ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಗಲಿಲಾಯದಲ್ಲಿ
ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಗಲಿಲಾಯದಲ್ಲಿ
ಸಬ್ಬತ್ ದಿನದಲ್ಲಿ ತೆನೆ ಕೀಳುವುದು
ಮತ್ತಾ 12:1–8 · ಮಾರ್ಕ 2:23–28 · ಲೂಕ 6:1–5
ಮತ್ತಾ 12:1–81ಆ ಸಬ್ಬತ್ ದಿನದಲ್ಲಿ ಯೇಸು ಪೈರಿನ ಹೊಲಗಳ ಮೂಲಕ ಹಾದುಹೋಗುತ್ತಿರುವಾಗ ಆತನ ಶಿಷ್ಯರು ಹಸಿದಿದ್ದರಿಂದ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು.
2ಆದರೆ ಫರಿಸಾಯರು ಅದನ್ನು ಕಂಡು, “ನೋಡು ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ಮಾಡಬಾರದ ಕೆಲಸವನ್ನು ಮಾಡುತ್ತಾರೆ” ಎಂದು ಆತನಿಗೆ ಹೇಳಿದರು.
3ಆತನು ಅವರಿಗೆ, “ದಾವೀದನು ತಾನೂ ತನ್ನ ಸಂಗಡ ಇದ್ದವರೂ ಹಸಿದಾಗ ಏನು ಮಾಡಿದನೆಂಬುದನ್ನು ನೀವು ಓದಲಿಲ್ಲವೋ?
4ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರು ಮಾತ್ರವೇ ಹೊರತು ಬೇರೆ ಯಾರು ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನು ಅವನು, ಅವನ ಸಂಗಡ ಇದ್ದವರು ತಿಂದನಲ್ಲವೇ.
5ಇದಲ್ಲದೆ ಸಬ್ಬತ್ ದಿನದಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನವನ್ನು ಹೊಲೆಮಾಡಿದಾಗ್ಯೂ ಅವರು ನಿರಪರಾಧಿಗಳಾಗಿದ್ದಾರೆ. ಇದನ್ನು ನೀವು ಧರ್ಮಶಾಸ್ತ್ರದಲ್ಲಿ ಓದಲಿಲ್ಲವೋ?
6ಆದರೆ ಇಲ್ಲಿ ದೇವಾಲಯಕ್ಕಿಂತ ದೊಡ್ಡವನು ಇದ್ದಾನೆಂದು ನಿಮಗೆ ಹೇಳುತ್ತೇನೆ.
7‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬುದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪುಮಾಡುತ್ತಿರಲಿಲ್ಲಾ.
8ಮನುಷ್ಯಕುಮಾರನು ಸಬ್ಬತ್ ದಿನಕ್ಕೆ ಕರ್ತನಾಗಿದ್ದಾನೆಂದು” ಹೇಳಿದನು.
ಮಾರ್ಕ 2:23–2823ಯೇಸು ಸಬ್ಬತ್ ದಿನದಲ್ಲಿ ಪೈರಿನ ಹೊಲಗಳನ್ನು ಹಾದುಹೋಗುತ್ತಿರುವಾಗ, ಆತನ ಶಿಷ್ಯರು ತೆನೆಗಳನ್ನು ಮುರಿದು ತಿಂದರು.
24ಫರಿಸಾಯರು ಆತನನ್ನು, “ನೋಡು, ಇವರು ಸಬ್ಬತ್ ದಿನದಲ್ಲಿ ಧರ್ಮಸಮ್ಮತವಲ್ಲದ್ದನ್ನು ಏಕೆ ಮಾಡುತ್ತಾರೆ?” ಎಂದು ಕೇಳಿದರು.
25ಆಗ ಯೇಸು ಅವರಿಗೆ, “ದಾವೀದನು ತಾನೂ ತನ್ನ ಸಂಗಡ ಇದ್ದವರೂ ಆಹಾರವಿಲ್ಲದೆ ಹಸಿದಾಗ ಏನು ಮಾಡಿದನೆಂಬುದನ್ನು ನೀವು ಎಂದಾದರೂ ಓದಲಿಲ್ಲವೋ?
26ಅವನು ಮಹಾಯಾಜಕನಾದ ಅಬಿಯಾತರನ ಕಾಲದಲ್ಲಿ ದೇವಮಂದಿರದೊಳಕ್ಕೆ ಹೋಗಿ ಯಾಜಕರು ಹೊರತು ಮತ್ತಾರೂ ತಿನ್ನಬಾರದ ನೈವೇದ್ಯದ ರೊಟ್ಟಿಗಳನ್ನು ತಾನು ತಿಂದು ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲಾ?” ಎಂದು ನುಡಿಯುತ್ತಾ,
27“ಸಬ್ಬತ್ ದಿನವು ಮನುಷ್ಯರಿಗೋಸ್ಕರ ಮಾಡಲಾಯಿತೇ ಹೊರತು ಮನುಷ್ಯರನ್ನು ಸಬ್ಬತ್ ದಿನಕ್ಕಾಗಿ ಮಾಡಲಿಲ್ಲ.
28ಹೀಗಿರಲಾಗಿ ಮನುಷ್ಯಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ” ಎಂದು ಯೇಸು ಹೇಳಿದನು.
ಲೂಕ 6:1–51ಸಬ್ಬತ್ ದಿನದಲ್ಲಿ ಯೇಸು ಪೈರಿನ ಹೊಲಗಳನ್ನು ಹಾದುಹೋಗುತ್ತಿರುವಾಗ ಆತನ ಶಿಷ್ಯರು ತೆನೆಗಳನ್ನು ಮುರಿದು ಕೈಗಳಲ್ಲಿ ಹೊಸಕಿಕೊಂಡು ತಿನ್ನುತ್ತಿದ್ದರು.
2ಆದರೆ ಫರಿಸಾಯರಲ್ಲಿ ಕೆಲವರು, “ಸಬ್ಬತ್ ದಿನದಲ್ಲಿ ನಿಷಿದ್ಧವಾದ ಕೆಲಸವನ್ನು ನೀವು ಯಾಕೆ ಮಾಡುತ್ತೀರಿ?” ಎಂದು ಕೇಳಿದ್ದಕ್ಕೆ,
3ಯೇಸು ಅವರಿಗೆ, “ದಾವೀದನು ಮತ್ತು ಆತನ ಸಂಗಡ ಇದ್ದವರೂ ಹಸಿದಿದ್ದಾಗ, ಆತನು ಏನು ಮಾಡಿದನೆಂಬುದನ್ನು ನೀವು ಓದಲಿಲ್ಲವೋ?
4ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರು ಮಾತ್ರವೇ ಹೊರತು ಮತ್ತಾರೂ ತಿನ್ನಬಾರದ ನೈವೇದ್ಯದ ರೊಟ್ಟಿಗಳನ್ನು ತೆಗೆದುಕೊಂಡು ತಾನೂ ತಿಂದು ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲಾ?” ಎಂದು ಉತ್ತರಿಸಿ,
5“ಮನುಷ್ಯಕುಮಾರನು ಸಬ್ಬತ್ ದಿನಕ್ಕೆ ಒಡೆಯನಾಗಿದ್ದಾನೆ” ಎಂದು ಅವರಿಗೆ ಹೇಳಿದನು.
ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.