Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 29 ಮಾರ್ಚ್

ಆರ್ಥೊಡಾಕ್ಸ್ ಪಂಚಾಂಗ · ಮಾರ್ಚ್ 16 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 29 ಮಾರ್ಚ್ 2027

ಸೋಮವಾರ · ಮಹಾ ಉಪವಾಸದ ಮೂರನೆಯ ವಾರ · ಸ್ವರ 2

ಹಬ್ಬಗಳು ಮತ್ತು ಸಂತರು

Martyr Sabinus of Egypt († 287)

ಮಹಾ ಉಪವಾಸ ಕಾಲ

ಕಟ್ಟುನಿಟ್ಟಿನ ಉಪವಾಸ (ಒಣ ಆಹಾರ: ರೊಟ್ಟಿ, ತರಕಾರಿ, ಹಣ್ಣು)

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಆರನೆಯ ತಾಸು

ಯೆಶಾ 8:13–9:7

13ಸೇನಾಧೀಶ್ವರನಾದ ಯೆಹೋವನನ್ನೇ ಪ್ರತಿಷ್ಠೆಪಡಿಸಿರಿ; ಆತನಿಗೆ ಹೆದರಿಕೊಳ್ಳಿರಿ, ನಡುಗಿರಿ. 14ಆತನು ಆಶ್ರಯವಾಗುವನು; ಆದರೆ ಇಸ್ರಾಯೇಲಿನ ಎರಡು ಮನೆತನಕ್ಕೆ ಎಡವುವ ಕಲ್ಲೂ, ಮುಗ್ಗರಿಸುವ ಬಂಡೆಯೂ ಯೆರೂಸಲೇಮಿನ ನಿವಾಸಿಗಳಿಗೆ ಬಲೆಯೂ, ಪಂಜರವಾಗುವುದು. 15ಅವರಲ್ಲಿ ಅನೇಕರು ಎಡವಿ ಬಿದ್ದು ಭಂಗಪಡುವರು, ಬಲೆಗೆ ಸಿಕ್ಕಿ ವಶವಾಗುವರು.” 16ಬೋಧನೆಯನ್ನು ಕಟ್ಟಿಡು, ನನ್ನ ಶಿಷ್ಯರೊಳಗೆ ಉಪದೇಶವನ್ನು ಮುಚ್ಚಿ ಮುದ್ರಿಸು. 17ಯಾಕೋಬಿನ ಮನೆತನದವರಿಗೆ ಮುಖವನ್ನು ಮರೆಮಾಡಿಕೊಂಡಿರುವ ಯೆಹೋವನಿಗಾಗಿ ನಾನು ಕಾದುಕೊಂಡು ಎದುರು ನೋಡುತ್ತಿರುವೆನು. 18ಆಹಾ, ನಾನೂ, ನನಗೆ ಯೆಹೋವನು ದಯಪಾಲಿಸಿರುವ ಮಕ್ಕಳೂ ಚೀಯೋನ್ ಪರ್ವತದಲ್ಲಿ ವಾಸವಾಗಿರುವ ಸೇನಾಧೀಶ್ವರನಾದ ಯೆಹೋವನಿಂದ ಉಂಟಾದ ಗುರುತುಗಳಾಗಿಯೂ, ಅದ್ಭುತಗಳಾಗಿಯೂ ಇಸ್ರಾಯೇಲರ ಮಧ್ಯದಲ್ಲಿದ್ದೇವೆ. 19“ಗುಣಗುಟ್ಟುವ, ಪಿಸುಮಾತನಾಡುವ, ಪ್ರೇತವಿಚಾರಕರನ್ನೂ, ಬೇತಾಳಿಕರನ್ನೂ ಆಶ್ರಯಿಸಿರಿ” ಎಂದು ಒಂದು ವೇಳೆ ನಿಮಗೆ ಹೇಳಾರು, “ಜನರು ತಮ್ಮ ದೇವರನ್ನೇ ಆಶ್ರಯಿಸಬಾರದೋ? ಜೀವಿತರಿಗಾಗಿ ಸತ್ತವರಲ್ಲಿ ವಿಚಾರಿಸುವುದು ಯುಕ್ತವೋ? 20ದೇವರ ಉಪದೇಶವನ್ನೂ, ದೇವರ ಸಾಕ್ಷಿಯನ್ನೂ ವಿಚಾರಿಸುವ” ಎಂದು ಅವರು ಹೇಳದಿದ್ದರೆ ಅವರಿಗೆ ಎಂದಿಗೂ ಬೆಳಗಾಗುವುದಿಲ್ಲ. 21ಅವರು ಘೋರ ಕಷ್ಟಕ್ಕೊಳಗಾಗಿ ಹಸಿವೆಯಿಂದ ದೇಶದಲ್ಲಿ ಅಲೆಯುವರು. ಅವರು ಹಸಿದಾಗ ಸಿಟ್ಟುಗೊಂಡು ತಮ್ಮ ಅರಸನನ್ನೂ, ತಮ್ಮ ದೇವರನ್ನೂ ಶಪಿಸಿ ಮೇಲಕ್ಕೆ ನೋಡುವರು. 22ಮೇಲಕ್ಕೆ ಕಣ್ಣೆತ್ತಿದ್ದರೂ, ಭೂಮಿಯನ್ನು ದೃಷ್ಟಿಸಿದರೂ ಇಗೋ, ಇಕ್ಕಟ್ಟೆಂಬ ಕತ್ತಲೂ, ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವುದು. ಕಾರ್ಗತ್ತಲೆಗೆ ತಳ್ಳಲ್ಪಡುವರು. 9:1ಆದರೆ ಸಂಕಟಪಟ್ಟ ದೇಶಕ್ಕೆ ಅಂಧಕಾರವಿಲ್ಲ. ಪೂರ್ವಕಾಲದಲ್ಲಿ ಜೆಬುಲೋನ್ ಮತ್ತು ನಫ್ತಾಲಿ ಸೀಮೆಗಳನ್ನು, ಆತನು ಅವಮಾನಕ್ಕೆ ಗುರಿಮಾಡಿದನು. ಅನಂತರದಲ್ಲಿ ಯೊರ್ದನಿನ ಆಚೆಯ ಸೀಮೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ ಈ ಪ್ರಾಂತ್ಯವನ್ನೆಲ್ಲಾ ಘನಪಡಿಸಿದ್ದಾನೆ. 2ಕತ್ತಲಲ್ಲಿ ಸಂಚರಿಸಿದ ಜನರಿಗೆ ದೊಡ್ಡ ಬೆಳಕು ಕಾಣಿಸಿತು. ಕಾರ್ಗತ್ತಲಾದ ದೇಶದಲ್ಲಿದ್ದವರಿಗೆ ಪ್ರಕಾಶವು ಹೊಳೆಯಿತು. 3ನೀನು ಪ್ರಜೆಗಳನ್ನು ವೃದ್ಧಿಗೊಳಿಸಿದ್ದೀ. ಅವರಿಗೆ ಸಂತೋಷವನ್ನು ಹೆಚ್ಚಿಸಿದ್ದೀ. ಸುಗ್ಗಿ ಕಾಲದಲ್ಲಿ ಜನರು ಹರ್ಷಿಸುವ ಹಾಗೂ, ಕೊಳ್ಳೆಯನ್ನು ಹಂಚಿಕೊಳ್ಳುವವರು, ಹೆಚ್ಚಳಪಡುವವರು ನಿನ್ನ ಮುಂದೆ ಆನಂದಿಸುತ್ತಾರೆ. 4ಅವರಿಗೆ ಭಾರವಾದ ನೊಗವನ್ನೂ, ಬೆನ್ನನ್ನು ಹೊಡೆದ ಕೋಲನ್ನೂ, ಬಿಟ್ಟೀ ಹಿಡಿದವನ ದೊಣ್ಣೆಯನ್ನೂ ಮಿದ್ಯಾನಿನ ನಾಶನದ ದಿನದಲ್ಲಿ ಮುರಿದುಬಿಟ್ಟಂತೆ ಮುರಿದು ಬಿಟ್ಟಿದ್ದೀ. 5ಯುದ್ಧದ ಗದ್ದಲದಲ್ಲಿ ತುಳಿದಾಡಿದವರೆಲ್ಲರ ಪಾದರಕ್ಷೆಗಳೂ, ರಕ್ತದಲ್ಲಿ ಅದ್ದಿದ ಉಡುಪುಗಳೂ, ಅಗ್ನಿಗೆ ಆಹಾರವಾಗಿ ಸುಟ್ಟುಹೋಗುವವು. 6ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವುದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರೂ, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬುದು ಆತನ ಹೆಸರು. 7ಆತನ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ದಿಯಾಗುವುದು. ದಾವೀದನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವುದು. ಆ ರಾಜ್ಯವು ಇಂದಿನಿಂದ ಯಾವಾಗಲೂ ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವುದು. ಸೇನಾಧೀಶ್ವರನಾದ ಯೆಹೋವನ ಅನುಗ್ರಹವು ಇದನ್ನು ನೆರವೇರಿಸುವುದು.

ಸಂಧ್ಯಾ ಪ್ರಾರ್ಥನೆ: ವಾಚನ

ಆದಿ 6:9–22

9ನೋಹನ ಚರಿತ್ರೆ: ನೋಹನು ಸತ್ಯವಂತನೂ ಎಲ್ಲಾ ಜನರಲ್ಲಿ ನೀತಿವಂತನು ಆಗಿದ್ದನು; ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು. 10ನೋಹನು ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳನ್ನು ಪಡೆದನು. 11ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟ ನಡತೆಯಿಂದ ದೋಷಿಗಳಾಗಿದ್ದರು. ಹಿಂಸೆ ಮತ್ತು ಅನ್ಯಾಯ ಭೂಮಿಯನ್ನು ತುಂಬಿಕೊಂಡಿತ್ತು. 12ದೇವರು ಭೂಮಿಯನ್ನು ನೋಡಿದಾಗ ಅದು ಕೆಟ್ಟುಹೋಗಿ ಕಲುಷಿತಗೊಂಡಿತ್ತು. ಭೂನಿವಾಸಿಗಳೆಲ್ಲರೂ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು. 13ಆಗ ದೇವರು ನೋಹನಿಗೆ, “ಎಲ್ಲಾ ಮನುಷ್ಯರಿಗೆ ಅಂತ್ಯವನ್ನು ತೀರ್ಮಾನಿಸಿದ್ದೇನೆ; ಭೂಲೋಕವು ಅನ್ಯಾಯದಿಂದಲೂ ಹಿಂಸೆಯಿಂದಲೂ ತುಂಬಿದೆ; ನಾನು ಭೂಮಿಯೊಂದಿಗೆ ಅವರನ್ನೂ ಅಳಿಸಿ ಬಿಡುತ್ತೇನೆ. 14ನೀನು ನಿನಗೋಸ್ಕರ ತುರಾಯಿ ಮರದಿಂದ ನಾವೆಯನ್ನು ಮಾಡಿಕೋ; ಅದರಲ್ಲಿ ತುಂಬ ಕೋಣೆಗಳು ಇರಬೇಕು; ಒಳಕ್ಕೂ ಹೊರಕ್ಕೂ ರಾಳವನ್ನು ಹಚ್ಚು. 15ನೀನು ಅದನ್ನು ಮಾಡಬೇಕಾದ ವಿಧಾನ ಹೇಗೆಂದರೆ, ಅದು ಮುನ್ನೂರು ಮೊಳ ಉದ್ದವೂ, ಐವತ್ತು ಮೊಳ ಅಗಲವೂ, ಮೂವತ್ತು ಮೊಳ ಎತ್ತರವೂ ಉಳ್ಳದ್ದಾಗಿರಬೇಕು. 16ಅದರ ಚಾವಣಿಯ ಕೆಳಗೆ ಸುತ್ತಲೂ ಒಂದು ಮೊಳ ಎತ್ತರದ ಕಿಟಕಿಯನ್ನು ಮಾಡಬೇಕು; ಪಕ್ಕದಲ್ಲಿ ಬಾಗಿಲನ್ನಿಡಬೇಕು. ನಾವೆಯಲ್ಲಿ ಒಂದರ ಮೇಲೆ ಒಂದಾಗಿ ಮೂರು ಅಂತಸ್ತುಗಳನ್ನು ಮಾಡಬೇಕು. 17ನಾನಂತೂ ಭೂಮಿಯ ಮೇಲೆ ಜಲಪ್ರಳಯವನ್ನು ಬರಮಾಡಿ ಆಕಾಶದ ಕೆಳಗಿರುವ ಸಕಲಪ್ರಾಣಿಗಳನ್ನೂ ನಾಶಮಾಡುವೆನು; ಭೂಮಿಯಲ್ಲಿರುವ ಸಮಸ್ತವೂ ಲಯವಾಗುವುದು. 18“ಆದರೆ ನಿನ್ನೊಂದಿಗೆ ನಾನು ಒಂದು ಒಡಂಬಡಿಕೆಯನ್ನು ಮಾಡುತ್ತೇನೆ. ನೀನೂ ನಿನ್ನ ಹೆಂಡತಿ, ಮಕ್ಕಳು, ಸೊಸೆಯರು ಸಹಿತವಾಗಿ ನಾವೆಯಲ್ಲಿ ಸೇರಬೇಕು. 19ಇದಲ್ಲದೆ ಜೀವಿಗಳ ಪ್ರತಿ ಜಾತಿಯಲ್ಲಿಯೂ ಒಂದು ಗಂಡು ಒಂದು ಹೆಣ್ಣು ಹೀಗೆ ಎರಡೆರಡನ್ನು ನಾವೆಯಲ್ಲಿ ಸೇರಿಸಿ, ನಿನ್ನೊಂದಿಗೆ ಉಳಿಸಿ ಕಾಪಾಡಿಕೊಳ್ಳಬೇಕು. 20ಪಶು, ಪಕ್ಷಿ, ಕಾಡುಮೃಗ, ಕ್ರಿಮಿ, ಕೀಟ ಇವುಗಳ ಸಕಲ ಜಾತಿಗಳಲ್ಲಿಯೂ ಎರಡೆರಡು ಬದುಕುವುದಕ್ಕಾಗಿ ನಿನ್ನ ಬಳಿಗೆ ಬರುವವು. 21ನಿನಗೂ ಅವುಗಳಿಗೂ ಪೋಷಣೆಯಾಗುವಂತೆ ಸಕಲ ವಿಧವಾದ ಆಹಾರ ಪದಾರ್ಥಗಳನ್ನು ನಿನ್ನ ಬಳಿಯಲ್ಲಿ ಕೂಡಿಸಿಟ್ಟುಕೊಳ್ಳಬೇಕು” ಎಂದು ಹೇಳಿದನು. 22ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.

ಸಂಧ್ಯಾ ಪ್ರಾರ್ಥನೆ: ವಾಚನ

ಜ್ಞಾನೋ 8:1–21

1ಜ್ಞಾನವೆಂಬಾಕೆಯು ಕರೆಯುತ್ತಾಳಲ್ಲವೇ? ವಿವೇಕವೆಂಬ ಆಕೆಯು ಧ್ವನಿಗೈಯುತ್ತಾಳಲ್ಲವೇ? 2ಆಕೆಯು ರಾಜಮಾರ್ಗಗಳ ಮುಖ್ಯಸ್ಥಾನದಲ್ಲಿ, ದಾರಿಯ ಪಕ್ಕದಲ್ಲಿ, ನಡುಬೀದಿಯಲ್ಲಿ ನಿಂತುಕೊಳ್ಳುತ್ತಾಳೆ. 3ಆಕೆ ಪಟ್ಟಣದ ಪ್ರವೇಶ ದ್ವಾರದಲ್ಲಿ, ಬಾಗಿಲುಗಳೊಳಗೆ ಜನಸೇರುವ ಸ್ಥಳದಲ್ಲಿ ಹೀಗೆ ಕೂಗುತ್ತಾಳೆ, 4“ಜನರೇ, ನಿಮ್ಮನ್ನೇ ಕರೆಯುತ್ತೇನೆ, ಮಾನವರಿಗಾಗಿಯೇ ಧ್ವನಿಗೈಯುತ್ತೇನೆ. 5ಮೂಢರೇ, ಜಾಣತನವನ್ನು ಕಲಿತುಕೊಳ್ಳಿರಿ, ಜ್ಞಾನಹೀನರೇ, ಬುದ್ಧಿಯನ್ನು ಗ್ರಹಿಸಿಕೊಳ್ಳಿರಿ. 6ಕೇಳಿರಿ, ನಾನು ಶ್ರೇಷ್ಠವಾದ ಸಂಗತಿಗಳನ್ನು ಹೇಳುವೆನು, ಯಥಾರ್ಥಕ್ಕಾಗಿಯೇ ತುಟಿಗಳನ್ನು ತೆರೆಯುವೆನು, 7ನನ್ನ ಬಾಯಿ ಸತ್ಯವನ್ನೇ ಆಡುವುದು, ದುಷ್ಟತನವು ನನ್ನ ತುಟಿಗಳಿಗೆ ಅಸಹ್ಯವಾಗಿದೆ. 8ನನ್ನ ಮಾತುಗಳೆಲ್ಲಾ ನೀತಿಭರಿತವಾಗಿವೆ, ಅವುಗಳಲ್ಲಿ ಕಪಟವೂ, ವಕ್ರತೆಯೂ ಇಲ್ಲ. 9ಅವೆಲ್ಲಾ ಗ್ರಹಿಕೆಯುಳ್ಳವನಿಗೆ ನ್ಯಾಯವಾಗಿಯೂ, ತಿಳಿವಳಿಕೆಯನ್ನು ಪಡೆದವರಿಗೆ ಯಥಾರ್ಥವಾಗಿಯೂ ತೋರುವವು. 10ನನ್ನ ಬೋಧನೆಯನ್ನು ಬೆಳ್ಳಿಗಿಂತಲೂ ಮತ್ತು ಜ್ಞಾನೋಪದೇಶವನ್ನು ಅಪರಂಜಿಗಿಂತಲೂ ಉತ್ತಮವೆಂದು ಹೊಂದಿಕೊಳ್ಳಿರಿ. 11ಜ್ಞಾನವು ಹವಳಕ್ಕಿಂತಲೂ ಶ್ರೇಷ್ಠ, ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ. 12ಜ್ಞಾನವೆಂಬ ನನಗೆ ಜಾಣ್ಮೆಯೇ ನಿವಾಸ, ಯುಕ್ತಿಗಳ ತಿಳಿವಳಿಕೆಯನ್ನು ಹೊಂದಿದ್ದೇನೆ. 13ಯೆಹೋವನ ಭಯವು ಪಾಪದ್ವೇಷವನ್ನು ಹುಟ್ಟಿಸುತ್ತದೆ; ಗರ್ವ, ಅಹಂಭಾವ, ದುರ್ಮಾರ್ಗತನ, ಕುಟಿಲ ಭಾಷಣ ಇವುಗಳನ್ನು ಹಗೆಮಾಡುತ್ತೇನೆ. 14ಸದ್ಯೋಚನೆಯೂ, ಸುಜ್ಞಾನವೂ, ಸಾಮರ್ಥ್ಯವೂ ನನ್ನಲ್ಲಿವೆ, ವಿವೇಕವೂ ನಾನೇ. 15ನನ್ನ ಸಹಾಯದಿಂದ ರಾಜರು ಆಳುವರು, ಅಧಿಪತಿಗಳು ಸಹ ನ್ಯಾಯತೀರಿಸುವರು. 16ನನ್ನ ಮೂಲಕ ಪ್ರಭುಗಳು, ನಾಯಕರು ಅಂತು ಭೂಪತಿಗಳೆಲ್ಲರೂ ದೊರೆತನ ಮಾಡುವರು. 17ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ, ಆತುರದಿಂದ ಹುಡುಕುವವರು ನನ್ನನ್ನು ಕಂಡುಕೊಳ್ಳುವರು. 18ನನ್ನಲ್ಲಿ ಧನ, ಘನತೆ, ಶ್ರೇಷ್ಠಸಂಪತ್ತೂ, ನೀತಿಯೂ ಇರುತ್ತವೆ. 19ನನ್ನಿಂದಾಗುವ ಫಲವು ಬಂಗಾರಕ್ಕಿಂತಲೂ ಹೌದು ಅಪರಂಜಿಗಿಂತಲೂ ಉತ್ತಮ. ನನ್ನ ಮೂಲಕವಾದ ಆದಾಯವು ಚೊಕ್ಕ ಬೆಳ್ಳಿಗಿಂತಲೂ ಅಮೂಲ್ಯವಾಗಿದೆ. 20ನಾನು ಹಿಡಿದಿರುವ ದಾರಿಯು ನೀತಿಯೇ, ನ್ಯಾಯಮಾರ್ಗಗಳಲ್ಲಿ ನಡೆಯುತ್ತೇನೆ. 21ಹೀಗಿರಲು ನನ್ನನ್ನು ಪ್ರೀತಿಸುವವರಿಗೆ ಧನದ ಬಾಧ್ಯತೆಯನ್ನು ಅನುಗ್ರಹಿಸಿ, ಅವರ ಬೊಕ್ಕಸಗಳನ್ನು ತುಂಬಿಸುವೆನು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 16 ಮಾರ್ಚ್ ಎಂದರೆ ನಾಗರಿಕ ಪಂಚಾಂಗದ 29 ಮಾರ್ಚ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು