Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜೂನ್ 2027 › 20 ಜೂನ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 20 ಜೂನ್ 2027

ಭಾನುವಾರ · ಸಾಮಾನ್ಯ ಕಾಲದ 12ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 12ನೇ ಭಾನುವಾರ

ಭಾನುವಾರ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

ಯೋಬ 38:1, 8–11

1ಆಗ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು, 8ಸಮುದ್ರವು ಭೂಗರ್ಭವನ್ನು ಭೇದಿಸಿಕೊಂಡು ಬರಲು, ಅದರ ದ್ವಾರಗಳನ್ನು ಮುಚ್ಚಿದವರು ಯಾರು? 9ಆ ಕಾಲದಲ್ಲಿ ನಾನು ಮೋಡಗಳನ್ನು ಅದಕ್ಕೆ ವಸ್ತ್ರವನ್ನಾಗಿಯೂ, ಕಾರ್ಗತ್ತಲನ್ನು ಸುತ್ತುಬಟ್ಟೆಯನ್ನಾಗಿಯೂ ಮಾಡಿದೆನಲ್ಲವೆ? 10ಇದಲ್ಲದೆ ಸಮುದ್ರಕ್ಕೆ ನನ್ನ ಇಷ್ಟದ ಮೇರೆಯನ್ನು ಕಟ್ಟಿ, ಅದಕ್ಕೆ ಅಗುಳಿ, ಕದಗಳನ್ನು ಹಾಕಿದೆನು 11‘ಇಲ್ಲಿಯ ತನಕ ಬರಬಹುದು; ಮೀರಿ ಬರಬೇಡ, ನಿನ್ನ ತೆರೆಗಳ ಹೆಮ್ಮೆಗೆ ಇಲ್ಲೇ ತಡೆಯಾಗುವುದು’ ಎಂದು ಅಪ್ಪಣೆಕೊಟ್ಟೆನು.

ಪ್ರತಿವಚನ ಕೀರ್ತನೆ

ಕೀರ್ತ 107:23–26, 28–31

23ಹಡಗು ಹತ್ತಿ ಸಮುದ್ರ ಪ್ರಯಾಣ ಮಾಡುತ್ತಾ, ಮಹಾಜಲರಾಶಿಯಲ್ಲಿ ತಮ್ಮ ಉದ್ಯೋಗವನ್ನು ನಡೆಸುವವರು, 24ಯೆಹೋವನ ಮಹತ್ಕಾರ್ಯಗಳನ್ನೂ, ಅಗಾಧಜಲದಲ್ಲಿ ಆತನ ಅದ್ಭುತಗಳನ್ನೂ ನೋಡುತ್ತಾರೆ. 25ಆತನು ಅಪ್ಪಣೆಕೊಡಲು ಬಿರುಗಾಳಿಯುಂಟಾಗಿ, ಅದರಲ್ಲಿ ತೆರೆಗಳನ್ನು ಎಬ್ಬಿಸಿತು. 26ಜನರು ಆಕಾಶಕ್ಕೆ ಏರುತ್ತಲೂ, ಅಗಾಧಕ್ಕೆ ಇಳಿಯುತ್ತಲೂ ಕಂಗೆಟ್ಟು ಕರಗಿಹೋದರು. 28ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, ಆತನು ಅವರನ್ನು ಕಷ್ಟದಿಂದ ಹೊರತಂದನು. 29ಆತನು ಬಿರುಗಾಳಿಯನ್ನು ಶಾಂತಪಡಿಸಿದನು; ತೆರೆಗಳು ನಿಂತವು. 30ಸಮುದ್ರವು ಶಾಂತವಾದುದರಿಂದ, ಹಡಗಿನವರು ಸಂತೋಷಪಟ್ಟರು, ಅವರು ಮುಟ್ಟಬೇಕಾದ ರೇವಿಗೆ ಆತನು ಅವರನ್ನು ಸೇರಿಸಿದನು. 31ಅವರು ಯೆಹೋವನ ಕೃಪೆಗೋಸ್ಕರವೂ ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ ಆತನನ್ನು ಕೊಂಡಾಡಲಿ.

ಎರಡನೆಯ ವಾಚನ

2 ಕೊರಿ 5:14–17

14ಯಾಕೆಂದರೆ ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ; ಎಲ್ಲರಿಗೋಸ್ಕರ ಒಬ್ಬನು ಸತ್ತಮೇಲೆ ಎಲ್ಲರೂ ಸತ್ತಂತಾಯಿತೆಂದು ನಿಶ್ಚಯಿಸಿಕೊಂಡಿದ್ದೇವೆ. 15ಕ್ರಿಸ್ತನು ಎಲ್ಲರಿಗೋಸ್ಕರ ಸತ್ತದ್ದರಿಂದಾಗಿ ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೇ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕು. 16ಹೀಗಿರಲಾಗಿ ಇಂದಿನಿಂದ ನಾವು ಯಾರನ್ನೂ ಮಾನವ ದೃಷ್ಟಿಯಿಂದ ಪರಿಗಣಿಸುವುದಿಲ್ಲ. ಒಮ್ಮೆ ಕ್ರಿಸ್ತನನ್ನು ನಾವು ಹೀಗೇ ಪರಿಗಣಿಸಿದ್ದುಂಟು. ಆದರೆ ಇನ್ನು ಮುಂದೆ ಆ ರೀತಿಯಾಗಿ ಪರಿಗಣಿಸುವುದಿಲ್ಲ. 17ಆದ್ದರಿಂದ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾಗಿದ್ದಾನೆ. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು.

ಸುವಾರ್ತೆ

ಮಾರ್ಕ 4:35–41

35ಆ ದಿನ ಸಾಯಂಕಾಲವಾದಾಗ ಆತನು ಅವರಿಗೆ, “ಆಚೇದಡಕ್ಕೆ ಹೋಗೋಣ” ಎಂದು ಹೇಳಿದನು. 36ಅವರು ಆ ಜನರ ಗುಂಪನ್ನು ಬಿಟ್ಟು ಆತನನ್ನು ಅದೇ ದೋಣಿಯಲ್ಲಿ ಹಾಗೆಯೇ ಕರೆದುಕೊಂಡು ಹೋದರು. ಬೇರೆ ದೋಣಿಗಳೂ ಸಹ ಆತನ ಸಂಗಡ ಇದ್ದವು. 37ತರುವಾಯ ದೊಡ್ಡ ಬಿರುಗಾಳಿ ಎದ್ದು ಅಲೆಗಳು ಆ ದೋಣಿಗೆ ಬಡಿದು ನೀರು ಒಳಗೆ ನುಗ್ಗಿದ್ದರಿಂದ ಆ ದೋಣಿ ಆಗಲೇ ತುಂಬುವುದಕ್ಕೆ ಬಂದಿತ್ತು. 38ಆದರೆ ಆತನು ದೋಣಿಯ ಹಿಂಭಾಗದಲ್ಲಿ ತಲೆದಿಂಬನ್ನು ಒರಗಿ ನಿದ್ದೆಮಾಡುತ್ತಿದ್ದನು. ಅವರು ಆತನನ್ನು ಎಬ್ಬಿಸಿ, “ಗುರುವೇ, ನಾವು ಮುಳುಗಿಹೋಗುವುದರಲ್ಲಿ ನಿನಗೆ ಚಿಂತೆಯಿಲ್ಲವೇ” ಎಂದು ಕೇಳಿದರು. 39ಆತನು ಎದ್ದು ಗಾಳಿಯನ್ನು ಗದರಿಸಿ, ಸಮುದ್ರಕ್ಕೆ “ಶಾಂತವಾಗಿರು, ಮೊರೆಯಬೇಡ” ಎಂದು ಅಪ್ಪಣೆಕೊಡುತ್ತಲೇ ಗಾಳಿ ನಿಂತುಹೋಗಿ ಸಮುದ್ರವು ಶಾಂತವಾಯಿತು. 40ತರುವಾಯ ಆತನು ಅವರನ್ನು, “ಯಾಕೆ ಭಯಪಡುತ್ತೀರಿ? ಇನ್ನೂ ನಿಮಗೆ ನಂಬಿಕೆಯಿಲ್ಲವೇ?” ಎಂದು ಕೇಳಲು 41ಅವರು ಬಹು ಭಯಪಟ್ಟು, “ಈತನು ಯಾರಿರಬಹುದು? ಗಾಳಿಯೂ, ಸಮುದ್ರವೂ ಸಹ ಈತನು ಹೇಳಿದ ಹಾಗೆ ಕೇಳುತ್ತವಲ್ಲಾ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು