ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜೂನ್ 2027 › 6 ಜೂನ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 6 ಜೂನ್ 2027
ಭಾನುವಾರ · ಸಾಮಾನ್ಯ ಕಾಲದ 10ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 10ನೇ ಭಾನುವಾರ
ಭಾನುವಾರ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
9ಆಗ ಯೆಹೋವ ದೇವರು ಮನುಷ್ಯನನ್ನು ಕರೆದು, “ನೀನು ಎಲ್ಲಿದ್ದೀ?” ಎಂದು ಕೇಳಿದನು. 10ಅದಕ್ಕೆ ಅವನು, “ನೀನು ತೋಟದಲ್ಲಿ ಸಂಚರಿಸುವ ಸಪ್ಪಳವನ್ನು ನಾನು ಕೇಳಿ, ಬೆತ್ತಲೆಯಾಗಿರುವುದರಿಂದ ಹೆದರಿ ಅಡಗಿಕೊಂಡೆನು” ಎಂದನು. 11ಅದಕ್ಕಾತನು, “ನೀನು ಬೆತ್ತಲೆಯಾಗಿದ್ದೀಯೆಂದು ನಿನಗೆ ತಿಳಿಸಿದವರಾರು? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಹಣ್ಣನ್ನು ತಿಂದಿದ್ದಿಯಾ?” ಎಂದು ಕೇಳಿದನು. 12ಅದಕ್ಕೆ ಆ ಮನುಷ್ಯನು, “ನನ್ನ ಜೊತೆಯಲ್ಲಿರುವುದಕ್ಕೆ ನೀನು ಕೊಟ್ಟ ಈ ಸ್ತ್ರೀಯು, ಆ ಮರದ ಹಣ್ಣನ್ನು ನನಗೆ ಕೊಟ್ಟಳು, ನಾನು ತಿಂದೆನು” ಎಂದು ಹೇಳಿದನು. 13ಯೆಹೋವನಾದ ದೇವರು ಆ ಸ್ತ್ರೀಗೆ, “ಇದೇನು ನೀನು ಮಾಡಿದ್ದು?” ಎಂದು ಕೇಳಲು, ಆ ಸ್ತ್ರೀಯು, “ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು” ಎಂದು ಉತ್ತರ ಕೊಟ್ಟಳು. 14ಆಗ ಯೆಹೋವನಾದ ದೇವರು ಸರ್ಪಕ್ಕೆ; “ನೀನು ಈ ಕಾರ್ಯವನ್ನು ಮಾಡಿದ್ದರಿಂದ ಎಲ್ಲಾ ಪಶುಗಳಲ್ಲಿಯೂ ಅಡವಿಯ ಎಲ್ಲಾ ಕಾಡುಮೃಗಗಳಲ್ಲಿಯೂ ಶಾಪಗ್ರಸ್ತನಾಗಿರುವೆ. ನೀನು ಹೊಟ್ಟೆಯಿಂದ ಹರಿದು ನಿನ್ನ ಜೀವಮಾನದ ದಿನಗಳಲ್ಲೆಲ್ಲಾ ಮಣ್ಣನ್ನೇ ತಿನ್ನುವಿ. 15ನಿನಗೂ, ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವುದು. ನೀನು ಅವನ ಹಿಮ್ಮಡಿಯನ್ನು ಕಚ್ಚುವಿ” ಎಂದು ಹೇಳಿದನು.
ಪ್ರತಿವಚನ ಕೀರ್ತನೆ
1ಯಾತ್ರಾಗೀತೆ. ಯೆಹೋವನೇ, ಪಾತಾಳದಲ್ಲಿದ್ದು ನಿನ್ನನ್ನು ಕೂಗಿಕೊಳ್ಳುತ್ತೇನೆ. 2ಕರ್ತನೇ, ನನ್ನ ಮೊರೆಯನ್ನು ಕೇಳು; ನನ್ನ ವಿಜ್ಞಾಪನೆಯ ಶಬ್ದಕ್ಕೆ ಕಿವಿದೆರೆ. 3ಕರ್ತನೇ, ಯೆಹೋವನೇ, ನೀನು ಪಾಪಗಳನ್ನು ಲೆಕ್ಕಿಸುವುದಾದರೆ ನಿನ್ನ ಮುಂದೆ ಯಾರು ನಿಲ್ಲಲು ಸಾಧ್ಯ? 4ನೀನು ಪಾಪವನ್ನು ಕ್ಷಮಿಸುವವನಾದುದರಿಂದ, ಮನುಷ್ಯರ ಭಯಭಕ್ತಿಗೆ ನೀನೇ ಪಾತ್ರನು. 5ನಾನು ಯೆಹೋವನನ್ನು ಎದುರುನೋಡುತ್ತೇನೆ; ನನ್ನ ಪ್ರಾಣವು ಆತನನ್ನು ಕಾದುಕೊಂಡಿದೆ; ಆತನ ನುಡಿಯನ್ನು ನಿರೀಕ್ಷಿಸಿಕೊಂಡಿದ್ದೇನೆ. 6ಕಾವಲುಗಾರರು ಬೆಳಗಾಗುವುದನ್ನು ಮುನ್ನೋಡುತ್ತಾರಲ್ಲಾ; ಕಾವಲುಗಾರರು ಬೆಳಗಾಗುವುದನ್ನು ಮುನ್ನೋಡುವುದಕ್ಕಿಂತ ವಿಶೇಷವಾಗಿ, ನನ್ನ ಅಂತರಾತ್ಮವು ಕರ್ತನನ್ನು ಮುನ್ನೋಡುತ್ತದೆ. 7ಇಸ್ರಾಯೇಲೇ, ಯೆಹೋವನನ್ನು ಎದುರುನೋಡುತ್ತಿರು; ಯೆಹೋವನು ಕೃಪಾಸಂಪನ್ನನು; ಪೂರ್ಣವಿಮೋಚನೆಯು ಆತನಿಂದಲೇ ದೊರಕುವುದು. 8ಆತನೇ ಇಸ್ರಾಯೇಲನ್ನು ಅದರ ಸಕಲ ಪಾಪಗಳಿಂದ ವಿಮೋಚಿಸುವನು.
ಎರಡನೆಯ ವಾಚನ
13“ನಾನು ನಂಬಿದೆನು. ಆದ್ದರಿಂದ ಮಾತನಾಡಿದೆನು.” ಎಂಬ ಶಾಸ್ತ್ರೋಕ್ತಿಯಲ್ಲಿ ಕಾಣುವಹಾಗೆ ನಂಬಿಕೆಯ ಅದೇ ಆತ್ಮನು ನಮ್ಮಲ್ಲಿರುವುದರಿಂದ ನಾವು ನಂಬಿದವರಾಗಿ ಮಾತನಾಡುತ್ತೇವೆ. 14ಕರ್ತನಾದ ಯೇಸುವನ್ನು ಎಬ್ಬಿಸಿದಾತನು ನಮ್ಮನ್ನು ಸಹ ಯೇಸುವಿನೊಂದಿಗೆ ಎಬ್ಬಿಸಿ ನಿಮ್ಮ ಜೊತೆಯಲ್ಲಿ ತನ್ನ ಮುಂದೆ ನಿಲ್ಲಿಸುವನೆಂದು ತಿಳಿದವರಾಗಿದ್ದೇವೆ. 15ಆ ಬಾಧೆಗಳೆಲ್ಲಾ ನಿಮ್ಮ ಹಿತಕ್ಕಾಗಿಯೇ ನಮಗೆ ಸಂಭವಿಸುತ್ತವೆ. ಅವುಗಳಲ್ಲಿ ಅಧಿಕವಾಗಿ ದೊರಕುವ ದೈವಕೃಪೆಯು ಬಹು ಜನರೊಳಗೆ ಕೃತಜ್ಞತೆಯನ್ನು ಹುಟ್ಟಿಸುವುದರಿಂದ ದೇವರ ಮಹಿಮೆಗೆ ಅಧಿಕವಾದ ಸ್ತುತಿ ಸ್ತೋತ್ರಗಳು ಉಂಟಾಗುವುದು. 16ಆದ್ದರಿಂದ ನಾವು ಧೈರ್ಯಗೆಡುವುದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಅಂತರಂಗವು ದಿನೇ ದಿನೇ ಹೊಸದಾಗುತ್ತಾ ಬರುತ್ತದೆ. 17ಹೇಗೆಂದರೆ ಕ್ಷಣಮಾತ್ರವಿರುವ ನಮ್ಮ ಈ ಸ್ವಲ್ಪ ಸಂಕಟವು ಅತ್ಯಂತಾಧಿಕವಾಗಿ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಅತಿಶ್ರೇಷ್ಟ ತೇಜಸ್ಸನ್ನು ದೊರಕಿಸುತ್ತದೆ. 18ನಾವು ಕಾಣುವಂಥದ್ದನ್ನು ಲಕ್ಷಿಸದೇ ಕಾಣದಿರುವಂಥದ್ದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದ್ದು ಸ್ವಲ್ಪ ಕಾಲ ಮಾತ್ರ ಇರುವುದು ಕಾಣದಿರುವಂಥದ್ದು ಸದಾಕಾಲವೂ ಇರುವುದು. 5:1ಭೂಮಿಯ ಮೇಲಿರುವ ನಮ್ಮ ಈ ದೇಹವೆಂಬ ಗುಡಾರವು ಅಳಿದುಹೊದರೂ, ದೇವರಿಂದ ನಿರ್ಮಿತವಾಗಿರುವ ಒಂದು ಕಟ್ಟಡವು ಪರಲೋಕದಲ್ಲಿ ನಮಗುಂಟೆಂದು ಬಲ್ಲೆವು; ಅದು ಮನುಷ್ಯನ ಕೈಗಳಿಂದ ಕಟ್ಟಿರುವ ಮನೆಯಲ್ಲ ಬದಲಾಗಿ ಶಾಶ್ವತವಾದ ಮನೆಯಾಗಿದೆ.
ಸುವಾರ್ತೆ
20ಆತನು ಮನೆಯೊಳಗೆ ಬಂದಾಗ ಅಲ್ಲಿ ಬಹಳ ಜನರು ಸೇರಿಬಂದದ್ದರಿಂದ ಊಟ ಮಾಡಲು ಕೂಡ ಆಗಲಿಲ್ಲ. 21ಇದನ್ನು ಕೇಳಿ ಆತನ ಬಂಧುಗಳು “ಅವನಿಗೆ ಹುಚ್ಚುಹಿಡಿದಿದೆ” ಎಂದು ಹೇಳಿ ಆತನನ್ನು ಹಿಡಿಯುವುದಕ್ಕೆ ಹೊರಟರು. 22ಇದಲ್ಲದೆ ಯೆರೂಸಲೇಮಿನಿಂದ ಬಂದಿದ್ದ ಶಾಸ್ತ್ರಿಗಳು, “ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆಂತಲೂ ಇವನು ದೆವ್ವಗಳ ಒಡೆಯನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಂತಲೂ” ಹೇಳುತ್ತಿದ್ದರು. 23ಆತನು ಅವರನ್ನು ಹತ್ತಿರಕ್ಕೆ ಕರೆದು ಅವರಿಗೆ ಸಾಮ್ಯರೂಪವಾಗಿ ಹೇಳಿದ್ದೇನಂದರೆ, “ಸೈತಾನನು ಸೈತಾನನನ್ನು ಬಿಡಿಸುವುದುಂಟೇ? 24ಯಾವುದೇ ಒಂದು ರಾಜ್ಯವು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ರಾಜ್ಯವು ಉಳಿಯದು; 25ಹಾಗೆಯೇ ಒಂದು ಮನೆಯು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ಮನೆಯು ಉಳಿಯದು. 26ಅದರಂತೆ ಸೈತಾನನು ತನಗೆ ವಿರೋಧವಾಗಿ ಎದ್ದು ತನ್ನಲ್ಲಿ ವಿಭಾಗಿಸಲ್ಪಟ್ಟರೆ ಅವನು ಉಳಿಯದೆ ನಾಶವಾಗಿ ಹೋಗುವನು. 27ಅದಲ್ಲದೆ ಒಬ್ಬನು ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ ಆ ಬಲಿಷ್ಠನ ಮನೆಯನ್ನು ನುಗ್ಗಿ ಅವನ ಆಸ್ತಿಯನ್ನು ಕದಿಯಲು ಸಾಧ್ಯವಿಲ್ಲ; ಕಟ್ಟಿಹಾಕಿದ ಮೇಲೆ ಅವನ ಮನೆಯನ್ನು ಕೊಳ್ಳೆಹೊಡೆಯಬಹುದು. 28ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೂ ದೂಷಣೆಗಳಿಗೂ ಕ್ಷಮಾಪಣೆ ಸಿಕ್ಕುವುದು. 29ಆದರೆ ಪವಿತ್ರಾತ್ಮನನ್ನು ದೂಷಿಸಿದವನು ಎಂದಿಗೂ ಕ್ಷಮಾಪಣೆ ಹೊಂದಲಾರನು; ಅವನು ಶಾಶ್ವತವಾದ ಪಾಪದೊಳಗೆ ಸೇರಿದವನಾದನು” ಎಂದು ಹೇಳಿದನು. 30ಅವರು “ಈತನಲ್ಲಿ ಅಶುದ್ಧಾತ್ಮವಿದೆ” ಎಂದು ಹೇಳುತ್ತಿದ್ದರಿಂದ ಯೇಸು ಇದನ್ನು ಹೇಳಿದನು. 31ಜನರು ಯೇಸುವಿನ ಸುತ್ತಲು ಕುಳಿತುಕೊಂಡಿದ್ದಾಗ ಆತನ ತಾಯಿಯೂ, ತಮ್ಮಂದಿರೂ ಬಂದು ಹೊರಗೆ ನಿಂತುಕೊಂಡು ಆತನನ್ನು ಕರೆಕಳುಹಿಸಿದರು. 32ಆ ಜನರು ಆತನಿಗೆ, “ನಿನ್ನ ತಾಯಿಯೂ, ನಿನ್ನ ತಮ್ಮಂದಿರೂ ನಿನ್ನನ್ನು ಹುಡುಕಿಕೊಂಡು ಬಂದು ಹೊರಗೆ ನಿಂತಿದ್ದಾರೆ ನೋಡು” ಎಂದು ಹೇಳಿದರು. 33ಅದಕ್ಕೆ ಆತನು ಅವರಿಗೆ, “ನನಗೆ ತಾಯಿಯೂ, ತಮ್ಮಂದಿರೂ ಯಾರು?” ಎಂದು ಹೇಳಿ ತನ್ನ ಸುತ್ತಲು ಕುಳಿತಿದ್ದವರನ್ನು ನೋಡಿ, 34“ಇಗೋ, ನನ್ನ ತಾಯಿ, ನನ್ನ ತಮ್ಮಂದಿರು. 35ದೇವರ ಚಿತ್ತದಂತೆ ನಡೆಯುವವನೇ ನನಗೆ ತಮ್ಮನೂ, ತಂಗಿಯೂ, ತಾಯಿಯೂ ಆಗಿದ್ದಾರೆ” ಅಂದನು.
ಇಂದಿನ ಸಂತರು
- ಸಂತ ನಾರ್ಬರ್ಟ್, ಧರ್ಮಾಧ್ಯಕ್ಷ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು