ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 29 ಮಾರ್ಚ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 29 ಮಾರ್ಚ್ 2027
ಸೋಮವಾರ · ಪಾಸ್ಕದ ಅಷ್ಟದಿನ
ಹಬ್ಬಗಳು ಮತ್ತು ಸಂತರು
ಪಾಸ್ಕದ ಅಷ್ಟದಿನದ ಸೋಮವಾರ
ಮಹೋತ್ಸವ · ಆರಾಧನಾ ಬಣ್ಣ: ಬಿಳಿ
ದಿನದ ವಾಚನಗಳು
ಮೊದಲನೆಯ ವಾಚನ
14ಆಗ ಪೇತ್ರನು ಹನ್ನೊಂದು ಮಂದಿ ಅಪೊಸ್ತಲರ ಸಹಿತ ಎದ್ದು ನಿಂತು ಗಟ್ಟಿಯಾದ ಧ್ವನಿಯಿಂದ ಅವರಿಗೆ ಹೀಗೆ ಬೋಧನೆಮಾಡಿದನು; “ಯೆಹೂದ್ಯರೇ, ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಜಾತಿ-ಜನಾಂಗದವರೇ, ಈ ಸಂಗತಿಯು ಏನೆಂದು ನೀವು ತಿಳಿದುಕೊಳ್ಳಲು ನನ್ನ ಮಾತಿಗೆ ಕಿವಿಗೊಡಿರಿ. 22“ಇಸ್ರಾಯೇಲ್ ಜನರೇ, ನನ್ನ ಮಾತುಗಳನ್ನು ಕೇಳಿರಿ;, ನಜರೇತಿನ ಯೇಸು ಇದ್ದನಲ್ಲಾ, ನಿಮಗೂ ತಿಳಿದಿರುವಂತೆ ದೇವರು ಆತನ ಕೈಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ನಿಮ್ಮಲ್ಲಿ ನಡಿಸಿ ಆತನನ್ನು ತನಗೆ ಮೆಚ್ಚಿಕೆಯಾದವನೆಂದು ನಿಮಗೆ ತೋರಿಸಿಕೊಟ್ಟನು. 23ಆದರೂ ಆ ಯೇಸು ದೇವರ ಸ್ಥಿರಸಂಕಲ್ಪಕ್ಕೂ, ಭವಿಷ್ಯದ ಜ್ಞಾನಕ್ಕೂ ಅನುಸಾರವಾಗಿ ಒಪ್ಪಿಸಲ್ಪಟ್ಟಿರಲು ನೀವು ಅನ್ಯಜನರ ಕೈಯಿಂದ ಆತನನ್ನು ಶಿಲುಬೆಗೆ ಹಾಕಿ ಮೊಳೆ ಜಡಿದು ಕೊಂದಿರಿ. 24ಆತನನ್ನು ದೇವರು ಮರಣದ ವೇದನೆಗಳಿಂದ ಬಿಡಿಸಿ ಎಬ್ಬಿಸಿದನು; ಏಕೆಂದರೆ ಮರಣವು ಆತನನ್ನು ಹಿಡಿದುಕೊಂಡಿರುವುದು ಅಸಾಧ್ಯವಾಗಿತ್ತು. 25ಆತನ ವಿಷಯದಲ್ಲಿ ದಾವೀದನು;, “‘ಕರ್ತನು ಯಾವಾಗಲೂ ನನ್ನೆದುರಿನಲ್ಲಿರುವುದನ್ನು ನೋಡುತ್ತಿದ್ದೆನು; ನಾನು ಕದಲದಂತೆ ಆತನು ನನ್ನ ಬಲಗಡೆಯಲ್ಲಿಯೇ ಇದ್ದಾನೆ. 26ಆದಕಾರಣ ನನ್ನ ಹೃದಯವು ಹರ್ಷಿಸಿತು; ನನ್ನ ನಾಲಿಗೆಯು ಉಲ್ಲಾಸಧ್ವನಿಯನ್ನು ಮಾಡಿತು, ನನ್ನ ಶರೀರವೂ ನಿರೀಕ್ಷೆಯಿಂದ ನೆಲೆಯಾಗಿರುವುದು; 27ಏಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ, ನಿನ್ನ ಪವಿತ್ರನಿಗೆ ಕೊಳೆಯಲು ಬಿಡಲಾರೆ. 28ಜೀವದ ಮಾರ್ಗಗಳನ್ನು ನನಗೆ ತಿಳಿಯಪಡಿಸಿದ್ದೀ; ನಿನ್ನ ಸಮ್ಮುಖದಲ್ಲಿ ನನ್ನನ್ನು ಆನಂದಭರಿತನನ್ನಾಗಮಾಡುವಿ’ ಎಂದು ಹೇಳಿದ್ದಾನೆ. 29“ಸಹೋದರರೇ, ಮೂಲಪಿತೃವಾದ ದಾವೀದನ ವಿಷಯದಲ್ಲಿ ನಾನು ಧೈರ್ಯದಿಂದ ನಿಮ್ಮ ಸಂಗಡ ಮಾತನಾಡಬಹುದು ಏನೆಂದರೆ,, ಅವನು ಮರಣಹೊಂದಿ ಹೂಣಲ್ಪಟ್ಟನು, ಅವನ ಸಮಾಧಿ ಈ ದಿನದ ವರೆಗೂ ನಮ್ಮಲ್ಲಿ ಇದೆ. 30ಆದಕಾರಣ ಅವನು ಪ್ರವಾದಿಯಾಗಿದ್ದು, ನಿನ್ನ ಸಂತತಿಯವರೊಳಗೆ ಒಬ್ಬನನ್ನು ನಾನು ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು ಎಂದು ತನಗೆ ದೇವರು ಆಣೆಯಿಟ್ಟು ಹೇಳಿದ್ದನ್ನು ಬಲ್ಲವನಾಗಿದನು. 31ಕ್ರಿಸ್ತನ ಪುನರುತ್ಥಾನವನ್ನೇ ಕುರಿತು, ಆತನು ಪಾತಾಳದಲ್ಲಿ ಬಿಡಲ್ಪಡಲಿಲ್ಲವೆಂತಲೂ, ಆತನ ಶರೀರವು ಕೊಳೆಯುವ ಅವಸ್ಥೆಯನ್ನು ಅನುಭವಿಸುವುದಿಲ್ಲವೆಂತಲೂ ಹೇಳಿದನು. 32ಈ ಯೇಸುವನ್ನೇ ದೇವರು ಎಬ್ಬಿಸಿದನು; ಇದಕ್ಕೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ. 33ಆತನು ದೇವರ ಬಲಗೈಯಿಂದ ಉನ್ನತಸ್ಥಾನಕ್ಕೆ ಏರಿಸಲ್ಪಟ್ಟು, ವಾಗ್ದಾನವಾಗಿದ್ದ ಪವಿತ್ರಾತ್ಮವರವನ್ನು ತಂದೆಯಿಂದ ಹೊಂದಿ ನೀವು ನೋಡಿ ಕೇಳುವುದನ್ನು ಸುರಿಸಿದ್ದಾನೆ.
ಪ್ರತಿವಚನ ಕೀರ್ತನೆ
1ದಾವೀದನ ಕಾವ್ಯ. ದೇವರೇ, ನಾನು ನಿನ್ನ ಶರಣಾಗತನು; ನನ್ನನ್ನು ಕಾಪಾಡು. 2ನಾನು ಯೆಹೋವನನ್ನು ಕುರಿತು, “ನೀನೇ ನನ್ನ ಒಡೆಯನು; ನನ್ನ ಸುಖವು ನಿನ್ನಲ್ಲಿಯೇ ಹೊರತು ಬೇರೆ ಇಲ್ಲ” ಎಂದು ಹೇಳುವೆನು. 5ನನ್ನ ಪಾಲೂ, ನನ್ನ ಪಾನವೂ ಯೆಹೋವನೇ, ನೀನೇ ನನ್ನ ಸ್ವತ್ತನ್ನು ಭದ್ರಗೊಳಿಸುತ್ತೀ. 7ಯೆಹೋವನು ನನಗೆ ಆಲೋಚನೆಯನ್ನು ಹೇಳಿಕೊಡುತ್ತಾನೆ; ನಾನು ಆತನನ್ನು ಕೊಂಡಾಡುವೆನು. ರಾತ್ರಿಯ ಸಮಯಗಳಲ್ಲಿ ನನ್ನ ಅಂತರಾತ್ಮವು ನನ್ನನ್ನು ಬೋಧಿಸುತ್ತದೆ. 8ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನು ಎಂದಿಗೂ ಕದಲುವುದಿಲ್ಲ. 9ಆದಕಾರಣ ನನ್ನ ಹೃದಯವು ಹರ್ಷಿಸುತ್ತದೆ; ನನ್ನ ಮನವು ಉಲ್ಲಾಸಗೊಳ್ಳುತ್ತದೆ; ನನ್ನ ಶರೀರವೂ ಸುರಕ್ಷಿತವಾಗಿರುವುದು. 10ಏಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ; ನಿನ್ನ ಭಕ್ತನಿಗೆ ಅಧೋಲೋಕವನ್ನು ನೋಡಗೊಡಿಸುವುದಿಲ್ಲ. 11ನೀನು ನನಗೆ ಜೀವಮಾರ್ಗವನ್ನು ತಿಳಿಯಪಡಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ; ನಿನ್ನ ಬಲಗೈಯಲ್ಲಿ ಶಾಶ್ವತ ಭಾಗ್ಯವಿದೆ.
ಸುವಾರ್ತೆ
8ಅವರು ಭಯದಿಂದಲೂ, ಮಹಾ ಸಂತೋಷದಿಂದಲೂ ಬೇಗ ಸಮಾಧಿಯ ಬಳಿಯಿಂದ ಹೊರಟು ಆತನ ಶಿಷ್ಯರಿಗೆ ಅದನ್ನು ತಿಳಿಸುವುದಕ್ಕೆ ಓಡಿಹೋದರು. 9ಆಗ ಯೇಸು ಅವರನ್ನು ಭೇಟಿಯಾಗಿ, “ನಿಮಗೆ ಶುಭವಾಗಲಿ” ಅಂದನು. ಅವರು ಹತ್ತಿರಕ್ಕೆ ಬಂದು ಆತನ ಪಾದಗಳಿಗೆ ಅಡ್ಡಬಿದ್ದು ಆತನನ್ನು ಆರಾಧಿಸಿದರು. 10ಆಗ ಯೇಸು ಅವರಿಗೆ, “ಹೆದರಬೇಡಿರಿ; ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ಅವರು ನನ್ನನ್ನು ನೋಡುವರು” ಎಂದು ಹೇಳಿದನು. 11ಆಗ ಹೆಂಗಸರು ಹೋಗುತ್ತಿರುವಾಗ, ಇಗೋ, ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ನಡೆದ ಸಂಗತಿಗಳನ್ನೆಲ್ಲಾ ಮುಖ್ಯಯಾಜಕರಿಗೆ ತಿಳಿಸಿದರು. 12ಯಾಜಕರು ಹಿರಿಯರ ಸಂಗಡ ಕೂಡಿಕೊಂಡು ಆಲೋಚನೆ ಮಾಡಿ ಆ ಸಿಪಾಯಿಗಳಿಗೆ ಬಹಳ ಹಣಕೊಟ್ಟು, 13“‘ಯೇಸುವಿನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆಮಾಡುತ್ತಿದ್ದಾಗ ಅವನ ಮೃತದೇಹವನ್ನು ಕದ್ದುಕೊಂಡು ಹೋದರು’ ಎಂದು ಹೇಳಿರಿ; 14ಈ ಸುದ್ದಿಯು ದೇಶಾಧಿಪತಿಯ ಕಿವಿಗೆ ಬಿದ್ದರೆ ನಾವು ಅವನನ್ನು ಸಮಾಧಾನಪಡಿಸಿ ನಿಮಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ” ಎಂದರು. 15ಅದರಂತೆ ಕಾವಲುಗಾರರು ಆ ಹಣವನ್ನು ತೆಗೆದುಕೊಂಡು ತಮಗೆ ಹೇಳಿಕೊಟ್ಟ ಹಾಗೆಯೇ ಮಾಡಿದರು. ಈ ಮಾತು ಇಂದಿನವರೆಗೂ ಯೆಹೂದ್ಯರಲ್ಲಿ ಹರಡಿಕೊಂಡಿದೆ.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು