Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 10 ಮಾರ್ಚ್

ಆರ್ಥೊಡಾಕ್ಸ್ ಪಂಚಾಂಗ · ಫೆಬ್ರವರಿ 25 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 10 ಮಾರ್ಚ್ 2027

ಬುಧವಾರ · ಗಿಣ್ಣಿನ ವಾರ · ಸ್ವರ 7

ಹಬ್ಬಗಳು ಮತ್ತು ಸಂತರು

ಗಿಣ್ಣಿನ ವಾರದ ಬುಧವಾರ

ಗಿಣ್ಣಿನ ವಾರ

ಮಾಂಸವಿಲ್ಲ; ಹಾಲಿನ ಪದಾರ್ಥ, ಮೊಟ್ಟೆ ಮತ್ತು ಮೀನಿಗೆ ಅನುಮತಿ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಆರನೆಯ ತಾಸು

ಯೋವೇ 2:12–26

12ಯೆಹೋವನು ಹೀಗೆ ಹೇಳುತ್ತಾನೆ, “ಈಗಲಾದರೂ, ನೀವು ಪೂರ್ಣಹೃದಯದಿಂದ ನನ್ನ ಕಡೆಗೆ ತಿರುಗಿಕೊಳ್ಳಿರಿ. ಉಪವಾಸಮಾಡಿರಿ, ಅಳಿರಿ, ಗೋಳಾಡಿರಿ.” 13ನಿಮ್ಮ ಉಡುಪುಗಳನ್ನಲ್ಲ, ನಿಮ್ಮ ಹೃದಯಗಳನ್ನು ಹರಿದುಕೊಳ್ಳಿರಿ. ನಿಮ್ಮ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ. ಆತನು ದಯೆಯೂ, ಕನಿಕರವೂ, ದೀರ್ಘಶಾಂತಿಯೂ, ಮಹಾಪ್ರೀತಿಯೂ ಉಳ್ಳವನಾಗಿ ತಾನು ವಿಧಿಸುವ ಕೇಡಿಗೆ ಮನಮರುಗುವಂಥವನು. 14ಆತನು ಒಂದು ವೇಳೆ ಮನಸ್ಸನ್ನು ಬದಲಾಯಿಸಿ, ನಿಮ್ಮ ಕಡೆಗೆ ತಿರುಗಿಕೊಂಡು ನಿಮ್ಮನ್ನು ಆಶೀರ್ವದಿಸಬಹುದು; ನಿಮ್ಮ ದೇವರಾದ ಯೆಹೋವನಿಗೆ ನೀವು ಅರ್ಪಿಸುವ ನೈವೇದ್ಯವನ್ನು ಸ್ವೀಕರಿಸಿ ಸುವರಗಳನ್ನು ದಯಪಾಲಿಸಬಹುದು. 15ಚೀಯೋನ್ ಪರ್ವತದ ಮೇಲೆ ನಿಂತು ಕೊಂಬೂದಿರಿ, ಉಪವಾಸ ದಿನವನ್ನು ಗೊತ್ತುಮಾಡಿರಿ, ಪವಿತ್ರ ಸಭೆಯನ್ನು ಕರೆಯಿರಿ. 16ಜನರನ್ನು ಒಟ್ಟುಗೂಡಿಸಿರಿ, ಪವಿತ್ರ ಸಭೆಯನ್ನು ಏರ್ಪಡಿಸಿರಿ. ಹಿರಿಯರನ್ನು ಕೂಡಿಸಿರಿ, ಮಕ್ಕಳನ್ನು ಸೇರಿಸಿರಿ, ಮೊಲೆಕೂಸುಗಳನ್ನು ಸೇರಿಸಿರಿ. ಮದುಮಗನು ತನ್ನ ಕೊಠಡಿಯಿಂದ ಹೊರಟುಬರಲಿ, ವಧುವು ತನ್ನ ಕಲ್ಯಾಣಗೃಹದಿಂದ ಹೊರಟುಬರಲಿ. 17ಯೆಹೋವನ ಸೇವಕರಾದ ಯಾಜಕರು, ದ್ವಾರಮಂಟಪಕ್ಕೂ, ಯಜ್ಞವೇದಿಯ ನಡುವೆ ಅಳುತ್ತಾ ಹೀಗೆ ಹೇಳಲಿ, “ಯೆಹೋವನೇ, ನಿನ್ನ ಜನರನ್ನು ಕರುಣಿಸು, ಅನ್ಯಜನಾಂಗಗಳು ನಿಂದಿಸುವುದಕ್ಕೆ ನಿನ್ನ ಬಾಧ್ಯತೆಯನ್ನು ದೂಷಣೆಗೆ ಗುರಿಮಾಡಬೇಡ. ‘ಅವರ ದೇವರು ಎಲ್ಲಿ?’ ಎಂದು ಅವರು ಏಕೆ ನಿಂದಿಸಬೇಕು.” 18ಆಗ ಯೆಹೋವನು ತನ್ನ ದೇಶಕ್ಕೆ ಅಪಕೀರ್ತಿ ಬರಬಾರದೆಂದು ತನ್ನ ಜನರನ್ನು ಕರುಣಿಸಿ, 19ಅವರ ಬಿನ್ನಹವನ್ನು ಯೆಹೋವನು ಲಾಲಿಸಿ ಅವರಿಗೆ ಹೀಗೆ ಹೇಳಿದನು: “ಇಗೋ, ನಾನು ಧಾನ್ಯ, ದ್ರಾಕ್ಷಾರಸ, ತೈಲಗಳನ್ನು ನಿಮಗೆ ಕಳುಹಿಸುತ್ತಿದ್ದೇನೆ. ಅವುಗಳಿಂದ ನಿಮಗೆ ತೃಪ್ತಿಯಾಗುವುದು. ನಿಮ್ಮನ್ನು ಅನ್ಯಜನಾಂಗಗಳ ನಿಂದೆಗೆ ಇನ್ನು ಗುರಿಮಾಡುವುದಿಲ್ಲ. 20ನಾನು ಉತ್ತರ ದಿಕ್ಕಿನ ಸೈನ್ಯವನ್ನು ನಿಮ್ಮ ಕಡೆಯಿಂದ ದೂರಮಾಡುವೆನು, ಅದನ್ನು ಹಾಳುಬಿದ್ದ ಬಂಜರು ಭೂಮಿಗೂ ಓಡಿಸುವೆನು. ಅದರ ಮುಂಭಾಗವನ್ನು ಪೂರ್ವದ ಸಮುದ್ರಕ್ಕೂ, ಅದರ ಹಿಂಭಾಗವನ್ನು ಪಶ್ಚಿಮ ಸಮುದ್ರಕ್ಕೂ ತಳ್ಳಿಬಿಡುವೆನು. ಅದರ ದುರ್ವಾಸನೆಯು ಏರುವುದು. ಏಕೆಂದರೆ ಆತನು ಮಹತ್ಕಾರ್ಯಗಳನ್ನು ಮಾಡುತ್ತಾನೆ. 21ಭೂಮಿಯೇ, ಹೆದರಬೇಡ, ಹರ್ಷಿಸು, ಉಲ್ಲಾಸಿಸು, ಯೆಹೋವನು ಮಹತ್ಕಾರ್ಯಗಳನ್ನು ಮಾಡಿದ್ದಾನೆ. 22ಕಾಡುಮೃಗಗಳೇ ಅಂಜಬೇಡಿರಿ, ಕಾಡುಗಾವಲಲ್ಲಿ ಹುಲ್ಲು ಮೊಳೆಯುವುದು, ಮರವು ಹಣ್ಣು ಬಿಡುವುದು. ಅಂಜೂರದ ಗಿಡವೂ ದ್ರಾಕ್ಷಾಲತೆಯೂ ಸಾರವತ್ತಾಗಿ ಫಲಿಸುವವು. 23ಚೀಯೋನಿನ ಜನರೇ ಹರ್ಷಿಸಿರಿ, ನಿಮ್ಮ ದೇವರಾದ ಯೆಹೋವನಲ್ಲಿ ಉಲ್ಲಾಸಿಸಿರಿ. ಆತನು ತನ್ನ ನೀತಿಯಿಂದ ಮುಂಗಾರು ಮಳೆಯನ್ನು ನಿಮಗೆ ಕೊಡುವನು. ಮುಂಗಾರು, ಹಿಂಗಾರು ಮಳೆಗಳನ್ನು ಮೊದಲಿನಂತೆ ನಿಮಗಾಗಿ ಸುರಿಸುವನು. 24ಕಣಜಗಳಲ್ಲಿ ಗೋದಿಯು ರಾಶಿರಾಶಿಯಾಗಿರುವುದು, ತೊಟ್ಟಿಗಳಲ್ಲಿ ದ್ರಾಕ್ಷಾರಸವೂ ಎಣ್ಣೆಯೂ ತುಂಬಿತುಳುಕುವವು. 25ಗುಂಪು ಮಿಡತೆಗಳು, ಸಣ್ಣ ಮಿಡತೆಗಳು, ದೊಡ್ಡ ಮಿಡತೆಗಳು, ಚೂರಿ ಮಿಡತೆಗಳು, ನಾನು ಕಳುಹಿಸಿದ ಈ ಮಿಡತೆಗಳ ಸೈನ್ಯಗಳು ತಿಂದು ನಷ್ಟಮಾಡಿದ ವರ್ಷಗಳನ್ನು ನಾನು ನಿಮಗೆ ತಿರುಗಿಕೊಡುವೆನು. 26ನೀವು ಹೊಟ್ಟೆ ತುಂಬಾ ಊಟಮಾಡಿ ತೃಪ್ತಿಗೊಂಡು, ನಿಮಗಾಗಿ ಅದ್ಭುತಕಾರ್ಯಗಳನ್ನು ಮಾಡಿದ ನಿಮ್ಮ ದೇವರಾದ ಯೆಹೋವನ ನಾಮವನ್ನು ಕೊಂಡಾಡುವಿರಿ. ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು.

ಸಂಧ್ಯಾ ಪ್ರಾರ್ಥನೆ: ವಾಚನ

ಯೋವೇ 3:12–21

12ಜನಾಂಗಗಳು ಎಚ್ಚೆತ್ತುಕೊಂಡು, ಯೆಹೋಷಾಫಾಟನ ನ್ಯಾಯತೀರ್ಪಿನ ತಗ್ಗಿಗೆ ಬರಲಿ. ಅಲ್ಲಿ ನಾನು ಸುತ್ತಣ ಜನಾಂಗಗಳಿಗೆಲ್ಲಾ, ನ್ಯಾಯತೀರಿಸಲು ಆಸೀನನಾಗುವೆನು. 13ಯೆಹೋವನ ಸೈನ್ಯದವರೇ, ಕುಡುಗೋಲನ್ನು ಹಾಕಿರಿ, ಫಲವು ಪಕ್ವವಾಗಿದೆ. ಬನ್ನಿರಿ, ದ್ರಾಕ್ಷಿಯನ್ನು ತುಳಿಯಿರಿ, ದ್ರಾಕ್ಷಿಯ ಅಲೆಯು ತುಂಬಿದೆ. ತೊಟ್ಟಿಗಳು ತುಂಬಿ ತುಳುಕುತ್ತಿವೆ. ಜನಾಂಗಗಳ ದುಷ್ಟತನವು ವಿಪರೀತವಾಗಿದೆ. 14ಆಹಾ ತೀರ್ಪಿನ ತಗ್ಗಿನಲ್ಲಿ ಗುಂಪುಗುಂಪುಗಳಾಗಿ ಜನರಿದ್ದಾರೆ. ಏಕೆಂದರೆ ಯೆಹೋವನ ನ್ಯಾಯತೀರ್ಪಿನ ದಿನವು ಸಮೀಪಿಸಿದೆ. 15ಸೂರ್ಯ ಮತ್ತು ಚಂದ್ರರು ಮಂಕಾಗುತ್ತಾರೆ, ನಕ್ಷತ್ರಗಳು ಕಾಂತಿಗುಂದುತ್ತವೆ. 16ಯೆಹೋವನು ಚೀಯೋನಿನಿಂದ ಗರ್ಜಿಸುತ್ತಾನೆ, ಯೆರೂಸಲೇಮಿನಿಂದ ಧ್ವನಿಗೈಯುತ್ತಾನೆ. ಭೂಮಿ ಹಾಗು ಆಕಾಶಗಳು ನಡುಗುತ್ತವೆ, ಆದರೆ ಯೆಹೋವನು ತನ್ನ ಜನರಿಗೆ ಆಶ್ರಯವೂ, ಮತ್ತು ಇಸ್ರಾಯೇಲರಿಗೆ ರಕ್ಷಣದುರ್ಗವೂ ಆಗಿರುವನು. 17ನಿಮ್ಮ ದೇವರಾದ ಯೆಹೋವನು ನಾನೇ ಎಂದು ನಿಮಗೆ ಮನದಟ್ಟಾಗುವುದು. ಆಗ ನಾನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನಲ್ಲಿ ನೆಲೆಸುವುದರಿಂದ, ಯೆರೂಸಲೇಮ್ ಪವಿತ್ರವಾಗಿರುವುದು. ಅನ್ಯರು ಇನ್ನು ಅದರಲ್ಲಿ ಹಾದುಹೋಗುವುದಿಲ್ಲ. 18ಆ ದಿನದಲ್ಲಿ, ಬೆಟ್ಟಗಳಿಂದ ದ್ರಾಕ್ಷಾರಸವು ಸುರಿಯುವುದು, ಗುಡ್ಡಗಳಿಂದ ಹಾಲು ಹರಿಯುವುದು, ಯೆಹೂದದ ಹಳ್ಳಗಳಲ್ಲೆಲ್ಲಾ ನೀರು ತುಂಬಿರುವುದು, ಯೆಹೋವನ ಆಲಯದೊಳಗೆ ಬುಗ್ಗೆಯು ಉಕ್ಕಿ ಬಂದು, ಶಿಟ್ಟೀಮಿನ ಹಳ್ಳವನ್ನು ತಂಪುಮಾಡುವುದು. 19ಐಗುಪ್ತ್ಯವು ಹಾಳಾಗುವುದು, ಎದೋಮ್, ಹಾಳಾದ ಬೆಂಗಾಡಾಗುವುದು, ಏಕೆಂದರೆ ಅವರು ಯೆಹೂದ್ಯರನ್ನು ಹಿಂಸಿಸಿ, ಅವರ ದೇಶದಲ್ಲಿ ನಿರ್ದೋಷಿಗಳ ರಕ್ತವನ್ನು ಸುರಿಸಿದ್ದಾರೆ. 20ಆದರೆ ಯೆಹೂದವು ಸದಾ ಜನಭರಿತವಾಗಿರುವುದು, ಯೆರೂಸಲೇಮ್ ತಲತಲಾಂತರಕ್ಕೂ ನಿವಾಸಸ್ಥಾನವಾಗಿರುವುದು. 21ನಾನು ಶಿಕ್ಷಿಸದೆ ಇದ್ದ ಅವರ ರಕ್ತಾಪರಾಧವನ್ನು ಶಿಕ್ಷಿಸದೇ ಬಿಡುವುದಿಲ್ಲ. ಯೆಹೋವನು ಚೀಯೋನಿನಲ್ಲಿ ವಾಸವಾಗಿರುತ್ತಾನೆ.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 25 ಫೆಬ್ರವರಿ ಎಂದರೆ ನಾಗರಿಕ ಪಂಚಾಂಗದ 10 ಮಾರ್ಚ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು