Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜೂನ್ 2027 › 6 ಜೂನ್

ಆರ್ಥೊಡಾಕ್ಸ್ ಪಂಚಾಂಗ · ಮೇ 24 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 6 ಜೂನ್ 2027

ಭಾನುವಾರ · ಸ್ವರ 5

ಹಬ್ಬಗಳು ಮತ್ತು ಸಂತರು

ಪಾಸ್ಕದ ಆರನೆಯ ಭಾನುವಾರ

ಹುಟ್ಟು ಕುರುಡನ ಭಾನುವಾರ

ಉಪವಾಸ

ಉಪವಾಸವಿಲ್ಲ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಉದಯಕಾಲದ ಎಂಟನೆಯ ಸುವಾರ್ತೆ

ಯೋಹಾ 20:11–18

11ಆದರೆ ಮರಿಯಳು ಹೊರಗೆ ಸಮಾಧಿಯ ಬಳಿಯಲ್ಲಿ ಅಳುತ್ತಾ ನಿಂತಿದ್ದಳು. ಹೀಗೆ ಆಕೆ ಅಳುತ್ತಿರುವಾಗ ಸಮಾಧಿಯೊಳಗೆ ಬಗ್ಗಿ ನೋಡಲು, 12ಯೇಸುವಿನ ದೇಹವು ಇಟ್ಟಿದ್ದ ಸ್ಥಳದಲ್ಲಿ ಬಿಳಿವಸ್ತ್ರಗಳನ್ನು ಧರಿಸಿದ್ದ ಇಬ್ಬರು ದೇವದೂತರನ್ನು ಕಂಡಳು, ಅವರಲ್ಲಿ ಒಬ್ಬನು ಯೇಸುವಿನ ತಲೆಯ ಕಡೆಯಲ್ಲಿ ಮತ್ತೊಬ್ಬನು ಆತನು ಪಾದಗಳಿದ್ದ ಕಡೆಯಲ್ಲಿ ಕುಳಿತಿದ್ದರು. 13ಅವರು ಆಕೆಗೆ, “ಅಮ್ಮಾ, ನೀನು ಯಾಕೆ ಅಳುತ್ತಿರುವೆ?” ಎಂದು ಕೇಳಲು, ಆಕೆಯು, “ನನ್ನ ಕರ್ತನನ್ನು ಅವರು ತೆಗೆದುಕೊಂಡು ಹೋಗಿದ್ದಾರೆ. ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದಳು. 14ಆಕೆಯು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಯೇಸು ನಿಂತಿರುವುದನ್ನು ಕಂಡಳು, ಆದರೆ ಆತನು ಯೇಸುವೇ ಎಂದು ಆಕೆಗೆ ತಿಳಿಯಲಿಲ್ಲ. 15ಯೇಸು ಆಕೆಗೆ, “ಅಮ್ಮಾ, ನೀನು ಯಾಕೆ ಅಳುತ್ತೀ? ಯಾರನ್ನು ಹುಡುಕುತ್ತೀ?” ಎಂದು ಕೇಳಲು, ಆಕೆ ಆತನನ್ನು ತೋಟಗಾರನೆಂದು ನೆನಸಿ ಆತನಿಗೆ, “ಅಯ್ಯಾ, ನೀನು ಆತನನ್ನು ತೆಗೆದುಕೊಂಡು ಹೋಗಿದ್ದರೆ ಎಲ್ಲಿ ಇಟ್ಟಿದ್ದೀ ಎಂದು ನನಗೆ ಹೇಳು, ನಾನು ಆತನನ್ನು ತೆಗೆದುಕೊಂಡು ಹೋಗುತ್ತೇನೆ” ಎಂದು ಹೇಳಿದಳು. 16ಯೇಸು ಆಕೆಗೆ, “ಮರಿಯಳೇ,” ಎಂದು ಹೇಳಲು, ಆಕೆಯು ಅವನ ಕಡೆಗೆ ತಿರುಗಿ ಇಬ್ರಿಯ ಭಾಷೆಯಲ್ಲಿ ಆತನಿಗೆ, “ರಬ್ಬೂನಿ” ಎಂದಳು. ಹಾಗೆಂದರೆ ಗುರುವೇ ಎಂದರ್ಥ. 17ಯೇಸು ಆಕೆಗೆ, “ನನ್ನನ್ನು ಮುಟ್ಟಬೇಡ, ಏಕೆಂದರೆ ನಾನು ಇನ್ನೂ ತಂದೆಯ ಬಳಿಗೆ ಏರಿಹೋದವನಲ್ಲ. ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವರಿಗೆ, ನನ್ನ ತಂದೆಯೂ, ನಿಮ್ಮ ತಂದೆಯೂ, ನನ್ನ ದೇವರೂ, ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಏರಿಹೋಗುತ್ತೇನೆ ಎಂದು ತಿಳಿಸು” ಎಂದನು. 18ಮಗ್ದಲದ ಮರಿಯಳು ಹೋಗಿ “ನಾನು ಕರ್ತನನ್ನು ನೋಡಿದ್ದೇನೆ,” ಆತನು ಇಂಥಿಂಥದನ್ನು ನನಗೆ ಹೇಳಿದನು ಎಂದು ಶಿಷ್ಯರಿಗೆ ತಿಳಿಸಿದಳು.

ಪತ್ರಿಕೆ

ಅ. ಕೃ 16:16–34

16ಬಳಿಕ ಪ್ರಾರ್ಥನೆ ನಡೆಯುವ ಆ ಸ್ಥಳಕ್ಕೆ ನಾವು ಹೋಗುತ್ತಿರುವಾಗ ಗಾರುಡಗಾತಿಯಾದ ಒಬ್ಬ ದಾಸಿಯು ನಮ್ಮೆದುರಿಗೆ ಬಂದಳು. ಅವಳು ಕಣಿ ಹೇಳುವುದರಿಂದ ಅವಳ ಯಜಮಾನರಿಗೆ ಬಹು ಆದಾಯವಾಗುತ್ತಿತ್ತು. 17ಪೌಲನೂ, ನಾವೂ ಹೋಗುತ್ತಿರುವಾಗ ಅವಳು ನಮ್ಮ ಹಿಂದೆ ಬಂದು; “ಈ ಮನುಷ್ಯರು ಪರಾತ್ಪರನಾದ ದೇವರ ಸೇವಕರು; ನಿಮಗೆ ರಕ್ಷಣೆಯ ಮಾರ್ಗವನ್ನು ಸಾರುತ್ತಾರೆ” ಎಂದು ಕೂಗಿ ಹೇಳುತ್ತಿದ್ದಳು. 18ಅನೇಕ ದಿನ ಅವಳು ಹೀಗೆ ಮಾಡುತ್ತಿದ್ದುದರಿಂದ ಪೌಲನು ಬಹಳವಾಗಿ ಬೇಸರಗೊಂಡು ಹಿಂತಿರುಗಿ ಅವಳೊಳಗಿದ್ದ ದುರಾತ್ಮಕ್ಕೆ; “ಅವಳನ್ನು ಬಿಟ್ಟುಹೋಗು ಎಂದು ಯೇಸು ಕ್ರಿಸ್ತನ ಹೆಸರಿನಲ್ಲಿ ನಿನಗೆ ಆಜ್ಞಾಪಿಸುತ್ತೇನೆ” ಎಂದು ಹೇಳಿದನು. ಅದೇ ಗಳಿಗೆಯಲ್ಲಿಯೇ ಅದು ಬಿಟ್ಟು ಹೋಯಿತು. 19ಅವಳ ಯಜಮಾನರು ತಮ್ಮ ಆದಾಯದ ನಿರೀಕ್ಷೆ ತಪ್ಪಿತಲ್ಲಾ ಎಂದು ತಿಳಿದು ಪೌಲನನ್ನೂ ಮತ್ತು ಸೀಲನನ್ನೂ ಹಿಡಿದು ಮಾರುಕಟ್ಟೆಯ ಸ್ಥಳಕ್ಕೆ ಅಧಿಕಾರಿಗಳ ಬಳಿಗೆ ಎಳೆದುಕೊಂಡು ಹೋದರು. 20ಅವರನ್ನು ಅಧಿಕಾರಿಗಳ ಮುಂದೆ ತಂದು; “ಈ ಮನುಷ್ಯರು ನಮ್ಮ ಪಟ್ಟಣವನ್ನು ಬಹಳವಾಗಿ ಕದಡುತ್ತಿದ್ದಾರೆ; 21ಇವರು ಯೆಹೂದ್ಯರಾಗಿದ್ದು ರೋಮನ್ನರಾದ ನಾವು ಅವಲಂಬಿಸಿ ಆಚರಿಸಬಾರದ ಆಚಾರಗಳನ್ನು ಪ್ರಚಾರ ಮಾಡುತ್ತಿದ್ದಾರೆ” ಅಂದರು. 22ಆಗ ಜನರು ಗುಂಪಾಗಿ ಕೂಡಿ, ಅವರಿಗೆ ವಿರೋಧವಾಗಿ ಒಟ್ಟಾಗಿ ಎದ್ದರು. ಮತ್ತು ಅಧಿಕಾರಿಗಳು; ಇವರ ವಸ್ತ್ರಗಳನ್ನು ಹರಿದು, ತೆಗೆದು, ಛಡಿಗಳಿಂದ ಹೊಡೆಸಬೇಕೆಂದು ಅಪ್ಪಣೆಕೊಟ್ಟರು. 23ಅವರಿಗೆ ಬಹಳ ಹೊಡೆತಗಳನ್ನು ಹೊಡಿಸಿದ ಮೇಲೆ ಸೆರೆಮನೆಯೊಳಗೆ ಹಾಕಿಸಿ, ಇವರನ್ನು ಭದ್ರವಾಗಿ ಕಾಯಬೇಕೆಂದು ಸೆರೆಯ ಯಜಮಾನನಿಗೆ ಆಜ್ಞಾಪಿಸಿದರು. 24ಅವನು ಇಂಥಾ ಅಪ್ಪಣೆಯನ್ನು ಹೊಂದಿ ಅವರನ್ನು ಸೆರೆಮನೆಯ ಒಳಕೋಣೆಯಲ್ಲಿ ಹಾಕಿ ಅವರ ಕಾಲುಗಳಿಗೆ ಕೋಳವನ್ನು ಹಾಕಿ ಬಿಗಿಸಿದನು. 25ಮಧ್ಯರಾತ್ರಿಯಲ್ಲಿ ಪೌಲನೂ ಮತ್ತು ಸೀಲನೂ ಪ್ರಾರ್ಥನೆಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಿದ್ದರು; ಸೆರೆಯಲ್ಲಿದ್ದವರು ಲಕ್ಷ್ಯವಿಟ್ಟು ಕೇಳುತ್ತಿದ್ದರು. 26ಆಕಸ್ಮಾತ್ತಾಗಿ ಮಹಾಭೂಕಂಪವುಂಟಾಯಿತು; ಸೆರೆಮನೆಯ ಅಸ್ತಿವಾರಗಳು ಕದಲಿದವು. ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು, ಎಲ್ಲರ ಬೇಡಿಗಳು ಕಳಚಿಬಿದ್ದವು. 27ಸೆರೆಯ ಯಜಮಾನನು ನಿದ್ದೆಯಿಂದ ಎಚ್ಚೆತ್ತು ಸೆರೆಮನೆಯ ಕದಗಳು ತೆರೆದಿರುವುದನ್ನು ಕಂಡು ಸೆರೆಯಲ್ಲಿದ್ದವರು ಓಡಿಹೋದರೆಂದು ಭಾವಿಸಿ ಕತ್ತಿಯನ್ನು ಹಿರಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದನು. 28ಆದರೆ ಪೌಲನು ಮಹಾ ಶಬ್ದದಿಂದ ಕೂಗಿ ಅವನಿಗೆ; “ನೀನೇನೂ ಕೇಡುಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲೇ ಇದ್ದೇವೆ” ಎಂದು ಹೇಳಿದನು. 29ಆಗ ಅವನು; ದೀಪ ತರಬೇಕೆಂದು ಕೂಗಿ ಒಳಕ್ಕೆ ಹಾರಿ ಭಯದಿಂದ ನಡುಗುತ್ತಾ ಪೌಲ ಮತ್ತು ಸೀಲರ ಮುಂದೆ ಆಡ್ಡಬಿದ್ದನು. 30ಮತ್ತು ಅವರನ್ನು ಹೊರಗೆ ಕರೆದುಕೊಂಡು ಬಂದು; “ಸ್ವಾಮಿಗಳೇ, ನಾನು ರಕ್ಷಣೆಹೊಂದುವುದಕ್ಕೆ ಏನು ಮಾಡಬೇಕೆಂದು?” ಕೇಳಲು, 31ಅವರು; “ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು” ಎಂದು ಹೇಳಿ, 32ಅವನಿಗೂ, ಅವನ ಮನೆಯಲ್ಲಿದ್ದವರೆಲ್ಲರಿಗೂ ದೇವರ ವಾಕ್ಯವನ್ನು ತಿಳಿಸಿದರು. 33ಆ ಮೇಲೆ ಅವನು ರಾತ್ರಿಯ ಅದೇ ಗಳಿಗೆಯಲ್ಲಿ ಅವರನ್ನು ಕರೆದುಕೊಂಡು ಹೋಗಿ ಅವರ ಗಾಯಗಳನ್ನು ತೊಳೆದು ಕೂಡಲೆ ತಾನೂ ತನ್ನವರೆಲ್ಲರ ಸಹಿತವಾಗಿ ದೀಕ್ಷಾಸ್ನಾನ ಮಾಡಿಸಿಕೊಂಡನು. 34ತರುವಾಯ ಅವರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಊಟಮಾಡಿಸಿದನು. ಅವನು ತನ್ನ ಮನೆಯವರೆಲ್ಲರ ಸಂಗಡ ದೇವರನ್ನು ನಂಬಿ ಸಂತೋಷಪಟ್ಟರು.

ಸುವಾರ್ತೆ

ಯೋಹಾ 9:1–38

1ಯೇಸು ಹಾದು ಹೋಗುತ್ತಿದ್ದಾಗ, ಹುಟ್ಟು ಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡನು. 2ಆತನ ಶಿಷ್ಯರು, “ಗುರುವೇ, ಇವನು ಕುರುಡನಾಗಿ ಹುಟ್ಟಿರುವುದಕ್ಕೆ ಯಾರು ಪಾಪಮಾಡಿದರು? ಇವನೋ ಅಥವಾ ಇವನ ತಂದೆತಾಯಿಗಳೋ?” ಎಂದು ಆತನನ್ನು ಕೇಳಿದರು. 3ಯೇಸು, “ಇವನಾಗಲಿ ಇವನ ತಂದೆತಾಯಿಗಳಾಗಲಿ ಪಾಪ ಮಾಡಲಿಲ್ಲ. ಆದರೆ ದೇವರ ಕ್ರಿಯೆಗಳು ಇವನಲ್ಲಿ ತೋರಿಬರುವುದಕ್ಕಾಗಿ ಹೀಗಾಯಿತು. 4ನನ್ನನ್ನು ಕಳುಹಿಸಿದಾತನ ಕ್ರಿಯೆಗಳನ್ನು ನಾವು ಹಗಲಿರುವಾಗಲೇ ಮಾಡಬೇಕು. ರಾತ್ರಿ ಬರುತ್ತದೆ, ಅದು ಬಂದಾಗ ಯಾರೂ ಕೆಲಸ ಮಾಡಲಾರರು. 5ನಾನು ಲೋಕದಲ್ಲಿರುವಾಗ ಲೋಕಕ್ಕೆ ಬೆಳಕಾಗಿದ್ದೇನೆ” ಎಂದನು. 6ಆತನು ಹೀಗೆ ಹೇಳಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಕೆಸರು ಮಾಡಿ, ಆ ಕೆಸರನ್ನು ಕುರುಡನ ಕಣ್ಣುಗಳಿಗೆ ಹಚ್ಚಿದನು. 7ಆತನು ಅವನಿಗೆ, “ನೀನು ಹೋಗಿ ಸಿಲೋವ (ಸಿಲೋವ ಎಂದರೆ ‘ಕಳುಹಿಸಲ್ಪಟ್ಟವನು’ ಎಂದರ್ಥ) ಕೊಳದಲ್ಲಿ ತೊಳೆದುಕೋ” ಎಂದನು. ಅವನು ಹೋಗಿ ತೊಳೆದುಕೊಂಡು ದೃಷ್ಟಿಯುಳ್ಳವನಾಗಿ ಬಂದನು. 8ಆಗ ನೆರೆಹೊರೆಯವರು ಅವನು ಮೊದಲು ಭಿಕ್ಷುಕನಾಗಿದ್ದಾಗ ಅವನನ್ನು ನೋಡಿದ್ದವರೂ, “ಭಿಕ್ಷೆಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೇ?” ಎಂದು ವಿಚಾರಿಸಿದರು. 9ಕೆಲವರು, “ಹೌದು ಇವನೇ” ಎಂದರು. ಇನ್ನೂ ಕೆಲವರು, “ಅವನಲ್ಲ ಆದರೆ ಅವನ ಹಾಗೆ ಇದ್ದಾನೆ” ಎಂದರು. ಆದರೆ ಅವನಾದರೋ, “ನಾನೇ ಅವನು” ಎಂದು ಹೇಳಿದನು. 10ಆಗ ಅವರು “ಹಾಗಾದರೆ ನಿನ್ನ ಕಣ್ಣು ಹೇಗೆ ತೆರೆದವು?” ಎಂದು ಅವನನ್ನು ಕೇಳಿದ್ದಕ್ಕೆ, 11ಅವನು, “ಯೇಸು ಎಂಬ ಹೆಸರುಳ್ಳ ಮನುಷ್ಯನು ಮಣ್ಣಿನಲ್ಲಿ ಕೆಸರು ಮಾಡಿ ನನ್ನ ಕಣ್ಣಿಗೆ ಹಚ್ಚಿ ನನಗೆ, ‘ಸಿಲೋವ ಕೊಳಕ್ಕೆ ಹೋಗಿ ತೊಳೆದುಕೋ’ ಎಂದು ಹೇಳಿದನು. ಅದರಂತೆ ನಾನು ಹೋಗಿ ತೊಳೆದುಕೊಂಡೆನು. ಆಗ ನನಗೆ ದೃಷ್ಟಿ ಬಂತು” ಎಂದನು. 12ಅವರು, “ಆತನು ಎಲ್ಲಿದ್ದಾನೆ?” ಎಂದು ಅವನನ್ನು ಕೇಳಿದ್ದಕ್ಕೆ, ಅವನು “ನನಗೆ ಗೊತ್ತಿಲ್ಲ” ಎಂದನು. 13ಜನರು ಮೊದಲು ಆ ಕುರುಡನಾಗಿದ್ದವನನ್ನು ಫರಿಸಾಯರ ಬಳಿಗೆ ಕರೆದುಕೊಂಡು ಬಂದರು. 14ಯೇಸು ಕೆಸರು ಮಾಡಿ ಅವನಿಗೆ ದೃಷ್ಟಿ ಕೊಟ್ಟ ದಿನವು ಸಬ್ಬತ್ ದಿನವಾಗಿತ್ತು. 15ಆದಕಾರಣ ಆ ಫರಿಸಾಯರು ಸಹ ಅವನನ್ನು ವಿಚಾರಿಸಿ ನಿನಗೆ ಹೇಗೆ ದೃಷ್ಟಿ ಬಂದಿತು ಎಂದು ಪುನಃ ಕೇಳಿದರು. ಅವನು ಅವರಿಗೆ, “ಅವನು ಕೆಸರನ್ನು ನನ್ನ ಕಣ್ಣಿನ ಮೇಲೆ ಇಟ್ಟನು, ನಾನು ತೊಳೆದುಕೊಂಡೆನು, ನನಗೆ ದೃಷ್ಟಿ ಬಂದಿತು” ಎಂದು ಉತ್ತರಕೊಟ್ಟನು. 16ಫರಿಸಾಯರಲ್ಲಿ ಕೆಲವರು, “ಈ ಮನುಷ್ಯನು ದೇವರಿಂದ ಬಂದವನಲ್ಲ, ಏಕೆಂದರೆ ಆತನು ಸಬ್ಬತ್ ದಿನವನ್ನು ಆಚರಿಸುವುದಿಲ್ಲ” ಎಂದರು. ಇನ್ನು ಕೆಲವರು, “ಇಂಥಾ ಮಹತ್ಕಾರ್ಯಗಳನ್ನು ಮಾಡುವುದು ಪಾಪಿಯಾದ ಮನುಷ್ಯನಿಂದ ಹೇಗಾದೀತು?” ಎಂದರು. ಹೀಗೆ ಅವರಲ್ಲಿ ಭೇದವುಂಟಾಯಿತು. 17ಹೀಗಿರಲಾಗಿ ಅವರು ಪುನಃ ಆ ಕುರುಡನನ್ನು, “ಆತನು ನಿನಗೆ ದೃಷ್ಟಿ ಕೊಟ್ಟದ್ದರಿಂದ ನೀನು ಆತನ ವಿಷಯವಾಗಿ ಏನು ಹೇಳುತ್ತೀ?” ಎಂದು ಕೇಳಿದಾಗ, ಅವನು “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು. 18ಆದರೆ ದೃಷ್ಟಿ ಹೊಂದಿದವನ ವಿಷಯವಾಗಿ ಆ ಯೆಹೂದ್ಯರು; ಅವನ ತಂದೆತಾಯಿಗಳನ್ನು ಕರೆದು ವಿಚಾರಿಸುವವರೆಗೂ, ಅವನು ಹುಟ್ಟು ಕುರುಡನಾಗಿದ್ದು, ಈಗ ದೃಷ್ಟಿ ಹೊಂದಿದ್ದಾನೆಂಬುದನ್ನು ನಂಬಲಿಲ್ಲ. 19ಅವರು “ಕುರುಡನಾಗಿ ಹುಟ್ಟಿದನೆಂದು ನೀವು ಹೇಳುವ ನಿಮ್ಮ ಮಗನು ಇವನೋ? ಹಾಗಾದರೆ ಈಗ ಇವನಿಗೆ ಹೇಗೆ ದೃಷ್ಟಿ ಬಂದಿತು?” ಎಂದು ಅವರನ್ನು ಕೇಳಿದರು. 20ಅವನ ತಂದೆ ತಾಯಿಗಳು, “ಇವನು ನಮ್ಮ ಮಗನೆಂದೂ ಕುರುಡನಾಗಿ ಹುಟ್ಟಿದನೆಂದೂ ಬಲ್ಲೆವು. 21ಈಗ ಇವನು ನೋಡುವುದು ಹೇಗೆಂದು ನಮಗೆ ಗೊತ್ತಿಲ್ಲ. ಯಾರು ಇವನ ಕಣ್ಣುಗಳನ್ನು ತೆರೆದರೋ ನಮಗೆ ಗೊತ್ತಿಲ್ಲ, ಇವನನ್ನೇ ಕೇಳಿರಿ. ಇವನು ಪ್ರಾಯದವನಾಗಿದ್ದಾನಲ್ಲಾ, ಇವನೇ ತನ್ನ ವಿಷಯವಾಗಿ ಹೇಳುವನು” ಎಂದು ಉತ್ತರಕೊಟ್ಟರು. 22ಅವನ ತಂದೆ ತಾಯಿಗಳು ಯೆಹೂದ್ಯರಿಗೆ ಭಯಪಟ್ಟದ್ದರಿಂದ ಹೀಗೆ ಹೇಳಿದರು. ಏಕೆಂದರೆ ಯಾರಾದರೂ ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡರೆ ಅವನನ್ನು ಸಭಾಮಂದಿರದಿಂದ ಬಹಿಷ್ಕರಿಸಬೇಕೆಂದು ಯೆಹೂದ್ಯರು ಆಗಲೇ ತೀರ್ಮಾನಿಸಿಕೊಂಡಿದ್ದರು. 23“ಇವನು ಪ್ರಾಯದವನು ಇವನನ್ನೇ ಕೇಳಿರಿ” ಎಂದು ಅವನ ತಂದೆತಾಯಿಗಳು ಹೇಳಿದ್ದಕ್ಕೆ ಇದೇ ಕಾರಣ. 24ಆದಕಾರಣ ಅವರು ಕುರುಡನಾಗಿದ್ದ ಆ ಮನುಷ್ಯನನ್ನು ಎರಡನೆಯ ಸಾರಿ ಕರೆದು, “ನೀನು ದೇವರಿಗೆ ಗೌರವವನ್ನು ಸಲ್ಲಿಸು; ಈ ಮನುಷ್ಯನು ಪಾಪಿಷ್ಠನೆಂದು ನಾವು ಬಲ್ಲೆವು” ಎಂದರು. 25ಅದಕ್ಕೆ ಅವನು, “ಆತನು ಪಾಪಿಷ್ಠನೋ ಏನೋ ನನಗೆ ಗೊತ್ತಿಲ್ಲ, ಒಂದು ಮಾತ್ರ ಬಲ್ಲೆನು ನಾನು ಕುರುಡನಾಗಿದ್ದೆನು; ಈಗ ನಾನು ನೋಡುತ್ತಿದ್ದೇನೆ” ಎಂದನು. 26ಅವರು ಅವನನ್ನು, “ಆತನು ನಿನಗೆ ಏನು ಮಾಡಿದನು? ನಿನ್ನ ಕಣ್ಣುಗಳನ್ನು ಹೇಗೆ ತೆರೆದನು?” ಎಂದು ಕೇಳಿದ್ದಕ್ಕೆ, 27ಅವನು, “ನಿಮಗೆ ಆಗಲೇ ಹೇಳಿದೆನಲ್ಲಾ, ನೀವು ಕೇಳಲಿಲ್ಲ! ನೀವು ಯಾಕೆ ಪುನಃ ಪುನಃ ಕೇಳುತ್ತಿದ್ದೀರಿ? ನೀವು ಸಹ ಆತನ ಶಿಷ್ಯರಾಗುವುದಕ್ಕೆ ಬಯಸುತ್ತಿದ್ದೀರೋ?” ಎಂದನು. 28ಅದಕ್ಕೆ ಅವರು ಅವನನ್ನು ನಿಂದಿಸಿ, “ನೀನು ಆತನ ಶಿಷ್ಯನು. ಆದರೆ ನಾವು ಮೋಶೆಯ ಶಿಷ್ಯರು. 29ಮೋಶೆಯ ಸಂಗಡ ದೇವರು ಮಾತನಾಡಿದನೆಂದು ನಾವು ಬಲ್ಲೆವು, ಆದರೆ ಈತನು ಎಲ್ಲಿಯವನೋ ನಮಗೆ ತಿಳಿಯದು” ಎಂದರು. 30ಅದಕ್ಕೆ ಆ ಮನುಷ್ಯನು, “ಆತನು ನನ್ನ ಕಣ್ಣುಗಳನ್ನು ತೆರೆದರೂ ಆತನು ಎಲ್ಲಿಯವನೆಂದು ನಿಮಗೆ ತಿಳಿಯದೆ ಇರುವುದು ಆಶ್ಚರ್ಯವಲ್ಲವೇ! 31ಪಾಪಿಷ್ಠರ ಪ್ರಾರ್ಥನೆಯನ್ನು ದೇವರು ಕೇಳುವುದಿಲ್ಲ, ಆದರೆ ಯಾರು ಭಕ್ತರಾಗಿದ್ದು ಆತನ ಚಿತ್ತದಂತೆ ನಡೆಯುತ್ತಾರೋ ಅವರ ಪ್ರಾರ್ಥನೆಯನ್ನು ಕೇಳುತ್ತಾನೆಂದು ಬಲ್ಲೆವು. 32ಹುಟ್ಟು ಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾವನಾದರೂ ತೆರೆದಿದ್ದನ್ನು ಲೋಕಾದಿಯಿಂದ ಒಬ್ಬನಾದರೂ ಕೇಳಲಿಲ್ಲ. 33ಈತನು ದೇವರಿಂದ ಬಂದವನಲ್ಲದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು” ಎಂದನು. 34ಈ ಮಾತಿಗೆ ಅವರು, “ನೀನು ಕೇವಲ ಪಾಪದಲ್ಲಿ ಹುಟ್ಟಿದವನು, ನೀನು ನಮಗೆ ಉಪದೇಶಮಾಡುತ್ತಿಯೋ?” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು. 35ಅವನನ್ನು ಹೊರಗೆ ಹಾಕಿದರೆಂದು ಯೇಸು ಕೇಳಿ ಅವನನ್ನು ಕಂಡುಕೊಂಡು, “ನೀನು ಮನುಷ್ಯಕುಮಾರನನ್ನು ನಂಬುತ್ತೀಯೋ?” ಎಂದು ಕೇಳಿದನು. 36ಅದಕ್ಕೆ ಅವನು, “ಕರ್ತನೇ ಆ ಮನುಷ್ಯಕುಮಾರನು ಯಾರು? ನನಗೆ ತಿಳಿಸು, ನಾನು ಆತನಲ್ಲಿ ನಂಬಿಕೆ ಇಡುತ್ತೇನೆ” ಎಂದಾಗ, 37ಯೇಸು, “ನೀನು ಅವನನ್ನು ನೋಡಿದ್ದೀ ಮತ್ತು ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು” ಎಂದು ಹೇಳಿದಾಗ, 38ಅವನು, “ಕರ್ತನೇ, ನಾನು ನಂಬುತ್ತೇನೆ” ಎಂದು ಹೇಳಿ ಆತನಿಗೆ ಅಡ್ಡಬಿದ್ದನು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 24 ಮೇ ಎಂದರೆ ನಾಗರಿಕ ಪಂಚಾಂಗದ 6 ಜೂನ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು