Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮೇ 2027 › 16 ಮೇ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 16 ಮೇ 2027

ಭಾನುವಾರ · ಪಾಸ್ಕ ಕಾಲದ ಏಳನೆಯ ವಾರ

ಹಬ್ಬಗಳು ಮತ್ತು ಸಂತರು

ಪಂಚಾಶತ್ತಮ ಭಾನುವಾರ

ಮಹೋತ್ಸವ · ಆರಾಧನಾ ಬಣ್ಣ: ಕೆಂಪು

ದಿನದ ವಾಚನಗಳು

ಮೊದಲನೆಯ ವಾಚನ

ಅ. ಕೃ 2:1–11

1ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರೂ ಒಮ್ಮಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿಬಂದಿದ್ದರು. 2ಆಗ ಬಿರುಗಾಳಿ ಬೀಸುತ್ತಿದೆಯೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ ಒಂದು ಶಬ್ದವುಂಟಾಗಿ ಅವರು ಕುಳಿತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು. 3ಉರಿಯುವ ಬೆಂಕಿಯೂ ವಿಂಗಡಿಸಿಕೊಳ್ಳುವ ನಾಲಿಗೆಗಳ ಹಾಗೆ ಅವರಿಗೆ ಕಾಣಿಸಿ ಕೊಂಡು ಅವರಲ್ಲಿ ಒಬ್ಬೊಬ್ಬರ ಮೇಲೆ ಒಂದೊಂದಾಗಿ ಕುಳಿತುಕೊಂಡವು. 4ಆಗ ಅವರೆಲ್ಲರೂ ಪವಿತ್ರಾತ್ಮಭರಿತರಾದರು, ಅವರಿಗೆ ಆ ಪವಿತ್ರಾತ್ಮನು ನೀಡಿದ ಶಕ್ತಿಯ ಪ್ರಕಾರ ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವುದಕ್ಕೆ ಪ್ರಾರಂಭಿಸಿದರು. 5ಆಕಾಶದ ಕೆಳಗಿರುವ ಎಲ್ಲಾ ದೇಶಗಳಿಂದ ಬಂದ ಸದ್ಭಕ್ತರಾದ ಯೆಹೂದ್ಯರು ಯೆರೂಸಲೇಮಿನಲ್ಲಿ ವಾಸವಾಗಿದ್ದರು. 6ಆ ಸಪ್ಪಳವಾದಾಗ ಆ ಜನರೆಲ್ಲರೂ ಗುಂಪು ಗುಂಪಾಗಿ ಕೂಡಿಬಂದು ಪ್ರತಿಯೊಬ್ಬರೂ ತಮ್ಮತಮ್ಮ ಭಾಷೆಯಲ್ಲೇ ಇವರು ಮಾತನಾಡುವುದನ್ನು ಕೇಳಿ ದಿಗ್ಭ್ರಮೆಗೊಂಡರು. 7ಎಲ್ಲರೂ ವಿಸ್ಮಯದಿಂದ ಬೆರಗಾಗಿ, “ಇಗೋ, ಮಾತನಾಡುತ್ತಿರುವ ಇವರೆಲ್ಲರೂ ಗಲಿಲಾಯದವರಲ್ಲವೇ. 8ಆದರೆ ನಾವು ಪ್ರತಿಯೊಬ್ಬರು ನಮ್ಮ ನಮ್ಮ ಮಾತೃಭಾಷೆಯಲ್ಲಿ ಇವರು ಮಾತನಾಡುವುದನ್ನು ಕೇಳುತ್ತಿದ್ದೇವಲ್ಲಾ, ಇದು ಹೇಗೆ? 9ಪಾರ್ಥ್ಯರೂ, ಮೇದ್ಯರೂ, ಏಲಾಮ್ಯರೂ, ಮೆಸೊಪೊತಾಮ್ಯ, ಯೂದಾಯ, ಕಪ್ಪದೋಕ್ಯ, ಪೊಂತ, ಆಸ್ಯ, 10ಫ್ರುಗ್ಯ, ಪಂಫುಲ್ಯ, ಐಗುಪ್ತ ಮತ್ತು ಕುರೇನೆಯ ಮಗ್ಗುಲಲ್ಲಿರುವ ಲಿಬ್ಯ, ಈ ಸೀಮೆಗಳಲ್ಲಿ ವಾಸವಾಗಿರುವವರೂ, ರೋಮಾಪುರದಿಂದ ಬಂದಿರುವ ಯೆಹೂದ್ಯರೂ, ಯೆಹೂದ್ಯ ಮತಾವಲಂಬಿಗಳೂ, ಕ್ರೇತ್ಯರೂ, ಅರಬ್ಬೀದೇಶದವರೂ 11ಆಗಿರುವ ನಾವು ನಮ್ಮ ನಮ್ಮ ಭಾಷೆಗಳಲ್ಲಿ ಇವರು ದೇವರ ಮಹತ್ತುಗಳ ವಿಷಯವಾಗಿ ಹೇಳುವುದನ್ನು ಕೇಳುತ್ತಿದ್ದೇವಲ್ಲಾ” ಎಂದು ಅಂದುಕೊಂಡರು.

ಪ್ರತಿವಚನ ಕೀರ್ತನೆ

ಕೀರ್ತ 104:1, 24, 29–31, 34

1ನನ್ನ ಮನವೇ, ಯೆಹೋವನನ್ನು ಕೊಂಡಾಡು. ಯೆಹೋವನೇ, ನನ್ನ ದೇವರೇ, ನೀನು ಸರ್ವೋತ್ತಮನು; ಪ್ರಭಾವ ಮತ್ತು ಮಹತ್ವಗಳಿಂದ ಭೂಷಿತನಾಗಿರುವೆ. 24ಯೆಹೋವನೇ, ನಿನ್ನ ಕೈಕೆಲಸಗಳು ಬಗೆ ಬಗೆಯಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿರುವೆ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ. 29ನೀನು ವಿಮುಖನಾಗಲು ತಲ್ಲಣಿಸುತ್ತವೆ; ಅವುಗಳ ಶ್ವಾಸವನ್ನು ತೆಗೆದುಬಿಡಲು ಅವು ಸತ್ತು ತಿರುಗಿ ಮಣ್ಣಿಗೆ ಸೇರುತ್ತವೆ. 30ನೀನು ಜೀವಶ್ವಾಸವನ್ನು ಊದಲು ಅವು ಹೊಸದಾಗಿ ಹುಟ್ಟುತ್ತವೆ. ನೀನು ಭೂಮಿಯನ್ನು ನೂತನಪಡಿಸುತ್ತಿರುತ್ತಿ. 31ಯೆಹೋವನ ಮಹಿಮೆಯು ಸದಾಕಾಲವೂ ಇರಲಿ; ಯೆಹೋವನಿಗೆ ಆತನ ಸೃಷ್ಟಿಗಳಿಂದ ಸಂತೋಷವಾಗಲಿ. 34ನನ್ನ ಧ್ಯಾನದಿಂದ ಆತನಿಗೆ ಮೆಚ್ಚಿಕೆಯಾಗಲಿ; ನಾನಾದರೋ ಯೆಹೋವನಲ್ಲಿ ಆನಂದಿಸುವೆನು.

ಎರಡನೆಯ ವಾಚನ

ಗಲಾ 5:16–25

16ನಾನು ಹೇಳುವುದೇನಂದರೆ ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ, ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವುದಿಲ್ಲ. 17ಏಕೆಂದರೆ ಶರೀರಾಭಿಲಾಷೆಯೂ ಆತ್ಮನಿಗೆ ವಿರುದ್ಧವಾಗಿದೆ, ಆತ್ಮನ ಅಭಿಲಾಷೆಯು ಶರೀರಭಾವಕ್ಕೆ ವಿರುದ್ಧವಾಗಿದೆ. ನೀವು ಮಾಡಲಿಚ್ಚಿಸುವುದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತವೆ. 18ಆದರೆ ನೀವು ಆತ್ಮನಿಂದ ನಡಿಸಿಕೊಳ್ಳುವವರಾದರೆ ಧರ್ಮಶಾಸ್ತ್ರಕ್ಕೆ ಅಧೀನರಲ್ಲ. 19ಶರೀರಭಾವದ ಸ್ವಭಾವಗಳು ಪ್ರತ್ಯಕ್ಷವಾಗಿಯೇ ಇವೆ, ಅದು ಯಾವುವೆಂದರೆ, ಜಾರತ್ವ, ಬಂಡುತನ, ನಾಚಿಕೆಗೇಡಿತನ, 20ವಿಗ್ರಹಾರಾಧನೆ, ಮಾಟ, ಹಗೆತನ, ಜಗಳ, ಹೊಟ್ಟೆಕಿಚ್ಚು, ಸಿಟ್ಟು, ಪಕ್ಷಪಾತ, ಭಿನ್ನಮತ, 21ಮತ್ಸರ, ಕುಡುಕುತನ, ಗಲಭೆ, ಢಂಭಾಚಾರ ಇಂಥವುಗಳೇ. ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯಸ್ಥರಾಗುವುದಿಲ್ಲವೆಂದು ನಾನು ಈ ಮೊದಲು ಹೇಳಿದಂತೆಯೇ ಈಗಲೂ ನಿಮ್ಮನ್ನು ಎಚ್ಚರಿಸುತ್ತೇನೆ. 22ಆದರೆ ದೇವರಾತ್ಮನಿಂದ ಉಂಟಾಗುವ ಫಲವೇನಂದರೆ, ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಪರೋಪಕಾರ, ನಂಬಿಕೆ, 23ಸಾಧುತ್ವ, ಶಮೆದಮೆ ಇಂಥವುಗಳೇ. ಇವುಗಳಿಗೆ ವಿರುದ್ಧವಾಗಿ ಯಾವ ಧರ್ಮಶಾಸ್ತ್ರವೂ ಇಲ್ಲ. 24ಕ್ರಿಸ್ತ ಯೇಸುವಿನಲ್ಲಿರುವವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ, ಸ್ವೇಚ್ಛಾಭಿಲಾಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದವರಾಗಿದ್ದಾರೆ. 25ನಾವು ಆತ್ಮನಿಂದ ಜೀವಿಸುತ್ತಿರಲಾಗಿ ಆತ್ಮನನ್ನನುಸರಿಸಿ ನಡೆಯೋಣ.

ಸುವಾರ್ತೆ

ಯೋಹಾ 15:26–27; 16:12–15

26ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಸಹಾಯಕನು, ಎಂದರೆ, ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ, ಆತನೇ ನನ್ನ ವಿಷಯವಾಗಿ ಸಾಕ್ಷಿ ಕೊಡುವನು. 27ನೀವು ಮೊದಲಿನಿಂದ ನನ್ನ ಸಂಗಡ ಇದ್ದುದರಿಂದ ನೀವೂ ಸಹ ನನಗೆ ಸಾಕ್ಷಿಗಳಾಗಿದ್ದೀರಿ. 16:12“ನಾನು ನಿಮಗೆ ಹೇಳಬೇಕಾದ ವಿಷಯಗಳು ಇನ್ನೂ ಬಹಳ ಉಂಟು, ಆದರೆ ನೀವು ಈಗ ಅವುಗಳನ್ನು ಗ್ರಹಿಸಲು ನಿಮ್ಮಲ್ಲಿ ಸಾಮರ್ಥ್ಯವಿಲ್ಲ. 13ಆದರೆ ಸತ್ಯದ ಆತ್ಮನು ಬರುವಾಗ ಆತನು ನಿಮ್ಮನ್ನು ಪೂರ್ಣ ಸತ್ಯದ ಕಡೆಗೆ ನಡೆಸುವನು. ಆತನು ತನ್ನಷ್ಟಕ್ಕೆ ತಾನೇ ಮಾತನಾಡದೆ ಕೇಳಿದ ಮಾತುಗಳನ್ನೇ ಆಡುವನು ಮತ್ತು ಮುಂದೆ ನಡೆಯುವ ಸಂಗತಿಗಳನ್ನು ನಿಮಗೆ ತಿಳಿಸುವನು. 14ಆತನು ನನ್ನದನ್ನು ಸ್ವೀಕರಿಸಿ ನಿಮಗೆ ತಿಳಿಯಪಡಿಸುತ್ತಾನಾದ್ದರಿಂದ ನನ್ನನ್ನೇ ಮಹಿಮೆಪಡಿಸುವನು. 15ತಂದೆಗೆ ಇರುವುದೆಲ್ಲಾ ನನ್ನದು. ಆದುದರಿಂದಲೇ ನನ್ನದನ್ನು ಸ್ವೀಕರಿಸಿ ನಿಮಗೆ ತಿಳಿಸುವನೆಂದು ನಾನು ಹೇಳಿದೆನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು