Bible Explorer ಆ್ಯಪ್ ಪಡೆಯಿರಿ

ಬೈಬಲ್ › ಕೀರ್ತನೆಗಳು › 102

IRV · ಅಧ್ಯಾಯ 102 / 150

ಕೀರ್ತನೆಗಳು 102

1ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಕೂಗು ನಿನಗೆ ಮುಟ್ಟಲಿ.

2ನನ್ನ ಕಷ್ಟದಲ್ಲಿ ವಿಮುಖನಾಗಬೇಡ; ನನ್ನ ಮೊರೆಗೆ ಕಿವಿಗೊಡು; ನಾನು ಕೂಗಿಕೊಳ್ಳುವ ದಿನದಲ್ಲಿ ಬೇಗನೆ ಸದುತ್ತರವನ್ನು ದಯಪಾಲಿಸು.

3ನನ್ನ ಜೀವಮಾನವು ಹೊಗೆಯಂತೆ ಮಾಯವಾಗುತ್ತದೆ; ನನ್ನ ಎಲುಬುಗಳು ಕೊಳ್ಳಿಯಂತೆ ಸುಟ್ಟುಹೋಗುತ್ತವೆ.

4ನನ್ನ ಹೃದಯವು ಬಿಸಿಲಿನಿಂದ ಬಾಡಿಹೋದ ಹುಲ್ಲಿನಂತಿದೆ; ಊಟವನ್ನು ಮರೆತೆನು.

5ನಿಟ್ಟುಸಿರಿನಿಂದ ನನ್ನಲ್ಲಿ ಎಲುಬು, ತೊಗಲು ಮಾತ್ರ ಉಳಿದಿರುತ್ತವೆ.

6ಅಡವಿಯ ಬಕಪಕ್ಷಿಯಂತಿದ್ದೇನೆ; ಹಾಳೂರಿನ ಗೂಬೆಯಂತಿದ್ದೇನೆ.

7ನಿದ್ರೆಯಿಲ್ಲದವನಾಗಿ ಮನೆಮಾಳಿಗೆಯ ಮೇಲಿರುವ, ಒಂಟಿಯಾದ ಪಕ್ಷಿಯಂತಿದ್ದೇನೆ.

8ವೈರಿಗಳು ಹಗಲೆಲ್ಲಾ ನನ್ನನ್ನು ನಿಂದಿಸುತ್ತಾರೆ; ನನ್ನ ಮೇಲೆ ಕೋಪಾವೇಶವುಳ್ಳವರು ಯಾರನ್ನಾದರೂ ಶಪಿಸುವಾಗ, ನನ್ನನ್ನು ದೃಷ್ಟಾಂತಮಾಡಿ ಶಪಿಸುತ್ತಾರೆ.

9ಬೂದಿಯೇ ನನಗೆ ಆಹಾರವಾಯಿತು; ನನ್ನ ಪಾನದಲ್ಲಿ ಕಣ್ಣೀರು ಮಿಶ್ರವಾಯಿತು.

10ಇದಕ್ಕೆಲ್ಲಾ ನಿನ್ನ ಕೋಪ, ರೌದ್ರಗಳೇ ಕಾರಣ, ನೀನು ನನ್ನನ್ನು ಎತ್ತಿ ಒಗೆದುಬಿಟ್ಟಿದ್ದಿಯಲ್ಲಾ!

11ನನ್ನ ಜೀವಮಾನವು ಸಂಜೆಯ ನೆರಳಿನಂತಿದೆ; ನಾನು ಬಾಡಿಹೋದ ಹುಲ್ಲಿನಂತಿದ್ದೇನೆ.

12ಯೆಹೋವನೇ, ನೀನಾದರೋ ಸದಾ ಸಿಂಹಾಸನಾರೂಢನಾಗಿರುವಿ; ನಿನ್ನ ನಾಮವು ತಲತಲಾಂತರಕ್ಕೂ ಸ್ಮರಿಸಲ್ಪಡುವುದು.

13ನೀನು ಎದ್ದು ಚೀಯೋನನ್ನು ಕರುಣಿಸುವಿ. ಅದಕ್ಕೆ ಕೃಪೆತೋರಿಸುವ ಸಮಯ ಇದೇ; ನಿಯಮಿತ ಕಾಲವು ಬಂದಿದೆ.

14ಅದು ಕಲ್ಲುಕುಪ್ಪೆಯಾಗಿ ಹೋಗಿದ್ದರೂ, ಅದು ನಿನ್ನ ಸೇವಕರಿಗೆ ಅತಿಪ್ರಿಯವಾಗಿದೆ; ಅದರ ಧೂಳಿಗೆ ಅವರು ಮರಗುತ್ತಾರೆ.

15ಯೆಹೋವನು ಗತಿಹೀನರ ಮೊರೆಯನ್ನು ತಿರಸ್ಕರಿಸದೆ ನೆರವೇರಿಸಿದನೆಂದೂ,

16ಆತನು ಮಹಿಮೆಯಲ್ಲಿ ಬಂದು ಚೀಯೋನನ್ನು ತಿರುಗಿ ಕಟ್ಟಿಸಿದನೆಂದೂ,

17ಜನಾಂಗಗಳು ಯೆಹೋವ ಎಂಬ ನಿನ್ನ ನಾಮಕ್ಕೂ, ಭೂರಾಜರು ನಿನ್ನ ಪ್ರತಾಪಕ್ಕೂ ಭಯಪಡುವರು.

18ಇದು ಮುಂದಣ ಸಂತಾನದವರಿಗೋಸ್ಕರ ಶಾಸನವಾಗಿರಲಿ, ಮುಂದೆ ಹುಟ್ಟುವ ಪ್ರಜೆಯು ಯೆಹೋವನನ್ನು ಕೊಂಡಾಡುತ್ತಾ,

19“ಯೆಹೋವನು ತನ್ನ ಮಹೋನ್ನತವಾದ ಪವಿತ್ರಸ್ಥಾನದಿಂದ ಕೆಳಕ್ಕೆ ನೋಡಿದ್ದಾನೆ; ಆತನು ಪರಲೋಕದಿಂದ ಭೂಮಿಯನ್ನು ದೃಷ್ಟಿಸಿದ್ದಾನೆ.

20ಸೆರೆಯವರ ಗೋಳಾಟವನ್ನು ಪರಿಗಣಿಸಿ, ಮರಣಪಾತ್ರರನ್ನು ಬಿಡಿಸಿ,

21ಅವರು ಚೀಯೋನಿನಲ್ಲಿ ಯೆಹೋವನ ನಾಮವನ್ನು ವರ್ಣಿಸುವಂತೆಯೂ, ಯೆರೂಸಲೇಮಿನಲ್ಲಿ ತನ್ನ ಕೀರ್ತನೆಯನ್ನು ಹಾಡುವಂತೆಯೂ ಮಾಡಿದ್ದಾನೆ.

22ಜನಾಂಗಗಳೂ, ರಾಜ್ಯಗಳೂ ಕೂಡಿಬಂದು ಇವರೊಡನೆ ಯೆಹೋವನನ್ನು ಸೇವಿಸುತ್ತವೆ” ಎಂದು ಹೇಳುವುದು.

23ಆತನು ಯೌವನಪ್ರಾಯದಲ್ಲಿಯೇ ನನ್ನ ಬಲವನ್ನು ಕುಂದಿಸಿದ್ದಾನೆ;

24ನನ್ನ ಆಯುಷ್ಯವನ್ನು ಕಡಿಮೆ ಮಾಡಿಬಿಟ್ಟಿದ್ದಾನೆ. ಆದುದರಿಂದ, “ನನ್ನ ದೇವರೇ, ಅರ್ಧಾಯುಷ್ಯದಲ್ಲಿಯೇ ನನ್ನನ್ನು ಒಯ್ಯಬೇಡ; ನಿನ್ನ ವರ್ಷಗಳು ತಲತಲಾಂತರಕ್ಕೂ ಇರುತ್ತವೆ.

25ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದಿ; ಗಗನಮಂಡಲವು ನಿನ್ನ ಕೈಕೆಲಸವಾಗಿದೆ.

26ಅವು ನಾಶವಾಗುವವು; ಆದರೆ ನೀನು ಶಾಶ್ವತವಾಗಿರುತ್ತಿ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು. ಉಡುಪಿನಂತೆ ಅವುಗಳನ್ನು ಬದಲಿಸುತ್ತಿ; ಅವು ಮಾರ್ಪಡುವವು.

27ನೀನಾದರೋ ಏಕರೀತಿಯಾಗಿರುತ್ತಿ; ನಿನ್ನ ವರ್ಷಗಳು ಮುಗಿದುಹೋಗುವುದಿಲ್ಲ.

28ನಿನ್ನ ಸೇವಕರ ಮಕ್ಕಳು ಬಾಳುವರು. ಅವರ ಸಂತತಿಯವರು ನಿನ್ನ ಸನ್ನಿಧಿಯಲ್ಲಿ ಸ್ಥಿರವಾಗಿರುವರು” ಎಂದು ಮೊರೆಯಿಡುತ್ತೇನೆ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ (IRV, 2019) · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. (ಪಠ್ಯ ಬದಲಾಗಿಲ್ಲ; ಅಡಿಟಿಪ್ಪಣಿಗಳು ಮತ್ತು ಶೀರ್ಷಿಕೆಗಳನ್ನು ಬಿಡಲಾಗಿದೆ) · eBible.org