ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಅಕ್ಟೋಬರ್ 2027 › 31 ಅಕ್ಟೋಬರ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 31 ಅಕ್ಟೋಬರ್ 2027
ಭಾನುವಾರ · ಸಾಮಾನ್ಯ ಕಾಲದ 31ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 31ನೇ ಭಾನುವಾರ
ಭಾನುವಾರ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
2ನೀವೂ, ನಿಮ್ಮ ಮಕ್ಕಳು, ಅವರ ಮಕ್ಕಳು ಮತ್ತು ಅವರ ಸಂತತಿಯವರು ಜೀವಮಾನದಲ್ಲೆಲ್ಲಾ ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದುಕೊಂಡು, ನಾನು ಈಗ ಬೋಧಿಸುವ ಆತನ ವಿಧಿನಿಯಮಗಳನ್ನೆಲ್ಲಾ ಅನುಸರಿಸಬೇಕೆಂದೂ ಮತ್ತು ನೀವು ಬಹುಕಾಲ ಬಾಳಬೇಕೆಂದೂ ಇವುಗಳನ್ನು ಆಜ್ಞಾಪಿಸಿದ್ದಾನೆ. 3ಆದುದರಿಂದ ಇಸ್ರಾಯೇಲರೇ, ನಿಮ್ಮ ಪೂರ್ವಿಕರ ದೇವರಾದ ಯೆಹೋವನು ವಾಗ್ದಾನಮಾಡಿದ ಪ್ರಕಾರ ಹಾಲೂ ಮತ್ತು ಜೇನೂ ಹರಿಯುವ ಆ ದೇಶದಲ್ಲಿ ನಿಮಗೆ ಶುಭವುಂಟಾಗುವುದಕ್ಕೂ, ನೀವು ಬಹಳವಾಗಿ ಹೆಚ್ಚುವುದಕ್ಕೂ ಈ ಆಜ್ಞೆಗಳನ್ನು ಲಕ್ಷ್ಯವಿಟ್ಟು ಕೇಳಿ ಅನುಸರಿಸಲೇಬೇಕು. 4ಇಸ್ರಾಯೇಲರೇ, ಕೇಳಿರಿ, ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು; 5ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ಮತ್ತು ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು. 6ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು.
ಪ್ರತಿವಚನ ಕೀರ್ತನೆ
1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು. ಯೆಹೋವನ ಸೇವಕನಾದ ದಾವೀದನು ಸೌಲನಿಂದಲೂ, ಎಲ್ಲಾ ಶತ್ರುಗಳ ಕೈಯಿಂದಲೂ ತಪ್ಪಿಸಲ್ಪಟ್ಟಾಗ ಯೆಹೋವನ ಘನಕ್ಕಾಗಿ ಈ ಪದ್ಯವನ್ನು ರಚಿಸಿ ಹೇಳಿದನು. ನನ್ನ ಬಲವಾಗಿರುವ ಯೆಹೋವನೇ, ನಿನ್ನಲ್ಲಿಯೇ ಮಮತೆಯಿಡುತ್ತೇನೆ. 2ಯೆಹೋವನು ನನ್ನ ಬಂಡೆಯು, ನನ್ನ ಕೋಟೆಯು, ನನ್ನ ವಿಮೋಚಕನು, ನನ್ನ ದೇವರು, ನನ್ನ ಆಶ್ರಯಗಿರಿಯು, ನನ್ನ ಗುರಾಣಿಯು, ನನ್ನ ರಕ್ಷಣೆಯ ಕೊಂಬು ಮತ್ತು ನನ್ನ ದುರ್ಗವು ಆಗಿದ್ದಾನೆ. 3ಯೆಹೋವನು ಸ್ತೋತ್ರಕ್ಕೆ ಅರ್ಹನು; ನಾನು ಆತನಿಗೆ ಮೊರೆಯಿಡಲು ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುತ್ತಾನೆ. 46ಯೆಹೋವನು ಚೈತನ್ಯಸ್ವರೂಪನು; ನನ್ನ ಶರಣನಿಗೆ ಸ್ತೋತ್ರ; ನನ್ನನ್ನು ರಕ್ಷಿಸುವ ದೇವರಿಗೆ ಕೊಂಡಾಟವಾಗಲಿ. 50ಆತನು ತಾನು ನೇಮಿಸಿದ ಅರಸನಿಗೋಸ್ಕರ ವಿಶೇಷ ರಕ್ಷಣೆಯನ್ನು ದಯಪಾಲಿಸುವವನಾಗಿದ್ದಾನೆ; ತಾನು ಅಭಿಷೇಕಿಸಿದ ದಾವೀದನಿಗೂ ಮತ್ತು ಅವನ ಸಂತತಿಯವರಿಗೂ ಸದಾಕಾಲ ಕೃಪೆಯನ್ನು ಅನುಗ್ರಹಿಸುವವನಾಗಿದ್ದಾನೆ.
ಎರಡನೆಯ ವಾಚನ
23ಲೇವಿಯರು ಶಾಶ್ವತವಾಗಿ ಉದ್ಯೋಗನಡಿಸುವುದಕ್ಕೆ ಮರಣವು ಅಡ್ಡಿಯಾಗಿರುವುದರಿಂದ ಅವರಲ್ಲಿ ಅನೇಕರು ಯಾಜಕರಾದರು. 24ಆತನಾದರೋ ಸದಾಕಾಲ ಜೀವಿಸುವುದರಿಂದ ಆತನ ಯಾಜಕತ್ವವನ್ನು ಶಾಶ್ವತವಾದ್ದದು. 25ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವುದಕ್ಕೆ ಶಕ್ತನಾಗಿದ್ದಾನೆ. ಯಾಕೆಂದರೆ ಅವರಿಗೋಸ್ಕರ ವಿಜ್ಞಾಪನೆ ಮಾಡುವುದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ. 26ಇಂಥವನೇ ನಮಗೆ ಬೇಕಾಗಿರುವ ಮಹಾಯಾಜಕನು, ಈತನು ಪರಿಶುದ್ಧನೂ, ನಿರ್ದೋಷಿಯೂ, ನಿಷ್ಕಳಂಕನೂ, ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವವನು, ಆಕಾಶಮಂಡಲಗಳಿಗಿಂತ ಉನ್ನತದಲ್ಲಿರುವವನೂ ಆಗಿರುವನು. 27ಮೊದಲು ತಮ್ಮ ಪಾಪಪರಿಹಾರಕ್ಕಾಗಿ ಆ ಮೇಲೆ ಜನರ ಪಾಪಪರಿಹಾರಕ್ಕಾಗಿ ಯಜ್ಞ ಸಮರ್ಪಣೆಮಾಡುವ ಲೇವಿ ಮಹಾಯಾಜಕರಂತೆ ಈತನು ಪ್ರತಿದಿನವೂ ಯಜ್ಞಗಳನ್ನು ಸಮರ್ಪಿಸಬೇಕಾದ ಅವಶ್ಯವಿಲ್ಲ. ಏಕೆಂದರೆ ಈತನು ತನ್ನನ್ನು ತಾನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು. 28ಧರ್ಮಶಾಸ್ತ್ರವು ದುರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ನೇಮಕ ಮಾಡುತ್ತದೆ. ಆದರೆ ಧರ್ಮಶಾಸ್ತ್ರದ ತರುವಾಯ ಪ್ರತಿಜ್ಞೆಯೊಡನೆ ಬಂದ ವಾಕ್ಯವು ಸದಾಕಾಲಕ್ಕೂ ಸರ್ವಸಂಪೂರ್ಣನಾಗಿರುವ ಮಗನನ್ನೇ ಯಾಜಕನನ್ನಾಗಿ ನೇಮಕ ಮಾಡಿದೆ.
ಸುವಾರ್ತೆ
28ಶಾಸ್ತ್ರಿಗಳಲ್ಲಿ ಒಬ್ಬನು ಅವರ ವಾದವನ್ನು ಕೇಳಿ ಯೇಸು ಅವರಿಗೆ ಸರಿಯಾಗಿ ಉತ್ತರ ಕೊಟ್ಟನೆಂದು ತಿಳಿದು ಆತನ ಹತ್ತಿರಕ್ಕೆ ಬಂದು, “ಎಲ್ಲಾ ಆಜ್ಞೆಗಳಲ್ಲಿ ಮುಖ್ಯವಾದ್ದದು ಯಾವುದು?” ಎಂದು ಆತನನ್ನು ಕೇಳಿದರು. 29ಅದಕ್ಕೆ ಯೇಸು, “‘ಇಸ್ರಾಯೇಲ್ ಜನರೇ ಕೇಳಿ, ನಮ್ಮ ದೇವರಾದ ಕರ್ತನು ಒಬ್ಬನೇ ದೇವರು. 30ನಿನ್ನ ದೇವರಾದ ಕರ್ತನನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ, ಪೂರ್ಣ ಬುದ್ಧಿಯಿಂದಲೂ, ಪೂರ್ಣ ಶಕ್ತಿಯಿಂದಲೂ ಪ್ರೀತಿಸಬೇಕು’ ಎಂಬುದೇ ಮುಖ್ಯವಾದ ಆಜ್ಞೆ. 31‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ ಎರಡನೆಯ ಆಜ್ಞೆ. ಇವುಗಳಿಗಿಂತ ಹೆಚ್ಚಿನ ಆಜ್ಞೆ ಮತ್ತೊಂದಿಲ್ಲ” ಎಂದು ಉತ್ತರ ಕೊಟ್ಟನು. 32ಆಗ ಆ ಶಾಸ್ತ್ರಿಯು, “ಬೋಧಕನೇ, ನೀನು ಚೆನ್ನಾಗಿ ಹೇಳಿದೆ. ಸತ್ಯವನ್ನೇ ಹೇಳಿದಿ ದೇವರು ಒಬ್ಬನೇ, ಆತನ ಹೊರತು ಬೇರೊಬ್ಬ ದೇವರಿಲ್ಲ ಎಂದು ಹೇಳಿದನು. 33ಆತನನ್ನು ಪೂರ್ಣಹೃದಯದಿಂದಲೂ, ಪೂರ್ಣ ಬುದ್ಧಿಯಿಂದಲೂ, ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ತನ್ನನ್ನು ಪ್ರೀತಿಸಿಕೊಳ್ಳುವಂತೆ ತನ್ನ ನೆರೆಯವನನ್ನು ಪ್ರೀತಿಸುವುದು ಇವೆರಡೂ ಎಲ್ಲಾ ಸರ್ವಾಂಗಹೋಮಗಳಿಗಿಂತಲೂ ಎಲ್ಲಾ ಯಜ್ಞಗಳಿಗಿಂತಲೂ ಮೇಲಾದುವು” ಅಂದನು. 34ಅವನು ಬುದ್ಧಿಯಿಂದ ಉತ್ತರಕೊಟ್ಟದ್ದನ್ನು ಯೇಸು ಕಂಡು, “ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ” ಎಂದನು. ಅಂದಿನಿಂದ ಆತನನ್ನು ಪ್ರಶ್ನೆಮಾಡುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು