Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಫೆಬ್ರವರಿ 2027 › 27 ಫೆಬ್ರವರಿ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 27 ಫೆಬ್ರವರಿ 2027

ಶನಿವಾರ · ತಪಸ್ಸು ಕಾಲದ ಎರಡನೆಯ ವಾರ

ಹಬ್ಬಗಳು ಮತ್ತು ಸಂತರು

ತಪಸ್ಸು ಕಾಲದ ಎರಡನೆಯ ವಾರದ ಶನಿವಾರ

ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ನೇರಳೆ

ನರೆಕ್‌ನ ಸಂತ ಗ್ರೆಗೊರಿ, ಮಠಾಧಿಪತಿ ಮತ್ತು ಧರ್ಮಸಭೆಯ ಪಂಡಿತ · ಸ್ಮರಣೋಲ್ಲೇಖ

ದಿನದ ವಾಚನಗಳು

ಮೊದಲನೆಯ ವಾಚನ

ಮೀಕ 7:14–15, 18–20

14ಫಲವತ್ತಾದ ಭೂಮಿಯ ಮಧ್ಯದಲ್ಲಿನ ಕಾಡಿನೊಳಗೆ ಪ್ರತ್ಯೇಕವಾಗಿ ತಂಗುವ ನಿನ್ನ ಜನರನ್ನು, ನಿನ್ನ ಸ್ವತ್ತಾದ ಹಿಂಡನ್ನು ನಿನ್ನ ದಿವ್ಯಹಸ್ತದಿಂದ ಮೇಯಿಸು. ಪೂರ್ವಕಾಲದಂತೆ ಬಾಷಾನಿನಲ್ಲಿಯೂ, ಗಿಲ್ಯಾದಿನಲ್ಲಿಯೂ ಮೇಯಲಿ. 15ನೀನು ಐಗುಪ್ತದೇಶದೊಳಗಿಂದ ಪಾರಾಗಿ ಬಂದ ಕಾಲದಲ್ಲಿ ನಾನು ತೋರಿಸಿದಂತೆ ಅದ್ಭುತಗಳನ್ನು ತೋರಿಸುವೆನು. 18ನಿನಗೆ ಯಾವ ದೇವರು ಸಮಾನ? ನೀನು ನಿನ್ನ ಸ್ವತ್ತಿನವರಲ್ಲಿ ಉಳಿದಿರುವ ಅಪರಾಧವನ್ನು ಕ್ಷಮಿಸುವವನೂ, ಅವರ ದ್ರೋಹವನ್ನು ಲಕ್ಷಿಸದವನೂ ಆಗಿದ್ದೀ. ಹೌದು ನಮ್ಮ ದೇವರು ನಿತ್ಯವೂ ಕೋಪಿಸುವವನಲ್ಲ. ಕರುಣೆಯೇ ಆತನಿಗೆ ಇಷ್ಟ. 19ಆತನು ಮತ್ತೊಮ್ಮೆ ನಮ್ಮನ್ನು ಕನಿಕರಿಸುವನು. ನಮ್ಮ ಅಪರಾಧಗಳನ್ನು ಅಣಗಿಸುವವನು. ದೇವರೇ, ನಿನ್ನ ಜನರ ಪಾಪಗಳನ್ನೆಲ್ಲಾ ಸಮುದ್ರದ ತಳಕ್ಕೆ ಬೀಸಾಡಿಬಿಡುವಿ. 20ನೀನು ಪುರಾತನ ಕಾಲದಿಂದಲೂ ನಮ್ಮ ಪೂರ್ವಿಕರಿಗೆ ಪ್ರಮಾಣಮಾಡಿರುವಂತೆ ಯಾಕೋಬನ ವಂಶದವರಿಗೆ ಸತ್ಯಪರನಾಗಿಯೂ, ಅಬ್ರಹಾಮನ ವಂಶದವರಿಗೆ ಪ್ರೀತಿಪರನಾಗಿಯೂ ನಡೆಯುವಿ.

ಪ್ರತಿವಚನ ಕೀರ್ತನೆ

ಕೀರ್ತ 103:1–4, 9–12

1ದಾವೀದನ ಕೀರ್ತನೆ. ನನ್ನ ಮನವೇ, ಯೆಹೋವನನ್ನು ಕೊಂಡಾಡು; ನನ್ನ ಸರ್ವೇಂದ್ರಿಯಗಳೇ, ಆತನ ಪವಿತ್ರ ನಾಮವನ್ನು ಕೀರ್ತಿಸಿರಿ. 2ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ. 3ಆತನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸುವವನೂ, ಸಮಸ್ತ ರೋಗಗಳನ್ನು ವಾಸಿಮಾಡುವವನೂ, 4ನಿನ್ನ ಜೀವವನ್ನು ನಾಶನದಿಂದ ತಪ್ಪಿಸುವವನೂ, ಶಾಶ್ವತ ಪ್ರೀತಿ ಮತ್ತು ಕರುಣೆಯೆಂಬ ಕಿರೀಟದಿಂದ ನಿನ್ನನ್ನು ಶೃಂಗರಿಸುವವನೂ ಆಗಿದ್ದಾನೆ. 9ಆತನು ಯಾವಾಗಲೂ ತಪ್ಪು ಹುಡುಕುವವನಲ್ಲ; ನಿತ್ಯವೂ ಕೋಪಿಸುವವನಲ್ಲ. 10ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ. 11ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ. 12ಪೂರ್ವಕ್ಕೂ, ಪಶ್ಚಿಮಕ್ಕೂ ಎಷ್ಟು ದೂರವೋ, ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ.

ಸುವಾರ್ತೆ

ಲೂಕ 15:1–3, 11–32

1ಯೇಸುವಿನ ಉಪದೇಶವನ್ನು ಕೇಳಬೇಕೆಂದು ಎಲ್ಲಾ ಸುಂಕದವರೂ ಪಾಪಿಗಳೂ ಆತನ ಬಳಿಗೆ ಬರುತ್ತಿದ್ದರು. 2ಫರಿಸಾಯರೂ ಶಾಸ್ತ್ರಿಗಳೂ, “ಇವನು ಪಾಪಿಗಳನ್ನು ಸೇರಿಸಿಕೊಂಡು ಅವರ ಜೊತೆಯಲ್ಲಿ ಊಟಮಾಡುತ್ತಾನೆ” ಎಂದು ಹೇಳಿಕೊಂಡು ಗೊಣಗುಟ್ಟುತ್ತಿದ್ದರು. 3ಆಗ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು. 11ಇನ್ನೂ ಆತನು ಹೇಳಿದ್ದೇನಂದರೆ, “ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. 12ಅವರಲ್ಲಿ ಕಿರಿಯವನು ತಂದೆಗೆ, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು’ ಎಂದು ಕೇಳಿಕೊಳ್ಳಲು ತಂದೆಯು ಆಸ್ತಿಯನ್ನು ಅವರಿಗೆ ಹಂಚಿಕೊಟ್ಟನು. 13ಸ್ವಲ್ಪ ದಿನದ ಮೇಲೆ ಆ ಕಿರಿಯ ಮಗನು ತನ್ನ ಪಾಲನ್ನೆಲ್ಲಾ ಕೂಡಿಸಿಕೊಂಡು ದೂರದೇಶಕ್ಕೆ ಹೊರಟುಹೋಗಿ ಅಲ್ಲಿ ಪಟಿಂಗನಾಗಿ ಬದುಕಿ ತನ್ನ ಆಸ್ತಿಯನ್ನು ಹಾಳುಮಾಡಿಕೊಂಡನು. 14ಹೀಗೆ ಅವನು ಎಲ್ಲಾ ಹಾಳುಮಾಡಿಕೊಂಡ ಮೇಲೆ ಆ ದೇಶದಲ್ಲೆಲ್ಲಾ ಘೋರವಾದ ಬರ ಬಂದು ಏನೂ ಗತಿಯಿಲ್ಲದವನಾದನು. 15ಆಗ ಅವನು ಹೋಗಿ ಆ ದೇಶದ ನಿವಾಸಿಗಳೊಳಗೆ ಒಬ್ಬನಲ್ಲಿ ಸೇರಿಕೊಂಡನು. ಆ ಮನುಷ್ಯನು ಹಂದಿಗಳನ್ನು ಮೇಯಿಸುವುದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು. 16ಹೀಗಿರಲಾಗಿ ಅವನು ಹಂದಿ ತಿನ್ನುತ್ತಿದ್ದ ಕಾಯಿಗಳನ್ನಾದರೂ ತಿಂದು ಹಸಿವನ್ನು ತೀರಿಸಿಕೊಳ್ಳಬೇಕೆಂದು ಆಸೆಪಟ್ಟನು, ಆದರೂ ಯಾರೂ ಅವನಿಗೆ ಕೊಡಲಿಲ್ಲ. 17ಆಗ ಅವನಿಗೆ ಬುದ್ಧಿಬಂದು ಅವನು, ‘ನನ್ನ ತಂದೆಯ ಬಳಿಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ಬೇಕಾದಷ್ಟು ಆಹಾರವಿದೆ, ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಿದ್ದೇನೆ. 18ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ, ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ನಾನು ಪಾಪ ಮಾಡಿದ್ದೇನೆ. 19ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ, ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು’ ಎಂದು ಹೇಳುವೆನು ಅಂದುಕೊಂಡು, 20ಎದ್ದು ತನ್ನ ತಂದೆಯ ಕಡೆಗೆ ಬಂದನು. “ಅವನು ಇನ್ನೂ ದೂರದಲ್ಲಿರುವಾಗ ಅವನ ತಂದೆಯು ಅವನನ್ನು ಕಂಡು, ಕನಿಕರಪಟ್ಟು, ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು, ಅವನಿಗೆ ಬಹಳವಾಗಿ ಮುದ್ದಿಟ್ಟನು. 21ಆದರೂ ಮಗನು ಅವನಿಗೆ, ‘ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪ ಮಾಡಿದ್ದೇನೆ. ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ’ ಎಂದು ಹೇಳಲು, 22ತಂದೆಯು ತನ್ನ ಆಳುಗಳಿಗೆ, ‘ಶ್ರೇಷ್ಠವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ಉಡಿಸಿ, ಇವನ ಕೈಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಜೋಡು ಮೆಡಿಸಿರಿ, 23ಕೊಬ್ಬಿಸಿದ ಆ ಕರುವನ್ನು ತಂದು ಕೊಯ್ಯಿರಿ, ಹಬ್ಬಮಾಡೋಣ, ಉಲ್ಲಾಸಪಡೋಣ. 24ಈ ನನ್ನ ಮಗನು ಸತ್ತವನಾಗಿದ್ದನು, ತಿರುಗಿ ಬದುಕಿ ಬಂದಿದ್ದಾನೆ. ಪೋಲಿಹೋಗಿದ್ದನು, ಸಿಕ್ಕಿದನು’ ಎಂದು ಹೇಳಿ ಉಲ್ಲಾಸಪಡುವುದಕ್ಕೆ ತೊಡಗಿದರು. 25ಆದರೆ ಅವನ ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಯ ಸಮೀಪಕ್ಕೆ ಬರುತ್ತಿರುವಾಗ ವಾದ್ಯಘೋಷಗಳನ್ನೂ ನರ್ತನಗಳನ್ನು ಕೇಳಿ, 26ಆಳುಗಳಲ್ಲಿ ಒಬ್ಬನನ್ನು ತನ್ನ ಬಳಿಗೆ ಕರೆದು, ಇದೇನು ಎಂದು ವಿಚಾರಿಸಿದನು. 27ಆಳು ಅವನಿಗೆ, ‘ನಿನ್ನ ತಮ್ಮ ಬಂದಿದ್ದಾನೆ. ಇವನು ಸುರಕ್ಷಿತನಾಗಿ ಬಂದದ್ದರಿಂದ ನಿನ್ನ ತಂದೆಯು ಆ ಕೊಬ್ಬಿದ ಕರುವನ್ನು ಕೊಯ್ಸಿದ್ದಾನೆ’ ಎಂದು ಹೇಳಿದನು. 28ಇದನ್ನು ಕೇಳಿ ಹಿರಿಯ ಮಗನು ಕೋಪಗೊಂಡು ಮನೆ ಒಳಕ್ಕೆ ಹೋಗಲು ಇಷ್ಟಪಡಲಿಲ್ಲ. ಆಗ ಅವನ ತಂದೆಯು ಹೊರಗೆ ಬಂದು ಅವನನ್ನು ಬೇಡಿಕೊಂಡನು. 29ಆದರೆ ಅವನು ತನ್ನ ತಂದೆಗೆ, ‘ನೋಡು, ಇಷ್ಟು ವರ್ಷ ನಿನಗೆ ಸೇವೆ ಮಾಡಿದ್ದೇನೆ, ಮತ್ತು ನಾನು ನಿನ್ನ ಅಪ್ಪಣೆಗಳಲ್ಲಿ ಒಂದನ್ನಾದರೂ ಎಂದೂ ಮೀರಲಿಲ್ಲ. ಆದರೂ ನಾನು ನನ್ನ ಸ್ನೇಹಿತರ ಸಂಗಡ ಉಲ್ಲಾಸಪಡುವುದಕ್ಕಾಗಿ ನೀನು ಎಂದೂ ನನಗೆ ಒಂದು ಆಡನ್ನಾದರೂ ಕೊಡಲಿಲ್ಲ. 30ಆದರೆ ಸೂಳೆಯರನ್ನು ಕಟ್ಟಿಕೊಂಡು ನಿನ್ನ ಬದುಕನ್ನು ಹಾಳುಮಾಡಿದ ಈ ನಿನ್ನ ಮಗನು ಬಂದಾಗ ಕೊಬ್ಬಿದ ಕರುವನ್ನು ಇವನಿಗೆ ಕೊಯ್ಸಿದಿಯಲ್ಲಾ’ ಎಂದು ಉತ್ತರಕೊಟ್ಟನು. 31ಅದಕ್ಕೆ ತಂದೆಯು, ‘ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ ಮತ್ತು ನನ್ನದೆಲ್ಲಾ ನಿನ್ನದೇ. 32ಆದರೆ ಉಲ್ಲಾಸಪಡುವುದೂ ಸಂತೋಷಗೊಳ್ಳುವುದೂ ನ್ಯಾಯವಾದದ್ದೇ, ಏಕೆಂದರೆ ಈ ನಿನ್ನ ತಮ್ಮ ಸತ್ತವನಾಗಿದ್ದನು, ತಿರುಗಿ ಬದುಕಿ ಬಂದಿದ್ದಾನೆ; ಪೋಲಿಹೋಗಿದ್ದನು, ಸಿಕ್ಕಿದನು’” ಎಂದು ಹೇಳಿದನು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು