Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಯೇಸುವಿನ ಶ್ರಮೆಗಳು

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಯೇಸುವಿನ ಶ್ರಮೆಗಳು

ಬೇಥಾನ್ಯದಲ್ಲಿ ಯೇಸುವಿಗೆ ಅಭಿಷೇಕ

ಮತ್ತಾ 26:6–13 · ಮಾರ್ಕ 14:3–9 · ಯೋಹಾ 12:1–8

ಮತ್ತಾಯನು

ಮತ್ತಾ 26:6–13

6ಯೇಸು ಬೇಥಾನ್ಯದಲ್ಲಿ ಸೀಮೋನನೆಂಬ ಕುಷ್ಠರೋಗಿಯ ಮನೆಯಲ್ಲಿ ಊಟಕ್ಕೆ ಕುಳಿತಿರುವಾಗ ಒಬ್ಬ ಸ್ತ್ರೀಯು

7ಬಹು ಬೆಲೆಯುಳ್ಳ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಆತನ ಬಳಿಗೆ ಬಂದು ಆ ತೈಲವನ್ನು ಆತನ ತಲೆಯ ಮೇಲೆ ಸುರಿದಳು.

8ಶಿಷ್ಯರು ಇದನ್ನು ಕಂಡು ಕೋಪಗೊಂಡು, “ಹೀಗೆ ವ್ಯರ್ಥವಾಗಿ ಖರ್ಚುಮಾಡುವುದೇಕೆ?

9ಈ ತೈಲವನ್ನು ಬಹಳ ಹಣಕ್ಕೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ” ಅಂದರು.

10ಯೇಸು ಅದನ್ನು ತಿಳಿದು ಅವರಿಗೆ, “ಈ ಸ್ತ್ರೀಗೆ ಏಕೆ ತೊಂದರೆ ಕೊಡುತ್ತಿದ್ದೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ.

11ಬಡವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರಲ್ಲಾ, ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ.

12ಈಕೆಯು ಈ ತೈಲವನ್ನು ನನ್ನ ದೇಹದ ಮೇಲೆ ಸುರಿದದ್ದು ನನ್ನ ಉತ್ತರಕ್ರಿಯೆಗಾಗಿಯೇ.

13ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವುದೋ ಅಲ್ಲೆಲ್ಲಾ ಈ ಸ್ತ್ರೀ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ” ಹೇಳುವರು.

ಮಾರ್ಕನು

ಮಾರ್ಕ 14:3–9

3ಆತನು ಬೇಥಾನ್ಯದಲ್ಲಿದ್ದ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಸ್ವಚ್ಛ ಜಟಮಾಂಸಿ ತೈಲದ ಭರಣಿಯನ್ನು ತೆಗೆದುಕೊಂಡು ಬಂದು ಅದನ್ನು ಒಡೆದು ತೈಲವನ್ನು ಯೇಸುವಿನ ತಲೆಯ ಮೇಲೆ ಸುರಿದಳು.

4ಆದರೆ ಕೆಲವರು ತಮ್ಮೊಳಗೆ ಕೋಪಗೊಂಡು, “ಈ ತೈಲವನ್ನು ಹೀಗೆ ವ್ಯರ್ಥಮಾಡಿದ್ದೇಕೆ?

5ಇದನ್ನು ಮುನ್ನೂರು ಬೆಳ್ಳಿನಾಣ್ಯಗಳಿಗಿಂತ ಹೆಚ್ಚಿನ ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ?” ಎಂದು ಹೇಳಿ ಆಕೆಯನ್ನು ದೂಷಿಸಿದರು.

6ಆದರೆ ಯೇಸು, “ಆಕೆಯನ್ನು ಬಿಟ್ಟುಬಿಡಿರಿ, ಆಕೆಗೆ ಏಕೆ ತೊಂದರೆ ಕೊಡುತ್ತೀರಿ? ಈಕೆಯು ನನಗೆ ಒಳ್ಳೆಯ ಕಾರ್ಯವನ್ನೇ ಮಾಡಿದ್ದಾಳೆ.

7ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ನಿಮಗೆ ಮನಸ್ಸು ಬಂದಾಗ ನೀವು ಅವರಿಗೆ ಯಾವಾಗಲಾದರೂ ಉಪಕಾರ ಮಾಡಬಹುದು. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲ.

8ಈಕೆಯು ತನ್ನಿಂದಾದಷ್ಟು ಮಾಡಿದ್ದಾಳೆ. ಈಕೆಯು ನನ್ನ ದೇಹವನ್ನು ಶವಸಂಸ್ಕಾರಕ್ಕೆ ಮುಂಚಿತವಾಗಿಯೇ ಈ ತೈಲದಿಂದ ಅಭಿಷೇಕಿಸಿ ಸಿದ್ಧಪಡಿಸಿದ್ದಾಳೆ.

9ಸುವಾರ್ತೆಯು ಲೋಕದಲ್ಲಿ ಎಲ್ಲೆಲ್ಲಿ ಸಾರಲ್ಪಡುವುದೋ ಅಲ್ಲೆಲ್ಲಾ ಈಕೆಯು ಮಾಡಿದ್ದನ್ನು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳಲಾಗುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” ಎಂದನು.

ಯೋಹಾನನು

ಯೋಹಾ 12:1–8

1ಪಸ್ಕ ಹಬ್ಬಕ್ಕೆ ಇನ್ನು ಆರು ದಿನಗಳು ಇರಲಾಗಿ ಯೇಸುವು, ಸತ್ತವರೊಳಗಿಂದ ಎಬ್ಬಿಸಿದ ಲಾಜರನು ವಾಸವಾಗಿದ್ದ ಬೇಥಾನ್ಯಕ್ಕೆ ಬಂದನು.

2ಯೇಸುವಿಗೆ ಅಲ್ಲಿ ಔತಣವನ್ನು ಏರ್ಪಡಿಸಿದ್ದರು. ಮಾರ್ಥಳು ಉಪಚಾರ ಮಾಡುತ್ತಿದ್ದಳು. ಲಾಜರನು ಆತನ ಜೊತೆಯಲ್ಲಿ ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನಾಗಿದ್ದನು.

3ಆಗ ಮರಿಯಳು ಬಹು ಬೆಲೆಯುಳ್ಳ ಸ್ವಚ್ಛ ಜಟಮಾಂಸಿ ತೈಲವನ್ನು ಒಂದು ಸೇರಷ್ಟು ತಂದು ಯೇಸುವಿನ ಪಾದಕ್ಕೆ ಹಚ್ಚಿ ತನ್ನ ತಲೆ ಕೂದಲಿನಿಂದ ಆತನ ಪಾದಗಳನ್ನು ಒರಸಿದಳು. ಆ ತೈಲದ ಪರಿಮಳವು ಮನೆಯಲ್ಲೆಲ್ಲಾ ತುಂಬಿಕೊಂಡಿತ್ತು.

4ಆಗ ಆತನ ಶಿಷ್ಯರಲ್ಲಿ ಒಬ್ಬನು ಅಂದರೆ, ಆತನನ್ನು ಹಿಡಿದುಕೊಡುವುದಕ್ಕಿದ್ದ ಇಸ್ಕರಿಯೋತ ಯೂದನೆಂಬುವನು,

5“ಈ ತೈಲವನ್ನು ಮುನ್ನೂರು ಬೆಳ್ಳಿನಾಣ್ಯಕ್ಕೆ ಮಾರಿ ಬಡವರಿಗೆ ಕೊಡಬಹುದಿತ್ತಲ್ಲಾ?” ಎಂದನು.

6ಅವನು ಬಡವರ ಮೇಲಿನ ಕನಿಕರದಿಂದ ಹೀಗೆ ಹೇಳಲಿಲ್ಲ. ಆದರೆ ಅವನು ಕಳ್ಳನಾಗಿದ್ದು ಹಣದ ಚೀಲವನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡಿರಲಾಗಿ ಅದರಲ್ಲಿ ಹಾಕಿದ್ದನ್ನು ತನ್ನ ಸ್ವಂತ ಉಪಯೋಗಕ್ಕಾಗಿ ತೆಗೆದುಕೊಳ್ಳುತ್ತಿದ್ದನು, ಆದುದರಿಂದಲೇ ಹೀಗೆ ಹೇಳಿದನು.

7ಆಗ ಯೇಸುವು, “ಈಕೆಯನ್ನು ಬಿಟ್ಟುಬಿಡಿರಿ, ನನ್ನನ್ನು ಸಮಾಧಿ ಮಾಡುವ ದಿನಕ್ಕಾಗಿ ಈಕೆಯು ಇದನ್ನು ಇಟ್ಟುಕೊಂಡಿದ್ದಳು ಎಂದಿರಲಿ.

8ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲವಲ್ಲಾ” ಎಂದನು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು