ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 11 ಮಾರ್ಚ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 11 ಮಾರ್ಚ್ 2027
ಗುರುವಾರ · ತಪಸ್ಸು ಕಾಲದ ನಾಲ್ಕನೆಯ ವಾರ
ಹಬ್ಬಗಳು ಮತ್ತು ಸಂತರು
ತಪಸ್ಸು ಕಾಲದ ನಾಲ್ಕನೆಯ ವಾರದ ಗುರುವಾರ
ವಾರದ ದಿನ · ಆರಾಧನಾ ಬಣ್ಣ: ನೇರಳೆ
ದಿನದ ವಾಚನಗಳು
ಮೊದಲನೆಯ ವಾಚನ
7ಹೀಗಿರಲಾಗಿ ಯೆಹೋವನು ಮೋಶೆಗೆ, “ನೀನು ಬೆಟ್ಟದಿಂದ ಇಳಿದುಹೋಗು ಐಗುಪ್ತದೇಶದಿಂದ ನೀನು ಕರೆದುಕೊಂಡು ಬಂದ ನಿನ್ನ ಜನರು ಕೆಟ್ಟುಹೋದರು. 8ನಾನು ಅವರಿಗೆ ಅಜ್ಞಾಪಿಸಿದ ಮಾರ್ಗವನ್ನು ಅವರು ಬೇಗನೇ ಬಿಟ್ಟು ಹೋಗಿ ತಮಗೆ ಎರಕ ಹೊಯ್ದ ಹೋರಿಕರುವನ್ನು ಮಾಡಿಸಿಕೊಂಡು ಅದಕ್ಕೆ ಅಡ್ಡಬಿದ್ದು ಯಜ್ಞಗಳನ್ನು ಅರ್ಪಿಸಿ, ‘ಇಸ್ರಾಯೇಲ್ಯರೇ ನೋಡಿರಿ ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರೆದುಕೊಂಡು ಬಂದ ದೇವರು ಎಂದು ಹೇಳಿಕೊಳ್ಳುತ್ತಿದ್ದಾರೆ’” ಎಂದು ಹೇಳಿದನು. 9ಅದಲ್ಲದೆ ಯೆಹೋವನು ಮೋಶೆಗೆ, “ಈ ಜನರ ಸ್ವಭಾವವನ್ನು ನಾನು ನೋಡಿದ್ದೇನೆ. ಇವರು ಮೊಂಡುತನವುಳ್ಳ ಜನರಾಗಿದ್ದಾರೆ 10ಆದಕಾರಣ ನೀನು ನನ್ನನ್ನು ತಡೆಯಬೇಡ. ನನ್ನ ಕೋಪಾಗ್ನಿ ಉರಿಯಲಿ, ಅವರನ್ನು ಭಸ್ಮಮಾಡಿಬಿಡುವೆನು. ತರುವಾಯ ನಿನ್ನಿಂದಲೇ ಒಂದು ಮಹಾ ಜನಾಂಗವನ್ನು ಉಂಟುಮಾಡುವೆನು” ಎಂದು ಹೇಳಿದನು. 11ಆಗ ಮೋಶೆ ತನ್ನ ದೇವರಾದ ಯೆಹೋವನನ್ನು ಬೇಡಿಕೊಂಡು, “ಯೆಹೋವನೇ ನೀನು ಮಹಾ ಶಕ್ತಿಯಿಂದಲೂ, ಭುಜಬಲದಿಂದಲೂ ಐಗುಪ್ತ ದೇಶದಿಂದ ಹೊರಗೆ ಕರೆತಂದ ನಿನ್ನ ಪ್ರಜೆಗಳ ಮೇಲೆ ಕೋಪದಿಂದುರಿಯುವುದೇತಕೆ? 12ಐಗುಪ್ತ್ಯರು ನಿನ್ನ ವಿಷಯದಲ್ಲಿ, ‘ಯೆಹೋವನು ಕೇಡು ಮಾಡಬೇಕೆಂಬ ಅಭಿಪ್ರಾಯದಿಂದಲೇ ಇಸ್ರಾಯೇಲರನ್ನು ಇಲ್ಲಿಂದ ಕರೆದುಕೊಂಡು ಹೋದನಲ್ಲಾ. ಅವರನ್ನು ಬೆಟ್ಟಗಳಲ್ಲಿ ಸಾಯಿಸಲಿಕ್ಕೂ ಭೂಮಿಯಿಂದ ನಿರ್ಮೂಲ ಮಾಡುವುದಕ್ಕೂ ಅವರನ್ನು ಕರೆದುಕೊಂಡು ಹೋದನೆಂದು ಹೇಳಿಕೊಳ್ಳುವುದೇತಕ್ಕೆ?’ ನೀನು ರೋಷಾಗ್ನಿಯನ್ನು ಬಿಟ್ಟು ನಿನ್ನ ಪ್ರಜೆಗಳಿಗೆ ಕೆಡುಕನ್ನು ಮಾಡದೆ ಮನಸ್ಸನ್ನು ಬದಲು ಮಾಡಿಕೋ. 13ನಿನ್ನ ಸೇವಕರಾದ ಅಬ್ರಹಾಮ್, ಇಸಾಕ್ ಹಾಗು ಯಾಕೋಬರನ್ನು ನೆನಪಿಗೆ ತಂದುಕೋ. ನೀನು ನಿನ್ನ ಜೀವದಾಣೆ ಪ್ರಮಾಣ ಮಾಡಿ ಅವರಿಗೆ, ‘ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ ಈ ಪ್ರದೇಶವನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನೆಂದೂ ಇಸ್ರಾಯೇಲರು ಈ ದೇಶವನ್ನು ಶಾಶ್ವತವಾಗಿ ಸ್ವಾಧೀನ ಮಾಡಿಕೊಳ್ಳುವರೆಂದೂ ಮಾತುಕೊಡಲಿಲ್ಲವೇ’” ಅಂದನು. 14ಆಗ ಯೆಹೋವನು ತನ್ನ ಪ್ರಜೆಗಳಿಗೆ ಮಾಡುವೆನೆಂದು ತಾನು ಹೇಳಿದ ಕೇಡಿನ ವಿಷಯದಲ್ಲಿ ಮನಸ್ಸನ್ನು ಬದಲಾಯಿಸಿಕೊಂಡನು.
ಪ್ರತಿವಚನ ಕೀರ್ತನೆ
19ಹೋರೇಬಿನಲ್ಲಿ ಎರಕದ ಬಸವನನ್ನು ಮಾಡಿ, ಅದಕ್ಕೆ ಅಡ್ಡಬಿದ್ದರು. 20ಹೀಗೆ ಅವರು ತಮ್ಮ ದಿವ್ಯಮಹಿಮೆಯ ದೇವರನ್ನು ಬಿಟ್ಟು, ಹುಲ್ಲು ತಿನ್ನುವ ಎತ್ತಿನ ಮೂರ್ತಿಯನ್ನು ಹಿಡಿದುಕೊಂಡರು. 21ಐಗುಪ್ತದಲ್ಲಿ ಮಹತ್ತುಗಳನ್ನೂ, ಹಾಮನ ದೇಶದಲ್ಲಿ ಅದ್ಭುತಗಳನ್ನೂ, 22ಕೆಂಪು ಸಮುದ್ರದ ಬಳಿಯಲ್ಲಿ ಘೋರಕೃತ್ಯಗಳನ್ನೂ ನಡೆಸಿದ, ತಮ್ಮ ರಕ್ಷಕನಾದ ದೇವರನ್ನು ಮರೆತೇ ಬಿಟ್ಟರು. 23ಆದುದರಿಂದ ಆತನು ಅವರನ್ನು ಸಂಹರಿಸುವೆನು ಎನ್ನಲು, ಆತನು ಆರಿಸಿಕೊಂಡ ಮೋಶೆಯು ಮಧ್ಯಸ್ಥನಾಗಿ, ಅವರನ್ನು ಸಂಹರಿಸದಂತೆ ಆತನ ಕೋಪವನ್ನು ಶಾಂತಪಡಿಸಿದನು.
ಸುವಾರ್ತೆ
31ನನ್ನ ವಿಷಯವಾಗಿ ನಾನೇ ಸಾಕ್ಷಿ ಹೇಳಿಕೊಂಡರೆ ನನ್ನ ಸಾಕ್ಷಿಯು ಸತ್ಯವಾದದ್ದಲ್ಲ. 32ನನ್ನ ವಿಷಯವಾಗಿ ಸಾಕ್ಷಿ ಹೇಳುವವನು ಮತ್ತೊಬ್ಬನಿದ್ದಾನೆ. ಆತನು ನನ್ನ ವಿಷಯವಾಗಿ ಹೇಳುವ ಸಾಕ್ಷಿಯು ನಿಜವೆಂದು ನಾನು ಬಲ್ಲೆನು. 33ನೀವು ಯೋಹಾನನ ಬಳಿಗೆ ದೂತರನ್ನು ಕೇಳಿಕೊಂಡು ಬರುವುದಕ್ಕೆ ಕಳುಹಿಸಿದಿರಿ. ಅವನು ಸತ್ಯಕ್ಕೆ ಸಾಕ್ಷಿ ಹೇಳಿದನು. 34ನಾನಂತೂ ನನಗೆ ಬೇಕಾದ ಸಾಕ್ಷಿಯನ್ನು ಮನುಷ್ಯರಿಂದ ಸ್ವೀಕರಿಸುವುದಿಲ್ಲ. ಆದರೂ ನಿಮಗೆ ರಕ್ಷಣೆಯಾಗಬೇಕೆಂದು ಇದನ್ನು ನಿಮಗೆ ಹೇಳಿದ್ದೇನೆ. 35ಯೋಹಾನನು ಉರಿಯುವ ದೀಪದಂತೆ ಪ್ರಕಾಶಿಸಿದನು. ಅವನು ಕೊಡುವ ಬೆಳಕಿನಲ್ಲಿ ಸ್ವಲ್ಪ ಕಾಲ ಅತ್ಯಾನಂದಪಡುವುದಕ್ಕೆ ಮನಸ್ಸು ಮಾಡಿದಿರಿ. 36ನನಗಂತೂ ಯೋಹಾನನ ಸಾಕ್ಷಿಗಿಂತ ದೊಡ್ಡದಾದಸಾಕ್ಷಿ ಉಂಟು. ಹೇಗೆಂದರೆ, ಪೂರೈಸುವುದಕ್ಕೆ ತಂದೆಯು ನನಗೆ ಕೊಟ್ಟಿರುವ ಕೆಲಸಗಳೇ, ಅಂದರೆ ನಾನು ಮಾಡುವ ಈ ಕೆಲಸಗಳೇ ತಂದೆಯು ನನ್ನನ್ನು ಕಳುಹಿಸಿದ್ದಾನೆಂದು ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ. 37ಇದಲ್ಲದೆ ನನ್ನನ್ನು ಕಳುಹಿಸಿಕೊಟ್ಟ ತಂದೆಯು ನನ್ನ ವಿಷಯವಾಗಿ ಸಾಕ್ಷಿ ಹೇಳಿದ್ದಾನೆ. ನೀವು ಎಂದಾದರೂ ಆತನ ಸ್ವರವನ್ನು ಕೇಳಿದ್ದೂ ಇಲ್ಲ, ಆತನ ರೂಪವನ್ನು ನೋಡಿದ್ದೂ ಇಲ್ಲ. 38ಆತನ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿಲ್ಲ. ಏಕೆಂದರೆ ಆತನು ಕಳುಹಿಸಿದಾತನನ್ನು ನೀವು ನಂಬದೇ ಇದ್ದೀರಿ. 39ಧರ್ಮಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ತಿಳಿದು ಅವುಗಳನ್ನು ಪರಿಶೋಧಿಸುತ್ತಿರಾ? ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿ ಕೊಡುವವುಗಳಾಗಿವೆ. 40ಆದರೂ ಜೀವ ಹೊಂದುವುದಕ್ಕಾಗಿ ನನ್ನ ಬಳಿಗೆ ಬರುವುದಕ್ಕೆ ನಿಮಗೆ ಮನಸ್ಸಿಲ್ಲ. 41“ನಾನು ಮನುಷ್ಯರಿಂದ ಬರುವ ಪ್ರಶಂಸೆಯನ್ನು ಸ್ವೀಕರಿಸುವುದಿಲ್ಲ, 42ಆದರೆ ನಿಮ್ಮನ್ನು ನಾನು ಬಲ್ಲೆನು. ದೇವರ ಪ್ರೀತಿ ನಿಮ್ಮೊಳಗೆ ಇಲ್ಲವೆಂದು ನನಗೆ ತಿಳಿದಿದೆ. 43ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ ಆದರೂ ನನ್ನನ್ನು ನೀವು ಸ್ವೀಕರಿಸುವುದಿಲ್ಲ. ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ಅವನನ್ನು ನೀವು ಸ್ವೀಕರಿಸುತ್ತೀರಿ. 44ಒಬ್ಬನೇ ದೇವರಿಂದ ಬರುವ ಮಹಿಮೆಯನ್ನು ಅಪೇಕ್ಷಿಸದೇ ನಿಮ್ಮ ನಿಮ್ಮೊಳಗೇ ಪ್ರಶಂಸೆಯನ್ನು ಸ್ವೀಕರಿಸುವವರಾದ ನೀವು ಅದನ್ನು ನಂಬಲು ಹೇಗೆ ಸಾಧ್ಯ? 45ನಾನು ತಂದೆಯ ಮುಂದೆ ನಿಮ್ಮ ಮೇಲೆ ಅಪವಾದ ಹೊರಿಸುತ್ತಿದ್ದೇನೆಂದು ತಿಳಿಯಬೇಡಿರಿ. ನಿಮ್ಮ ಮೇಲೆ ಅಪವಾದ ಹೊರಿಸುವವನು ಒಬ್ಬನಿದ್ದಾನೆ; ಅವನೇ ನೀವು ನಿರೀಕ್ಷೆಯಿಟ್ಟಿರುವ ಮೋಶೆ! 46ಅವನು ನನ್ನ ವಿಷಯವಾಗಿ ಬರೆದನು, ಆದುದರಿಂದ ನೀವು ಮೋಶೆಯನ್ನೂ ನಂಬುವವರಾಗಿದ್ದರೆ ನನ್ನನ್ನೂ ನಂಬುತ್ತಿದ್ದಿರಿ. 47ಅವನು ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನು ನೀವು ನಂಬದಿದ್ದರೆ ನಾನು ಹೇಳುವ ಮಾತುಗಳನ್ನು ಹೇಗೆ ನಂಬುವಿರಿ?” ಎಂದನು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು