Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಆರಂಭ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಆರಂಭ

ಸ್ನಾನಿಕನಾದ ಯೋಹಾನನ ಬೋಧನೆ

ಮತ್ತಾ 3:1–12 · ಮಾರ್ಕ 1:1–8 · ಲೂಕ 3:1–4, 7–18 · ಯೋಹಾ 1:19–28

ಮತ್ತಾಯನು

ಮತ್ತಾ 3:1–12

1ಆ ದಿನಗಳಲ್ಲಿ ಸ್ನಾನಿಕನಾದ ಯೋಹಾನನೆಂಬುವವನು ಯೂದಾಯದ ಅಡವಿಯಲ್ಲಿ ಬೋಧನೆ ಮಾಡುತ್ತಾ,

2ಹೇಳಿದ್ದೇನೆಂದರೆ, “ಪಶ್ಚಾತ್ತಾಪಪಡಿರಿ; ಏಕೆಂದರೆ ಪರಲೋಕ ರಾಜ್ಯವು ಸಮೀಪಿಸುತ್ತಿದೆ.”

3“‘ಕರ್ತನ ದಾರಿಯನ್ನು ಸಿದ್ಧಮಾಡಿರಿ; ಆತನ ಮಾರ್ಗವನ್ನು ಸರಾಗ ಮಾಡಿರಿ’ ಎಂದು ಅಡವಿಯಲ್ಲಿ ಕೂಗುವವನ ಶಬ್ದವಿದೆ” ಎಂಬುದಾಗಿ ಪ್ರವಾದಿಯಾದ ಯೆಶಾಯನಿಂದ ಸೂಚಿತನಾದವನು ಇವನೇ.

4ಯೋಹಾನನ ಉಡುಪು ಒಂಟೆಯ ಕೂದಲಿನಿಂದ ಮಾಡಿತ್ತು, ಅವನು ಸೊಂಟಕ್ಕೆ ಒಂದು ಚರ್ಮದ ನಡುಕಟ್ಟನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆ ಮತ್ತು ಕಾಡುಜೇನು ಅವನ ಆಹಾರವಾಗಿತ್ತು.

5ಆಗ ಯೆರೂಸಲೇಮಿನವರು, ಎಲ್ಲಾ ಯೂದಾಯದವರೂ ಮತ್ತು ಯೊರ್ದನ್ ಹೊಳೆಯ ಸುತ್ತಲಿರುವ ಎಲ್ಲಾ ಸೀಮೆಯ ಜನರು ಅವನ ಬಳಿಗೆ ಹೊರಟು ಬಂದು,

6ತಮ್ಮ ಪಾಪಗಳನ್ನು ಅರಿಕೆಮಾಡಿಕೊಂಡು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.

7ಆದರೆ ಯೋಹಾನನು ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ದೀಕ್ಷಾಸ್ನಾನಮಾಡಿಸಿಕೊಳ್ಳುವುದಕ್ಕೆ ಬರುವುದನ್ನು ಕಂಡು ಅವರಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರಾರು?

8ನೀವು ಮಾನಸಾಂತರ ಹೊಂದಿರುವಿರಿ ಎಂಬುದಕ್ಕೆ ಯೋಗ್ಯವಾದ ಫಲವನ್ನು ತೋರಿಸಿರಿ.

9ಅಬ್ರಹಾಮನು ನಮ್ಮ ತಂದೆ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗಾಗಿ ಈ ಕಲ್ಲುಗಳಿಂದಲೂ ಮಕ್ಕಳನ್ನು ಸೃಷ್ಟಿಮಾಡಬಲ್ಲನೆಂದು ನಿಮಗೆ ಹೇಳುತ್ತೇನೆ.

10ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿದೆ; ಆದ್ದರಿಂದ ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು.

11ನಾನಂತೂ ಮಾನಸಾಂತರಕ್ಕಾಗಿ ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನನ್ನ ನಂತರ ಬರುವವನು ನನಗಿಂತ ಶಕ್ತನು; ಆತನ ಪಾದರಕ್ಷೆಗಳನ್ನು ಹೊರಲಿಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾತ್ಮನಲ್ಲಿಯೂ ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನಮಾಡಿಸುವನು.

12ಹೊಟ್ಟನು ತೂರುವ ಮೊರವನ್ನು ಆತನು ಕೈಯಲ್ಲಿ ಹಿಡಿದಿದ್ದಾನೆ; ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನು ಮಾಡಿ ತನ್ನ ಗೋದಿಯನ್ನು ಕಣಜದಲ್ಲಿ ತುಂಬಿಕೊಂಡು ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟು ಬಿಡುವನು” ಎಂದು ಹೇಳಿದನು.

ಮಾರ್ಕನು

ಮಾರ್ಕ 1:1–8

1ದೇವಕುಮಾರನಾದ ಯೇಸು ಕ್ರಿಸ್ತನ ಕುರಿತಾದ ಸುವಾರ್ತೆಯ ಪ್ರಾರಂಭವು.

2ಪ್ರವಾದಿಯಾದ ಯೆಶಾಯನ ಗ್ರಂಥದಲ್ಲಿ ಬರೆದಿರುವ ಪ್ರಕಾರ, “ಇಗೋ, ನಾನು ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ; ಅವನು ನಿನ್ನ ದಾರಿಯನ್ನು ಸಿದ್ಧಮಾಡುವನು.”

3“‘ಕರ್ತನ ದಾರಿಯನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ’ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ” ಎಂಬುದೇ.

4ಯೋಹಾನನು ಬಂದು ಜನರಿಗೆ, ನೀವು ಪಾಪಗಳ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಉಪದೇಶಿಸುತ್ತಾ ಅಡವಿಯಲ್ಲಿ ದೀಕ್ಷಾಸ್ನಾನಮಾಡಿಸುತ್ತಾ ಇದ್ದನು.

5ಆಗ ಯೂದಾಯ ಸೀಮೆಯೆಲ್ಲವೂ ಯೆರೂಸಲೇಮಿನವರೆಲ್ಲರೂ ಅವನ ಬಳಿಗೆ ಹೊರಟುಹೋಗಿ ತಮ್ಮ ತಮ್ಮ ಪಾಪಗಳನ್ನು ಒಪ್ಪಿಕೊಂಡು ಯೊರ್ದನ್ ಹೊಳೆಯಲ್ಲಿ ಅವನಿಂದ ದೀಕ್ಷಾಸ್ನಾನಮಾಡಿಸಿಕೊಳ್ಳುತ್ತಿದ್ದರು.

6ಈ ಯೋಹಾನನು ಒಂಟೆಯ ರೋಮದ ಹೊದಿಕೆಯನ್ನು ಧರಿಸಿಕೊಂಡು ಸೊಂಟಕ್ಕೆ ಚರ್ಮದ ನಡುಕಟ್ಟನ್ನು ಕಟ್ಟಿಕೊಂಡಿದ್ದನು; ಅವನು ಮಿಡತೆಯನ್ನೂ ಕಾಡುಜೇನನ್ನೂ ಆಹಾರವನ್ನಾಗಿ ಸೇವಿಸುತ್ತಿದ್ದನು.

7ಅವನು “ನನಗಿಂತ ಶಕ್ತನು ನನ್ನ ಹಿಂದೆ ಬರುತ್ತಾನೆ; ಆತನ ಕೆರಗಳ ಪಟ್ಟಿಗಳನ್ನು ಬಗ್ಗಿ ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ.

8ನಾನು ನಿಮಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೇನೆ; ಆತನಾದರೋ ನಿಮಗೆ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುತ್ತಾನೆ” ಎಂದು ಸಾರಿ ಹೇಳಿದನು.

ಲೂಕನು

ಲೂಕ 3:1–4, 7–18

1ಚಕ್ರವರ್ತಿಯಾದ ತಿಬೇರಿಯನು ಆಳ್ವಿಕೆಗೆ ಬಂದ ಹದಿನೈದನೆಯ ವರ್ಷದಲ್ಲಿ, ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ, ಹೆರೋದನು ಗಲಿಲಾಯಕ್ಕೆ ಉಪರಾಜನೂ, ಅವನ ತಮ್ಮನಾದ ಫಿಲಿಪ್ಪನು ಇತುರಾಯ ತ್ರಕೋನೀತಿ ಸೀಮೆಗಳಿಗೆ ಉಪರಾಜನೂ, ಲುಸನ್ಯನು ಅಬಿಲೇನೆಗೆ ಉಪರಾಜನೂ ಆಗಿರುವಲ್ಲಿ

2ಅನ್ನನು ಮತ್ತು ಕಾಯಫನೂ ಮಹಾಯಾಜಕರಾಗಿದ್ದ ಕಾಲದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಮರುಭೂಮಿಯಲ್ಲಿ ದೇವರ ವಾಕ್ಯವು ಪ್ರಕಟವಾಯಿತು.

3ಆತನು ಯೊರ್ದನ್ ಹೊಳೆಯ ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಜನರಿಗೆ, ನೀವು ಪಾಪ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ ಹೇಳುತ್ತಿದ್ದನು.

4ಇದು ಯೆಶಾಯನೆಂಬ ಪ್ರವಾದಿಯ ಗ್ರಂಥದಲ್ಲಿ ಬರೆದಿರುವ ಮಾತಿಗೆ ಅನುಸಾರವಾಗಿ ನಡೆಯಿತು. ಆ ಮಾತು ಏನೆಂದರೆ, “‘ಕರ್ತನ ದಾರಿಯನ್ನು ಸಿದ್ಧಮಾಡಿರಿ, ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ. ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವುದು, ಡೊಂಕಾಗಿರುವಂಥದು ನೆಟ್ಟಗಾಗುವುದು, ಕೊರಕಲಾದ ದಾರಿಗಳು ಸಮವಾಗುವವು. ಎಲ್ಲಾ ಮನುಷ್ಯರೂ ದೇವರಿಂದಾಗುವ ರಕ್ಷಣೆಯನ್ನು ಕಾಣುವರು’ ಎಂಬುದಾಗಿ ಮರುಭೂಮಿಯಲ್ಲಿ ಕೂಗುವವನ ಶಬ್ದವದೆ” ಎಂಬುದೇ.

7ಹೀಗಿರಲಾಗಿ ಯೋಹಾನನು ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಹೊರಟುಬಂದ ಜನರ ಗುಂಪಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಕಾಣಬರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಎಚ್ಚರಿಕೆಕೊಟ್ಟವರಾರು?

8ಹಾಗಾದರೆ ಮಾನಸಾಂತರಕ್ಕೆ ಯೋಗ್ಯವಾದ ಫಲಗಳನ್ನು ತೋರಿಸಿರಿ. ‘ಅಬ್ರಹಾಮನು ನಮಗೆ ತಂದೆಯಲ್ಲವೇ’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಹುಟ್ಟಿಸಬಲ್ಲನೆಂದು ನಿಮಗೆ ಹೇಳುತ್ತೇನೆ.

9ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು” ಎಂದು ಹೇಳಿದನು.

10ಆಗ ಆ ಗುಂಪಿನವರು, “ಹಾಗಾದರೆ ನಾವೇನು ಮಾಡಬೇಕು?” ಎಂದು ಆತನನ್ನು ಕೇಳಿದ್ದಕ್ಕೆ,

11ಆತನು, “ಎರಡು ಅಂಗಿಗಳುಳ್ಳವನು ಇಲ್ಲದವನಿಗೆ ಒಂದು ಕೊಡಲಿ; ಆಹಾರವುಳ್ಳವನು ಇಲ್ಲದವನಿಗೆ ಕೊಡಲಿ” ಎಂದು ಅವರಿಗೆ ಹೇಳಿದನು.

12ಸುಂಕ ವಸೂಲಿಗಾರರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಬಂದು, “ಗುರುವೇ, ನಾವೇನು ಮಾಡಬೇಕು” ಎಂದು ಆತನನ್ನು ಕೇಳಲು,

13ಆತನು, “ನೇಮಿಸಲ್ಪಟ್ಟಿದ್ದಕ್ಕಿಂತ ಹೆಚ್ಚಾಗಿ ಏನೂ ತೆಗೆದುಕೊಳ್ಳಬೇಡಿರಿ” ಎಂದು ಅವರಿಗೆ ಹೇಳಿದನು.

14ಸಿಪಾಯಿಗಳು ಸಹ ಬಂದು, “ನಾವು ಏನು ಮಾಡಬೇಕು” ಎಂದು ಆತನನ್ನು ಕೇಳಿದಾಗ ಆತನು ಅವರಿಗೆ, “ಯಾರನ್ನಾದರೂ ಬೆದರಿಸಿ ದುಡ್ಡು ಕಸಿದುಕೊಳ್ಳಬೇಡಿರಿ; ಯಾರ ಮೇಲೆಯೂ ಸುಳ್ಳುದೂರು ಹೇಳಬೇಡಿರಿ. ನಿಮ್ಮ ಸಂಬಳದಲ್ಲಿ ತೃಪ್ತರಾಗಿರಿ” ಎಂದು ಹೇಳಿದನು.

15ಹೀಗಿರುವಲ್ಲಿ ಇಸ್ರಾಯೇಲ್ ಜನರು ಬರಬೇಕಾದ ಕ್ರಿಸ್ತನನ್ನು ಎದುರು ನೋಡುವವರಾಗಿದ್ದದರಿಂದ ಅವರೆಲ್ಲರೂ ಯೋಹಾನನ ವಿಷಯವಾಗಿ ಇವನೇ ಆ ಕ್ರಿಸ್ತನಾಗಿರಬಹುದೋ ಏನೋ ಎಂದು ತಮ್ಮ ಮನಸ್ಸಿನಲ್ಲಿ ವಿಚಾರಮಾಡಿಕೊಳ್ಳುತ್ತಿರಲು,

16ಯೋಹಾನನು ಅವರೆಲ್ಲರಿಗೆ, “ನಾನಂತೂ ನಿಮಗೆ ನೀರಿನ ದೀಕ್ಷಾಸ್ನಾನ ಮಾಡಿಸುವವನು; ಆದರೆ ನನಗಿಂತ ಶಕ್ತನು ಬರುತ್ತಾನೆ. ಆತನ ಕೆರಗಳ ಬಾರನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಆತನು ಪವಿತ್ರಾತ್ಮನಲ್ಲಿಯೂ ಮತ್ತು ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನ ಮಾಡಿಸುವನು.

17ಆತನು ಮೊರವನ್ನು ಕೈಯಲ್ಲಿ ಹಿಡಿದಿದ್ದಾನೆ. ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನುಮಾಡಿ ಗೋದಿಯನ್ನು ತನ್ನ ಕಣಜದಲ್ಲಿ ತುಂಬಿಕೊಳ್ಳುವನು. ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಉತ್ತರಕೊಟ್ಟನು.

18ಇನ್ನು ಬೇರೆ ಅನೇಕ ಮಾತುಗಳಿಂದ ಆತನು ಇಸ್ರಾಯೇಲ್ ಜನರಿಗೆ ಬುದ್ಧಿಹೇಳಿ ಶುಭವಾರ್ತೆಯನ್ನು ಸಾರುತ್ತಿದ್ದನು.

ಯೋಹಾನನು

ಯೋಹಾ 1:19–28

19ಯೆಹೂದ್ಯರು ಯೆರೂಸಲೇಮಿನಿಂದ ಯಾಜಕರನ್ನೂ, ಲೇವಿಯರನ್ನೂ ಯೋಹಾನನ ಬಳಿಗೆ ಕಳುಹಿಸಿ, “ನೀನು ಯಾರು?” ಎಂದು ಕೇಳಿದ್ದಕ್ಕೆ,

20ಅವನು ಮರೆಮಾಡದೆ ಎಲ್ಲರ ಮುಂದೆ, “ನಾನು ಕ್ರಿಸ್ತನಲ್ಲ,” ಎಂದು ಹೇಳಿದನು.

21ಅದಕ್ಕೆ ಅವರು, “ಹಾಗಾದರೆ ನೀನು ಯಾರು? ಎಲೀಯನೋ?” ಎಂದು ಕೇಳಿದರು. ಅದಕ್ಕೆ ಅವನು, “ನಾನು ಎಲೀಯನಲ್ಲ” ಅಂದನು. “ನೀನು ಬರಬೇಕಾದ ಆ ಪ್ರವಾದಿಯೋ?” ಎಂದು ಕೇಳಿದ್ದಕ್ಕೆ “ಅಲ್ಲ,” ಅಂದನು.

22ಆಗ ಅವರು, “ಹಾಗಾದರೆ ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಕೊಡಬೇಕಲ್ಲಾ. ನಿನ್ನ ವಿಷಯವಾಗಿ ನೀನು ಏನು ಹೇಳುತ್ತೀ?” ಎಂದು ಕೇಳಿದರು.

23ಅದಕ್ಕೆ ಯೋಹಾನನು, “ಪ್ರವಾದಿಯಾದ ಯೆಶಾಯನು ಹೇಳಿದಂತೆ, ‘ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಧ್ವನಿಯೇ ನಾನು’” ಎಂದು ಉತ್ತರ ಕೊಟ್ಟನು.

24ಅಲ್ಲಿ ಬಂದವರು ಫರಿಸಾಯರ ಕಡೆಯವರಾಗಿದ್ದರು.

25ಅವರು ಅವನಿಗೆ, “ನೀನು ಕ್ರಿಸ್ತನಾಗಲಿ, ಎಲೀಯನಾಗಲಿ ಆ ಪ್ರವಾದಿಯಾಗಲಿ ಆಗಿರದಿದ್ದರೆ, ನೀನು ದೀಕ್ಷಾಸ್ನಾನ ಕೊಡುವುದೇಕೆ?” ಎಂದು ಪ್ರಶ್ನಿಸಿದರು.

26ಅದಕ್ಕೆ ಯೋಹಾನನು, “ನಾನು ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನೀವು ಅರಿಯದೆ ಇರುವ ಒಬ್ಬಾತನು ನಿಮ್ಮ ಮಧ್ಯದಲ್ಲಿದ್ದಾನೆ.

27ಆತನೇ ನನ್ನ ನಂತರ ಬರತಕ್ಕವನು. ಆತನ ಚಪ್ಪಲಿಗಳ ಪಟ್ಟಿ ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ” ಅಂದನು.

28ಇದೆಲ್ಲಾ ಯೋಹಾನನು ದೀಕ್ಷಾಸ್ನಾನ ಮಾಡಿಸುತ್ತಿದ್ದ ಯೊರ್ದನ್ ನದಿಯ ಆಚೆಯಲ್ಲಿರುವ ಬೇಥಾನ್ಯ ಎಂಬ ಊರಿನಲ್ಲಿ ನಡೆಯಿತು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು