ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಫೆಬ್ರವರಿ 2027 › 25 ಫೆಬ್ರವರಿ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 25 ಫೆಬ್ರವರಿ 2027
ಗುರುವಾರ · ತಪಸ್ಸು ಕಾಲದ ಎರಡನೆಯ ವಾರ
ಹಬ್ಬಗಳು ಮತ್ತು ಸಂತರು
ತಪಸ್ಸು ಕಾಲದ ಎರಡನೆಯ ವಾರದ ಗುರುವಾರ
ವಾರದ ದಿನ · ಆರಾಧನಾ ಬಣ್ಣ: ನೇರಳೆ
ದಿನದ ವಾಚನಗಳು
ಮೊದಲನೆಯ ವಾಚನ
5ಯೆಹೋವನು ಹೀಗೆನ್ನುತ್ತಾನೆ, “ಮಾನವ ಮಾತ್ರದವರಲ್ಲಿ ಭರವಸವಿಟ್ಟು, ನರಜನ್ಮದವರನ್ನು ತನ್ನ ಭುಜಬಲವೆಂದು ತಿಳಿದು, ಯೆಹೋವನನ್ನು ತೊರೆಯುವ ಮನಸ್ಸುಳ್ಳವನು ಶಾಪಗ್ರಸ್ಥನು. 6ಇವನು ಅಡವಿಯಲ್ಲಿನ ಜಾಲಿಗೆ ಸಮಾನನು; ಶುಭ ಸಂಭವಿಸಿದರೂ ಅವನು ಅದನ್ನು ಕಾಣನು. ಯಾರೂ ವಾಸಿಸದ ಚೌಳು ನೆಲವಾಗಿರುವ ಅರಣ್ಯದ ಬೆಗ್ಗಾಡಿನಲ್ಲಿ ವಾಸಿಸುವ ಸ್ಥಿತಿಯೇ ಅವನದು. 7ಯಾರು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾರೋ, ಯಾರಿಗೆ ಯೆಹೋವನು ಭರವಸೆಯಾಗಿದ್ದಾನೋ ಅವರೇ ಧನ್ಯರು. 8ನೀರಾವರಿಯಲ್ಲಿ ನೆಡಲ್ಪಟ್ಟು ಹೊಳೆಯ ದಡದಲ್ಲಿ ತನ್ನ ಬೇರುಗಳನ್ನು ಹರಡಿ, ಧಗೆಗೆ ಭಯಪಡದೆ, ಹಸುರೆಲೆಯನ್ನು ಚಿಗುರಿಸುತ್ತಾ, ಕ್ಷಾಮದ ವರ್ಷದಲ್ಲಿಯೂ ನಿಶ್ಚಿಂತೆಯಾಗಿ ಸದಾ ಫಲಕೊಡುತ್ತಾ ಇರುವ ಮರಕ್ಕೆ ಅವರು ಸಮಾನವಾಗಿರುವರು.” 9ಹೃದಯವು ಎಲ್ಲಾದಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ತಿಳಿದವರು ಯಾರು? 10ಯೆಹೋವನಾದ ನಾನು ಪ್ರತಿಯೊಬ್ಬನಿಗೂ ಕರ್ಮಫಲವನ್ನು ಅವನವನ ನಡತೆಗೆ ತಕ್ಕ ಹಾಗೆ ಕೊಡಬೇಕೆಂದು, ಹೃದಯವನ್ನು ಪರೀಕ್ಷಿಸುವವನೂ, ಅಂತರಿಂದ್ರಿಯವನ್ನು ಶೋಧಿಸುವವನೂ ಆಗಿದ್ದೇನೆ.
ಪ್ರತಿವಚನ ಕೀರ್ತನೆ
1ಯಾರು ದುಷ್ಟರ ಆಲೋಚನೆಯಂತೆ ನಡೆಯದೆ, ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ, ಧರ್ಮನಿಂದಕರೊಡನೆ ಕುಳಿತುಕೊಳ್ಳದೆ, 2ಯೆಹೋವನ ಧರ್ಮಶಾಸ್ತ್ರದಲ್ಲಿ ಸಂತೋಷಿಸುತ್ತಾ, ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವವನು ಎಷ್ಟೋ ಧನ್ಯನು. 3ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗೆ ಅವನಿರುವನು. ಅಂಥ ಮರವು ಸೂಕ್ತಕಾಲದಲ್ಲಿ ಫಲಕೊಡುತ್ತದಲ್ಲಾ. ಅದರ ಎಲೆ ಬಾಡುವುದೇ ಇಲ್ಲ. ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವುದು. 4ದುಷ್ಟರೋ ಹಾಗಲ್ಲ; ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತೆ ಇದ್ದಾರೆ. 6ಯೆಹೋವನು ನೀತಿವಂತರ ಮಾರ್ಗವನ್ನು ಲಕ್ಷಿಸುವನು; ದುಷ್ಟರ ಮಾರ್ಗವೋ ನಾಶವಾಗುವುದು.
ಸುವಾರ್ತೆ
19“ಐಶ್ವರ್ಯವಂತನಾದ ಒಬ್ಬ ಮನುಷ್ಯನಿದ್ದನು. ಅವನು ಬೆಲೆಬಾಳುವ ನಯವಾದ ನಾರುಮಡಿ ಮುಂತಾದ ವಸ್ತ್ರಗಳನ್ನು ಧರಿಸಿಕೊಂಡು, ಪ್ರತಿದಿನವು ಸುಖಸಂತೋಷಗಳಲ್ಲಿ ಜೀವಿಸುತ್ತಿದ್ದನು. 20ಅವನ ಮನೇ ಬಾಗಿಲಿನಲ್ಲಿ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದುಕೊಂಡಿದ್ದನು. ಇವನು ಮೈತುಂಬಾ ಹುಣ್ಣೆದ್ದವನು. 21ಐಶ್ವರ್ಯವಂತನ ಮೇಜಿನಿಂದ ಬಿದ್ದ ಎಂಜಲನ್ನು ತಿಂದು ಹಸಿವು ತೀರಿಸಿಕೊಳ್ಳಬೇಕೆಂದಿದ್ದನು. ಇಷ್ಟು ಮಾತ್ರವಲ್ಲದೆ ನಾಯಿಗಳು ಸಹ ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು. 22ಹೀಗಿರುವಲ್ಲಿ ಸ್ವಲ್ಪ ಕಾಲವಾದ ಮೇಲೆ ಆ ಭಿಕ್ಷುಕನು ಸತ್ತನು. ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಆ ಐಶ್ವರ್ಯವಂತನು ಸಹ ಸತ್ತನು. ಅವನನ್ನು ಹೂಣಿಟ್ಟರು. 23ಅವನು ಪಾತಾಳದೊಳಗೆ ಯಾತನೆಪಡುತ್ತಾ ಇರುವಲ್ಲಿ ಕಣ್ಣೆತ್ತಿ ದೂರದಿಂದ ಅಬ್ರಹಾಮನನ್ನೂ ಅವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ನೋಡಿ, 24‘ತಂದೆಯೇ, ಅಬ್ರಹಾಮನೇ ನನ್ನ ಮೇಲೆ ಕರುಣೆ ಇಟ್ಟು ಲಾಜರನನ್ನು ಕಳುಹಿಸು ಅವನು ತನ್ನ ತುದಿ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ, ಏಕೆಂದರೆ ಈ ಉರಿಯಲ್ಲಿ ಸಂಕಟಪಡುತ್ತಿದ್ದೇನೆ’ ಎಂದು ಕೂಗಿ ಹೇಳಿದನು. 25ಆದರೆ ಅಬ್ರಹಾಮನು, ‘ಕಂದಾ, ನೀನು ಆಶಿಸಿದ ಸುಖಸಂಪತ್ತನ್ನು ನಿನ್ನ ಜೀವಮಾನದಲ್ಲಿ ಹೊಂದಿದ್ದಿ. ಹಾಗೆಯೇ ಲಾಜರನು ಕಷ್ಟವನ್ನು ಹೊಂದಿದನು ಎಂಬುದನ್ನು ನೆನಪಿಗೆ ತಂದುಕೋ. ಈಗಲಾದರೋ ಇಲ್ಲಿ ಇವನಿಗೆ ಸಮಾಧಾನ, ಆದರೆ ನಿನಗೆ ಸಂಕಟ. 26ಇದು ಮಾತ್ರವಲ್ಲದೆ ನಮಗೂ ನಿಮಗೂ ನಡುವೆ ದೊಡ್ಡದೊಂದು ಆಳವಾದ ಕಂದಕ ಇದೆ. ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಹೋಗಬೇಕೆಂದಿರುವವರು ಹೋಗಲಾರರು. ಮತ್ತು ಆ ಕಡೆಯಿಂದ ನಮ್ಮ ಬಳಿಗೆ ಯಾರಿಂದಲೂ ಬರಲಿಕ್ಕಾಗದು’ ಅಂದನು. 27ಆಗ ಅವನು, ‘ಅಪ್ಪಾ, ಹಾಗಾದರೆ ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. 28ನನಗೆ ಐದು ಮಂದಿ ಅಣ್ಣತಮ್ಮಂದಿರಿದ್ದಾರೆ. ಅವರು ಸಹ ಈ ಯಾತನೆಯ ಸ್ಥಳಕ್ಕೆ ಬಾರದಂತೆ ಅವನು ತಾನು ಕಂಡದ್ದನ್ನು ಅವರಿಗೆ ಚೆನ್ನಾಗಿ ತಿಳಿಸಿ ಹೇಳಲಿ’ ಅಂದನು. 29ಅದಕ್ಕೆ ಅಬ್ರಹಾಮನು, ‘ಮೋಶೆಯ ಧರ್ಮಶಾಸ್ತ್ರವೂ ಪ್ರವಾದಿಗಳ ಗ್ರಂಥಗಳೂ ಅವರಲ್ಲಿ ಅವೆ, ಅವುಗಳನ್ನು ಕೇಳಲಿ’ ಅನ್ನಲು, 30ಅವನು ‘ತಂದೆಯೇ, ಅಬ್ರಹಾಮನೇ ಹಾಗಲ್ಲ. ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವರು’ ಅಂದನು. 31ಅಬ್ರಹಾಮನು ಅವನಿಗೆ, ‘ಅವರು ಮೋಶೆಯ ಮಾತನ್ನೂ ಪ್ರವಾದಿಗಳ ಮಾತನ್ನೂ ಕೇಳದಿದ್ದರೆ ಸತ್ತುಹೋಗಿದ್ದವನೊಬ್ಬನು ಜೀವಿತನಾಗಿ ಎದ್ದರೂ ಅವರು ಒಪ್ಪುವುದಿಲ್ಲ’ ಎಂದು ಹೇಳಿದನು.”
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು