ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 11 ಮಾರ್ಚ್
ಆರ್ಥೊಡಾಕ್ಸ್ ಪಂಚಾಂಗ · ಫೆಬ್ರವರಿ 26 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 11 ಮಾರ್ಚ್ 2027
ಗುರುವಾರ · ಗಿಣ್ಣಿನ ವಾರ · ಸ್ವರ 7
ಹಬ್ಬಗಳು ಮತ್ತು ಸಂತರು
ಗಿಣ್ಣಿನ ವಾರದ ಗುರುವಾರ
ಗಿಣ್ಣಿನ ವಾರ
ಮಾಂಸವಿಲ್ಲ; ಹಾಲಿನ ಪದಾರ್ಥ, ಮೊಟ್ಟೆ ಮತ್ತು ಮೀನಿಗೆ ಅನುಮತಿ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಪತ್ರಿಕೆ
11ಅವರ ಗತಿಯನ್ನು ಏನೆಂದು ಹೇಳಲಿ? ಇವರು ಕಾಯಿನನ ಮಾರ್ಗವನ್ನು ಹಿಡಿದವರೂ, ದ್ರವ್ಯಸಂಪಾದನೆಗೋಸ್ಕರ ಬಿಳಾಮನ ಭ್ರಾಂತಿಯಲ್ಲಿ ಪೂರ್ಣವಾಗಿ ಮುಳುಗಿದವರೂ, ಕೋರಹನಂತೆ ಎದುರು ಮಾತನಾಡಿ ನಾಶವಾಗಿ ಹೋಗುವವರು ಆಗಿದ್ದಾರೆ. 12ಇವರು ಸಮುದ್ರದೊಳಗಿರುವ ಗುಪ್ತವಾದ ಬಂಡೆಗಳಂತಿದ್ದು, ನಿಮ್ಮ ಸ್ನೇಹಭೋಜನಗಳಲ್ಲಿ ಸೇರಿ ತಿಂದು ಕುಡಿಯುತ್ತಾರೆ. ನಿರ್ಭಯವಾಗಿ ಸ್ವಂತ ಹೊಟ್ಟೆಯನ್ನೇ ಪೋಷಿಸಿಕೊಳ್ಳುತ್ತಾರೆ. ಇವರು ಗಾಳಿಯಿಂದ ಬಡಿಸಿಕೊಂಡು ಹೋಗುವ ನೀರಿಲ್ಲದ ಮೋಡಗಳೂ, ಫಲಗಳನ್ನು ಬಿಡದ, ಸಂಪೂರ್ಣವಾಗಿ ಸತ್ತ, ಬೇರು ಸಹಿತ ಕಿತ್ತು ಬಿದ್ದ ಶರತ್ಕಾಲದ ಮರಗಳು. 13ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ ಸಮುದ್ರದ ಹುಚ್ಚುತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ ಕಗ್ಗತ್ತಲೆಯು ಸದಾಕಾಲಕ್ಕೆ ಇಡಲ್ಪಟ್ಟಿದೆ. 14ಇಂಥವರ ವಿಷಯದಲ್ಲೇ ಆದಾಮನಿಂದ ಏಳನೆಯ ತಲೆಮಾರಿನವನಾದ ಹನೋಕನು ಸಹ, “ಇಗೋ, ಕರ್ತನು ತನ್ನ ಅಸಂಖ್ಯಾತ ಪರಿಶುದ್ಧರನ್ನು ಕೂಡಿಕೊಂಡು, 15ಎಲ್ಲರಿಗೂ ನ್ಯಾಯತೀರಿಸುವುದಕ್ಕೂ, ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಅವರ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನಗೆ ವಿರೋಧವಾಗಿ ಹೇಳಿದ ಎಲ್ಲಾ ಕಠಿಣವಾದ ಮಾತುಗಳ ವಿಷಯವಾಗಿ ಅವರನ್ನು ಖಂಡಿಸುವುದಕ್ಕೆ ಬಂದಿರುವನು” ಎಂಬುದಾಗಿ ಪ್ರವಾದಿಸಿದನು. 16ಇವರು ಗೊಣಗುಟ್ಟುವವರೂ, ದೂರು ಹೇಳುವವರೂ, ತಮ್ಮ ದುರಾಶೆಗಳನ್ನನುಸರಿಸಿ ನಡೆಯುವವರೂ, ಬಂಡಾಯಿಕೊಚ್ಚಿಕೊಳ್ಳುವವರು, ಸ್ವಪ್ರಯೋಜನಕ್ಕಾಗಿ ಹೊಗಳಿಕೆಯ ಮಾತುಗಳನ್ನಾಡುವವರು ಆಗಿದ್ದಾರೆ. 17ಪ್ರಿಯರೇ, ನೀವಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪೊಸ್ತಲರು ಮೊದಲು ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ. 18“ಭಕ್ತಿಗೆ ವಿರುದ್ಧವಾದ ತಮ್ಮ ಆಸೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರೆಂದು” ಅವರು ನಿಮಗೆ ಹೇಳಿದರು. 19ಇವರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವವರೂ, ಪ್ರಾಕೃತ ಮನುಷ್ಯರೂ, ದೇವರಾತ್ಮ ಇಲ್ಲದವರೂ ಆಗಿದ್ದಾರೆ. 20ಪ್ರಿಯರೇ, ನೀವಾದರೋ ನಿಮಗಿರುವ ಅತಿ ಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿಹೊಂದುತ್ತಾ, ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆ ಮಾಡಿರಿ. 21ನಿತ್ಯ ಜೀವಕ್ಕಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ, ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ. 22ಸಂಶಯಪಡುವವರಿಗೆ ಕರುಣೆಯನ್ನು ತೋರಿಸಿರಿ, 23ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ, ಕೆಲವರನ್ನು ಭಯಪಡುತ್ತಾ ಕರುಣಿಸಿರಿ. ಶಾರೀರಿಕ ನಡತೆಯಿಂದ ಹೊಲಸಾದ ಅವರ ಉಡುಪನ್ನೂ ಸಹ ಹಗೆಮಾಡಿರಿ. 24ಮುಗ್ಗರಿಸದಂತೆ ನಿಮ್ಮನ್ನು ಕಾಪಾಡಿಕೊಳ್ಳುತ್ತಾ, ತನ್ನ ಮಹಿಮೆಯ ಸಮಕ್ಷಮದಲ್ಲಿ ನಿಮ್ಮನ್ನು ನಿರ್ದೋಷಿಗಳನ್ನಾಗಿ, ಅತ್ಯಂತ ಹರ್ಷದೊಡನೆ ನಿಲ್ಲಿಸುವುದಕ್ಕೂ ಶಕ್ತನಾಗಿರುವ, 25ನಮ್ಮ ರಕ್ಷಕನಾದ ಒಬ್ಬನೇ ದೇವರಿಗೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಮಹಿಮೆ, ಮಹತ್ವ, ಅಧಿಪತ್ಯ ಮತ್ತು ಅಧಿಕಾರಗಳು ಎಲ್ಲಾ ಕಾಲಗಳಲ್ಲಿ ಮೊದಲು ಇದ್ದ ಹಾಗೆ ಈಗಲೂ ಯಾವಾಗಲೂ ಸಲ್ಲಲ್ಲಿ. ಆಮೆನ್.
ಸುವಾರ್ತೆ
1ಅಲ್ಲಿ ಕೂಡಿದ್ದವರೆಲ್ಲರೂ ಎದ್ದು ಆತನನ್ನು ಪಿಲಾತನ ಬಳಿಗೆ ಕರೆದುಕೊಂಡು ಹೋಗಿ, 2“ಇವನು ತಾನೇ ಕ್ರಿಸ್ತನು, ಅರಸನಾಗಿದ್ದೇನೆಂದು ಹೇಳುತ್ತಾ, ಕೈಸರನಿಗೆ ಸುಂಕ ಕೊಡಬಾರದೆಂದು ಬೋಧಿಸುತ್ತಾ, ನಮ್ಮ ದೇಶದವರ ಮನಸ್ಸು ಕೆಡಿಸುವುದನ್ನು ನಾವು ಕಂಡಿದ್ದೇವೆ” ಎಂಬುದಾಗಿ ಆತನ ಮೇಲೆ ದೂರು ಹೇಳುವುದಕ್ಕೆ ತೊಡಗಿದರು. 3ಪಿಲಾತನು ಯೇಸುವನ್ನು “ನೀನು ಯೆಹೂದ್ಯರ ಅರಸನೋ” ಎಂದು ಕೇಳಲು, ಆತನು, “ನೀನೇ ಹೇಳಿದ್ದೀ” ಎಂದು ಉತ್ತರ ಕೊಟ್ಟನು. 4ಪಿಲಾತನು ಮುಖ್ಯಯಾಜಕರಿಗೂ, ಜನರ ಗುಂಪಿಗೂ, “ಈ ಮನುಷ್ಯನಲ್ಲಿ ನನಗೆ ಯಾವ ಅಪರಾಧವೂ ಕಾಣಿಸುತ್ತಿಲ್ಲವೆಂದು” ಹೇಳಿದನು. 5ಅದಕ್ಕೆ ಅವರು, “ಗಲಿಲಾಯದಿಂದ ಮೊದಲುಗೊಂಡು ಇಲ್ಲಿಯವರೆಗೂ ಯೂದಾಯ ಸೀಮೆಯಲ್ಲೆಲ್ಲಾ ಇವನು ಬೋಧನೆ ಮಾಡುತ್ತಾ ಜನರ ಮನಸ್ಸನ್ನು ಕದಲಿಸುತ್ತಾನೆ” ಎಂದು ಇನ್ನೂ ಒತ್ತಿ ಹೇಳಿದರು. 6ಇದನ್ನು ಪಿಲಾತನು ಕೇಳಿ, ಈ ಮನುಷ್ಯನು ಗಲಿಲಾಯದವನೋ ಎಂದು ವಿಚಾರಿಸಿ, 7ಈತನು ಹೆರೋದನ ಅಧಿಕಾರಕ್ಕೆ ಒಳಪಟ್ಟವನು ಎಂದು ತಿಳಿದುಕೊಂಡು ಯೇಸುವನ್ನು ಹೆರೋದನ ಬಳಿಗೆ ಕಳುಹಿಸಿದನು. ಹೆರೋದನು ಆ ದಿನಗಳಲ್ಲಿ ಯೆರೂಸಲೇಮಿನಲ್ಲೇ ಇದ್ದನು. 8ಹೆರೋದನು ಯೇಸುವನ್ನು ನೋಡಿದಾಗ ಬಹಳ ಸಂತೋಷಪಟ್ಟನು. ಏಕೆಂದರೆ ಆತನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ ಆತನನ್ನು ಕಾಣಬೇಕೆಂದು ಬಹು ಕಾಲದಿಂದ ಅಪೇಕ್ಷಿಸಿದ್ದನು. ಆತನಿಂದ ಯಾವುದಾದರೂ ಒಂದು ಸೂಚಕ ಕಾರ್ಯವಾಗುವುದನ್ನು ನೋಡಬೇಕೆಂದು ನಿರೀಕ್ಷಿಸಿದನು. 9ಹೆರೋದನು ಅನೇಕ ಮಾತುಗಳಿಂದ ಯೇಸುವನ್ನು ಪ್ರಶ್ನೆ ಮಾಡಿದಾಗ್ಯೂ ಆತನು ಅವನಿಗೆ ಏನೂ ಉತ್ತರ ಕೊಡಲಿಲ್ಲ. 10ಮುಖ್ಯಯಾಜಕರೂ ಶಾಸ್ತ್ರಿಗಳೂ ನಿಂತುಕೊಂಡು ಆತನ ಕುರಿತು ಬಹು ತೀವ್ರವಾಗಿ ಆರೋಪಿಸುತ್ತಿದ್ದರು. 11ಕಡೆಗೆ ಹೆರೋದನು ತನ್ನ ಸಿಪಾಯಿಗಳನ್ನು ಕೂಡಿಕೊಂಡು ಯೇಸುವನ್ನು ಅವಮಾನಗೊಳಿಸಿ, ಅಪಹಾಸ್ಯ ಮಾಡಿ ಶೋಭಾಯಮಾನವಾದ ಉಡುಪನ್ನು ಹಾಕಿಸಿ ಪಿಲಾತನ ಬಳಿಗೆ ತಿರುಗಿ ಕಳುಹಿಸಿಕೊಟ್ಟನು. 12ಅದೇ ದಿನ ಹೆರೋದನು ಪಿಲಾತನೂ ಒಬ್ಬರಿಗೊಬ್ಬರು ಸ್ನೇಹಿತರಾದರು. ಅದಕ್ಕಿಂತ ಮೊದಲು ಅವರಿಬ್ಬರೂ ವೈರಿಗಳಾಗಿದ್ದರು. 13ತರುವಾಯ ಪಿಲಾತನು ಮುಖ್ಯಯಾಜಕರನ್ನೂ, ಅಧಿಕಾರಿಗಳನ್ನೂ, ಪ್ರಜೆಗಳನ್ನೂ ಒಟ್ಟಾಗಿ ಕರೆಯಿಸಿ, 14ಅವರಿಗೆ, “ಈ ಮನುಷ್ಯನು ಪ್ರಜೆಗಳನ್ನು ತಿರಿಗಿ ಬೀಳುವಂತೆ ಮಾಡುವವನು ಎಂದು ಈತನನ್ನು ನನ್ನ ಬಳಿಗೆ ಕರೆತಂದಿರಲ್ಲಾ. ನೀವು ಈತನ ಮೇಲೆ ಮಾಡಿದ ದೂರುಗಳ ವಿಷಯವಾಗಿ ನಾನು ನಿಮ್ಮ ಮುಂದೆಯೇ ವಿಚಾರಣೆ ಮಾಡಿದರೂ ಈತನಲ್ಲಿ ಒಂದು ತಪ್ಪಾದರೂ ನನಗೆ ಕಾಣಲಿಲ್ಲ. 15ಹೆರೋದನಿಗೂ ಸಹ ಕಾಣಲಿಲ್ಲ. ಅದಕಾರಣ ಈತನನ್ನು ಹಿಂತಿರುಗಿ ನಮ್ಮ ಬಳಿಗೆ ಕಳುಹಿಸಿದನಲ್ಲಾ. ಆದುದರಿಂದ ಈತನು ಮರಣದಂಡನೆಗೆ ಯೋಗ್ಯವಾದದ್ದೇನೂ ಮಾಡಿದವನಲ್ಲವೆಂದಾಯಿತು. 16ಆದುದರಿಂದ ನಾನು ಈತನನ್ನು ಹೊಡಿಸಿ ಬಿಟ್ಟು ಬಿಡುತ್ತೇನೆ” ಎಂದು ಹೇಳಿದನು. 17(ಪ್ರತಿ ಪಸ್ಕ ಹಬ್ಬದ ಸಂದರ್ಭದಲ್ಲಿ ಪಿಲಾತನು ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವ ರೂಢಿಯಿತ್ತು.) 18ಆದರೆ ಅವರು, “ಅವನನ್ನು ಕೊಲ್ಲಿಸು, ನಮಗೆ ಬರಬ್ಬನನ್ನು ಬಿಟ್ಟುಕೊಡು” ಎಂದು ಒಟ್ಟಾಗಿ ಕೂಗಿಕೊಂಡರು. 19ಈ ಬರಬ್ಬನನ್ನು ಆ ಪಟ್ಟಣದಲ್ಲಿ ನಡೆದ ಒಂದು ದಂಗೆಯ ನಿಮಿತ್ತವಾಗಿಯೂ ಕೊಲೆಯ ನಿಮಿತ್ತವಾಗಿಯೂ ಸೆರೆಮನೆಯಲ್ಲಿ ಹಾಕಿದ್ದರು. 20ಪಿಲಾತನು ಯೇಸುವನ್ನು ಬಿಡಿಸಬೇಕೆಂದು ಮನಸ್ಸುಳ್ಳವನಾಗಿದ್ದು ಪುನಃ ಅವರ ಸಂಗಡ ಮಾತನಾಡಿದನು. 21ಆದರೆ ಅವರು, “ಅವನನ್ನು ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗುತ್ತಿದ್ದರು. 22ಅವನು ಮೂರನೆಯ ಸಾರಿ, “ಯಾಕೆ? ಕೆಟ್ಟದ್ದೇನು ಮಾಡಿದನು? ನಾನು ಇವನಲ್ಲಿ ಮರಣದಂಡನೆಗೆ ತಕ್ಕ ಅಪರಾಧವೇನೂ ಕಾಣಲಿಲ್ಲ ಆದುದರಿಂದ ಇವನನ್ನು ಹೊಡಿಸಿ ಬಿಟ್ಟುಬಿಡುತ್ತೇನೆ” ಎಂದು ಅವರಿಗೆ ಹೇಳಿದನು. 23ಆದರೆ ಅವರು ಜೋರಾಗಿ ಕೂಗುತ್ತಾ, ಅವನನ್ನು ಶಿಲುಬೆಗೆ ಹಾಕಿಸಬೇಕೆಂದು ಕೇಳಿಕೊಂಡು ಬಲವಂತ ಮಾಡಿದರು. ಅವರ ಕೂಗಾಟವು ಗೆದ್ದಿತು. 24ಆಗ ಪಿಲಾತನು, ಅವರು ಕೇಳಿಕೊಂಡಂತೆ ಆಗಲಿ ಎಂದು ನಿರ್ಣಯಿಸಿ, 25ದಂಗೆ ಕೊಲೆಗಳ ನಿಮಿತ್ತವಾಗಿ ಸೆರೆಮನೆಯಲ್ಲಿ ಬಿದ್ದ ಆ ಮನುಷ್ಯನನ್ನು ಅವರು ಕೇಳಿಕೊಳ್ಳುತ್ತಿದ್ದ ಪ್ರಕಾರ ಬಿಟ್ಟುಕೊಟ್ಟು, ಯೇಸುವನ್ನು ಅವರ ಚಿತ್ತಾನುಸಾರ ದಂಡಿಸಲು ಒಪ್ಪಿಸಿದನು. 26ಅವರು ಯೇಸುವನ್ನು ಕರೆದುಕೊಂಡು ಹೋಗುತ್ತಿರುವಾಗ ಹೊಲದಿಂದ ಬರುತ್ತಿದ್ದ, ಕುರೇನೆ ಪಟ್ಟಣದ ಸೀಮೋನನೆಂಬುವನನ್ನು ಕರೆದು, ಶಿಲುಬೆಯನ್ನು ಅವನ ಮೇಲೆ ಹೊರಿಸಿ ಯೇಸುವಿನ ಹಿಂದೆ ಹೊತ್ತುಕೊಂಡು ಬರುವ ಹಾಗೆ ಮಾಡಿದರು. 27ಜನರ ದೊಡ್ಡ ಗುಂಪು ಯೇಸುವಿನ ಹಿಂದೆ ಹೊರಟಿತು. ಆ ಗುಂಪಿನಲ್ಲಿ ಕೆಲವು ಸ್ತ್ರೀಯರು ಎದೆಬಡಿದುಕೊಳ್ಳುತ್ತಾ ಯೇಸುವಿಗಾಗಿ ಗೋಳಾಡುತ್ತಾ ಇದ್ದರು. 28ಯೇಸು ಅವರ ಕಡೆಗೆ ತಿರುಗಿಕೊಂಡು, “ಯೆರೂಸಲೇಮಿನ ಸ್ತ್ರೀಯರೇ ನನಗೋಸ್ಕರ ಅಳಬೇಡಿರಿ, ನಿಮಗೋಸ್ಕರವೂ ನಿಮ್ಮ ಮಕ್ಕಳಿಗೋಸ್ಕರವೂ ಅಳಿರಿ. 29ಏಕೆಂದರೆ ‘ಬಂಜೆಯರೂ, ಬಸುರಾಗದವರೂ, ಮೊಲೆಕುಡಿಸದವರೂ ಧನ್ಯರು’ ಎಂದು ಜನರು ಹೇಳುವ ದಿನಗಳು ಬರುತ್ತವೆ. 30ಆ ಕಾಲದಲ್ಲಿ ಜನರು, ‘ಬೆಟ್ಟಗಳೇ ನಮ್ಮ ಮೇಲೆ ಬೀಳಿರಿ. ಗುಡ್ಡಗಳೇ ನಮ್ಮನ್ನು ಮುಚ್ಚಿಕೊಳ್ಳಿರಿ’ ಅನ್ನುವರು. 31ಹಸಿ ಮರಕ್ಕೆ ಇಷ್ಟೆಲ್ಲಾ ಮಾಡಿದರೆ ಒಣ ಮರದ ಗತಿ ಏನಾಗಬಹುದು?” ಅಂದನು. 32ಆತನ ಸಂಗಡ ಶಿಲುಬೇಗೆರಿಸುವುದಕ್ಕಾಗಿ ದುಷ್ಕರ್ಮಿಗಳಾಗಿದ್ದ ಬೇರೆ ಇಬ್ಬರನ್ನೂ ಕರೆದುಕೊಂಡು ಹೋದರು. 33ಅವರು ಕಪಾಲವೆಂಬ ಸ್ಥಳಕ್ಕೆ ಬಂದಾಗ ಅಲ್ಲಿ ಯೇಸುವನ್ನೂ ದುಷ್ಕರ್ಮಿಗಳನ್ನೂ ಶಿಲುಬೆಗೆ ಹಾಕಿದರು. ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿಯೂ ಮತ್ತೊಬ್ಬನನ್ನು ಎಡಗಡೆಯಲ್ಲಿಯೂ ಹಾಕಿದರು. 34ಆಗ ಯೇಸು, “ತಂದೆಯೇ, ಅವರನ್ನು ಕ್ಷಮಿಸು ತಾವು ಏನು ಮಾಡುತ್ತೇವೆಂಬುದನ್ನು ಅವರು ಅರಿಯರು” ಅಂದನು. ಆ ಮೇಲೆ ಚೀಟು ಹಾಕಿ ಯೇಸುವಿನ ಬಟ್ಟೆಗಳನ್ನು ಪಾಲು ಮಾಡಿದರು. 44ಇಷ್ಟರಲ್ಲಿ ಸುಮಾರು ನಡುಮಧ್ಯಾಹ್ನವಾಯಿತು. ಸೂರ್ಯನು ಕಾಂತಿಗುಂದಿ, ಮೂರು ಘಂಟೆಯ ತನಕ ಆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು. ಇದಲ್ಲದೆ ದೇವಾಲಯದ ಪರದೆಯು ನಡುವೆ ಹರಿದು ಹೋಯಿತು. 46ಆ ಮೇಲೆ ಯೇಸು, “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ” ಎಂದು ಮಹಾಧ್ವನಿಯಿಂದ ಕೂಗಿದನು. ಇದನ್ನು ಹೇಳಿದ ಮೇಲೆ ಪ್ರಾಣಬಿಟ್ಟನು. 47ಶತಾಧಿಪತಿಯು ನಡೆದ ಸಂಗತಿಯನ್ನು ನೋಡಿ, “ಈ ಮನುಷ್ಯನು ನಿಜವಾಗಲೂ ನೀತಿವಂತನೇ” ಆಗಿದ್ದನು ಎಂದು ದೇವರನ್ನು ಕೊಂಡಾಡಿದನು. 48ಇದನ್ನು ನೋಡಲು ಸೇರಿ ಬಂದಿದ್ದ ಜನರೆಲ್ಲರು ನಡೆದ ಘಟನೆಯನ್ನು ನೋಡಿ ಎದೆಬಡಿದುಕೊಳ್ಳುತ್ತಾ ಹಿಂತಿರುಗಿ ಹೋದರು. 49ಇದಲ್ಲದೆ ಆತನ ಪರಿಚಿತರೆಲ್ಲರೂ, ಗಲಿಲಾಯದಿಂದ ಆತನ ಹಿಂದೆ ಬಂದಿದ್ದ ಸ್ತ್ರೀಯರೂ ದೂರದಲ್ಲಿ ನಿಂತು ಈ ಸಂಗತಿಗಳನ್ನು ನೋಡುತ್ತಿದ್ದರು. 50ಅರಿಮಥಾಯ ಎಂಬ ಯೆಹೂದ್ಯರದೊಂದು ಪಟ್ಟಣದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಹೆಸರು ಯೋಸೇಫನ. ಆತನು ಹಿರೀಸಭೆಯವನು, ಉತ್ತಮನು, ಸತ್ಪುರುಷನು ಹಾಗೂ ದೇವರ ರಾಜ್ಯವನ್ನು ಎದುರು ನೋಡುತ್ತಿದ್ದವನೂ ಆಗಿದ್ದನಲ್ಲದೆ ಮಂತ್ರಿಯೂ ಆಗಿದ್ದನು. ಅವನು ಹಿರೀಸಭೆಯವರ ಆಲೋಚನೆಗೂ ಕೃತ್ಯಗಳಿಗೂ ಅನುಮತಿಸಿರಲಿಲ್ಲ. 52ಅವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡು, 53ಅದನ್ನು ಇಳಿಸಿ ನಾರುಮಡಿಯಲ್ಲಿ ಸುತ್ತಿ, ಬಂಡೆಯಲ್ಲಿ ತೋಡಿದ್ದ ಸಮಾಧಿಯಲ್ಲಿ ಇಟ್ಟನು. ಅದರಲ್ಲಿ ಅದುವರೆಗೆ ಯಾರನ್ನು ಇಟ್ಟಿರಲಿಲ್ಲ. 54ಆ ದಿನವು ಸಿದ್ಧತೆಯ ದಿನವಾಗಿತ್ತು. ಮತ್ತು ಸಬ್ಬತ್ ದಿನ ಪ್ರಾರಂಭವಾಗುವುದಕ್ಕೆ ಸ್ವಲ್ಪ ಹೊತ್ತು ಮಾತ್ರ ಇತ್ತು. 55ಹೀಗಿರುವಲ್ಲಿ ಗಲಿಲಾಯದಿಂದ ಯೇಸುವಿನ ಸಂಗಡ ಬಂದಿದ್ದ ಸ್ತ್ರೀಯರು, ಯೋಸೇಫನ ಹಿಂದೆಯೇ ಹೋಗಿ ಆ ಸಮಾಧಿಯನ್ನೂ, ಯೇಸುವಿನ ದೇಹವನ್ನಿಟ್ಟ ರೀತಿಯನ್ನೂ ನೋಡಿ, 56ಹಿಂತಿರುಗಿ ಬಂದು ಪರಿಮಳದ್ರವ್ಯಗಳನ್ನೂ ಸುಗಂಧ ತೈಲವನ್ನೂ ಸಿದ್ಧಮಾಡಿಕೊಂಡರು. ಆ ಸ್ತ್ರೀಯರು ಸಬ್ಬತ್ ದಿನದಲ್ಲಿ ಧರ್ಮನಿಯಮದ ಪ್ರಕಾರ ವಿಶ್ರಮಿಸಿಕೊಂಡರು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 26 ಫೆಬ್ರವರಿ ಎಂದರೆ ನಾಗರಿಕ ಪಂಚಾಂಗದ 11 ಮಾರ್ಚ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು