ಬೈಬಲ್ › ಕೀರ್ತನೆಗಳು › 113
IRV · ಅಧ್ಯಾಯ 113 / 150
ಕೀರ್ತನೆಗಳು 113
1ಯೆಹೋವನಿಗೆ ಸ್ತೋತ್ರ! ಯೆಹೋವನ ಸೇವಕರೇ, ಸ್ತೋತ್ರಮಾಡಿರಿ; ಯೆಹೋವನ ನಾಮವನ್ನು ಸ್ತುತಿಸಿರಿ.
2ಈಗಿನಿಂದ ಯುಗಯುಗಕ್ಕೂ, ಯೆಹೋವನ ನಾಮವು ಕೀರ್ತಿಸಲ್ಪಡಲಿ.
3ಯೆಹೋವನ ನಾಮವು ಪೂರ್ವದಿಂದ, ಪಶ್ಚಿಮದವರೆಗೂ ಸ್ತುತಿಹೊಂದಲಿ.
4ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನು; ಆತನ ಪ್ರಭಾವವು ಮೇಲಣ ಲೋಕಕ್ಕಿಂತಲೂ ಉನ್ನತವಾಗಿದೆ.
5ನಮ್ಮ ಯೆಹೋವ ದೇವರಿಗೆ ಸಮಾನರು ಯಾರು? ಆತನು ಉನ್ನತಲೋಕದಲ್ಲಿ ಆಸನಾರೂಢನಾಗಿ,
6ಆಕಾಶವನ್ನೂ, ಭೂಮಿಯನ್ನೂ ನೋಡಲಿಕ್ಕೆ ಬಾಗುತ್ತಾನೆ.
7ಆತನು ದೀನರನ್ನು ಧೂಳಿನಿಂದ ಎಬ್ಬಿಸಿ, ಬಡವರನ್ನು ತಿಪ್ಪೆಯಿಂದ ಎತ್ತುತ್ತಾನೆ.
8ಪ್ರಭುಗಳ ಜೊತೆಯಲ್ಲಿ, ಅಂದರೆ ಅವರ ಜನಾಧಿಪತಿಗಳೊಡನೆ ಅವರನ್ನು ಕುಳ್ಳಿರಿಸುತ್ತಾನೆ.
9ಬಂಜೆಯು ಮಕ್ಕಳೊಂದಿಗೆ, ಸಂತೋಷದಿಂದ ಮನೆಯಲ್ಲಿ ವಾಸಿಸುವ ಹಾಗೆ ಮಾಡುತ್ತಾನೆ. ಯೆಹೋವನಿಗೆ ಸ್ತೋತ್ರ!
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ (IRV, 2019) · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. (ಪಠ್ಯ ಬದಲಾಗಿಲ್ಲ; ಅಡಿಟಿಪ್ಪಣಿಗಳು ಮತ್ತು ಶೀರ್ಷಿಕೆಗಳನ್ನು ಬಿಡಲಾಗಿದೆ) · eBible.org