Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಡಿಸೆಂಬರ್ 2026 › 27 ಡಿಸೆಂಬರ್

ಆರ್ಥೊಡಾಕ್ಸ್ ಪಂಚಾಂಗ · ಡಿಸೆಂಬರ್ 14 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 27 ಡಿಸೆಂಬರ್ 2026

ಭಾನುವಾರ · ಸ್ವರ 5

ಹಬ್ಬಗಳು ಮತ್ತು ಸಂತರು

ಪಂಚಾಶತ್ತಮದ ನಂತರದ 30ನೇ ಭಾನುವಾರ

ಪೂರ್ವಪಿತೃಗಳ ಭಾನುವಾರ

ಕ್ರಿಸ್ತ ಜನನದ ಉಪವಾಸ

ಮೀನಿಗೆ ಅನುಮತಿ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಉದಯಕಾಲದ ಎಂಟನೆಯ ಸುವಾರ್ತೆ

ಯೋಹಾ 20:11–18

11ಆದರೆ ಮರಿಯಳು ಹೊರಗೆ ಸಮಾಧಿಯ ಬಳಿಯಲ್ಲಿ ಅಳುತ್ತಾ ನಿಂತಿದ್ದಳು. ಹೀಗೆ ಆಕೆ ಅಳುತ್ತಿರುವಾಗ ಸಮಾಧಿಯೊಳಗೆ ಬಗ್ಗಿ ನೋಡಲು, 12ಯೇಸುವಿನ ದೇಹವು ಇಟ್ಟಿದ್ದ ಸ್ಥಳದಲ್ಲಿ ಬಿಳಿವಸ್ತ್ರಗಳನ್ನು ಧರಿಸಿದ್ದ ಇಬ್ಬರು ದೇವದೂತರನ್ನು ಕಂಡಳು, ಅವರಲ್ಲಿ ಒಬ್ಬನು ಯೇಸುವಿನ ತಲೆಯ ಕಡೆಯಲ್ಲಿ ಮತ್ತೊಬ್ಬನು ಆತನು ಪಾದಗಳಿದ್ದ ಕಡೆಯಲ್ಲಿ ಕುಳಿತಿದ್ದರು. 13ಅವರು ಆಕೆಗೆ, “ಅಮ್ಮಾ, ನೀನು ಯಾಕೆ ಅಳುತ್ತಿರುವೆ?” ಎಂದು ಕೇಳಲು, ಆಕೆಯು, “ನನ್ನ ಕರ್ತನನ್ನು ಅವರು ತೆಗೆದುಕೊಂಡು ಹೋಗಿದ್ದಾರೆ. ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದಳು. 14ಆಕೆಯು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಯೇಸು ನಿಂತಿರುವುದನ್ನು ಕಂಡಳು, ಆದರೆ ಆತನು ಯೇಸುವೇ ಎಂದು ಆಕೆಗೆ ತಿಳಿಯಲಿಲ್ಲ. 15ಯೇಸು ಆಕೆಗೆ, “ಅಮ್ಮಾ, ನೀನು ಯಾಕೆ ಅಳುತ್ತೀ? ಯಾರನ್ನು ಹುಡುಕುತ್ತೀ?” ಎಂದು ಕೇಳಲು, ಆಕೆ ಆತನನ್ನು ತೋಟಗಾರನೆಂದು ನೆನಸಿ ಆತನಿಗೆ, “ಅಯ್ಯಾ, ನೀನು ಆತನನ್ನು ತೆಗೆದುಕೊಂಡು ಹೋಗಿದ್ದರೆ ಎಲ್ಲಿ ಇಟ್ಟಿದ್ದೀ ಎಂದು ನನಗೆ ಹೇಳು, ನಾನು ಆತನನ್ನು ತೆಗೆದುಕೊಂಡು ಹೋಗುತ್ತೇನೆ” ಎಂದು ಹೇಳಿದಳು. 16ಯೇಸು ಆಕೆಗೆ, “ಮರಿಯಳೇ,” ಎಂದು ಹೇಳಲು, ಆಕೆಯು ಅವನ ಕಡೆಗೆ ತಿರುಗಿ ಇಬ್ರಿಯ ಭಾಷೆಯಲ್ಲಿ ಆತನಿಗೆ, “ರಬ್ಬೂನಿ” ಎಂದಳು. ಹಾಗೆಂದರೆ ಗುರುವೇ ಎಂದರ್ಥ. 17ಯೇಸು ಆಕೆಗೆ, “ನನ್ನನ್ನು ಮುಟ್ಟಬೇಡ, ಏಕೆಂದರೆ ನಾನು ಇನ್ನೂ ತಂದೆಯ ಬಳಿಗೆ ಏರಿಹೋದವನಲ್ಲ. ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವರಿಗೆ, ನನ್ನ ತಂದೆಯೂ, ನಿಮ್ಮ ತಂದೆಯೂ, ನನ್ನ ದೇವರೂ, ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಏರಿಹೋಗುತ್ತೇನೆ ಎಂದು ತಿಳಿಸು” ಎಂದನು. 18ಮಗ್ದಲದ ಮರಿಯಳು ಹೋಗಿ “ನಾನು ಕರ್ತನನ್ನು ನೋಡಿದ್ದೇನೆ,” ಆತನು ಇಂಥಿಂಥದನ್ನು ನನಗೆ ಹೇಳಿದನು ಎಂದು ಶಿಷ್ಯರಿಗೆ ತಿಳಿಸಿದಳು.

ಪತ್ರಿಕೆ (ಪೂರ್ವಪಿತೃಗಳು)

ಕೊಲೊ 3:4–11

4ನಿಮಗೆ ಜೀವವಾಗಿರುವ ಕ್ರಿಸ್ತನು ಪ್ರತ್ಯಕ್ಷನಾಗುವಾಗ ನೀವು ಸಹ ಆತನೊಂದಿಗೆ ಮಹಿಮೆಯಲ್ಲಿ ಪ್ರತ್ಯಕ್ಷರಾಗುವಿರಿ. 5ಆದುದರಿಂದ ನಿಮ್ಮಲ್ಲಿರುವ ಲೌಕಿಕ ಆಸೆಗಳು ಅಂದರೆ, ಜಾರತ್ವ, ಅಶುದ್ಧತ್ವ, ಕಾಮಾಭಿಲಾಷೆ, ಕೆಟ್ಟ ಅಭಿಲಾಷೆ ಮತ್ತು ವಿಗ್ರಹಾರಾಧನೆಗೆ ಸಮವಾಗಿರುವ ದುರಾಶೆ ಇಂಥವುಗಳನ್ನು ಸಾಯಿಸಿರಿ. 6ಇವುಗಳ ನಿಮಿತ್ತ ಅವಿಧೇಯರಾಗುವವರ ಮೇಲೆ ದೇವರ ಕೋಪವು ಉಂಟಾಗುತ್ತದೆ. 7ಹಿಂದೆ ನೀವು ಸಹ ಅಂಥವುಗಳಲ್ಲಿ ಜೀವಿಸುತ್ತಿದ್ದು ಅವುಗಳನ್ನು ನಡಿಸುತ್ತಿದ್ದಿರಿ. 8ಆದರೆ ಈಗಲಾದರೋ ಕ್ರೋಧ, ಕೋಪ, ಮತ್ಸರ, ದೂಷಣೆ ಮತ್ತು ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ಬಿಟ್ಟುಬಿಡಿರಿ. 9ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ, ಯಾಕೆಂದರೆ ನೀವು ಹಿಂದಿನಸ್ವಭಾವವನ್ನು ಅದರ ಕೃತ್ಯಗಳೊಂದಿಗೆ ತೆಗೆದುಹಾಕಿ ನೂತನಸ್ವಭಾವವನ್ನು ಧರಿಸಿಕೊಂಡಿದ್ದೀರಲ್ಲವೇ. 10ಈ ನೂತನ ಸ್ವಭಾವವು ಸೃಷ್ಟಿಸಿದಾತನ ಹೋಲಿಕೆಯ ಜ್ಞಾನದ ಮೇರೆಗೆ ಅದು ನೂತನವಾಗುತ್ತಾ ಬರುತ್ತದೆ. 11ಈ ಜ್ಞಾನದಲ್ಲಿ ಗ್ರೀಕನು ಮತ್ತು ಯೆಹೂದ್ಯನು ಎಂಬ ಭೇದವಿಲ್ಲ, ಸುನ್ನತಿಮಾಡಿಸಿಕೊಂಡವರು ಮತ್ತು ಸುನ್ನತಿ ಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ, ನಾಗರಿಕ, ಅನಾಗರಿಕನು ಎಂಬ ಭೇದವಿಲ್ಲ, ದಾಸನು, ಸ್ವತಂತ್ರನು ಎಂಬ ಭೇದವಿಲ್ಲ, ಆದರ ಬದಲಾಗಿ ಕ್ರಿಸ್ತನೇ ಸಮಸ್ತವೂ ಹಾಗೂ ಸಮಸ್ತರಲ್ಲಿಯೂ ಇರುವಾತನಾಗಿದ್ದಾನೆ.

ಸುವಾರ್ತೆ (ಪೂರ್ವಪಿತೃಗಳು)

ಲೂಕ 14:16–24

16ಯೇಸು ಅವನಿಗೆ ಹೇಳಿದ್ದೇನಂದರೆ, “ಒಬ್ಬ ಮನುಷ್ಯನು ಮಹಾ ಔತಣ ಮಾಡಿಸಿ ಅನೇಕರನ್ನು ಆಮಂತ್ರಿಸಿದನು. 17ಊಟವು ಸಿದ್ಧವಾದಾಗ, ಅವನು ಊಟಕ್ಕೆ ಆಹ್ವಾನಿಸಲ್ಪಟ್ಟವರ ಬಳಿಗೆ ಬಂದು, ‘ಈಗ ಔತಣವು ಸಿದ್ಧವಾಗಿದೆ ಊಟಕ್ಕೆ ಬರಬೇಕು’ ಎಂದು ಹೇಳುವುದಕ್ಕೆ ತನ್ನ ಆಳನ್ನು ಕಳುಹಿಸಿದನು. 18ಆದರೆ ಅವರೆಲ್ಲರೂ ಒಂದೇ ಮನಸ್ಸಿನಿಂದ ನೆವ ಹೇಳುವುದಕ್ಕೆ ತೊಡಗಿದರು. ಮೊದಲನೆಯವನು ಆ ಆಳನ್ನು ನೋಡಿ, ‘ನಾನು ಒಂದು ಹೊಲವನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ, ಅದನ್ನು ಹೋಗಿ ನೋಡಬೇಕಾಗಿದೆ. ನನ್ನನ್ನು ಕ್ಷಮಿಸಬೇಕು’ ಎಂದು ಕೇಳಿಕೊಂಡನು. 19ಮತ್ತೊಬ್ಬನು, ‘ನಾನು ಐದು ಜೋಡಿ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸುವುದಕ್ಕೆ ಹೋಗುತ್ತಿದ್ದೇನೆ, ನನ್ನನ್ನು ಕ್ಷಮಿಸಬೇಕು’ ಎಂದು ಕೇಳಿಕೊಂಡನು. 20ಇನ್ನೊಬ್ಬನು, ‘ನಾನು ಮದುವೆಮಾಡಿಕೊಂಡಿದ್ದೇನೆ, ಆದುದರಿಂದ ನಾನು ಬರುವುದಕ್ಕಾಗುವುದಿಲ್ಲ’ ಅಂದನು. 21ಆ ಆಳು ಬಂದು ತನ್ನ ಯಜಮಾನನಿಗೆ ಈ ಸಂಗತಿಗಳನ್ನು ತಿಳಿಸಲು ಮನೆಯ ಯಜಮಾನನು ಸಿಟ್ಟುಗೊಂಡು ಆಳಿಗೆ, ‘ನೀನು ತಟ್ಟನೆ ಈ ಊರಿನ ಬೀದಿಬೀದಿಗೂ ಸಂದುಸಂದಿಗೂ ಹೋಗಿ ಬಡವರು, ಅಂಗಹೀನರು, ಕುರುಡರು, ಕುಂಟರು, ಇಂಥವರನ್ನು ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳಿದನು. 22ಬಳಿಕ ಆ ಆಳು, ‘ಅಯ್ಯಾ, ನೀನು ಅಪ್ಪಣೆಕೊಟ್ಟಂತೆ ಮಾಡಿದ್ದಾಯಿತು. ಆದರೂ ಇನ್ನೂ ಸ್ಥಳ ಉಳಿದಿದೆ’ ಅಂದನು. 23ಆಗ ಆ ಯಜಮಾನನು ತನ್ನ ಆಳಿಗೆ ಹೇಳಿದ್ದೇನೆಂದರೆ, ‘ನೀನು ಹಾದಿಗಳಿಗೂ ಬೀದಿಗಳಿಗೂ ಹೋಗಿ ಅಲ್ಲಿ ಸಿಕ್ಕಿದವರನ್ನು ಬಲವಂತಮಾಡಿ ಒಳಕ್ಕೆ ಕರೆದುಕೊಂಡು ಬಾ, ನನ್ನ ಮನೆ ತುಂಬಲಿ. 24ಆದರೆ ಔತಣಕ್ಕೆ ಮೊದಲು ಆಮಂತ್ರಿಸಲ್ಪಟ್ಟವರಲ್ಲಿ ಒಬ್ಬನಾದರೂ ನಾನು ಮಾಡಿಸಿದ ಅಡಿಗೆಯ ರುಚಿಯನ್ನು ಸವಿಯಬಾರದು’ ಎಂದು ನಿಮಗೆ ಹೇಳುತ್ತೇನೆ” ಅಂದನು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 14 ಡಿಸೆಂಬರ್ ಎಂದರೆ ನಾಗರಿಕ ಪಂಚಾಂಗದ 27 ಡಿಸೆಂಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು