ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 15 ಆಗಸ್ಟ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 15 ಆಗಸ್ಟ್ 2027
ಭಾನುವಾರ · ಸಾಮಾನ್ಯ ಕಾಲದ 20ನೇ ವಾರ
ಹಬ್ಬಗಳು ಮತ್ತು ಸಂತರು
ಪೂಜ್ಯ ಕನ್ಯೆ ಮರಿಯಳ ಸ್ವರ್ಗಾರೋಪಣ
ಮಹೋತ್ಸವ · ಆರಾಧನಾ ಬಣ್ಣ: ಬಿಳಿ
ದಿನದ ವಾಚನಗಳು
ಮೊದಲನೆಯ ವಾಚನ
19ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು. ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ, ಗರ್ಜನೆ, ಗುಡುಗು, ಮಿಂಚುಗಳು, ಭೂಕಂಪವು, ದೊಡ್ಡ ಆಲಿಕಲ್ಲಿನ ಮಳೆಯೂ ಸುರಿಯಿತು. 12:1ಪರಲೋಕದಲ್ಲಿ ಒಂದು ಮಹಾ ಚಿಹ್ನೆಯು ಕಾಣಿಸಿತು. ಸ್ತ್ರೀಯೊಬ್ಬಳು ಸೂರ್ಯಭೂಶಿತಳಾಗಿದ್ದಳು. ಆಕೆಯ ಪಾದದಡಿಯಲ್ಲಿ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳಿಂದ ಮಾಡಿದ್ದ ಒಂದು ಕಿರೀಟವಿತ್ತು. 2ಆಕೆಯು ಗರ್ಭಿಣಿಯಾಗಿದ್ದು ಹೆರುವುದಕ್ಕೆ ಪ್ರಸವವೇದನೆಯಿಂದ ನರಳುತ್ತಾ ಅಳುತ್ತಿದ್ದಳು. 3ಪರಲೋಕದಲ್ಲಿ ಮತ್ತೊಂದು ಚಿಹ್ನೆಯು ಕಾಣಿಸಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳು ಇದ್ದವು. ಅದರ ತಲೆಗಳ ಮೇಲೆ ಏಳು ಕಿರೀಟಗಳು ಇದ್ದವು. 4ಅದು ತನ್ನ ಬಾಲದಿಂದ ಆಕಾಶದ ನಕ್ಷತ್ರಗಳಲ್ಲಿ ಮೂರರಲ್ಲೊಂದು ಭಾಗವನ್ನು ಎಳೆದು ಭೂಮಿಗೆ ಎಸೆಯಿತು. ಹೆರುತ್ತಿದ್ದ ಆ ಸ್ತ್ರೀಯು ಹೆತ್ತ ಕೂಡಲೇ ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟಸರ್ಪವು ಆಕೆಯ ಮುಂದೆ ನಿಂತುಕೊಂಡಿತ್ತು. 5ಆಕೆ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳಬೇಕಾದ ಒಂದು ಗಂಡು ಮಗುವನ್ನು ಹೆತ್ತಳು. ಆಕೆಯ ಕೂಸು ಪಕ್ಕನೆ ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ಎತ್ತಲ್ಪಟ್ಟಿತು. 6ಮತ್ತು ಆ ಸ್ತ್ರೀಯು ಅರಣ್ಯಕ್ಕೆ ಓಡಿಹೋದಳು. ಅಲ್ಲಿ ಆಕೆಗೆ ಸಾವಿರದ ಇನ್ನೂರ ಅರವತ್ತು ದಿನಗಳ ವರೆಗೆ ಪೋಷಣೆಮಾಡುವುದಕ್ಕಾಗಿ ದೇವರು ಸಿದ್ಧಮಾಡಿದ್ದ ಸ್ಥಳವನ್ನು ಅವಳು ಕಂಡಳು. 10ಆಗ ಪರಲೋಕದಲ್ಲಿ ಮಹಾಶಬ್ದವನ್ನು ಕೇಳಿದೆನು. ಅದು, “ಈಗ ನಮ್ಮ ದೇವರ ರಕ್ಷಣೆಯೂ, ಶಕ್ತಿಯೂ, ರಾಜ್ಯವೂ, ಆತನ ಕ್ರಿಸ್ತನ ಅಧಿಪತ್ಯ ಆರಂಭವಾಗಿದೆ. ಹಗಲಿರುಳು ನಮ್ಮ ಸಹೋದರರನ್ನು ಕುರಿತು ನಮ್ಮ ದೇವರ ಮುಂದೆ ಸದಾ ದೂರು ಹೇಳುತ್ತಿದ್ದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ.
ಪ್ರತಿವಚನ ಕೀರ್ತನೆ
9ನಿನ್ನ ಸ್ತ್ರೀಪರಿವಾರದಲ್ಲಿ ರಾಜಕುಮಾರಿಯರೂ ಇದ್ದಾರೆ; ಪಟ್ಟದ ರಾಣಿಯು ಓಫೀರ್ ದೇಶದ ಬಂಗಾರದ ಆಭರಣಗಳಿಂದ ಅಲಂಕೃತಳಾಗಿ, ನಿನ್ನ ಬಲಭಾಗದಲ್ಲಿ ನಿಂತಿರುವಳು. 10ಎಲೌ ರಾಜಕುಮಾರಿಯೇ, ನನ್ನ ಮಾತನ್ನು ಕೇಳಿ ಆಲೋಚಿಸು; ಸ್ವಜನರನ್ನೂ ತೌರಮನೆಯನ್ನೂ ಮರೆತುಬಿಡು. 11ಆಗ ರಾಜನು ನಿನ್ನ ಲಾವಣ್ಯವನ್ನು ನೋಡಲು ಅಪೇಕ್ಷಿಸುವನು. ಆತನೇ ನಿನಗೆ ಒಡೆಯನು; ಆತನನ್ನು ಗೌರವಿಸು. 15ಅವರು ಉಲ್ಲಾಸದಿಂದಲೂ, ಸಂತೋಷದಿಂದಲೂ ಬಂದು, ಅರಮನೆಯೊಳಗೆ ಪ್ರವೇಶಿಸುವರು.
ಎರಡನೆಯ ವಾಚನ
20ಆದರೆ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದನು. ಸತ್ತುಹೋದವರಲ್ಲಿ ಪ್ರಥಮಫಲವಾದನು. 21ಮನುಷ್ಯನ ಮೂಲಕ ಮರಣ ಉಂಟಾದ ಕಾರಣ, ಮನುಷ್ಯನ ಮೂಲಕವೇ ಸತ್ತವರಿಗೆ ಪುನರುತ್ಥಾನವುಂಟಾಗಿದೆ. 22ಆದಾಮನಿಂದ ಹೇಗೆ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಯೇಸು ಕ್ರಿಸ್ತನಿಂದ ಎಲ್ಲರೂ ಬದುಕುವವರಾದರು. 23ಆದರೆ ಪ್ರತಿಯೊಬ್ಬನು ತನ್ನ ಕ್ರಮದಲ್ಲಿ ಎದ್ದುಬರುವನು. ಕ್ರಿಸ್ತನು ಪ್ರಥಮಫಲವಾದನು; ತರುವಾಯ ಕ್ರಿಸ್ತನಿಗೆ ಸೇರಿದವರು ಆತನ ಬರೋಣದಲ್ಲಿ ಜೀವವುಳ್ಳವರಾಗಿ ಎದ್ದು ಬರುವರು. 24ಅನಂತರ ಆತನು ಎಲ್ಲಾ ದೊರೆತನವನ್ನೂ, ಎಲ್ಲಾ ಅಧಿಕಾರವನ್ನೂ ಮತ್ತು ಬಲವನ್ನೂ ನಿರ್ಮೂಲಗೊಳಿಸಿ ತಂದೆ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡುವಾಗ ಸಮಾಪ್ತಿಯಾಗುವುದು. 25ಯಾಕೆಂದರೆ ತಾನು ಎಲ್ಲಾ ವಿರೋಧಿಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವುದು ಅವಶ್ಯ. 26ನಿರ್ಮೂಲವಾಗುವ ಕಡೆ ಶತ್ರುವು ಮರಣವಾಗಿದೆ.
ಸುವಾರ್ತೆ
39ಇದಾದ ನಂತರ ಮರಿಯಳು ಎದ್ದು ತ್ವರೆಯಾಗಿ ಯೆಹೂದದ ಮಲೆನಾಡಿನಲ್ಲಿರುವ ಒಂದು ಊರಿಗೆ ಹೋದಳು. 40ಜಕರೀಯನ ಮನೆಯನ್ನು ಸೇರಿ ಎಲಿಸಬೇತಳಿಗೆ ವಂದಿಸಿದಳು. 41ಎಲಿಸಬೇತಳು ಮರಿಯಳ ವಂದನೆಯನ್ನು ಕೇಳುತ್ತಲೇ ಆಕೆಯ ಗರ್ಭದಲ್ಲಿದ್ದ ಕೂಸು ಕುಣಿದಾಡಿತು ಮತ್ತು ಎಲಿಸಬೇತಳು ಪವಿತ್ರಾತ್ಮಭರಿತಳಾದಳು. 42ಆಗ ಆಕೆಯು ಮಹಾಧ್ವನಿಯಿಂದ ಕೂಗಿ, “ನೀನು ಸ್ತ್ರೀಯರೊಳಗೆ ಧನ್ಯಳು, ಮತ್ತು ನಿನ್ನಲ್ಲಿ ಹುಟ್ಟುವ ಕೂಸು ಆಶೀರ್ವಾದ ಹೊಂದಿದ್ದು. 43ನನ್ನ ಕರ್ತನ ತಾಯಿಯು ನನ್ನ ಬಳಿಗೆ ಬರುವಷ್ಟು ಸೌಭಾಗ್ಯ ನನಗೆ ಎಲ್ಲಿಂದಾಯಿತು? 44ಇಗೋ, ನಿನ್ನ ವಂದನೆಯು ನನ್ನ ಕಿವಿಗೆ ಬೀಳುತ್ತಲೇ ಕೂಸು ನನ್ನ ಗರ್ಭದಲ್ಲಿ ಉಲ್ಲಾಸದಿಂದ ಕುಣಿದಾಡಿತು. 45ಕರ್ತನು ನಿನಗೆ ಹೇಳಿದ ಮಾತುಗಳು ನೆರವೇರುವವು ಅಂದಳು. ಇದನ್ನು ನಂಬಿದವಳಾದ ನೀನು ಧನ್ಯಳು.” 46ಆಗ ಮರಿಯಳು, “ನನ್ನ ಪ್ರಾಣವು ಕರ್ತನನ್ನು ಕೊಂಡಾಡುತ್ತದೆ, 47ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ. 48ಆತನು ತನ್ನ ದಾಸಿಯ ದೀನಸ್ಥಿತಿಯ ಮೇಲೆ ಲಕ್ಷ್ಯವಿಟ್ಟಿದ್ದಾನೆ. ಇಗೋ, ಇಂದಿನಿಂದ ತಲತಲಾಂತರದವರೆಗೆ ಎಲ್ಲರೂ ನನ್ನನ್ನು ಧನ್ಯಳೆಂದು ಹೊಗಳುವರು, 49ಏಕೆಂದರೆ ಶಕ್ತನಾಗಿರುವಾತನು ನನಗೆ ದೊಡ್ಡ ಉಪಕಾರಗಳನ್ನು ಮಾಡಿದ್ದಾನೆ; ಆತನ ನಾಮವು ಪರಿಶುದ್ಧವಾದುದು. 50ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ದಯೆಯು ತಲತಲಾಂತರದ ವರೆಗೂ ಇರುವುದು. 51ಆತನು ತನ್ನ ಭುಜಪರಾಕ್ರಮದಿಂದ ಸೊಕ್ಕಿದ ಮನಸ್ಸುಳ್ಳವರನ್ನು ಚದರಿಸಿಬಿಟ್ಟಿದ್ದಾನೆ. 52ಪ್ರಭುಗಳನ್ನು ಸಿಂಹಾಸನಗಳಿಂದ ಕೆಳಗೆ ದೊಬ್ಬಿ, ದೀನಸ್ಥಿತಿಯವರನ್ನು ಉನ್ನತಸ್ಥಿತಿಗೆ ತಂದಿದ್ದಾನೆ. 53ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಪಡಿಸಿ, ಸಿರಿವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾನೆ. 54ಆತನು ನಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದಂತೆ ಅಬ್ರಹಾಮನಿಗೂ ಅವನ ವಂಶದವರಿಗೂ ಯಾವಾಗಲೂ ದಯೆ ತೋರಿಸಬೇಕೆಂಬುದನ್ನು ನೆನಪಿಸಿಕೊಂಡು, ತನ್ನ ಸೇವಕನಾದ ಇಸ್ರಾಯೇಲನಿಗೆ ನೆರವಾಗಿದ್ದಾನೆ” ಎಂದಳು. 56ಮರಿಯಳು ಸುಮಾರು ಮೂರು ತಿಂಗಳು ಎಲಿಸಬೇತಳ ಬಳಿಯಲ್ಲಿದ್ದು ತನ್ನ ಮನೆಗೆ ಹಿಂತಿರುಗಿ ಹೋದಳು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು