ಬೈಬಲ್ › ಕೀರ್ತನೆಗಳು › 101
IRV · ಅಧ್ಯಾಯ 101 / 150
ಕೀರ್ತನೆಗಳು 101
1ದಾವೀದನ ಕೀರ್ತನೆ. ಪ್ರೀತಿ, ನೀತಿಗಳನ್ನು ಕುರಿತು ಹಾಡುವೆನು; ಯೆಹೋವನೇ, ನಿನ್ನನ್ನು ಕೊಂಡಾಡುವೆನು.
2ಸನ್ಮಾರ್ಗವನ್ನು ಲಕ್ಷಿಸಿ ನಡೆಯುವೆನು; ನನಗೆ ಯಾವಾಗ ದರ್ಶನಕೊಡುವಿ? ಮನೆಯೊಳಗೂ ಯಥಾರ್ಥ ಹೃದಯದಿಂದಲೇ ನಡೆದುಕೊಳ್ಳುವೆನು.
3ಯಾವ ನೀಚವಾದ ಕಾರ್ಯವನ್ನೂ ದೃಷ್ಟಿಸುವುದಿಲ್ಲ; ದುರಾಚಾರವನ್ನು ಹಗೆಮಾಡುತ್ತೇನೆ, ಅದರ ಗೊಡವೆಯೇ ನನಗೆ ಬೇಡ.
4ಮೂರ್ಖತನವು ನನ್ನನ್ನು ಬಿಟ್ಟು ಹೋಗಲಿ; ಕೆಟ್ಟತನವನ್ನು ಅರಿಯದಿರುವೆನು.
5ಗುಪ್ತದಲ್ಲಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸಂಹರಿಸುವೆನು; ಸೊಕ್ಕಿನ ಕಣ್ಣೂ, ಉಬ್ಬಿದ ಮನಸ್ಸೂ ಉಳ್ಳವನನ್ನು ಸಹಿಸುವುದಿಲ್ಲ.
6ದೇಶದಲ್ಲಿರುವ ನಂಬಿಗಸ್ತರನ್ನು ಆರಿಸಿಕೊಳ್ಳುವೆನು; ಅವರೇ ನನ್ನ ಸನ್ನಿಧಿಯಲ್ಲಿ ವಾಸಿಸಬೇಕು, ಸನ್ಮಾರ್ಗಿಯೇ ನನ್ನ ಸೇವೆಯಲ್ಲಿರಬೇಕು.
7ಮೋಸಗಾರನು ನನ್ನ ಮನೆಯಲ್ಲಿ ಇರಲೇಬಾರದು; ಸುಳ್ಳುಗಾರನು ನನ್ನ ಮುಂದೆ ನಿಲ್ಲಕೂಡದು.
8ಯೆಹೋವನ ಪಟ್ಟಣದಲ್ಲಿ ಕೆಡುಕರೇ ಉಳಿಯದಂತೆ, ಪ್ರತಿ ಮುಂಜಾನೆಯಲ್ಲಿ ದೇಶದ ದುಷ್ಟರನ್ನು ಸಂಹರಿಸುತ್ತಾ ಬರುವೆನು.
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ (IRV, 2019) · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. (ಪಠ್ಯ ಬದಲಾಗಿಲ್ಲ; ಅಡಿಟಿಪ್ಪಣಿಗಳು ಮತ್ತು ಶೀರ್ಷಿಕೆಗಳನ್ನು ಬಿಡಲಾಗಿದೆ) · eBible.org