Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಗಲಿಲಾಯದಲ್ಲಿ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಗಲಿಲಾಯದಲ್ಲಿ

ಕೈ ಬತ್ತಿಹೋಗಿದ್ದ ಮನುಷ್ಯನು

ಮತ್ತಾ 12:9–14 · ಮಾರ್ಕ 3:1–6 · ಲೂಕ 6:6–11

ಮತ್ತಾಯನು

ಮತ್ತಾ 12:9–14

9ಆತನು ಅಲ್ಲಿಂದ ಹೊರಟು ಅವರ ಸಭಾಮಂದಿರಕ್ಕೆ ಹೋದನು.

10ಆಗ ಅಲ್ಲಿ ಕೈಬತ್ತಿದವನೊಬ್ಬನಿದ್ದನು. ಫರಿಸಾಯರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು ಆತನನ್ನು, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ನ್ಯಾಯವೋ?” ಎಂದು ಕೇಳಿದರು.

11ಅದಕ್ಕಾತನು, “ನಿಮ್ಮಲ್ಲಿ ಯಾರಿಗಾದರೂ ಒಂದೇ ಒಂದು ಕುರಿ ಇದ್ದು ಅದು ಸಬ್ಬತ್ ದಿನದಲ್ಲಿ ಗುಂಡಿಯೊಳಗೆ ಬಿದ್ದರೆ ಅವನು ಅದನ್ನು ಹಿಡಿದು ಮೇಲಕ್ಕೆ ಎತ್ತದೇ ಇರುವನೇ?

12ಕುರಿಗಿಂತ ಮನುಷ್ಯನು ಎಷ್ಟೋ ಮೌಲ್ಯವುಳ್ಳವನು. ಆದಕಾರಣ ಸಬ್ಬತ್ ದಿನದಲ್ಲಿ ಒಳ್ಳೆಯ ಕೆಲಸ ಮಾಡುವುದು ನ್ಯಾಯವಾದದ್ದೆ” ಎಂದು ಉತ್ತರ ಕೊಟ್ಟನು.

13ತರುವಾಯ ಯೇಸು ಆ ಮನುಷ್ಯನಿಗೆ “ನಿನ್ನ ಕೈ ಚಾಚು” ಎಂದು ಹೇಳಿದನು. ಅವನು ಚಾಚಿದನು. ಅದು ಸಂಪೂರ್ಣವಾಸಿಯಾಗಿ ಮತ್ತೊಂದು ಕೈಯಂತಾಯಿತು.

14ಆದರೆ ಫರಿಸಾಯರು ಹೊರಕ್ಕೆ ಹೋಗಿ ಇವನನ್ನು ಯಾವ ರೀತಿಯಲ್ಲಿ ಕೊಲ್ಲೋಣ ಎಂದು ಆತನ ವಿರುದ್ಧ ಸಂಚು ಮಾಡತೊಡಗಿದರು.

ಮಾರ್ಕನು

ಮಾರ್ಕ 3:1–6

1ಇನ್ನೊಂದು ಸಾರಿ ಯೇಸು ಸಭಾಮಂದಿರಕ್ಕೆ ಹೋದಾಗ ಅಲ್ಲಿ ಕೈ ಬತ್ತಿಹೋದ ಮನುಷ್ಯನೊಬ್ಬನಿದ್ದನು.

2ಕೆಲವರು ಯೇಸುವಿನ ಮೇಲೆ ತಪ್ಪುಹೊರಿಸುವುದಕ್ಕೆ, ಸಬ್ಬತ್ ದಿನದಲ್ಲಿ ಅವನನ್ನು ಸ್ವಸ್ಥಮಾಡುವನೋ ಏನೋ ಎಂದು ಆತನನ್ನು ಹೊಂಚುಹಾಕಿ ನೋಡುತ್ತಾ ಇದ್ದರು.

3ಆತನು ಕೈಬತ್ತಿದ್ದವನಿಗೆ, “ಎದ್ದು ನಡುವೆ ನಿಂತುಕೋ” ಎಂದು ಹೇಳಿದನು.

4ಆಗ ಅವರಿಗೆ, “ಸಬ್ಬತ್ ದಿನದಲ್ಲಿ ಧರ್ಮಸಮ್ಮತವಾದದು ಯಾವುದು? ಮೇಲನ್ನು ಮಾಡುವುದೋ, ಕೇಡನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ, ತೆಗೆಯುವುದೋ?” ಎಂದು ಹೇಳಲು ಅವರು ಸುಮ್ಮನಿದ್ದರು.

5ಆಗ ಯೇಸು ಅವರ ಹೃದಯ ಕಾಠಿಣ್ಯಕ್ಕಾಗಿ ದುಃಖಪಟ್ಟು, ಕೋಪದಿಂದ ಸುತ್ತಲೂ ಅವರನ್ನು ದೃಷ್ಟಿಸಿ ನೋಡಿ ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಲು ಅವನು ಕೈ ಚಾಚಿದನು; ಅವನ ಕೈ ವಾಸಿಯಾಯಿತು.

6ತಕ್ಷಣ ಫರಿಸಾಯರು ಹೊರಕ್ಕೆ ಹೋಗಿ ಹೆರೋದ್ಯರನ್ನು ಕೂಡಿಕೊಂಡು ಯಾವ ಉಪಾಯದಿಂದ ಯೇಸುವನ್ನು ಕೊಲ್ಲಬಹುದು ಎಂದು ಆತನಿಗೆ ವಿರೋಧವಾಗಿ ಒಳಸಂಚುಮಾಡಿದರು.

ಲೂಕನು

ಲೂಕ 6:6–11

6ಮತ್ತೊಂದು ಸಬ್ಬತ್ ದಿನದಲ್ಲಿ ಆತನು ಸಭಾಮಂದಿರಕ್ಕೆ ಹೋಗಿ ಉಪದೇಶಮಾಡುತ್ತಿರುವಾಗ, ಅಲ್ಲಿ ಬಲಗೈ ಬತ್ತಿದವನೊಬ್ಬನು ಇದ್ದನು.

7ಶಾಸ್ತ್ರಿಗಳೂ ಫರಿಸಾಯರೂ ಆತನ ಮೇಲೆ ತಪ್ಪುಹೊರಿಸುವುದಕ್ಕೆ ಕಾರಣ ಸಿಕ್ಕಬೇಕೆಂದು ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವನೋ ಇಲ್ಲವೋ ಎಂದು ಆತನನ್ನು ಹೊಂಚಿನೋಡುತ್ತಿದ್ದರು.

8ಆದರೆ ಆತನು ಅವರ ಯೋಚನೆಗಳನ್ನು ತಿಳಿದು ಕೈ ಬತ್ತಿಹೋಗಿದ್ದ ಆ ಮನುಷ್ಯನಿಗೆ, “ಎದ್ದು ನಡುವೆ ಬಂದು ನಿಂತುಕೋ” ಎಂದು ಹೇಳಿದನು. ಅವನು ಎದ್ದುಬಂದು ನಿಂತುಕೊಂಡನು.

9ಆಗ ಯೇಸು ಅವರಿಗೆ, “ನಿಮ್ಮನ್ನು ಒಂದು ಮಾತು ಕೇಳುತ್ತೇನೆ, ಸಬ್ಬತ್ ದಿನದಲ್ಲಿ ಯಾವುದನ್ನು ಮಾಡುವುದು ನ್ಯಾಯ? ಮೇಲನ್ನು ಮಾಡುವುದೋ ಅಥವಾ ಕೇಡನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಥವಾ ಹಾಳುಮಾಡುವುದೋ?” ಎಂದು ಕೇಳಿ,

10ಸುತ್ತಲೂ ಇದ್ದವರೆಲ್ಲರನ್ನೂ ನೋಡಿ ಆ ಮನುಷ್ಯನಿಗೆ, “ನಿನ್ನ ಕೈಚಾಚು” ಎಂದು ಹೇಳಿದನು. ಅವನು ಹಾಗೆಯೇ ಮಾಡಿದನು, ಕೈ ವಾಸಿಯಾಯಿತು.

11ಆದರೆ ಅವರು ಕ್ರೋಧಭರಿತರಾಗಿದ್ದರಿಂದ, ಈ ಯೇಸುವಿಗೆ ಏನು ಮಾಡೋಣ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು