ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಅಕ್ಟೋಬರ್ 2027 › 31 ಅಕ್ಟೋಬರ್
ಆರ್ಥೊಡಾಕ್ಸ್ ಪಂಚಾಂಗ · ಅಕ್ಟೋಬರ್ 18 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 31 ಅಕ್ಟೋಬರ್ 2027
ಭಾನುವಾರ · ಸ್ವರ 2
ಹಬ್ಬಗಳು ಮತ್ತು ಸಂತರು
ಪಂಚಾಶತ್ತಮದ ನಂತರದ 19ನೇ ಭಾನುವಾರ
ಉಪವಾಸ
ಉಪವಾಸವಿಲ್ಲ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಸಂಧ್ಯಾ ಪ್ರಾರ್ಥನೆ: ವಾಚನ
1ನಾವು ನಿಮಗೆ ಪ್ರಚುರಪಡಿಸುವ ಜೀವವಾಕ್ಯವು ಆದಿಯಿಂದ ಇದ್ದದ್ದು. ನಾವು ಅದನ್ನು ಕಿವಿಯಾರೆ ಕೇಳಿ, ಕಣ್ಣಾರೆ ಕಂಡು, ಮನಸ್ಸಿಟ್ಟು ಗ್ರಹಿಸಿ ಕೈಯಿಂದ ಮುಟ್ಟಿದ್ದೂ ಆಗಿರುವಂತದ್ದು. 2ಆ ಜೀವವು ಪ್ರತ್ಯಕ್ಷವಾಯಿತು. ತಂದೆಯ ಬಳಿಯಲ್ಲಿದ್ದು ನಮಗೆ ಪ್ರತ್ಯಕ್ಷವಾದಂಥ ಆ ನಿತ್ಯಜೀವವನ್ನು ನಾವು ಕಂಡು ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ತಿಳಿಯಪಡಿಸುತ್ತಿದ್ದೇವೆ. 3ನಮಗಿರುವ ಅನ್ಯೋನ್ಯತೆಯಲ್ಲಿ ನೀವೂ ಸೇರಬೇಕೆಂದು ನಾವು ಕಂಡು ಕೇಳಿದ್ದನ್ನು ನಿಮಗೆ ಪ್ರಚುರಪಡಿಸುತ್ತೇವೆ. ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡಲೂ ಆತನ ಮಗನಾದ ಯೇಸು ಕ್ರಿಸ್ತನ ಸಂಗಡಲೂ ಇರುವಂಥದ್ದಾಗಿದೆ. 4ನಿಮ್ಮ ಸಂತೋಷವು ಪರಿಪೂರ್ಣವಾಗಬೇಕೆಂದು ನಾವು ಇವುಗಳನ್ನು ನಿಮಗೆ ಬರೆಯುತ್ತಿದ್ದೇವೆ. 5ನಾವು ಆತನಿಂದ ಕೇಳಿ ನಿಮಗೆ ತಿಳಿಸುತ್ತಿರುವ ಸಂದೇಶ ಯಾವುದೆಂದರೆ; ದೇವರು ಬೆಳಕಾಗಿದ್ದಾನೆ; ಮತ್ತು ಆತನಲ್ಲಿ ಸ್ವಲ್ಪವೂ ಕತ್ತಲೆಯಿಲ್ಲ ಎಂಬುದೇ. 6ನಾವು ದೇವರೊಂದಿಗೆ ಅನ್ಯೋನ್ಯತೆಯುಳ್ಳವರಾಗಿದ್ದೇವೆಂದು ಹೇಳಿಕೊಳ್ಳುತ್ತಾ ಕತ್ತಲೆಯಲ್ಲಿ ನಡೆದರೆ ಸುಳ್ಳಾಡುವವರಾಗಿದ್ದೇವೆ, ಸತ್ಯವನ್ನನುಸರಿಸುತ್ತಿಲ್ಲ ಎಂದು ತಿಳಿದು ಬರುತ್ತದೆ. 7ಆದರೆ ಆತನು ಬೆಳಕಿನಲ್ಲಿರುವಂತೆಯೇ ನಾವೂ ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲ್ಲೊಬ್ಬರು ಅನ್ಯೋನ್ಯತೆಯಲ್ಲಿರುತ್ತೇವೆ. ಆತನ ಒಬ್ಬನೇ ಕುಮಾರನಾದ ಯೇಸುವಿನ ರಕ್ತವು ನಮ್ಮನ್ನು ಸಕಲ ಪಾಪದಿಂದ ಬಿಡಿಸಿ ಶುದ್ಧೀಕರಿಸುತ್ತದೆ.
ಸಂಧ್ಯಾ ಪ್ರಾರ್ಥನೆ: ವಾಚನ
1ದೇವರಿಗೂ ಕರ್ತನಾದ ಯೇಸು ಕ್ರಿಸ್ತನಿಗೂ ದಾಸನಾಗಿರುವ ಯಾಕೋಬನು ಅನ್ಯದೇಶಗಳಲ್ಲಿ ಚದುರಿರುವ ಇಸ್ರಾಯೇಲ್ಯರ ಹನ್ನೆರಡು ಗೋತ್ರದವರಿಗೂ ಬರೆಯುವುದೇನೆಂದರೆ, “ನಿಮಗೆ ಶುಭವಾಗಲಿ.” 2ನನ್ನ ಸಹೋದರರೇ, ನೀವು ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ. 3ಏಕೆಂದರೆ ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ನಿಮಗೆ ತಾಳ್ಮೆಯನ್ನುಂಟು ಮಾಡುತ್ತದೆಂದು ನೀವು ತಿಳಿಯಿರಿ. 4ಆ ತಾಳ್ಮೆಯು ಸಂಪೂರ್ಣವಾಗಿ ನಿಮ್ಮಲ್ಲಿ ಫಲಿಸಲಿ, ಆಗ ನೀವು ಸರ್ವಸುಗುಣಸಂಪನ್ನರೂ, ಪರಿಪೂರ್ಣರೂ, ಯಾವುದಕ್ಕೂ ಕಡಿಮೆಯಿಲ್ಲದವರೂ ಆಗುವಿರಿ. 5ನಿಮ್ಮಲ್ಲಿ ಯಾರಿಗಾದರು ಜ್ಞಾನದ ಕೊರತೆಯಿರುವುದಾದರೆ ಅವರು ದೇವರನ್ನು ಬೇಡಿಕೊಳ್ಳಲಿ, ಅದು ಅವರಿಗೆ ದೊರಕುವುದು. ಯಾಕೆಂದರೆ ದೇವರು ಹಂಗಿಸದೆ ಎಲ್ಲರಿಗೂ ಉದಾರವಾಗಿ ಕೊಡುವಾತನಾಗಿದ್ದಾನೆ. 6ಆದರೆ ದೇವರ ಬಳಿ ಬೇಡುವವನು ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಂದ ಬೇಡಿಕೊಳ್ಳಲಿ. ಸಂದೇಹಪಡುವವನು ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ಅಲೆಯಂತೆ ಅತ್ತಿತ್ತ ಅಲೆಯುತ್ತಿರುತ್ತಾನೆ. 7ಇಂಥವನು ತಾನು ಕರ್ತನಿಂದ ಬೇಡಿಕೊಂಡಿದ್ದೆಲ್ಲವನ್ನು ಹೊಂದುವೆನೆಂದು ಭಾವಿಸದೆ ಇರಲಿ. 8ಏಕೆಂದರೆ ಅವನು ಎರಡು ಮನಸ್ಸುಳ್ಳವನು, ತನ್ನ ನಡತೆಯಲ್ಲಿ ಚಂಚಲನಾಗಿದ್ದಾನೆ. 9ದೀನಸ್ಥಿತಿಯಲ್ಲಿರುವ ಸಹೋದರನು ತಾನು ಉನ್ನತ ಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ. 10ಐಶ್ವರ್ಯವಂತನಾದ ಸಹೋದರನು ತಾನು ದೀನಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ; ಏಕೆಂದರೆ ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸಿ ಹೋಗುವನು. 11ಸೂರ್ಯನು ಉದಯಿಸಿದ ಮೇಲೆ ಸುಡುವ ಬಿಸಿಲಿಗೆ ಹುಲ್ಲು ಬಾಡಿ, ಹೂವು ಉದುರಿ ಅದರ ರೂಪದ ಸೊಗಸು ನಾಶವಾಗುತ್ತದೆ; ಹಾಗೆಯೇ ಐಶ್ವರ್ಯವಂತನು ತನ್ನ ಪ್ರಯತ್ನಗಳಲ್ಲಿ ಕುಂದಿಹೋಗುವನು. 12ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತನು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದಂತೆ ಜೀವದ ಕಿರೀಟವನ್ನು ಹೊಂದುವನು.
ಸಂಧ್ಯಾ ಪ್ರಾರ್ಥನೆ: ವಾಚನ
1ಯೇಸು ಕ್ರಿಸ್ತನ ಸೇವಕನೂ, ಯಾಕೋಬನ ತಮ್ಮನೂ ಆಗಿರುವ ಯೂದನು ಕರೆಯಲ್ಪಟ್ಟವರಿಗೆ, ತಂದೆಯಾದ ದೇವರಲ್ಲಿ ಪ್ರಿಯರಾದವರಿಗೆ, ಯೇಸು ಕ್ರಿಸ್ತನಿಗಾಗಿ ಕಾಪಾಡಲ್ಪಟ್ಟವರಿಗೆ ಬರೆಯುವುದೇನೆಂದರೆ, 2ನಿಮಗೆ ಕರುಣೆಯೂ, ಶಾಂತಿಯೂ, ಪ್ರೀತಿಯೂ ಹೆಚ್ಚಾಗಿ ದೊರೆಯಲಿ. 3ಪ್ರಿಯರೇ, ನಮಗೆ ಹುದುವಾಗಿರುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವುದಕ್ಕೆ ಪೂರ್ಣಾಸಕ್ತಿಯಿಂದ ಪ್ರಯತ್ನ ಮಾಡುತ್ತಿದ್ದಾಗ, ದೇವಜನರಿಗೆ ಶಾಶ್ವತವಾಗಿರುವಂತೆ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ, ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು. 4ಏಕೆಂದರೆ ಭಕ್ತಿಹೀನರೂ, ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ಕಾಮಾಭಿಲಾಷೆಯ ಕೃತ್ಯಗಳನ್ನು ನಡಿಸುವವರೂ, ನಮ್ಮ ಒಬ್ಬನೇ ಒಡೆಯನೂ ಕರ್ತನೂ ಆಗಿರುವ ಯೇಸು ಕ್ರಿಸ್ತನನ್ನು ಅಲ್ಲಗಳೆಯುವ ಕೆಲವು ಜನರು ರಹಸ್ಯವಾಗಿ ಸಭೆಯ ಒಳಗೆ ಹೊಕ್ಕಿದ್ದಾರೆ. ಇವರು ದಂಡನೆಗಾಗಿ ಪೂರ್ವದಲ್ಲಿಯೇ ನೇಮಕವಾಗಿದ್ದಾರೆ ಎಂದು ಬರೆದದೆ. 5ನೀವು ಸಮಸ್ತವನ್ನು ಮೊದಲೇ ತಿಳಿದವರಾಗಿದ್ದರೂ, ನಾನು ಮುಂದಣ ಕೆಲವು ಸಂಗತಿಗಳನ್ನು ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅವು ಯಾವುದೆಂದರೆ, ಕರ್ತನು ತನ್ನ ಪ್ರಜೆಗಳನ್ನು ಐಗುಪ್ತ ದೇಶದೊಳಗಿಂದ ರಕ್ಷಿಸಿದರೂ, ತರುವಾಯ ಅವರೊಳಗೆ ನಂಬದೇ ಹೋದವರನ್ನು ನಾಶಮಾಡಿದನು. 6ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡಿಕೊಳ್ಳದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ ದೇವದೂತರಿಗೆ ದೇವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದಲ್ಲಿ ಆಗುವ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿರಿಸಿದ್ದಾನೆ. 7ಸೊದೋಮ್ ಗೊಮೋರ ಪಟ್ಟಣಗಳವರೂ, ಅವುಗಳ ಸುತ್ತಮುತ್ತಲಿನ ಪಟ್ಟಣಗಳವರೂ ಆ ದೂತರಂತೆ ನಡೆದುಕೊಂಡು ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು, ಅಸ್ವಾಭಾವಿಕವಾದ ಕಾರ್ಯಗಳನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ, ದುರ್ಮಾರ್ಗಿಗಳಿಗೆ ಆಗುವ ದುರ್ಗತಿಗೆ ಉದಾಹರಣೆಯಾಗಿ ಇಡಲ್ಪಟ್ಟಿದ್ದಾರೆ. 17ಪ್ರಿಯರೇ, ನೀವಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪೊಸ್ತಲರು ಮೊದಲು ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ. 18“ಭಕ್ತಿಗೆ ವಿರುದ್ಧವಾದ ತಮ್ಮ ಆಸೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರೆಂದು” ಅವರು ನಿಮಗೆ ಹೇಳಿದರು. 19ಇವರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವವರೂ, ಪ್ರಾಕೃತ ಮನುಷ್ಯರೂ, ದೇವರಾತ್ಮ ಇಲ್ಲದವರೂ ಆಗಿದ್ದಾರೆ. 20ಪ್ರಿಯರೇ, ನೀವಾದರೋ ನಿಮಗಿರುವ ಅತಿ ಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿಹೊಂದುತ್ತಾ, ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆ ಮಾಡಿರಿ. 21ನಿತ್ಯ ಜೀವಕ್ಕಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ, ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ. 22ಸಂಶಯಪಡುವವರಿಗೆ ಕರುಣೆಯನ್ನು ತೋರಿಸಿರಿ, 23ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ, ಕೆಲವರನ್ನು ಭಯಪಡುತ್ತಾ ಕರುಣಿಸಿರಿ. ಶಾರೀರಿಕ ನಡತೆಯಿಂದ ಹೊಲಸಾದ ಅವರ ಉಡುಪನ್ನೂ ಸಹ ಹಗೆಮಾಡಿರಿ. 24ಮುಗ್ಗರಿಸದಂತೆ ನಿಮ್ಮನ್ನು ಕಾಪಾಡಿಕೊಳ್ಳುತ್ತಾ, ತನ್ನ ಮಹಿಮೆಯ ಸಮಕ್ಷಮದಲ್ಲಿ ನಿಮ್ಮನ್ನು ನಿರ್ದೋಷಿಗಳನ್ನಾಗಿ, ಅತ್ಯಂತ ಹರ್ಷದೊಡನೆ ನಿಲ್ಲಿಸುವುದಕ್ಕೂ ಶಕ್ತನಾಗಿರುವ, 25ನಮ್ಮ ರಕ್ಷಕನಾದ ಒಬ್ಬನೇ ದೇವರಿಗೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಮಹಿಮೆ, ಮಹತ್ವ, ಅಧಿಪತ್ಯ ಮತ್ತು ಅಧಿಕಾರಗಳು ಎಲ್ಲಾ ಕಾಲಗಳಲ್ಲಿ ಮೊದಲು ಇದ್ದ ಹಾಗೆ ಈಗಲೂ ಯಾವಾಗಲೂ ಸಲ್ಲಲ್ಲಿ. ಆಮೆನ್.
ಉದಯಕಾಲದ ಎಂಟನೆಯ ಸುವಾರ್ತೆ
11ಆದರೆ ಮರಿಯಳು ಹೊರಗೆ ಸಮಾಧಿಯ ಬಳಿಯಲ್ಲಿ ಅಳುತ್ತಾ ನಿಂತಿದ್ದಳು. ಹೀಗೆ ಆಕೆ ಅಳುತ್ತಿರುವಾಗ ಸಮಾಧಿಯೊಳಗೆ ಬಗ್ಗಿ ನೋಡಲು, 12ಯೇಸುವಿನ ದೇಹವು ಇಟ್ಟಿದ್ದ ಸ್ಥಳದಲ್ಲಿ ಬಿಳಿವಸ್ತ್ರಗಳನ್ನು ಧರಿಸಿದ್ದ ಇಬ್ಬರು ದೇವದೂತರನ್ನು ಕಂಡಳು, ಅವರಲ್ಲಿ ಒಬ್ಬನು ಯೇಸುವಿನ ತಲೆಯ ಕಡೆಯಲ್ಲಿ ಮತ್ತೊಬ್ಬನು ಆತನು ಪಾದಗಳಿದ್ದ ಕಡೆಯಲ್ಲಿ ಕುಳಿತಿದ್ದರು. 13ಅವರು ಆಕೆಗೆ, “ಅಮ್ಮಾ, ನೀನು ಯಾಕೆ ಅಳುತ್ತಿರುವೆ?” ಎಂದು ಕೇಳಲು, ಆಕೆಯು, “ನನ್ನ ಕರ್ತನನ್ನು ಅವರು ತೆಗೆದುಕೊಂಡು ಹೋಗಿದ್ದಾರೆ. ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದಳು. 14ಆಕೆಯು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಯೇಸು ನಿಂತಿರುವುದನ್ನು ಕಂಡಳು, ಆದರೆ ಆತನು ಯೇಸುವೇ ಎಂದು ಆಕೆಗೆ ತಿಳಿಯಲಿಲ್ಲ. 15ಯೇಸು ಆಕೆಗೆ, “ಅಮ್ಮಾ, ನೀನು ಯಾಕೆ ಅಳುತ್ತೀ? ಯಾರನ್ನು ಹುಡುಕುತ್ತೀ?” ಎಂದು ಕೇಳಲು, ಆಕೆ ಆತನನ್ನು ತೋಟಗಾರನೆಂದು ನೆನಸಿ ಆತನಿಗೆ, “ಅಯ್ಯಾ, ನೀನು ಆತನನ್ನು ತೆಗೆದುಕೊಂಡು ಹೋಗಿದ್ದರೆ ಎಲ್ಲಿ ಇಟ್ಟಿದ್ದೀ ಎಂದು ನನಗೆ ಹೇಳು, ನಾನು ಆತನನ್ನು ತೆಗೆದುಕೊಂಡು ಹೋಗುತ್ತೇನೆ” ಎಂದು ಹೇಳಿದಳು. 16ಯೇಸು ಆಕೆಗೆ, “ಮರಿಯಳೇ,” ಎಂದು ಹೇಳಲು, ಆಕೆಯು ಅವನ ಕಡೆಗೆ ತಿರುಗಿ ಇಬ್ರಿಯ ಭಾಷೆಯಲ್ಲಿ ಆತನಿಗೆ, “ರಬ್ಬೂನಿ” ಎಂದಳು. ಹಾಗೆಂದರೆ ಗುರುವೇ ಎಂದರ್ಥ. 17ಯೇಸು ಆಕೆಗೆ, “ನನ್ನನ್ನು ಮುಟ್ಟಬೇಡ, ಏಕೆಂದರೆ ನಾನು ಇನ್ನೂ ತಂದೆಯ ಬಳಿಗೆ ಏರಿಹೋದವನಲ್ಲ. ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವರಿಗೆ, ನನ್ನ ತಂದೆಯೂ, ನಿಮ್ಮ ತಂದೆಯೂ, ನನ್ನ ದೇವರೂ, ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಏರಿಹೋಗುತ್ತೇನೆ ಎಂದು ತಿಳಿಸು” ಎಂದನು. 18ಮಗ್ದಲದ ಮರಿಯಳು ಹೋಗಿ “ನಾನು ಕರ್ತನನ್ನು ನೋಡಿದ್ದೇನೆ,” ಆತನು ಇಂಥಿಂಥದನ್ನು ನನಗೆ ಹೇಳಿದನು ಎಂದು ಶಿಷ್ಯರಿಗೆ ತಿಳಿಸಿದಳು.
ಪತ್ರಿಕೆ
31ನನ್ನ ಮಾತುಗಳು ಸುಳ್ಳಲ್ಲವೆಂಬುದನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ, ತಂದೆಯೂ ಆಗಿರುವಾತನು ನಿರಂತರ ಸ್ತುತಿ ಹೊಂದತಕ್ಕ ದೇವರೇ ಬಲ್ಲನು. 32ದಮಸ್ಕದಲ್ಲಿ ಅರಸನಾದ ಅರೇತನ ಅಧೀನದಲ್ಲಿದ್ದ ಅಧಿಪತಿಯು ನನ್ನನ್ನು ಹಿಡಿಯಬೇಕೆಂದು ದಮಸ್ಕದವರ ಪಟ್ಟಣವನ್ನು ಕಾಯುತ್ತಿರಲು 33ಅವರು ನನ್ನನ್ನು ಒಂದು ಬುಟ್ಟಿಯಲ್ಲಿ ಕುಳ್ಳಿರಿಸಿ ಗೋಡೆಯಲ್ಲಿದ್ದ ಒಂದು ಕಿಟಕಿಯಿಂದ ಇಳಿಸಿಬಿಟ್ಟರು. ಹೀಗೆ ಅವನ ಕೈಯಿಂದ ತಪ್ಪಿಸಿಕೊಂಡು ಓಡಿಹೋದೆನು. 12:1ಹೊಗಳಿಕೊಳ್ಳುವುದು ಹಿತಕರವಲ್ಲ. ಆದರೂ ಹೊಗಳಿಕೊಳ್ಳುವುದು ನನಗೆ ಅನಿವಾರ್ಯವಾಗಿದೆ. ಆದ್ದರಿಂದ ಕರ್ತನು ನನಗೆ ದಯಪಾಲಿಸಿದ ದರ್ಶನಗಳನ್ನೂ ಮತ್ತು ತಿಳಿಯಪಡಿಸಿದ ರಹಸ್ಯಗಳನ್ನೂ ಕುರಿತು ಹೇಳುತ್ತೇನೆ. 2ಕ್ರಿಸ್ತನಲ್ಲಿದ್ದ ಒಬ್ಬ ಮನುಷ್ಯನನ್ನು ಬಲ್ಲೆನು. ಅವನು ಹದಿನಾಲ್ಕು ವರ್ಷಗಳ ಹಿಂದೆ ಮೂರನೆಯ ಸ್ವರ್ಗಕ್ಕೆ ಒಯ್ಯಲ್ಪಟ್ಟನು. ಅವನು ದೇಹಸಹಿತನಾಗಿ ಒಯ್ಯಲ್ಪಟ್ಟನೋ, ಅಥವಾ ದೇಹರಹಿತನಾಗಿ ಒಯ್ಯಲ್ಪಟ್ಟನೋ ನಾನರಿಯೆನು, ದೇವರೇ ಬಲ್ಲನು. 3ಅವನು ಪರದೈಸಿ ತನಕ ಒಯ್ಯಲ್ಪಟ್ಟು ಮನುಷ್ಯರಿಂದ ಉಚ್ಚರಿಸಲೂ, ಆಡಲೂ ಬಾರದಂತಹ ಮಾತುಗಳನ್ನು ಕೇಳಿದನೆಂದೂ ಬಲ್ಲೆನು. ಆ ಸಮಯದಲ್ಲಿ ಆತನು ದೇಹಸಹಿತನಾಗಿದ್ದನೋ ಅಥವಾ ದೇಹರಹಿತನಾಗಿದ್ದನೋ ನಾನರಿಯೆನು, ದೇವರೇ ಬಲ್ಲನು. 5ಅವನನ್ನು ಕುರಿತಾಗಿ ನಾನು ಹೆಮ್ಮೆ ಪಡುವೆನು. ಆದರೆ ನನ್ನನ್ನು ಕುರಿತಂತೆ ನನ್ನ ಬಲಹೀನತೆಯನ್ನು ಕುರಿತಲ್ಲದೆ ಬೇರೆ ಹೊಗಳಿಕೆ ನನಗೆ ಇಲ್ಲ. 6ಹೊಗಳಿಕೊಳ್ಳುವುದಕ್ಕೆ ನನಗೆ ಒಂದು ವೇಳೆ ಮನಸ್ಸಿದ್ದರೂ ಹಾಗೆ ಹೊಗಳಿಕೊಳ್ಳುವುದರಲ್ಲಿ ನಾನು ಬುದ್ಧಿಹೀನನಾಗುವುದಿಲ್ಲ, ಯಾಕೆಂದರೆ ನಾನು ಸತ್ಯವನ್ನೇ ಹೇಳುತ್ತಿರುವೆನು. ಆದರೂ ಯಾರೂ ನನ್ನಲ್ಲಿ ಕಾಣುವುದಕ್ಕಿಂತಲೂ ಅಥವಾ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಪರಿಗಣಿಸಬಾರದು. 7ಈ ಕಾರಣದಿಂದಲೂ ಮತ್ತು ನನಗೆ ತಿಳಿಸಲ್ಪಟ್ಟ ರಹಸ್ಯಗಳು ಬಹು ವಿಶೇಷವಾಗಿರುವುದರಿಂದಲೂ ನಾನು ಹೊಗಳಿಕೊಳ್ಳದೇ ಸುಮ್ಮನಿರುತ್ತೇನೆ. ನಾನು ನನ್ನನ್ನು ಅತಿಶಯವಾಗಿ ಹೆಚ್ಚಿಸಿಕೊಳ್ಳಬಾರದೆಂದು ಒಂದು ಶೂಲವು ನನ್ನನ್ನು ತಿವಿಯುವುದಕ್ಕಾಗಿ ನನ್ನ ದೇಹದೊಳಗೆ ಇರಿಸಲಾಗಿದೆ. ನಾನು ಅಹಂಕಾರಪಡದ ಹಾಗೆ ಇದು ನನ್ನನ್ನು ತಿವಿತಿವಿದು ಸೈತಾನನ ದೂತನಂತೆ ಕಾಡಿಸುತ್ತಿತ್ತು. 8ಈ ನೋವು ನನ್ನನ್ನು ಬಿಟ್ಟುಹೋಗುವಂತೆ ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು ಆದರೆ 9ಅದಕ್ಕಾತನು, “ನನ್ನ ಕೃಪೆಯೇ ನಿನಗೆ ಸಾಕು, ಬಲಹೀನತೆಯಲ್ಲಿಯೇ ನನ್ನ ಬಲವು ಪೂರ್ಣಸಾಧಕವಾಗುತ್ತದೆ” ಎಂದು ನನಗೆ ಹೇಳಿದನು. ಹೀಗಿರಲಾಗಿ, ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿರಬೇಕೆಂದು ನನಗುಂಟಾಗುವ ಬಲಹೀನತೆಯಲ್ಲಿಯೂ ಬಹು ಸಂತೋಷವಾಗಿ ಹೆಚ್ಚಳಪಡುವೆನು.
ಪತ್ರಿಕೆ (ಸಂತ ಲೂಕ)
5ಸಮಯವನ್ನು ಸದುಪಯೋಗಿಸಿಕೊಂಡು ಹೊರಗಿನವರೊಂದಿಗೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ. 6ನಿಮ್ಮ ಸಂಭಾಷಣೆಯು ಯಾವಾಗಲೂ ಕೃಪೆಯುಳ್ಳದ್ದಾಗಿಯೂ, ಉಪ್ಪಿನಂತೆ ರುಚಿಕರವಾಗಿಯೂ ಇರಲಿ. ಹೀಗೆ ನೀವು ಪ್ರತಿಯೊಬ್ಬರಿಗೂ ಯಾವಾವ ರೀತಿಯಲ್ಲಿ ಉತ್ತರಹೇಳಬೇಕು ಎಂಬುದನ್ನು ತಿಳಿದುಕೊಳ್ಳುವಿರಿ. 7ಪ್ರಿಯ ಸಹೋದರನೂ, ನಂಬಿಗಸ್ತನಾದ ಸೇವಕನೂ ಮತ್ತು ಕರ್ತನಲ್ಲಿ ಜೊತೆಯ ದಾಸನೂ ಆಗಿರುವ ತುಖಿಕನು ನನ್ನ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವನು. 8ನೀವು ನಮ್ಮ ಕುರಿತು ತಿಳಿದುಕೊಳ್ಳುವಂತೆ, ಅವನು ನಿಮ್ಮ ಹೃದಯಗಳನ್ನು ಉರಿದುಂಬಿಸುವಂತೆ, 9ಅವನನ್ನು ನಂಬಿಗಸ್ತನು ಮತ್ತು ಪ್ರಿಯ ಸಹೋದರನಾಗಿರುವ ನಿಮ್ಮ ಊರಿನವನೇ ಆದ ಓನೇಸಿಮನ ಜೊತೆಯಲ್ಲಿ ಕಳುಹಿಸಿದ್ದೇನೆ. ಅವರು ಇಲ್ಲಿ ನಡೆಯುತ್ತಿರುವ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವರು. 14ಪ್ರಿಯ ವೈದ್ಯನಾಗಿರುವ ಲೂಕನು ಮತ್ತು ದೇಮನು ನಿಮಗೆ ವಂದನೆ ಹೇಳುತ್ತಾರೆ. 18ಇದು ಪೌಲನೆಂಬ ನಾನು ಸ್ವಂತ ಕೈಯಿಂದಲೇ ಬರೆದ ವಂದನೆ. ನಾನು ಸೆರೆಯಲ್ಲಿದ್ದೇನೆಂಬುದನ್ನು ಜ್ಞಾಪಕ ಮಾಡಿಕೊಳ್ಳಿರಿ. ಕೃಪೆಯು ನಿಮ್ಮೊಂದಿಗಿರಲಿ.
ಸುವಾರ್ತೆ
5“ಬಿತ್ತುವವನು ಬೀಜವನ್ನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದು ತುಳಿಯಲ್ಪಟ್ಟವು, ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಅವುಗಳನ್ನು ತಿಂದುಬಿಟ್ಟವು. 6ಬೇರೆ ಕೆಲವು ಬೀಜಗಳು ಬಂಡೆಯ ಮೇಲೆ ಬಿದ್ದವು. ಅವು ಮೊಳೆತು ಬಂದರೂ ತೇವವಿಲ್ಲದ ಕಾರಣ ಒಣಗಿಹೋದವು. 7ಮತ್ತೆ ಕೆಲವು ಬೀಜಗಳು ಮುಳ್ಳುಪೊದೆಗಳೊಳಗೆ ಬಿದ್ದವು. ಮುಳ್ಳುಗಳು ಅವುಗಳೊಂದಿಗೆ ಬೆಳೆದು ಅವುಗಳನ್ನು ಅದುಮಿಬಿಟ್ಟವು. 8ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು, ಮೊಳೆತು, ನೂರರಷ್ಟು ಫಲವನ್ನು ಕೊಟ್ಟವು.” ಈ ಮಾತುಗಳನ್ನು ಹೇಳಿ ಆತನು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಎಂದು ಕೂಗಿ ಹೇಳಿದನು. 9ಯೇಸುವಿನ ಶಿಷ್ಯರು ಈ ಸಾಮ್ಯದ ಅರ್ಥವೇನೆಂದು ಆತನನ್ನು ಕೇಳಿದಾಗ, 10ಆತನು, “ದೇವರ ರಾಜ್ಯದ ಗುಟ್ಟುಗಳನ್ನು ತಿಳಿಯುವ ವರವು ನಿಮಗೆ ಕೊಡಲಾಗಿದೆ, ಉಳಿದವರಿಗೆ ‘ಕಣ್ಣಿದ್ದರೂ ನೋಡದಂತೆಯೂ, ಕೇಳಿಸಿಕೊಂಡರೂ ಗ್ರಹಿಸದಂತೆಯೂ’ ಸಾಮ್ಯರೂಪವಾಗಿ ಹೇಳಲಾಗುತ್ತದೆ. 11ಈ ಸಾಮ್ಯದ ಅರ್ಥವೇನಂದರೆ, ಆ ಬೀಜವೆಂದರೆ ದೇವರ ವಾಕ್ಯ. 12ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸೈತಾನನು ಬಂದು ಅವರು ನಂಬಿ ರಕ್ಷಣೆ ಹೊಂದಬಾರದೆಂದು ವಾಕ್ಯವನ್ನು ಅವರ ಹೃದಯದಿಂದ ತೆಗೆದುಬಿಡುತ್ತಾನೆ. ಇವರೇ ದಾರಿಯ ಮಗ್ಗುಲಲ್ಲಿ ಬಿದ್ದಿರುವ ಬೀಜಗಳು. 13ಕೆಲವರು ವಾಕ್ಯವನ್ನು ಕೇಳಿದಾಗಲೇ ಅದನ್ನು ಸಂತೋಷದಿಂದ ಅಂಗೀಕರಿಸುತ್ತಾರೆ; ಇವರಿಗೆ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರವೇ ನಂಬಿಕೊಂಡಿದ್ದು ಶೋಧನೆಯ ಕಾಲದಲ್ಲಿ ಬಿದ್ದು ಹೋಗುತ್ತಾರೆ. ಇವರೇ ಬಂಡೆಯ ಮೇಲೆ ಬೀಳಲ್ಪಟ್ಟ ಬೀಜಗಳು. 14ಇನ್ನು ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವನದಲ್ಲಿ ಆಗುವ ಚಿಂತೆ, ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಕೊಡಲಾರದವರು, ಮುಳ್ಳುಗಿಡಗಳಲ್ಲಿ ಬಿದ್ದ ಬೀಜವಾಗಿರುವವರು. 15ಮತ್ತೆ ಕೆಲವರು ವಾಕ್ಯವನ್ನು ಕೇಳಿ ಸುಗುಣವುಳ್ಳ ತಮ್ಮ ಒಳ್ಳೆಯ ಹೃದಯದಲ್ಲಿ ಅದನ್ನು ಸಂಗ್ರಹಿಸಿ ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ. ಇವರೇ ಒಳ್ಳೆಯ ನೆಲದಲ್ಲಿ ಬಿದ್ದ ಬೀಜಗಳು.
ಸುವಾರ್ತೆ (ಸಂತ ಲೂಕ)
16ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುವವನಾಗಿದ್ದಾನೆ, ನಿಮ್ಮನ್ನು ತಿರಸ್ಕರಿಸುವವನು ನನ್ನನ್ನು ತಿರಸ್ಕರಿಸುವವನಾಗಿದ್ದಾನೆ, ನನ್ನನ್ನು ತಿರಸ್ಕಾರ ಮಾಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ತಿರಸ್ಕಾರ ಮಾಡುವವನಾಗಿದ್ದಾನೆ” ಅಂದನು. 17ತರುವಾಯ ಆ ಎಪ್ಪತ್ತು ಮಂದಿಯು ಸಂತೋಷವುಳ್ಳವರಾಗಿ ಹಿಂತಿರುಗಿ ಬಂದು, “ಕರ್ತನೇ, ದೆವ್ವಗಳು ಕೂಡಾ ನಿನ್ನ ಹೆಸರಿನಲ್ಲಿ ನಮಗೆ ಅಧೀನವಾಗುತ್ತವೆ” ಅಂದರು. 18ಯೇಸು ಅವರಿಗೆ, “ಸೈತಾನನು ಮಿಂಚಿನಂತೆ ಆಕಾಶದಿಂದ ಬೀಳುವುದನ್ನು ಕಂಡೆನು. 19ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಕೇಡು ಮಾಡುವುದೇ ಇಲ್ಲ. 20ಆದರೂ ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿವೆ ಎಂದು ಸಂತೋಷಪಡಿರಿ” ಎಂದು ಹೇಳಿದನು. 21ಅದೇ ಗಳಿಗೆಯಲ್ಲಿ ಆತನು ಪವಿತ್ರಾತ್ಮನನಿಂದ ಉಲ್ಲಾಸಗೊಂಡು ಹೇಳಿದ್ದೇನಂದರೆ, “ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಮತ್ತು ವಿವೇಕಿಗಳಿಗೂ ಈ ವಿಷಯಗಳನ್ನು ಮರೆಮಾಡಿ, ಮಕ್ಕಳಿಗೆ ಪ್ರಕಟಮಾಡಿರುವುದರಿಂದ ನಿನ್ನನ್ನು ಕೊಂಡಾಡುತ್ತೇನೆ. ಹೌದು, ತಂದೆಯೇ, ಹೀಗೆ ಮಾಡುವುದೇ ಒಳ್ಳೆಯದೆಂದು ನಿನ್ನ ದೃಷ್ಟಿಗೆ ತೋರಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 18 ಅಕ್ಟೋಬರ್ ಎಂದರೆ ನಾಗರಿಕ ಪಂಚಾಂಗದ 31 ಅಕ್ಟೋಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು