Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮೇ 2027 › 17 ಮೇ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 17 ಮೇ 2027

ಸೋಮವಾರ · ಸಾಮಾನ್ಯ ಕಾಲದ ಏಳನೆಯ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ ಏಳನೆಯ ವಾರದ ಸೋಮವಾರ

ಸ್ಮರಣೆ · ಆರಾಧನಾ ಬಣ್ಣ: ಬಿಳಿ

ಪೂಜ್ಯ ಕನ್ಯೆ ಮರಿಯ, ಧರ್ಮಸಭೆಯ ಮಾತೆ · ಸ್ಮರಣೆ

ದಿನದ ವಾಚನಗಳು

ಮೊದಲನೆಯ ವಾಚನ

ಆದಿ 3:9–15, 20

ಅಥವಾ: ಅ. ಕೃ 1:12–14

9ಆಗ ಯೆಹೋವ ದೇವರು ಮನುಷ್ಯನನ್ನು ಕರೆದು, “ನೀನು ಎಲ್ಲಿದ್ದೀ?” ಎಂದು ಕೇಳಿದನು. 10ಅದಕ್ಕೆ ಅವನು, “ನೀನು ತೋಟದಲ್ಲಿ ಸಂಚರಿಸುವ ಸಪ್ಪಳವನ್ನು ನಾನು ಕೇಳಿ, ಬೆತ್ತಲೆಯಾಗಿರುವುದರಿಂದ ಹೆದರಿ ಅಡಗಿಕೊಂಡೆನು” ಎಂದನು. 11ಅದಕ್ಕಾತನು, “ನೀನು ಬೆತ್ತಲೆಯಾಗಿದ್ದೀಯೆಂದು ನಿನಗೆ ತಿಳಿಸಿದವರಾರು? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಹಣ್ಣನ್ನು ತಿಂದಿದ್ದಿಯಾ?” ಎಂದು ಕೇಳಿದನು. 12ಅದಕ್ಕೆ ಆ ಮನುಷ್ಯನು, “ನನ್ನ ಜೊತೆಯಲ್ಲಿರುವುದಕ್ಕೆ ನೀನು ಕೊಟ್ಟ ಈ ಸ್ತ್ರೀಯು, ಆ ಮರದ ಹಣ್ಣನ್ನು ನನಗೆ ಕೊಟ್ಟಳು, ನಾನು ತಿಂದೆನು” ಎಂದು ಹೇಳಿದನು. 13ಯೆಹೋವನಾದ ದೇವರು ಆ ಸ್ತ್ರೀಗೆ, “ಇದೇನು ನೀನು ಮಾಡಿದ್ದು?” ಎಂದು ಕೇಳಲು, ಆ ಸ್ತ್ರೀಯು, “ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು” ಎಂದು ಉತ್ತರ ಕೊಟ್ಟಳು. 14ಆಗ ಯೆಹೋವನಾದ ದೇವರು ಸರ್ಪಕ್ಕೆ; “ನೀನು ಈ ಕಾರ್ಯವನ್ನು ಮಾಡಿದ್ದರಿಂದ ಎಲ್ಲಾ ಪಶುಗಳಲ್ಲಿಯೂ ಅಡವಿಯ ಎಲ್ಲಾ ಕಾಡುಮೃಗಗಳಲ್ಲಿಯೂ ಶಾಪಗ್ರಸ್ತನಾಗಿರುವೆ. ನೀನು ಹೊಟ್ಟೆಯಿಂದ ಹರಿದು ನಿನ್ನ ಜೀವಮಾನದ ದಿನಗಳಲ್ಲೆಲ್ಲಾ ಮಣ್ಣನ್ನೇ ತಿನ್ನುವಿ. 15ನಿನಗೂ, ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವುದು. ನೀನು ಅವನ ಹಿಮ್ಮಡಿಯನ್ನು ಕಚ್ಚುವಿ” ಎಂದು ಹೇಳಿದನು. 20ಆ ಮನುಷ್ಯನು ತನ್ನ ಹೆಂಡತಿಗೆ ಹವ್ವ ಎಂದು ಹೆಸರಿಟ್ಟನು. ಆದುದರಿಂದ ಬದುಕಿರುವವರೆಲ್ಲರಿಗೂ ಆಕೆಯೇ ಮೂಲತಾಯಿಯಾಗಿದ್ದಾಳೆ.

ಪ್ರತಿವಚನ ಕೀರ್ತನೆ

ಕೀರ್ತ 87:1–3, 5–7

1ಕೋರಹೀಯರ ಕೀರ್ತನೆ; ಗೀತೆ. ಯೆಹೋವನು ಸ್ಥಾಪಿಸಿದ ಪಟ್ಟಣವು ಪರಿಶುದ್ಧ ಪರ್ವತದ ಮೇಲಿದೆ. 2ಆತನು ಯಾಕೋಬ್ ವಂಶದವರ ಎಲ್ಲಾ ನಿವಾಸಗಳಿಗಿಂತ, ಚೀಯೋನಿನ ದ್ವಾರಗಳನ್ನು ಹೆಚ್ಚಾಗಿ ಪ್ರೀತಿಸುತ್ತಾನೆ. 3ದೇವನಗರವೇ, ನಿನ್ನ ವಿಷಯವಾದ ಗೌರವೋಕ್ತಿಯೇನೆಂದರೆ, 5ಇದರಿಂದ ಚೀಯೋನೇ ಪ್ರತಿಯೊಂದು ಜನಾಂಗದ ಜನ್ಮನಗರವೆಂದು ಹೇಳಲ್ಪಡುವುದು; ಅದನ್ನು ಪರಾತ್ಪರನಾದ ದೇವರು ತಾನೇ ಸ್ಥಿರಪಡಿಸುವನು. 6ಯೆಹೋವನು ಜನಾಂಗಗಳ ಪಟ್ಟಿಯನ್ನು ಮಾಡುವಾಗ, “ಪ್ರತಿಯೊಂದರ ವಿಷಯ ಇದು ಅಲ್ಲಿಯೇ ಹುಟ್ಟಿದ್ದು” ಎಂದು ಬರೆಯುವನು. ಸೆಲಾ 7ಇವರು ಹಾಡುತ್ತಾ, ಕುಣಿಯುತ್ತಾ, “ನನ್ನ ಜೀವಜಲದ ಒರತೆಗಳೆಲ್ಲಾ ನಿನ್ನಲ್ಲಿಯೇ ಇವೆ” ಎಂದು ಹೇಳುವರು.

ಸುವಾರ್ತೆ

ಯೋಹಾ 19:25–27

25ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ, ಆತನ ತಾಯಿಯ ತಂಗಿಯೂ, ಕ್ಲೋಪನ ಹೆಂಡತಿಯಾದ ಮರಿಯಳೂ, ಮಗ್ದಲದ ಮರಿಯಳೂ ನಿಂತಿದ್ದರು. 26ಯೇಸು ತನ್ನ ತಾಯಿಯನ್ನೂ ಹತ್ತಿರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಸ್ತ್ರೀಯೇ, ಇಗೋ, ನಿನ್ನ ಮಗನು” ಎಂದು ಹೇಳಿದನು. 27ತರುವಾಯ ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿ” ಎಂದು ಹೇಳಿದನು. ಆ ಗಳಿಗೆಯಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲೇ ಇರಿಸಿಕೊಂಡನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು