ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 16 ಆಗಸ್ಟ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 16 ಆಗಸ್ಟ್ 2027
ಸೋಮವಾರ · ಸಾಮಾನ್ಯ ಕಾಲದ 20ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 20ನೇ ವಾರದ ಸೋಮವಾರ
ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು
ಹಂಗೇರಿಯ ಸಂತ ಸ್ಟೀಫನ್ · ಐಚ್ಛಿಕ ಸ್ಮರಣೆ
ದಿನದ ವಾಚನಗಳು
ಮೊದಲನೆಯ ವಾಚನ
11ಈ ಇಸ್ರಾಯೇಲರು ಯೆಹೋವನ ದೃಷ್ಟಿಯಲ್ಲಿ ಕೆಟ್ಟದನ್ನು ಮಾಡಿದರು ಹಾಗೂ ಬಾಳನನ್ನು ಸೇವಿಸಿದರು. 12ತಮ್ಮ ಪೂರ್ವಿಕರನ್ನು ಐಗುಪ್ತದಿಂದ ಕರತಂದ ದೇವರಾದ ಯೆಹೋವನನ್ನು ಬಿಟ್ಟು ಅನ್ಯದೇವತೆಗಳನ್ನು ಅಂದರೆ, ತಮ್ಮ ಸುತ್ತಣ ಜನಾಂಗಗಳ ದೇವರುಗಳನ್ನು ಅವಲಂಬಿಸಿ, ಅವುಗಳಿಗೆ ಅಡ್ಡಬಿದ್ದು ಯೆಹೋವನಿಗೆ ಸಿಟ್ಟು ಬರುವಂತೆ ಮಾಡಿದರು. 13ಅವರು ಯೆಹೋವನನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನು ಪೂಜಿಸುವವರಾದರು. 14ಆಗ ಯೆಹೋವನ ಕೋಪವು ಅವರ ಮೇಲೆ ಹೆಚ್ಚಾಯಿತು. ಆತನು ಅವರನ್ನು ಸೂರೆಮಾಡುವವರ ಕೈಗೆ ಒಪ್ಪಿಸಲು ಅವರು ಅವರನ್ನು ಸೂರೆಮಾಡಿದರು. ಆತನು ಅವರನ್ನು ಸುತ್ತಣ ವೈರಿಗಳಿಗೆ ಮಾರಿಬಿಟ್ಟನು. ಅವರು ಆ ಶತ್ರುಗಳ ಮುಂದೆ ನಿಲ್ಲಲಾರದವರಾದರು. 15ಯೆಹೋವನು ತಾನು ಮೊದಲೇ ಆಣೆಯಿಟ್ಟು ಹೇಳಿದಂತೆ ಇಸ್ರಾಯೇಲರು ಎಲ್ಲಿ ಹೋದರೂ ಆತನ ಕೈ ಅವರಿಗೆ ವಿರೋಧವಾಗಿಯೇ ಇತ್ತು. ಅವರು ಬಹು ಕಷ್ಟಗಳಿಗೆ ಗುರಿಯಾದರು. 16ಆಗ ಯೆಹೋವನು ಅವರನ್ನು ಸೂರೆಮಾಡುವವರ ಕೈಯಿಂದ ತಪ್ಪಿಸುವುದಕ್ಕೋಸ್ಕರ ನ್ಯಾಯಸ್ಥಾಪಕರನ್ನು ಕಳುಹಿಸಿದನು. 17ಇಸ್ರಾಯೇಲರು ಅವರ ಮಾತನ್ನೂ ಕೇಳದೆ ಅನ್ಯದೇವರುಗಳನ್ನು ಪೂಜಿಸಿ, ಅವುಗಳಿಗೆ ಅಡ್ಡಬಿದ್ದು ದೈವದ್ರೋಹಿಗಳಾದರು. ಯೆಹೋವನ ಆಜ್ಞೆಗಳನ್ನು ಕೈಕೊಳ್ಳುತ್ತಿದ್ದ ತಮ್ಮ ಪೂರ್ವಿಕರ ಮಾರ್ಗವನ್ನು ಬೇಗನೆ ಬಿಟ್ಟುಬಿಟ್ಟರು. ಅವರಂತೆ ನಡೆಯಲೇ ಇಲ್ಲ. 18ವೈರಿಗಳ ಹಿಂಸೆಯನ್ನು ತಾಳಲಾರದ ಇಸ್ರಾಯೇಲ್ಯರ ಗೋಳಾಟವನ್ನು ಯೆಹೋವನು ಕೇಳಿ, ಕನಿಕರಪಟ್ಟು, ನ್ಯಾಯಸ್ಥಾಪಕರನ್ನು ಎಬ್ಬಿಸಿ ಜೀವಮಾನವೆಲ್ಲಾ ಅವರ ಸಂಗಡ ಇದ್ದನು. ಅವರ ಮೂಲಕವಾಗಿ ಇಸ್ರಾಯೇಲರನ್ನು ಶತ್ರುಗಳಿಂದ ಬಿಡಿಸಿದನು. 19ಅಂಥ ನ್ಯಾಯಸ್ಥಾಪಕರು ತೀರಿಹೋದನಂತರ ಇಸ್ರಾಯೇಲರು ಪುನಃ ತಮ್ಮ ಹಿರಿಯರಿಗಿಂತಲೂ ಭ್ರಷ್ಟರಾಗಿ ಅನ್ಯದೇವತೆಗಳನ್ನು ಅವಲಂಬಿಸಿ, ಸೇವಿಸಿ, ಅವುಗಳಿಗೆ ಅಡ್ಡಬಿದ್ದರು. ಅವರು ತಮ್ಮ ದುರ್ಮಾರ್ಗಗಳನ್ನು, ಮೊಂಡತನಗಳನ್ನು ಬಿಡಲೇ ಇಲ್ಲ.
ಪ್ರತಿವಚನ ಕೀರ್ತನೆ
34ಅನ್ಯ ಜನಾಂಗದವರನ್ನು ಸಂಹರಿಸಬೇಕೆಂಬ, ಯೆಹೋವನ ಆಜ್ಞೆಗೆ ಅವಿಧೇಯರಾಗಿ, 35ಅವರೊಡನೆ ಕೂಡಿಕೊಂಡು, ಅವರ ದುರಾಚಾರಗಳನ್ನು ಕಲಿತುಕೊಂಡರು. 36ಅವರ ವಿಗ್ರಹಗಳನ್ನು ಸೇವಿಸಿದರು; ಅವು ಅವರಿಗೆ ಉರುಲಿನಂತಾದವು. 37ಅವರು ತಮ್ಮ ಗಂಡು ಹೆಣ್ಣು ಮಕ್ಕಳನ್ನು ಭೂತಗಳಿಗೆ ಬಲಿಕೊಟ್ಟರು. 39ಅವರು ತಮ್ಮ ದುಷ್ಕೃತ್ಯಗಳಿಂದ ಅಶುದ್ಧರಾದರು. ದುರಾಚಾರಗಳಿಂದ ದೇವದ್ರೋಹಿಗಳಾದರು. 40ಆಗ ಯೆಹೋವನ ಕೋಪವು ಅವರ ಮೇಲೆ ಉರಿಗೊಂಡಿತು; ಆತನು ತನ್ನ ಸ್ವಾಸ್ತ್ಯವಾದ ಪ್ರಜೆಗಳನ್ನು ಅಸಹ್ಯಿಸಿ, 43ಆತನು ಅವರನ್ನು ಅನೇಕಾವರ್ತಿ ರಕ್ಷಿಸಿದರೂ, ಅವರು ತಮ್ಮ ಆಲೋಚನೆಯನ್ನೇ ಅನುಸರಿಸಿ ಅವಿಧೇಯರಾದರು; ತಮ್ಮ ಅಕ್ರಮದಿಂದಲೇ ಹೀನಸ್ಥಿತಿಗೆ ಬಂದರು. 44ಆದರೆ ಆತನು ಕಷ್ಟದಲ್ಲಿದ್ದ, ಅವರ ಮೊರೆಯನ್ನು ಕೇಳಿ ಪರಾಂಬರಿಸಿದನು.
ಸುವಾರ್ತೆ
16ಇಗೋ ಒಬ್ಬನು ಯೇಸುವಿನ ಬಳಿಗೆ ಬಂದು, “ಬೋಧಕನೇ ನಾನು ನಿತ್ಯಜೀವವನ್ನು ಹೊಂದುವುದಕ್ಕೆ ಯಾವ ಒಳ್ಳೆ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು. 17ಆತನು ಅವನಿಗೆ, “ಒಳ್ಳೆಯದನ್ನು ಕುರಿತು ನನ್ನನ್ನು ಏಕೆ ಕೇಳುತ್ತೀಯಾ? ಒಳ್ಳೆಯವನು ಒಬ್ಬನೇ. ಆ ಜೀವಕ್ಕೆ ಸೇರಬೇಕೆಂದಿದ್ದರೆ ದೇವರಾಜ್ಞೆಗಳಿಗೆ ವಿಧೇಯನಾಗಿ ನಡೆದುಕೊ” ಎಂದು ಹೇಳಿದನು. 18ಅದಕ್ಕೆ ಅವನು, “ಅವು ಯಾವುವು?” ಎಂದು ಕೇಳಲು ಯೇಸು, “ನರಹತ್ಯ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳು ಸಾಕ್ಷಿ ಹೇಳಬಾರದು. 19ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಮತ್ತು ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸಬೇಕು” ಇವುಗಳೇ ಅಂದನು. 20ಆ ಯೌವನಸ್ಥನು ಆತನಿಗೆ, “ಇವೆಲ್ಲಕ್ಕೂ ವಿಧೇಯನಾಗಿ ನಾನು ನಡೆದುಕೊಂಡಿದ್ದೇನೆ; ಇನ್ನೂ ನನಗೇನು ಕೊರತೆಯಾಗಿರಬಹುದು?” ಎಂದು ಕೇಳಿದನು. 21ಯೇಸು ಅವನಿಗೆ, “ನೀನು ಪೂರ್ಣನಾಗುವುದಕ್ಕೆ ಬಯಸುವುದಾದರೆ, ಹೋಗಿ ನಿನಗಿರುವುದನ್ನೆಲ್ಲಾ ಮಾರಿ, ಬಡವರಿಗೆ ಕೊಡು, ಆಗ ನಿನಗೆ ಪರಲೋಕದಲ್ಲಿ ಸಂಪತ್ತಿರುವುದು. ಅನಂತರ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 22ಆದರೆ ಆ ಯೌವನಸ್ಥನು ಬಹಳ ಆಸ್ತಿಯುಳ್ಳವನಾಗಿದ್ದುದರಿಂದ ಈ ಮಾತನ್ನು ಕೇಳಿ ದುಃಖದಿಂದ ಹೊರಟುಹೋದನು.
ಇಂದಿನ ಸಂತರು
- ಹಂಗೇರಿಯ ಸಂತ ಸ್ಟೀಫನ್
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು