ್ನು ರಕ್ಷಿಸು. 5ನೀನೇ ನನಗೆ ಆಧಾರವಲ್ಲವೇ; ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟಿದ್ದೇನೆ. ಯೆಹೋವನೇ, ನಂಬಿಗಸ್ತನಾದ ದೇವರೇ, ನನ್ನನ್ನು ವಿಮೋಚಿಸಿದ್ದೀ. 11ನನ್ನ ಎಲ್ಲಾ ಹಿಂಸಕರ ದೆಸೆಯಿಂದ ದೂಷಣೆಗೆ ಗುರಿಯಾದೆನು; ವಿಶೇಷವಾಗಿ ನೆರೆಯವರು ನನ್ನನ್ನು ನಿಂದಿಸುತ್ತಾರೆ. ನನ್ನ ಪರಿಚಿತರಿಗೆ ನನ್ನಲ್ಲಿ ಭೀತಿಯುಂಟಾಯಿತು; ನನ್ನನ್ನು ದಾರಿಯಲ್ಲಿ ಕಂಡವರೆಲ್ಲರು ಓರೆಯಾಗಿ ಹೋಗುತ್ತಾರೆ. 12ನಾನು ಸತ್ತವರಂತೆ ಯಾರ ಜ್ಞಾಪಕಕ್ಕೂ ಬಾರದವನಾದೆನು; ಒಡೆದ ಬೋಕಿಯಂತಿದ್ದೇನೆ. 14ನಾನಾದರೋ ಯೆಹೋವನೇ, ನಿನ್ನಲ್ಲೇ ಭರವಸವಿಟ್ಟಿದ್ದೇನೆ; ನೀನೇ ನನ್ನ ದೇವರೆಂದು ಹೇಳಿಕೊಂಡಿದ್ದೇನೆ. 15ನನ್ನ ಆಯುಷ್ಕಾಲವು ನಿನ್ನ ಕೈಯಲ್ಲಿದೆ; ಹಿಂದಟ್ಟುವ ಶತ್ರುಗಳಿಂದ ನನ್ನನ್ನು ತಪ್ಪಿಸಿ ಕಾಪಾಡು. 16ನಿನ್ನ ಸೇವಕನನ್ನು ಪ್ರಸನ್ನಮುಖದಿಂದ ನೋಡು; ಪ್ರೀತಿಯಿಂದ ನನ್ನನ್ನು ರಕ್ಷಿಸು. 24ಯೆಹೋವನನ್ನು ನಿರೀಕ್ಷಿಸುವವರೇ, ದೃಢವಾಗಿರ್ರಿ; ನಿಮ್ಮ ಹೃದಯವು ಧೈರ್ಯದಿಂದಿರಲಿ.
ಎರಡನೆಯ ವಾಚನ
14ಆಕಾಶಗಳನ್ನು ದಾಟಿಹೋದ ದೇವಕುಮಾರನಾದ ಯೇಸುವೆಂಬ ಶ್ರೇಷ್ಠ ಮಹಾಯಾಜಕನು ನಮಗಿದ್ದಾನೆ. ಆದುದರಿಂದ ನಮಗಿರುವ ನಂಬಿಕೆಯನ್ನು ದೃಢವಾಗಿ ಹಿಡಿಯೋಣ. 15ಏಕೆಂದರೆ ನಮಗಿರುವ ಮಹಾಯಾಜಕನು ನಮ್ಮ ಬಲಹೀನತೆಗಳಲ್ಲಿ ಅನುಕಂಪ ತೋರಿಸುವವನಾಗಿದ್ದಾನೆ. ಆತನು ಸರ್ವ ವಿಷಯಗಳಲ್ಲಿಯೂ ನಮ್ಮ ಹಾಗೆ ಶೋಧನೆಗೆ ಗುರಿಯಾದವನು, ಪಾಪ ಮಾತ್ರ ಮಾಡಲಿಲ್ಲವಷ್ಟೇ. 16ಆದುದರಿಂದ ನಾವು ತಕ್ಕ ಸಮಯದಲ್ಲಿ ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಆತನ ಕೃಪಾಸನದ ಮುಂದೆ ಬರೋಣ. 5:7ಕ್ರಿಸ್ತನು ತಾನೇ ಭೂಲೋಕದಲ್ಲಿ ಮನುಷ್ಯನಾಗಿ ಜೀವಿಸಿದ್ದ ಕಾಲದಲ್ಲಿ, ಮರಣದಿಂದ ತಪ್ಪಿಸಿ ಕಾಪಾಡಲು ಶಕ್ತನಾಗಿರುವಾತನಿಗೆ ಗಟ್ಟಿಯಾಗಿ ಮೊರೆಯಿಡುತ್ತಾ, ಕಣ್ಣೀರನ್ನು ಸುರಿಸುತ್ತಾ, ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿದನು. ದೇವರ ಮೇಲಣ ಭಯಭಕ್ತಿಯ ನಿಮಿತ್ತ ಆತನ ಪ್ರಾರ್ಥನೆಯನ್ನು ದೇವರು ಕೇಳಿದನು. 8ಹೀಗೆ ಆತನು ಮಗನಾಗಿದ್ದರೂ ತಾನು ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು. 9ಇದಲ್ಲದೆ ಆತನು ಪರಿಪೂರ್ಣನಾಗಿ, ತನಗೆ ವಿಧೇಯರಾಗಿರುವ ಎಲ್ಲರಿಗೂ ನಿತ್ಯ ರಕ್ಷಣೆಗೆ ಕಾರಣನಾದನು.
ಸುವಾರ್ತೆ
1ಯೇಸು ಈ ಮಾತುಗಳನ್ನಾಡಿದ ಮೇಲೆ ತನ್ನ ಶಿಷ್ಯರ ಜೊತೆ ಕೆದ್ರೋನ್ ಹಳ್ಳದ ಆಚೆಗೆ ಹೋದನು. ಆತನೂ, ಆತನ ಶಿಷ್ಯರೂ ಅಲ್ಲಿದ್ದ ಒಂದು ತೋಟದೊಳಗೆ ಪ್ರವೇಶಿಸಿದರು. 2ಆತನನ್ನು ಹಿಡಿದುಕೊಡಲಿದ್ದ ಯೂದನಿಗೂ ಆ ಸ್ಥಳವು ಗೊತ್ತಿತ್ತು ಏಕೆಂದರೆ, ಆಗಾಗ ಯೇಸು ತನ್ನ ಶಿಷ್ಯರೊಂದಿಗೆ ಅಲ್ಲಿ ಸೇರಿಬರುತ್ತಿದ್ದರು. 3ಹೀಗಿರಲಾಗಿ ಯೂದನು ಮುಖ್ಯಯಾಜಕರಿಂದ ಮತ್ತು ಫರಿಸಾಯರಿಂದ ಸೈನಿಕರ ಗುಂಪನ್ನೂ, ಕಾವಲಾಳುಗಳನ್ನೂ ಕರೆದುಕೊಂಡು ದೀಪಗಳನ್ನೂ, ಪಂಜುಗಳನ್ನೂ ಮತ್ತು ಆಯುಧಗಳನ್ನೂ ಹಿಡಿದುಕೊಂಡು ಅಲ್ಲಿಗೆ ಬಂದನು. 4ಆಗ ಯೇಸು ತನಗೆ ಸಂಭವಿಸಲಿರುವುದನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಿದನು. 5ಅದಕ್ಕೆ ಅವರು, “ನಜರೇತಿನ ಯೇಸುವನ್ನು ಹುಡುಕುತ್ತಿದ್ದೇವೆ” ಎಂದರು. ಯೇಸು ಅವರಿಗೆ “ನಾನೇ ಆತನು” ಎಂದು ಹೇಳಿದನು. ಆತನನ್ನು ಹಿಡಿದು ಕೊಡುವ ಯೂದನು ಸಹ ಅವರ ಜೊತೆಯಲ್ಲಿ ನಿಂತಿದ್ದನು. 6ಆತನು ಅವರಿಗೆ “ನಾನೇ ಆತನು” ಎಂದು ಹೇಳಿದಾಗ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು. 7ಆಗ ಆತನು ಪುನಃ ಅವರಿಗೆ “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಲು, ಅವರು, “ನಜರೇತಿನ ಯೇಸುವನ್ನು ಹುಡುಕುತ್ತೇವೆ” ಎಂದರು. 8ಅದಕ್ಕೆ ಯೇಸು, “ನಾನೇ ಆತನು ಎಂದು ನಿಮಗೆ ಹೇಳಿದೆನಲ್ಲಾ. ನೀವು ನನ್ನನ್ನೇ ಹುಡುಕುವುದಾದರೆ ಇವರನ್ನು ಹೋಗಲುಬಿಡಿರಿ” ಎಂದನು. 9ಹೀಗೆ “ನೀನು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ನಾನು ಕಳೆದುಕೊಳ್ಳಲಿಲ್ಲ” ಎಂದು ತಾನೇ ಹೇಳಿದ ಮಾತು ನೆರವೇರಿತು. 10ಸೀಮೋನ್ ಪೇತ್ರನ ಬಳಿಯಲ್ಲಿ ಒಂದು ಕತ್ತಿ ಇತ್ತು; ಆಗ ಅದನ್ನು ಅವನು ಹೊರಕ್ಕೆ ಎಳೆದುಕೊಂಡು, ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು. ಆ ಆಳಿನ ಹೆಸರು ಮಲ್ಕನು. 11ಆಗ ಯೇಸು ಪೇತ್ರನಿಗೆ, “ಕತ್ತಿಯನ್ನು ಒರೆಯಲ್ಲಿ ಹಾಕು. ತಂದೆಯು ನನಗೆ ಕೊಟ್ಟಿರುವ ಪಾತ್ರೆಯಲ್ಲಿ ನಾನು ಕುಡಿಯಬಾರದೋ?” ಎಂದು ಹೇಳಿದನು. 12ಆಮೇಲೆ ಆ ಸೈನಿಕರ ಗುಂಪು ಮತ್ತು ಸಹಸ್ರಾಧಿಪತಿಯೂ, ಯೆಹೂದ್ಯರ ಓಲೇಕಾರರೂ ಯೇಸುವನ್ನು ಹಿಡಿದು ಕಟ್ಟಿದರು. 13ಆತನನ್ನು ಮೊದಲು ಅನ್ನನ ಬಳಿಗೆ ಕರೆದುಕೊಂಡು ಹೋದರು. ಅವನು ಆ ವರ್ಷದಲ್ಲಿ ಮಹಾಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು. 14ಆ ಕಾಯಫನೇ, ಜನರಿಗೋಸ್ಕರ ಒಬ್ಬ ಮನುಷ್ಯನು ಸಾಯುವುದು ಹಿತ ಎಂದು ಯೆಹೂದ್ಯರಿಗೆ ಸಲಹೆ ಕೊಟ್ಟವನು. 15ಸೀಮೋನ್ ಪೇತ್ರನೂ ಮತ್ತು ಇನ್ನೊಬ್ಬ ಶಿಷ್ಯನೂ ಯೇಸುವನ್ನು ಹಿಂಬಾಲಿಸಿದರು. ಆ ಶಿಷ್ಯನಿಗೆ ಮಹಾಯಾಜಕನ ಪರಿಚಯವಿದ್ದುದರಿಂದ ಯೇಸುವಿನ ಜೊತೆ ಮಹಾಯಾಜಕನ ಅಂಗಳದೊಳಗೆ ಹೋದನು. 16ಆದರೆ ಪೇತ್ರನು ಹೊರಗೆ ಬಾಗಿಲಿನ ಬಳಿಯಲ್ಲಿ ನಿಂತಿದ್ದನು. ಮಹಾಯಾಜಕನ ಪರಿಚಯವಿದ್ದ ಆ ಇನ್ನೊಬ್ಬ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಗೆ ಕರೆದುಕೊಂಡು ಬಂದನು. 17ಆಗ ದ್ವಾರಪಾಲಕಿಯು, “ನೀನು ಸಹ ಆ ಮನುಷ್ಯನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಪೇತ್ರನನ್ನು ಕೇಳಲು, ಅವನು, “ನಾನಲ್ಲ” ಎಂದನು. 18ಚಳಿಯಿದ್ದುದರಿಂದ ಆಳುಗಳೂ, ಓಲೇಕಾರರೂ ಇದ್ದಲಿನ ಬೆಂಕಿ ಮಾಡಿ ಚಳಿ ಕಾಯಿಸಿಕೊಳ್ಳುತ್ತಾ ನಿಂತಿರಲಾಗಿ; ಪೇತ್ರನೂ ಅವರ ಜೊತೆಯಲ್ಲಿ ನಿಂತುಕೊಂಡು ಚಳಿ ಕಾಯಿಸಿಕೊಳ್ಳುತ್ತಿದ್ದನು. 19ಅಷ್ಟರೊಳಗೆ ಮಹಾಯಾಜಕನು ಯೇಸುವನ್ನು ಆತನ ಶಿಷ್ಯರ ವಿಷಯವಾಗಿಯೂ ಆತನ ಉಪದೇಶದ ವಿಷಯವಾಗಿಯೂ ವಿಚಾರಿಸಿದನು. 20ಅದಕ್ಕೆ ಯೇಸು, “ನಾನು ಬಹಿರಂಗವಾಗಿ ಲೋಕದ ಮುಂದೆ ಮಾತನಾಡಿದ್ದೇನೆ. ಯೆಹೂದ್ಯರೆಲ್ಲರು ಕೂಡಿ ಬರುವ ಸಭಾಮಂದಿರಗಳಲ್ಲಿಯೂ, ದೇವಾಲಯದಲ್ಲಿಯೂ ನಾನು ಯಾವಾಗಲೂ ಉಪದೇಶಿಸಿದ್ದೇನೆ, ಗುಪ್ತವಾಗಿ ಯಾವುದನ್ನೂ ನಾನು ಮಾತನಾಡಲಿಲ್ಲ. 21ನೀನು ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಏನೇನು ಮಾತನಾಡಿದೆನೋ ಅದನ್ನು ಕೇಳಿದವರನ್ನೇ ವಿಚಾರಿಸು. ನಾನು ಹೇಳಿದ್ದನ್ನು ಅವರು ತಿಳಿದಿದ್ದಾರೆ” ಎಂದು ಉತ್ತರಕೊಟ್ಟನು. 22ಯೇಸು ಈ ಮಾತನ್ನು ಹೇಳಿದಾಗ ಹತ್ತಿರ ನಿಂತಿದ್ದ ಕಾವಲಾಳುಗಳಲ್ಲಿ ಒಬ್ಬನು ತನ್ನ ಕೈಯಿಂದ ಯೇಸುವಿನ ಕೆನ್ನೆಗೆ ಹೊಡೆದು, “ನೀನು ಮಹಾಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯೋ?” ಎಂದನು. 23ಯೇಸು ಅವನಿಗೆ “ನಾನು ಏನಾದರೂ ತಪ್ಪನ್ನು ಮಾತನಾಡಿದ್ದರೆ, ಆ ತಪ್ಪಿನ ವಿಷಯವಾಗಿ ಸಾಕ್ಷಿಕೊಡು; ಸತ್ಯವಾಗಿದ್ದರೆ ಏಕೆ ಹೊಡೆಯುತ್ತೀ?” ಎಂದು ಕೇಳಿದನು. 24ಆಗ ಅನ್ನನು ಆತನನ್ನು ಇನ್ನೂ ಕಟ್ಟಿರಲಾಗಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು. 25ಇತ್ತ, ಸೀಮೋನ್ ಪೇತ್ರನು ನಿಂತುಕೊಂಡು ಚಳಿ ಕಾಯಿಸಿಕೊಳ್ಳುತ್ತಾ ಇದ್ದನು. ಆಗ ಅಲ್ಲಿದ್ದವರು ಅವನನ್ನು, “ನೀನು ಸಹ ಆತನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಕೇಳಲು, ಅವನು ಅದನ್ನು ನಿರಾಕರಿಸಿ, “ನಾನಲ್ಲ” ಎಂದನು. 26ಮಹಾಯಾಜಕನ ಆಳುಗಳಲ್ಲಿ ಪೇತ್ರನು ಕಿವಿ ಕತ್ತರಿಸಿದವನ ಬಂಧುವಾಗಿದ್ದ ಒಬ್ಬನು, ಪೇತ್ರನಿಗೆ, “ನಾನು ನಿನ್ನನ್ನು ತೋಟದಲ್ಲಿ ಆತನ ಜೊತೆಯಲ್ಲಿ ನೋಡಿದೆನಲ್ಲವೇ?” ಎಂದನು. 27ಅದಕ್ಕೆ ಪೇತ್ರನು ಪುನಃ ನಿರಾಕರಿಸಿ “ನಾನಲ್ಲ” ಎಂದನು. ಆಗ ಕೂಡಲೇ ಕೋಳಿ ಕೂಗಿತು. 28ಮುಂಜಾನೆ ಅವರು ಯೇಸುವನ್ನು ಕಾಯಫನ ಬಳಿಯಿಂದ ಅರಮನೆಗೆ ಕರೆದುಕೊಂಡು ಹೋದರು. ಅವರು ತಮಗೆ ಮೈಲಿಗೆಯಾಗಿ ಪಸ್ಕದ ಊಟ ಮಾಡುವುದಕ್ಕೆ ಅಡ್ಡಿಯಾದೀತೆಂದು ಅರಮನೆಯ ಒಳಗೆ ಹೋಗಲಿಲ್ಲ. 29ಹೀಗಿರಲಾಗಿ ಪಿಲಾತನು ಹೊರಗೆ ಅವರ ಬಳಿಗೆ ಬಂದು, “ಈ ಮನುಷ್ಯನ ಮೇಲೆ ಏನು ದೂರು ತಂದಿದ್ದೀರಿ?” ಎಂದು ಕೇಳಿದನು. 30ಯೆಹೂದ್ಯರು ಅವನಿಗೆ, “ಈತನು ದುಷ್ಕರ್ಮಿಯಲ್ಲದಿದ್ದರೆ ನಾವು ಈತನನ್ನು ನಿನಗೆ ಒಪ್ಪಿಸಿ ಕೊಡುತ್ತಿರಲಿಲ್ಲ” ಎಂದು ಉತ್ತರಕೊಟ್ಟರು. 31ಆಗ ಪಿಲಾತನು ಅವರಿಗೆ, “ನೀವೇ ಆತನನ್ನು ತೆಗೆದುಕೊಂಡು ಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ಆತನಿಗೆ ತೀರ್ಪು ಮಾಡಿರಿ” ಎಂದು ಹೇಳಿದನು. ಅದಕ್ಕೆ ಯೆಹೂದ್ಯರು, “ಮರಣ ದಂಡನೆಯನ್ನು ವಿಧಿಸುವ ಅಧಿಕಾರವು ನಮಗೆ ಇಲ್ಲ” ಎಂದರು. 32ಇದರಿಂದ ಯೇಸು ತಾನು ಎಂಥಾ ಮರಣವನ್ನು ಹೊಂದುವನೆಂದು ಸೂಚಿಸಿ ಹೇಳಿದ ಮಾತು ನೆರವೇರಿತು. 33ಆಗ ಪಿಲಾತನು ಪುನಃ ಅರಮನೆಯೊಳಗೆ ಹೋಗಿ ಯೇಸುವನ್ನು ಕರೆದು ಆತನಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. 34ಯೇಸು, “ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತೀಯೋ? ಇಲ್ಲವೇ ಬೇರೆಯವರು ನನ್ನ ವಿಷಯದಲ್ಲಿ ನಿನಗೆ ಹೇಳಿದ್ದಾರೋ?” ಎಂದನು. 35ಪಿಲಾತನು, “ನಾನೇನು ಯೆಹೂದ್ಯನೋ? ನಿನ್ನ ಸ್ವಂತ ಜನಾಂಗವೂ, ಮುಖ್ಯಯಾಜಕರೂ ನಿನ್ನನ್ನು ನನಗೆ ಒಪ್ಪಿಸಿದ್ದಾರೆ. ನೀನು ಏನು ಮಾಡಿದ್ದೀಯಾ?” ಎಂದು ಕೇಳಿದ್ದಕ್ಕೆ, 36ಯೇಸು, “ನನ್ನ ರಾಜ್ಯವು ಈ ಲೋಕದ್ದಲ್ಲ. ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಗೆ ಒಪ್ಪಿಸಲ್ಪಡದಂತೆ ನನ್ನ ಸೇವಕರು ನನ್ನ ಪರವಾಗಿ ಹೋರಾಡುತ್ತಿದ್ದರು, ಆದರೆ ನನ್ನ ರಾಜ್ಯವು ಇಲ್ಲಿಯದಲ್ಲ” ಎಂದು ಉತ್ತರಕೊಟ್ಟನು. 37ಅದಕ್ಕೆ ಪಿಲಾತನು, “ಹಾಗಾದರೆ ನೀನು ಅರಸನೋ?” ಎಂದನು. ಯೇಸು, “ನನ್ನನ್ನು ಅರಸನೆಂದು ನೀನೇ ಹೇಳುತ್ತೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಕೊಡುವುದಕ್ಕಾಗಿ ಹುಟ್ಟಿದವನು, ಇದಕ್ಕಾಗಿಯೇ ಲೋಕಕ್ಕೆ ಬಂದಿದ್ದೇನೆ. ಸತ್ಯಕ್ಕೆ ಸೇರಿದ ಪ್ರತಿಯೊಬ್ಬನು ನನ್ನ ಸ್ವರವನ್ನು ಕೇಳುತ್ತಾನೆ” ಎಂದು ಉತ್ತರಕೊಟ್ಟನು. 38ಪಿಲಾತನು, “ಸತ್ಯ ಎಂದರೇನು?” ಎಂದನು. ಇದನ್ನು ಹೇಳಿ ಪಿಲಾತನು ಪುನಃ ಯೆಹೂದ್ಯರ ಬಳಿ ಹೊರಗೆ ಬಂದು, “ನನಗೆ ಈತನಲ್ಲಿ ಯಾವ ಅಪರಾಧವೂ ಕಾಣುತ್ತಿಲ್ಲ. 39ಆದರೆ ಪಸ್ಕ ಹಬ್ಬದಲ್ಲಿ ನಾನು ನಿಮಗೆ ಒಬ್ಬನನ್ನು ಬಿಟ್ಟು ಕೊಡುವ ಪದ್ಧತಿ ಉಂಟಷ್ಟೆ. ಆದಕಾರಣ ನಾನು ಯೆಹೂದ್ಯರ ಅರಸನನ್ನು ಬಿಟ್ಟು ಕೊಡುವುದು ನಿಮಗೆ ಇಷ್ಟವೋ?” ಎಂದು ಅವರನ್ನು ಕೇಳಿದನು. 40ಅದಕ್ಕೆ ಅವರೆಲ್ಲರೂ, “ಆತನನ್ನು ಬೇಡ ನಮಗೆ ಬರಬ್ಬನನ್ನು ಬಿಟ್ಟುಕೊಡಬೇಕು” ಎಂದು ಪುನಃ ಕೂಗಿಕೊಂಡರು. ಈ ಬರಬ್ಬನು ದರೋಡೆಗಾರನಾಗಿದ್ದನು. 19:1ಆನಂತರ ಪಿಲಾತನು ಯೇಸುವನ್ನು ಕರೆದುಕೊಂಡು ಹೋಗಿ ಆತನನ್ನು ಕೊರಡೆಯಿಂದ ಹೊಡೆಸಿದನು. 2ಸಿಪಾಯಿಗಳು ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು, ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಆತನಿಗೆ ತೊಡಿಸಿ, 3ಆತನ ಬಳಿಗೆ ಬಂದು “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ” ಎಂದು ಹೇಳಿ ತಮ್ಮ ಕೈಗಳಿಂದ ಆತನ ಕೆನ್ನೆಗೆ ಹೊಡೆದರು. 4ತರುವಾಯ ಪಿಲಾತನು ಪುನಃ ಹೊರಗೆ ಹೋಗಿ ಯೆಹೂದ್ಯರಿಗೆ, “ನನಗೆ ಅವನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲವೆಂಬುದು ನಿಮಗೆ ತಿಳಿಯುವಂತೆ ಅವನನ್ನು ನಿಮ್ಮ ಬಳಿಗೆ ತರುತ್ತೇನೆ ನೋಡಿರಿ” ಎಂದು ಹೇಳಿದನು. 5ಯೇಸು ಮುಳ್ಳಿನ ಕಿರೀಟವನ್ನು ಮತ್ತು ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಧರಿಸಿದವನಾಗಿ ಹೊರಗೆ ಬಂದನು. ಆಗ ಪಿಲಾತನು ಅವರಿಗೆ, “ಇಗೋ, ಈ ಮನುಷ್ಯನು” ಎಂದನು. 6ಮುಖ್ಯಯಾಜಕರೂ ಮತ್ತು ಕಾವಲುಗಾರರು ಆತನನ್ನು ಕಾಣುತ್ತಲೇ, “ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಪಿಲಾತನು ಅವರಿಗೆ, “ಬೇಕಾದರೆ ನೀವೇ ಅವನನ್ನು ತೆಗೆದುಕೊಂಡು ಹೋಗಿ ಶಿಲುಬೆಗೆ ಹಾಕಿರಿ, ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲ” ಎಂದನು. 7ಯೆಹೂದ್ಯರು ಅವನಿಗೆ, “ನಮಗೆ ಒಂದು ನೇಮ ಉಂಟು. ಆ ನೇಮದ ಪ್ರಕಾರ ಆತನು ಸಾಯಲೇಬೇಕು. ಏಕೆಂದರೆ ಆತನು ತನ್ನನ್ನು ದೇವರ ಮಗನಾಗಿ ಮಾಡಿಕೊಂಡಿದ್ದಾನೆ” ಎಂದರು. 8ಪಿಲಾತನು ಈ ಮಾತನ್ನು ಕೇಳಿ ಬಹಳವಾಗಿ ಭಯಪಟ್ಟನು, 9ಪುನಃ ತನ್ನ ಅರಮನೆಯೊಳಗೆ ಹೋಗಿ, “ನೀನು ಎಲ್ಲಿಂದ ಬಂದವನು?” ಎಂದು ಯೇಸುವನ್ನು ಕೇಳಿದನು, ಆದರೆ ಯೇಸು ಆತನಿಗೆ ಉತ್ತರಕೊಡಲಿಲ್ಲ. 10ಪಿಲಾತನು, “ನೀನು ನನ್ನೊಡನೆ ಮಾತನಾಡುವುದಿಲ್ಲವೋ? ನಿನ್ನನ್ನು ಬಿಡಿಸುವ ಅಧಿಕಾರವೂ ಮತ್ತು ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗೆ ಉಂಟೆಂಬುದು ನಿನಗೆ ಗೊತ್ತಿಲ್ಲವೋ?” ಎಂದು ಆತನನ್ನು ಕೇಳಿದನು. 11ಅದಕ್ಕೆ ಯೇಸು, “ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪವಿದೆ” ಎಂದು ಉತ್ತರ ಕೊಟ್ಟನು. 12ಈ ಮಾತಿನಿಂದ ಪಿಲಾತನು ಆತನನ್ನು ಬಿಡಿಸಲು ಪ್ರಯತ್ನಿಸಿದನು, ಆದರೆ ಯೆಹೂದ್ಯರು, “ನೀನು ಈ ಮನುಷ್ಯನನ್ನು ಬಿಡಿಸಿದರೆ, ನೀನು ಕೈಸರನಿಗೆ ಮಿತ್ರನಲ್ಲ, ತನ್ನನ್ನು ತಾನೇ ಅರಸನಾಗಿ ಮಾಡಿಕೊಳ್ಳುವವನು, ಕೈಸರನಿಗೆ ವಿರೋಧಿ” ಎಂದು ಕೂಗಿ ಹೇಳಿದರು. 13ಈ ಮಾತುಗಳನ್ನು ಪಿಲಾತನು ಕೇಳಿ ಯೇಸುವನ್ನು ಹೊರಗೆ ಕರೆದುಕೊಂಡು ಬಂದು ಇಬ್ರಿಯ ಮಾತಿನಲ್ಲಿ, ಗಬ್ಬಥಾ ಎಂದು ಕರೆಯಲ್ಪಟ್ಟ, “ಕಲ್ಲು ಹಾಸಿದ ಕಟ್ಟೆ” ಎಂಬ ಸ್ಥಳಕ್ಕೆ ಹೋಗಿ ನ್ಯಾಯಾಸನದ ಮೇಲೆ ಕುಳಿತುಕೊಂಡನು. 14ಅದು ಪಸ್ಕ ಹಬ್ಬಕ್ಕೆ ಸಿದ್ಧಮಾಡುವ ದಿನದಲ್ಲಿ ಹೆಚ್ಚು ಕಡಿಮೆ ಬೆಳಿಗ್ಗೆ ಆರು ಘಂಟೆಯಾಗಿತ್ತು. ಅವನು ಯೆಹೂದ್ಯರಿಗೆ, “ಇಗೋ, ನಿಮ್ಮ ಅರಸನು” ಎಂದು ಹೇಳಿದನು. 15ಅದಕ್ಕೆ ಅವರು, “ಅವನನ್ನು ಕೊಲ್ಲಿಸು, ಕೊಲ್ಲಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಅದಕ್ಕೆ ಪಿಲಾತನು, “ನಿಮ್ಮ ಅರಸನನ್ನು ಶಿಲುಬೆಗೆ ಹಾಕಿಸಲೋ?” ಎಂದು ಹೇಳಿದಕ್ಕೆ, ಮುಖ್ಯಯಾಜಕರು, “ಕೈಸರನೇ, ಹೊರತು ನಮಗೆ ಬೇರೆ ಅರಸನಿಲ್ಲ” ಎಂದು ಉತ್ತರ ಕೊಟ್ಟರು. 16ಆಗ ಅವನು ಯೇಸುವನ್ನು ಶಿಲುಬೆಗೆ ಹಾಕಿಸುವುದಕ್ಕೆ ಅವರ ವಶಕ್ಕೆ ಒಪ್ಪಿಸಿ ಕೊಟ್ಟನು. ಅವರು ಯೇಸುವನ್ನು ತೆಗೆದುಕೊಂಡು ಹೋದರು. 17ಆತನು ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು “ಕಪಾಲಸ್ಥಳ” ಎಂಬ ಸ್ಥಳಕ್ಕೆ ಹೋದನು. ಇದನ್ನು ಇಬ್ರಿಯ ಭಾಷೆಯಲ್ಲಿ “ಗೊಲ್ಗೊಥಾ” ಎಂದು ಕರೆಯುತ್ತಾರೆ. 18ಅಲ್ಲಿ ಆತನನ್ನೂ ಆತನ ಜೊತೆಯಲ್ಲಿ ಇನ್ನಿಬ್ಬರನ್ನೂ ಶಿಲುಬೆಗೆ ಹಾಕಿದರು. ಅವರಲ್ಲಿ ಆ ಕಡೆ ಒಬ್ಬನನ್ನು, ಈ ಕಡೆ ಒಬ್ಬನನ್ನು, ನಡುವೆ ಯೇಸುವನ್ನು ಇಟ್ಟರು. 19ಇದಲ್ಲದೆ ಪಿಲಾತನು “ನಜರೇತಿನ ಯೇಸು, ಯೆಹೂದ್ಯರ ಅರಸನು” ಎಂದು ಒಂದು ಫಲಕವನ್ನು ಬರೆದು ಅದನ್ನು ಆತನ ಶಿಲುಬೆಯ ಮೇಲಿಡಿಸಿದ್ದನು. 20ಅವರು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳವು ಪಟ್ಟಣಕ್ಕೆ ಹತ್ತಿರವಾಗಿದ್ದುದರಿಂದ ಯೆಹೂದ್ಯರಲ್ಲಿ ಅನೇಕರು ಆ ಫಲಕವನ್ನು ಓದಿದರು. ಅದು ಇಬ್ರಿಯ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆದಿತ್ತು. 21ಹೀಗಿರಲಾಗಿ ಯೆಹೂದ್ಯರ ಮುಖ್ಯಯಾಜಕರು ಪಿಲಾತನಿಗೆ, “‘ಯೆಹೂದ್ಯರ ಅರಸನು’ ಎಂದು ಬರೆಯಬೇಡ, ‘ನಾನು ಯೆಹೂದ್ಯರ ಅರಸನೆಂದು ಹೇಳಿದ್ದಾನೆ’ ಎಂಬುದಾಗಿ ಬರೆಯಬೇಕು” ಎಂದು ಹೇಳಿದರು. 22ಅದಕ್ಕೆ ಪಿಲಾತನು, “ನಾನು ಬರೆದದ್ದು ಬರೆದಾಯಿತು” ಎಂದು ಉತ್ತರ ಕೊಟ್ಟನು. 23ಸಿಪಾಯಿಗಳು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರು ಆತನ ವಸ್ತ್ರಗಳನ್ನು ತೆಗೆದುಕೊಂಡು ನಾಲ್ಕು ಪಾಲು ಮಾಡಿ ಒಬ್ಬೊಬ್ಬ ಸಿಪಾಯಿಗೆ ಒಂದೊಂದು ಭಾಗದಂತೆ ಹಂಚಿಕೊಂಡರು. ಆತನ ಒಳಂಗಿಯನ್ನು ಸಹ ತೆಗೆದುಕೊಂಡರು. ಆದರೆ ಆ ಅಂಗಿಗೆ ಹೊಲಿಗೆ ಇರಲಿಲ್ಲ. ಅದು ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು. 24ಆಮೇಲೆ ಅವರು, “ನಾವು ಇದನ್ನು ಹರಿಯಬಾರದು ಚೀಟು ಹಾಕಿ, ಇದು ಯಾರಿಗೆ ಬರುವುದೋ ನೋಡೋಣ” ಎಂದು ಮಾತನಾಡಿಕೊಂಡರು. ಇದರಿಂದ “ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲುಮಾಡಿಕೊಂಡರು. ನನ್ನ ಅಂಗಿಗೋಸ್ಕರ ಚೀಟು ಹಾಕಿದರು” ಎಂಬ ಧರ್ಮಶಾಸ್ತ್ರದ ಮಾತು ನೆರವೇರಿತು. ಸಿಪಾಯಿಗಳು ಇದನ್ನೆಲ್ಲಾ ಮಾಡಿದರು. 25ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ, ಆತನ ತಾಯಿಯ ತಂಗಿಯೂ, ಕ್ಲೋಪನ ಹೆಂಡತಿಯಾದ ಮರಿಯಳೂ, ಮಗ್ದಲದ ಮರಿಯಳೂ ನಿಂತಿದ್ದರು. 26ಯೇಸು ತನ್ನ ತಾಯಿಯನ್ನೂ ಹತ್ತಿರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಸ್ತ್ರೀಯೇ, ಇಗೋ, ನಿನ್ನ ಮಗನು” ಎಂದು ಹೇಳಿದನು. 27ತರುವಾಯ ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿ” ಎಂದು ಹೇಳಿದನು. ಆ ಗಳಿಗೆಯಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲೇ ಇರಿಸಿಕೊಂಡನು. 28ಇದಾದ ಮೇಲೆ ಯೇಸು ಈಗ ಎಲ್ಲ ಪೂರ್ತಿಯಾಗಿದೆಯೆಂದು ತಿಳಿದು, ಧರ್ಮಶಾಸ್ತ್ರದ ಮಾತು ನೆರವೇರುವಂತೆ, “ನನಗೆ ನೀರಡಿಕೆಯಾಗಿದೆ” ಎಂದನು. 29ಆಗ ಅಲ್ಲಿ ಹುಳಿರಸ ತುಂಬಿದ ಪಾತ್ರೆಯಿತ್ತು. ಅವರು ಸ್ಪಂಜನ್ನು ಹುಳಿರಸದಲ್ಲಿ ಅದ್ದಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಆತನ ಬಾಯಿಗೆ ಮುಟ್ಟಿಸಿದರು. 30ಯೇಸು ಆ ಹುಳಿರಸವನ್ನು ತೆಗೆದುಕೊಂಡ ಮೇಲೆ, “ತೀರಿತು” ಎಂದು ಹೇಳಿ ತಲೆ ಬಾಗಿಸಿ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು. 31ಅದು ಸಿದ್ಧತೆಯ ದಿನವಾದುದರಿಂದ ಯೆಹೂದ್ಯರು, ಸಬ್ಬತ್ ದಿನದಲ್ಲಿ ಮೃತದೇಹಗಳು ಶಿಲುಬೆಯ ಮೇಲೆ ಇರಬಾರದೆಂದು, ಪಿಲಾತನನ್ನು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಕೇಳಿಕೊಂಡರು, ಏಕೆಂದರೆ ಆ ಸಬ್ಬತ್ ದಿನವು ಬಹು ವಿಶೇಷವಾದದ್ದು. 32ಅದರಂತೆ ಸಿಪಾಯಿಗಳು ಬಂದು ಮೊದಲನೆಯವನ ಕಾಲುಗಳನ್ನು ಅವನ ಜೊತೆಯಲ್ಲಿ ಶಿಲುಬೆಗೆ ಹಾಕಿಸಿಕೊಂಡಿದ್ದ ಮತ್ತೊಬ್ಬನ ಕಾಲುಗಳನ್ನು ಮುರಿದರು. 33ಆದರೆ ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವುದನ್ನು ಅವರು ಕಂಡು ಆತನ ಕಾಲುಗಳನ್ನು ಮುರಿಯಲಿಲ್ಲ. 34ಆದರೆ ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು. ಕೂಡಲೆ ರಕ್ತವೂ ನೀರೂ ಹೊರಗೆ ಬಂದವು. 35ಅದನ್ನು ಕಂಡವನೇ ಸಾಕ್ಷಿ ಹೇಳಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ತಾನು ಹೇಳುವುದು ಸತ್ಯವೆಂದು ಅವನು ಬಲ್ಲನು. ನೀವು ಸಹ ನಂಬಬೇಕೆಂದು ಇದನ್ನು ಹೇಳಿದ್ದಾನೆ. 36ಏಕೆಂದರೆ “ಆತನ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು” ಎಂದು ಧರ್ಮಶಾಸ್ತ್ರದಲ್ಲಿ ಬರೆದ ಮಾತು ನೆರವೇರುವಂತೆ ಇದಾಯಿತು. 37“ಅವರು ತಾವು ಇರಿದವನನ್ನು ದೃಷ್ಟಿಸಿನೋಡುವರು” ಎಂದು ಧರ್ಮಶಾಸ್ತ್ರದಲ್ಲಿ ಮತ್ತೊಂದು ಮಾತು ಹೇಳಿ ಅದೆ. 38ಇದಾದ ಮೇಲೆ ಯೆಹೂದ್ಯರ ಭಯದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾಯದ ಯೋಸೇಫನು ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗುವುದಕ್ಕೆ ಅಪ್ಪಣೆಯಾಗಬೇಕೆಂದು ಪಿಲಾತನನ್ನು ಕೇಳಿಕೊಂಡನು. ಆಗ ಪಿಲಾತನು ಅಪ್ಪಣೆ ಕೊಡಲಾಗಿ, ಅವನು ಬಂದು ಆತನ ದೇಹವನ್ನು ತೆಗೆದುಕೊಂಡು ಹೋದನು. 39ಇದಲ್ಲದೆ ಮೊದಲು ಒಂದು ಸಾರಿ ರಾತ್ರಿ ವೇಳೆಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ರಕ್ತಬೋಳ ಅಗರುಗಳನ್ನು ಕಲಸಿದ ಚೂರ್ಣವನ್ನು ನೂರು ಸೇರಿನಷ್ಟು ತೆಗೆದುಕೊಂಡು ಅಲ್ಲಿಗೆ ಬಂದನು. 40ಆಗ ಅವರು ಯೇಸುವಿನ ದೇಹವನ್ನು ತೆಗೆದುಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಆ ಸುಗಂಧ ದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು. 41ಆತನನ್ನು ಶಿಲುಬೆಗೆ ಹಾಕಿದ ಸ್ಥಳದಲ್ಲಿ ಒಂದು ತೋಟವಿತ್ತು ಮತ್ತು ಆ ತೋಟದಲ್ಲಿ ಒಂದು ಹೊಸ ಸಮಾಧಿ ಇತ್ತು. ಅದರಲ್ಲಿ ಅದುವರೆಗೂ ಯಾರನ್ನೂ ಇಟ್ಟಿರಲಿಲ್ಲ. 42ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದ್ದುದರಿಂದಲೂ ಆ ಸಮಾಧಿಯು ಸಮೀಪವಾಗಿದ್ದುದರಿಂದಲೂ ಅವರು ಯೇಸುವಿನ ದೇಹವನ್ನು ಅಲ್ಲಿ ಸಮಾಧಿಯಲ್ಲಿಟ್ಟರು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು