ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಫೆಬ್ರವರಿ 2027 › 26 ಫೆಬ್ರವರಿ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 26 ಫೆಬ್ರವರಿ 2027
ಶುಕ್ರವಾರ · ತಪಸ್ಸು ಕಾಲದ ಎರಡನೆಯ ವಾರ
ಹಬ್ಬಗಳು ಮತ್ತು ಸಂತರು
ತಪಸ್ಸು ಕಾಲದ ಎರಡನೆಯ ವಾರದ ಶುಕ್ರವಾರ
ವಾರದ ದಿನ · ಆರಾಧನಾ ಬಣ್ಣ: ನೇರಳೆ
ಉಪವಾಸ ಮತ್ತು ಪ್ರಾಯಶ್ಚಿತ್ತ
ಮಾಂಸ ವರ್ಜನೆ
ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.
ದಿನದ ವಾಚನಗಳು
ಮೊದಲನೆಯ ವಾಚನ
3ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನಲ್ಲಿ ಹುಟ್ಟಿದವನಾಗಿದ್ದುದರಿಂದ ಅವನನ್ನು ತನ್ನ ಎಲ್ಲಾ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದನು, ಅಲ್ಲದೆ ಅವನಿಗೆ ಬಣ್ಣಬಣ್ಣದ ಒಂದು ನಿಲುವಂಗಿಯನ್ನು ಹೊಲಿಸಿ ಕೊಟ್ಟಿದ್ದನು. 4ಅವನ ಅಣ್ಣತಮ್ಮಂದಿರು, ತಮ್ಮ ತಂದೆಯು ಎಲ್ಲಾ ಮಕ್ಕಳಿಗಿಂತಲೂ ಇವನನ್ನೇ ಹೆಚ್ಚಾಗಿ ಪ್ರೀತಿಸುತ್ತಿರುವುದನ್ನು ನೋಡಿ ಯೋಸೇಫನನ್ನು ಹಗೆಮಾಡಿ ಅವನೊಡನೆ ಸ್ನೇಹಭಾವದಿಂದ ಮಾತನಾಡಲಾರದೆ ಹೋದರು. 12ಅವನ ಅಣ್ಣಂದಿರು ತಂದೆಯ ಆಡುಕುರಿ ಹಿಂಡುಗಳನ್ನು ಮೇಯಿಸುವುದಕ್ಕೆ ಶೆಕೆಮಿಗೆ ಹೋದರು. 13ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಅಣ್ಣಂದಿರು ಶೆಕೆಮಿನಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದಾರಲ್ಲಾ ಅವರ ಬಳಿಗೆ ನಿನ್ನನ್ನು ಕಳುಹಿಸುತ್ತೇನೆ, ಹೋಗು” ಎಂದು ಹೇಳಿದನು. ಅದಕ್ಕೆ ಅವನು, “ಆಗಲಿ, ಹೋಗುತ್ತೇನೆ” ಎಂದನು. 17ಅದಕ್ಕೆ ಆ ಮನುಷ್ಯನು, “ಅವರು ಇಲ್ಲಿಂದ ಹೊರಟುಹೋದರು. ಅವರು ನಾವು ದೋತಾನಿಗೆ ಹೋಗೋಣ ಎಂಬುದಾಗಿ ಮಾತನಾಡುವುದನ್ನು ನಾನು ಕೇಳಿಸಿಕೊಂಡೆನು” ಎಂದು ಹೇಳಲು ಯೋಸೇಫನು ಅವರನ್ನು ಹುಡುಕುತ್ತಾ ಹೋಗಿ ದೋತಾನಿನಲ್ಲಿ ಅವರನ್ನು ಕಂಡನು. 18ಅವರು ಅವನನ್ನು ದೂರದಿಂದ ನೋಡಿ ಅವನು ತಮ್ಮ ಬಳಿಗೆ ಬರುವಷ್ಟರೊಳಗೆ ಅವನನ್ನು ಕೊಲ್ಲುವುದಕ್ಕೆ ಒಳಸಂಚು ಮಾಡಿಕೊಂಡರು. 19ಅವರು ಒಬ್ಬರಿಗೊಬ್ಬರು, “ಅಗೋ ಆ ಕನಸುಗಾರನು ಬರುತ್ತಿದ್ದಾನೆ ನೋಡಿರಿ 20ಬನ್ನಿರಿ, ಈಗ ನಾವು ಅವನನ್ನು ಕೊಂದು ಈ ಗುಂಡಿಗಳಲ್ಲಿ ಒಂದರೊಳಗೆ ಹಾಕಿ, ಕಾಡುಮೃಗವು ಅವನನ್ನು ತಿಂದು ಬಿಟ್ಟಿತೆಂದು ಹೇಳೋಣ. ಆಗ ಅವನ ಕನಸುಗಳು ಏನಾಗುವವೋ? ನೋಡೋಣ” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. 21ರೂಬೇನನು ಈ ಮಾತನ್ನು ಕೇಳಿ, “ನಾವು ಅವನ ಪ್ರಾಣವನ್ನು ತೆಗೆಯಬಾರದು” ಎಂದು ಹೇಳಿದನು. 22ರೂಬೇನನು ಅವನನ್ನು ಅವರ ಕೈಯಿಂದ ತಪ್ಪಿಸಿ ತಂದೆಗೆ ತಿರುಗಿ ಒಪ್ಪಿಸಬೇಕೆಂದು ನೆನಸಿ ಅವರಿಗೆ, “ಇವನ ರಕ್ತ ಸುರಿಸಬೇಡಿರಿ, ಅವನನ್ನು ಈ ಕಾಡಿನಲ್ಲಿರುವ ಈ ಗುಂಡಿಯೊಳಗೆ ಹಾಕಿರಿ, ಅವನ ಮೇಲೆ ಕೈಹಾಕಬೇಡಿರಿ” ಎಂದು ಹೇಳಿದನು. 23ಯೋಸೇಫನು ತನ್ನ ಅಣ್ಣಂದಿರ ಹತ್ತಿರಕ್ಕೆ ಬಂದಾಗ ಅವರು ಅವನ ಮೇಲಿದ್ದ ನಿಲುವಂಗಿಯನ್ನು ತೆಗೆದರು. 24ಅವನನ್ನು ಹಿಡಿದು ಆ ಗುಂಡಿಯೊಳಗೆ ಹಾಕಿದರು. ಆ ಗುಂಡಿ ನೀರಿಲ್ಲದೆ ಬರಿದಾಗಿತ್ತು. 25ಆ ಮೇಲೆ ಅವರು ಊಟಕ್ಕೆ ಕುಳಿತುಕೊಂಡಾಗ ಅವರು ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ, ಇಷ್ಮಾಯೇಲರ ಗುಂಪು ಒಂಟೆಗಳ ಮೇಲೆ ಪರಿಮಳ ದ್ರವ್ಯ, ಸುಗಂಧ ತೈಲ, ರಕ್ತಬೋಳ, ಇವುಗಳನ್ನು ಹೇರಿಕೊಂಡು ಗಿಲ್ಯಾದಿನಿಂದ ಐಗುಪ್ತದೇಶಕ್ಕೆ ಪ್ರಯಾಣಮಾಡುತ್ತಾ ಬರುವುದನ್ನು ಕಂಡರು. 26ಆಗ ಯೆಹೂದನು ತನ್ನ ಅಣ್ಣತಮ್ಮಂದಿರಿಗೆ, “ನಾವು ನಮ್ಮ ತಮ್ಮನನ್ನು ಕೊಂದು ಹಾಕಿ ಅವನ ರಕ್ತವನ್ನು ಮರೆಮಾಡಿದರೆ ಲಾಭವೇನು? 27ಬನ್ನಿರಿ, ಅವನನ್ನು ಆ ಇಷ್ಮಾಯೇಲ್ಯರಿಗೆ ಮಾರಿಬಿಡೋಣ. ನಾವು ಅವನ ಮೇಲೆ ಕೈಹಾಕಬಾರದು. ಅವನು ನಮ್ಮ ಒಡಹುಟ್ಟಿದ ತಮ್ಮನಲ್ಲವೇ” ಎಂದು ಹೇಳಿದನು. ಆ ಮಾತಿಗೆ ಅವನ ಅಣ್ಣಂದಿರು ಒಪ್ಪಿದರು. 28ಅಷ್ಟರಲ್ಲಿ ಮಿದ್ಯಾನ್ಯರಾದ ವರ್ತಕರು ಹಾದುಹೋಗುತ್ತಿದ್ದರು. ಅವರು ಯೋಸೇಫನನ್ನು ಗುಂಡಿಯೊಳಗಿಂದ ಮೇಲೆ ಎತ್ತಿ ಆ ಇಷ್ಮಾಯೇಲ್ಯರಿಗೆ ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಅವನನ್ನು ಮಾರಿದರು. ಅವರು ಅವನನ್ನು ಐಗುಪ್ತ ದೇಶಕ್ಕೆ ಕರೆದುಕೊಂಡು ಹೋದರು.
ಪ್ರತಿವಚನ ಕೀರ್ತನೆ
16ಅನಂತರ ಆತನು ಐಗುಪ್ತ ದೇಶದಲ್ಲಿ ಕ್ಷಾಮವನ್ನು ಬರಮಾಡಿ, ಆಹಾರವನ್ನು ನಾಶಮಾಡಿಬಿಟ್ಟನು. 17ಆತನು ಅವರ ಮುಂದಾಗಿ ಒಬ್ಬನನ್ನು ಕಳುಹಿಸಿದನು; ದಾಸತ್ವಕ್ಕೆ ಮಾರಲ್ಪಟ್ಟ ಯೋಸೇಫನೇ ಅವನು. 18ಅವನ ಕಾಲುಗಳು ಬೇಡಿಗಳಿಂದ ಕಟ್ಟಲ್ಪಟ್ಟವು; ಕಬ್ಬಿಣದ ಕೊರಳಪಟ್ಟಿಯಿಂದ ಅವನು ಬಂಧಿತನಾದನು. 19ಅವನು ತನ್ನ ಮಾತು ನೆರವೇರುವ ತನಕ ಯೆಹೋವನ ವಾಕ್ಯದಿಂದ ಶೋಧಿತನಾದನು. 20ಅರಸನು ಅಪ್ಪಣೆಮಾಡಿ ಅವನನ್ನು ತಪ್ಪಿಸಿದನು; ಜನಾಧಿಪತಿಯು ಅವನನ್ನು ಬಿಡಿಸಿದನು. 21ಅವನನ್ನು ತನ್ನ ಮನೆಗೆ ಯಜಮಾನನನ್ನಾಗಿಯೂ, ತನ್ನ ಆಸ್ತಿಗೆಲ್ಲಾ ಅಧಿಕಾರಿಯನ್ನಾಗಿಯೂ ಮಾಡಿದನು.
ಸುವಾರ್ತೆ
33“ಮತ್ತೊಂದು ಸಾಮ್ಯವನ್ನು ಕೇಳಿರಿ, ಒಬ್ಬ ಮನೆಯ ಯಜಮಾನನಿದ್ದನು. ಅವನು ಒಂದು ದ್ರಾಕ್ಷಾತೋಟವನ್ನು ನೆಟ್ಟು ಅದರ ಸುತ್ತಲೂ ಬೇಲಿಹಾಕಿಸಿ, ಅದರಲ್ಲಿ ದ್ರಾಕ್ಷಿಯ ಗಾಣವನ್ನು ಹಾಕಿಸಿ, ಕಾವಲು ಗೋಪುರವನ್ನು ಕಟ್ಟಿಸಿ, ದ್ರಾಕ್ಷಿಯ ತೋಟಗಾರರಿಗೆ ಅದನ್ನು ಗುತ್ತಿಗೆಗೆ ಕೊಟ್ಟು, ಅವನು ಬೇರೊಂದು ದೇಶಕ್ಕೆ ಹೋದನು. 34ಫಲಕಾಲ ಹತ್ತಿರವಾದಾಗ ತನಗೆ ಬರಬೇಕಾದ ಹಣ್ಣುಗಳನ್ನು ತೆಗೆದುಕೊಂಡು ಬರುವುದಕ್ಕಾಗಿ ಆ ತೋಟಗಾರರ ಬಳಿಗೆ ತನ್ನ ಆಳುಗಳನ್ನು ಕಳುಹಿಸಲು, 35ತೋಟಗಾರರು ಅವನ ಆಳುಗಳನ್ನು ಹಿಡಿದು ಒಬ್ಬನನ್ನು ಹೊಡೆದರು, ಮತ್ತೊಬ್ಬನನ್ನು ಕಡಿದು ಹಾಕಿದರು, ಇನ್ನೊಬ್ಬನನ್ನು ಕಲ್ಲೆಸೆದು ಕೊಂದರು. 36ಆ ಯಜಮಾನನು ಪುನಃ ಮೊದಲಿನವರಿಗಿಂತ ಹೆಚ್ಚು ಮಂದಿ ಆಳುಗಳನ್ನು ಕಳುಹಿಸಿದನು, ಅವರು ಅವರಿಗೂ ಹಾಗೆಯೇ ಮಾಡಿದರು. 37ಕಡೆಯಲ್ಲಿ ‘ನನ್ನ ಮಗನಿಗಾದರೂ ಮರ್ಯಾದೆ ತೋರಿಸಾರು’ ಅಂದುಕೊಂಡು ತನ್ನ ಮಗನನ್ನು ಅವರ ಬಳಿಗೆ ಕಳುಹಿಸಿದನು. 38ಆದರೆ ಆ ತೋಟಗಾರರು ಅವನ ಮಗನನ್ನು ಕಂಡು, ‘ಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳೋಣ’ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು 39ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು. 40ಹಾಗಾದರೆ ದ್ರಾಕ್ಷಾತೋಟದ ಧಣಿಯು ಬಂದಾಗ ಆ ತೋಟಗಾರರಿಗೆ ಏನು ಮಾಡುವನು?” ಅಂದನು. 41ಅವರು ಆತನಿಗೆ, “ಆ ಕೆಡುಕರನ್ನು ಕ್ರೂರವಾಗಿ ಸಂಹರಿಸಿ ತಕ್ಕಕಾಲಕ್ಕೆ ಹಣ್ಣುಗಳನ್ನು ತನಗೆ ಸಲ್ಲಿಸುವಂಥ ಬೇರೆ ತೋಟಗಾರರಿಗೆ ತನ್ನ ತೋಟವನ್ನು ಗುತ್ತಿಗೆಗೆ ಕೊಡುವನು” ಎಂದು ಹೇಳಿದರು. 42ಯೇಸು ಅವರಿಗೆ, “‘ಮನೆ ಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದಲೇ ಆಯಿತು; ಮತ್ತು ನಮ್ಮ ಕಣ್ಣುಗಳಿಗೆ ಅದು ಆಶ್ಚರ್ಯವಾಗಿ ತೋರುತ್ತದೆ ಎಂಬ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ?’ 43ಆದುದರಿಂದ ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲಾಗುವುದು. 45ಮುಖ್ಯಯಾಜಕರೂ ಫರಿಸಾಯರೂ ಆತನ ಸಾಮ್ಯಗಳನ್ನು ಕೇಳಿ ತಮ್ಮನ್ನೇ ಕುರಿತು ಮಾತನಾಡುತ್ತಿದ್ದಾನೆಂದು ತಿಳಿದುಕೊಂಡು. ಯೇಸುವನ್ನು ಬಂಧಿಸಲು ಸಂದರ್ಭ ನೋಡುತ್ತಿದ್ದರು; 46ಆದರೆ ಅವರು ಆತನನ್ನು ಬಂಧಿಸುವುದಕ್ಕೆ ಪ್ರಯತ್ನಿಸಿದರೂ ಜನರು ಆತನನ್ನು ಪ್ರವಾದಿಯೆಂದು ಎಣಿಸಿದ್ದರಿಂದ ಅವರಿಗೆ ಭಯಪಟ್ಟರು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು