ಬೈಬಲ್ › ಕೀರ್ತನೆಗಳು › 12
IRV · ಅಧ್ಯಾಯ 12 / 150
ಕೀರ್ತನೆಗಳು 12
1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಮಂದರಸ್ಥಾಯಿಯೊಡನೆ ಹಾಡತಕ್ಕದ್ದು; ದಾವೀದನ ಕೀರ್ತನೆ. ಯೆಹೋವನೇ, ರಕ್ಷಿಸು; ಭಕ್ತರು ಮುಗಿದು ಹೋಗಿದ್ದಾರೆ. ಜನರೊಳಗೆ ನಂಬಿಗಸ್ತರನ್ನು ಕಾಣುವುದೇ ಇಲ್ಲ.
2ಪ್ರತಿಯೊಬ್ಬರು ನೆರೆಯವರೊಡನೆ ಸುಳ್ಳನ್ನಾಡುತ್ತಾರೆ, ಅವರು ವಂಚನೆಯ ತುಟಿಗಳಿಂದ ಹೊರಗೊಂದು ಒಳಗೊಂದು ಮಾತನಾಡುತ್ತಾರೆ.
3ಯೆಹೋವನು ವಂಚನೆಯ ತುಟಿಗಳನ್ನೂ, ಬಡಾಯಿ ನಾಲಿಗೆಯನ್ನೂ ಕಡಿದುಬಿಡಲಿ.
4ಅವರು, “ನಮ್ಮ ಮಾತುಗಳಿಗೆ ತಡೆಯಿಲ್ಲವಲ್ಲಾ; ನಮ್ಮ ತುಟಿಗಳು ನಮ್ಮವೇ; ನಮಗೆ ಒಡೆಯನು ಯಾರು?” ಎಂದು ಹೇಳಿಕೊಳ್ಳುತ್ತಾರಲ್ಲಾ.
5ಯೆಹೋವನು, “ಕುಗ್ಗಿದವರ ಬಾಧೆಯನ್ನು ನೋಡಿದ್ದೇನೆ; ಗತಿಯಿಲ್ಲದವರ ನರಳುವಿಕೆಯು ನನಗೆ ಕೇಳಿಸಿತು. ಈಗ ಎದ್ದು ಬಂದು ಅವರ ಇಷ್ಟಾರ್ಥವನ್ನು ನೆರವೇರಿಸುವೆನು. ಅವರು ಬಯಸಿದಂತೆ ಅವರನ್ನು ಸುರಕ್ಷಿತವಾಗಿ ಇರಿಸುವೆನು” ಎಂದು ಹೇಳುತ್ತಾನೆ.
6ಯೆಹೋವನ ಮಾತುಗಳು ಯಥಾರ್ಥವಾದವುಗಳೇ; ಅವು ಏಳು ಸಾರಿ ಪುಟಕ್ಕೆ ಹಾಕಿದ ಚೊಕ್ಕ ಬೆಳ್ಳಿಯೋಪಾದಿಯಲ್ಲಿವೆ.
7ಜನರಲ್ಲಿ ಎಲ್ಲೆಲ್ಲೂ ನೀಚರೇ ತುಂಬಿಕೊಂಡಿದ್ದರೂ, ಜನರೊಳಗೆ ದುಷ್ಟತ್ವ ಆಳ್ವಿಕೆಗೆ ಬಂದಿದ್ದರೂ,
8ಯೆಹೋವನೇ, ನೀನು ನಮ್ಮನ್ನು ನೋಡಿದ್ದಿ, ನೀನು ನಿನ್ನ ಭಕ್ತರನ್ನು ದುಷ್ಟರಿಂದ ಸದಾಕಾಲವೂ ತಪ್ಪಿಸಿ ಕಾಪಾಡುವಿ.
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ (IRV, 2019) · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. (ಪಠ್ಯ ಬದಲಾಗಿಲ್ಲ; ಅಡಿಟಿಪ್ಪಣಿಗಳು ಮತ್ತು ಶೀರ್ಷಿಕೆಗಳನ್ನು ಬಿಡಲಾಗಿದೆ) · eBible.org