ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 21 ಏಪ್ರಿಲ್
ಆರ್ಥೊಡಾಕ್ಸ್ ಪಂಚಾಂಗ · ಏಪ್ರಿಲ್ 8 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 21 ಏಪ್ರಿಲ್ 2027
ಬುಧವಾರ · ಮಹಾ ಉಪವಾಸದ ಆರನೆಯ ವಾರ · ಸ್ವರ 5
ಹಬ್ಬಗಳು ಮತ್ತು ಸಂತರು
Apostles of the Seventy Herodion (Rodion), Agabus, Asyncritus, Rufus, Phlegon and Hermes (1st C)
ಮಹಾ ಉಪವಾಸ ಕಾಲ
ಕಟ್ಟುನಿಟ್ಟಿನ ಉಪವಾಸ (ಒಣ ಆಹಾರ: ರೊಟ್ಟಿ, ತರಕಾರಿ, ಹಣ್ಣು)
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಆರನೆಯ ತಾಸು
1ಸ್ವರವೆತ್ತಿ ಕೂಗು, ಸಂಕೋಚಪಡಬೇಡ, ಕೊಂಬಿನಂತೆ ಧ್ವನಿಗೈದು ನನ್ನ ಜನರಿಗೆ ಅವರ ದ್ರೋಹಗಳನ್ನು ತಿಳಿಯಪಡಿಸು. ಯಾಕೋಬ ವಂಶದವರಿಗೆ ಅವರ ಪಾಪಗಳನ್ನು ತಿಳಿಸು. 2ಅವರಂತು ದಿನದಿನವೂ ನನ್ನ ದರ್ಶನಕ್ಕಾಗಿ ಬಂದು, ನನ್ನ ಮಾರ್ಗವನ್ನು ತಿಳಿದುಕೊಳ್ಳುವುದರಲ್ಲಿ ಹೆಚ್ಚಳಪಡುತ್ತಾರೆ; ತನ್ನ ದೇವರ ನಿಯಮಗಳನ್ನು ಬಿಡದೆ ಧರ್ಮವನ್ನಾಚರಿಸುವ ಜನಾಂಗವೋ ಎಂಬಂತೆ, ಧೈರ್ಯವಾಗಿ ನನ್ನಿಂದ ನ್ಯಾಯವಿಧಿಗಳನ್ನು ಕೇಳಿಕೊಂಡು ದೇವದರ್ಶನದಲ್ಲಿ ಆನಂದಿಸುತ್ತಾರೆ. 3“ನಾವು ಉಪವಾಸಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ; ನಮ್ಮ ಆತ್ಮವನ್ನು ಕುಂದಿಸಿಕೊಂಡಿದ್ದೇವೆ, ನೀನು ಗಮನಿಸದಿರುವುದೇಕೆ” ಅಂದುಕೊಳ್ಳುತ್ತಾರೆ. ಇಗೋ, ನಿಮ್ಮ ಉಪವಾಸದ ದಿನದಲ್ಲಿಯೂ ನಿಮ್ಮ ನಿತ್ಯದ ಕೆಲಸವನ್ನು ನಡೆಸಿ ನಿಮ್ಮ ಆಳುಗಳನ್ನು ದುಡಿತಕ್ಕೆ ಎಳೆಯುತ್ತೀರಿ. 4ನೋಡಿರಿ, ನಿಮ್ಮ ಉಪವಾಸದ ಫಲವೇನೆಂದರೆ, ವ್ಯಾಜ್ಯ, ಕಲಹ, ಕೇಡಿನ ಗುದ್ದು ಇವುಗಳೇ. ನೀವು ಈಗ ಮಾಡುವ ಉಪವಾಸವು ನಿಮ್ಮ ಪ್ರಾರ್ಥನೆಯನ್ನು ಉನ್ನತಲೋಕಕ್ಕೆ ಮುಟ್ಟಿಸತಕ್ಕದ್ದಲ್ಲ. 5ಮನುಷ್ಯನು ತನ್ನ ಆತ್ಮವನ್ನು ಕುಂದಿಸಿಕೊಳ್ಳುವುದಕ್ಕಾಗಿ ನಾನು ನೇಮಿಸಿದ ಉಪವಾಸದಿನವು ಇಂಥದ್ದೋ,? ಒಬ್ಬನು ಜೊಂಡಿನಂತೆ ತಲೆಯನ್ನು ಬೊಗ್ಗಿಸಿಕೊಂಡು ಗೋಣಿತಟ್ಟನ್ನೂ ಮತ್ತು ಬೂದಿಯನ್ನೂ ಆಸನಮಾಡಿಕೊಳ್ಳುವುದು ಯೆಹೋವನಿಗೆ ಸಮರ್ಪಕವಾದ ಉಪವಾಸ ಎನ್ನುತ್ತೀರೋ? 6ನೋಡಿರಿ, ಕೇಡಿನ ಬಂಧನಗಳನ್ನು ಬಿಚ್ಚುವುದು, ನೊಗಹೊರಿಸುವ ಹುರಿಯನ್ನು ಕಳಚುವುದು, ಜಜ್ಜಿ ಹೋದವರನ್ನು ಬಿಡುಗಡೆ ಮಾಡುವುದು, ನೊಗಗಳನ್ನೆಲ್ಲಾ ಮುರಿಯುವುದು, 7ಹಸಿದವರಿಗೆ ಅನ್ನವನ್ನು ಹಂಚುವುದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವುದು, ನಿನ್ನಂತೆ ಮನುಷ್ಯನಾಗಿರುವ ಯಾರಿಗೇ ಆಗಲಿ ಮುಖತಪ್ಪಿಸಿಕೊಳ್ಳದಿರುವುದು, ಇವುಗಳೇ ನನಗೆ ಇಷ್ಟವಾದ ಉಪವಾಸ ವ್ರತವಲ್ಲವೇ. 8ಇದನ್ನು ಆಚರಿಸುವಾಗ ನಿಮಗೆ ಬೆಳಕು ಉದಯದಂತೆ ಮೂಡಿ ಬರುವುದು, ನಿಮ್ಮ ಕ್ಷೇಮವು ಬೇಗನೆ ಬೆಳೆಯುವುದು; ನಿಮ್ಮ ಧರ್ಮವು ನಿಮಗೆ ಮುಂಬಲವಾಗಿರುವುದು, ಯೆಹೋವನ ಮಹಿಮೆಯು ನಿಮಗೆ ಹಿಂಬಲವಾಗಿರುವುದು. 9ಆಗ ನೀವು ಕೂಗಿದರೆ ಯೆಹೋವನು ಉತ್ತರಕೊಡುವನು, ಮೊರೆಯಿಟ್ಟು ಕರೆದರೆ, “ಇಗೋ, ಇದ್ದೇನೆ” ಅನ್ನುವನು. ನೀವು ನಿಮ್ಮ ಮಧ್ಯದೊಳಗಿಂದ ನೊಗವನ್ನು, ಇನ್ನೊಬ್ಬರನ್ನು ದೂಷಣೆಗೆ ಗುರಿಮಾಡಿ ತೋರುವ ಬೆರಳನ್ನು, ಕೆಡುಕಿನ ನುಡಿಯನ್ನು ಬಿಟ್ಟು, 10ನಿಮಗೆ ಪ್ರಿಯವಾದದ್ದನ್ನು ಹಸಿದವರಿಗೆ ಒದಗಿಸಿ, ಕುಗ್ಗಿದವರ ಆಶೆಯನ್ನು ನೆರವೇರಿಸಿದರೆ, ಆಗ ನಿಮಗೆ ಕತ್ತಲಲ್ಲಿ ಬೆಳಕು ಉದಯಿಸುವುದು, ನಿಮ್ಮ ಅಂಧಕಾರವು ಪರಿಹಾರವಾಗಿ ಮಧ್ಯಾಹ್ನವಾಗುವುದು. 11ಮತ್ತು ಯೆಹೋವನು ನಿಮ್ಮನ್ನು ನಿತ್ಯವೂ ನಡೆಸುತ್ತಾ, ಮರುಭೂಮಿಯಲ್ಲಿಯೂ ನಿಮ್ಮ ಆತ್ಮವನ್ನು ತೃಪ್ತಿಗೊಳಿಸಿ, ನಿಮ್ಮ ಎಲುಬುಗಳನ್ನು ಬಲಗೊಳಿಸುವನು; ನೀವು ತಂಪಾದ ತೋಟಕ್ಕೂ, ನೀರಿಗೆ ಮೋಸವಿಲ್ಲದ ಬುಗ್ಗೆಗೂ ಸಮಾನವಾಗುವಿರಿ.
ಸಂಧ್ಯಾ ಪ್ರಾರ್ಥನೆ: ವಾಚನ
26ಯೋಸೇಫನು ಮನೆಗೆ ಬಂದಾಗ, ಅವರು ತಮ್ಮ ಕೈಯಲ್ಲಿದ್ದ ಕಾಣಿಕೆಯನ್ನು ಮನೆಯೊಳಗೆ ತಂದು, ಅವನಿಗೆ ಕೊಟ್ಟು, ಅವನ ಮುಂದೆ ಅಡ್ಡಬಿದ್ದರು. 27ಅವನು ಅವರ ಯೋಗ ಕ್ಷೇಮವನ್ನು ವಿಚಾರಿಸಿ ಅವರಿಗೆ ಹೇಳಿದ್ದೇನೆಂದರೆ, “ನೀವು ಹೇಳಿದ, ಮುದುಕನಾಗಿರುವ ನಿಮ್ಮ ತಂದೆ ಕ್ಷೇಮವೋ? ಅವನು ಇನ್ನೂ ಬದುಕಿದ್ದಾನೋ?” ಎಂದು ಕೇಳಿದನು. 28ಅವರು ಅದಕ್ಕೆ, “ನಿನ್ನ ಸೇವಕನಾದ ನಮ್ಮ ತಂದೆ ಕ್ಷೇಮವಾಗಿದ್ದಾನೆ. ಅವನು ಇನ್ನೂ ಬದುಕಿದ್ದಾನೆ” ಎಂದು ಹೇಳಿ, ತಮ್ಮ ತಲೆಗಳನ್ನು ಬಾಗಿಸಿ ಅವನಿಗೆ ಅಡ್ಡಬಿದ್ದರು. 29ಆಗ ಅವನು ಕಣ್ಣೆತ್ತಿ ತನ್ನ ಒಡಹುಟ್ಟಿದ ತಮ್ಮನಾದ ಬೆನ್ಯಾಮೀನನನ್ನು ನೋಡಿ, “ನೀವು ಹೇಳಿದ ನಿಮ್ಮ ಕಿರಿಯ ತಮ್ಮನು ಇವನೋ?” ಎಂದು ಕೇಳಿ ಅವನಿಗೆ, “ಮಗನೇ, ದೇವರ ದಯೆ ನಿನ್ನ ಮೇಲೆ ಇರಲಿ” ಎಂದು ಹೇಳಿದನು. 30ಯೋಸೇಫನು ಅವಸರವಾಗಿ ಎದ್ದು ತನ್ನ ಕೋಣೆಯೊಳಗೆ ಹೋದನು. ಏಕೆಂದರೆ ತನ್ನ ಕರಳು ತಮ್ಮನ ಮೇಲೆ ಮರುಗಿದ್ದರಿಂದ ಅವನು ತನ್ನ ಕೋಣೆಯೊಳಗೆ ಹೋಗಿ ಅಲ್ಲಿ ಅತ್ತನು. 31ಆ ಮೇಲೆ ಮುಖವನ್ನು ತೊಳೆದುಕೊಂಡು ಹೊರಗೆ ಬಂದು, ಮನಸ್ಸನ್ನು ಬಿಗಿ ಹಿಡಿದು, “ಊಟಕ್ಕೆ ಬಡಿಸಿರಿ” ಎಂದು ಅಪ್ಪಣೆ ಕೊಟ್ಟನು. 45:1ಯೋಸೇಫನು ಇದನ್ನು ಕೇಳಿ ತನ್ನ ಎದುರಿನಲ್ಲಿ ನಿಂತಿದ್ದವರ ಮುಂದೆ ದುಃಖವನ್ನು ತಾಳಲಾರದೆ, “ಎಲ್ಲರನ್ನು ನನ್ನ ಬಳಿಯಿಂದ ಹೊರಗೆ ಕಳುಹಿಸಿರಿ” ಎಂದು ಕೂಗಿದನು. ಯೋಸೇಫನು ತನ್ನ ಅಣ್ಣತಮ್ಮಂದಿರಿಗೆ ತನ್ನ ಗುರುತು ಸಿಕ್ಕುವಂತೆ ಮಾಡುವ ವೇಳೆಯಲ್ಲಿ ಬೇರೆ ಯಾರೂ ಹತ್ತಿರ ಇರಲಿಲ್ಲ. 2ಅವನು ಗಟ್ಟಿಯಾಗಿ ಅತ್ತದ್ದರಿಂದ ಐಗುಪ್ತರಿಗೂ, ಫರೋಹನ ಮನೆಯವರಿಗೂ ಆ ಶಬ್ದವು ಕೇಳಿಸಿತು. 3ಅವನು, “ತನ್ನ ಅಣ್ಣತಮ್ಮಂದಿರಿಗೆ ನಾನು ಯೋಸೇಫನು, ನನ್ನ ತಂದೆ ಇನ್ನೂ ಇದ್ದಾನೋ?” ಎಂದು ಹೇಳಲು ಅವರು ಅವನ ಮುಂದೆ ತತ್ತರಗೊಂಡು ಉತ್ತರಕೊಡಲಾರದೆ ಹೋದರು. 4ಯೋಸೇಫನು, “ನನ್ನ ಹತ್ತಿರಕ್ಕೆ ದಯಮಾಡಿ ಬನ್ನಿರಿ” ಎಂದು ಅಣ್ಣಂದಿರಿಗೆ ಹೇಳಲು ಅವರು ಹತ್ತಿರಕ್ಕೆ ಬಂದರು. ಅವನು ಅವರಿಗೆ “ಐಗುಪ್ತ ದೇಶಕ್ಕೆ ಮಾರಿಬಿಟ್ಟ ನಿಮ್ಮ ತಮ್ಮನಾದ ಯೋಸೇಫನು ನಾನೇ. 5ನೀವು ನನ್ನನ್ನು ಹಾಗೆ ಮಾರಿದ್ದಕ್ಕಾಗಿ ವ್ಯಸನಪಟ್ಟು ದುಃಖಿಸಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದನು. 6ದೇಶಕ್ಕೆ ಬರ ಬಂದು ಎರಡು ವರ್ಷವಾಗಿದೆಯಷ್ಟೆ. ಇನ್ನೂ ಐದು ವರ್ಷಗಳ ಪರ್ಯಂತರ ಬಿತ್ತುವುದಕ್ಕಾಗಲಿ, ಕೊಯ್ಯುವುದಕ್ಕಾಗಲಿ, ಅವಕಾಶವಿಲ್ಲ. 7ನಿಮ್ಮ ಸಂತತಿ ಭೂಮಿಯ ಮೇಲೆ ಉಳಿಯುವಂತೆಯೂ ನೀವು ಈ ವಿಪತ್ತಿಗೆ ಸಿಕ್ಕದೆ, ಬಹು ಜನವಾಗುವಂತೆಯೂ ದೇವರು ನನ್ನನ್ನು ಮೊದಲು ಕಳುಹಿಸಿದನು. 8“ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿದನಲ್ಲದೆ ನೀವು ಕಳುಹಿಸಲಿಲ್ಲ. ನನ್ನ ತಂದೆಯು ನನ್ನನ್ನು ಫರೋಹನ ಮಂತ್ರಿಯನ್ನಾಗಿಯೂ, ಫರೋಹನ ಅರಮನೆಯಲ್ಲಿ ಅಧಿಪತಿಯನ್ನಾಗಿಯೂ, ಐಗುಪ್ತ ದೇಶಕ್ಕೆ ಸರ್ವಾಧಿಕಾರಿಯನ್ನಾಗಿಯೂ ಮಾಡಿದ್ದಾನೆ. 9ನೀವು ಬೇಗ ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ, ‘ನಿನ್ನ ಮಗನಾದ ಯೋಸೇಫನು ಹೀಗೆನ್ನುತ್ತಾನೆ, ದೇವರು ನನ್ನನ್ನು ಐಗುಪ್ತ ದೇಶಕ್ಕೆ ಸರ್ವಾಧಿಕಾರಿಯನ್ನಾಗಿ ನೇಮಿಸಿದ್ದಾನೆ. ನೀನು ತಡಮಾಡದೆ ನನ್ನ ಬಳಿಗೆ ಬಾ. 10ಗೋಷೆನ್ ಸೀಮೆಯಲ್ಲಿ ನೀನು ವಾಸಮಾಡಬಹುದು. ನೀನೂ, ನಿನ್ನ ಮಕ್ಕಳೂ, ಮೊಮ್ಮಕ್ಕಳೂ, ಕುರಿದನಗಳೂ ಮೊದಲಾದ ಎಲ್ಲವೂ ನನ್ನ ಬಳಿಯಲ್ಲೇ ಇರಬೇಕು. 11ಈ ಬರಗಾಲ ಮುಗಿಯುವುದಕ್ಕೆ ಇನ್ನೂ ಐದು ವರ್ಷ ಹೋಗಬೇಕು. ಆದ್ದರಿಂದ ನಿನಗೂ, ನಿನ್ನ ಮನೆಯವರಿಗೂ ನಿನಗಿರುವ ಎಲ್ಲವುಗಳಿಗೂ ಬಡತನವುಂಟಾಗದಂತೆ ಇಲ್ಲಿ ನಿನ್ನನ್ನು ಪೋಷಿಸುವೆನೆಂದು’ ಹೇಳುತ್ತಾನೆ ಎಂಬುದಾಗಿ ತಿಳಿಸಿರಿ. 12“ನಾನು ಸ್ವತಃ ನಿಮ್ಮ ಸಂಗಡ ಮಾತನಾಡಿದ್ದೆನಲ್ಲಾ. ಅದಕ್ಕೆ ನೀವೇ ಸಾಕ್ಷಿ. ನನ್ನ ಒಡಹುಟ್ಟಿದವನಾದ ಬೆನ್ಯಾಮೀನನೂ ಸಾಕ್ಷಿ. 13ಐಗುಪ್ತ ದೇಶದಲ್ಲಿ ನನಗಿರುವ ಎಲ್ಲಾ ವೈಭವವನ್ನೂ, ನೀವು ಕಂಡಿದ್ದೆಲ್ಲವನ್ನು ತಂದೆಗೆ ತಿಳಿಸಿ ಬೇಗನೆ ಅವನನ್ನು ಇಲ್ಲಿಗೆ ಕರೆದುಕೊಂಡು ಬರಬೇಕು” ಎಂದು ಹೇಳಿ, 14ತನ್ನ ತಮ್ಮನಾದ ಬೆನ್ಯಾಮೀನನ ಕೊರಳನ್ನು ಅಪ್ಪಿಕೊಂಡು ಅತ್ತನು. ಬೆನ್ಯಾಮೀನನೂ ಅವನ ಕೊರಳನ್ನು ಅಪ್ಪಿಕೊಂಡು ಅತ್ತನು. 15ಇದಲ್ಲದೆ ಅವನು ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಅತ್ತನು. ತರುವಾಯ ಅವರು ಅವನ ಸಂಗಡ ಮಾತನಾಡಿದರು. 16ಯೋಸೇಫನ ಅಣ್ಣತಮ್ಮಂದಿರು ಬಂದ ಸಮಾಚಾರವು ಫರೋಹನ ಮನೆಯವರಿಗೆ ತಿಳಿದಾಗ ಫರೋಹನಿಗೂ ಅವನ ಪರಿವಾರದವರಿಗೂ ಸಂತೋಷವಾಯಿತು.
ಸಂಧ್ಯಾ ಪ್ರಾರ್ಥನೆ: ವಾಚನ
23ತನ್ನ ಬಾಯನ್ನೂ, ನಾಲಿಗೆಯನ್ನೂ ಕಾಯುವವನು ತೊಂದರೆಗಳಿಂದ ರಕ್ಷಿಸಿಕೊಳ್ಳುವನು. 24“ಧರ್ಮನಿಂದಕ” ಎನ್ನಿಸಿಕೊಳ್ಳುವವನು ಸೊಕ್ಕೇರಿದ ಅಹಂಕಾರಿಯಾಗಿ, ಗರ್ವ ಮತ್ತು ಮದದಿಂದ ಪ್ರವರ್ತಿಸುವನು. 25ಸೋಮಾರಿಯ ಆಶೆಯು ಅವನನ್ನು ಕೊಲ್ಲುವುದು, ಅವನ ಕೈಗಳು ದುಡಿಯಲಾರವು. 26ಧರ್ಮಿಯು ಹಿಂತೆಗೆಯದೆ ಕೊಡುವನು, ಲೋಭಿಯು ದಿನವೆಲ್ಲಾ ಆಶಿಸುತ್ತಲೇ ಇರುವನು. 27ದುಷ್ಟರ ಯಜ್ಞವೇ ಅಸಹ್ಯ, ಅದನ್ನು ದುರ್ಬುದ್ಧಿಯಿಂದ ಅರ್ಪಿಸುವುದು ಮತ್ತೂ ಅಸಹ್ಯ. 28ಸುಳ್ಳು ಸಾಕ್ಷಿಯು ಅಳಿದುಹೋಗುವುದು, ಕೇಳಿದ್ದನ್ನೇ ಹೇಳುವವನ ಸಾಕ್ಷಿಯು ಶಾಶ್ವತವಾಗಿರುವುದು. 29ದುಷ್ಟನ ಮುಖದಲ್ಲಿ ಲಜ್ಜೆಯಿಲ್ಲ, ಸತ್ಯವಂತನು ತನ್ನ ನಡತೆಯನ್ನು ಸರಿಪಡಿಸಿಕೊಳ್ಳುತ್ತಿರುವನು. 30ಯಾವ ಜ್ಞಾನವೂ, ಯಾವ ವಿವೇಕವೂ, ಯಾವ ಆಲೋಚನೆಯೂ ಯೆಹೋವನೆದುರಿಗೆ ನಿಲ್ಲುವುದಿಲ್ಲ. 31ಅಶ್ವಬಲವು ಯುದ್ಧದಿನಕ್ಕಾಗಿ ಸನ್ನದ್ಧವಾಗಿದ್ದರೂ ಜಯವು ಯೆಹೋವನಿಂದಲೇ. 22:1ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ, ಬೆಳ್ಳಿ, ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯ. 2ಬಡವರು ಮತ್ತು ಸಿರಿವಂತರು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರನ್ನೆಲ್ಲಾ ಸೃಷ್ಟಿಸಿದನು. 3ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು, ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು. 4ಧನ, ಮಾನ ಮತ್ತು ಜೀವಗಳು ದೀನಭಾವಕ್ಕೂ, ಯೆಹೋವನ ಭಯಕ್ಕೂ ಫಲ.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 8 ಏಪ್ರಿಲ್ ಎಂದರೆ ನಾಗರಿಕ ಪಂಚಾಂಗದ 21 ಏಪ್ರಿಲ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು