Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮೇ 2027 › 1 ಮೇ

ಆರ್ಥೊಡಾಕ್ಸ್ ಪಂಚಾಂಗ · ಏಪ್ರಿಲ್ 18 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 1 ಮೇ 2027

ಶನಿವಾರ · ಪವಿತ್ರ ವಾರ

ಹಬ್ಬಗಳು ಮತ್ತು ಸಂತರು

ಮಹಾ ಪವಿತ್ರ ಶನಿವಾರ

ಮಹಾ ಉಪವಾಸ ಕಾಲ

ಕಟ್ಟುನಿಟ್ಟಿನ ಉಪವಾಸ (ಒಣ ಆಹಾರ: ರೊಟ್ಟಿ, ತರಕಾರಿ, ಹಣ್ಣು)

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಉದಯಕಾಲದ ಪ್ರಾರ್ಥನೆ (ಪ್ರವಾದನೆ)

ಯೆಹೆ 37:1–14

1ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಲು, ಆತನು ತನ್ನ ಆತ್ಮದ ಮೂಲಕ ನನ್ನನ್ನು ಒಯ್ದು ಎಲುಬುಗಳಿಂದ ತುಂಬಿದ್ದ ಒಂದು ಕಣಿವೆಯಲ್ಲಿ ಇಳಿಸಿದನು. 2ನಾನು ಆ ಎಲುಬುಗಳ ಮಧ್ಯೆ ಕಣಿವೆಯನ್ನು ದಾಟಿ ಬರುವಂತೆ ಮಾಡಿದನು. ಇಗೋ! ಕಣಿವೆಯಲ್ಲಿ ಒಣಗಿ ಹೋದ ಎಲುಬುಗಳು ಲೆಕ್ಕವಿಲ್ಲದಷ್ಟು ಬಿದ್ದಿದ್ದವು. 3ಆತನು ನನಗೆ “ನರಪುತ್ರನೆ, ಈ ಎಲುಬುಗಳಿಗೆ ಜೀವವು ಬರಬಹುದೋ?” ಎಂದು ಕೇಳಲು ನಾನು, “ಕರ್ತನಾದ ಯೆಹೋವನೇ, ನೀನೇ ಬಲ್ಲೆ” ಎಂದು ಉತ್ತರಕೊಟ್ಟೆನು. 4ಆಗ ಆತನು ನನಗೆ ಹೀಗೆ ಅಪ್ಪಣೆಮಾಡಿದನು, “ನೀನು ಈ ಎಲುಬುಗಳ ಮೇಲೆ ಪ್ರವಾದಿಸಿ, ಹೀಗೆ ನುಡಿ, ‘ಒಣಗಿದ ಎಲುಬುಗಳೇ, ಯೆಹೋವನ ವಾಕ್ಯವನ್ನು ಕೇಳಿರಿ’. 5ಕರ್ತನಾದ ಯೆಹೋವನು ನಿಮಗೆ ಹೀಗೆ ಹೇಳುತ್ತಾನೆ, ‘ಇಗೋ, ನಾನು ನಿಮ್ಮೊಳಗೆ ಶ್ವಾಸವನ್ನು ಊದುವೆನು; ನೀವು ಬದುಕುವಿರಿ. 6ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ, ಮಾಂಸವನ್ನು ತಂದು, ಚರ್ಮವನ್ನು ಹೊದಿಸಿ, ನಿಮ್ಮಲ್ಲಿ ಶ್ವಾಸವನ್ನು ತುಂಬುವೆನು; ಆಗ ನೀವು ಬದುಕಿ ನಾನೇ ಯೆಹೋವನು ಎಂದು ತಿಳಿದುಕೊಳ್ಳುವಿರಿ.’” 7ನನಗೆ ಅಪ್ಪಣೆಯಾದಂತೆ ನಾನು ಆ ಪ್ರವಾದನೆಯನ್ನು ನುಡಿಯುತ್ತಿರಲು, ಅಲ್ಲಿ ಟಕಟಕ ಶಬ್ದವಾಯಿತು, ಇಗೋ, ಅದು ಕದಲುತ್ತಿತ್ತು. ಎಲುಬುಗಳೆಲ್ಲಾ ಒಂದುಗೂಡಿ ಎಲುಬಿಗೆ ಎಲುಬು ಜೋಡಣೆಯಾದವು. 8ನಾನು ನೋಡುತ್ತಿರುವಾಗ ಏನಾಶ್ಚರ್ಯ ಆಹಾ, ಅವುಗಳ ಮೇಲೆ ನರಗಳು ಹಬ್ಬಿಕೊಂಡವು, ಮಾಂಸವು ಹರಡಿಕೊಂಡಿತು, ಚರ್ಮವು ಮೇಲ್ಹೊದಿಕೆಯಾಯಿತು, ಶ್ವಾಸ ಮಾತ್ರ ಇರಲಿಲ್ಲ. 9ಆಗ ಆತನು ನನಗೆ, “ನರಪುತ್ರನೇ, ನೀನು ಶ್ವಾಸಕ್ಕೆ ನುಡಿ, ‘ಓ ಶ್ವಾಸವೇ,’ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀನು ಚತುರ್ದಿಕ್ಕುಗಳಿಂದ ಬೀಸಿ, ಈ ಹತಶರೀರಗಳು ಬದುಕುವಂತೆ ಅವುಗಳ ಮೇಲೆ ಊದು.’” 10ನನಗೆ ಕೊಟ್ಟ ಅಪ್ಪಣೆಯಂತೆ ನಾನು ನುಡಿದು, ಶ್ವಾಸ ಊದಿದೆ. ಇಗೋ, ಉಸಿರು ಅವುಗಳಲ್ಲಿ ಬಂದಿತು, ಅವು ಬದುಕಿದವು, ಕಾಲೂರಿ ನಿಂತವು, ಅತ್ಯಂತ ಮಹಾ ಸೈನ್ಯವಾದವು. 11ಆಮೇಲೆ ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಈ ಎಲುಬುಗಳು ಇಸ್ರಾಯೇಲಿನ ಮನೆತನಗಳೇ; ಇಗೋ, ಆ ಮನೆತನದವರು, ‘ಅಯ್ಯೋ, ನಮ್ಮ ಎಲುಬುಗಳು ಒಣಗಿಹೋದವು, ನಮ್ಮ ನಿರೀಕ್ಷೆಯು ಹಾಳಾಯಿತು; ನಾವು ಸಂಪೂರ್ಣವಾಗಿ ನಾಶವಾದೆವು’” ಅಂದುಕೊಳ್ಳುತ್ತಿದ್ದಾರೆ. 12ಆದಕಾರಣ ನೀನು ಈ ಪ್ರವಾದನೆಯನ್ನು ಅವರಿಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜನರೇ, ನೋಡಿರಿ, ನಾನು ನಿಮ್ಮ ಸಮಾಧಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿ, ಇಸ್ರಾಯೇಲ್ ದೇಶಕ್ಕೆ ನಿಮ್ಮನ್ನು ತರುವೆನು. 13ನನ್ನ ಜನರೇ, ನಾನು ನಿಮ್ಮ ಸಮಾಧಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿದಾಗ ನಾನೇ ಯೆಹೋವನು ಎಂದು ನಿಮಗೆ ದೃಢವಾಗುವುದು. 14ನಾನು ನನ್ನ ಶ್ವಾಸವನ್ನು ನಿಮ್ಮಲ್ಲಿ ಊದಿ, ನಿಮ್ಮನ್ನು ಬದುಕಿಸಿ, ನಿಮ್ಮ ದೇಶದಲ್ಲಿ ನೆಲೆಗೊಳಿಸುವೆನು; ಆಗ ಯೆಹೋವನಾದ ನಾನೇ ಇದನ್ನು ನುಡಿದು, ನಡೆಸಿದ್ದೇನೆ ಎಂದು ತಿಳಿದುಕೊಳ್ಳುವಿರಿ” ಇದು ಯೆಹೋವನ ಸಂಕಲ್ಪ.

ಉದಯಕಾಲದ ಪ್ರಾರ್ಥನೆ: ಪತ್ರಿಕೆ

1 ಕೊರಿ 5:6–8 · ಗಲಾ 3:13–14

6ನೀವು ಹೊಗಳಿಕೊಳ್ಳುವುದು ಒಳ್ಳೆಯದಲ್ಲ. ಸ್ವಲ್ಪ ಹುಳಿ ಕಲಸಿದರೆ ಕಣಕವೆಲ್ಲಾ ಹುಳಿಯಾಗುತ್ತದೆಂಬುದು ನಿಮಗೆ ತಿಳಿಯದೋ? 7ನೀವು ಹುಳಿಯಿಲ್ಲದವರೆನಿಸಿಕೊಂಡದ್ದರಿಂದ ಹಳೇ ಹುಳಿಯನ್ನು ತೆಗೆದುಹಾಕಿ ಹೊಸ ಕಣಕದಂತಾಗಿರಿ. ಯಾಕೆಂದರೆ ಈಗಾಗಲೇ ನಮ್ಮ ಪಸ್ಕ ಯಜ್ಞದ ಕುರಿಮರಿಯು ಬಲಿಯಾಗಿದೆ; ಆ ಕುರಿಮರಿ ಯಾವುದೆಂದರೆ ಕ್ರಿಸ್ತನೇ. 8ಆದಕಾರಣ ನಾವು ಹಳೇ ಹುಳಿಯನ್ನು ಅಂದರೆ ದುರ್ಮಾರ್ಗತ್ವ ಮತ್ತು ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೇ ಪ್ರಾಮಾಣಿಕತೆ ಹಾಗೂ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯನ್ನೇ ತೆಗೆದುಕೊಂಡು ಹಬ್ಬವನ್ನು ಆಚರಿಸೋಣ. 3:13ಯೇಸು ಕ್ರಿಸ್ತನು ನಮನ್ನು ಶಾಪದಿಂದ ಬಿಡಿಸುವುದಕ್ಕಾಗಿ ತಾನೇ ಶಾಪಗ್ರಸ್ತನಾದನು. ಏಕೆಂದರೆ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ “ಮರಕ್ಕೆ ತೂಗುಹಾಕಲ್ಪಟ್ಟು ಪ್ರತಿಯೊಬ್ಬನು ಶಾಪಗ್ರಸ್ತನು” ಎಂದು ತಿಳಿದಿದ್ದೇವೆ. 14ಅಬ್ರಹಾಮನಿಗೆ ಉಂಟಾದ ಆಶೀರ್ವಾದವು, ಕ್ರಿಸ್ತ ಯೇಸುವಿನಲ್ಲಿ ಅನ್ಯಜನರಿಗೆಲ್ಲ ಸಿಗುವಂತೆಯೂ ಮತ್ತು ದೇವರು ವಾಗ್ದಾನ ಮಾಡಿದ ಪರಿಶುದ್ಧಾತ್ಮನು ನಮಗೆ ನಂಬಿಕೆಯ ಮೂಲಕ ದೊರಕುವಂತೆಯೂ, ತನ್ನ ಮರಣದ ಮೂಲಕ ಕ್ರಿಸ್ತನು ನಮ್ಮನ್ನು ಕೊಂಡುಕೊಂಡನು.

ಉದಯಕಾಲದ ಪ್ರಾರ್ಥನೆ: ಸುವಾರ್ತೆ

ಮತ್ತಾ 27:62–66

62ಮರುದಿನ ಅಂದರೆ ಸಿದ್ಧತೆಯ ದಿನ ಕಳೆದ ಮೇಲೆ ಮುಖ್ಯಯಾಜಕರೂ ಫರಿಸಾಯರೂ ಪಿಲಾತನ ಬಳಿಗೆ ಸೇರಿಬಂದು, 63“ಯಜಮಾನನೇ, ಆ ಮೋಸಗಾರನು ಬದುಕಿದ್ದಾಗ ‘ತಾನು ಮೂರು ದಿನದ ಮೇಲೆ ಜೀವದಿಂದ ಏಳುತ್ತೇನೆ’ ಎಂದು ಹೇಳಿದ್ದು ನಮ್ಮ ನೆನಪಿಗೆ ಬಂದಿತು; 64ಆದಕಾರಣ ಮೂರನೆಯ ದಿನದ ತನಕ ಸಮಾಧಿಯನ್ನು ಭದ್ರಮಾಡಿ ಕಾಯುವುದಕ್ಕೆ ಅಪ್ಪಣೆಕೊಡಬೇಕು; ಇಲ್ಲದಿದ್ದರೆ ಅವನ ಶಿಷ್ಯರು ಬಂದು ಅವನನ್ನು ಕದ್ದುಕೊಂಡು ಹೋಗಿ ಸತ್ತವನು ಬದುಕಿ ಬಂದಿದ್ದಾನೆ” ಎಂದು ಹೇಳಾರು; ಆಗ ಮೊದಲನೆಯ ವಂಚನೆಗಿಂತ ಕಡೆಯ ವಂಚನೆಯು ಕೆಡುಕಾದೀತು ಅಂದರು. 65ಪಿಲಾತನು ಅವರಿಗೆ, “ಕಾವಲುಗಾರರನ್ನು ಕರೆದುಕೊಂಡು ಹೋಗಿ ನಿಮಗೆ ತಿಳಿದ ಹಾಗೆ ಭದ್ರಮಾಡಿ ಕಾಯಿರಿ” ಎಂದು ಹೇಳಲು 66ಅವರು ಹೊರಟು ಕಾವಲುಗಾರರನ್ನು ಇರಿಸಿ ಆ ಕಲ್ಲಿಗೆ ಮುದ್ರೆಹಾಕಿ ಸಮಾಧಿಯನ್ನು ಸುಭದ್ರಮಾಡಿದರು.

ಸಂಧ್ಯಾ ಪ್ರಾರ್ಥನೆ: ವಾಚನ (ಮೊದಲನೆಯ ವಾಚನ)

ಆದಿ 1:1–13

1ಆದಿಯಲ್ಲಿ ದೇವರು ಆಕಾಶವನ್ನು, ಭೂಮಿಯನ್ನು ಸೃಷ್ಟಿಮಾಡಿದನು. 2ಭೂಮಿಯು ಕ್ರಮವಿಲ್ಲದೆಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕತ್ತಲಿತ್ತು. ದೇವರಾತ್ಮವು ಸಾಗರದ ಮೇಲೆ ಚಲಿಸುತ್ತಿತ್ತು. 3ಅನಂತರ ದೇವರು “ಬೆಳಕಾಗಲಿ” ಎಂದು ಆಜ್ಞಾಪಿಸಲು ಬೆಳಕಾಯಿತು. 4ದೇವರು ಆ ಬೆಳಕನ್ನು ಒಳ್ಳೆಯದೆಂದು ಕಂಡನು. 5ದೇವರು ಬೆಳಕನ್ನೂ ಕತ್ತಲನ್ನೂ ಬೇರ್ಪಡಿಸಿ ಬೆಳಕಿಗೆ “ಹಗಲು” ಎಂದೂ, ಕತ್ತಲೆಗೆ “ಇರುಳು” ಎಂದೂ ಹೆಸರಿಟ್ಟನು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೊದಲನೆಯ ದಿನವಾಯಿತು. 6ಬಳಿಕ ದೇವರು “ಜಲರಾಶಿಗಳ ನಡುವೆ ವಿಸ್ತಾರವಾದ ಗುಮ್ಮಟವು ಉಂಟಾಗಲಿ ಅದು ಕೆಳಗಿನ ನೀರುಗಳನ್ನೂ ಮೇಲಿನ ನೀರುಗಳನ್ನೂ ಬೇರೆ ಬೇರೆ ಮಾಡಲಿ” ಅಂದನು. 7ದೇವರು ವಿಸ್ತಾರವಾದ ಗುಮ್ಮಟವನ್ನು ಮಾಡಿ ಅದರ ಕೆಳಗಿದ್ದ ನೀರುಗಳನ್ನು ಅದರ ಮೇಲಿದ್ದ ನೀರುಗಳಿಂದ ವಿಂಗಡಿಸಿದನು. ಅದು ಹಾಗೆಯೇ ಆಯಿತು. 8ದೇವರು ಆ ಗುಮ್ಮಟಕ್ಕೆ “ಆಕಾಶ” ಎಂದು ಹೆಸರಿಟ್ಟನು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಎರಡನೆಯ ದಿನವಾಯಿತು. 9ಅನಂತರ ದೇವರು, “ಆಕಾಶದ ಕೆಳಗಿರುವ ನೀರೆಲ್ಲಾ ಒಂದೇ ಸ್ಥಳದಲ್ಲಿ ಒಟ್ಟಿಗೆ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ” ಅಂದನು. ಹಾಗೆಯೇ ಆಯಿತು. 10ದೇವರು ಒಣನೆಲಕ್ಕೆ “ಭೂಮಿ” ಎಂದೂ ಜಲರಾಶಿಗೆ “ಸಮುದ್ರ” ಎಂದೂ ಹೆಸರಿಟ್ಟನು. ಆತನು ಅದನ್ನು ಒಳ್ಳೆಯದೆಂದು ನೋಡಿದನು. 11ತರುವಾಯ ದೇವರು, “ಭೂಮಿಯು ಹುಲ್ಲನ್ನು, ಸಸ್ಯಗಳನ್ನೂ, ಬೀಜಬಿಡುವ ಕಾಯಿಪಲ್ಯದ ಗಿಡಗಳನ್ನೂ ಬೆಳೆಯಿಸಲಿ ಮತ್ತು ಬೀಜವುಳ್ಳ ಹಣ್ಣಿನ ಮರಗಳನ್ನು ಅವುಗಳ ಜಾತಿಗನುಸಾರವಾಗಿ ಫಲಿಸಲಿ” ಎಂದು ಹೇಳಿದನು, ಹಾಗೆಯೇ ಆಯಿತು. 12ಭೂಮಿಯಲ್ಲಿ ಸಸ್ಯಗಳು ಬೆಳೆದವು. ತಮ್ಮ ತಮ್ಮ ಜಾತಿಯ ಪ್ರಕಾರ ಬೀಜಬಿಡುವ ಕಾಯಿಪಲ್ಯದ ಗಿಡಗಳು ಉಂಟಾದವು. ತಮ್ಮ ತಮ್ಮ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳು ಉತ್ಪತ್ತಿಯಾದವು. ದೇವರು ಅದನ್ನು ಒಳ್ಳೆಯದೆಂದು ಕಂಡನು 13ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೂರನೆಯ ದಿನವಾಯಿತು.

ಸಂಧ್ಯಾ ಪ್ರಾರ್ಥನೆ: ವಾಚನ (ಎರಡನೆಯ ವಾಚನ)

ಯೆಶಾ 60:1–16

1ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ. 2ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವುದು. 3ಜನಾಂಗಗಳು ನಿನ್ನ ಬೆಳಕಿಗೆ ನೆರೆದು ಬರುವವು, ಅರಸರೂ ನಿನ್ನಲ್ಲಿನ ಉದಯಪ್ರಕಾಶಕ್ಕೆ ಸೇರುವರು. 4ಕಣ್ಣೆತ್ತಿ ಸುತ್ತಲು ನೋಡು, ನಿನ್ನ ಮಕ್ಕಳೆಲ್ಲರೂ ಗುಂಪುಕೂಡಿ ನಿನ್ನ ಬಳಿಗೆ ಸೇರಿಬರುತ್ತಾರೆ; ಗಂಡುಮಕ್ಕಳು ದೂರದಿಂದ ಸಮೀಪಿಸುತ್ತಾರೆ, ಹೆಣ್ಣುಮಕ್ಕಳು ಕಂಕುಳಿನಲ್ಲಿ ಕುಳಿತು ಬರುತ್ತಾರೆ. 5ನೀನು ಅವರನ್ನು ನೋಡಿ ಸಂತೋಷ ಸಂಭ್ರಮ ಪಡುವೆ, ನಿನ್ನ ಹೃದಯವು ಹರ್ಷಿಸಿ ಉಲ್ಲಾಸಿಸುವುದು; ಏಕೆಂದರೆ ಸಮುದ್ರ ವ್ಯಾಪಾರದ ಸಮೃದ್ಧಿಯು ನಿನಗೆ ಅತಿಯಾದ ಲಾಭತರುವುದು. ಕಡೆಗೆ ತಿರುಗುವುದು, ಜನಾಂಗಗಳ ಐಶ್ವರ್ಯವು ನಿನಗೆ ದೊರೆಯುವುದು. 6ಉಷ್ಟ್ರಸಮೂಹವೂ, ಮಿದ್ಯಾನಿನ ಮತ್ತು ಏಫದ ಪ್ರಾಯದ ಒಂಟೆಗಳೂ ನಿನ್ನಲ್ಲಿ ತುಂಬಿರುವವು; ಅವೆಲ್ಲವೂ ಬಂಗಾರವನ್ನೂ, ಧೂಪವನ್ನೂ ತೆಗೆದುಕೊಂಡು ಶೆಬದಿಂದ ಬಂದು ಯೆಹೋವನ ಸ್ತುತ್ಯಕೃತ್ಯಗಳನ್ನು ಸಾರುವರು. 7ಕೇದಾರಿನ ಹಿಂಡುಗಳೆಲ್ಲಾ ನಿನ್ನಲ್ಲಿ ಕೂಡುವವು; ನೆಬಾಯೋತಿನ ಟಗರುಗಳು ನೀನು ಮಾಡುವ ಯಜ್ಞಕ್ಕೆ ಅನುಕೂಲಿಸುವವು. ಅವು ನನ್ನ ಯಜ್ಞವೇದಿಯ ಮೇಲೆ ಸಮರ್ಪಕವಾಗಿ ಒಯ್ಯಲ್ಪಡುವವು; ಮಹಿಮೆಯಿಂದ ಕೂಡಿದ ನನ್ನ ಆಲಯವನ್ನು ಘನಪಡಿಸುವೆನು. 8ಆಹಾ, ದ್ವೀಪನಿವಾಸಿಗಳೂ ನನ್ನನ್ನು ನಿರೀಕ್ಷಿಸುವವರಾಗಿದ್ದಾರೆ! ಮೇಘದೋಪಾದಿಯಲ್ಲಿ ಗೂಡುಗಳಿಗೆ ತ್ವರೆಪಡುವ ಪಾರಿವಾಳಗಳಂತೆ ಹಾರಿ ಬರುತ್ತಿರುವ ಇವರು ಯಾರು? 9ಯೆಹೋವನು ನಿನ್ನನ್ನು ವೈಭವಪಡಿಸಿರುವುದನ್ನು ಕೇಳಿ ತಾರ್ಷೀಷಿನ ಹಡಗುಗಳು, ನಿನ್ನ ದೇವರಾದ ಯೆಹೋವನ ನಾಮಮಹತ್ತಿನ ನಿಧಿಯೂ, ಇಸ್ರಾಯೇಲಿನ ಸದಮಲಸ್ವಾಮಿಯ ಸನ್ನಿಧಿಯ ಸ್ಥಾನಕ್ಕೆ ನಿನ್ನ ಮಕ್ಕಳನ್ನು ಅವರ ಬೆಳ್ಳಿ ಬಂಗಾರಗಳ ಸಮೇತ ದೂರದಿಂದ ತರುವುದರಲ್ಲಿ ಮುಂದಾಗುತ್ತಿವೆ. 10ವಿದೇಶೀಯರು ನಿನ್ನ ಪೌಳಿಗೋಡೆಗಳನ್ನು ಪುನಃ ಕಟ್ಟುವರು, ಅವರ ಅರಸರು ನಿನ್ನನ್ನು ಆರಾಧಿಸುವರು; ನನ್ನ ಕೋಪದಿಂದ ನಿನ್ನನ್ನು ಹೊಡೆದು, ನನ್ನ ಕೃಪೆಯಿಂದ ನಿನ್ನನ್ನು ಕರುಣಿಸಿದ್ದೇನಷ್ಟೆ. 11ಜನಾಂಗಗಳ ಐಶ್ವರ್ಯವನ್ನು ನಿನ್ನಲ್ಲಿಗೆ ತರುತ್ತಿರುವರು. ಅವುಗಳ ಅರಸರು ಮೆರವಣಿಗೆಯಾಗಿ ಬರುತ್ತಿರುವರು; ಇದರಿಂದ ನಿನ್ನ ಬಾಗಿಲುಗಳು ಹಗಲಿರುಳೂ ಮುಚ್ಚದೆ ಸದಾ ತೆರೆದಿರುವವು. 12ನಿನ್ನನ್ನು ಆರಾಧಿಸದ ಜನಾಂಗ ಮತ್ತು ರಾಜ್ಯಗಳು ನಾಶವಾಗುವವು; ಹೌದು, ಆ ಜನಾಂಗಗಳು ಹಾಳಾಗಿ ಹೋಗುವವು. 13ನನ್ನ ಪವಿತ್ರಾಲಯವನ್ನು ಭೂಷಿಸುವುದಕ್ಕಾಗಿ ತುರಾಯಿ, ತಪಸಿ, ತಿಲಕ ಈ ವೃಕ್ಷರೂಪವಾದ ಲೆಬನೋನಿನ ಮಹಿಮೆಯು ನಿನಗಾಗುವುದು; ನನ್ನ ಪಾದಸನ್ನಿಧಿಯ ಮಂದಿರವನ್ನು ವೈಭವಪಡಿಸುವೆನು. 14ನಿನ್ನನ್ನು ಕುಗ್ಗಿಸಿದವರ ಸಂತಾನದವರು ನಿನ್ನ ಬಳಿಗೆ ತಗ್ಗಿಬಗ್ಗಿ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರೂ ನಿನ್ನ ಕಾಲಕೆಳಗೆ ಅಡ್ಡಬಿದ್ದು ನೀನು ಯೆಹೋವನ ಪಟ್ಟಣ, ಇಸ್ರಾಯೇಲಿನ ಸದಮಲಸ್ವಾಮಿಯ ಚೀಯೋನ್ ಎಂದು ಕೊಂಡಾಡುವರು. 15ನಿವಾಸಿಗಳು ತ್ಯಜಿಸಿದ, ದ್ವೇಷಕ್ಕೀಡಾದ, ಯಾರೂ ಹಾದುಹೋಗದ ನಿನಗೆ ನಾನು, ನಿತ್ಯಶ್ರೇಷ್ಠತೆಯನ್ನು ದಯಪಾಲಿಸಿ ನಿನ್ನನ್ನು ತಲತಲಾಂತರದವರೆಗೆ ಉಲ್ಲಾಸಕರವಾಗುವಂತೆ ಮಾಡುವೆನು. 16ನೀನು ಜನಾಂಗಗಳ ಮೊಲೆಕೂಸಾಗುವಿ, ರಾಜರು ನಿನಗೆ ಮೊಲೆಯೂಡಿಸುವರು; ಆಗ ಯೆಹೋವನಾದ ನಾನೇ ನಿನ್ನ ರಕ್ಷಕನು, ನಿನ್ನ ವಿಮೋಚಕನು, ಯಾಕೋಬ್ಯರ ಶೂರನು ಎಂದು ನೀನು ತಿಳಿದುಕೊಳ್ಳುವಿ.

ಸಂಧ್ಯಾ ಪ್ರಾರ್ಥನೆ: ವಾಚನ (ಮೂರನೆಯ ವಾಚನ)

ವಿಮೋ 12:1–11

1ಐಗುಪ್ತ ದೇಶದಲ್ಲಿ ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, 2“ಎಲ್ಲಾ ತಿಂಗಳುಗಳಲ್ಲಿ ಇದೇ ನಿಮಗೆ ಮೊದಲ ತಿಂಗಳಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರುವುದು. 3ಇದರ ವಿಷಯದಲ್ಲಿ ನೀವು ಇಸ್ರಾಯೇಲರ ಸಮೂಹಕ್ಕೆಲ್ಲಾ ಹೀಗೆ ಅಪ್ಪಣೆಮಾಡಬೇಕು, ‘ಈ ತಿಂಗಳಿನ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ತೆಗೆದುಕೊಳ್ಳಬೇಕು. 4ಕುಟುಂಬವು ಚಿಕ್ಕದಾಗಿದ್ದರೆ, ಒಂದು ಕುರಿಮರಿಯನ್ನು ಪೂರ್ಣವಾಗಿ ತಿನ್ನುವುದಕ್ಕೆ ಆಗದೆ ಹೋದ ಪಕ್ಷಕ್ಕೆ ನೆರೆಮನೆಯ ಕುಟುಂಬದವರೊಂದಿಗೆ ಸೇರಿ, ಒಬ್ಬೊಬ್ಬನು ಎಷ್ಟೆಷ್ಟು ತಿನ್ನುವನೆಂದು ಗೊತ್ತುಮಾಡಿಕೊಂಡು ಜನಗಳ ಸಂಖ್ಯಾನುಸಾರ ಮರಿಗಳನ್ನು ತೆಗೆದುಕೊಳ್ಳಲಿ. 5ಆ ಮರಿಯು ಊನವಿಲ್ಲದ ಒಂದು ವರ್ಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ ಅಥವಾ ಆಡುಗಳಿಂದಾಗಲಿ ಅದನ್ನು ತೆಗೆದುಕೊಳ್ಳಬಹುದು. 6ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು, ಆ ದಿನದ ಸಂಜೆ ವೇಳೆಯಲ್ಲಿ ಇಸ್ರಾಯೇಲರ ಸಮೂಹದವರೆಲ್ಲರೂ ಒಟ್ಟಿಗೆ ಸೇರಿ ಅವುಗಳನ್ನು ವಧಿಸಬೇಕು. 7ಅವರು ಅವುಗಳ ರಕ್ತದಲ್ಲಿ ಸ್ವಲ್ಪವನ್ನು ತೆಗೆದು ತಾವು ಆ ಭೋಜನವನ್ನು ಮಾಡುವ ಮನೆಬಾಗಿಲಿನ ಎರಡು ನಿಲುವುಪಟ್ಟಿಗಳಿಗೂ, ಮೇಲಿನ ಪಟ್ಟಿಗೂ ಹಚ್ಚಬೇಕು. 8ಆ ರಾತ್ರಿಯಲ್ಲಿಯೇ ಆ ಮಾಂಸವನ್ನು ಭೋಜನಮಾಡಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಸೊಪ್ಪಿನ ಪಲ್ಯಗಳ ಸಂಗಡ ಊಟಮಾಡಬೇಕು. 9ಅದನ್ನು ಹಸಿಯಾಗಿಯೂ ನೀರಿನಲ್ಲಿ ಬೇಯಿಸಿಯೂ ತಿನ್ನಕೂಡದು. ಅದರ ತಲೆ, ತೊಡೆ, ಹೊಟ್ಟೆ, ಇವುಗಳ ಸಹಿತವಾಗಿ ಬೆಂಕಿಯಲ್ಲೇ ಸುಟ್ಟು ತಿನ್ನಬೇಕು. 10ಮರುದಿನದ ಬೆಳಗಿನವರೆಗೆ ಅದರಲ್ಲಿ ಸ್ವಲ್ಪವನ್ನಾದರೂ ಉಳಿಸಕೂಡದು, ಬೆಳಗಿನವರೆಗೆ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. 11ಆ ಭೋಜನವನ್ನು ಮಾಡಬೇಕಾದ ಕ್ರಮ ಹೇಗೆಂದರೆ: ನೀವು ನಡುವನ್ನು ಕಟ್ಟಿಕೊಂಡು, ಕೆರವನ್ನು ಮೆಟ್ಟಿಕೊಂಡು, ಕೋಲುಹಿಡಿದು, ತ್ವರೆಯಾಗಿ ಮಾಡಬೇಕು. ಇದು ಯೆಹೋವನಿಗೆ ಆಚರಿಸತಕ್ಕ ಪಸ್ಕಹಬ್ಬವು.

ಸಂಧ್ಯಾ ಪ್ರಾರ್ಥನೆ: ವಾಚನ (ನಾಲ್ಕನೆಯ ವಾಚನ)

ಯೋನ 1:1–4:11

1ಯೆಹೋವನು ಅಮಿತ್ತೈಯನ ಮಗನಾದ ಯೋನನಿಗೆ ಹೇಳಿದ್ದೇನೆಂದರೆ, 2“ನೀನು ಇಲ್ಲಿಂದ ಹೊರಟು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಅದನ್ನು ಕಟುವಾಗಿ ಖಂಡಿಸಿ ಹೇಳು, ಏಕೆಂದರೆ ಅಲ್ಲಿರುವ ನಿವಾಸಿಗಳ ದುಷ್ಟತನವು ನನ್ನ ಸನ್ನಿಧಿಗೆ ಮುಟ್ಟಿದೆ” ಎಂದು ಅಪ್ಪಣೆಮಾಡಿದನು. 3ಆದರೆ ಯೋನನು ಯೆಹೋವನ ಸನ್ನಿಧಿಯಿಂದ ತಪ್ಪಿಸಿಕೊಳ್ಳಲು ತಾರ್ಷೀಷಿಗೆ ಓಡಿಹೋಗಬೇಕೆಂದು ಯೋಚಿಸಿ ಹೊರಟು ಯೊಪ್ಪ ಎಂಬ ಊರಿಗೆ ಬಂದು ಅಲ್ಲಿ ತಾರ್ಷೀಷಿಗೆ ಹೊರಡುವ ಹಡಗನ್ನು ಕಂಡು ಪ್ರಯಾಣದ ದರವನ್ನು ಕೊಟ್ಟು ತಾರ್ಷೀಷಿಗೆ ಪ್ರಯಾಣಮಾಡುತ್ತಿದ್ದ ಹಡಗಿನವರೊಡನೆ ಅದನ್ನು ಹತ್ತಿದನು. 4ಆಗ ಯೆಹೋವನು ದೊಡ್ಡ ಬಿರುಗಾಳಿಯನ್ನು ಸಮುದ್ರದ ಮೇಲೆ ಬರಮಾಡಿದನು. ಸಮುದ್ರದಲ್ಲಿ ದೊಡ್ಡ ತುಫಾನು ಎದ್ದು ಹಡಗು ಒಡೆದುಹೋಗುವ ಹಾಗಾಯಿತು. 5ಆಗ ನಾವಿಕರು ಹೆದರಿ ತಮ್ಮತಮ್ಮ ದೇವರುಗಳಿಗೆ ಮೊರೆಯಿಟ್ಟರು. ಹಡಗನ್ನು ಹಗುರ ಮಾಡಲು ಹಡಗಿನಲ್ಲಿರುವ ಸರಕುಗಳನ್ನು ಸಮುದ್ರಕ್ಕೆ ಬಿಸಾಡಿಬಿಟ್ಟರು. ಆದರೆ ಯೋನನು ಹಡಗಿನ ಕೆಳಭಾಗಕ್ಕೆ ಹೋಗಿ ಮಲಗಿ ಗಾಢನಿದ್ರೆ ಮಾಡುತ್ತಿದ್ದನು. 6ಹೀಗಿರಲು ಹಡಗಿನ ನೌಕಾಧಿಕಾರಿ ಅವನ ಬಳಿಗೆ ಬಂದು, “ಇದೇನು, ನೀನು ನಿದ್ದೆಮಾಡುತ್ತಿರುವುದು? ಎದ್ದೇಳು, ನಿನ್ನ ದೇವರಿಗೆ ಮೊರೆಯಿಡು; ಒಂದು ವೇಳೆ ನಿನ್ನ ದೇವರು ನಮ್ಮನ್ನು ರಕ್ಷಿಸಾನು, ನಾವೆಲ್ಲರು ನಾಶವಾಗದೆ ಉಳಿದೇವು” ಎಂದು ಹೇಳಿದನು. 7ಅನಂತರ ನಾವಿಕರೆಲ್ಲರು “ಈ ಕೇಡು ನಮಗೆ ಸಂಭವಿಸಿದ್ದಕ್ಕೆ ಯಾರು ಕಾರಣರೆಂದು ನಮಗೆ ತಿಳಿಯುವ ಹಾಗೆ ಚೀಟು ಹಾಕೋಣ ಬನ್ನಿರಿ” ಎಂಬುದಾಗಿ ಮಾತನಾಡಿಕೊಂಡು ಚೀಟುಹಾಕಲು ಚೀಟು ಯೋನನ ಹೆಸರಿಗೆ ಬಂದಿತು. 8ಆಗ ಅವರು ಯೋನನಿಗೆ ಅಯ್ಯಾ, “ಈ ಕೇಡು ನಮಗೆ ಸಂಭವಿಸಲು ಕಾರಣವೇನು ಎಂಬುದನ್ನು ನೀನೇ ನಮಗೆ ತಿಳಿಸು; ನಿನ್ನ ವೃತ್ತಿ ಏನು? ನೀನು ಎಲ್ಲಿಂದ ಬಂದವನು? ನೀನು ಯಾವ ದೇಶದವನು?, ಯಾವ ಜನಾಂಗದವನು?” ಎಂದು ಅವನನ್ನು ಕೇಳಲು 9ಅವನು ಅವರಿಗೆ “ನಾನು ಇಬ್ರಿಯನು; ಕಡಲನ್ನೂ ಒಣನೆಲವನ್ನೂ ಸೃಷ್ಟಿಸಿದ ಪರಲೋಕದ ದೇವರಾದ ಯೆಹೋವನ ಭಕ್ತನು” ಎಂದು ಹೇಳಿ, 10ನಾನು ಯೆಹೋವನ ಸನ್ನಿಧಿಯಿಂದ ಓಡಿಹೋಗುತ್ತಿದ್ದೇನೆ ಎಂದು ಅವನು ಅವರಿಗೆ ಸೂಚಿಸಿದನು. ಇದನ್ನು ಕೇಳಿ ಅವರು ಬಹಳವಾಗಿ ಹೆದರಿ “ಇದೇನು ನೀನು ಮಾಡಿದ್ದು?” ಎಂದು ಕೇಳಿದರು. 11ಆಗ ಸಮುದ್ರವು ಮತ್ತಷ್ಟು ಅಲ್ಲೋಲಕಲ್ಲೋಲವಾದ ಕಾರಣ ಅವರು ಯೋನನಿಗೆ “ಸಮುದ್ರವು ಶಾಂತವಾಗುವ ಹಾಗೆ ನಿನ್ನನ್ನು ಏನು ಮಾಡೋಣ?” ಎಂದು ಕೇಳಿದರು. 12ಯೋನನು ಅವರಿಗೆ “ನನ್ನನ್ನೆತ್ತಿ ಸಮುದ್ರದಲ್ಲಿ ಹಾಕಿರಿ; ಆಗ ಸಮುದ್ರವು ಶಾಂತವಾಗುವುದು; ಈ ಭೀಕರ ಬಿರುಗಾಳಿ ನಿಮಗೆ ಸಂಭವಿಸಿದ್ದು ನನ್ನ ನಿಮಿತ್ತವೇ ಎಂಬುದು ನನಗೆ ಗೊತ್ತು” ಎಂದು ಉತ್ತರಕೊಟ್ಟನು. 13ನಾವಿಕರು ಅದಕ್ಕೆ ಒಪ್ಪದೆ ದಡಕ್ಕೆ ಹಿಂತಿರುಗಬೇಕೆಂದು ಹುಟ್ಟುಹಾಕುತ್ತಾ ಬಂದರೂ ಸಹ ದಡ ಸೇರಲು ಆಗಲಿಲ್ಲ; ಸಮುದ್ರವು ಇನ್ನೂ ಅಲ್ಲೋಲಕಲ್ಲೋಲವಾಗುತ್ತಲೇ ಇತ್ತು. 14ಹೀಗಿರಲು, ಅವರು ಸಹ ಯೆಹೋವನಿಗೆ ಮೊರೆಯಿಟ್ಟು, “ಯೆಹೋವನೇ, ಈ ಮನುಷ್ಯನ ಪ್ರಾಣನಷ್ಟದಿಂದ ಆಗುವ ಕೇಡು ನಮ್ಮ ಮೇಲೆ ಬಾರದಿರಲಿ; ನಿರಪರಾಧಿಯನ್ನು ಕೊಂದ ದೋಷಕ್ಕೆ ನಮ್ಮನ್ನು ಗುರಿಮಾಡಬೇಡ; ಯೆಹೋವನೇ, ನೀನೇ ನಿನ್ನ ಚಿತ್ತಾನುಸಾರವಾಗಿ ಇದನ್ನು ಮಾಡಿದ್ದಿಯಲ್ಲಾ” ಎಂದು ಬಿನ್ನವಿಸಿದರು. 15ಆನಂತರ ಅವರು ಯೋನನನ್ನು ಎತ್ತಿ ಸಮುದ್ರದಲ್ಲಿ ಹಾಕಿದರು; ಕೂಡಲೆ ಸಮುದ್ರವು ಭೋರ್ಗರೆಯುವುದನ್ನು ನಿಲ್ಲಿಸಿ ಶಾಂತವಾಯಿತು. 16ಇದನ್ನು ನೋಡಿ ಆ ಜನರು ಯೆಹೋವನಿಗೆ ಬಹಳವಾಗಿ ಭಯಪಟ್ಟು, ಆತನಿಗೆ ಯಜ್ಞವನ್ನರ್ಪಿಸಿ ಹರಕೆಗಳನ್ನು ಮಾಡಿಕೊಂಡರು. 17ಆಗ ಯೆಹೋವನು, ಯೋನನನ್ನು ನುಂಗಲು ಒಂದು ದೊಡ್ಡ ಮೀನಿಗೆ ಅಪ್ಪಣೆ ಮಾಡಿದನು; ಯೋನನು ಮೂರು ದಿನಗಳ ಕಾಲ ಹಗಲಿರುಳು ಆ ಮೀನಿನ ಹೊಟ್ಟೆಯೊಳಗೆ ಇದ್ದನು. 2:1ಯೋನನು ಆ ಮೀನಿನ ಹೊಟ್ಟೆಯೊಳಗೆ ಇದ್ದು ಕೊಂಡು ತನ್ನ ದೇವರಾದ ಯೆಹೋವನಿಗೆ ಹೀಗೆ ಪ್ರಾರ್ಥನೆ ಮಾಡಿದನು: 2“ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು; ಆತನು ನನಗೆ ಸದುತ್ತರವನ್ನು ದಯಪಾಲಿಸಿದನು; ಪಾತಾಳದ ಗರ್ಭದೊಳಗಿಂದ ಸಹಾಯಕ್ಕಾಗಿ ಕೂಗಿಕೊಂಡೆನು! ಆಹಾ, ನೀನು ನನ್ನ ಸ್ವರವನ್ನು ಲಾಲಿಸಿದೆ. 3ನನ್ನನ್ನು ಸಮುದ್ರದ ಅಗಾಧಸ್ಥಳದಲ್ಲಿ ಹಾಕಿದ್ದೀಯಲ್ಲಾ; ಪ್ರವಾಹವು ನನ್ನನ್ನು ಸುತ್ತಿಕೊಂಡಿತು; ಲೆಕ್ಕವಿಲ್ಲದ ಸಮುದ್ರದ ಅಲೆಗಳೂ, ತೆರೆಗಳೂ ನನ್ನ ಮೇಲೆ ದಾಟಿ ಹೋದವು 4‘ನಿನ್ನ ಸಾನ್ನಿಧ್ಯದಿಂದ ತಳ್ಳಲ್ಪಟ್ಟಿದ್ದೇನೆ ಎಂದುಕೊಂಡೆನು; ನಾನು ನಿನ್ನ ಪರಿಶುದ್ಧ ಮಂದಿರದ ಕಡೆಗೆ ಪುನಃ ಹೇಗೆ ನೋಡುವೆನು?’ 5ಜಲರಾಶಿಯು ನನ್ನನ್ನು ಮುತ್ತಿ ನನ್ನ ಪ್ರಾಣಕ್ಕೆ ಹಾನಿ ತಂದಿತು, ಮಹಾಸಾಗರವು ನನ್ನನ್ನು ಆವರಿಸಿತು, ಕಡಲಕಳೆಯು ನನ್ನ ತಲೆಯನ್ನು ಸುತ್ತಿಕೊಂಡಿತು. 6ಪರ್ವತಗಳ ತಳಹದಿಗೆ ಇಳಿದುಹೋದೆನು, ಭೂಲೋಕದ ದ್ವಾರಗಳ ಚಿಲಕಗಳು ಎಂದಿಗೂ ತೆಗೆಯದ ಹಾಗೆ ನನ್ನನ್ನು ಬಂಧಿಸಿದವು; ನನ್ನ ದೇವರಾದ ಯೆಹೋವನೇ, ನೀನು ನನ್ನ ಪ್ರಾಣವನ್ನು ಅಧೋಲೋಕದೊಳಗಿನಿಂದ ಉದ್ಧರಿಸಿದ್ದೀ. 7“ನನ್ನ ಆತ್ಮವು ನನ್ನಲ್ಲಿ ಕುಂದಿಹೋದಾಗ ಯೆಹೋವನಾದ ನಿನ್ನನ್ನು ನೆನಪು ಮಾಡಿಕೊಂಡು ಸ್ಮರಿಸಿದೆನು; ನನ್ನ ಬಿನ್ನಹವು ನಿನಗೆ ಮುಟ್ಟಿತು, ಅದು ನಿನ್ನ ಪರಿಶುದ್ಧಾಲಯವನ್ನು ಬಂದು ಸೇರಿತು. 8“ನಿರ್ಜೀವ ವಿಗ್ರಹಗಳನ್ನು ಅವಲಂಬಿಸಿದವರು ತಮ್ಮ ದೇವರ ಕರುಣಾನಿಧಿಯನ್ನು ತೊರೆದುಬಿಡುವರು. 9ಆದರೆ ನಾನು ಸ್ತೋತ್ರ ಧ್ವನಿಯಿಂದ ನಿನಗೆ ಯಜ್ಞವನ್ನರ್ಪಿಸುವೆನು, ನಿನಗೆ ಮಾಡಿಕೊಂಡ ಹರಕೆಯನ್ನು ಸಲ್ಲಿಸುವೆನು. ರಕ್ಷಣೆಯು ಯೆಹೋವನಿಂದಲೇ ಉಂಟಾಗುವುದು.” 10ಆಗ ಯೆಹೋವನು ಮೀನಿಗೆ ಅಪ್ಪಣೆಕೊಡಲು ಅದು ಯೋನನನ್ನು ಸಮುದ್ರದ ದಡದಲ್ಲಿ ಕಾರಿಬಿಟ್ಟಿತು. 3:1ಯೆಹೋವನ ವಾಕ್ಯವು ಯೋನನಿಗೆ ಎರಡನೆಯ ಸಾರಿ ಉಂಟಾಯಿತು. 2ಅದೇನೆಂದರೆ “ನೀನು ಹೊರಟು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಆಜ್ಞಾಪಿಸುವ ಸಂದೇಶವನ್ನು ಸಾರು” ಎಂದು ಹೇಳಿದನು. 3ಆಗ ಯೋನನು ಎದ್ದು ಯೆಹೋವನ ಅಪ್ಪಣೆಯಂತೆ ನಿನೆವೆಗೆ ಹೋದನು. ನಿನೆವೆಯು ಮೂರು ದಿನದ ಪ್ರಯಾಣದಷ್ಟು ಅತಿ ವಿಸ್ತಾರವಾದ ಮಹಾದೊಡ್ಡ ಪಟ್ಟಣವಾಗಿತ್ತು. 4ಯೋನನು ಪಟ್ಟಣವನ್ನು ಪ್ರವೇಶಿಸಿ ಒಂದು ದಿನದಷ್ಟು ದೂರ ಪ್ರಯಾಣಮಾಡಿದ ನಂತರ “ನಲವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವುದು” ಎಂದು ಸಾರತೊಡಗಿದನು. 5ಇದನ್ನು ಕೇಳಿ ನಿನೆವೆಯವರು ದೇವರಲ್ಲಿ ನಂಬಿಕೆಯಿಟ್ಟು ಉಪವಾಸವನ್ನು ಮಾಡಬೇಕೆಂದು ಸಾರಿ ಹೇಳಿದರು; ದೊಡ್ಡವರು ಮೊದಲುಗೊಂಡು ಚಿಕ್ಕವರ ತನಕ ಎಲ್ಲರೂ ಗೋಣಿತಟ್ಟನ್ನು ಸುತ್ತಿಕೊಂಡರು. 6ಆ ಸುದ್ದಿಯು ನಿನೆವೆಯ ಅರಸನಿಗೆ ತಿಳಿಯಲು ಅವನು ಸಿಂಹಾಸನದಿಂದ ಎದ್ದು, ತನ್ನ ನಿಲುವಂಗಿಯನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡನು. 7ಇದಲ್ಲದೆ ಅರಸನು ತನ್ನ ಮತ್ತು ರಾಜ್ಯಾಧಿಕಾರಿಗಳ ಆಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿ ಹೇಳಿದ್ದೇನೆಂದರೆ: “ಜನ, ಪಶು, ಮಂದೆ, ಹಿಂಡು ಇವುಗಳು ಸಹ ಏನೂ ರುಚಿ ನೋಡುವುದಾಗಲೀ, ತಿನ್ನುವುದಾಗಲೀ, ಕುಡಿಯುವುದಾಗಲೀ ಮಾಡಬಾರದು. 8ಜನರಿಗೂ ಪಶುಗಳಿಗೂ ಗೋಣಿತಟ್ಟು ಹೊದಿಕೆಯಾಗಲಿ; ಎಲ್ಲರೂ ದೇವರಿಗೆ ಬಲವಾಗಿ ಮೊರೆಯಿಡಲಿ; ಒಬ್ಬೊಬ್ಬನು ತನ್ನ ತನ್ನ ದುರ್ಮಾರ್ಗಗಳನ್ನೂ, ತಾನು ನಡಿಸುತ್ತಿದ್ದ ಹಿಂಸೆಯನ್ನೂ ತೊರೆದು ಬಿಡಲಿ. 9ದೇವರು ಒಂದು ವೇಳೆ ಮನಮರುಗಿ, ಮನಸ್ಸನ್ನು ಬದಲಾಯಿಸಿಕೊಂಡು ತನ್ನ ಉಗ್ರಕೋಪವನ್ನು ತೊರೆದರೆ, ನಾವು ನಾಶವಾಗದೆ ಉಳಿದೇವು” ಎಂಬುದನ್ನು ನಿನೆವೆಯಲ್ಲೆಲ್ಲಾ ಸಾರಿಸಿದನು. 10ದೇವರು ನಿನೆವೆಯವರ ಕೃತ್ಯಗಳನ್ನು ನೋಡಿ, ಅವರು ತಮ್ಮ ದುರ್ಮಾರ್ಗತನದಿಂದ ತಿರುಗಿಕೊಂಡರೆಂದು ತಿಳಿದು ತನ್ನ ಮನಸ್ಸನ್ನು ಬದಲಾಯಿಸಿ, ತಾನು ಅವರಿಗೆ ಮಾಡುವೆನೆಂದು ಪ್ರಕಟಿಸಿದ್ದ ಕೇಡನ್ನು ಮಾಡದೆ ಬಿಟ್ಟನು. 4:1ಇದರಿಂದ ಯೋನನಿಗೆ ಬಹು ಬೇಸರವಾಯಿತು; ಅವನು ಬಹಳ ಸಿಟ್ಟುಗೊಂಡನು. 2ಆಗ ಅವನು ಯೆಹೋವನಿಗೆ ಮೊರೆಯಿಟ್ಟನು, “ಯೆಹೋವನೇ, ಲಾಲಿಸು, ನಾನು ಸ್ವದೇಶದಲ್ಲಿರುವಾಗಲೇ ಹೀಗಾಗುವುದೆಂದು ಹೇಳಿದೆನಷ್ಟೆ; ನೀನು ದಯೆಯೂ, ಕನಿಕರವೂ, ದೀರ್ಘಶಾಂತಿಯೂ, ಮಹಾಕೃಪೆಯೂ ಉಳ್ಳ ದೇವರು, ಮಾಡಬೇಕೆಂದಿದ್ದ ಕೇಡಿಗೆ ಮನಮರುಗುವವನು ಎಂದು ನಾನು ತಿಳಿದೇ, ತಾರ್ಷೀಷಿಗೆ ಓಡಿಹೋಗಲು ಪ್ರಯತ್ನಿಸಿದ್ದು. 3ಆದುದರಿಂದ ಯೆಹೋವನೇ, ನನ್ನ ಪ್ರಾಣವನ್ನು ತೆಗೆದುಕೋ; ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು” ಎಂದು ವಿಜ್ಞಾಪಿಸಿಕೊಂಡನು. 4ಅದಕ್ಕೆ ಯೆಹೋವನು, “ನೀನು ಸಿಟ್ಟುಗೊಳ್ಳುವುದು ಸರಿಯೋ?” ಎಂದು ಕೇಳಿದನು. 5ಅನಂತರ ಯೋನನು ಪಟ್ಟಣವನ್ನು ಬಿಟ್ಟು ಅದರ ಮೂಡಣದಲ್ಲಿ ಒಂದು ಗುಡಿಸಲನ್ನು ಮಾಡಿಕೊಂಡು ಪಟ್ಟಣವು ಏನಾಗುವುದೋ ಎಂದು ನೋಡುತ್ತಾ ಅದರ ನೆರಳಿನಲ್ಲಿ ಕುಳಿತುಕೊಂಡಿದ್ದನು. 6ಆಗ ದೇವರಾದ ಯೆಹೋವನು ಒಂದು ಸೋರೆಗಿಡವನ್ನು ಬೆಳೆಯುವಂತೆ ಮಾಡಿ ಅದು ಯೋನನ ತಲೆಗೆ ನೆರಳಾಗಿ ಅವನ ಮನೋವ್ಯಥೆಗೆ ಸಮಾಧಾನ ಬರುವಂತೆ ಮಾಡಿದನು. ಇದರಿಂದ ಯೋನನಿಗೆ ಬಹು ಸಂತೋಷವಾಯಿತು. 7ಮಾರನೆಯ ದಿನ ಮುಂಜಾನೆ ದೇವರು ಒಂದು ಹುಳಕ್ಕೆ ಆ ಸೋರೆಗಿಡವನ್ನು ಕೊರೆಯಲು ಅಪ್ಪಣೆ ಮಾಡಿದನು. ಆ ಗಿಡವು ಒಣಗಿಹೋಯಿತು. 8ಸೂರ್ಯನು ಉದಯಿಸಿದಾಗ ದೇವರು ಬಿಸಿಯಾದ ಮೂಡಣ ಗಾಳಿಯನ್ನು ಏರ್ಪಡಿಸಿದನು; ಬಿಸಿಲು ಯೋನನ ತಲೆಗೆ ಹೊಡೆಯಲು ಅವನು ಮೂರ್ಛೆಹೋಗುವವನಾಗಿ “ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು” ಎಂದು ಸಾಯಲು ಬಯಸಿದನು. 9ಆಗ ದೇವರು ಯೋನನಿಗೆ, “ನೀನು ಸೋರೆಗಿಡ ಒಣಗಿದ್ದಕ್ಕಾಗಿ ಸಿಟ್ಟುಗೊಳ್ಳುವುದು ಸರಿಯೋ?” ಎಂದು ಕೇಳಲು ಯೋನನು “ಹೌದು, ನಾನು ಸಾಯುವಷ್ಟು ಕಾಲ ಸಿಟ್ಟುಗೊಳ್ಳುವುದು ಸರಿಯೇ” ಎಂದು ಉತ್ತರಕೊಟ್ಟನು. 10ಅದಕ್ಕೆ ಯೆಹೋವನು “ನೀನು ಆ ಸೋರೆಗಿಡಕ್ಕಾಗಿ ಕಷ್ಟಪಡಲಿಲ್ಲ, ಬೆಳೆಯಿಸಲಿಲ್ಲ; ಅದು ಒಂದು ರಾತ್ರಿಯಲ್ಲಿ ಹುಟ್ಟಿ ಒಂದು ರಾತ್ರಿಯಲ್ಲಿ ನಾಶವಾಯಿತು; 11ಇಂಥ ಗಿಡಕ್ಕಾಗಿ ನೀನು ಕನಿಕರಪಡುವಾಗ ಎಡಗೈ ಬಲಗೈ ತಿಳಿಯದ ಒಂದು ಲಕ್ಷದ ಇಪ್ಪತ್ತು ಸಾವಿರ ಜನರು, ಅಪಾರ ಪಶುಪ್ರಾಣಿಗಳೂ ಇರುವ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರಪಡಬಾರದೋ?” ಎಂದನು.

ಸಂಧ್ಯಾ ಪ್ರಾರ್ಥನೆ: ವಾಚನ (ಐದನೆಯ ವಾಚನ)

ಯೆಹೋ 5:10–15

10ಇಸ್ರಾಯೇಲ್ಯರು ಗಿಲ್ಗಾಲಿನಲ್ಲಿ ತಂಗಿದ್ದಾಗ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಯೆರಿಕೋವಿನ ಬೈಲಿನಲ್ಲಿ ಪಸ್ಕಹಬ್ಬವನ್ನು ಆಚರಿಸಿದರು. 11ಮರುದಿನದಿಂದ ಆ ದೇಶದ ಧಾನ್ಯವನ್ನು ಊಟಕ್ಕೆ ಉಪಯೋಗಿಸಲು ತೊಡಗಿದರು. ಹೇಗೆಂದರೆ ಅದೇ ಪಸ್ಕಹಬ್ಬದ ದಿನದಲ್ಲಿ ಅವರು ಹುಳಿಯಿಲ್ಲದ ರೊಟ್ಟಿಗಳನ್ನೂ, ಸುಟ್ಟ ತೆನೆಗಳನ್ನೂ ತಿಂದರು. 12ಆ ದೇಶದ ಹುಟ್ಟುವಳಿಯನ್ನು ಊಟಮಾಡಿದ ಮರುದಿನವೇ ಮನ್ನವು ನಿಂತುಹೋಯಿತು. ಅದು ಅವರಿಗೆ ತಿರುಗಿ ಸಿಕ್ಕಲೇ ಇಲ್ಲ. ಇಸ್ರಾಯೇಲ್ಯರು ಆ ವರ್ಷವೆಲ್ಲ ಕಾನಾನ್ ದೇಶದ ಉತ್ಪನ್ನವನ್ನೇ ಅನುಭವಿಸಿದರು. 13ಯೆಹೋಶುವನು ಯೆರಿಕೋವಿನ ಹತ್ತಿರದಲ್ಲಿ ಇದ್ದಾಗ ಒಮ್ಮೆ ತನ್ನ ಕಣ್ಣೆತ್ತಿ ನೋಡಲು ಒಬ್ಬ ಮನುಷ್ಯನು ಹಿರಿದ ಕತ್ತಿಯನ್ನು ಕೈಯಲ್ಲಿ ಹಿಡಿದು ತನ್ನೆದುರಿನಲ್ಲಿ ನಿಂತಿರುವುದನ್ನು ಕಂಡನು. ಯೆಹೋಶುವನು ಅವನ ಸಮೀಪಕ್ಕೆ ಹೋಗಿ “ನೀನು ನಮ್ಮವನೋ ಅಥವಾ ಶತ್ರು ಪಕ್ಷದವನೋ?” ಎಂದು ಕೇಳಲು 14ಆ ಮನುಷ್ಯನು “ನಾನು ಅಂಥವನಲ್ಲ; ಯೆಹೋವನ ಸೇನಾಧಿಪತಿ; ಈಗಲೇ ಬಂದಿದ್ದೇನೆ” ಎಂದು ಉತ್ತರಿಸಿದನು. ಆಗ ಯೆಹೋಶುವನು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ “ಒಡೆಯಾ, ನಿಮ್ಮ ದಾಸನಾದ ನನಗೆ ಏನು ಆಜ್ಞಾಪಿಸಬೇಕೆಂದಿದ್ದೀರಿ?” ಅನ್ನಲು 15ಯೆಹೋವನ ಸೇನಾಧಿಪತಿಯು “ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು, ಏಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧವಾದದ್ದು” ಎಂದು ಹೇಳಿದನು. ಯೆಹೋಶುವನು ಹಾಗೆಯೇ ಮಾಡಿದನು.

ಸಂಧ್ಯಾ ಪ್ರಾರ್ಥನೆ: ವಾಚನ (ಆರನೆಯ ವಾಚನ)

ವಿಮೋ 13:20–15:19

20ಅವರು ಸುಕ್ಕೋತಿನಿಂದ ಪ್ರಯಾಣ ಮಾಡಿ ಮರಳುಗಾಡಿನ ಅಂಚಿನಲ್ಲಿರುವ ಏತಾಮಿನಲ್ಲಿ ಪಾಳೆಯಮಾಡಿ ಇಳಿದುಕೊಂಡರು. 21ಯೆಹೋವನು ಹಗಲು ಹೊತ್ತಿನಲ್ಲಿ ದಾರಿತೋರಿಸುವುದಕ್ಕೆ ಮೇಘಸ್ತಂಭದಲ್ಲಿಯೂ, ರಾತ್ರಿವೇಳೆಯಲ್ಲಿ ಬೆಳಕುಕೊಡುವುದಕ್ಕೆ ಅಗ್ನಿಸ್ತಂಭದಲ್ಲಿಯೂ ಇದ್ದು ಅವನ್ನು ನಡೆಸುತಿದ್ದನು. ಈ ರೀತಿಯಲ್ಲಿ ಅವರು ಹಗಲಿರುಳು ಪ್ರಯಾಣಮಾಡಿದರು. 22ಹಗಲಿನಲ್ಲಿ ಮೇಘಸ್ತಂಭವಾಗಿ, ರಾತ್ರಿಯಲ್ಲಿ ಅಗ್ನಿಸ್ತಂಭವಾಗಿ ಜನರನ್ನು ಬಿಟ್ಟು ಹೋಗದೆ ಅಲ್ಲಿಯೇ ಇರುತ್ತಿದ್ದನು. 14:1ಯೆಹೋವನು ಮೋಶೆಯ ಸಂಗಡ ಮಾತನಾಡಿ 2“ಇಸ್ರಾಯೇಲರು ಹಿಂದಿರುಗಿ ಹೋಗಿ ಪೀಹಹೀರೋತಿನ ಪೂರ್ವಕಡೆಯಲ್ಲಿ ಮಿಗ್ದೋಲಿಗೂ ಕೆಂಪು ಸಮುದ್ರಕ್ಕೂ ನಡುವೆ ಬಾಳ್ಚೆಫೋನಿಗೆ ಎದುರಾಗಿ ಇಳಿದುಕೊಳ್ಳಬೇಕೆಂದು ಅವರಿಗೆ ಹೇಳು. ಅದರ ಎದುರಾಗಿಯೇ ಸಮುದ್ರದ ಬಳಿಯಲ್ಲೇ ಅವರು ಇಳಿದುಕೊಳ್ಳಬೇಕು. 3ಫರೋಹನು ಅದನ್ನು ಕಂಡು ಇಸ್ರಾಯೇಲರನ್ನು ಕುರಿತು, ‘ಅವರಿಗೆ ದಾರಿತಪ್ಪಿದೆ, ಎಲ್ಲಾ ಕಡೆಯಲ್ಲಿಯೂ ಮರುಭೂಮಿ ಅವರನ್ನು ಸುತ್ತುವರಿದಿದೆ’ ಎಂದು ಅಂದುಕೊಳ್ಳುವನು. 4ನಾನು ಫರೋಹನ ಹೃದಯವನ್ನು ಕಠಿಣಪಡಿಸುವೆನು. ಆದುದರಿಂದ ಅವನು ಅವರನ್ನು ಬೆನ್ನಟ್ಟಿ ಬರುವನು. ಆಗ ನಾನು ಫರೋಹನಲ್ಲಿಯೂ, ಅವನ ಸೈನ್ಯದಲ್ಲಿಯೂ ಮಹಿಮೆಗೊಳ್ಳುವೆನು. ‘ನಾನೇ ಯೆಹೋವನು’ ಎಂದು ಐಗುಪ್ತ್ಯರಿಗೆ ತಿಳಿದು ಬರುವುದು” ಎಂದು ಹೇಳಿದನು. ಯೆಹೋವನು ಆಜ್ಞಾಪಿಸಿದಂತೆಯೇ ಇಸ್ರಾಯೇಲರು ನಡೆದುಕೊಂಡರು. 5ಇಸ್ರಾಯೇಲರು ಓಡಿಹೋದರೆಂಬ ವರ್ತಮಾನವು ಐಗುಪ್ತದ ಅರಸನಾದ ಫರೋಹನಿಗೆ ತಿಳಿದುಬಂದಾಗ, ಅವರ ವಿಷಯದಲ್ಲಿ ಫರೋಹನ ಮತ್ತು ಅವನ ಪರಿವಾರದವರ ಹೃದಯವು ಅವರಿಗೆ ವಿರುದ್ಧವಾಗಿ ಕಠಿಣಗೊಂಡಿತು. ಅವರು, “ಇದೇನು ನಾವು ಮಾಡಿದ್ದು? ನಮಗೆ ದಾಸರಾಗಿದ್ದ ಇಸ್ರಾಯೇಲರನ್ನು ಹೊರಟು ಹೋಗುವುದಕ್ಕೆ ಬಿಟ್ಟೆವಲ್ಲಾ” ಎಂದುಕೊಂಡರು. 6ಆಗ ಫರೋಹನು ತನ್ನ ರಥಬಲವನ್ನು ಸಿದ್ಧಪಡಿಸಿಕೊಂಡು ತನ್ನ ಭಟರೊಡನೆ ಹೊರಟನು. 7ಶ್ರೇಷ್ಠವಾದ ಆರುನೂರು ರಥಗಳನ್ನೂ, ಐಗುಪ್ತ ದೇಶದ ಎಲ್ಲಾ ರಥಗಳನ್ನೂ ತೆಗೆದುಕೊಂಡು ಬೆನ್ನಟ್ಟಿ ಹೋದನು. ಆ ಎಲ್ಲಾ ರಥಗಳಲ್ಲಿ ಅಧಿಪತಿಗಳನ್ನೂ ಕರೆಸಿ ಕೊಂಡನು. 8ಯೆಹೋವನು ಐಗುಪ್ತ ದೇಶದ ಅರಸನಾದ ಫರೋಹನ ಹೃದಯವನ್ನು ಕಠಿಣಪಡಿಸಿದ್ದರಿಂದ ಅವನು ಇಸ್ರಾಯೇಲರನ್ನು ಬೆನ್ನಟ್ಟಿಹೋದನು. ಆದರೆ ಇಸ್ರಾಯೇಲರು ಯುದ್ಧಸನ್ನದ್ಧರಾಗಿ ಹೊರಟು ಬಂದಿದ್ದರು. 9ಐಗುಪ್ತ್ಯರು ಅಂದರೆ ಫರೋಹನ ಕುದುರೆಗಳೂ, ರಥಗಳೂ, ಅವನ ರಾಹುತರೂ, ಸೈನ್ಯದವರೆಲ್ಲರೂ ಅವರ ಹಿಂದೆ ಹೊರಟು ಇಸ್ರಾಯೇಲರು ಪೀಹಹೀರೋತಿನ ಹತ್ತಿರ ಬಾಳ್ಚೆಫೋನಿನ ಎದುರಾಗಿ ಸಮುದ್ರ ತೀರದಲ್ಲಿ ಇಳಿದುಕೊಳ್ಳುತ್ತಿರುವಾಗಲೇ ಅವರ ಸಮೀಪಕ್ಕೆ ಬಂದರು. 10ಫರೋಹನು ಸಮೀಪಿಸುತ್ತಿರುವಾಗ ಇಸ್ರಾಯೇಲರು ಕಣ್ಣೆತ್ತಿ ತಮ್ಮ ಹಿಂದೆ ಹೊರಟು ಬಂದಿದ್ದ ಐಗುಪ್ತ್ಯರನ್ನು ಕಂಡು, ಬಹಳ ಭಯಪಟ್ಟವರಾಗಿ ಯೆಹೋವನಿಗೆ ಮೊರೆಯಿಟ್ಟರು. 11ಅವರು ಮೋಶೆಗೆ, “ಐಗುಪ್ತ ದೇಶದಲ್ಲಿ ಸಮಾಧಿಗಳಿರಲಿಲ್ಲವೆಂದು ಮರುಭೂಮಿಯಲ್ಲಿ ಸಾಯಲಿ ಎಂದು ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದೆಯೋ? ಯಾಕೆ ನೀನು ನಮಗೆ ಈ ರೀತಿಮಾಡಿ ಐಗುಪ್ತ ದೇಶದಿಂದ ಕರೆದುಕೊಂಡು ಬಂದೆ? 12ನಾವು ಐಗುಪ್ತ ದೇಶದಲ್ಲಿರುವಾಗಲೇ, ‘ನೀನು ನಮ್ಮ ಗೊಡವೆಗೆ ಬರಬೇಡ. ನಾವು ಐಗುಪ್ತ್ಯರಿಗೆ ದಾಸರಾಗಿಯೇ ಇರುವೆವು’ ಎಂಬುದಾಗಿ ನಿನಗೆ ಹೇಳಲಿಲ್ಲವೇ. ನಾವು ಈ ಮರುಭೂಮಿಯಲ್ಲಿ ಸಾಯುವುದಕ್ಕಿಂತ ಐಗುಪ್ತ್ಯರಿಗೆ ದಾಸರಾಗಿರುವುದೇ ಮೇಲಲ್ಲವೇ” ಎಂದು ಹೇಳಿದರು. 13ಆದರೆ ಮೋಶೆ ಆ ಜನರಿಗೆ, “ನೀವು ಅಂಜಬೇಡಿರಿ. ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವುದಿಲ್ಲ. 14ಯೆಹೋವನೇ ನಿಮಗಾಗಿ ಯುದ್ಧಮಾಡುವನು. ನೀವಂತು ಸುಮ್ಮನೇ ನಿಂತುಕೊಂಡಿರಿ” ಎಂದು ಹೇಳಿದನು. 15ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ನೀನು ನನಗೆ ಮೊರೆಯಿಡುವುದೇನು? ಮುಂದಕ್ಕೆ ಹೊರಡಬೇಕೆಂದು ಇಸ್ರಾಯೇಲರಿಗೆ ಹೇಳು. 16ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಕೈಚಾಚಿ ಅದನ್ನು ವಿಭಾಗಿಸು, ಆಗ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ನಡೆದುಕೊಂಡು ಹೋಗುವರು. 17ನಾನಂತೂ ಐಗುಪ್ತ್ಯರ ಹೃದಯಗಳನ್ನು ಕಠಿಣಪಡಿಸುವೆನು. ಅವರು ಇವರನ್ನು ಹಿಂದಟ್ಟುವರು. ಆಗ ನಾನು ಫರೋಹನ ಮೇಲೆಯೂ, ಅವನ ಸಮಸ್ತ ಸೈನ್ಯದವರ ಮೇಲೆಯೂ, ರಥಗಳ ಮೇಲೆಯೂ ಮತ್ತು ಕುದುರೆಗಳ ಮೇಲೆಯೂ ಪ್ರಖ್ಯಾತಿಗೊಳ್ಳುವೆನು. 18ನಾನು ಫರೋಹನನಲ್ಲಿಯೂ ಅವನ ರಥಗಳಲ್ಲಿಯೂ, ಕುದುರೆಗಳಲ್ಲಿಯೂ ಪ್ರಖ್ಯಾತಿ ಹೊಂದಿದ ನಂತರ ನಾನೇ ಯೆಹೋವನು ಎಂಬುದನ್ನು ಐಗುಪ್ತ್ಯರು ತಿಳಿದುಕೊಳ್ಳುವರು” ಎಂದನು. 19ಆಗ ಇಸ್ರಾಯೇಲರ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದಕ್ಕೆ ಬಂದನು. ಅವರ ಮುಂದಾಗಿ ಹೋಗುತ್ತಿದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು. 20ಆ ಮೇಘಸ್ತಂಭವು ಐಗುಪ್ತ್ಯರ ಪಾಳೆಯಕ್ಕೂ, ಇಸ್ರಾಯೇಲರ ಪಾಳೆಯಕ್ಕೂ ನಡುವೆ ಬಂದಿತು. ಅದು ಐಗುಪ್ತ್ಯರಿಗೆ ಕತ್ತಲನ್ನೂ, ಇಸ್ರಾಯೇಲರಿಗೆ ರಾತ್ರಿಯಲ್ಲಿ ಬೆಳಕನ್ನು ಕೊಟ್ಟಿದ್ದರಿಂದ ಆ ರಾತ್ರಿಯೆಲ್ಲಾ ಒಬ್ಬರ ಹತ್ತಿರಕ್ಕೆ ಒಬ್ಬರು ಬರಲಾಗಲಿಲ್ಲ. 21ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ, ಯೆಹೋವನು ಆ ರಾತ್ರಿಯೆಲ್ಲಾ ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿಯನ್ನು ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದು ಕಡೆಗೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದನು. ನೀರು ಇಬ್ಭಾಗವಾಯಿತು. 22ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲಿ ನಡೆದುಹೋದರು. ನೀರು ಅವರ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತೆ ನಿಂತುಕೊಂಡಿತು. 23ಐಗುಪ್ತ್ಯರೂ ಅಂದರೆ ಫರೋಹನ ಕುದುರೆಗಳೂ, ರಥಗಳೂ, ರಾಹುತರೂ ಅವರನ್ನು ಬೆನ್ನಟ್ಟುವವರಾಗಿ ಅವರ ಹಿಂದೆಯೇ ಸಮುದ್ರದೊಳಗೆ ಬಂದರು. 24ಬೆಳಗಿನ ಜಾವದಲ್ಲಿ ಯೆಹೋವನು ಆ ಅಗ್ನಿ ಸ್ತಂಭ ಮತ್ತು ಮೇಘ ಸ್ತಂಭದೊಳಗಿನಿಂದ ಐಗುಪ್ತ್ಯರ ದಂಡಿನ ಕಡೆಗೆ ನೋಡಿ ಅವರಲ್ಲಿ ಗಲಿಬಿಲಿಯನ್ನು ಉಂಟುಮಾಡಿದನು. 25ಯೆಹೋವನು ಅವರ ರಥಗಳ ಚಕ್ರದ ಕೀಲುಗಳಲ್ಲಿ ವ್ಯತ್ಯಾಸ ಮಾಡಿಬಿಟ್ಟದ್ದರಿಂದ ಐಗುಪ್ತರು ಬಹು ಕಷ್ಟದಿಂದ ರಥಗಳನ್ನು ಸಾಗಿಸಿಕೊಂಡು ಹೋಗಬೇಕಾಯಿತು. ಆಗ ಐಗುಪ್ತ್ಯರು, “ನಾವು ಇಸ್ರಾಯೇಲರ ಮುಂದೆ ನಿಲ್ಲಲಾರೆವು, ಓಡಿ ಹೋಗೋಣ, ಯೆಹೋವನು ಅವರಿಗೋಸ್ಕರ ನಮಗೆ ವಿರೋಧವಾಗಿ ಯುದ್ಧಮಾಡುತ್ತಿದ್ದಾನೆ” ಎಂದು ಹೇಳಿಕೊಂಡರು. 26ಅಷ್ಟರಲ್ಲಿ ಯೆಹೋವನು ಮೋಶೆಗೆ, “ಸಮುದ್ರದ ಮೇಲೆ ನಿನ್ನ ಕೈಚಾಚು, ಆಗ ಅದರ ನೀರು ಮೊದಲಿನಂತೆ ಬಂದು ಐಗುಪ್ತ್ಯರನ್ನೂ, ಅವರ ರಥಗಳನ್ನೂ, ರಾಹುತರನ್ನೂ ಮುಳುಗಿಸುವುದು” ಎಂದು ಹೇಳಿದನು. 27ಮೋಶೆ ಸಮುದ್ರದ ಮೇಲೆ ಕೈಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿದ್ದಂತೆಯೇ ತುಂಬಿಕೊಂಡಿತು. ಐಗುಪ್ತ್ಯರು ಓಡಿಹೋಗುತ್ತಾ ಅದರ ಎದುರಾಗಿಯೇ ಬಂದರು. ಹೀಗೆ ಯೆಹೋವನು ಐಗುಪ್ತ್ಯರನ್ನು ಸಮುದ್ರದೊಳಗೆ ತಳ್ಳಿಬಿಟ್ಟನು. 28ನೀರು ಮೊದಲಿನಂತೆ ಬಂದು ಆ ರಥಗಳನ್ನೂ, ರಾಹುತರನ್ನೂ, ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನೂ ಮುಳುಗಿಸಿಬಿಟ್ಟಿತ್ತು, ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ. 29ಇಸ್ರಾಯೇಲರಾದರೋ, ಸಮುದ್ರದೊಳಗೆ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತ್ತು. 30ಆ ದಿನದಲ್ಲಿ ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತ್ಯರ ಕೈಯಿಂದ ರಕ್ಷಿಸಿದನು. ಐಗುಪ್ತ್ಯರು ಸತ್ತು ಸಮುದ್ರ ತೀರದಲ್ಲಿ ಬಿದ್ದಿರುವುದನ್ನು ಇಸ್ರಾಯೇಲರು ನೋಡಿದರು. 31ಯೆಹೋವನು ಐಗುಪ್ತ್ಯರಲ್ಲಿ ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಾಯೇಲರು ನೋಡಿ ಯೆಹೋವನಿಗೆ ಭಯಪಟ್ಟು ಆತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯನ್ನಿಟ್ಟರು. 15:1ಆಗ ಮೋಶೆಯೂ, ಇಸ್ರಾಯೇಲರೂ ಯೆಹೋವನನ್ನು ಸ್ತುತಿಸುವುದಕ್ಕಾಗಿ ಈ ಕೀರ್ತನೆಯನ್ನು ಹಾಡಿದರು: “ಯೆಹೋವನಿಗೆ ಸ್ತೋತ್ರ ಗಾನಮಾಡೋಣ; ಆತನು ಮಹಾಜಯಶಾಲಿಯಾದವನು. ಕುದುರೆಗಳನ್ನು ಮತ್ತು ರಾಹುತರನ್ನು ಸಮುದ್ರದಲ್ಲಿ ಕೆಡವಿ ನಾಶಮಾಡಿದ್ದಾನೆ. 2ನನ್ನ ಬಲವೂ, ಕೀರ್ತನೆಯೂ ಯಾಹುವೇ. ಆತನಿಂದ ನನಗೆ ರಕ್ಷಣೆ ಉಂಟಾಯಿತು. ನಮ್ಮ ದೇವರು ಆತನೇ, ಆತನನ್ನು ಸ್ತುತಿಸುವೆನು, ನಮ್ಮ ಪೂರ್ವಿಕರ ದೇವರು ಆತನೇ, ಆತನ ಮಹಿಮೆಯನ್ನು ಪ್ರಖ್ಯಾತಿಪಡಿಸುವೆವು. 3ಯೆಹೋವನು ಯುದ್ಧವೀರನು; ಯೆಹೋವ ಎಂಬುದು ಆತನ ನಾಮವಾಗಿದೆ. 4ಆತನು ಫರೋಹನ ರಥಗಳನ್ನೂ, ಸ್ಯೆನಿಕರನ್ನೂ ಸಮುದ್ರದಲ್ಲಿ ಕೆಡವಿಹಾಕಿದನು. ಫರೋಹನ ಶ್ರೇಷ್ಠ ವೀರರನ್ನು ಕೆಂಪುಸಮುದ್ರದಲ್ಲಿ ಮುಳುಗಿಸಿ ಬಿಟ್ಟನು. 5ಆಳವಾದ ಸಾಗರವು ಅವರನ್ನು ಮುಚ್ಚಿಬಿಟ್ಟಿತು. ಅವರು ಕಲ್ಲಿನಂತೆ ಸಮುದ್ರದ ತಳವನ್ನು ಸೇರಿದರು. 6ಯೆಹೋವನೇ, ನಿನ್ನ ಬಲಗೈಯಲ್ಲಿರುವ ಶಕ್ತಿ ಎಷ್ಟೋ ಮಹಿಮೆಯುಳ್ಳದ್ದಾಗಿದೆ. ಯೆಹೋವನೇ, ನಿನ್ನ ಬಲಗೈ ಶತ್ರುಗಳನ್ನು ಪುಡಿಪುಡಿಮಾಡಿಬಿಡುತ್ತದೆ. 7ನೀನು ಅತ್ಯಧಿಕ ಮಹತ್ವವುಳ್ಳವನಾಗಿ ನಿನ್ನೆದುರಿಗೆ ನಿಲ್ಲುವವರನ್ನು ಕೆಡವಿಬಿಟ್ಟಿರುವೆ. ನಿನ್ನ ಕೋಪಾಗ್ನಿಯು ಹೊರಟು ಅವರನ್ನು ಒಣಗಿದ ಹುಲ್ಲನ್ನೋ ಎಂಬಂತೆ ಸುಟ್ಟು ಭಸ್ಮಮಾಡಿ ಬಿಟ್ಟಿದೆ. 8ನಿನ್ನ ಮೂಗಿನ ಶ್ವಾಸದಿಂದ ಸಮುದ್ರದ ನೀರು ಒಟ್ಟುಗೂಡಿದವು; ಪ್ರವಾಹವು ಗೋಡೆಯೋಪಾದಿಯಲ್ಲಿ ನಿಂತುಕೊಂಡಿತು; ಸಾಗರದಾಳದೊಳಗಿನ ನೀರು ಗಟ್ಟಿಯಾಯಿತು. 9ಶತ್ರುವು, ‘ನಾವು ಇವರನ್ನು ಹಿಂದಟ್ಟಿ ಹಿಡಿಯುವೆವು, ಅವರ ಸೊತ್ತನ್ನು ಅಪಹರಿಸಿ ಹಂಚಿಕೊಳ್ಳುವೆವು; ಅವರಲ್ಲಿ ನಮ್ಮ ಬಯಕೆಯನ್ನು ತೀರಿಸಿಕೊಳ್ಳುವೆವು. ನಾವು ಖಡ್ಗವನ್ನು ಹಿಡಿದು; ಶಕ್ತಿಯಿಂದ ಅವರನ್ನು ಸಂಹಾರಮಾಡುವೆವು’ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದರು. 10ಆದರೆ ನೀನು ಗಾಳಿಯನ್ನು ಊದಿದಾಗ, ಸಮುದ್ರವು ಅವರನ್ನು ಮುಚ್ಚಿಕೊಂಡಿತು; ಅವರು ಮಹಾಸಾಗರದೊಳಗೆ ಸೀಸದ ಗುಂಡಿನಂತೆ ಮುಳುಗಿಹೋದರು. 11ಯೆಹೋವನೇ, ದೇವರುಗಳಲ್ಲಿ ನಿನಗೆ ಸಮಾನರು ಯಾರು? ನಿನ್ನ ಹಾಗೆ ಪರಿಶುದ್ಧತ್ವದಲ್ಲಿ ಸರ್ವೋತ್ತಮನು ಮಹಿಮೆ ಹೊಂದಿದವನು, ಭಯಂಕರನೂ, ಅದ್ಭುತ ಕೃತ್ಯಗಳನ್ನು ನಡಿಸುವವನೂ ಆಗಿರುವ ನಿನಗೆ ಸಮಾನರು ಯಾರಿದ್ದಾರೆ? 12ನೀನು ನಿನ್ನ ಬಲಗೈಯನ್ನು ಚಾಚಿದಾಗ, ಭೂಮಿಯು ಬಾಯ್ದೆರೆದು ಶತ್ರುಗಳನ್ನು ನುಂಗಿಬಿಟ್ಟಿತಲ್ಲಾ. 13ನಿನ್ನ ಒಡಂಬಡಿಕೆಯ ನಂಬಿಗಸ್ತಿಕೆಯಲ್ಲಿ ನೀನು ನಿನ್ನ ಪ್ರಜೆಯನ್ನು ಬಿಡುಗಡೆ ಮಾಡಿರುವೆ. ನಿನ್ನ ಶಕ್ತಿಯಿಂದ ಅವರನ್ನು ನೀನು ವಾಸಮಾಡುವ ಪರಿಶುದ್ಧ ನಿವಾಸಕ್ಕೆ ನಡೆಸಿರುವೆ. 14ಜನಾಂಗಗಳು ಇದನ್ನು ಕೇಳಿ ನಡುಗುವರು. ಫಿಲಿಷ್ಟಿಯದಲ್ಲಿ ವಾಸಿಸುವವರು ಭಯಭೀತರಾಗುವರು. 15ಎದೋಮ್ಯರ ಪ್ರಭುಗಳು ದಿಗ್ಭ್ರಮೆಗೊಳ್ಳುವರು; ಮೋವಾಬ್ಯರ ಸೈನಿಕರು ನಡುಗುವರು; ಕಾನಾನಿನ ನಿವಾಸಿಗಳೆಲ್ಲರೂ ಕರಗಿ ಹೋಗುವರು. 16ಭಯವೂ, ಹೆದರಿಕೆಯೂ, ಅವರಿಗುಂಟಾಗುವುದು. ನಿನ್ನ ಭುಜಬಲದ ಶಕ್ತಿಯಿಂದ ಅವರು ಕಲ್ಲಿನಂತೆ ಸ್ತಬ್ಧರಾಗುವರು. ಅಷ್ಟರಲ್ಲಿ ಯೆಹೋವನೇ, ನೀನು ಕಾಪಾಡಿದ ನಿನ್ನ ಪ್ರಜೆಗಳು ದಾಟಿ ಹೋಗಿ ದೇಶವನ್ನು ಸೇರುವರು. 17ನೀನು ಅವರನ್ನು ನಿನ್ನ ಸ್ವಕೀಯ ದೇಶವಾಗಿರುವ ಬೆಟ್ಟದ ಸೀಮೆಗೆ ತಂದು ಬಲಪಡಿಸುವಿ, ಯೆಹೋವನೇ, ನೀನು ಸ್ವಂತ ನಿವಾಸಕ್ಕಾಗಿ ಕಟ್ಟಿಕೊಂಡಿರುವ ಸ್ಥಳದವರೆಗೂ ಕರ್ತನೇ, ನೀನು ನಿನಗಾಗಿ ಸಿದ್ಧಪಡಿಸಿಕೊಂಡಿರುವ ಪವಿತ್ರ ಪರ್ವತದವರೆಗೂ ಅವರನ್ನು ಬರಮಾಡುವಿ. 18ಯೆಹೋವನೇ ಯುಗಯುಗಾಂತರಗಳಲ್ಲಿಯೂ ಅರಸನಾಗಿ ಆಳುವವನು.” 19ಫರೋಹನ ಕುದುರೆಗಳು, ರಥಗಳೂ, ರಾಹುತರೂ ಸಮುದ್ರದೊಳಗೆ ಬಂದಾಗ ಯೆಹೋವನು ಸಮುದ್ರದ ನೀರನ್ನು ಅವರ ಮೇಲೆ ತಿರುಗಿ ಬರಮಾಡಿ ಮುಳುಗಿಸಿಬಿಟ್ಟನು. ಆದರೆ ಇಸ್ರಾಯೇಲರಾದರೋ ಸಮುದ್ರದ ಮಧ್ಯದಲ್ಲಿನ ಒಣ ನೆಲದ ಮೇಲೆ ದಾಟಿ ಹೋದರು.

ಸಂಧ್ಯಾ ಪ್ರಾರ್ಥನೆ: ವಾಚನ (ಏಳನೆಯ ವಾಚನ)

ಚೆಫ 3:8–15

8ಯೆಹೋವನು ಇಂತೆನ್ನುತ್ತಾನೆ, “ಹೀಗಿರಲು ನನಗಾಗಿ ಕಾದುಕೊಂಡಿರಿ, ನಾನು ಬೇಟೆಹಿಡಿಯಲಿಕ್ಕೆ ಏಳುವ ದಿನವನ್ನು ಎದುರುನೋಡಿರಿ; ಜನಾಂಗರಾಜ್ಯಗಳ ಮೇಲೆ ನನ್ನ ರೌದ್ರವನ್ನು, ಹೌದು, ನನ್ನ ಉಗ್ರಕೋಪವನ್ನೆಲ್ಲಾ ಹೊಯ್ದು ಬಿಡುವುದಕ್ಕಾಗಿ ಆ ಜನಾಂಗಗಳನ್ನು ಸೇರಿಸಿ ಆ ರಾಜ್ಯಗಳನ್ನು ಕೂಡಿಸಬೇಕೆಂದು ತೀರ್ಮಾನಿಸಿಕೊಂಡಿದ್ದೇನೆ, ಲೋಕವೆಲ್ಲಾ ನನ್ನ ರೋಷಾಗ್ನಿಗೆ ತುತ್ತಾಗುವುದಷ್ಟೇ. 9“ಆಗ ಎಲ್ಲರೂ ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರ ತುಟಿಗಳನ್ನು ಮಾರ್ಪಡಿಸಿ ಶುದ್ಧಿಮಾಡುವೆನು. 10ಚದರಿಹೋಗಿರುವ ನನ್ನ ಜನರು, ನನ್ನ ಭಕ್ತರು, ಕೂಷಿನ ನದಿಗಳ ಆಚೆಯಿಂದಲೂ ನನಗೆ ಕಾಣಿಕೆಯನ್ನು ತಂದು ಸಮರ್ಪಿಸುವರು. 11“ನೀನು ನನಗೆ ಮಾಡಿದ ನಾನಾ ದುಷ್ಕೃತ್ಯಗಳು ಮುಂದಿನ ಆ ಕಾಲದಲ್ಲಿ ನಿನಗೆ ನಾಚಿಕೆಗೆ ಈಡಾಗುವವು; ಆಗ ತಮ್ಮ ಅತಿಗರ್ವದಿಂದ ಮೆರೆಯುವವರನ್ನು ನಿನ್ನೊಳಗಿಂದ ತೊಲಗಿಸಿಬಿಡುವೆನು; ಅಂದಿನಿಂದ ನನ್ನ ಪವಿತ್ರಪರ್ವತದಲ್ಲಿ ಗರ್ವಪಡದೆ ಇರುವಿ. 12ದೀನದರಿದ್ರ ಜನರನ್ನು ನಿನ್ನಲ್ಲಿ ಉಳಿಸುವೆನು; ಅವರು ಯೆಹೋವನ ನಾಮವನ್ನು ಆಶ್ರಯಿಸಿಕೊಳ್ಳುವರು, 13ಇಸ್ರಾಯೇಲಿನಲ್ಲಿ ಉಳಿದವರು ಅನ್ಯಾಯವನ್ನು ಮಾಡರು, ಸುಳ್ಳಾಡರು; ಅವರ ಬಾಯಲ್ಲಿ ಮೋಸದ ನಾಲಿಗೆಯು ಇರದು; ಕುರಿ ಮಂದೆಯಂತೆ ಮೇದು ಮಲಗಿಕೊಳ್ಳುವರು, ಅವರನ್ನು ಯಾರೂ ಹೆದರಿಸರು.” 14ಚೀಯೋನ್ ಕುವರಿಯೇ, ಹರ್ಷಧ್ವನಿಗೈ! ಇಸ್ರಾಯೇಲೇ, ಜಯಘೋಷಮಾಡು! ಯೆರೂಸಲೇಮ್ ಕುವರಿಯೇ, ಹೃದಯಪೂರ್ವಕವಾಗಿ ಆನಂದಿಸು, ಉಲ್ಲಾಸಿಸು! 15ನಿನಗೆ ವಿಧಿಸಿದ ದಂಡನೆಯನ್ನು ಯೆಹೋವನು ತಪ್ಪಿಸಿದ್ದಾನೆ, ನಿನ್ನ ಶತ್ರುವನ್ನು ತಳ್ಳಿಬಿಟ್ಟಿದ್ದಾನೆ; ಇಸ್ರಾಯೇಲಿನ ಅರಸನಾದ ಯೆಹೋವನು ನಿನ್ನ ಮಧ್ಯದಲ್ಲಿದ್ದಾನೆ; ಇನ್ನು ಕೇಡಿಗೆ ಅಂಜದಿರುವಿ.

ಸಂಧ್ಯಾ ಪ್ರಾರ್ಥನೆ: ವಾಚನ (ಎಂಟನೆಯ ವಾಚನ)

1 ಅರಸು 17:8–24

8ಆಗ ಎಲೀಯನಿಗೆ ಯೆಹೋವನ ಮಾತು ಕೇಳಿ ಬಂತು, 9ಆತನು ಅವನಿಗೆ, “ನೀನು ಇಲ್ಲಿಂದ ಚೀದೋನ್ಯರ ಚಾರೆಪ್ತಾ ಊರಿಗೆ ಹೊರಟುಹೋಗಿ ಅಲ್ಲಿ ವಾಸಮಾಡು. ನಿನ್ನನ್ನು ಸಾಕಬೇಕೆಂದು ಅಲ್ಲಿನ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ” ಅಂದನು. 10ಅವನು ಅಲ್ಲಿಂದ ಹೊರಟು ಚಾರೆಪ್ತಾದ ಊರುಬಾಗಿಲಿನ ಸಮೀಪಕ್ಕೆ ಬಂದಾಗ ಸೌದೆಯನ್ನು ಕೂಡಿಸುತ್ತಿರುವ ಒಬ್ಬ ವಿಧವೆಯನ್ನು ಕಂಡನು. ಅವನು ಆಕೆಯನ್ನು ಕೂಗಿ, “ದಯವಿಟ್ಟು ಕುಡಿಯುವುದಕ್ಕೆ ಒಂದು ತಂಬಿಗೆಯಲ್ಲಿ ನೀರು ತೆಗೆದುಕೊಂಡು ಬಾ” ಎಂದು ಹೇಳಿದನು. 11ಆಕೆಯು ಹೋಗುತ್ತಿರುವಾಗ ಪುನಃ ಆಕೆಯನ್ನು ಕರೆದು, “ನೀನು ಬರುವಾಗ ನನಗೋಸ್ಕರ ಒಂದು ತುಂಡು ರೊಟ್ಟಿಯನ್ನೂ ತೆಗೆದುಕೊಂಡು ಬಾ” ಅಂದನು. 12ಆಕೆಯು ಅವನಿಗೆ, “ನಿನ್ನ ದೇವರಾದ ಯೆಹೋವನಾಣೆ, ನನ್ನ ಹತ್ತಿರ ರೊಟ್ಟಿ ಇರುವುದಿಲ್ಲ, ಮಡಿಕೆಯಲ್ಲಿ ಒಂದು ಹಿಡಿ ಹಿಟ್ಟು, ಮೊಗೆಯಲ್ಲಿ ಸ್ವಲ್ಪ ಎಣ್ಣೆ ಇವುಗಳ ಹೊರತಾಗಿ ಬೇರೇನೂ ಇರುವುದಿಲ್ಲ. ಈಗ ಎರಡು ಕಟ್ಟಿಗೆಗಳನ್ನು ಆರಿಸಿಕೊಂಡು ನನಗೋಸ್ಕರವೂ ನನ್ನ ಮಗನಿಗೋಸ್ಕರವೂ ರೊಟ್ಟಿ ಮಾಡುತ್ತೇನೆ, ಬೇರೆ ಹಿಟ್ಟು, ಎಣ್ಣೆ ಇಲ್ಲ ಇದನ್ನು ತಿಂದ ಮೇಲೆ ಆಹಾರವಿಲ್ಲದ ಕಾರಣ ನಾವು ಸಾಯಬೇಕೇ ಹೊರತು ಬೇರೆ ಗತಿಯಿಲ್ಲ” ಎಂದು ಉತ್ತರಕೊಟ್ಟಳು. 13ಆಗ ಎಲೀಯನು ಆಕೆಗೆ, “ಹೆದರಬೇಡ, ನೀನು ಹೇಳಿದಂತೆಯೇ ಮಾಡು. ಆದರೆ ಮೊದಲು ಅದರಿಂದ ನನಗೋಸ್ಕರ ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ. ತರುವಾಯ ನಿನಗೂ ನಿನ್ನ ಮಗನಿಗೂ ಮಾಡಿಕೋ. 14ಇಸ್ರಾಯೇಲ್ ದೇವರಾದ ಯೆಹೋವನು ನಿನಗೆ, ‘ನಾನು ದೇಶಕ್ಕೆ ಮಳೆಯನ್ನು ಕಳುಹಿಸುವವರೆಗೆ ನಿನ್ನ ಮಡಿಕೆಯಲ್ಲಿರುವ ಹಿಟ್ಟು ತೀರುವುದಿಲ್ಲ ಮತ್ತು ಮೊಗೆಯಲ್ಲಿರುವ ಎಣ್ಣೆಯು ಮುಗಿದುಹೋಗುವುದಿಲ್ಲ’” ಎಂದು ಹೇಳುತ್ತಾನೆ. 15ಆಕೆಯು ಹೋಗಿ ಅವನು ಹೇಳಿದಂತೆಯೇ ಮಾಡಿದಳು. ಆಕೆಯೂ, ಆಕೆಯ ಮನೆಯವರೂ ಮತ್ತು ಎಲೀಯನು ಅದನ್ನು ಅನೇಕ ದಿನಗಳವರೆಗೆ ಊಟಮಾಡಿದರು. 16ಯೆಹೋವನು ಎಲೀಯನ ಮುಖಾಂತರವಾಗಿ ಹೇಳಿದಂತೆ ಮಡಿಕೆಯಲ್ಲಿದ್ದ ಹಿಟ್ಟು ತೀರಲಿಲ್ಲ ಮತ್ತು ಮೊಗೆಯಲ್ಲಿದ್ದ ಎಣ್ಣೆಯು ಮುಗಿದುಹೋಗಲಿಲ್ಲ. 17ಕೆಲವು ದಿನಗಳಾದನಂತರ ಆ ಸ್ತ್ರೀಯ ಮಗನು ಅಸ್ವಸ್ಥನಾದನು. ಹುಡುಗನಿಗೆ ರೋಗವು ಹೆಚ್ಚಾಗಿದ್ದುದರಿಂದ ಉಸಿರಾಡುವುದು ನಿಂತುಹೋಯಿತು. 18ಆಗ ಆ ಸ್ತ್ರೀಯು ಎಲೀಯನಿಗೆ, “ದೇವರ ಮನುಷ್ಯನೇ, ನನ್ನ ಗೊಡವೆ ನಿನಗೇಕೆ? ನೀನು ನನ್ನ ಪಾಪವನ್ನು ದೇವರ ನೆನಪಿಗೆ ತಂದು ನನ್ನ ಮಗನನ್ನು ಸಾಯಿಸುವುದಕ್ಕೆ ಬಂದಿರುವೆಯೋ?” ಎಂದಳು. 19ಅವನು ಆಕೆಗೆ, “ನಿನ್ನ ಮಗನನ್ನು ನನಗೆ ಕೊಡು” ಎಂದು ಹೇಳಿ ಅವನನ್ನು ಆಕೆಯ ಮಡಿಲಿನಿಂದ ತೆಗೆದುಕೊಂಡು, ತಾನು ವಾಸವಾಗಿದ್ದ ಮೇಲಿನ ಕೋಣೆಗೆ ಹೋಗಿ ತನ್ನ ಮಂಚದ ಮೇಲೆ ಮಲಗಿಸಿದನು. 20ಅನಂತರ ಅವನು ಯೆಹೋವನಿಗೆ, “ನನ್ನ ದೇವರಾದ ಯೆಹೋವನೇ, ನನಗೆ ಸ್ಥಳಕೊಟ್ಟ ಈ ವಿಧವೆಯ ಮಗನನ್ನು ನೀನು ಸಾಯಿಸಿ, ಆಕೆಗೆ ಕೇಡನ್ನುಂಟುಮಾಡಿದ್ದೇನು?” ಎಂದು ಕೇಳಿದನು. 21ಆನಂತರ ಹುಡುಗನ ಮೇಲೆ ಮೂರು ಸಾರಿ ಬೋರಲು ಬಿದ್ದು, “ನನ್ನ ದೇವರಾದ ಯೆಹೋವನೇ, ಈ ಹುಡುಗನ ಪ್ರಾಣವು ತಿರುಗಿ ಬರುವಂತೆ ಮಾಡು” ಎಂಬುದಾಗಿ ಆತನಿಗೆ ಮೊರೆಯಿಟ್ಟನು. 22ಯೆಹೋವನು ಅವನ ಪ್ರಾರ್ಥನೆಯನ್ನು ಕೇಳಿದ್ದರಿಂದ ಹುಡುಗನ ಪ್ರಾಣವು ತಿರುಗಿ ಬಂದು ಅವನು ಜೀವಿಸಿದನು. 23ಎಲೀಯನು ಆ ಹುಡುಗನನ್ನು ಅಲ್ಲಿಂದ ಕೆಳಗೆ ತೆಗೆದುಕೊಂಡು ಹೋಗಿ, ಅವನ ತಾಯಿಗೆ ಒಪ್ಪಿಸಿ, “ಇಗೋ, ನೋಡು ನಿನ್ನ ಮಗನು ಜೀವಿಸುತ್ತಿದ್ದಾನೆ” ಅಂದನು. 24ಆಗ ಆಕೆಯು ಎಲೀಯನಿಗೆ, “ನೀನು ದೇವರ ಮನುಷ್ಯನೆಂದೂ, ನಿನ್ನ ಬಾಯಿಂದ ಬಂದ ಯೆಹೋವನ ಮಾತು ಸತ್ಯವೆಂದೂ ಇದರಿಂದ ನನಗೆ ಗೊತ್ತಾಯಿತು” ಎಂದು ಹೇಳಿದಳು.

ಸಂಧ್ಯಾ ಪ್ರಾರ್ಥನೆ: ವಾಚನ (9ನೇ ವಾಚನ)

ಯೆಶಾ 61:10–62:5

10ನಾನು ಯೆಹೋವನಲ್ಲಿ ಪರಮಾನಂದಪಡುವೆನು, ನನ್ನ ಆತ್ಮವು ನನ್ನ ದೇವರಲ್ಲಿ ಹಿಗ್ಗುವುದು. ವರನು ಬಾಸಿಂಗವನ್ನು ಧರಿಸಿಕೊಳ್ಳುವಂತೆಯೂ, ವಧುವು ತನ್ನನ್ನು ಆಭರಣಗಳಿಂದ ಅಲಂಕರಿಸಿಕೊಳ್ಳುವ ಹಾಗೂ, ಆತನು ನನಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸಿ, ಧರ್ಮವೆಂಬ ನಿಲುವಂಗಿಯನ್ನು ತೊಡಿಸಿದ್ದಾನೆ. 11ಭೂಮಿಯು ತನ್ನೊಳಗಿಂದ ಮೊಳಕೆಯನ್ನು ಹೊರಡಿಸುವಂತೆ, ತೋಟವು ತನ್ನಲ್ಲಿ ಬಿತ್ತಿದ್ದನ್ನು ಮೊಳೆಯಿಸುವ ಹಾಗೆ, ಕರ್ತನಾದ ಯೆಹೋವನು ಎಲ್ಲಾ ಜನಾಂಗಗಳ ಎದುರಿನಲ್ಲಿ ಧರ್ಮವನ್ನೂ ಮತ್ತು ಸ್ತೋತ್ರವನ್ನೂ ಮೊಳೆತು ಅಭಿವೃದ್ಧಿ ಹೊಂದುವಂತೆ ಮಾಡುವನು. 62:1ಚೀಯೋನಿನ ಧರ್ಮವು ಪ್ರಕಾಶಗೊಳ್ಳುವ ತನಕ, ಯೆರೂಸಲೇಮಿನ ರಕ್ಷಣೆಯು ದೀವಿಟಿಗೆಯಂತೆ ಪ್ರಜ್ವಲಿಸುವವರೆಗೆ, ನಾನು ಮೌನವಾಗಿರದೆ ಚೀಯೋನಿನ ಹಿತವನ್ನು ಲಕ್ಷಿಸುತ್ತಿರುವೆನು; ಮೌನವಾಗಿರದೆ ಯೆರೂಸಲೇಮಿನ ಕ್ಷೇಮವನ್ನು ಚಿಂತಿಸುತ್ತಿರುವೆನು. 2ಜನಾಂಗಗಳು ನಿನ್ನ ಧರ್ಮವನ್ನು, ಸಕಲ ರಾಜರು ನಿನ್ನ ವೈಭವವನ್ನು ನೋಡುವರು; ಯೆಹೋವನ ಬಾಯಿ ನೇಮಿಸಿದ ಹೊಸ ಹೆಸರು ನಿನಗೆ ದೊರೆಯುವುದು. 3ನೀನು ಯೆಹೋವನ ಕೈಯಲ್ಲಿ ಸುಂದರವಾದ ಕಿರೀಟವಾಗಿಯೂ, ನಿನ್ನ ದೇವರ ಹಸ್ತದಲ್ಲಿ ರಾಜಶಿರೋಭೂಷಣವಾಗಿಯೂ ಇರುವಿ. 4ನೀನು ಇನ್ನು ಮೇಲೆ “ತ್ಯಜಿಸಲ್ಪಟ್ಟವಳು” ಎನಿಸಿಕೊಳ್ಳುವುದಿಲ್ಲ, ನಿನ್ನ ಸೀಮೆಗೆ “ನಿರ್ಜನ ಪ್ರದೇಶ” ಎಂಬ ಹೆಸರು ಇನ್ನು ಇರದು; ನೀನು “ನನ್ನ ಉಲ್ಲಾಸಿನಿ” ಎನಿಸಿಕೊಳ್ಳುವಿ, ನಿನ್ನ ಸೀಮೆಗೆ “ವಿವಾಹಿತೆ” ಎಂಬ ಹೆಸರಾಗುವುದು; ಏಕೆಂದರೆ ಯೆಹೋವನು ನಿನ್ನಲ್ಲಿ ಉಲ್ಲಾಸಗೊಳ್ಳುತ್ತಾನೆ, ನಿನ್ನ ಸೀಮೆಗೆ ವಿವಾಹವಾಗುವುದು. 5ಯುವಕನು ಯುವತಿಯನ್ನು ವರಿಸುವಂತೆ, ನಿನ್ನ ಮಕ್ಕಳು ನಿನ್ನನ್ನು ವರಿಸುವರು; ವರನು ವಧುವಿನಲ್ಲಿ ಆನಂದಿಸುವ ಹಾಗೆ ನಿನ್ನ ದೇವರು ನಿನ್ನಲ್ಲಿ ಆನಂದಿಸುವನು.

ಸಂಧ್ಯಾ ಪ್ರಾರ್ಥನೆ: ವಾಚನ (10ನೇ ವಾಚನ)

ಆದಿ 22:1–18

1ಈ ಸಂಗತಿಗಳು ಆದ ಮೇಲೆ ದೇವರು ಅಬ್ರಹಾಮನನ್ನು ಪರೀಕ್ಷಿಸಿದನು. 2ಹೇಗೆಂದರೆ ಆತನು ಅವನನ್ನು, “ಅಬ್ರಹಾಮನೇ” ಎಂದು ಕರೆಯಲು ಅವನು, “ಇಗೋ, ಇದ್ದೇನೆ” ಎಂದನು. ಆಗ ಆತನು, “ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ಕರೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ಅವನನ್ನು ನಾನು ಹೇಳುವ ಒಂದು ಬೆಟ್ಟದ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸಬೇಕು” ಎಂದನು. 3ಅದರಂತೆ ಮುಂಜಾನೆಯೇ ಎದ್ದು ಅಬ್ರಹಾಮನು ಕತ್ತೆಗೆ ತಡಿ ಹಾಕಿಸಿ, ಯಜ್ಞಕ್ಕೆ ಬೇಕಾದ ಕಟ್ಟಿಗೆಯನ್ನು ಒಡೆಸಿ ಅದನ್ನು ತೆಗೆದುಕೊಂಡು ತನ್ನ ಸೇವಕರಲ್ಲಿ ಇಬ್ಬರನ್ನೂ, ತನ್ನ ಮಗನಾದ ಇಸಾಕನನ್ನೂ ಕರೆದುಕೊಂಡು ದೇವರು ಹೇಳಿದ ಸ್ಥಳಕ್ಕೆ ಹೊರಟನು. 4ಮೂರನೆಯ ದಿನದಲ್ಲಿ ಅಬ್ರಹಾಮನು ಕಣ್ಣೆತ್ತಿ ನೋಡುವಾಗ ಆ ಸ್ಥಳವು ದೂರದಲ್ಲಿ ಕಾಣಿಸಲು ಅವನು ತನ್ನ ಸೇವಕರಿಗೆ, 5“ನೀವು ಇಲ್ಲೇ ಕತ್ತೆಯ ಬಳಿಯಲ್ಲಿರಿ; ನಾನೂ ನನ್ನ ಮಗನೂ ಅಲ್ಲಿಗೆ ಹೋಗಿ ದೇವಾರಾಧನೆ ಮಾಡಿಕೊಂಡು ನಿಮ್ಮ ಬಳಿಗೆ ಬರುತ್ತೇವೆ” ಎಂದು ಅಬ್ರಹಾಮನು ಹೇಳಿದನು. 6ಆನಂತರ ಅಬ್ರಹಾಮನು ಯಜ್ಞಕ್ಕೆ ಬೇಕಾದ ಕಟ್ಟಿಗೆಯನ್ನು ತನ್ನ ಮಗನಾದ ಇಸಾಕನ ಮೇಲೆ ಹೊರಿಸಿ, ತನ್ನ ಕೈಯಲ್ಲೇ ಬೆಂಕಿಯನ್ನೂ ಕತ್ತಿಯನ್ನೂ ತೆಗೆದುಕೊಂಡ ನಂತರ ಅವರಿಬ್ಬರೂ ಹೊರಟರು. 7ಹೋಗುವಾಗ ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ, “ಅಪ್ಪಾ” ಎಂದು ಕರೆಯಲು ಅಬ್ರಹಾಮನು, “ಏನು ಮಗನೇ” ಎಂದನು. ಇಸಾಕನು, “ಇಗೋ, ಬೆಂಕಿಯೂ ಕಟ್ಟಿಗೆಯೂ ಉಂಟು; ಆದರೆ ಹೋಮಕ್ಕೆ ಬೇಕಾದ ಕುರಿ ಎಲ್ಲಿ” ಎಂದು ಕೇಳಿದ್ದಕ್ಕೆ, 8ಅಬ್ರಹಾಮನು, “ಮಗನೇ, ಹೋಮಕ್ಕೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುವನು” ಎಂದನು. 9ದೇವರು ಹೇಳಿದ ಸ್ಥಳಕ್ಕೆ ಅವರು ಸೇರಿದಾಗ ಅಬ್ರಹಾಮನು ಯಜ್ಞವೇದಿಯನ್ನು ಕಟ್ಟಿ, ಕಟ್ಟಿಗೆಯನ್ನು ಜೋಡಿಸಿ ತನ್ನ ಮಗನಾದ ಇಸಾಕನ ಕೈಕಾಲುಗಳನ್ನು ಕಟ್ಟಿ ಅವನನ್ನು ಯಜ್ಞವೇದಿಯ ಮೇಲೆ ಇದ್ದ ಕಟ್ಟಿಗೆಯ ಮೇಲೆ ಮಲಗಿಸಿದನು. 10ಅಬ್ರಹಾಮನು ತನ್ನ ಮಗನನ್ನು ಕೊಲ್ಲುವುದಕ್ಕೆ, ಕೈಚಾಚಿ ಕತ್ತಿಯನ್ನು ತೆಗೆದುಕೊಂಡನು. 11ಆಗ ಯೆಹೋವನ ದೂತನು ಆಕಾಶದೊಳಗಿನಿಂದ, “ಅಬ್ರಹಾಮನೇ, ಅಬ್ರಹಾಮನೇ” ಎಂದು ಅವನನ್ನು ಕರೆದನು. ಅದಕ್ಕೆ ಅಬ್ರಹಾಮನು, “ಇಗೋ, ಇದ್ದೇನೆ” ಎಂದನು. 12ಆ ದೂತನು ಅವನಿಗೆ, “ಹುಡುಗನ ಮೇಲೆ ಕೈ ಹಾಕಬೇಡ, ಅವನಿಗೆ ಏನೂ ಮಾಡಬೇಡ. ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಸಮರ್ಪಿಸುವುದಕ್ಕೆ ಹಿಂಜರಿಯಲಿಲ್ಲ. ಈಗ ನೀನು ದೇವರಲ್ಲಿ ಭಯಭಕ್ತಿಯುಳ್ಳವನು ಎಂದು ನನಗೆ ಗೊತ್ತಾಯಿತು” ಎಂದು ಹೇಳಿದನು. 13ಅಬ್ರಹಾಮನು ಕಣ್ಣೆತ್ತಿ ನೋಡಲಾಗಿ ತನ್ನ ಹಿಂದೆ, ಒಂದು ಟಗರು ಪೊದೆಯಲ್ಲಿ ಕೊಂಬುಗಳಿಂದ ಸಿಕ್ಕಿ ಹಾಕಿಕೊಂಡಿರುವುದನ್ನು ಕಂಡನು. ಅವನು ಹೋಗಿ ಅದನ್ನು ಹಿಡಿದು ತಂದು ತನ್ನ ಮಗನಿಗೆ ಬದಲಾಗಿ ಹೋಮಮಾಡಿದನು. 14ಆ ಸ್ಥಳಕ್ಕೆ ಅಬ್ರಹಾಮನು “ಯೆಹೋವ ಯೀರೆ” ಎಂದು ಹೆಸರಿಟ್ಟನು. ಯೆಹೋವನು ಬೆಟ್ಟದಲ್ಲಿ ಒದಗಿಸುವನು ಎಂಬುದಾಗಿ ಇಂದಿನವರೆಗೂ ಹಾಗೆ ಹೇಳುವ ಪದ್ಧತಿ ಇದೆ. 15ಯೆಹೋವನ ದೂತನು ಆಕಾಶದೊಳಗಿನಿಂದ ಎರಡನೆಯ ಸಾರಿ ಅಬ್ರಹಾಮನನ್ನು ಕರೆದು ಅವನಿಗೆ, 16“ನೀನು ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವುದಕ್ಕೆ ಹಿಂದೆಗೆಯದೆ ಹೋದುದರಿಂದ, ಯೆಹೋವನಾದ ನಾನು ನಿನಗೆ ಪ್ರಮಾಣವಾಗಿ ಹೇಳುವುದೇನಂದರೆ 17ನಾನು ನಿನ್ನನ್ನು ಆಶೀರ್ವದಿಸಿಯೇ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಅಧಿಕವಾಗಿ ಹೆಚ್ಚಿಸುವೆನು, ಅದನ್ನು ಆಕಾಶದ ನಕ್ಷತ್ರಗಳಂತೆಯೂ, ಸಮುದ್ರ ತೀರದಲ್ಲಿರುವ ಮರಳಿನಂತೆಯೂ ಅಸಂಖ್ಯವಾಗುವಂತೆ ಮಾಡುವೆನು; ಅವರು ಶತ್ರುಗಳ ಪಟ್ಟಣಗಳನ್ನು ಸ್ವತ್ತಾಗಿ ಮಾಡಿಕೊಳ್ಳುವರು. 18ನೀನು ನನ್ನ ಮಾತಿಗೆ ವಿಧೇಯನಾಗಿ ಭೂಮಿಯ ಎಲ್ಲಾ ಜನಾಂಗಗಳಿಗೆ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವುದು ಎಂಬುದಾಗಿ ಯೆಹೋವನು ವಾಗ್ದಾನ ಮಾಡಿದ್ದಾನೆ.” ಎಂದನು.

ಸಂಧ್ಯಾ ಪ್ರಾರ್ಥನೆ: ವಾಚನ (11ನೇ ವಾಚನ)

ಯೆಶಾ 61:1–9

1ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಇದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವುದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವುದಕ್ಕೂ, ಸೆರೆಯವರಿಗೆ ಬಿಡುಗಡೆಯಾಗುವುದನ್ನು, ಬಂದಿಗಳಿಗೆ ಕದ ತೆರೆಯುವುದನ್ನು ಪ್ರಸಿದ್ಧಿಪಡಿಸುವುದಕ್ಕೂ, 2ಯೆಹೋವನು ನೇಮಿಸಿರುವ ಶುಭವರ್ಷ, ನಮ್ಮ ದೇವರು ಮುಯ್ಯಿತೀರಿಸುವ ದಿನ ಇವುಗಳನ್ನು ಪ್ರಚುರಗೊಳಿಸುವುದಕ್ಕೂ, 3ದುಃಖಿತರೆಲ್ಲರನ್ನು ಸಂತೈಸುವುದಕ್ಕೂ, ಚೀಯೋನಿನಲ್ಲಿ ಶೋಕಿಸುವವರಿಗೆ ಬೂದಿಗೆ ಬದಲಾಗಿ ಶಿರೋಭೂಷಣ, ದುಃಖವಿದ್ದಲ್ಲಿ ಆನಂದತೈಲ, ಕುಂದಿದ ಮನಕ್ಕೆ ಪ್ರತಿಯಾಗಿ ಉತ್ಸಾಹ ಸ್ತೋತ್ರದ ವಸ್ತ್ರ ಇವುಗಳನ್ನು ಒದಗಿಸಿಕೊಡುವುದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ. ಯೆಹೋವನು ತನ್ನ ಪ್ರಭಾವಕ್ಕೋಸ್ಕರ ಹಾಕಿದ ನೀತಿವೃಕ್ಷಗಳು ಎಂಬ ಬಿರುದು ಇವರಿಗಾಗುವುದು. 4ಪುರಾತನಕಾಲದಲ್ಲಿ ಹಾಳಾದ ನಿವೇಶನಗಳನ್ನು ತಿರುಗಿ ಕಟ್ಟುವರು, ಪೂರ್ವದಲ್ಲಿ ಹಾಳುಬಿದ್ದದ್ದನ್ನು ಪುನಃ ಎಬ್ಬಿಸುವರು, ತಲತಲಾಂತರಗಳಿಂದ ಹಾಳಾದ ಪಟ್ಟಣಗಳನ್ನು ಜೀರ್ಣೋದ್ಧಾರ ಮಾಡುವರು. 5ಆಗ ವಿದೇಶೀಯರು ನಿಂತುಕೊಂಡು ನಿಮ್ಮ ಮಂದೆಗಳನ್ನು ಮೇಯಿಸುವರು, ಅನ್ಯರು ನಿಮಗೆ ಉಳುವವರೂ ಮತ್ತು ತೋಟಗಾರರೂ ಆಗುವರು. 6ನೀವೋ ಯೆಹೋವನ ಯಾಜಕರೆಂಬ ಬಿರುದನ್ನು ಹೊಂದುವಿರಿ, ಜನರು ನಿಮ್ಮನ್ನು ನಮ್ಮ ದೇವರ ಸೇವಕರು ಎಂದು ಕರೆಯುವರು; ಜನಾಂಗಗಳ ಆಸ್ತಿಯನ್ನು ಅನುಭವಿಸುವಿರಿ, ಅವುಗಳ ವೈಭವವನ್ನು ಪಡೆದು ಹೊಗಳಿಕೊಳ್ಳುವಿರಿ. 7ನಿಮಗಾದ ಅವಮಾನಕ್ಕೆ ಬದಲಾಗಿ ಎರಡರಷ್ಟು ಮಾನವನ್ನು ಹೊಂದುವಿರಿ; ನಾಚಿಕೆಪಟ್ಟದ್ದಕ್ಕೆ ಪ್ರತಿಯಾಗಿ ಇವರು ತಮ್ಮ ಸ್ವತ್ತಿನಲ್ಲಿ ಹಿಗ್ಗುವರು; ಹೀಗೆ ತಮ್ಮ ದೇಶದಲ್ಲಿ ಎರಡರಷ್ಟನ್ನು ಅನುಭವಿಸುವರು; ಇವರಿಗೆ ಶಾಶ್ವತ ಸಂತೋಷವಾಗುವುದು. 8ಯೆಹೋವನೆಂಬ ನಾನು ನ್ಯಾಯವನ್ನು ಪ್ರೀತಿಸುತ್ತೇನೆ. ಕೊಳ್ಳೆಯನ್ನೂ, ಅನ್ಯಾಯವನ್ನೂ ದ್ವೇಷಿಸುತ್ತೇನೆ. ನಾನು ಇವರ ನಷ್ಟಕ್ಕೆ ಬದಲಾಗಿ ಪ್ರತಿಫಲವನ್ನು ಪ್ರಾಮಾಣಿಕವಾಗಿ ಕೊಟ್ಟು, ಇವರೊಂದಿಗೆ ನಿತ್ಯವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. 9ಇವರ ಸಂತಾನವು ಜನಾಂಗಗಳಲ್ಲಿ ಪ್ರಖ್ಯಾತವಾಗುವುದು, ಇವರ ಸಂತತಿಯು ಅನ್ಯದೇಶೀಯರಲ್ಲಿ ಹೆಸರುಗೊಳ್ಳುವುದು. ಇವರನ್ನು ನೋಡುವವರೆಲ್ಲರು ಯೆಹೋವನು ಆಶೀರ್ವದಿಸಿದ ವಂಶವು ಇದೇ ಎಂದು ಒಪ್ಪಿಕೊಳ್ಳುವರು.

ಸಂಧ್ಯಾ ಪ್ರಾರ್ಥನೆ: ವಾಚನ (12ನೇ ವಾಚನ)

2 ಅರಸು 4:8–37

8ಒಂದು ಸಾರಿ ಎಲೀಷನು ಶೂನೇಮಿಗೆ ಹೋದನು. ಅಲ್ಲಿ ಒಬ್ಬ ಕುಲೀನ ಸ್ತ್ರೀಯು ಅವನನ್ನು ತನ್ನ ಮನೆಯಲ್ಲಿ ಊಟಮಾಡಬೇಕೆಂದು ಒತ್ತಾಯಪಡಿಸಿದಳು. ಅಂದಿನಿಂದ ಅವನು ಆ ಮಾರ್ಗದಿಂದ ಹೋಗುವಾಗೆಲ್ಲಾ ಆ ಮನೆಯಲ್ಲೇ ಊಟಮಾಡುತ್ತಿದ್ದನು. 9ಆ ಸ್ತ್ರೀಯು ತನ್ನ ಗಂಡನಿಗೆ, “ಯಾವಾಗಲೂ ಈ ದಾರಿಯಲ್ಲಿ ಹೋಗುತ್ತಾ ಬರುತ್ತಾ ಇರುವ ಆ ಮನುಷ್ಯನು ಪರಿಶುದ್ಧನೂ, ದೇವರ ಮನುಷ್ಯನೂ ಆಗಿರುತ್ತಾನೆ ಎಂದು ನನಗೆ ಗೊತ್ತಾಯಿತು. 10ಆದುದರಿಂದ ನಾವು ಅವನಿಗಾಗಿ ಮಾಳಿಗೆಯ ಮೇಲೆ ಒಂದು ಸಣ್ಣ ಕೋಣೆಯನ್ನು ಕಟ್ಟಿಸಿ ಅದರಲ್ಲಿ ಒಂದು ಮಂಚ, ಮೇಜು, ಕುರ್ಚಿ, ದೀಪಸ್ತಂಭ ಇವುಗಳನ್ನು ಇಡೋಣ. ಅವನು ಇಲ್ಲಿ ಬಂದಾಗಲೆಲ್ಲಾ ಅದರಲ್ಲಿ ಹೋಗಿ ಉಳಿದುಕೊಳ್ಳಲಿ” ಎಂದು ಹೇಳಿದಳು. 11ಒಂದು ದಿನ ಎಲೀಷನು ಅಲ್ಲಿಗೆ ಬಂದು ಆ ಕೋಣೆಯೊಳಗೆ ಪ್ರವೇಶಿಸಿ ದಣಿವಾರಿಸಿಕೊಂಡನು. 12ಅನಂತರ, “ಆ ಶೂನೇಮ್ಯಳನ್ನು ಕರೆಯಿರಿ” ಎಂದು ತನ್ನ ಸೇವಕನಾದ ಗೇಹಜಿಗೆ ಆಜ್ಞಾಪಿಸಿದನು. ಅವನು ಹೋಗಿ ಆಕೆಯನ್ನು ಕರೆಯಲು, ಆಕೆಯು ಬಂದು ಅವನ ಮುಂದೆ ನಿಂತಳು. 13ಆಗ ಎಲೀಷನು ಗೇಹಜಿಗೆ “ನೀನು ಆಕೆಗೆ ಹೇಳು, ‘ನೀನು ಕಷ್ಟಪಟ್ಟು ನಮಗೆ ಇಷ್ಟೆಲ್ಲಾ ಉಪಕಾರ ಮಾಡಿರುವೆ ನಾನು ನಿನಗೆ ಯಾವ ಪ್ರತ್ಯುಪಕಾರ ಮಾಡಲಿ? ನಿನಗೋಸ್ಕರ ಅರಸನ ಬಳಿ ಅಥವಾ ಸೇನಾಧಿಪತಿಯ ಬಳಿಯಾಗಲಿ ಮಾತನಾಡಬೇಕೋ’ ಎಂದು ಕೇಳಲು” ಆಕೆಯು, “ನಾನು ಸ್ವಕುಲದವರ ಮಧ್ಯದಲ್ಲಿ ವಾಸವಾಗಿದ್ದೇನೆ” ಎಂದು ಉತ್ತರಕೊಟ್ಟಳು. 14ಆ ಮೇಲೆ ಎಲೀಷನು ಗೇಹಜಿಗೆ, “ನಾವು ಆಕೆಗೆ ಯಾವ ಉಪಕಾರವನ್ನು ಮಾಡಬಹುದು” ಎಂದು ಕೇಳಲು ಅವನು, “ಆಕೆಗೆ ಮಗನಿಲ್ಲ, ಗಂಡನು ಮುದುಕನಾಗಿದ್ದಾನೆ” ಎಂದನು. 15ಇದನ್ನು ಕೇಳಿ ಎಲೀಷನು, “ಆ ಸ್ತ್ರೀಯನ್ನು ಕರೆ” ಎಂದು ಆಜ್ಞಾಪಿಸಿದನು. ಅವನು ಹೋಗಿ ಕರೆಯಲು, ಆಕೆಯು ಬಂದು ಬಾಗಿಲಿನ ಹತ್ತಿರ ನಿಂತಳು. 16ಎಲೀಷನು ಆಕೆಗೆ, “ನೀನು ಬರುವ ವರ್ಷ, ಇದೇ ಕಾಲದಲ್ಲಿ, ಒಬ್ಬ ಮಗನನ್ನು ನಿನ್ನ ಮಡಿಲಲ್ಲಿ ಹೊಂದಿರುವಿ” ಎಂದು ಹೇಳಿದನು. ಅದಕ್ಕೆ ಆಕೆಯು, “ದೇವರ ಮನುಷ್ಯನೇ, ಒಡೆಯನೇ, ಹೀಗೆ ನಿನ್ನ ದಾಸಿಗೆ ಸುಳ್ಳನ್ನು ಹೇಳಬೇಡ” ಎಂದು ನುಡಿದಳು. 17ಆದರೆ ಆ ಸ್ತ್ರೀಯು ಗರ್ಭಿಣಿಯಾಗಿ ಎಲೀಷನು ಹೇಳಿದಂತೆ, ಮುಂದಿನ ವರ್ಷ ಅದೇ ಕಾಲದಲ್ಲಿ, ಒಬ್ಬ ಮಗನನ್ನು ಹೆತ್ತಳು. 18ಹುಡುಗನು ದೊಡ್ಡವನಾದ ಮೇಲೆ ಒಂದು ದಿನ, ಹೊಲದಲ್ಲಿ ಬೆಳೆ ಕೊಯ್ಯುವವರ ಸಂಗಡ ಇದ್ದ ತನ್ನ ತಂದೆಯ ಬಳಿಗೆ ಹೋದನು. 19ಅಲ್ಲಿದ್ದಾಗ ಅವನು ಪಕ್ಕನೆ, “ಅಪ್ಪಾ, ನನ್ನ ತಲೆ, ನನ್ನ ತಲೆ” ಎಂದು ಕೂಗಲು, ತಂದೆಯು ಒಬ್ಬ ಸೇವಕನನ್ನು ಕರೆದು ಅವನಿಗೆ, “ಇವನನ್ನು ತಾಯಿಯ ಹತ್ತಿರ ಕರೆದುಕೊಂಡು ಹೋಗು” ಎಂದು ಆಜ್ಞಾಪಿಸಿದನು. 20ಸೇವಕನು ಹುಡುಗನನ್ನು ಅವನ ತಾಯಿಗೆ ತಂದು ಒಪ್ಪಿಸಿದನು. ಹುಡುಗನು ಮಧ್ಯಾಹ್ನದವರೆಗೂ ತಾಯಿಯ ತೊಡೆಯ ಮೇಲೆಯೇ ಇದ್ದು ಅನಂತರ ಸತ್ತನು. 21ಕೂಡಲೆ ಆಕೆಯು ಅವನನ್ನು ದೇವರ ಮನುಷ್ಯನ ಕೋಣೆಗೆ ತೆಗೆದುಕೊಂಡು ಹೋಗಿ ಅವನ ಮಂಚದ ಮೇಲೆ ಮಗನನ್ನು ಮಲಗಿಸಿ ಬಾಗಿಲು ಮುಚ್ಚಿದಳು. 22ಗಂಡನನ್ನು ಕರೆಯಿಸಿ ಅವನಿಗೆ, “ದಯವಿಟ್ಟು, ನನಗೋಸ್ಕರ ಒಬ್ಬ ಸೇವಕನನ್ನೂ, ಒಂದು ಕತ್ತೆಯನ್ನೂ ಕಳುಹಿಸು. ನಾನು ಬೇಗನೆ ದೇವರ ಮನುಷ್ಯನ ಬಳಿಗೆ ಹೋಗಿಬರುತ್ತೇನೆ” ಎಂದು ಹೇಳಿದಳು. 23ಅದಕ್ಕೆ ಅವನು, “ಇದು ಅಮಾವಾಸ್ಯೆಯಲ್ಲ, ಸಬ್ಬತ್ತಲ್ಲ. ಈ ಹೊತ್ತು ಯಾಕೆ ಹೋಗುತ್ತೀ?” ಎಂದನು. ಅದಕ್ಕೆ ಆಕೆಯು, “ಎಲ್ಲವು ಸರಿಯೇ” ಎಂದು ಹೇಳಿದಳು. 24ನಂತರ ಆಕೆಯು ಕತ್ತೆಗೆ ತಡಿ ಹಾಕಿಸಿ, ಅದರ ಮೇಲೆ ಕುಳಿತುಕೊಂಡು ಸೇವಕನಿಗೆ, “ಬೇಗ ಓಡಿಸು, ನಾನು ಅಪ್ಪಣೆಕೊಡುವವರೆಗೆ ನಿಲ್ಲಿಸಬೇಡ” ಎಂದು ಆಜ್ಞಾಪಿಸಿದಳು. 25ಹೀಗೆ ಆಕೆಯು ಪ್ರಯಾಣ ಮಾಡಿ ಕರ್ಮೆಲ್ ಬೆಟ್ಟದ ಮೇಲಿದ್ದ ದೇವರ ಮನುಷ್ಯನ ಬಳಿಗೆ ಬಂದಳು. ದೇವರ ಮನುಷ್ಯನು ಆಕೆಯನ್ನು ದೂರದಿಂದಲೇ ಕಂಡು ತನ್ನ ಸೇವಕನಾದ ಗೇಹಜಿಗೆ, “ಅಗೋ, ಅಲ್ಲಿ ಶೂನೇಮ್ಯಳು ಬರುತ್ತಿದ್ದಾಳೆ” 26ನೀನು, ದಯವಿಟ್ಟು ಓಡಿಹೋಗಿ ಆಕೆಯನ್ನು ಎದುರುಗೊಂಡು, “ನಿನಗೂ, ನಿನ್ನ ಗಂಡನಿಗೂ, ಮಗನಿಗೂ ಕ್ಷೇಮವೋ?” ಎಂದು ವಿಚಾರಿಸು ಎಂಬುದಾಗಿ ಆಜ್ಞಾಪಿಸಿ ಕಳುಹಿಸಿದನು. ಆಕೆಯು ಆ ಸೇವಕನಿಗೆ, “ಕ್ಷೇಮ” ಎಂದು ಉತ್ತರ ಕೊಟ್ಟು, 27ಬೆಟ್ಟದ ಮೇಲಿದ್ದ ದೇವರ ಮನುಷ್ಯನ ಬಳಿಗೆ ಬಂದು, ಅವನ ಪಾದಗಳನ್ನು ಹಿಡಿದಳು. ಗೇಹಜಿಯು ಆಕೆಯನ್ನು ದೂರ ಮಾಡುವುದಕ್ಕಾಗಿ ಹತ್ತಿರ ಬರಲು, ದೇವರ ಮನುಷ್ಯನು ಅವನಿಗೆ, “ಬಿಡು, ಆಕೆಯ ಮನಸ್ಸಿನಲ್ಲಿ ಬಹು ದುಃಖವಿರುವ ಹಾಗೆ ತೋರುತ್ತದೆ. ಯೆಹೋವನು ಆಕೆಯ ದುಃಖವನ್ನು ನನಗೆ ಪ್ರಕಟಿಸದೆ, ಮರೆಮಾಡಿದ್ದಾನೆ” ಎಂದು ಹೇಳಿದನು. 28ಆಕೆಯು ದೇವರ ಮನುಷ್ಯನಿಗೆ, “ನನಗೆ ಮಗನು ಬೇಕೆಂದು ಸ್ವಾಮಿಯಾದ ನಿನ್ನನ್ನು ನಾನು ಬೇಡಿಕೊಂಡೆನೇ? ‘ವಂಚಿಸಬಾರದೆಂದು’ ಮೊರೆಯಿಟ್ಟೆನಲ್ಲವೇ?” ಎಂದಳು. 29ಆಗ ಎಲೀಷನು ಗೇಹಜಿಗೆ, “ನೀನು ನಡುಕಟ್ಟಿಕೊಂಡು, ನನ್ನ ಕೋಲನ್ನು ತೆಗೆದುಕೊಂಡು ಹೋಗಿ ಹುಡುಗನ ಮುಖದ ಮೇಲಿಡು, ಹೋಗುವಾಗ ದಾರಿಯಲ್ಲಿ ಯಾರನ್ನೂ ವಂದಿಸಬೇಡ, ಯಾರ ಅವರ ವಂದನೆಯನ್ನು ಸ್ವೀಕರಿಸಬೇಡ” ಎಂದು ಹೇಳಿ ಕಳುಹಿಸಿದನು. 30ಆದರೂ ಹುಡುಗನ ತಾಯಿ, “ಯೆಹೋವನಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಟ್ಟುಹೋಗುವುದಿಲ್ಲ” ಎಂದು ಹೇಳಿದ್ದರಿಂದ ಎಲೀಷನು ಆಕೆಯ ಜೊತೆಯಲ್ಲಿ ಹೊರಟನು. 31ಅವರ ಮುಂದಾಗಿ ಹೋದ ಗೇಹಜಿಯು ಕೋಲನ್ನು ಹುಡುಗನ ಮುಖದ ಮೇಲಿಟ್ಟರೂ ಹುಡುಗನು ಮಾತನಾಡಲಿಲ್ಲ, ಎಚ್ಚರಗೊಳ್ಳಲೂ ಇಲ್ಲ. ಆದುದರಿಂದ ಅವನು ಹಿಂದಿರುಗಿ ಹೋಗಿ ಎಲೀಷನನ್ನು ಎದುರುಗೊಂಡು ಅವನಿಗೆ, “ಹುಡುಗನು ಎಚ್ಚರವಾಗಲಿಲ್ಲ” ಎಂದನು. 32ಎಲೀಷನು ಆ ಮನೆಯನ್ನು ತಲುಪಿದಾಗ, ಸತ್ತ ಹುಡುಗನನ್ನು ತನ್ನ ಮಂಚದ ಮೇಲೆ ಮಲಗಿಸಿರುವುದನ್ನು ಕಂಡನು. 33ಎಲೀಷನು ಒಳಗೆ ಹೋಗಿ ಕೋಣೆಯ ಬಾಗಿಲನ್ನು ಮುಚ್ಚಿಕೊಂಡು ಯೆಹೋವನನ್ನು ಪ್ರಾರ್ಥಿಸಿದನು. 34ಅನಂತರ ಹುಡುಗನ ಮೇಲೆ ಬೋರಲುಬಿದ್ದು ತನ್ನ ಬಾಯಿ, ಕಣ್ಣು, ಕೈಗಳನ್ನು ಅವನ ಬಾಯಿ, ಕಣ್ಣು, ಕೈಗಳಿಗೆ ಮುಟ್ಟಿಸಿದ್ದರಿಂದ ಹುಡುಗನ ದೇಹವು ಬೆಚ್ಚಗಾಯಿತು. 35ಆಮೇಲೆ ಹುಡುಗನನ್ನು ಬಿಟ್ಟು ಎದ್ದು ಮನೆಯಲ್ಲಿ ತುಸುಹೊತ್ತು ಅತ್ತಿತ್ತ ಅಡ್ಡಾಡಿ ತಿರುಗಿ ಅವನ ಮೇಲೆ ಬೋರಲು ಬೀಳಲು ಹುಡುಗನು ಏಳು ಸಾರಿ ಸೀನಿ ಕಣ್ದೆರೆದನು. 36ಆಗ ಎಲೀಷನು ಗೇಹಜಿಗೆ, “ಶೂನೇಮ್ಯಳನ್ನು ಕರೆ” ಎಂದು ಆಜ್ಞಾಪಿಸಲು ಅವನು ಆಕೆಯನ್ನು ಕರೆದನು. ಆಕೆಯು ಬಂದಾಗ, ಎಲೀಷನು ಆಕೆಗೆ, “ನಿನ್ನ ಮಗನನ್ನು ತೆಗೆದುಕೋ” ಎಂದು ಹೇಳಿದನು. 37ಆಕೆಯು ಹತ್ತಿರ ಬಂದು, ಅವನ ಪಾದಗಳಿಗೆ ಬಿದ್ದು ಸಾಷ್ಟಾಂಗನಮಸ್ಕಾರ ಮಾಡಿ, ಮಗನನ್ನು ಕರೆದುಕೊಂಡು ಹೋದಳು.

ಸಂಧ್ಯಾ ಪ್ರಾರ್ಥನೆ: ವಾಚನ (13ನೇ ವಾಚನ)

ಯೆಶಾ 63:11–64:5

11ಆಗ ಆತನ ಜನರು ಪುರಾತನವಾದ ಮೋಶೆಯ ಕಾಲವನ್ನು ಜ್ಞಾಪಕಮಾಡಿಕೊಂಡು ಹೀಗೆಂದರು, “ತನ್ನ ಜನವೆಂಬ ಮಂದೆಯನ್ನು ಕುರುಬರ ಸಹಿತ ಸಮುದ್ರದೊಳಗಿಂದ ಮೇಲಕ್ಕೆ ಬರಮಾಡಿದಾತನು ಎಲ್ಲಿ? 12ಅವರ ಮಧ್ಯದಲ್ಲಿ ತನ್ನ ಪವಿತ್ರಾತ್ಮವನ್ನಿರಿಸಿ, ಮೋಶೆಯ ಬಲಗೈಯೊಂದಿಗೆ ತನ್ನ ಘನಹಸ್ತವನ್ನೂ ಮುಂದುವರೆಸುತ್ತಾ ತನ್ನ ಹೆಸರು ಶಾಶ್ವತವಾಗಿರಬೇಕೆಂದು ಅವರೆದುರಿಗೆ ಜಲರಾಶಿಯನ್ನು ಇಬ್ಭಾಗ ಮಾಡಿದಾತನು ಎಲ್ಲಿ? 13ಸಾಗರದ ತಳಕ್ಕೆ ಅವರನ್ನು ನಡೆಸಿದಾತನು ಎಲ್ಲಿ? ಕುದುರೆಯು ಮೈದಾನದಲ್ಲಿ ನಡೆಯುವ ಪ್ರಕಾರ ಅವರು ಮುಗ್ಗರಿಸಲಿಲ್ಲ. 14ತಗ್ಗಿಗೆ ಇಳಿಯುವ ದನಗಳೋಪಾದಿಯಲ್ಲಿ ಯೆಹೋವನ ಆತ್ಮವು ಅವರನ್ನು ವಿಶ್ರಾಂತಿಯ ಸ್ಥಾನಕ್ಕೆ ಕರೆತಂದಿತು; ನಿನ್ನ ನಾಮವನ್ನು ಘನಪಡಿಸಿಕೊಳ್ಳುವುದಕ್ಕಾಗಿ ನಿನ್ನ ಜನರನ್ನು ಹೀಗೆ ನಡೆಸಿದಿ. 15ಆಕಾಶದಿಂದ ನೋಡು, ಪರಿಶುದ್ಧವೂ, ಘನವೂ ಆದ ನಿನ್ನ ಉನ್ನತಸ್ಥಾನದಿಂದ ಲಕ್ಷಿಸು; ನಿನ್ನ ಉತ್ಸಾಹವೆಲ್ಲಿ, ನಿನ್ನ ಸಾಹಸ ಕಾರ್ಯಗಳೆಲ್ಲಿ? ನಿನ್ನ ಕರುಳ ಮರುಗಾಟವನ್ನೂ, ನಿನ್ನ ಕನಿಕರವನ್ನೂ ನಮ್ಮ ಕಡೆಗೆ ಬಿಗಿ ಹಿಡಿದಿದ್ದಿ. 16ನೀನೇ ನಮ್ಮ ಪಿತೃವಾಗಿದ್ದೀಯಲ್ಲಾ; ಅಬ್ರಹಾಮನು ನಮ್ಮನ್ನರಿಯನು, ಇಸ್ರಾಯೇಲನು ನಮ್ಮನ್ನು ಗುರುತಿಸನು; ಯೆಹೋವನೇ, ನೀನೇ ನಮ್ಮ ಪಿತೃ; ನೀನು ಆದಿಯಿಂದಲೂ ‘ನಮ್ಮ ವಿಮೋಚಕನು’ ಅನ್ನಿಸಿಕೊಂಡಿದ್ದಿ. 17ಯೆಹೋವನೇ, ನಾವು ನಿನ್ನ ಮಾರ್ಗದಿಂದ ತಪ್ಪಿ ಅಲೆಯುವಂತೆ ಏಕೆ ಮಾಡುತ್ತೀ? ನಾವು ನಿನಗೆ ಭಯಪಡದ ಹಾಗೆ ನಮ್ಮ ಹೃದಯವನ್ನು ಕಠಿನಪಡಿಸುವುದೇಕೆ? ನಿನ್ನ ಸೇವಕರ ನಿಮಿತ್ತ ನಿನ್ನ ಬಾಧ್ಯವಾದ ಕುಲಗಳಿಗಾಗಿ ತಿರುಗಿ ಪ್ರಸನ್ನನಾಗು. 18ನಿನ್ನ ಸ್ವಕೀಯಜನರು ಸ್ವಲ್ಪಕಾಲ ಮಾತ್ರ ನಿನ್ನ ಸ್ವತ್ತಾದ ಪವಿತ್ರಸ್ಥಳವನ್ನು ಅನುಭವಿಸುತ್ತಿದ್ದರು; ಈಗ ನಮ್ಮ ವೈರಿಗಳು ಅದನ್ನು ತುಳಿದುಬಿಟ್ಟಿದ್ದಾರೆ. 19ನಿನ್ನ ದೊರೆತನಕ್ಕೆ ಎಂದಿಗೂ ಒಳಪಡದೆ, ನಿನ್ನ ನಾಮವನ್ನು ಧರಿಸದೆ ಇರುವ ಜನರ ಹಾಗಿದ್ದೇವೆ. 64:1ಆಹಾ, ನೀನು ಆಕಾಶವನ್ನು ಸೀಳಿ ಇಳಿದು ಬರಬಾರದೇ! ನಿನ್ನ ದರ್ಶನವು ಉಂಟಾಗಿ ಪರ್ವತಗಳು ಅಗಲಿದರೆ ಎಷ್ಟೋ ಒಳ್ಳೆಯದು! 2ಒಣಗಿಡಕ್ಕೆ ಹತ್ತುವ ಕಿಚ್ಚಿನ ಪ್ರಕಾರ, ನೀರನ್ನು ಕುದಿಸುವ ಬೆಂಕಿಯೋಪಾದಿಯಲ್ಲಿಯೂ ನೀನು ಪ್ರತ್ಯಕ್ಷನಾಗಿ, ನಿನ್ನ ನಾಮಮಹತ್ತನ್ನು ನಿನ್ನ ಶತ್ರುಗಳಿಗೆ ತಿಳಿಯಪಡಿಸಿ, ಜನಾಂಗಗಳನ್ನು ನಿನ್ನ ದರ್ಶನದಿಂದ ನಡುಗಿಸಬಾರದೇ! 3ಹೌದು, ನೀನು ಮೊದಲಿನಂತೆ ನಮ್ಮ ನಿರೀಕ್ಷೆಗೆ ಮೀರಿದ ಭಯಂಕರ ಕೃತ್ಯಗಳನ್ನು ನಡೆಸಿ ಇಳಿದು ಬಂದು, ಪರ್ವತಗಳು ನಿನ್ನ ದರ್ಶನದಿಂದ ನಡುಗಿದರೆ ಎಷ್ಟೋ ಲೇಸು! 4ನಿನ್ನನ್ನು ಬಿಟ್ಟರೆ ನಿರೀಕ್ಷಿಸುವವನಿಗೆ ಕಾರ್ಯಕರ್ತನಾದ ಯಾವ ದೇವರನ್ನೂ ಆದಿಯಿಂದ ಯಾರೂ ಕೇಳಲಿಲ್ಲ, ಯಾರ ಕಿವಿಗೂ ಬೀಳಲಿಲ್ಲ, ಯಾರ ಕಣ್ಣೂ ಕಾಣಲಿಲ್ಲ. 5ಧರ್ಮವನ್ನು ಅನುಸರಿಸಲು ಸಂತೋಷಪಟ್ಟು ನಿನ್ನ ಮಾರ್ಗದಲ್ಲಿ ನಡೆಯುತ್ತಾ ನಿನ್ನನ್ನು ಸ್ಮರಿಸುವವರಿಗೆ ಪ್ರಸನ್ನನಾಗಿದ್ದಿ; ನಮ್ಮ ಮೇಲಾದರೋ ರೋಷಗೊಂಡಿದ್ದಿ; ಆದರೂ ಪಾಪದಲ್ಲಿ ಮುಳುಗಿರುವ ನಮಗೆ ರಕ್ಷಣೆಯಾದೀತೇ?

ಸಂಧ್ಯಾ ಪ್ರಾರ್ಥನೆ: ವಾಚನ (14ನೇ ವಾಚನ)

ಯೆರೆ 31:31–34

31ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಮತ್ತು ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು. 32ಈ ಒಡಂಬಡಿಕೆಯು ನಾನು ಇವರ ಪೂರ್ವಿಕರನ್ನು ಕೈ ಹಿಡಿದು ಐಗುಪ್ತ ದೇಶದೊಳಗಿಂದ ಕರೆದುಕೊಂಡು ಬಂದಾಗ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ; ನಾನು ಅವರಿಗೆ ಪತಿಯಾಗಿದ್ದರೂ ಆ ನನ್ನ ಒಡಂಬಡಿಕೆಯನ್ನು ಅವರು ಮೀರಿದರಷ್ಟೆ. 33ಆ ದಿನಗಳು ಬಂದಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು. ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಯೆಹೋವನು ಹೇಳುತ್ತಾನೆ. 34ನೆರೆಹೊರೆಯವರೂ, ಅಣ್ಣತಮ್ಮಂದಿರೂ ಒಬ್ಬರಿಗೊಬ್ಬರು, ‘ಯೆಹೋವನ ಜ್ಞಾನವನ್ನು ಪಡೆಯಿರಿ’ ಎಂದು ಇನ್ನು ಮೇಲೆ ಬೋಧಿಸಬೇಕಾಗಿರುವುದಿಲ್ಲ; ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ನನ್ನ ಜ್ಞಾನವನ್ನು ಪಡೆದಿರುವರು. ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವುದಿಲ್ಲ. ಇದು ಯೆಹೋವನ ನುಡಿ” ಎಂಬುದೇ.

ಸಂಧ್ಯಾ ಪ್ರಾರ್ಥನೆ: ವಾಚನ (15ನೇ ವಾಚನ)

ದಾನಿ 3

ಪತ್ರಿಕೆ

ರೋಮಾ 6:3–11

3ಕ್ರಿಸ್ತ ಯೇಸುವಿನೊಂದಿಗೆ ಸೇರುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡವರಾದ ನಾವೆಲ್ಲರೂ ಆತನ ಮರಣದಲ್ಲಿ ಪಾಲುಗಾರರಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ? 4ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ಆತನೊಂದಿಗೆ ಹೂಣಲ್ಪಟ್ಟೆವು. ಆದ್ದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆಯಿಂದ ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು. 5ಹೇಗೆಂದರೆ ನಾವು ಆತನ ಮರಣಕ್ಕೆ ಸದೃಶ್ಯವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು. 6ನಮಗೆ ತಿಳಿದಿರುವಂತೆ, ನಮ್ಮ ಪಾಪಾಧೀನಸ್ವಭಾವವು ನಾಶವಾಗಿ, ನಾವು ಇನ್ನೂ ಪಾಪದ ವಶದಲ್ಲಿರದಂತೆ ನಮ್ಮ ಪೂರ್ವಸ್ವಭಾವವು ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟಿದೆ. 7ಸತ್ತವನು ಪಾಪದ ವಶದಿಂದ ಬಿಡುಗಡೆ ಹೊಂದಿದ್ದಾನೆ. 8ಇದಲ್ಲದೆ ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ಜೀವಿಸುವೆವೆಂದು ನಂಬುತ್ತೇವೆ. 9ನಮಗೆ ತಿಳಿದಿರುವಂತೆ, ಕ್ರಿಸ್ತನು ಸತ್ತ ಮೇಲೆ ಜೀವಿತನಾಗಿ ಎದ್ದು ಬಂದದ್ದರಿಂದ ಆತನು ಇನ್ನು ಮುಂದೆ ಸಾಯತಕ್ಕವನಲ್ಲ, ಮರಣವು ಆತನ ಮೇಲೆ ಆಳ್ವಿಕೆ ನಡಿಸುವುದಿಲ್ಲ. 10ಆತನು ಸತ್ತದ್ದು ಒಂದೇ ಸಾರಿ ಅದು ಪಾಪದ ಪಾಲಿಗೆ; ಆತನು ಜೀವಿಸುವುದು ದೇವರಿಗಾಗಿಯೇ, 11ಅದೇ ಪ್ರಕಾರ ನೀವು ಸಹ ನಿಮ್ಮನ್ನು ಕ್ರಿಸ್ತ ಯೇಸುವಿನ ಐಕ್ಯದಿಂದ ಪಾಪದ ಪಾಲಿಗೆ ಸತ್ತವರೂ, ದೇವರಿಗಾಗಿ ಜೀವಿಸುವವರೂ ಎಂದು ಎಣಿಸಿಕೊಳ್ಳಿರಿ.

ಸುವಾರ್ತೆ

ಮತ್ತಾ 28:1–20

1ಸಬ್ಬತ್ ದಿನ ಆದ ಮೇಲೆ ವಾರದ ಮೊದಲನೆಯ ದಿನ ಬೆಳಗಾಗುತ್ತಿರುವಾಗಲೇ ಮಗ್ದಲದ ಮರಿಯಳೂ ಮತ್ತು ಆ ಬೇರೆ ಮರಿಯಳೂ ಸಮಾಧಿಯನ್ನು ನೋಡಲು ಬಂದರು. 2ಇಗೋ, ಮಹಾ ಭೂಕಂಪವುಂಟಾಯಿತು, ಕರ್ತನ ದೂತನು ಆಕಾಶದಿಂದ ಇಳಿದು ಬಂದು ಆ ಕಲ್ಲನ್ನು ಬಾಗಿಲಿನಿಂದ ಉರುಳಿಸಿ ಅದರ ಮೇಲೆ ಕುಳಿತುಕೊಂಡಿದ್ದನು. 3ಅವನ ಮುಖಭಾವವು ಮಿಂಚಿನಂತೆ ಇತ್ತು. ಅವನ ಉಡುಪು ಹಿಮದಂತೆ ಬೆಳ್ಳಗಿತ್ತು; 4ಕಾವಲುಗಾರರು ಹೆದರಿ ನಡುಗಿ ಸತ್ತವರ ಹಾಗಾದರು. 5ಆಗ ದೂತನು ಆ ಹೆಂಗಸರಿಗೆ, “ನೀವು ಹೆದರಬೇಡಿರಿ; ಶಿಲುಬೆಗೆ ಹಾಕಲ್ಪಟ್ಟಿದ್ದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು; 6ಆತನು ಇಲ್ಲಿ ಇಲ್ಲ, ತಾನು ಹೇಳಿದಂತೆಯೇ ಎದ್ದಿದ್ದಾನೆ. ಬನ್ನಿ, ಕರ್ತನು ಮಲಗಿದ್ದ ಸ್ಥಳವನ್ನು ನೋಡಿರಿ; 7ಮತ್ತು ಬೇಗ ಹೋಗಿ ಆತನ ಶಿಷ್ಯರಿಗೆ, ‘ಆತನು ಸತ್ತವರೊಳಗಿಂದ ಎದ್ದಿದ್ದಾನೆಂದು, ಆತನು ನಿಮಗಿಂತಲೂ ಮೊದಲೇ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ’ ಎಂದು ತಿಳಿಸಿರಿ; ನೋಡಿರಿ, ನಾನು ನಿಮಗೆ ಹೇಳಿದ್ದೇನೆ,” ಎಂದು ಹೇಳಿದನು. 8ಅವರು ಭಯದಿಂದಲೂ, ಮಹಾ ಸಂತೋಷದಿಂದಲೂ ಬೇಗ ಸಮಾಧಿಯ ಬಳಿಯಿಂದ ಹೊರಟು ಆತನ ಶಿಷ್ಯರಿಗೆ ಅದನ್ನು ತಿಳಿಸುವುದಕ್ಕೆ ಓಡಿಹೋದರು. 9ಆಗ ಯೇಸು ಅವರನ್ನು ಭೇಟಿಯಾಗಿ, “ನಿಮಗೆ ಶುಭವಾಗಲಿ” ಅಂದನು. ಅವರು ಹತ್ತಿರಕ್ಕೆ ಬಂದು ಆತನ ಪಾದಗಳಿಗೆ ಅಡ್ಡಬಿದ್ದು ಆತನನ್ನು ಆರಾಧಿಸಿದರು. 10ಆಗ ಯೇಸು ಅವರಿಗೆ, “ಹೆದರಬೇಡಿರಿ; ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ಅವರು ನನ್ನನ್ನು ನೋಡುವರು” ಎಂದು ಹೇಳಿದನು. 11ಆಗ ಹೆಂಗಸರು ಹೋಗುತ್ತಿರುವಾಗ, ಇಗೋ, ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ನಡೆದ ಸಂಗತಿಗಳನ್ನೆಲ್ಲಾ ಮುಖ್ಯಯಾಜಕರಿಗೆ ತಿಳಿಸಿದರು. 12ಯಾಜಕರು ಹಿರಿಯರ ಸಂಗಡ ಕೂಡಿಕೊಂಡು ಆಲೋಚನೆ ಮಾಡಿ ಆ ಸಿಪಾಯಿಗಳಿಗೆ ಬಹಳ ಹಣಕೊಟ್ಟು, 13“‘ಯೇಸುವಿನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆಮಾಡುತ್ತಿದ್ದಾಗ ಅವನ ಮೃತದೇಹವನ್ನು ಕದ್ದುಕೊಂಡು ಹೋದರು’ ಎಂದು ಹೇಳಿರಿ; 14ಈ ಸುದ್ದಿಯು ದೇಶಾಧಿಪತಿಯ ಕಿವಿಗೆ ಬಿದ್ದರೆ ನಾವು ಅವನನ್ನು ಸಮಾಧಾನಪಡಿಸಿ ನಿಮಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ” ಎಂದರು. 15ಅದರಂತೆ ಕಾವಲುಗಾರರು ಆ ಹಣವನ್ನು ತೆಗೆದುಕೊಂಡು ತಮಗೆ ಹೇಳಿಕೊಟ್ಟ ಹಾಗೆಯೇ ಮಾಡಿದರು. ಈ ಮಾತು ಇಂದಿನವರೆಗೂ ಯೆಹೂದ್ಯರಲ್ಲಿ ಹರಡಿಕೊಂಡಿದೆ. 16ಆದರೆ ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೋಗಿ, ಯೇಸು ತಮಗೆ ಗೊತ್ತುಮಾಡಿದ್ದ ಬೆಟ್ಟಕ್ಕೆ ಹೋಗಿ ಸೇರಿದರು. 17ಅವರು ಅಲ್ಲಿ ಯೇಸುವನ್ನು ಕಂಡು ಆತನನ್ನು ಆರಾಧಿಸಿದರು; ಆದರೆ ಕೆಲವರು ಸಂದೇಹಪಟ್ಟರು. 18ಯೇಸು ಅವರ ಹತ್ತಿರಕ್ಕೆ ಬಂದು, “ಪರಲೋಕದಲ್ಲಿಯೂ, ಭೂಲೋಕದಲ್ಲಿಯೂ ಇರುವ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. 19ಆದುದರಿಂದ ನೀವು ಹೊರಟುಹೋಗಿ ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡಿ; ಅವರಿಗೆ ತಂದೆ, ಮಗ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ. 20ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ಅನುಸರಿಸುವುದಕ್ಕೆ ಅವರಿಗೆ ಉಪದೇಶ ಮಾಡಿರಿ. ಹಾಗು ಇಗೋ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿನವೂ ನಿಮ್ಮ ಸಂಗಡ ಇರುತ್ತೇನೆ” ಎಂದು ಹೇಳಿದನು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 18 ಏಪ್ರಿಲ್ ಎಂದರೆ ನಾಗರಿಕ ಪಂಚಾಂಗದ 1 ಮೇ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು