Bible Explorer ಆ್ಯಪ್ ಪಡೆಯಿರಿ

ಬೈಬಲ್ › ಕೀರ್ತನೆಗಳು › 11

IRV · ಅಧ್ಯಾಯ 11 / 150

ಕೀರ್ತನೆಗಳು 11

1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನದು. ನಾನು ಯೆಹೋವನನ್ನು ಆಶ್ರಯಿಸಿಕೊಂಡಿದ್ದೇನೆ. ನೀವು, “ಪಕ್ಷಿಗಳಂತೆ ನಿಮ್ಮ ಬೆಟ್ಟಗಳಿಗೆ ಓಡಿಹೋಗಿರಿ” ಎಂದು ಹೇಳುವುದೇಕೆ?

2ದುಷ್ಟರು ಕತ್ತಲಲ್ಲಿ ಯಥಾರ್ಥ ಹೃದಯವುಳ್ಳವರನ್ನು ಕೊಲ್ಲಬೇಕೆಂದು ಬಿಲ್ಲುಬೊಗ್ಗಿಸಿ, ಹೆದೆಗೆ ಬಾಣವನ್ನು ಹೂಡಿದ್ದಾರೆ ನೋಡಿರಿ.

3ಆಧಾರಗಳೇ ಕೆಡವಲ್ಪಟ್ಟ ಮೇಲೆ ನೀತಿವಂತನ ಗತಿ ಏನಾದೀತು?

4ಯೆಹೋವನು ತನ್ನ ಪರಿಶುದ್ಧಮಂದಿರದಲ್ಲಿದ್ದಾನೆ; ಆತನು ತನ್ನ ಸಿಂಹಾಸನವನ್ನು ಪರಲೋಕದಲ್ಲಿ ಸ್ಥಾಪಿಸಿದ್ದಾನೆ. ಆತನ ಕಣ್ಣುಗಳು ಮಾನವರನ್ನು ನೋಡುತ್ತವೆ; ಆತನು ಅವರನ್ನು ಬಹು ಸೂಕ್ಷ್ಮವಾಗಿ ಪರಿಶೋಧಿಸುತ್ತಾನೆ.

5ಯೆಹೋವನು ನೀತಿವಂತರನ್ನು ಮತ್ತು ಅನೀತಿವಂತರನ್ನು ಪರೀಕ್ಷಿಸುತ್ತಾನೆ; ಬಲಾತ್ಕಾರವನ್ನು ಪ್ರೀತಿಸುವವರನ್ನು ಆತನು ದ್ವೇಷಿಸುತ್ತಾನೆ.

6ಆತನು ದುಷ್ಟರ ಮೇಲೆ ಬೆಂಕಿ ಗಂಧಕಗಳನ್ನು ಸುರಿಸಲಿ. ಉರಿಗಾಳಿಗಳನ್ನು ಅವರಿಗೆ ಪಾನವಾಗಮಾಡಲಿ.

7ಏಕೆಂದರೆ ನೀತಿಸ್ವರೂಪನಾದ ಯೆಹೋವನು ನೀತಿಯನ್ನು ಮೆಚ್ಚುವವನಾಗಿದ್ದಾನೆ. ಸಜ್ಜನರು ಆತನ ಸಾನ್ನಿಧ್ಯವನ್ನು ಸೇರುವರು.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ (IRV, 2019) · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. (ಪಠ್ಯ ಬದಲಾಗಿಲ್ಲ; ಅಡಿಟಿಪ್ಪಣಿಗಳು ಮತ್ತು ಶೀರ್ಷಿಕೆಗಳನ್ನು ಬಿಡಲಾಗಿದೆ) · eBible.org