ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಡಿಸೆಂಬರ್ 2026 › 27 ಡಿಸೆಂಬರ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 27 ಡಿಸೆಂಬರ್ 2026
ಭಾನುವಾರ · ಕ್ರಿಸ್ಮಸ್ ಕಾಲ
ಹಬ್ಬಗಳು ಮತ್ತು ಸಂತರು
ಪವಿತ್ರ ಕುಟುಂಬ: ಯೇಸು, ಮರಿಯ ಮತ್ತು ಯೋಸೇಫ
ಹಬ್ಬ · ಆರಾಧನಾ ಬಣ್ಣ: ಬಿಳಿ
ದಿನದ ವಾಚನಗಳು
ಮೊದಲನೆಯ ವಾಚನ
1ಈ ಸಂಗತಿಗಳು ನಡೆದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಯೆಹೋವನ ವಾಕ್ಯವುಂಟಾಗಿ ಹೇಳಿದೇನೆಂದರೆ, “ಅಬ್ರಾಮನೇ, ಭಯಪಡಬೇಡ, ನಾನು ನಿನಗೆ ಗುರಾಣಿಯಾಗಿದ್ದೇನೆ ಮತ್ತು ನಿನಗೆ ಅತ್ಯಧಿಕ ಬಹುಮಾನವು ದೊರೆಯುವುದು.” 2ಅದಕ್ಕೆ ಅಬ್ರಾಮನು, “ಕರ್ತನಾದ ಯೆಹೋವನೇ, ನನಗೆ ಏನು ಕೊಟ್ಟರೇನು? ನಾನು ಸಂತಾನವಿಲ್ಲದವನು. ಮತ್ತು ನನ್ನ ಆಸ್ತಿಯೆಲ್ಲಾ, ದಮಸ್ಕದವನಾದ ಎಲೀಯೆಜರನ ಪಾಲಾಗುತ್ತದೆಯಲ್ಲಾ?” ಎಂದನು. 3ಪುನಃ ಅಬ್ರಾಮನು ಹೇಳಿದ್ದೇನೆಂದರೆ, “ನೀನು ನನಗೆ ಸಂತಾನ ಕೊಡಲಿಲ್ಲವಾದ್ದರಿಂದ, ನೋಡು, ನನ್ನ ಮನೆಯಲ್ಲಿ ಹುಟ್ಟಿದವನೇ ನನಗೆ ಬಾಧ್ಯಸ್ಥನಾಗಬೇಕಾಯಿತು” ಎಂದು ಹೇಳಿದನು. 4ಯೆಹೋವನ ವಾಕ್ಯವು ಅವನ ಸಂಗಡ ಮಾತನಾಡಿ, “ಈ ಮನುಷ್ಯನು ನಿನಗೆ ಬಾಧ್ಯಸ್ಥನಾಗುವುದಿಲ್ಲ; ಆದರೆ ನಿನ್ನ ಹೊಟ್ಟೆಯಲ್ಲಿ ಹುಟ್ಟುವವನೇ ನಿನಗೆ ಬಾಧ್ಯಸ್ಥನಾಗುವನು” ಎಂದು ಹೇಳಿ ಅಬ್ರಾಮನನ್ನು ಹೊರಗೆ ಕರೆದುಕೊಂಡು ಬಂದು, 5“ಆಕಾಶದ ಕಡೆಗೆ ನೋಡು, ನಕ್ಷತ್ರಗಳನ್ನು ಲೆಕ್ಕಿಸುವುದು ನಿನ್ನಿಂದಾದರೆ ಲೆಕ್ಕಿಸು.” ನಂತರ ಯೆಹೋವನು ಅಬ್ರಾಮನಿಗೆ, “ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವುದು” ಎಂದು ಹೇಳಿದನು. 6ಅಬ್ರಾಮನು ಯೆಹೋವನನ್ನು ನಂಬಿದನು; ಯೆಹೋವನು ಅವನ ನಂಬಿಕೆಯನ್ನು ಅವನ ಲೆಕ್ಕಕ್ಕೆ ನೀತಿಯೆಂದು ಪರಿಗಣಿಸಿದನು. 21:1ಯೆಹೋವನು ತಾನು ವಾಗ್ದಾನ ಮಾಡಿದಂತೆಯೇ ಸಾರಳ ಮೇಲೆ ದಯವಿಟ್ಟು ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದನು. 2ಅದರಂತೆ ಸಾರಳು ಬಸುರಾಗಿ, ದೇವರು ಮೊದಲು ಸೂಚಿಸಿದ ಕಾಲದಲ್ಲಿ ಅಬ್ರಹಾಮನಿಂದ ಅವನ ಮುಪ್ಪಿನಲ್ಲೇ ಅವನಿಗೆ ಒಬ್ಬ ಮಗನನ್ನು ಹೆತ್ತಳು. 3ಅಬ್ರಹಾಮನು ಸಾರಳಲ್ಲಿ ತನ್ನಿಂದ ಹುಟ್ಟಿದ ಮಗನಿಗೆ “ಇಸಾಕ” ಎಂದು ಹೆಸರಿಟ್ಟನು.
ಪ್ರತಿವಚನ ಕೀರ್ತನೆ
1ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನ ನಾಮದ ಮಹತ್ವವನ್ನು ವರ್ಣಿಸಿರಿ; ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಪಡಿಸಿರಿ. 2ಆತನನ್ನು ಕೀರ್ತಿಸಿರಿ, ಭಜಿಸಿರಿ; ಆತನ ಅದ್ಭುತಕೃತ್ಯಗಳನ್ನೆಲ್ಲಾ ಧ್ಯಾನಿಸಿರಿ. 3ಆತನ ಪರಿಶುದ್ಧ ನಾಮದಲ್ಲಿ ಹಿಗ್ಗಿರಿ; ಯೆಹೋವನ ದರ್ಶನವನ್ನು ಕೋರುವವರ ಹೃದಯವು ಹರ್ಷಿಸಲಿ. 4ಯೆಹೋವನನ್ನೂ, ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ. 5ಆತನು ಮಾಡಿದ ಅದ್ಭುತಕೃತ್ಯ, ಆತನ ಮಹತ್ಕಾರ್ಯ, ಆತನ ಬಾಯಿಂದ ಹೊರಟ ನ್ಯಾಯನಿರ್ಣಯ ಇವುಗಳನ್ನು, 6ಆತನ ಸೇವಕನಾದ ಅಬ್ರಹಾಮನ ಸಂತತಿಯವರೇ, ಆತನು ಆರಿಸಿಕೊಂಡ ಯಾಕೋಬನ ವಂಶದವರೇ, ನೀವು ನೆನಪುಮಾಡಿಕೊಳ್ಳಿರಿ. 8ಆತನು ತನ್ನ ವಾಗ್ದಾನವನ್ನು ಸಾವಿರ ತಲೆಗಳವರೆಗೂ, ತನ್ನ ಒಡಂಬಡಿಕೆಯನ್ನು ನಿತ್ಯವೂ ನೆನಪಿನಲ್ಲಿಟ್ಟುಕೊಳ್ಳುತ್ತಾನೆ. 9ಆತನು ಆ ಒಡಂಬಡಿಕೆಯನ್ನು ಅಬ್ರಹಾಮನ ಸಂಗಡ ಮಾಡಿಕೊಂಡನು; ಇಸಾಕನಿಗೆ ತನ್ನ ವಾಗ್ದಾನಗಳನ್ನು ಕೊಟ್ಟನು.
ಎರಡನೆಯ ವಾಚನ
8ನಂಬಿಕೆಯಿಂದಲೇ ಅಬ್ರಹಾಮನು ಕರೆಯಲ್ಪಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟು ಹೋದನು. ತಾನು ಹೋಗುವುದು ಎಲ್ಲಿಗೆ ಎಂದು ತಿಳಿಯದೆ ಹೊರಟನು. 11ಇದಲ್ಲದೆ ಸಾರಳು ವಾಗ್ದಾನ ಮಾಡಿದಾತನನ್ನು ನಂಬತಕ್ಕವನೆಂದೆಣಿಸಿ ತಾನು ಪ್ರಾಯ ಮೀರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿಯಾಗುವುದಕ್ಕೆ ಶಕ್ತಿಯನ್ನು ಹೊಂದಿದಳು. 12ಆದುದರಿಂದ ಮೃತಪ್ರಾಯನಾಗಿದ್ದ ಒಬ್ಬನಿಂದ ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದಲ್ಲಿರುವ ಮರಳಿನಂತೆಯೂ ಅಸಂಖ್ಯವಾದ ಮಕ್ಕಳು ಹುಟ್ಟಿದರು. 17ಅಬ್ರಹಾಮನು ಪರೀಕ್ಷಿಸಲ್ಪಟ್ಟಾಗ ಇಸಾಕನನ್ನು ನಂಬಿಕೆಯಿಂದಲೇ ಸಮರ್ಪಿಸಿದನು. ಆ ವಾಗ್ದಾನಗಳನ್ನು ಹೊಂದಿದ ಅವನು, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು” ಎಂದು ದೇವರು ಅವನಿಗೆ ಹೇಳಿದ್ದರೂ ತನ್ನ ಏಕಪುತ್ರನನ್ನು ಅರ್ಪಿಸಿದನು. 19ನನ್ನ ಮಗನು ಸತ್ತರೂ ದೇವರು ಅವನನ್ನು ಬದುಕಿಸಲು ಸಮರ್ಥನಾಗಿದ್ದಾನೆಂದು ತಿಳಿದುಕೊಂಡಿದ್ದನು. ಮತ್ತು ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಪಡೆದುಕೊಂಡನು.
ಸುವಾರ್ತೆ
22ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಅವರ ಶುದ್ಧೀಕರಣದ ದಿನಗಳು ಮುಗಿದ ಮೇಲೆ, “ಚೊಚ್ಚಲು ಗಂಡೆಲ್ಲಾ ಕರ್ತನಿಗೆ ಮೀಸಲೆನಿಸಿಕೊಳ್ಳುವುದು” ಎಂದು ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ, ಅವರು ಆ ಕೂಸನ್ನು ಕರ್ತನಿಗೆ ಸಮರ್ಪಿಸುವುದಕ್ಕಾಗಿ ಯೆರೂಸಲೇಮಿಗೆ ತೆಗೆದುಕೊಂಡು ಹೋದರು. 24ಇದಲ್ಲದೆ ಕರ್ತನ ಧರ್ಮಶಾಸ್ತ್ರದಲ್ಲಿ ಹೇಳಿರುವಂತೆ ಅವರು “ಒಂದು ಜೋಡಿ ಬೆಳವಕ್ಕಿಯನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ” ಬಲಿಕೊಡಬೇಕಾಗಿತ್ತು. 25ಆ ಕಾಲದಲ್ಲಿ ಯೆರೂಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬ ಮನುಷ್ಯನಿದ್ದನು. ಈ ಮನುಷ್ಯನು ನೀತಿವಂತನೂ ದೇವಭಕ್ತನೂ ಆಗಿದ್ದನು. ಇಸ್ರಾಯೇಲರನ್ನು ಸಂತೈಸುವವನು ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು ಮತ್ತು ಆತನು ಪವಿತ್ರಾತ್ಮಭರಿತನಾಗಿದ್ದನು. 26ಇದಲ್ಲದೆ, ಕರ್ತನು ಕಳುಹಿಸಬೇಕಾದ ಕ್ರಿಸ್ತನನ್ನು ಕಾಣುವುದಕ್ಕಿಂತ ಮುಂಚೆ ನೀನು ಸಾಯುವುದಿಲ್ಲವೆಂದು ಪವಿತ್ರಾತ್ಮನ ಮೂಲಕ ಅವನಿಗೆ ದೈವೋಕ್ತಿ ಉಂಟಾಗಿತ್ತು. 27ಇವನು ಪವಿತ್ರಾತ್ಮನ ಪ್ರೇರಣೆಯಿಂದ ದೇವಾಲಯಕ್ಕೆ ಬಂದನು. ಆಗ ತಂದೆತಾಯಿಗಳು ಮಗುವಾದ ಯೇಸುವನ್ನು ಧರ್ಮಶಾಸ್ತ್ರದಲ್ಲಿ ಹೇಳಿರುವ ಪದ್ಧತಿಯ ಪ್ರಕಾರ ನಡೆಸಬೇಕೆಂದು ಮಗುವನ್ನು ಒಳಕ್ಕೆ ತರಲು, 28ಸಿಮೆಯೋನನು ಆ ಮಗುವನ್ನು ತನ್ನ ಕೈಯಲ್ಲಿ ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ, 29“ಕರ್ತನೇ, ನಿನ್ನ ಮಾತು ನೆರವೇರಿತು; ಈಗ ಸಮಾಧಾನದಿಂದ ಹೋಗುವುದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಯಿತು. 30ನೀನು ಎಲ್ಲಾ ಜನರ ಸಮ್ಮುಖದಲ್ಲಿ ಸಿದ್ಧಪಡಿಸಿದ ಆ ರಕ್ಷಣೆಯನ್ನು ನಾನು ಕಣ್ಣಾರೆ ಕಂಡೆನು. 32ಆತನು ಅನ್ಯಜನರಿಗೆ ಜ್ಞಾನೋದಯದ ಬೆಳಕು, ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಕೀರ್ತಿ” ಅಂದನು. 33ಆ ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳಿಗೆ ಅದರ ತಂದೆತಾಯಿಗಳು ಆಶ್ಚರ್ಯಪಡುತ್ತಿರಲು, 34ಸಿಮೆಯೋನನು ಅವರನ್ನು ಆಶೀರ್ವದಿಸಿ ತಾಯಿಯಾದ ಮರಿಯಳಿಗೆ, “ಇಗೋ, ಈತನು ಇಸ್ರಾಯೇಲ್ ಜನರಲ್ಲಿ ಅನೇಕರು ಬೀಳುವುದಕ್ಕೂ, ಅನೇಕರು ಏಳುವುದಕ್ಕೂ ಕಾರಣನಾಗಿರುವನು ಮತ್ತು ಜನರು ವಿರೋಧಿಸಿ ಮಾತನಾಡುವುದಕ್ಕೂ ಗುರುತಾಗಿರುವನು; 35ಹೀಗೆ ಬಹುಜನರ ಹೃದಯದ ಆಲೋಚನೆಗಳು ಬಹಿರಂಗವಾಗುವವು; ಈ ಕಾರಣಕ್ಕಾಗಿ ಈತನು ಹುಟ್ಟಿದ್ದು. ಇದಲ್ಲದೆ ನಿನ್ನ ಸ್ವಂತ ಮನಸ್ಸಿಗಂತೂ ಅಲಗು ನಾಟಿದಂತೆ ವೇದನೆ ಉಂಟಾಗುತ್ತದೆ” ಎಂದು ಹೇಳಿದನು. 36ಇದಲ್ಲದೆ ಅಸೇರನ ಕುಲದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು. ಆಕೆ ಬಹಳ ಮುಪ್ಪಿನವಳು. ಮದುವೆಯಾಗಿ ಏಳು ವರ್ಷ ಗಂಡನ ಕೂಡ ಸಂಸಾರ ಮಾಡಿ ವಿಧವೆಯಾಗಿದ್ದಳು, 37ಅವಳು ಎಂಭತ್ತುನಾಲ್ಕು ವರ್ಷದವಳಾಗಿದ್ದಳು. ಆಕೆ ದೇವಾಲಯವನ್ನು ಬಿಟ್ಟುಹೋಗದೆ ಉಪವಾಸ ವಿಜ್ಞಾಪನೆಗಳಿಂದ ರಾತ್ರಿ ಹಗಲೂ ದೇವರನ್ನು ಆರಾಧಿಸುತ್ತಿದ್ದಳು. 38ಆಕೆ ಅದೇ ಗಳಿಗೆಯಲ್ಲಿ ಅವರ ಹತ್ತಿರಕ್ಕೆ ಬಂದು ದೇವರಿಂದಾದ ಉಪಕಾರವನ್ನು ನೆನಸಿ ಕೊಂಡಾಡಿದ್ದಲ್ಲದೆ ಯೆರೂಸಲೇಮಿನ ಬಿಡುಗಡೆಯನ್ನು ಹಾರೈಸುತ್ತಿದ್ದವರೆಲ್ಲರ ಸಂಗಡ ಆತನ ವಿಷಯವಾಗಿ ಮಾತನಾಡುವವಳಾದಳು. 39ಇತ್ತಲಾಗಿ ಅವರು ಧರ್ಮಶಾಸ್ತ್ರದಲ್ಲಿ ಹೇಳಿರುವ ಕಾರ್ಯಗಳನ್ನೆಲ್ಲಾ ನೆರವೇರಿಸಿದ ಮೇಲೆ ಗಲಿಲಾಯಕ್ಕೆ ಸೇರಿದ ನಜರೇತೆಂಬ ತಮ್ಮ ಊರಿಗೆ ಹಿಂತಿರುಗಿ ಹೋದರು. 40ಆ ಬಾಲಕನು ಬೆಳೆದು ಬಲಗೊಂಡು ಜ್ಞಾನದಿಂದ ತುಂಬಿದವನಾದನು; ಮತ್ತು ಆತನ ಮೇಲೆ ದೇವರ ಕೃಪೆ ಇತ್ತು.
ಇಂದಿನ ಸಂತರು
- ಸಂತ ಯೋಹಾನ, ಅಪೊಸ್ತಲ ಮತ್ತು ಸುವಾರ್ತಿಕ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು