Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 18 ಆಗಸ್ಟ್

ಆರ್ಥೊಡಾಕ್ಸ್ ಪಂಚಾಂಗ · ಆಗಸ್ಟ್ 5 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 18 ಆಗಸ್ಟ್ 2027

ಬುಧವಾರ · ಪಂಚಾಶತ್ತಮದ ನಂತರದ 9ನೇ ವಾರ · ಸ್ವರ 7

ಹಬ್ಬಗಳು ಮತ್ತು ಸಂತರು

Forefeast of the Transfiguration of the Lord

ದೇವಮಾತೆಯ ನಿದ್ರಾಗಮನದ ಉಪವಾಸ

ಕಟ್ಟುನಿಟ್ಟಿನ ಉಪವಾಸ (ಒಣ ಆಹಾರ: ರೊಟ್ಟಿ, ತರಕಾರಿ, ಹಣ್ಣು)

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಪತ್ರಿಕೆ

1 ಕೊರಿ 13:4–14:5

4ಪ್ರೀತಿಯು ಬಹು ತಾಳ್ಮೆಯುಳ್ಳದ್ದು, ದಯೆಯುಳ್ಳದ್ದು. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಹೊಗಳಿಕೊಳ್ಳುವುದಿಲ್ಲ. ಅದು ಗರ್ವಪಡುವುದಿಲ್ಲ, ಅಸಭ್ಯವಾಗಿ ನಡೆಯುವುದಿಲ್ಲ. 5ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ. ಬೇಗ ಸಿಟ್ಟುಗೊಳ್ಳುವುದಿಲ್ಲ. ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. 6ಅನ್ಯಾಯದಲ್ಲಿ ಸಂತೋಷಪಡುವುದಿಲ್ಲ ಆದರೆ ಸತ್ಯದಲ್ಲಿ ಸಂತೋಷಪಡುತ್ತದೆ. 7ಎಲ್ಲವನ್ನು ತಾಳಿಕೊಳ್ಳುತ್ತದೆ. ಎಲ್ಲವನ್ನು ನಂಬುತ್ತದೆ. ಎಲ್ಲವನ್ನು ನಿರೀಕ್ಷಿಸುತ್ತದೆ. ಎಲ್ಲವನ್ನು ಸಹಿಸಿಕೊಳ್ಳುತ್ತದೆ. 8ಪ್ರೀತಿಯು ಎಂದಿಗೂ ನಿಂತುಹೋಗುವುದಿಲ್ಲ. ಪ್ರವಾದನೆಗಳಾದರೂ ಇಲ್ಲದಂತಾಗುವವು. ಅನ್ಯಭಾಷೆಗಳೋ ನಿಂತುಹೋಗುವವು. ತಿಳಿವಳಿಕೆಯೋ ಇಲ್ಲದಂತಾಗುವುದು. 9ಅಪೂರ್ಣವಾಗಿ ತಿಳಿದುಕೊಳ್ಳುತ್ತೇವೆ; ಅಪೂರ್ಣವಾಗಿ ಪ್ರವಾದಿಸುತ್ತೇವೆ. 10ಆದರೆ ಸಂಪೂರ್ಣವಾದದ್ದು ಬಂದಾಗ ಅಪೂರ್ಣವಾದದ್ದು ಇಲ್ಲದಂತಾಗುವುದು. 11ನಾನು ಬಾಲಕನಾಗಿದ್ದಾಗ ಬಾಲಕನ ರೀತಿಯಲ್ಲಿ ಮಾತನಾಡಿದೆನು. ಬಾಲಕನ ಹಾಗೆ ಯೋಚಿಸಿದೆನು. ಬಾಲಕನಂತೆ ವಿವೇಚಿಸಿದೆನು. ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು. 12ಈಗ ಕನ್ನಡಿಯಲ್ಲಿ ಕಾಣಿಸುವಂತೆ ದೇವರ ಮುಖವು ನಮಗೆ ಮೊಬ್ಬಾಗಿ ಕಾಣಿಸುತ್ತದೆ, ಆದರೆ ಆಗ ನೇರವಾಗಿ ಮುಖಾಮುಖಿಯಾಗಿ ಆತನನ್ನು ನೋಡುವೆವು. ಈಗ ಅಪೂರ್ಣವಾಗಿ ನನಗೆ ತಿಳಿದಿದೆ. ಆದರೆ ಆಗ ದೇವರು ನನ್ನನ್ನು ಸಂಪೂರ್ಣವಾಗಿ ತಿಳಿದುಕೊಂಡಂತೆ ನಾನು ಸಂಪೂರ್ಣವಾಗಿ ತಿಳಿದುಕೊಳ್ಳುವೆನು. 13ಹೀಗಿರುವುದರಿಂದ, ನಂಬಿಕೆ, ನಿರೀಕ್ಷೆ, ಪ್ರೀತಿ ಈ ಮೂರೇ ನಿಲ್ಲುತ್ತದೆ. ಇವುಗಳಲ್ಲಿ ದೊಡ್ಡದು ಪ್ರೀತಿಯೇ. 14:1ಪ್ರತಿನಿತ್ಯ ಪ್ರೀತಿಯಿಂದ ಜೀವಿಸಲು ಆಶಿಸಿರಿ ಮತ್ತು ಪವಿತ್ರಾತ್ಮನಿಂದುಂಟಾಗುವ ವರಗಳನ್ನು, ಅದರೊಳಗೂ ವಿಶೇಷವಾಗಿ ಪ್ರವಾದನಾ ವರವನ್ನೇ ಆಸಕ್ತಿಯಿಂದ ಅಪೇಕ್ಷಿಸಿರಿ. 2ಅನ್ಯಭಾಷೆಗಳನ್ನಾಡುವವನು ದೇವರ ಸಂಗಡ ಮಾತನಾಡುತ್ತಾನೆಯೇ ಹೊರತು ಮನುಷ್ಯರ ಸಂಗಡ ಅಲ್ಲ. ಅವನು ಆತ್ಮ ಪ್ರೇರಿತನಾಗಿ ಗುಪ್ತ ವಿಷಯಗಳನ್ನಾಡುತ್ತಾನೆ. ಅವನು ಮಾತನಾಡುವ ಮಾತುಗಳನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. 3ಆದರೆ ಪ್ರವಾದಿಸುವವನಾದರೋ, ಅವನ ಮಾತುಗಳಿಂದ ಭಕ್ತಿವೃದ್ಧಿಯನ್ನೂ, ಪ್ರೋತ್ಸಾಹವನ್ನೂ ಸಂತೈಸುವಿಕೆಯನ್ನೂ ಉಂಟುಮಾಡುವವು. 4ಅನ್ಯಭಾಷೆಗಳನ್ನಾಡುವವನು ತನಗೆ ತಾನೇ ಆತ್ಮೀಕ ವೃದ್ಧಿಯನ್ನುಂಟುಮಾಡಿಕೊಳ್ಳುತ್ತಾನೆ, ಆದರೆ ಪ್ರವಾದಿಸುವವನು ಸಭೆಗೆ ಭಕ್ತಿವೃದ್ಧಿಯನ್ನುಂಟು ಮಾಡುತ್ತಾನೆ. 5ನೀವೆಲ್ಲರೂ ಅನ್ಯಭಾಷೆಗಳನ್ನಾಡಬೇಕೆಂದು ನಾನು ಅಪೇಕ್ಷಿಸಿದರೂ, ಅದಕ್ಕಿಂತಲೂ ನೀವು ಪ್ರವಾದಿಸಬೇಕೆಂಬುದೆ ನನ್ನಿಷ್ಟವಾಗಿದೆ. ಅನ್ಯಭಾಷೆಗಳನ್ನಾಡುವವನು ಸಭೆಯು ಅಭಿವೃದ್ಧಿಯಾಗುವುದಕ್ಕಾಗಿ ಆ ಅನ್ಯಭಾಷೆಯ ಅರ್ಥವನ್ನು ವಿವೇಚಿಸಿ ಹೇಳದೆ ಹೋದರೆ ಅವನಿಗಿಂತ ಪ್ರವಾದಿಸುವವನು ಶ್ರೇಷ್ಠನು.

ಪತ್ರಿಕೆ (ಗುರುವಾರಕ್ಕೆ)

1 ಕೊರಿ 14:6–19

6ಆದರೆ ಸಹೋದರರೇ, ನಾನು ನಿಮ್ಮ ಬಳಿಗೆ ಬಂದು ದೇವರು ತಿಳಿಸಿದ್ದನ್ನು ಪ್ರಕಟಿಸದೆ, ಜ್ಞಾನವಾಕ್ಯಗಳನ್ನಾಡದೆ, ಪ್ರವಾದನೆಯನ್ನು ಹೇಳದೆ, ಉಪದೇಶಮಾಡದೆ, ಅನ್ಯಭಾಷೆಗಳನ್ನು ಮಾತ್ರ ಮಾತನಾಡುವವನಾಗಿದ್ದರೆ ನನ್ನಿಂದ ನಿಮಗೇನು ಪ್ರಯೋಜನವಾದೀತು? 7ಕೊಳಲು, ವೀಣೆ ಮೊದಲಾದ ನಿರ್ಜೀವವಾದ್ಯಗಳು ನಾದಗಳಲ್ಲಿ ಯಾವ ವ್ಯತ್ಯಾಸವನ್ನೂ ತೋರಿಸದಿದ್ದರೆ; ನುಡಿಸಿದ ವಾದ್ಯ ಇಂಥದ್ದೇ ಎಂದು ಹೇಗೆ ತಿಳಿಯುವುದು? 8ತುತ್ತೂರಿಯು ಅಸ್ಪಷ್ಟ ಶಬ್ದವನ್ನು ಮೊಳಗಿಸಿದರೆ ಯಾರು ಯುದ್ಧಕ್ಕೆ ಸಿದ್ಧಮಾಡಿಕೊಳ್ಳುವರು? 9ಹಾಗೆಯೇ ನೀವೂ ಸಹ ಸ್ಪಷ್ಟವಾದ ಭಾಷೆಯನ್ನು ನಿಮ್ಮ ಬಾಯಿಂದ ಮಾತನಾಡದೆ ಹೋದರೆ, ನಿಮ್ಮ ಮಾತಿನ ಅರ್ಥವನ್ನು ಹೇಗೆ ತಿಳಿದುಕೊಳ್ಳಲು ಸಾಧ್ಯ? ನೀವು ಗಾಳಿಯ ಸಂಗಡ ಮಾತನಾಡಿದ ಹಾಗಿರುವುದಷ್ಟೆ. 10ಲೋಕದಲ್ಲಿ ಅನೇಕ ಭಾಷೆಗಳಿವೆ, ಅವುಗಳಲ್ಲಿ ಒಂದಾದರೂ ಅರ್ಥರಹಿತವಾದವುಗಳಿಲ್ಲ. 11ಭಾಷೆಯ ಅರ್ಥವು ನನಗೆ ತಿಳಿಯದಿದ್ದರೆ ಮಾತನಾಡುವವನಿಗೆ ನಾನು ಪರದೇಶದವನಂತಿರುವೆನು; ಮಾತನಾಡುವವನು ನನಗೆ ಪರದೇಶಿಯವನಂತಿರುತ್ತಾನೆ. 12ಹಾಗೆಯೇ ನೀವು ಆತ್ಮೀಕವಾದ ವರಗಳಿಗಾಗಿ ಅತ್ಯಾಸಕ್ತಿಯುಳ್ಳವರಾಗಿರುವುದರಿಂದ ಸಭೆಗೆ ಹೆಚ್ಚಿನ ಅಭಿವೃದ್ಧಿ ಉಂಟಾಗುವ ಹಾಗೆ ತವಕಪಡಿರಿ. 13ಆದ್ದರಿಂದ ಅನ್ಯಭಾಷೆಯನ್ನಾಡುವವನು ತನಗೆ ಅದರ ಅರ್ಥವನ್ನು ವಿವೇಚಿಸಿ ಹೇಳುವ ವರಕ್ಕಾಗಿ ದೇವರನ್ನು ಪ್ರಾರ್ಥಿಸಲಿ. 14ಯಾಕೆಂದರೆ ನಾನು ಅನ್ಯಭಾಷೆಯಲ್ಲಿ ದೇವರನ್ನು ಪ್ರಾರ್ಥಿಸಿದರೆ ನನ್ನಾತ್ಮವು ಪ್ರಾರ್ಥಿಸುತ್ತಿರುತ್ತದೆ. ಆದರೆ ನನ್ನ ಬುದ್ಧಿಯು ನಿಷ್ಫಲವಾಗಿರುವುದು. 15ಆದ್ದರಿಂದ ನಾನಾದರೋ ಆತ್ಮನಿಂದಲೂ ಪ್ರಾರ್ಥಿಸುವೆನು, ಬುದ್ಧಿಯಿಂದಲೂ ಪ್ರಾರ್ಥಿಸುವೆನು; ಆತ್ಮನಿಂದ ಹಾಡುವೆನು, ಬುದ್ಧಿಯಿಂದಲೂ ಹಾಡುವೆನು. 16ನೀನು ಆತ್ಮನಿಂದ ಮಾತ್ರ ದೇವರ ಸ್ತೋತ್ರ ಮಾಡಿದರೆ ನೀನು ಹೇಳಿದ್ದು ತಿಳಿಯದೆ ಇರುವ ಇನ್ನೊಬ್ಬನು ನೀನು ಮಾಡುವ ಕೃತಜ್ಞತಾಸ್ತುತಿಗೆ ಅವನು “ಆಮೆನ್” ಎಂದು ಹೇಗೆ ಹೇಳಬಲ್ಲನು? ನೀನು ಮಾತನಾಡಿದು ಅವನಿಗೆ ತಿಳಿಯುವುದಿಲ್ಲವಲ್ಲಾ? 17ನೀನು ಎಷ್ಟು ಚೆನ್ನಾಗಿ ಕೃತಜ್ಞತಾಸ್ತುತಿ ಮಾಡಿದರೂ, ಆದರಿಂದ ಬೇರೊಬ್ಬನು ಭಕ್ತಿವೃದ್ಧಿಹೊಂದುವುದಿಲ್ಲ. 18ನಾನು ನಿಮ್ಮೆಲ್ಲರಿಗಿಂತಲೂ ಹೆಚ್ಚಾಗಿ ಅನ್ಯಭಾಷೆಗಳನ್ನಾಡುತ್ತೇನೆಂದು ದೇವರನ್ನು ಕೊಂಡಾಡುತ್ತೇನೆ. 19ಆದರೂ ಸಭೆಯಲ್ಲಿ ಅನ್ಯಭಾಷೆಯಿಂದ ಹತ್ತು ಸಾವಿರ ಮಾತುಗಳನ್ನಾಡುವುದಕ್ಕಿಂತ, ನನ್ನ ಬುದ್ಧಿಯಿಂದ ಐದೇ ಮಾತುಗಳನ್ನಾಡಿ ಇತರರಿಗೆ ಉಪದೇಶಮಾಡುವುದು ನನಗೆ ಉತ್ತಮವೆನಿಸುತ್ತದೆ.

ಸುವಾರ್ತೆ

ಮತ್ತಾ 20:1–16

1“ಪರಲೋಕ ರಾಜ್ಯವು ತನ್ನ ದ್ರಾಕ್ಷಾತೋಟಕ್ಕೆ ಕೂಲಿಯಾಳುಗಳನ್ನು ಗೊತ್ತುಮಾಡಲು ಬೆಳಗ್ಗೆ ಹೊರಟ ಒಬ್ಬ ತೋಟದ ಯಜಮಾನನಿಗೆ ಹೋಲಿಕೆಯಾಗಿದೆ. 2ಅವನು ದಿನಕ್ಕೆ ಒಂದು ಬೆಳ್ಳಿ ನಾಣ್ಯದಂತೆ ಕೂಲಿಯಾಳುಗಳೊಂದಿಗೆ ಒಪ್ಪಂದ ಮಾಡಿದ ನಂತರ ಅವರನ್ನು ದ್ರಾಕ್ಷಾತೋಟಕ್ಕೆ ಕಳುಹಿಸಿದನು. 3ಅವನು ಪುನಃ ಸುಮಾರು ಒಂಭತ್ತು ಗಂಟೆಗೆ ಸಂತೆಯ ಸ್ಥಳಕ್ಕೆ ಹೋಗಿ ಕೆಲಸವಿಲ್ಲದೆ ಸುಮ್ಮನೇ ನಿಂತಿದ್ದ ಬೇರೆ ಕೆಲವರು ಕೂಲಿಯಾಳುಗಳನ್ನು ಕಂಡು, 4ಅವರಿಗೆ, ‘ನೀವು ಸಹ ನನ್ನ ದ್ರಾಕ್ಷಾತೋಟಕ್ಕೆ ಹೋಗಿರಿ; ನಿಮಗೆ ಸರಿಯಾದ ಕೂಲಿಯನ್ನು ಕೊಡುತ್ತೇನೆ’ ಅಂದನು. ಆಗ ಅವರು ಕೆಲಸಕ್ಕೆ ಹೋದರು. 5ಅವನು ಪುನಃ ಸುಮಾರು ಹನ್ನೆರಡು ಗಂಟೆಗೆ ಮತ್ತು ಮೂರು ಗಂಟೆಗೆ ಹೋಗಿ ಅದೇ ಪ್ರಕಾರ ಮಾಡಿದನು. 6ಮತ್ತೊಂದು ಸಾರಿ ಸಾಯಂಕಾಲ ಐದು ಗಂಟೆಗೆ ಅವನು ಹೋಗಿ ಬೇರೆ ಕೆಲವರು ಸುಮ್ಮನೇ ನಿಂತಿರುವುದನ್ನು ಕಂಡು ಅವರನ್ನು, ‘ದಿನವೆಲ್ಲಾ ಇಲ್ಲಿ ಸುಮ್ಮನೇ ನಿಂತಿರುವುದೇಕೆ?’ ಎಂದು ಕೇಳಿದನು. 7ಅವರು ಅವನಿಗೆ, ‘ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ’ ಎಂದರು, ಆಗ ಅವನು ಅವರಿಗೆ, ‘ನೀವು ಸಹ ನನ್ನ ದ್ರಾಕ್ಷಾತೋಟಕ್ಕೆ ಹೋಗಿರಿ’ ಅಂದನು. 8ಸಂಜೆಯಾದಾಗ ದ್ರಾಕ್ಷಾತೋಟದ ಯಜಮಾನನು ತನ್ನ ಮೇಲ್ವಿಚಾರಕನಿಗೆ, ‘ಆ ಕೂಲಿಯಾಳುಗಳನ್ನು ಕರೆದು ಕಡೆಗೆ ಬಂದವರಿಂದ ಪ್ರಾರಂಭಿಸಿ ಮೊದಲು ಬಂದವರ ತನಕ ಕೂಲಿ ಕೊಡು’ ಎಂದು ಹೇಳಿದನು. 9ಆಗ ಸಾಯಂಕಾಲ ಐದು ಗಂಟೆಗೆ ಬಂದು ಕೆಲಸ ಮಾಡಿದವರು ಬಂದಾಗ, ಪ್ರತಿಯೊಬ್ಬನಿಗೂ ಒಂದೊಂದು ಬೆಳ್ಳಿ ನಾಣ್ಯ ಸಿಕ್ಕಿತು. 10ಮೊದಲು ಬಂದವರು ಬಂದಾಗ ತಮಗೆ, ಹೆಚ್ಚು ದೊರೆಯುವುದೆಂದು ನೆನಸಿದರು. ಆದರೆ ಅವರಿಗೂ ಒಂದೊಂದು ಬೆಳ್ಳಿ ನಾಣ್ಯ ಸಿಕ್ಕಿತು. 11ಅವರು ಅದನ್ನು ತೆಗೆದುಕೊಂಡು ತೋಟದ ಯಜಮಾನನಿಗೆ ವಿರುದ್ಧವಾಗಿ ಗುಣಗುಟ್ಟಿ, 12‘ಕಡೆಗೆ ಬಂದ ಇವರು ಒಂದು ಗಂಟೆ ಮಾತ್ರ ಕೆಲಸ ಮಾಡಿದ್ದಾರೆ. ನಾವು ದಿನವೆಲ್ಲಾ ಬಿಸಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಆದರೆ ನೀನು ಅವರನ್ನು ನಮಗೆ ಸಮನಾಗಿ ಮಾಡಿದ್ದೀಯೆ’ ಅಂದರು. 13ಅದಕ್ಕೆ ಯಜಮಾನನು ಅವರಲ್ಲಿ ಒಬ್ಬನಿಗೆ, ‘ಸ್ನೇಹಿತನೇ ನಾನು ನಿನಗೆ ಅನ್ಯಾಯ ಮಾಡಲಿಲ್ಲ. ನೀನು ನನ್ನ ಸಂಗಡ ಒಂದು ಬೆಳ್ಳಿಯ ನಾಣ್ಯಕ್ಕೆ ಒಪ್ಪಂದ ಮಾಡಿಕೊಳ್ಳಲಿಲ್ಲವೆ? 14ನಿನ್ನ ಕೂಲಿಯನ್ನು ತೆಗೆದುಕೊಂಡು ಹೋಗು ನಿನಗೆ ಕೊಟ್ಟಂತೆ ಕಡೆಗೆ ಬಂದವರಿಗೂ ಕೊಡುವುದು ನನ್ನ ಇಷ್ಟ. 15ನನ್ನ ಸ್ವಂತ ಸೊತ್ತನ್ನು ನನ್ನ ಇಷ್ಟದಂತೆ ಮಾಡಲು ನನಗೆ ಅಧಿಕಾರವಿಲ್ಲವೋ? ನಾನು ಉದಾರಿಯಾಗಿರುವುದಕ್ಕೆ ನೀನೇಕೆ ಹೊಟ್ಟೆಕಿಚ್ಚುಪಟ್ಟುಕೊಳ್ಳುವಿ?’ ಎಂದು ಹೇಳಿದನು. 16ಹೀಗೆ ಕಡೆಯವರು ಮೊದಲಿನವರಾಗುವರು ಮೊದಲಿನವರು ಕಡೆಯವರಾಗುವರು” ಎಂದು ಹೇಳಿದನು.

ಸುವಾರ್ತೆ (ಗುರುವಾರಕ್ಕೆ)

ಮತ್ತಾ 20:17–28

17ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ದಾರಿಯಲ್ಲಿ ಹನ್ನೆರಡು ಮಂದಿ ಶಿಷ್ಯರನ್ನು ಏಕಾಂತವಾಗಿ ಪಕ್ಕಕ್ಕೆ ಕರೆದುಕೊಂಡು ಅವರಿಗೆ, 18“ನೋಡಿರಿ ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ ಮತ್ತು ಮನುಷ್ಯಕುಮಾರನನ್ನು ಮುಖ್ಯಯಾಜಕರ ಮತ್ತು ಶಾಸ್ತ್ರಿಗಳ ಕೈಗೊಪ್ಪಿಸಿಕೊಡುವರು. ಅವರು ಆತನಿಗೆ ಮರಣದಂಡನೆಯನ್ನು ವಿಧಿಸುವರು. 19ಆತನನ್ನು ಅಪಹಾಸ್ಯ ಮಾಡುವುದಕ್ಕಾಗಿಯೂ ಚಾಟಿಗಳಿಂದ ಹೊಡೆಯುವುದಕ್ಕಾಗಿಯೂ ಶಿಲುಬೆಗೆ ಹಾಕುವುದಕ್ಕಾಗಿಯೂ ಅನ್ಯಜನರ ಕೈಗೆ ಒಪ್ಪಿಸುವರು. ಆದರೆ ಆತನು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡುವನು” ಎಂದು ಹೇಳಿದನು. 20ಆಗ ಜೆಬೆದಾಯನ ಮಕ್ಕಳ ತಾಯಿ ತನ್ನ ಮಕ್ಕಳೊಂದಿಗೆ ಯೇಸುವಿನ ಬಳಿಗೆ ಬಂದು; ಆತನಿಗೆ ಅಡ್ಡಬಿದ್ದು ಒಂದು ಉಪಕಾರ ಮಾಡಬೇಕೆಂದು ಬೇಡಿಕೊಂಡಳು. 21ಆತನು ಆಕೆಯನ್ನು, “ನಿನ್ನ ಅಪೇಕ್ಷೆ ಏನು?” ಎಂದು ಕೇಳಲು ಆಕೆ ಆತನಿಗೆ, “ನಿನ್ನ ರಾಜ್ಯದಲ್ಲಿ ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲೂ ಮತ್ತೊಬ್ಬನು ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ಅನುಗ್ರಹ ಮಾಡಬೇಕು” ಅಂದಳು. 22ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ನೀವು ಬೇಡಿಕೊಳ್ಳುತ್ತಿರುವುದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಬೇಕಾಗಿರುವ ಪಾನಪಾತ್ರೆಯಲ್ಲಿ ಕುಡಿಯುವುದಕ್ಕೆ ನಿಮ್ಮಿಂದ ಆಗುವುದೋ?” ಎಂದು ಕೇಳಿದನು. ಅವರು ಆತನಿಗೆ, “ನಮ್ಮಿಂದ ಆಗುವುದು” ಅಂದರು. 23ಆಗ ಆತನು ಅವರಿಗೆ, “ನನ್ನ ಪಾನಪಾತ್ರೆಯಲ್ಲಿ ನಿಶ್ಚಯವಾಗಿ ನೀವು ಕುಡಿಯುವಿರಿ. ಆದರೆ ನನ್ನ ಎಡಬಲಗಡೆಗಳಲ್ಲಿ ಕುಳಿತುಕೊಳ್ಳುವಂತೆ ಅನುಗ್ರಹ ಮಾಡುವುದು ನನ್ನದಲ್ಲ, ಆದರೆ ನನ್ನ ತಂದೆಯಿಂದ ಅದು ಯಾರಿಗೆಂದು ಸಿದ್ಧಪಡಿಸಲಾಗಿದೆಯೋ ಅವರಿಗೇ ಸಿಕ್ಕುವುದು” ಎಂದು ಹೇಳಿದನು. 24ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು. 25ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು ಅವರಿಗೆ, “ಅನ್ಯಜನರ ಅಧಿಪತಿಗಳು ಅವರ ಮೇಲೆ ದೊರೆತನ ಮಾಡುತ್ತಾರೆ ಮತ್ತು ಅವರ ಮುಖ್ಯಾಧಿಕಾರಿಗಳು ಅವರ ಮೇಲೆ ಬಲಾತ್ಕಾರದಿಂದ ಅಧಿಕಾರ ನಡೆಸುತ್ತಾರೆ ಎಂದು ನಿಮಗೆ ಗೊತ್ತು. 26ಆದರೆ ನಿಮ್ಮಲ್ಲಿ ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಲು ಬಯಸುವವನು ನಿಮ್ಮ ಸೇವಕನಾಗಿರಲಿ. 27ನಿಮ್ಮಲ್ಲಿ ಪ್ರಮುಖನಾಗಿರಲು ಬಯಸುವವನು ನಿಮ್ಮ ದಾಸನಾಗಿರಲಿ. 28ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವುದಕ್ಕಾಗಿ ಬರಲಿಲ್ಲ, ಸೇವೆ ಮಾಡುವುದಕ್ಕೂ, ಅನೇಕರ ವಿಮೋಚನೆಗಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದನು” ಎಂದು ಹೇಳಿದನು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 5 ಆಗಸ್ಟ್ ಎಂದರೆ ನಾಗರಿಕ ಪಂಚಾಂಗದ 18 ಆಗಸ್ಟ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು