ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಫೆಬ್ರವರಿ 2027 › 7 ಫೆಬ್ರವರಿ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 7 ಫೆಬ್ರವರಿ 2027
ಭಾನುವಾರ · ಸಾಮಾನ್ಯ ಕಾಲದ ಐದನೆಯ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ ಐದನೆಯ ಭಾನುವಾರ
ಭಾನುವಾರ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
1ಭೂಲೋಕದಲ್ಲಿ ಮನುಷ್ಯನಿಗೆ ದುಡಿಯುವ ಕಾಲ ಉಂಟಲ್ಲವೇ. ಅವನ ದಿನಗಳು ಜೀತದಾಳಿನ ದಿನಗಳಂತೆ ಕಳೆಯುತ್ತವೆ. 2ನಾನು ಸಂಜೆಯನ್ನು ಬಯಸುವ ದಾಸನಂತೆಯೂ, ಕೂಲಿಯನ್ನು ನಿರೀಕ್ಷಿಸುವ ಆಳಿನಂತೆಯೂ ಇದ್ದೇನೆ. 3ಬೇಸರಿಕೆಯ ಮಾಸಗಳೂ, ಆಯಾಸದ ರಾತ್ರಿಗಳೂ ನನ್ನ ಪಾಲಿಗೆ ನೇಮಕವಾಗಿವೆ. 4ಮಲಗುವ ವೇಳೆಯಲ್ಲಿ ಯಾವಾಗ ಏಳುವೆನೋ ಅಂದುಕೊಳ್ಳುವೆನು; ರಾತ್ರಿಯು ಬೆಳೆಯುತ್ತಾ ಹೋಗುತ್ತದೆ. ಉದಯದವರೆಗೂ ಹೊರಹೊರಳಿ ಸಾಕಾಗುತ್ತದೆ. 6ನನ್ನ ದಿನಗಳು ಮಗ್ಗದ ಲಾಳಿಗಿಂತ ವೇಗವಾಗಿ, ನಿರೀಕ್ಷೆಯಿಲ್ಲದೆ ಕಳೆದು ಹೋಗುತ್ತವೆ. 7ನನ್ನ ಜೀವವು ಗಾಳಿಯಂತೆ ಇದೆಯೆಂತಲೂ, ನನ್ನ ಕಣ್ಣು ಇನ್ನು ಸುಖವನ್ನು ಕಾಣುವುದಿಲ್ಲವೆಂತಲೂ ನೆನಪು ಮಾಡಿಕೋ.
ಪ್ರತಿವಚನ ಕೀರ್ತನೆ
1ಯೆಹೋವನಿಗೆ ಸ್ತೋತ್ರ! ನಮ್ಮ ದೇವರನ್ನು ಸ್ತುತಿಸುವುದು ಒಳ್ಳೆಯದೂ, ಸಂತೋಷಕರವೂ ಆಗಿದೆ, ಆತನನ್ನು ಕೀರ್ತಿಸುವುದು ಯುಕ್ತವಾಗಿದೆ. 2ಯೆಹೋವನು ಯೆರೂಸಲೇಮನ್ನು ಕಟ್ಟಿಸುತ್ತಿದ್ದಾನೆ, ಚದರಿಹೋಗಿದ್ದ ಇಸ್ರಾಯೇಲರನ್ನು ಕೂಡಿಸುತ್ತಿದ್ದಾನೆ, 3ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ, ಅವರ ಗಾಯಗಳನ್ನು ಕಟ್ಟುತ್ತಾನೆ. 4ಅವನು ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ, ಪ್ರತಿಯೊಂದಕ್ಕೂ ಹೆಸರಿಟ್ಟಿದ್ದಾನೆ. 5ನಮ್ಮ ಕರ್ತನು ದೊಡ್ಡವನೂ, ಪರಾಕ್ರಮಿಯೂ ಆಗಿದ್ದಾನೆ, ಆತನ ಜ್ಞಾನವು ಅಪರಿಮಿತವಾಗಿದೆ. 6ಯೆಹೋವನು ದೀನರಿಗೆ ಆಧಾರವಾಗಿದ್ದಾನೆ, ದುಷ್ಟರನ್ನು ನೆಲಕ್ಕೆ ಹಾಕಿ ತುಳಿದುಬಿಡುತ್ತಾನೆ.
ಎರಡನೆಯ ವಾಚನ
16ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವುದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇ ಬೇಕೆಂಬ ನಿರ್ಬಂಧ ನನ್ನ ಮೇಲಿದೆ, ನಾನು ಸುವಾರ್ತೆಯನ್ನು ಸಾರದಿದ್ದರೆ ನನ್ನ ಗತಿಯನ್ನು ಏನೆಂದು ಹೇಳಲಿ! 17ನಾನು ಸ್ವಂತ ಇಷ್ಟದಿಂದ ಈ ಕೆಲಸವನ್ನು ಮಾಡಿದರೆ ನನಗೆ ಪ್ರತಿಫಲ ದೊರೆಯುವುದು; ಇಲ್ಲದಿದ್ದರೂ ಈ ಕರ್ತವ್ಯ ನನ್ನ ವಶಕ್ಕೆ ಒಪ್ಪಿಸಿಕೊಡಲ್ಪಟ್ಟಿದೆ. 18ಹಾಗಾದರೆ ನನಗೆ ಸಿಗುವ ಬಹುಮಾನವೇನು? ನಾನು ಸುವಾರ್ತೆಯನ್ನು ಸಾರುವಾಗ ಅದರಿಂದ ದೊರೆಯುವ ಪ್ರತಿಫಲವನ್ನು ಪಡೆಯದೇ ಅದನ್ನು ಉಚಿತವಾಗಿ ಸಾರುವುದೇ ನನಗೆ ದೊರೆಯುವ ಪ್ರತಿಫಲವಾಗಿದೆ. 19ನಾನು ಎಲ್ಲಾ ವಿಷಯಗಳಲ್ಲಿ ಸ್ವತಂತ್ರನಾಗಿದ್ದರೂ ಹೆಚ್ಚು ಜನರನ್ನು ಸಂಪಾದಿಸಿಕೊಳ್ಳಬೇಕೆಂದು ನಾನು ಎಲ್ಲರಿಗೂ ದಾಸನಾದೆನು. 22ಬಲವಿಲ್ಲದವರನ್ನು ಸಂಪಾದಿಸುವುದಕ್ಕಾಗಿ ನಾನೂ ಬಲವಿಲ್ಲದವನಾದೆನು. ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಎಲ್ಲರಿಗೂ ಎಲ್ಲರಂತಾದೆನು. 23ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡಿ, ನಾನು ಇತರರ ಸಂಗಡ ಸುವಾರ್ತೆಯ ಆಶೀರ್ವಾದದಲ್ಲಿ ಪಾಲುಗಾರನಾಗಬೇಕೆಂದು ಇದನ್ನು ಮಾಡುತ್ತಿದ್ದೇನೆ.
ಸುವಾರ್ತೆ
29ಆ ಮೇಲೆ ಅವರು ಸಭಾಮಂದಿರದಿಂದ ಹೊರಟು ಯಾಕೋಬ ಯೋಹಾನರ ಸಂಗಡ ಸೀಮೋನ ಅಂದ್ರೆಯರ ಮನೆಗೆ ಹೋದರು. 30ಅಲ್ಲಿ ಸೀಮೋನನ ಅತ್ತೆ ಜ್ವರದಿಂದ ಮಲಗಿರಲಾಗಿ ಅವರು ಆಕೆಯ ಸಂಗತಿಯನ್ನು ಆತನಿಗೆ ತಿಳಿಸಿದರು. 31ಆತನು ಹತ್ತಿರಕ್ಕೆ ಬಂದು ಆಕೆಯ ಕೈಯನ್ನು ಹಿಡಿದು ಎಬ್ಬಿಸಲು ಜ್ವರವು ಆಕೆಯನ್ನು ಬಿಟ್ಟುಹೋಯಿತು; ಆಕೆಯು ಅವರಿಗೆ ಉಪಚಾರಮಾಡಿದಳು. 32ಸಂಜೆಯಾಗಿ ಹೊತ್ತು ಮುಳುಗಿದ ಮೇಲೆ ಜನರು ಅಸ್ವಸ್ಥರಾದವರನ್ನೂ, ದೆವ್ವಹಿಡಿದವರನ್ನೂ ಆತನ ಬಳಿಗೆ ಕರತಂದರು. 33ಊರಿನವರೆಲ್ಲಾ ಬಾಗಿಲಿನ ಮುಂದೆ ಒಟ್ಟುಗೂಡಿದ್ದರು. 34ಆಗ ಆತನು ನಾನಾ ರೀತಿಯ ರೋಗಗಳಿಂದ ಅಸ್ವಸ್ಥರಾಗಿದ್ದ ಬಹು ಜನರನ್ನು ಸ್ವಸ್ಥಮಾಡಿ ಅನೇಕ ದೆವ್ವಗಳನ್ನು ಬಿಡಿಸಿದನು. ಆದರೆ ಅವುಗಳಿಗೆ ತಾನು ಇಂಥವನೆಂದು ತಿಳಿದಿದ್ದರಿಂದ ಆತನು ಅವುಗಳನ್ನು ಮಾತನಾಡಗೊಡಿಸಲಿಲ್ಲ. 35ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ನಿರ್ಜನ ಸ್ಥಳಕ್ಕೆ ಹೋಗಿ ಪ್ರಾರ್ಥನೆಮಾಡುತ್ತಿದ್ದನು. 36ಸೀಮೋನನೂ ಅವನ ಸಂಗಡ ಇದ್ದವರೂ ಆತನನ್ನು ಹುಡುಕಿಕೊಂಡು ಆತನಿದ್ದಲ್ಲಿಗೆ ಬಂದು, 37ಆತನನ್ನು ಕಂಡಾಗ “ಎಲ್ಲರೂ ನಿನ್ನನ್ನು ಎದುರುನೋಡುತ್ತಿದ್ದಾರೆ” ಎಂದರು. 38ಆತನು ಅವರಿಗೆ, “ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ; ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು; ಇದಕ್ಕಾಗಿಯೇ ನಾನು ಇಲ್ಲಿಗೆ ಹೊರಟು ಬಂದಿದ್ದೇನೆ” ಎಂದು ಹೇಳಿದನು. 39ಬಳಿಕ ಆತನು ಗಲಿಲಾಯದಲ್ಲೆಲ್ಲಾ ಹೋಗಿ ಅವರ ಸಭಾಮಂದಿರಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ದೆವ್ವಗಳನ್ನು ಬಿಡಿಸುತ್ತಾ ಇದ್ದನು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು